ಹಂದಿಗಳ ಕಾಟಕ್ಕೆ ಬೇಸತ್ತ ರೈತರು!

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಹಂದಿಗಳ ಕಾಟ ವಿಪರೀತವಾಗಿದ್ದು, ಇದರಿಂದ ತಾಲ್ಲೂಕಿನ ಕುಸುಗಲ್ ಗ್ರಾಮದ ರೈತರು ಬೇಸತ್ತು ಹೋಗಿದ್ದಾರೆ. ಹುಬ್ಬಳ್ಳಿಯಿಂದ ಹಳ್ಳಿಗೆ ಹಂದಿ ಮಾಲೀಕರು ಹಂದಿಗಳನ್ನು ತಂದು ಬಿಡುತ್ತಿದ್ದು, ರೈತರು ಹಾಗೂ ಗ್ರಾಮಸ್ಥರು ದಿನವಿಡೀ ಹಂದಿಗಳನ್ನು ಕಾಯುವದರಲ್ಲೇ ಕಾಲ ಕಳೆಯುವ ಸ್ಥಿತಿ ಬಂದಿದೆ.

ಈ ಹಿಂದೆಯೂ ಹಂದಿಗಳು ರೈತರು ಬೆಳೆದ ಬೆಳೆಗಳನ್ನು ನಾಶ ಮಾಡಿದ್ದವು, ಈ ಕುರಿತು ರೈತರು ಹಾಗೂ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರು ಸಹ ಪ್ರಯೋಜನವಾಗಿಲ್ಲ, ಈಗ ಮುಂಗಾರು ಬಿತ್ತನೆಗೆ ಸಿದ್ದತೆ’ ನಡೆಸಿದ ರೈತರಿಗೆ ಮತ್ತೇ ಗುಂಪು ಗುಂಪಾಗಿ ಹಂದಿಗಳು ಆಗಮಸಿ ಹೊಲದಲ್ಲಿ ಬಿತ್ತಿರುವ ಹತ್ತಿ ಹಾಗೂ ಹೆಸರನ್ನು ತಿಂದು ಹಾಳು ಮಾಡುತ್ತಿವೆ.

ಅಲ್ಲದೇ ಗ್ರಾಮದಲ್ಲಿ ಹಂದಿಗಳು ದಾಂಗುಡಿಯಿಟ್ಟು ಗಲೀಜು ಮಾಡುತ್ತಿದ್ದು ಕೋರೊನಾ ನಡುವೆಯೂ ಇನ್ನಿತರ ರೋಗ ಹರಡುವ ಭೀತಿ ಎದುರಾಗಿದೆ. ಕೂಡಲೇ ಗ್ರಾಮ ಪಂಚಾಯತಿ ಅಧಿಕಾರಿಗಳು ಹಂದಿಗಳ ಕಾಟಕ್ಕೆ ನಿಯಂತ್ರಣ ಹಾಕಬೇಕು ಎಂದು ರೈತರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೋವಿಡ್ ಹೆಸರಲ್ಲಿ ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣಕ್ರಮ ಸಚಿವ ಸುಧಾಕರ್

ಫೈಲ್ ಫೋಟೋ:

ಬೆಂಗಳೂರು – ಜೂನ್ 15, 2020: ರಾಜ್ಯದಲ್ಲಿ ಇದುವರೆಗೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕರೆದಿದ್ದ ಪರಾಮರ್ಶೆ ಸಭೆಯ ನಂತರ ಸಚಿವ ಸುಧಾಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪಿಪಿಇ ಕಿಟ್ ಮುಂತಾದ ಉಪಕರಣಗಳ ಖರೀದಿ ಕುರಿತಂತೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, MDA ಹಾಗು CE ಅನುಮೋದನೆ ದೊರಕಿರುವ ಅಂತರಾಷ್ಟ್ರೀಯ ಗುಣಮಟ್ಟದ ಉಪಕರಣಗಳನ್ನೇ ನಮ್ಮ ರಾಜ್ಯದಲ್ಲಿ ಖರೀದಿಸಲಾಗುತ್ತಿದ್ದು ಈ ಕುರಿತು ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು. ತಾವೇ ಖುದ್ದಾಗಿ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸುತ್ತಿರುವುದಾಗಿ ಸಚಿವರು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದೆಂದು ತಿಳಿಸಿದ ಡಾ.ಸುಧಾಕರ್, ಸರ್ಕಾರವೇ ಚಿಕಿತ್ಸಾ ದರ, ಪರೀಕ್ಷಾ ದರ ಮುಂತಾದವುಗಳನ್ನು ನಿಗದಿಪಡಿಸಲಿದ್ದು, ಸುಲಿಗೆ ಮಾಡುವ ಆಸ್ಪತ್ರೆಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ರಾಜ್ಯಾದ್ಯಂತ ಏಕರೂಪದ ಚಿಕಿತ್ಸಾದರ ನಿಗದಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ಹೇಳಿದರು. ಕೊರೋನ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಖಾಸಗಿ ವಲಯವೂ ಕೈಜೋಡಿಸಬೇಕಿದೆ ಎಂದು ಅವರು ಹೇಳಿದರು.

