ರಾಜ್ಯದಲ್ಲಿ ಇಂದು 308 ಜನರಿಗೆ ಕೊರೊನಾ ಪಾಸಿಟಿವ್

ಬೆಂಗಳೂರು: ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೋವಿಡ್-19 ಪ್ರಕರಣ ರಾಜ್ಯದಲ್ಲಿ ದಿನದಿಂದ ದಿನಕ್ಕ ಹೆಚ್ಚಾಗುತ್ತಿದ್ದು ಇಂದು ಇಂದೇ ದಿನ ಮೂವರು ಮೃತಪಟ್ಟಿದ್ದು, ಹೊಸದಾಗಿ 308 ಪಾಸಿಟಿವ್ ಪ್ರಕರಣ ದಾಖಲಾಗಿವೆ.

ಪಾಸಿಟಿವ್ ಪ್ರಕರಣಗಳ ಸಂಖ್ಯೆ 6824 ಆಗಿದ್ದು 3092 ಆಕ್ಟೀವ್ ಕೇಸ್ ಗಳಿವೆ, ಮೃತರ ಸಂಖ್ಯೆ 81 ಕ್ಕೆ ತಲುಪಿದೆ. ಇಂದು ಕಂಡಬಂದ ಪಾಸಿಟಿವ್ ಪ್ರಕರಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು 25 ಇದ್ದು ಅಂತಾರಾಜ್ಯ ಪ್ರಯಾಣಿಕರ ಸಂಖ್ಯೆ 208 ಆಗಿದೆ.

ಜುಲೈನಲ್ಲಿ ಕೋವಿಡ್ ಮಹಾಮಾರಿ ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪುವ ಆತಂಕ ಎದುರಾಗಿದೆ ಪರಿಸ್ಥಿತಿಯನ್ನು ಎದುರಿಸಲು ಆರೋಗ್ಯ ಇಲಾಖೆ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದ್ದು ಮತ್ತೊಮ್ಮೆ ಲಾಕ್ ಡೌನ್ ಜಾರಿಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.

ಗಂಭೀರ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ : ಸಚಿವ ಸುಧಾಕರ್

ಯಾದಗಿರಿ : ಕೊರೋನಾ ಹರಡುವಿಕೆ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆಯಬಹುದು ಎಂದು ಭಾವಿಸಿ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೋವಿಡ್ – 19 ಪರಿಶೀಲನಾ ಸಭೆಯಲ್ಲಿ ಶನಿವಾರ ಅವರು ಮಾತನಾಡಿದರು.
ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಜ್ವರದ ಸೋಂಕು ಕಾಣಿಸಿಕೊಂಡ ಮತ್ತು ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರ ಟೆಸ್ಟ್ ಮಾಡಬೇಕು ಮತ್ತು ಅವರ ಮೇಲೆ ನಿರಂತರ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.

ಇದು ಜಿಲ್ಲೆಗೆ ಮೊದಲ ಭೇಟಿ. ಯಾದಗಿರಿ ಮತ್ತು ಉಡುಪಿ ಹೆಚ್ಚು ಸೋಂಕಿತರು ಇದ್ದಾರೆ ಎಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. 735 ಸೋಂಕಿತರು ಜಿಲ್ಲೆಯಲ್ಲಿದ್ದಾರೆ. ಮೇ ವರೆಗೆ ಯಾವ ಪ್ರಕರಣ ಇರಲಿಲ್ಲ. ಮಹಾರಾಷ್ಟ್ರ ದಿಂದ ಬಂದವರಿಂದ ಸೋಂಕು ಹರಡಿದೆ ಎಂದರು.

ಜಿಲ್ಲಾಡಳಿತದ ಪರಿಶ್ರಮದಿಂದ ಗ್ರಾಮ ಮಟ್ಟದಲ್ಲಿ ಅರಿವು ಚೆನ್ನಾಗಿದೆ. ಹೀಗಾಗಿ ಆತಂಕದ ಸ್ಥಿತಿಇಲ್ಲ. ಯಾರಲ್ಲೂ ರೋಗದ ಲಕ್ಷಣ ಇಲ್ಲ. ಪ್ರಥಮ ಮತ್ತು ದ್ವೀತಿಯ ಸಂಪರ್ಕಿತರ ಮೇಲೂ ನಿಗಾ ಇರಿಸಲಾಗಿದೆ ಎಂದರು.