ಕೊರೋನ ಚಿಕಿತ್ಸೆಗೆ ವಿಮಾ ಸೌಲಭ್ಯ:

ಕೊರೋನಗೆ ಚಿಕಿತ್ಸೆಯನ್ನೂ ABARK ಅಡಿಯಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರದ ಆರೋಗ್ಯ ಸಚಿವಾಲಯದ ಜೊತೆ ಶೀಘ್ರದಲ್ಲೇ ಮಾತುಕತೆ ನಡೆಸುವುದಾಗಿ ಸಚಿವರು ತಿಳಿಸಿದರು. ಇದರಿಂದ ಆರೋಗ್ಯ ವಿಮೆಯ ಅಡಿಯಲ್ಲಿ ಕೋವಿಡ್ ಚಿಕಿತ್ಸೆಯೂ ಸೇರಲ್ಪಡುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೂ ಚಿಕಿತ್ಸೆಗೆ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಾಸ್ಕ್ ಧರಿಸುವುದರಿಂದ 90% ಸೋಂಕು ತಡೆಗಟ್ಟಬಹುದಾಗಿದೆ. ಆದ್ದರಿಂದ ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸಬೇಕು ಎಂದು ಸಚಿವರು ತಾಕೀತು ಮಾಡಿದರು. ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು. ಮದುವೆ ಮುಂತಾದ ಸಮಾರಂಭಗಳಿಗೂ ನೀಡಲಾಗಿರುವ ಮಾರ್ಗಸೂಚಿಗಳ ಪಾಲನೆ ಆಗಬೇಕು ಎಂದು ಅವರು ಹೇಳಿದರು.

ಮಾಧ್ಯಮಗಳ ಪಾತ್ರ:

ಕೊರೋನ ಕುರಿತಾಗಿ ಜನರಲ್ಲಿ ಇರುವ ಆತಂಕವನ್ನು ದೂರಮಾಡಿ ನೈಜ ಅಂಶಗಳನ್ನು ತೋರಿಸುವಂತೆ ಸಚಿವರು ಮಾಧ್ಯಮಗಳಿಗೆ ಮನವಿ ಮಾಡಿದರು. ಬೆಂಗಳೂರಿನಲ್ಲಿ ಸುಮಾರು 697 ಜನ ಸೋಂಕಿತರಲ್ಲಿ ಈಗ 330 ಸಕ್ರಿಯ ಪ್ರಕರಣಗಳಿವೆ. ಅದರಲ್ಲೂ ಐಸಿಯು ನಲ್ಲಿ ಕೇವಲ 6 ಜನ ಮಾತ್ರ ಇದ್ದಾರೆ. 93% ಜನರಿಗೆ ಯಾವುದೇ ಲಕ್ಷಣಗಳಿಲ್ಲ. ಕೊರೋನ, ಸಾರ್ಸ್ ವೈರಾಣುವಿಗಿಂತ ಅಪಾಯಕಾರಿ ಅಲ್ಲ. ಮರಣ ಪ್ರಮಾಣ ನಮ್ಮ ರಾಜ್ಯದಲ್ಲಿ ಕೇವಲ 1.2% ನಷ್ಟಿದೆ. ರಾಷ್ಟ್ರೀಯ ಸರಾಸರಿ 2.8% ನಷ್ಟಿದೆ. ಸಾರ್ಸ್ ಸೋಂಕಿನ ಮರಣ ಪ್ರಮಾಣ ಶೇ.10% ಇತ್ತು. ಆದ್ದರಿಂದ ಹರಡುವಿಕೆ ಪ್ರಮಾಣ ಹೆಚ್ಚಾಗಿದೆ ಎನ್ನುವುದನ್ನು ಬಿಟ್ಟರೆ ಇದು ಇತರೆ ವೈರಾಣುಗಳಿಗಿಂತ ಕಡಿಮೆ ಅಪಾಯಕಾರಿಯಾಗಿದೆ. ಆದ್ದರಿಂದ, ಮಾಧ್ಯಮದವರು ಜನರಲ್ಲಿ ಆತಂಕ ಸೃಷ್ಟಿಸುವ ಬದಲು ತೀವ್ರತೆ ಕುರಿತಾದ ಅಂಕಿ ಅಂಶಗಳ ಮೂಲಕ ಜಾಗೃತಿ ಮೂಡಿಸುವಂತೆ ಹಾಗೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಅರಿವು ಮೂಡಿಸಲು ಸಚಿವ ಸುಧಾಕರ್ ಮನವಿ ಮಾಡಿದರು