ಮುಖ್ಯ ವಾಗಿ ಒಂದು ವಾರದಲ್ಲಿ ಪ್ರಯೋಗಾಲಯ ಕಾರ್ಯಾಚರಣೆ ಮಾಡಲಿದೆ. ಮೆಡಿಕಲ್ ಕಾಲೇಜು ಆರಂಭಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. 435 ಕೋಟಿ ವೆಚ್ಚದ ಕಾಮಗಾರಿಗೆ ಕೆಲ ದಿನಗಳಲ್ಲಿ ಮುಖ್ಯಮಂತ್ರಿ ಅವರಿಂದ ಭೂಮಿ ಪೂಜೆ ಮಾಡಲಾಗುವುದು ಎಂದು ಪ್ರಕಟಿಸಿದರು.

ಆಸ್ಪತ್ರೆಗೆ ಬೇಕಾದ ಉಪಕರಣಗಳನ್ನು ಖರೀದಿಗೆ ಸೂಚಿಸಲಾಗಿದೆ. 150 ಬೋಧಕ ಸಿಬ್ಬಂದಿ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗುವುದು. ಚಿಕ್ಕಬಳ್ಳಾಪುರ ಮತ್ತು ಯಾದಗಿರಿಗಳಲ್ಲಿ 30 ತಿಂಗಳಿಗೆ ಮುಂಚಿತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಎರಡು ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಿರುವುದು ಮೆಚ್ಚುಗೆ ಸಂಗತಿ. ಟಾಸ್ಕ್ ಫೋರ್ಸ್ ಸಮಿತಿಗಳ ಮೂಲಕ ಹಿರಿಯ ನಾಗರಿಕರು ಮತ್ತು ಇತರ ರೋಗಿಗಳಿರುವವರ ಮೇಲೆ ಸತತ ನಿಗಾವಹಿಸಲಾಗಿದೆ. ಜಿಲ್ಲಾಡಳಿತದ ಕಾರ್ಯ ವೈಖರಿ ನನ್ನ ಆತಂಕವನ್ನು ನಿವಾರಿಸಿದೆ. ಗ್ರಾಮ ಮಟ್ಟದಲ್ಲಿ ಜನರ ಸಹಕಾರ ಉತ್ತಮ ಮಟ್ಟದಲ್ಲಿ ಇರುವುದು ಶ್ಲಾಘನೀಯ ಎಂದರು.

ಇನ್ನೂ ಕೆಲ ಫೀವರ್ ಕ್ಲಿನಿಕ್ ತೆರೆಯಲು ಸೂಚಿಸಲಾಗಿದೆ. ಹೊರಗಿಂದ ಬಂದವರ ಮೇಲೆ ನಿಗಾ ವ್ಯವಸ್ಥೆ ಇದೇ ರೀತಿ ಮುಂದುವರಿದರೆ, ಕೊರೋನಾ ನಿಗ್ರಹ ಸಾಧ್ಯವಿದೆ. ಆದಷ್ಟು ಶೀಘ್ರ ಮೆಡಿಕಲ್ ಕಾಲೇಜು ಆಭಿಸಲಾಗುವುದು ಎಂದರು. ಶಾಸಕರಾದ ವೆಂಟರೆಡ್ಡಿ, ದರ್ಶನಾಪುರ್, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸಭೆಯಲ್ಲಿ ಹಾಜರಿದ್ದರು.

ಸರಿಯಾಗಿ ಕರ್ತವ್ಯ ನಿರ್ವಹಿಸದ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಿರುದ್ಧ ಕಠಿಣ ಕ್ರಮ – ಡಾ.ಸುಧಾಕರ್

ರಾಯಚೂರು – ಜೂನ್ 13, 2020:ಒಪೆಕ್ ಆಸ್ಪತ್ರೆಯನ್ನು ದುಃಸ್ಥಿತಿಯಿಂದ ಮುಕ್ತಗೊಳಿಸಿ ಅದನ್ನು ಗುಣಮಟ್ಟದ ಶ್ರೇಷ್ಠ ಆಸ್ಪತ್ರೆಯಾಗಿ ಪರಿವರ್ತಿಸಲು ಶ್ರಮಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸಂಸ್ಥೆಯ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ. ರಿಮ್ಸ್ ಮತ್ತು ಒಪೆಕ್ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ್ದ ಸಚಿವರು ಪರಿಶೀಲನಾ ಸಭೆ ನಡೆಸಿದರು.

ಮಧ್ಯಾಹ್ನ ಮೂರು ಗಂಟೆ ನಂತರ ಯಾವುದೇ ಸೂಪರ್ ಸ್ಪೆಷಾಲಿಟಿ ವೈದ್ಯರು ಆಸ್ಪತ್ರೆಯಲ್ಲಿ ಇರುವುದಿಲ್ಲ ಎಂಬ ದೂರುಗಳಿವೆ. ದಿನದ 24 ತಾಸು ಎಲ್ಲಾ ವಿಭಾಗಗಳು ಕಾರ್ಯ ನಿರ್ವಹಿಸಬೇಕು. ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಆಸ್ಪತ್ರೆ ಇಂಥ ದುಃಸ್ಥಿತಿಯಲ್ಲಿ ಇದೆ ಎಂದು ಭಾವಿಸಿರಲಿಲ್ಲ. ಒಪೆಕ್ ಆಸ್ಪತ್ರೆಯಲ್ಲಿನ ಎಲ್ಲಾ ಲೋಪಗಳನ್ನು ಸರಿಪಡಿಸಿ ಅತ್ಯುತ್ತಮ ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕು ಎಂದು ವೈದ್ಯರು ಮತ್ತು ಆಡಳಿತ ವರ್ಗಕ್ಕೆ ನಿರ್ದೇಶನ ನೀಡಿದರು.

ಆರಂಭದಲ್ಲಿ ರಿಮ್ಸ್ ಆಡಳಿತ ವೈಖರಿ ಪರಿಶೀಲಿಸಿದ ಸಚಿವರು, ಯಾವುದೇ ನಿರ್ಮಾಣ ಕಾಮಗಾರಿ ಆರಂಭಿಸುವ ಮೊದಲು ತಮ್ಮ ಕಚೇರಿ ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರಬೇಕು. ವೈದ್ಯಕೀಯ ಉಪಕರಣಗಳ ಖರೀದಿಗೆ ಮೊದಲು ನಿರ್ದಿಷ್ಟ ಮಾರ್ಗಸೂಚಿಗಳ ಜೊತೆಗೆ ನಿರ್ದೇಶಕರ ಹಂತದಲ್ಲಿ ತಜ್ಞರ ಸಮಿತಿ ರಚಿಸಬೇಕು. ಯಾವುದೇ ಕಾರಣಕ್ಕೂ ಕಳಪೆ ಉಪಕರಣಗಳ ಖರೀದಿಗೆ ಅವಕಾಶವಿಲ್ಲದಂತೆ ಶ್ರೇಷ್ಠ ಗುಣಮಟ್ಟದ ಕಂಪನಿಗಳಿಗೆ ಮಾತ್ರ ಅವಕಾಶ ಇರುವಂತೆ ಎಚ್ಚರವಹಿಸಬೇಕು ಎಂದು ಸಚಿವ ಸುಧಾಕರ್ ತಾಕೀತು ಮಾಡಿದರು. ಉಪಕರಣ ಗುತ್ತಿಗೆ ಪಡೆದ ಕಂಪನಿಗಳು ಸಮರ್ಪಕ ಸೇವೆ ನೀಡಲು ಅಗತ್ಯ ಸೂಚನೆ ನೀಡಬೇಕು ಇಲ್ಲವೇ ಮಾರ್ಗಸೂಚಿ ಬದಲಿಸಿ ಎಂದು ಡಿಎಂಇಗೆ ಸೂಚನೆ ನೀಡಿದರು.