ಜಿಮ್ಸ್‌ 24*7 ಟೆಲಿ ಐಸಿಯುಗೆ ಆನ್‌ಲೈನ್‌ ಚಾಲನೆ ನೀಡಿದ ಡಾ. ಅಶ್ವತ್ಥನಾರಾಯಣ

ಬೆಂಗಳೂರು: ಗುಲ್ಬರ್ಗ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (ಜಿಮ್ಸ್‌)ನಲ್ಲಿ ಕರ್ನಾಟಕದ ಎರಡನೇ 24*7 ಟೆಲಿ ಐಸಿಯು ಸೇವೆಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ಆನ್‌ಲೈನ್‌ ಮೂಲಕ ಸೋಮವಾರ ಚಾಲನೆ ನೀಡಿದರು.

ವಿಕಾಸಸೌಧದಲ್ಲಿ ಆನ್‌ಲೈನ್ ಮೂಲಕ ಜಿಮ್ಸ್‌ನ ಟೆಲಿ ಐಸಿಯು ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ ಎಸಿಟಿ (ಆಕ್ಷನ್‌ ಕೊವಿಡ್‌-19 ಟೀಮ್‌) ಗ್ರಾಂಟ್ಸ್‌ ನೆರವಿನೊಂದಿಗೆ ಕರ್ನಾಟಕ ಸರ್ಕಾರ ಜಿಮ್ಸ್‌ನಲ್ಲಿ ಕರ್ನಾಟಕದ ಎರಡನೇ 24*7 ಟೆಲಿ ಐಸಿಯು ಸೇವೆ ಆರಂಭಿಸಿದೆ. ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಕ್ಲೌಡ್‌ಫಿಸಿಷಿಯನ್‌ನ ಸೇವೆ ಬಳಸಿಕೊಳ್ಳುವುದರಿಂದ ಗರಿಷ್ಠ ಸಂಖ್ಯೆಯ ರೋಗಿಗಳಿಗೆ ಐಸಿಯು ಚಿಕಿತ್ಸೆ ಸೌಲಭ್ಯ ದೊರೆಯಲು ಸಾಧ್ಯ,” ಎಂದರು.

“ರಾಜ್ಯದಲ್ಲಿ ಮೊದಲ ಟೆಲಿ ಐಸಿಯು ಸೌಲಭ್ಯ ಪಡೆದದ್ದು ರಾಮನಗರದ ಜಿಲ್ಲಾ ಆಸ್ಪತ್ರೆ. ಜಿಮ್ಸ್‌ ಈ ಸೇವೆ ಪಡೆಯುತ್ತಿರುವ ರಾಜ್ಯದ ಎರಡನೇ ಆಸ್ಪತ್ರೆ. ಜಿಮ್ಸ್‌ನ 70 ಹಾಸಿಗೆಗಳ ಪೈಕಿ 26 ಹಾಸಿಗೆಗಳನ್ನು ವಿಶೇಷ ತರಬೇತಿ ಪಡೆದ ತೀವ್ರ ನಿಗಾ ಘಟಕದ ತಜ್ಞರು ಮತ್ತು ದಾದಿಯರನ್ನೊಳಗೊಂಡ 10 ಜನರ ತಂಡ 24*7 ನಿಗಾವಹಿಸಲಿದೆ. ಆರೋಗ್ಯ-ತಂತ್ರಜ್ಞಾನ ವೇದಿಕೆ ಮತ್ತು ಆಸ್ಪತ್ರೆಗಳ ನಡುವೆ ಸಮನ್ವಯತೆ ಸಾಧಿಸಿ ಗುಣಮಟ್ಟದ ಸೇವೆ ಒದಗಿಸಲು ಡಾ.ತ್ರಿಲೋಕ್ ಚಂದ್ರ ನೇತೃತ್ವದಲ್ಲಿ ತಂಡ ಬದ್ಧವಾಗಿದೆ,”ಎಂದು ಹೇಳಿದರು.