ಖಾಲಿ ಇರುವ 49 ಬೋಧಕ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡುವ ನಿಟ್ಟಿನಲ್ಲಿ ಒಂದು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು. ಅಲ್ಲಿಯವರೆಗೆ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಹೇಳಿದರು. ಗ್ರೂಪ್ ಬಿ ಯ 4 ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಸೂಚನೆ ನೀಡಿದ ಸಚಿವರು, ಗ್ರೂಪ್ ಸಿ ಮತ್ತು ಡಿ ವರ್ಗದ ನೇಮಕಕ್ಕೆ ಅನುಕೂಲ ಆಗುವಂತೆ ವೃಂದ ಮತ್ತು ನೇಮಕ ನಿಯಮಗಳನ್ನು ಶೀಘ್ರವಾಗಿ ಅಂತಿಮಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಆಡಳಿತದ ವೈಫಲ್ಯಗಳು ಮರುಕಳಿಸದಂತೆ ಜಾಗ್ರತೆವಹಿಸಿ ಮೊದಲ ಹಂತದ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಆಯುಷ್ಮಾನ್ ಭಾರತ ಅಡಿ ವಾರ್ಷಿಕ ಪಡೆಯುತ್ತಿರುವ ಅನುದಾನ ಹೆಚ್ಚಿಸುವ ನಿಟ್ಟಿನಲ್ಲಿ ವಿಭಾಗಗಳ ಮುಖ್ಯಸ್ಥರು ಕಾರ್ಯವೈಖರಿ ಬದಲಿಸಿಕೊಂಡು ಆಯಾದಿನದ ಚಿಕಿತ್ಸೆ ವಿವರಗಳನ್ನು ದಾಖಲು ಮಾಡಿ ಕಳುಹಿಸಬೇಕು. ಇದನ್ನು ಪ್ರತಿ ತಿಂಗಳು ಪರಿಶೀಲಿಸಿ ಗುರಿ ತಲುಪದ ವಿಭಾಗಗಳ ಮುಖ್ಯಸ್ಥರನ್ನು ಹೊಣೆ ಮಾಡಲಾಗುವುದು ಎಂದರು. ಹಟ್ಟಿ ಚಿನ್ನದ ಗಣಿ ಸೇರಿದಂತೆ ಇತರೆ ಕಂಪನಿಗಳನ್ನು ಸಂಪರ್ಕಿಸಿ ಸಿಎಸ್ ಆರ್ ನಿಧಿಯ ನೆರವು ಪಡೆದುಕೊಳ್ಳಲು ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು.

ಆರ್ಥಿಕ ಪುನಶ್ಚೇತನ ನಮ್ಮ ಮುಂದಿನ ಗುರಿ; ಮೆಲ್ಬರ್ನ್‌ ಕನ್ನಡಿಗರಿಗೆ ಮಾಹಿತಿ ನೀಡಿದ ಡಾ. ಅಶ್ವತ್ಥನಾರಾಯಣ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೊರೊನಾ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಇದರೊಂದಿಗೆ ಆರ್ಥಿಕ ಪುನಶ್ಚೇತನಕ್ಕೂ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಮೆಲ್ಬರ್ನ್ ಕನ್ನಡ ಸಂಘ ಶನಿವಾರ ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊವಿಡ್‌ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮಪರ್ಕವಾಗಿ ನಿಭಾಯಿಸಿದೆ. ಈ ಬಗ್ಗೆ ಚಿಂತೆ ಬೇಡ ಎಂದರು.

“ಲಾಕ್‌ಡೌನ್‌ ಸಡಲಿಕೆ ನಂತರ ಅಂತರ್‌ ರಾಜ್ಯ, ಅಂತರ್‌ ಜಿಲ್ಲೆಗಳ ನಡುವೆ ಸಂಚಾರ ಮುಕ್ತವಾಗಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದೇವೆ. ಇನ್ನು ಮುಂದೆ ಆರ್ಥಿಕ ಪುನಶ್ಚೇತನಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಈ ಹಾದಿಯಲ್ಲಿ ಸಾಕಷ್ಟು ಸವಾಲುಗಳಿದ್ದರೂ, ಅದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಮಗಿದೆ. ಕೊರೊನಾ ಪರಿಸ್ಥಿತಿ ನಿರ್ವಹಣೆ, ಆರ್ಥಿಕ ಪುನಶ್ಚೇತನ ಸೇರಿದಂತೆ ಎಲ್ಲ ವಿಷಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

“ಕೊವಿಡ್‌ ವಿರುದ್ಧದ ಹೋರಾಟಕ್ಕೆ ‘ಆತ್ಮ ನಿರ್ಭರ ಭಾರತ’ ಅಭಿಯಾನಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಬದುಕು ಕಟ್ಟಿಕೊಳ್ಳಲು ಸಮಸ್ಯೆ ಆಗದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಲ್ಲ ನೆರವು ಒದಗಿಸುತ್ತಿವೆ. ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯದ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಮುಂದೆಯೂ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲೂ ಆರೋಗ್ಯ ಸಮೀಕ್ಷೆ ನಡೆಸಿ ಆ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗಿದೆ. ಜತೆಗೆ, ಉಚಿತವಾಗಿ ಕೊವಿಡ್‌ ಚಿಕಿತ್ಸೆ ಹಾಗೂ ಸಾಂಸ್ಥಿಕ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ,”ಎಂದು ತಿಳಿಸಿದರು.

ಇತರ ರಾಷ್ಟ್ರಗಳಿಗೆ ಭಾರತ ಪ್ರೇರಣೆ:

“ಲಾಕ್‌ಡೌನ್‌ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. ವೈರಾಣು ಪತ್ತೆ ಪ್ರಯೋಗಾಲಯದ ಸಂಖ್ಯೆ ಹೆಚ್ಚಿಸಲಾಗಿದೆ. ಪಿಪಿಇ ಕಿಟ್‌, ಎನ್‌ 95 ಮಾಸ್ಕ್‌, ವೆಂಟಿಲೇಟರ್‌ಗಳ ತಯಾರಿಕೆಯಲ್ಲಿ ಸ್ವಾಲಂಬನೆ ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ. ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಸಿಬ್ಬಂದಿ ಕೊರತೆ ನೀಗಿಸಲಾಗಿದೆ. ಟೆಲಿ ಮೆಡಿಸಿನ್‌, ಟೆಲಿಕನ್ಸಲ್ಟೇಷನ್‌ ಮೂಲಕ ವೈದ್ಯಕೀಯ ಸಲಹೆ ನೀಡಲಾಗುತ್ತಿದೆ. ರಿಮೋಟ್‌ ಐಸಿಯು ವ್ಯವಸ್ಥೆ ಇದೆ. ಜತೆಗೆ ಹೊಸ ಟೆಸ್ಟಿಂಗ್ ವಿಧಾನ, ಹೊಸ ಉಪಕರಣಗಳ ಸಂಶೋಧನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮೂಲಸೌಕರ್ಯದ ಕೊರತೆಯನ್ನು ಹಿಮ್ಮೆಟ್ಟಿ ಇಡೀ ವಿಶ್ವದ ಗಮನ ಸೆಳೆದಿರುವ ಭಾರತ, ಇಂದು ಇತರ ರಾಷ್ಟ್ರಗಳಿಗೆ ಪ್ರೇರಣೆ ನೀಡುವಂತಾಗಿದೆ,”ಎಂದರು.