ಟೆಲಿ ಐಸಿಯು ನಿರ್ವಹಣೆ:
“ತೀವ್ರ ನಿಗಾಘಟಕದ ಇಎಂಆರ್, ಆಡಿಯೊ-ದೃಶ್ಯಗಳು ಮತ್ತು ಎಚ್ಚರಿಕೆ ವ್ಯವಸ್ಥೆಗಳನ್ನು ಬಳಸಿಕೊಂಡು ಗಂಭೀರ ಸ್ಥಿತಿಯಲ್ಲಿರುವ ಕೊವಿಡ್‌ 19 ರೋಗಿಗಳ ಬಗ್ಗೆ ನಿಗಾವಹಿಸುವ ಕ್ಲೌಡ್‌ಫಿಸಿಷಿಯನ್ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡುವರು. ಸಿಸಿಟಿವಿ, ಇಂಟರ್ನೆಟ್‌ ಸಂಪರ್ಕಿತ ಸೆನ್ಸರ್‌ಗಳ ಮೂಲಕ ರೋಗಿಯ ಸ್ಥಿತಿಗತಿಯ ಬಗ್ಗೆ ರಿಯಲ್‌ ಟೈಮ್‌ ಮಾಹಿತಿ ಪಡೆಯುವ ತೀವ್ರ ನಿಗಾ ಘಟಕದ ತಜ್ಞರು ಹಾಗೂ ದಾದಿಯರು, ಈ ಸಂಬಂಧ ಆಸ್ಪತ್ರೆಯ ವೈದ್ಯ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡುವರು. ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ತಗ್ಗಿಸಲು ಈ ವಿಶಿಷ್ಟ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಅಗತ್ಯ ಇರುವ ಕಡೆಗಳಲ್ಲಿ ಟೆಲಿ ಐಸಿಯು ಸೇವೆ ಒದಗಿಸಲು ಎಸಿಟಿ ಬದ್ಧವಾಗಿದೆ ,”ಎಂದು ವಿವರಿಸಿದರು.

ಈ ಸಂದರ್ಭದಲ್ಲಿ, ಸ್ಟಾರ್ಟ್‌ಅಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷರೂ ಆದ ಎಸಿಟಿ ವಕ್ತಾರ ಪ್ರಶಾಂತ್‌ ಪ್ರಕಾಶ್, ಕ್ಲೌಡ್‌ಫಿಸಿಷಿಯನ್‌ನ ಸಹ ಸಂಸ್ಥಾಪಕ ಡಾ. ದಿಲೀಪ್‌ ರಾಮನ್‌ ಉಪಸ್ಥಿತರಿದ್ದರು.

ಏನಿದು ಎಸಿಟಿ ಗ್ರಾಂಟ್ಸ್‌ ?:
ಕೊವಿಡ್‌ 19 ವಿರುದ್ಧ ಹೋರಾಟದಲ್ಲಿ ಪ್ರಬಲ ಪರಿಣಾಮ ಬೀರಬಲ್ಲ ವಿಷಯಗಳ ಬಗ್ಗೆ ವಿಶಿಷ್ಟ ಮಾಹಿತಿ ಒದಗಿಸುವ ಜತಗೆ ಅಗತ್ಯ ಸೌಕರ್ಯ ಕಲ್ಪಿಸಲು ನೆರವಾಗುವ ಸ್ಟಾರ್ಟ್‌ಅಪ್‌ ಸಮೂಹದ 100 ಕೋಟಿ ಅನುದಾನವೇ ಎಸಿಟಿ (ಆಕ್ಷನ್‌ ಕೊವಿಡ್‌-19 ಟೀಮ್‌) ಗ್ರಾಂಟ್ಸ್‌. ಕೊರೊನಾ ಹರಡದಂತೆ ಎಚ್ಚರವಹಿಸುವ, ಸೋಂಕು ಪತ್ತೆ ಪರೀಕ್ಷೆ ನಡೆಸುವ, ಆರೋಗ್ಯ ಕಾರ್ಯಕರ್ತರು ಮತ್ತು ಆಸ್ಪತ್ರೆಗಳಿಗೆ ಅಗತ್ಯ ಬೆಂಬಲ ಒದಗಿಸಿ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ನಿರ್ವಹಿಸಿ ಮಾನಸಿಕ ಸ್ಥೈರ್ಯ ನೀಡುವ ತಂಡಗಳು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಎಸಿಟಿ ಬೆಂಬಲಿಸುತ್ತದೆ.

ಪರಿಶಿಷ್ಟ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಪರೀಕ್ಷಾ ಪೂರ್ವ ತರಬೇತಿ ನೀಡಲು ಗೋವಿಂದ ಎಂ ಕಾರಜೋಳ ಸೂಚನೆ

ಬೆಂಗಳೂರು. ಜೂ.15 : ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಸಿದ್ದತಾ ತರಬೇತಿಯನ್ನು ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಂದ ಆಯೋಜಿಸಿ, ಐಎಎಸ್/ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಯಗಳಲ್ಲಿ ಉತ್ತೀರ್ಣರಾಗಿರುವವರ ವಿವರವನ್ನು ಸಂಗ್ರಹಿಸಬೇಕು ಎಂದು ಉಪಮುಖ್ಯಮಂತ್ರಿಯವರಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದರು.

ವಿಕಾಸಸೌಧದಲ್ಲಿಂದು ನಡೆದ ರಾಜ್ಯಮಟ್ಟದ ಉನ್ನತ ಸಮತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, 2019-20 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು 24.8 ಕೋಟಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 11 ಕೋಟಿ ರೂ. ಅನುದಾನ ಒದಗಿಸಲಾಗಿದೆ. 52 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆ ನಡೆಸಿ, 2754 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ವಿಭಾಗ ವ್ಯಾಪ್ತಿಯ ಜಿಲ್ಲೆಗಳ 900 ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಆದೇಶ ಹೊರಡಿಸಲಾಗಿದೆ.

2020-12 ನೇ ಸಾಲಿನಲ್ಲಿ ಸ್ವರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮಕ್ಕಾಗಿ 14 ಕೋಟಿಯನ್ನು ಮೀಸಲಿಡಲಾಗಿದೆ. ಈ ವರ್ಷದಿಂದ ನ್ಯಾಯಾಲಯವು ನಡೆಸುವ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಪ್ರಾರಂಭಿಸಲಾಗುವುದು. ನರ್ಸಿಂಗ್ ಕೋರ್ಸುಗಳ ತರಬೇತಿಯನ್ನು ಹೆಚ್ಚು ಅಭ್ಯರ್ಥಿಗಳಿಗೆ ನೀಡಬೇಕು. ಜೆಇಇ ಮತ್ತು ನೀಟ್ ಗಳಿಗೆ ತರಬೇತಿಯನ್ನು ಅತ್ಯುತ್ತಮವಾಗಿ ನೀಡಬೇಕು. ಮಿಲಿಟರಿ ಪೂರ್ವ ತರಬೇತಿಯನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡಬೇಕು. ಪರೀಕ್ಷಾ ಪೂರ್ವ ತರಬೇತಿಯಿಂದ ಸಾಕಷ್ಟು ಅನುಕೂಲಗಳಿವೆ. ಆದರೆ ಗುಣಮಟ್ಟದ ತರಬೇತಿ ನೀಡಿ, ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗುವಂತೆ ಕ್ರಮಕೈಗೊಳ್ಳಬೇಕು. ಅಭ್ಯರ್ಥಿಗಳು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಯಶಸ್ವಿಯಾಗುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಸಲಹೆಗಾರರಾದ  ಇ. ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ  ರವಿಕುಮಾರ್ ಸುರಪುರ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ್ ಸುರಳೀಕರ, ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮುಖ್ಯಸ್ಥ ಮಹೇಶ್, ಡಿಸಿಎಂ ಆಪ್ತಕಾರ್ಯದರ್ಶಿ ವಿ. ಶ್ರೀನಿವಾಸ್, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಸಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

ಇನ್ಮುಂದೆ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ:ಸಿಎಂ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ಮಾಸ್ಕ್ ಕಡ್ಡಾಯವಾಗಿದ್ದು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಗಳೂರು ಮಹಾನಗರದಲ್ಲಿ‌ ಕೋವಿಡ್ 19 ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅದನ್ನು‌ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖ್ಯಮಂತ್ರಿಗಳು ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಹಾಗು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಸಭೆಯ ವಿವರ ನೀಡಿದರು.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಕುರಿತು ನಡೆಸಿದ ಸಭೆಯ ಕುರಿತು ಪತ್ರಿಕಾಗೋಷ್ಠಿಗೆ ಟಿಪ್ಪಣಿ

1. ಬೆಂಗಳೂರು ನಗರದಲ್ಲಿ ಲಾಕ್ ಡೌನ್ ನಂತರ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು.

2. ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ.

3. ಬೆಂಗಳೂರಿನಲ್ಲಿ ಒಟ್ಟು 697 ಪ್ರಕರಣಗಳು ವರದಿಯಾಗಿವೆ. 330 ಸಕ್ರಿಯ ಪ್ರಕರಣಗಳಿದ್ದು, 6 ಜನ ಐಸಿಯು ನಲ್ಲಿದ್ದಾರೆ.

4. ಈ ಹಿನ್ನೆಲೆಯಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

5. ಗುರುವಾರ ಮಾಸ್ಕ್ ಡೇ ಆಚರಿಸಲಾಗುವುದು. ವಿಧಾನಸೌಧದಿಂದ ಬೆಳಿಗ್ಗೆ 8.30 ಗಂಟೆಗೆ ಮಾಸ್ಕ್ ಧರಿಸಿ 1 ಕಿ.ಮೀ. ವಾಕ್ ಮಾಡಲಾಗುವುದು.

6. ರಾಜ್ಯಾದ್ಯಂತ, ಪಂಚಾಯತ್ ಮಟ್ಟದಲ್ಲಿಯೂ ಇದನ್ನು ಆಚರಿಸಲಾಗುವುದು.

7. ಮಹಾರಾಷ್ಟ್ರದಿಂದ ಬರುವವರಿಗೆ ಏಳು ದಿನ ಕ್ವಾರಂಟೈನ್, ಚೆನ್ನೈ, ದೆಹಲಿಯಿಂದ ಬರುವವರಿಗೆ ಮೂರು ದಿನ ಕ್ವಾರಂಟೈನ್ ಮಾಡಲಾಗುವುದು.

8. ಮಾಸ್ಕ್ ಧರಿಸದ ವ್ಯಕ್ತಿಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳದ ವ್ಯಕ್ತಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಹಾಗೂ 200 ರೂ. ದಂಡ ವಿಧಿಸಲಾಗುವುದು.

9. 8000 ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಪತ್ತೆ ಹಚ್ಚುವುದು, ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು, ಹೋಂ ಕ್ವಾರಂಟೈನ್ ಪಾಲನೆಯನ್ನು ಖಾತರಿ ಪಡಿಸುವ ಬಗ್ಗೆ ಕ್ರಮ ವಹಿಸಲಾಗುವುದು.

10. ರಾಜ್ಯದಲ್ಲಿ ಒಟ್ಟು 2956 ಸಕ್ರಿಯ ಪ್ರಕರಣಗಳು ಇದ್ದು, 93 ಶೇಕಡಾ ಜನರಿಗೆ ರೋಗ ಲಕ್ಷಣ ಇಲ್ಲ. 200 ಜನರಿಗೆ ಮಾತ್ರ ರೋಗ ಲಕ್ಷಣ ಇದೆ.

11. ಪರೀಕ್ಷಾ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

12. ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆಗೆ 7100 ಪರೀಕ್ಷೆ ನಡೆಸಲಾಗಿದೆ. ಐಸಿಎಂಆರ್ ಮಾರ್ಗಸೂಚಿಗಳಿಗಿಂತ ಹೆಚ್ಚು ಪರೀಕ್ಷೆ ನಡೆಸಲಾಗಿದೆ.

13. ಚಿಕಿತ್ಸೆಯ ವಿಧಿ ವಿಧಾನ ಹಾಗೂ ಚಿಕಿತ್ಸೆ ದರ ನಿಗದಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಕುರಿತು ಶೀಘ್ರವೇ ಮಾರ್ಗಸೂಚಿ ಹೊರಡಿಸಲಾಗುವುದು.

14. ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆ ಆತಂಕ ಪಡಬೇಕಾಗಿಲ್ಲ. ಆದರೆ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಮತ್ತು ವೈಯಕ್ತಿಕ ಸ್ವಚ್ಛತೆಯಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದೆ ತೆಗೆದುಕೊಳ್ಳಬೇಕು.

ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ

ಬೆಂಗಳೂರು, ಜೂನ್ 15-ಸಮಾಜ ಕಲ್ಯಾಣ ಇಲಾಖೆ ನಡೆಸುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಇರುವ ಬೇಡಿಕೆ ಕುರಿತಂತೆ ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳು ಇರುವ ಹಿನ್ನೆಲೆಯಲ್ಲಿ ಈ ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

ಸಭೆಯಲ್ಲಿ ಕ್ರೈಸ್ ವಸತಿ ಶಾಲೆಗಳಲ್ಲಿ 660 ಶಿಕ್ಷಕರು ಮತ್ತು 183 ಪದವಿಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. 993 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ದಾಖಲಾತಿ ಪರಿಶೀಲನೆ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಶಿಕ್ಷಣ ಇಲಾಖೆ ನೆರವಿನೊಂದಿಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದರು.

2019-20ನೇ ಸಾಲಿನಲ್ಲಿ ಎಸ್ ಸಿ ಎಸ್ ಪಿ ಮತ್ತು ಎಸ್ ಟಿ ಪಿ ಯೋಜನೆಯಡಿ ಶೇ 94.51 ಗುರಿ ಸಾಧನೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಗಂಗಾ ಕಲ್ಯಾಣ ಯೋಜನೆಯಡಿ ಬಾಕಿ ಇರುವ 8911 ಘಟಕಗಳ ವಿದ್ಯುದೀಕರಣಕ್ಕೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಈ ಯೋಜನೆಯಡಿ 2019-20ರಲ್ಲಿ 8,270 ಕೊಳವೆ ಬಾವಿ ಕೊರೆಯಲಾಗಿದ್ದು, 10,201 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ.

ಐರಾವತ ಯೋಜನೆಯಡಿ ಟ್ಯಾಕ್ಸಿ ವಿತರಣೆ ನಗರ ಪ್ರದೇಶದಲ್ಲಿ ಮಾತ್ರ ಯಶಸ್ವಿಯಾಗುತ್ತಿದೆ. ಇತರ ಪ್ರದೇಶಗಳಲ್ಲಿ ಸರಕು ಸಾಗಣೆ ವಾಹನಗಳನ್ನು ಒದಗಿಸುವಂತೆ ಸಲಹೆ ನೀಡಿದರು.

ಲಿಡ್ಕರ್ ಮೂಲಕ 11,772 ಚರ್ಮ ಕುಶಲ ಕರ್ಮಿಗಳಿಗೆ ಕೋವಿಡ್ 19 ಲಾಕ್ ಡೌನ್ ಸಂದರ್ಭದಲ್ಲಿ ತಲಾ 5 ಸಾವಿರ ರೂ. ನೆರವು ನೀಡಲಾಗಿದೆ.

ಶಿಕ್ಷಣ ಇಲಾಖೆಯ ವೇಳಾಪಟ್ಟಿಯಂತೆ ಇಲಾಖೆಯ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳು ಕಾರ್ಯಾರಂಭ ಮಾಡಲಿವೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.

42 ಸಾವಿರಕ್ಕೂ ಹೆಚ್ಚು ಜನ ಇಲಾಖೆಯ ವಸತಿ ಶಾಲೆಗಳು ಹಾಗೂ ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.