ವೈದ್ಯ ನಮಸ್ಕಾರ ಥ್ರೂ ಸೂರ್ಯ ನಮಸ್ಕಾರ:

‘ವೈದ್ಯ ನಮಸ್ಕಾರ ಥ್ರೂ ಸೂರ್ಯ ನಮಸ್ಕಾರ’ ಪರಿಕಲ್ಪನೆಯಲ್ಲಿ ಜೂನ್‌ 21ರಂದು ಆಸ್ಟ್ರೇಲಿಯಾದಲ್ಲಿ ಆಯೋಜಿಸಿರುವ ವಿಶ್ವ ಯೋಗ ದಿನಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಅಶ್ವತ್ಥನಾರಾಯಣ, “ದೂರದ ದೇಶದಲ್ಲಿ ಕನ್ನಡದ ಕಂಪು ಪಸರಿಸುವ ಜತೆಗೆ ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುತ್ತಿರುವ ಕನ್ನಡ ಬಂಧುಗಳ ಸಾಧನೆ ಶ್ಲಾಘನಾರ್ಹ,” ಎಂದರು .

ಆಸ್ಟ್ರೇಲಿಯಾದ ಕನ್ನಡ ಶಾಲೆಯಲ್ಲಿ 11 ಮತ್ತು 12 ತರಗತಿವರೆಗೂ ವಿಸ್ತರಿಸಲು ಕರ್ನಾಟಕ ಸರ್ಕಾರ ನೆರವು ನೀಡುವ ಜತೆಗೆ, ಕನ್ನಡ ಶಿಕ್ಷಕರ ಕೊರತೆ ನೀಗಿಸಬೇಕು ಎಂಬ ಅಲ್ಲಿನ ಕನ್ನಡಿಗರ ಮನವಿಗೆ ಸ್ಪಂದಿಸಿ, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶೈಕ್ಷಣಿಕ ಅಸಮಾನತೆಗೆ ಡಿಜಿಟಲ್‌ ಕಲಿಕೆ ಪರಿಹಾರ: ಡಾ. ಅಶ್ವತ್ಥನಾರಾಯಣ

ಬೆಂಗಳೂರು: ತಂತ್ರಜ್ಞಾನದ ಮೂಲಕ ಸಮಾಜದಲ್ಲಿ ಎಲ್ಲರನ್ನೂ ತಲುಪಲು ಸಾಧ್ಯವಿರುವುದರಿಂದ ಶೈಕ್ಷಣಿಕ ಅಸಮಾನತೆಗೆ ಡಿಜಿಟಲ್‌ ಕಲಿಕೆ ಪರಿಹಾರವಾಗಿದೆ. ಹಾಗಾಗಿ, ಎಲ್ಲ ಶಿಕ್ಷಣ ಸಂಸ್ಥೆಗಳು ಡಿಜಿಟಲ್‌ ಕಲಿಕೆಗೆ ಒತ್ತು ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಉನ್ನತ ಶಿಕ್ಷಣದ ಡಜಿಟಿಲೀಕರಣ- ಸವಾಲು ಮತ್ತು ಅವಕಾಶಗಳ ಕುರಿತು ಪದ್ಮಶ್ರೀ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.

“ಸಮಾಜದ ಯಾವುದೇ ವರ್ಗ, ಸ್ಥಳ, ಜನಾಂಗದ ಬೇಧವಿಲ್ಲದೇ ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ತಲುಪಿಸಲು ಇರುವ ಮಾರ್ಗವೇ ಡಿಜಿಟಲ್‌ ಕಲಿಕೆ. ಶೈಕ್ಷಣಿಕ ಅಸಮಾನತೆ ಹೋಗಲಾಡಿಸಲು ಇದು ಪರಿಹಾರವೂ ಆಗಿದ್ದು, ಕುಗ್ರಾಮದಲ್ಲಿರುವ ವಿದ್ಯಾರ್ಥಿಗಳು ಸಹ ಡಿಜಿಟಲ್‌ ವ್ಯವಸ್ಥೆ ಮೂಲಕ ನುರಿತ ಉಪನ್ಯಾಸಕರ ಪಾಠ ಕೇಳಲು ಅವಕಾಶ ಒದಗಿದೆ. ಜತೆಗೆ, ಪಠ್ಯ ವಿಷಯಗಳ ಲಿಖಿತ ಮಾಹಿತಿಯೂ ಅವರ ಕೈ ಸೇರುತ್ತಿರುವುದಿಂದ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಸಂಸ್ಥೆಗಳು ಸಮಯ ವ್ಯರ್ಥ ಮಾಡದೆ ಡಿಜಿಟಲ್‌ ಶಿಕ್ಷಣಕ್ಕೆ ಒತ್ತು ನೀಡಬೇಕು ,”ಎಂದು ಅವರು ಹೇಳಿದರು.

“ಡಿಜಿಟಲ್‌ ಕಲಿಕೆಗೆ ಸವಾಲುಗಳಿದ್ದು, ಅದನ್ನು ಪರಿಣಾಮಕಾರಿ ಆಗಿ ಎದುರಿಸುವ ಕೆಲಸವೂ ಆಗುತ್ತಿದೆ. ಇಂಟರ್ನೆಟ್‌ ಸಂಪರ್ಕ ಹಾಗೂ ಮೊಬೈಲ್‌, ಲ್ಯಾಪ್‌ಟಾಪ್‌ನಂಥ ಗ್ಯಾಡ್ಜೆಟ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ನಡೆದಿದೆ. ಕಾರ್ಪೊರೆಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅಥವಾ ಸರ್ಕಾರದ ಹಣ ಬಳಸಿಕೊಂಡು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಬಗ್ಗೆ ಪರಿಶೀಲಿಸಲಾಗುವುದು. ಎಲ್ಲೆಡೆ ತಡೆ ರಹಿತ ಗುಣಮಟ್ಟದ 4ಜಿ ನೆಟ್‌ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ,”ಎಂದರು.

“ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗದಂತೆ ಪಾಠ ಪ್ರವಚನಗಳನ್ನು ವೀಡಿಯೋ ಮಾಡಿ ಯೂಟ್ಯೂಬ್ ಚಾನಲ್‌ಗಳಾದ ‘ವಿಜಯೀ ಭವ’, ‘ಜ್ಞಾನ ನಿಧಿ’ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ‘ಸ್ವಯಂ’ ಎಂಬ ಆನ್‌ಲೈನ್ ವೇದಿಕೆ ಮೂಲಕ ಯುಜಿಸಿ ಪಾಠ ಮಾಡಿದೆ. ಕರ್ನಾಟಕ ಮುಕ್ತ ವಿವಿಯಿಂದಲೂ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಂ ಮೂಲಕ ವಿದ್ಯಾರ್ಥಿಗಳಿಗೆ ಇ-ನೋಟ್ಸ್, ಪಿಪಿಟಿ ತಲುಪಿಸಲಾಗಿದೆ,”ಎಂದು ಮಾಹಿತಿ ನೀಡಿದರು.

ನೂತನ ಶಿಕ್ಷಣ ನೀತಿಯಡಿ ಡಿಜಿಟಲ್‌ ಕಲಿಕೆಗೆ ಒತ್ತು:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ನೂತನ ಶಿಕ್ಷಣ ನೀತಿಯಡಿ ಹೊಸ ಸಂಸ್ಥೆಗಳ ಸ್ಥಾಪನೆಗೆ ಮಾತ್ರವಲ್ಲದೆ, ಅಸ್ತಿತ್ವದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ, ಸಂಸ್ಥೆಗಳ ಶ್ರೇಯಾಂಕ ಸುಧಾರಣೆ ಹಾಗೂ ಶಿಕ್ಷಣದ ಡಿಜಿಟಲೀಕರಣಗೊಳಿಸಲು ಅನುದಾನ ನೀಡಲಾಗುತ್ತದೆ. ಕೇಂದ್ರದ ಆದೇಶವನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸುವ ಮೂಲಕ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಿ, ಆನ್‌ಲೈನ್‌ ಕಲಿಕೆ ಸರಳಗೊಳಿಸಲಾಗುವುದು,”ಎಂದರು.

ಹಲೋ ಬದಲು ಜೈ ಕಿಸಾನ್ ಆಗಲಿ:ಬಿ‌.ಸಿ.ಪಾಟೀಲ್

ಬೆಂಗಳೂರು,ಜೂನ್.13:ಕೃಷಿಕರು , ಕೃಷಿ ವಿದ್ಯಾರ್ಥಿಗಳು , ಅಧಿಕಾರಿಗಳು ಮತ್ತು ವಿಜ್ಞಾನಿಗಳು ಇನ್ನು ಮುಂದೆ ದೂರವಾಣಿ , ಮೊಬೈಲ್ ಕರೆಯನ್ನು ಸ್ವೀಕರಿಸಿದ ತಕ್ಷಣ ಬರುವ ಮೊದಲ ಪದ ಹಲೋ ಬದಲು ಜೈ ಕಿಸಾನ್ ಆಗಬೇಕು . ಸಾಮಾಜಿಕ ಆಂದೋಲನವಾಗಿ ಅನ್ನದಾತನ ಶಕ್ತಿ ಜಗತ್ತಿಗೆ ತಿಳಿಯಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಆಶಯ ವ್ಯಕ್ತಪಡಿಸಿದ್ದಾರೆ.

ಜಿಕೆವಿಕೆಯಲ್ಲಿ ಮಾತನಾಡಿದ ಕೃಷಿ ಸಚಿವರು,
ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ , ಅಧಿಕಾರಿಗಳು ಮತ್ತು ವಿಜ್ಞಾನಿಗಳು ಕೃಷಿಕರಿಗೆ ಹತ್ತಿರವಾಗಿ ನೂತನ ತಂತ್ರಜ್ಞಾನಗಳನ್ನು ರೈತರು ಅನುಸರಿಸಿ ಶ್ರಮ ಕಡಿತಗೊಳಿಸಿ ಹೆಚ್ಚಿನ ಇಳುವರಿ ಪಡೆಯಲು ಪ್ರೇರೇಪಿಸಬೇಕು . ರೈತರು ಒಂದೇ ಬೆಳೆಯನ್ನು ಬೆಳೆಯುವ ಬದಲು ಬಹು ಬೆಳೆಗಳನ್ನು ಬೆಳೆದು ಲಾಭಗಳಿಸಲು ಮುಂದಾಗಬೇಕು . ರೈತರಿಗೆ ಗುರುತಿನ ಚೀಟಿ ನೀಡುವ ಮಹತ್ತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ . ಗುರುತಿನ ಚೀಟಿ ಹೊಂದಿದ ರೈತ ನಾನು ಭಾರತದ ಸ್ವಾಭಿಮಾನಿ ರೈತ ಎಂದು ಹೆಮ್ಮೆಯಿಂದ ಎದೆಯೆತ್ತಿ ಹೇಳಿಕೊಳ್ಳಬಹುದು ಎಂದರು.

ಖಾಸಗಿ ಕಂಪನಿಯವರು ತಮ್ಮ ನೂತನ ತಳಿಗಳು ಮತ್ತು ತಂತ್ರಜ್ಞಾನಗಳಿಗೆ ವ್ಯಾಪಕ ಪ್ರಚಾರ ನೀಡುವಂತೆ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳೂ ಸಹ ವ್ಯಾಪಕ ಪ್ರಚಾರ ನೀಡಿ ತಂತ್ರಜ್ಞಾನಗಳು ಶೀಘ್ರವಾಗಿ ರೈತರ ಮನೆಬಾಗಿಲಿಗೆ ತಲುಪಿಸಲು ಶ್ರಮವಹಿಸಬೇಕು . ಯಾವುದೇ ಇಲಾಖೆಯಾದರೂ , ಪ್ರಪಂಚ ಯಾವುದೇ ರಂಗದಲ್ಲಾದರೂ ಅಭಿವೃದ್ಧಿಹೊಂದಿದರೂ ಸಹ ಜಗತ್ತಿಗೆ ಅನ್ನ ನೀಡುವ ರೈತನ ಮುಂದೆ ತಲೆಬಾಗಬೇಕು . ಅನ್ನವಿಲ್ಲದೆ ಬದುಕುವುದು ಅಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು .