ರೈತರಿಗಾಗಿ ದುಡಿಯುತ್ತಿರುವ ಆತ್ಮತೃಪ್ತಿ ತಮ್ಮದು:ಬಿ.ಸಿ.ಪಾಟೀಲ್

ಬೆಂಗಳೂರು,ಜೂನ್.13:ಕೋವಿಡ್ ಸಂದರ್ಭದಲ್ಲಿಯೂ ಕೃಷಿಕನ ಸಂಕಷ್ಟಕ್ಕೆ ನೆರವಾಗಲು ಕೃಷಿ ವಿಶ್ವವಿದ್ಯಾಲಯಗಳು ಜೊತೆ ನಿಂತಿವೆ. ಕೃಷಿ ಇಲಾಖೆಯ ಸಚಿವನಾಗಿರುವುದಕ್ಕೆ ಬಹಳ ಹೆಮ್ಮೆ ರೈತರಿಗಾಗಿ ದುಡಿಯುತ್ತಿರುವ ಆತ್ಮತೃಪ್ತಿ ತಮ್ಮದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಕೃಷಿ ಸಚಿವರು ಇಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ವರ್ಚ್ಯುವಲ್ ಉಪನ್ಯಾಸ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಬಳಿಕ ಅಲ್ಲಿನ ಕುವೆಂಪು ಸಭಾಂಗಣದಲ್ಲಿ ಬೋಧಕ ಹಾಗೂ ಬೋಧಕೇತರ ಶಿಕ್ಷಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕೃಷಿ ವಿಜ್ಞಾನಿಗಳು ಮತ್ತು ವಿಶ್ವವಿದ್ಯಾಲಯಗಳು ಆದಷ್ಟು ಕೃಷಿಕರಿಗೆ ಹತ್ತಿರವಾಗಿರಬೇಕು‌. ಹೊಸಹೊಸ ಬೇಸಾಯಪದ್ಧತಿಗಳು, ಕಾಲ ಹವಾಮಾನ ಭೂಮಿಗನುಗುಣವಾಗಿ ಬೇಸಾಯ, ತಾಂತ್ರಿಕ ಬಳಕೆಗಳ ಬಗ್ಗೆ ಹೆಚ್ಚೆಚ್ಚು ಪ್ರಚುರ ಪಡಿಸಬೇಕು.ರೈತರು ಅಪ್ಪ ಹಾಕಿದ ಆಲದಮರವೆಂಬ ಮನಸ್ಥಿತಿಯಿಂದ ಹೊರಬಂದು ಕೃಷಿಯಲ್ಲಿ ನವೀನತೆ ಸಾಧಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ರೈತರು ಕೃಷಿ ಚಟುವಟಿಕೆಗಳತ್ತ ಮುಖಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಅನ್ನವೇ ಸಿಗುತ್ತಿರಲಿಲ್ಲ.ಸಂಕಷ್ಟಗಳು ಎದುರಾದಾಗ ಕೃಷಿಯನ್ನು ಯಾವ ರೀತಿ ಸವಾಲಾಗಿ ಸ್ವೀಕರಿಸಬಹುದೆಂಬುದರ ಬಗ್ಗೆ ವಿಜ್ಞಾನಿಗಳು ಹೆಚ್ಚೆಚ್ಚು ಅಧ್ಯಯಯನಶೀಲರಾಗಬೇಕು ಎಂದರು.

ಇಡೀ ಭಾರತ ದೇಶದಲ್ಲಿ ಕೃಷಿಗೆ ತನ್ನದೇ ಆದ ಮಹತ್ತರ ಪಾತ್ರ ಕೋವಿಡ್‌ನಿಂದ ಇತರ ಉದ್ಯಮಗಳಿಗೆ ಹೊಡೆತಬಿದ್ದಷ್ಟೂ ಕೃಷಿಗೆ ಬಿದ್ದಿಲ್ಲ.ಕೃಷಿ ಉದ್ಯಮ ದೇಶಕ್ಕೆ ಚೈತನ್ಯ ನೀಡಿದೆ.ಬೇರೆಬೇರೆ ಉದ್ಯಮಗಳಲ್ಲಿ ಪ್ರಗತಿ ಸಾಧಿಸುವಂತೆ ನಮ್ಮ ರೈತರು ಸಹ ಕೃಷಿಯಲ್ಲಿ ಹೊಸಹೊಸ ಆವಿಷ್ಕಾರ ಪ್ರಗತಿ ಮಾಡಬೇಕೆಂಬ ಅಭಿಲಾಷೆ ತಮ್ಮದಾಗಿದೆ.ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಸಹ ವಿಶ್ವವಿದ್ಯಾಲಯದಲ್ಲಿ ಹೊಸಹೊಸ ಆವಿಷ್ಕಾರಗಳಿಗೆ ಮುಂದಾಗಬೇಕೆಂದು ಕೃಷಿ ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಕುಲಪತಿ ಡಾ.ಎಸ್ ರಾಜೇಂದ್ರ ಪ್ರಸಾದ್ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ರಾಮಾಂಜನೇಯಗೌಡ ಮತ್ತು ಅರವಿಂದ್, ಡೀನ್ ಕೃಷಿ ಸಾವಿತ್ರಮ್ಮ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಹಿಳೆಯರಿಂದಲೇ ಆಸ್ತಿ ಆಳತೆ, ರಾಮನಗರದಲ್ಲಿ ಯಶಸ್ವಿ ಪ್ರಯೋಗ; ರಾಜ್ಯಾದ್ಯಂತ ವಿಸ್ತರಣೆ ಗುರಿ ಎಂದ ಡಿಸಿಎಂ

ರಾಮನಗರ: ರಾಜ್ಯದ ಗ್ರಾಮೀಣ ಜೀವನೋಪಾಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯೆಯರು ಇದೀಗ ಮತ್ತೊಂದು ದಿಟ್ಟ ಹೆಜ್ಜೆಯನ್ನು ಇರಿಸಿದ್ದು, ಮನೆ/ ಆಸ್ತಿ ಅಳತೆ, ತೆರಿಗೆ ಅಂದಾಜು ಮಾಡುವ ಮೂಲಕ ಕೋವಿಡ್- 19 ಸಂಕಷ್ಟದ ಕಾಲದಲ್ಲೂ ಹೊಸ ಜೀವನೋಪಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದನ್ನು ಕಣ್ಣಾರೆ ಕಂಡು ಪರಿಶೀಲಿಸಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಅತೀವ ಸಂತಸ ವ್ಯತ್ಕಪಡಿಸಿದ್ದಾರೆ.

ಜಿಲ್ಲೆಯ ಮೂರು ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರು ಸರ್ವೇ ಕಾರ್ಯಕ್ಕೆ ನಡೆಸುತ್ತಿದ್ದು, ಗ್ರಾಮೀಣ ಜೀವನೋಪಾಯ ಇಲಾಖೆ ಉಸ್ತುವಾರಿ ಹೊಂದಿರುವ ಉಪ ಮುಖ್ಯಮಂತ್ರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ ಆ ಮಹಿಳೆಯರ ಜತೆ ಸಂವಾದವನ್ನೂ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ಪ್ರಾಯೋಗಿಕವಾಗಿ ರಾಮನಗರ ಜಿಲ್ಲೆಯಲ್ಲಿ ಮಾಡಲಾಗಿರುವ ಈ ಪ್ರಯತ್ನವೂ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಸಚಿವಾಲಯದ ಜತೆ ಚರ್ಚಿಸಿ ಈ ಅಭಿಯಾನವನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುವುದು. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸಬಾಷ್ಯ ಬರೆಯಲಾಗುವುದು ಎಂದು ಪ್ರಕಟಸಿದರು.

ಗ್ರಾಮೀಣ ಮಹಿಳೆಯರ ದಿಟ್ಟತನ, ಸ್ವಾವಲಂಭನೆಯ ಹೆಗ್ಗುರಿಗೆ ಇದೊಂದು ಉತ್ತಮ ಉದಾಹರಣೆ. ಇನ್ನು ಮುಂದೆ ರಾಜ್ಯಾದ್ಯಂತ ಆಸ್ತಿಗಳ ಸರ್ವೇ, ತೆರಿಗೆ ಅಂದಾಜನ್ನು ಮಹಿಳೆಯರೇ ಮಾಡಲಿದ್ದಾರೆ. ಜತೆಗೆ ಮುಂದೆ ಆಸ್ತಿ ತೆರಿಗೆಯನ್ನೂ ಮಹಿಳೆಯರೇ ಸಂಗ್ರಹಿಸಲಿದ್ದಾರೆ ಎಂದು ಅವರು ಘೋಷಿಸಿದರು. ಕೋವಿಡ್ ಬಿಕ್ಕಟ್ಟನ್ನು ಸದುಪಯೋಗ ಮಾಡಿಕೊಂಡಿರುವ ಈ ಮಹಿಳೆಯರು ಜಿಲ್ಲಾಡಳಿತದ ನೆರವಿನಿಂದ ಕೈಕೊಂಡಿರುವ ಈ ಜೀವನೋಪಾಯ ಚಟುವಟಿಕೆ ಆರ್ಥಿಕವಾಗಿಯೂ ಅವರಿಗೆ ಅನುಕೂಲ ಮಾಡಿಕೊಟ್ಟಿದೆ. ಇವರೆಲ್ಲರೂ ಮಾಸಿಕ ತಲಾ 15ರಿಂದ 20 ಸಾವಿರ ರೂಪಾಯಿ ಆದಾಯ ಗಳಿಸಿದ್ದಾರೆಂದು ಉಪ ಮುಖ್ಯಮಂತ್ರಿಗಳು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಮಹಿಳೆಯರ ಜತೆ ಸಂವಾದ ನಡೆಸಿದ ಅವರು, ನಿಮ್ಮ ಪ್ರಯತ್ನದಿಂದ ನನ್ನ ಮನಸ್ಸು ತುಂಬಿಬಂದಿದೆ. ಆರ್ಥಿಕವಾಗಿ ಸಬಲರಾಗಬೇಕು ಎಂಬ ನಿಮ್ಮ ಉದ್ದೇಶ ಅತ್ಯಂತ ಉತ್ತಮವಾದ್ದು. ನಿಮಗೆ ಬೇಕಿರುವ ಎಲ್ಲ ಸವಲತ್ತುಗಳನ್ನು ನೀಡಲು ಸರಕಾರ ಸಿದ್ಧವಿದೆ. ನಿಮ್ಮ ಉನ್ನತಿಯಲ್ಲೇ ರಾಜ್ಯ, ದೇಶದ ಉನ್ನತಿ ಅಡಗಿದೆ ಎಂದು ನುಡಿದರು.

ಏನಿದು ಯೋಜನೆ?:
ಸ್ವಸಹಾಯ ಗುಂಪುಗಳಲ್ಲಿ ಜೀವನೋಪಯ ಚಟುವಟಿಕೆಗಳಲ್ಲಿ ನಿರತರಾಗಿದ್ದ ಮಹಿಳೆಯರು, ಜಿಲ್ಲೆಯ ಕಂಚುಗಾರನಹಳ್ಳಿ, ಲಕ್ಷ್ಮೀಪುರ ಮತ್ತು ಬನ್ನಿಕುಪ್ಪೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಆಸ್ತಿ ಸರ್ವೇ ಕೆಲಸವನ್ನು ಕೈಗೊಂಡಿದ್ದರು. ಜಿಲ್ಲೆಯ ಕಂದಾಯ ಇಲಾಖೆ ಇವರಿಗೆ ತಾಂತ್ರಿಕ ನೆರವು ನೀಡಿತ್ತು. ಇವರು ಸುಮಾರು 3116 ಮನೆಗಳನ್ನು ಆಳತೆ ಮಾಡಿದ್ದು, ಪ್ರತಿ ಮನೆಯ ಅಳತೆಗೆ 50 ರೂ. ನಿಗದಿ ಮಾಡಲಾಗಿದೆ ಎಂದು ಅಭಿಯಾನದ ನಿರ್ದೇಶಕಿ ಡಾ. ಬಿ.ಆರ್. ಮಮತಾ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಇಡೀ ರಾಜ್ಯದಲ್ಲಿಯೇ ಇದು ವಿಭಿನ್ನ ಅಭಿಯಾನವಾಗಿದ್ದು, ಸಂಜೀವಿನಿ ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ, 10ನೇ ತರಗತಿ ಪಾಸಾಗಿರುವ ಕ್ರಿಯಾಶೀಲ ಮಹಿಳೆಯರನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿದ ನಂತರ ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇವರಿಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಂತ್ರಿಕ ತಂಡ ಅಗತ್ಯ ಮಾರ್ಗದರ್ಶನ ನೀಡುತ್ತದೆ. ಈ ಪ್ರಯತ್ನದಿಂದ ಆಸ್ತಿ ತೆರಿಗೆ ಪ್ರಮಾಣ ಮುಂದಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸಂವಾದದಲ್ಲಿ ಪಾಲ್ಗೊಂಡಿದ್ದ ಮಹಿಯರು ಸರಕಾರಕ್ಕೆ ಕೃತಜ್ಙತೆ ಸಲ್ಲಿಸಿದರು. ಅಡುಗೆ ಮನೆ ಸೀಮಿತವಾಗಬೇಕಿದ್ದ ನಮ್ಮ ಕ್ರಿಯಾಶೀಲತೆಯನ್ನು ಗುರುತಿಸಿ ಆಸ್ತಿ ಆಳತೆ ಕಾರ್ಯಕ್ಕೆ ನೀಯೋಜಿಸಿದ್ದು ನಮಗೆ ಹೆಚ್ಚು ಅನುಕೂಲವನ್ನು ಉಂಟು ಮಾಡಿದೆ. ಆದಾಯ ಗಳಿಸುವುದರ ಜತೆಗೆ ಹೊಸ ಉದ್ಯೋಗದ ಸಾಧ್ಯತೆಯೂ ನಮಗೆ ಸಿಕ್ಕಿದೆ ಎಂದು ತಿಳಿಸಿದರು.

ಉಳ್ಳವರೇ ಭೂಮಿ ಒಡೆಯ ಕಾನೂನು ತರಲು ಸರ್ಕಾರ ಮುಂದಾಗಿದೆ : ಸಿದ್ದರಾಮಯ್ಯ

ಬೆಂಗಳೂರು : ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಉಳ್ಳವರೇ ಭೂಮಿ ಒಡೆಯರು ಎಂಬ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರುವ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಬಗ್ಗೆ ಚರ್ಚೆ ನಡೆಸಲು ಸಿದ್ದರಾಮಯ್ಯ ಅವರು ತಮ್ಮ ಕಚೇರಿಯಲ್ಲಿ ಇಂದು ಪಕ್ಷದ ಹಿರಿಯ ನಾಯಕರ ಸಭೆ ಕರೆದಿದ್ದರು. ಸಭೆ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ಸುದ್ದಿಗಾರರಿಗೆ ಸಿದ್ದರಾಮಯ್ಯ ಅವರು ಹೇಳಿದ್ದು :
ಕರ್ನಾಟಕ ಭೂ ಸುಧಾರಣೆ ಕಾಯಿದೆಗೆ ಸರ್ಕಾರ ತಿದ್ದುಪಡಿತ ತರಲು ಮುಂದಾಗಿದೆ. ಕಾಯಿದೆಯಲ್ಲಿನ ಕೆಲ ಅಂಶಗಳನ್ನು ಬದಲಾವಣೆ ಮಾಡುವುದು ಸರ್ಕಾರದ ಉದ್ದೇಶ.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭೂ ಸುಧಾರಣೆ ಕಾಯಿದೆ ಜಾರಿಗೆ ತಂದ ಬಳಿಕ ಉಳುವವನೇ ಹೊಲದ ಒಡೆಯ ಎಂದಾಯಿತು. ಯಾರ್ಯಾರು ಭೂಮಿ ಒಡೆಯರು ಆಗಬಹುದು ಎಂಬುದನ್ನು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಗುತ್ತಿಗೆ ಆಧಾರದ ಮೇಲೆ ಭೂಮಿ ಉಳುಮೆ ಮಾಡುತ್ತಿದ್ದವರಿಗೆ ಇದರಿಂದ ಅನುಕೂಲವಾಗಿತ್ತು.

ಶ್ರೀಮತಿ ಇಂದಿರಾಗಾಂಧಿ ಮತ್ತು ದೇವರಾಜ ಅರಸು ಅವರ ಸರ್ಕಾರ ಉಳುವವನೇ ಭೂಮಿ ಒಡೆಯ ಎಂದು ಮಾಡಿದರೆ ಈಗಿನ ಬಿಜೆಪಿ ಸರ್ಕಾರ ಉಳ್ಳವರೇ ಭೂಮಿ ಒಡೆಯ ಎಂದು ಮಾಡಲು ಮುಂದಾಗಿದೆ. ಭೂ ಸುಧಾರಣೆ ಕಾಯಿದೆಯ 79ಎ.ಬಿ.ಸಿ ಮತ್ತು 80 ಹಾಗೂ ಸೆಕ್ಷನ್ 63 ಮುಖ್ಯ ತಿದ್ದುಪಡಿಗಳನ್ನು ಪೂರ್ವಾನ್ವಯ ಆಗುವಂತೆ ರದ್ದು ಮಾಡುವುದು, ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ವಜಾ ಮಾಡುವುದು ಸರ್ಕಾರದ ಉದ್ದೇಶ. ಕಾನೂನಿನಲ್ಲಿ ನ್ಯೂನತೆ ಇದ್ದರೆ ಮಾತ್ರ ಕಾಲ ಕಾಲಕ್ಕೆ ಬದಲಾವಣೆ ಮಾಡಬೇಕು. ಅದು ಬಿಟ್ಟು ನೆಗಡಿ ಬಂದಿದೆ ಎಂಬ ಕಾರಣಕ್ಕೆ ಮೂಗು ಕುಯ್ಯುವುದು, ಗಾಯವಾಗಿದೆ ಎಂದು ಕಾಲು ಕತ್ತರಿಸುವ ಕೆಲಸಕ್ಕೆ ಕೈ ಹಾಕಬಾರದು.
ಕಾರ್ಪೊರೇಟ್ ಕಂಪನಿಗಳಿಗೆ, ಶ್ರೀಮಂತರಿಗೆ, ಬಂಡವಾಳ ಶಾಹಿಗಳಿಗೆ ಕೃಷಿ ಭೂಮಿ ಧಾರೆ ಎರೆಯಲು ಸರ್ಕಾರ ಮುಂದಾಗಿದೆ. ಉಳುವವರಿಗೆ ಭೂಮಿ ಸಿಗಬೇಕು. ಒಬ್ಬರಿಗೆ ಉದ್ಯೋಗ ದೊರಕಬೇಕು ಎಂಬ ಕಾರಣಕ್ಕೆ ಈ ಹಿಂದೆ ಭೂ ಸುಧಾರಣೆ ಕಾಯಿದೆ ಜಾರಿಗೆ ತರಲಾಗಿತ್ತು.
ಕಾಯಿದೆ ತಿದ್ದುಪಡಿಯಿಂದ ಭೂ ಮಾಫಿಯಾ ಆರಂಭವಾಗುತ್ತದೆ. ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವಾಗುತ್ತದೆ. ಶ್ರೀಮಂತರು ಭೂಮಿ ಖರೀದಿ ಮಾಡಿ ಲ್ಯಾಂಡ್ ಬ್ಯಾಂಕ್ ಮಾಡಿಕೊಳ್ಳುತ್ತಾರೆ. ಇದರಿಂದ ಸಣ್ಣ ಹಿಡುವಳಿದಾರರಿಗೆ ತೊಂದರೆಯಾಗಿ ಭೂಮಿ ಕಳೆದುಕೊಂಡು ಅವರು ಕೃಷಿ ಕೂಲಿ ಕಾರ್ಮಿಕರಾಗುತ್ತಾರೆ. ಹೀಗಾಗಿ ಸಂಪುಟದ ನಿರ್ಣಯವನ್ನು ತೀವ್ರವಾಗಿ ವಿರೋಧಿಸುತ್ತೇವೆ.
ಈ ಕುರಿತು ಪಕ್ಷದ ಹಿರಿಯ ನಾಯಕರು, ರೈತರ ಸಂಘಟನೆಗಳ ಮುಖಂಡರ ಜೊತೆ ಮತ್ತೊಂದು ಸುತ್ತಿನಲ್ಲಿ ಸಮಗ್ರವಾಗಿ ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಸಭೆಯಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿ.ಎಂ. ಇಬ್ರಾಹಿಂ, ರಮೇಶ್ ಕುಮಾರ್, ಸಲೀಂ ಅಹಮದ್, ಈಶ್ವರ ಖಂಡ್ರೆ, ದಿನೇಶ್ ಗುಂಡೂರಾವ್, ಡಾ. ಎಚ್.ಸಿ. ಮಹಾದೇವಪ್ಪ, ಟಿ.ಬಿ. ಜಯಚಂದ್ರ, ನಸೀರ್ ಅಹಮದ್, ಜಮೀರ್ ಅಹಮದ್, ವಿ.ಎಸ್. ಉಗ್ರಪ್ಪ, ಪುಷ್ಪ ಅಮರನಾಥ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ್ ಪಾಟೀಲ್, ಡಾ. ಅಜಯಸಿಂಗ್, ನರೇಂದ್ರ ಸ್ವಾಮಿ, ಐವಾನ್ ಡಿಸೋಜ ಮತ್ತಿರರರು ಭಾಗವಹಿಸಿದ್ದರು.

ಚೀನಾ ರೇಷ್ಮೆ ಆಮದು ಮಾಡಿಕೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ಪತ್ರ: ನಾರಾಯಣಗೌಡ

ಬೆಂಗಳೂರು -12 :ಚೀನಾ ರೇಷ್ಮೆ ಆಮದು ಮಾಡಿಕೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ರೇಷ್ಮೆ ಬೆಳೆಗಾರರ ಬೇಡಿಕೆ ಈಡೇರಿಸುವ ಸಂಬಂಧ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಡಾ| ನಾರಾಯಣಗೌಡ ಅವರು ತಿಳಿಸಿದ್ದಾರೆ.

ರೇಷ್ಮೆ ಬೆಳೆಗಾರರ ಸಮಸ್ಯೆ ಪರಿಹರಿಸುವ ಸಂಬಂಧ ನಡೆಸಿದ ಸಭೆಯಲ್ಲಿ ಈ ವಿಚಾರವನ್ನು ಅವರು ತಿಳಿಸಿದ್ದಾರೆ. ಚೀನಾ ರೇಷ್ಮೆ ಬರುವುದರಿಂದ ರಾಜ್ಯದ ರೇಷ್ಮೆಗೆ ಬೆಲೆ ಕಡಿಮೆ ಆಗಬಹುದು, ಹಾಗಾಗಿ ಆ್ಯಂಟಿ ಡಂಪಿಂಗ್ ಟ್ಯಾಕ್ಸನ್ನೂ ಹೆಚ್ಚಿಸಿ, ಚೀನಾ ರೇಷ್ಮೆ ಆಮದನ್ನು ನಿಲ್ಲಿಸಿ ಎಂದು ರೈತರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚೀನಾ ರೇಷ್ಮೆ ಆಮದು ನಿಲ್ಲಿಸುವ ಸಂಬಂಧ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಈ ಸಂಬಂಧ ಕೇಂದ್ರ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ಇದೆ. ರಾಜ್ಯ ಸರ್ಕಾರ ಹೂ, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಕೊರೊನಾ ಸಂದರ್ಭದಲ್ಲಿ ಆಗಿರುವ ನಷ್ಟದ ಕಾರಣ ಪರಿಹಾರ ನೀಡಲಾಗಿದೆ. ಲಾಕ್ಡೌನ್ ವೇಳೆಯೂ ರೇಷ್ಮೆ ಬೆಳೆಗಾರರಿಗೆ ಮಾರುಕಟ್ಟೆ ಇದ್ದ ಕಾರಣ ಒಂದಷ್ಟು ಅನುಕೂಲ ಆಗಿತ್ತು. ಆದಾಗ್ಯೂ ಬೆಳೆಗಾರರಿಗೆ ಪ್ರೋತ್ಸಾಹಧನ ಕೊಡಿಸುವ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಬಹುಮಹಡಿ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಶಾಸಕ ಎ. ಮಂಜು, ರೇಷ್ಮೆ ಬೆಳೆಗಾರರು, ರೈತ ಸಂಘದ ಪ್ರತಿನಿಧಿಗಳು, ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ರೇಷ್ಮೆ ಇಲಾಖೆ ಆಯುಕ್ತೆ ಶೈಲಜಾ ಮತ್ತಿತರ ಅಧಿಕಾರಿಗಳು ಉಪಸ್ಥಿರಿದ್ದರು.

ಕೌಶಲ ಉತ್ಕೃಷ್ಟತಾ ಸಂಸ್ಥೆಯಾಗಿ ಶಿವಾರಗುಡ್ಡ ವಿದ್ಯಾಪೀಠದ ಪುನರುಜ್ಜೀವನ: ಡಾ. ಅಶ್ವತ್ಥನಾರಾಯಣ

ಮಂಡ್ಯ: ಮದ್ದೂರು ತಾಲೂಕಿನ ಶಿವಾರಗುಡ್ಡದ ಅತಿ ಹಳೆಯ ಕೌಶಲ ತರಬೇತಿ ಕೇಂದ್ರವನ್ನು ಶಿಕ್ಷಣ ಮತ್ತು ಕೌಶಲದ ಉತ್ಕೃಷ್ಟತಾ ಸಂಸ್ಥೆಯಾಗಿ ಪುನರುಜ್ಜೀವನಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಶಿವಾರಗುಡ್ಡಕ್ಕೆ ಶುಕ್ರವಾರ ಭೇಟಿ‌ ನೀಡಿ ಕೌಶಲ್ಯಾಬಿವೃದ್ಧಿ ಇಲಾಖೆಯ 48 ಎಕರೆ ಜಾಗವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

“ಶಿವಾರಗುಡ್ಡದಲ್ಲಿ 1912ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರು ಶಿಕ್ಷಣ ಮತ್ತು ಕೌಶಲಕ್ಕೆ ಒತ್ತು ನೀಡುವ ಸಂಸ್ಥೆ ಸ್ಥಾಪಿಸಿದ್ದರು. ಡೆನ್ಮಾರ್ಕ್ ಪ್ರಧಾನಿ ಕೂಡ ಈ ಸ್ಥಳಕ್ಕೆ ಭೇಟಿ ‌ನೀಡಿ ಇಲ್ಲಿನ ಕೌಶಲ ತರಬೇತಿಯನ್ನು ನೋಡಿದ್ದರು. ಕೇಂದ್ರದಲ್ಲಿ ಕೃಷಿ, ಹೈನುಗಾರಿಕೆ, ಹೊಲಿಗೆ ಮುಂತಾದ ಕೌಶಲ ತರಬೇತಿ ನೀಡಲಾಗುತ್ತಿತ್ತು. ಔದ್ಯೋಗಿಕ ತರಬೇತಿ ಕೇಂದ್ರದ ಹಳೆಯ ಕಟ್ಟಡ ಈಗ ಶಿಥಿಲಾವಸ್ಥೆಗೆ ತಲುಪಿದ್ದು, ಈಗ ಇಲ್ಲಿ ಉತ್ಕೃಷ್ಟ ಕೌಶಲ ತರಬೇತಿ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶವಿದೆ. ಯೋಜನೆಯ ಸಮಗ್ರ ವರದಿ ಪಡೆದು ಕೌಶಲ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗುವುದು,”ಎಂದು ವಿವರಿಸಿದರು.

“ಈ ಜಾಗದಲ್ಲಿ ಉತ್ಕೃಷ್ಟ ಕೌಶಲ ತರಬೇತಿ ಸಂಸ್ಥೆ ಸ್ಥಾಪನೆಗೆ ಯೋಜನೆ ರೂಪಿಸಲು ಸೂಚಿಸಲಾಗಿದೆ. ಕಾರ್ಪೊರೆಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅಥವಾ ಸರ್ಕಾರದ ಹಣದಲ್ಲಿ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು. ಜಗತ್ತಿಗೆ ಮಾದರಿಯಾಗುವಂಥ ಕೌಶಲ ಉತ್ಕೃಷ್ಟತಾ ಸಂಸ್ಥೆ ರೂಪಿಸುವುದು ರಾಜ್ಯ ಸರ್ಕಾರದ ಉದ್ದೇಶ,”ಎಂದು ಅವರು ತಿಳಿಸಿದರು.

“ಸರ್ ಎಂ. ವಿಶ್ವೇಶ್ವರಯ್ಯ ಕನಸಿನ ಕೂಸನ್ನು ಪುನರುಜ್ಜೀವನಗೊಳಿಸುವ ಮೂಲಕ ಹಳೆ ಮೈಸೂರು ಭಾಗದ ಯುವಜನರಿಗೆ ವೃತ್ತಿಪರ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಅರ್ಧಕ್ಕೆ ಓದು ನಿಲ್ಲಿಸಿದವರು ಸಹ ವೃತ್ತಿಪರ ತರಬೇತಿ ಪಡೆದು ಜೀವನ ರೂಪಿಸಿಕೊಳ್ಳುವಂತಾಗಬೇಕು. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರ ಅಗತ್ಯ ಕ್ರಮವಹಿಸಲಿದೆ,”ಎಂದರು.

ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಹಾಗೂ ಕೌಶಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಪ್ರತಿ ತಿಂಗಳು ಟಾರ್ಗೆಟ್ ಫಿಕ್ಸ್, ನಿಗದಿಪಡಿಸಿದ ಗುರಿ ತಲುಪದಿದ್ದರೆ ಕ್ರಮ – ಸಚಿವ ಡಾ.ಕೆ ಸುಧಾಕರ್ ಎಚ್ಚರಿಕೆ

ಬಳ್ಳಾರಿ- ಜೂನ್-12, 2020:– ವಿಮ್ಸ್ ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಪ್ರತಿ ತಿಂಗಳು ಟಾರ್ಗೆಟ್ ಫಿಕ್ಸ್ ಮಾಡಲಾಗುವುದು, ನಿಗದಿಪಡಿಸಿದ ಸಮಯಕ್ಕೆ ಗುರಿ ಸಾಧಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಎಚ್ಚರಿಕೆ ನೀಡಿದ್ದಾರೆ. ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವಿಮ್ಸ್ ಪ್ರಗತಿ ಪರಿಶೀಲಾನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ನಿರ್ವಹಣೆಯಲ್ಲಿ ನಿರತನಾಗಿದ್ದ ಕಾರಣ ಇತ್ತ ಕಡೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಹಾಗೆ ಆಗಲು ಬಿಡುವುದಿಲ್ಲ ಎಂದು ತಿಳಿಸಿದರು.

ಮಂಗಳೂರಿನ ಖಾಸಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯೊಂದರಲ್ಲಿ 1200 ಹೊರರೋಗಿಗಳು ಹಾಗೂ 600 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ವಾರ್ಷಿಕವಾಗಿ 46 ಕೋಟಿ ರೂ. ಎಬಿಆರ್ ಕೆ ಹಣ ಪಡೆಯುತ್ತಿದೆ. ಆದರೆ ಬಳ್ಳಾರಿ ವಿಮ್ಸ್ ಆಸ್ಪತ್ರೆ, ಪ್ರತಿನಿತ್ಯ 2500ಕ್ಕೂ ಹೆಚ್ಚು ಹೊರರೋಗಿಗಳು ಮತ್ತು 1000ಕ್ಕೂ ಹೆಚ್ಚು ಒಳರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ಕೇವಲ 49 ಲಕ್ಷ ರೂ ಎಬಿಆರ್ ಕೆ ಹಣ ಪಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಮುಂದಿನ ದಿನಗಳಲ್ಲಿ ಕನಿಷ್ಠ 100 ಕೋಟಿ ರೂ. ಎಬಿಆರ್ ಕೆ ಹಣ ಪಡೆಯಬೇಕು. ಈ ಕುರಿತು ಅಧಿಕಾರಿಗಳಿಗೆ ನಿಗಾ ವಹಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್. ಆನಂದ್ ಸಿಂಗ್,ಡಿಸಿ ಎಸ್ ಎಸ್ ನಕುಲ್, ವಿಮ್ಸ್ ನಿರ್ದೇಶಕ ಡಾ.ದೇವಾನಂದ್ ಮತ್ತಿತ್ತರರು ಇದ್ದರು.

ಜುಲೈ.15ಕ್ಕೆ ಮುಖ್ಯಮಂತ್ರಿ ಬಿ,ಎಸ್,ಯಡಿಯೂರಪ್ಪನವರಿಂದ ವಿಮ್ಸ್ ನಲ್ಲಿ ಟ್ರಾಮಾಕೇರ್ ಸೆಂಟರ್ ಉದ್ಘಾಟನೆ:

ಬಳ್ಳಾರಿಯಲ್ಲಿ 150 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಟ್ರಾಮಾಕೇರ್ ಸೆಂಟರನ್ನು ಜುಲೈ-15 ರಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಉದ್ಘಾಟಿಸಲಿದ್ದಾರೆ. ಆದ್ದರಿಂದ ತ್ವರಿತವಾಗಿ ಕಾಮಾಗಾರಿಯನ್ನು ಪೂರ್ಣಗೊಳಿಸುವಂತೆ ಸಚಿವ ಡಾ.ಕೆ.ಸುಧಾಕರ್ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ವಿಮ್ಸ್ ಸಿಬ್ಬಂದಿ ಭರ್ತಿ ಸಂಬಂಧಿಸಿದಂತೆ ಕೋರ್ಟ್‍ನಲ್ಲಿರುವ ತಡೆಯಾಜ್ಞೆಯನ್ನು ತೆರೆವುಗೊಳಿಸಿ ಸಿಬ್ಬಂದಿ ಭರ್ತಿ ಮಾಡಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಅದೇ ರೀತಿ ವಿಮ್ಸ್ ಸುಸಜ್ಜಿತವಾಗಿ ಕಾರ್ಯನಿರ್ವಹಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಎರಡು ಮೂರು ತಿಂಗಳೊಳಗೆ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣಗಳ ಪೈಕಿ ಐಎಲ್‍ಐಗಳಿಂದ ಬಳಲುತ್ತಿರುವವರೇ ಹೆಚ್ಚಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐಎಲ್‍ಐ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಭೇಟಿ ಮಾಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸಲಹೆ ನೀಡಿದರು. ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಕೊರೋನಾ ವೈರಸ್ ಪ್ರಕರಣಗಳ ಹಿನ್ನಲೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಯಾವುದೇ ಶೀತ, ಕೆಮ್ಮು, ಜ್ವರದಂತ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಫಿವರ್ ಕ್ಲಿನಿಕಿಗೆ ಭೇಟಿ ನೀಡಿ ತಪಾಸಣೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಈ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರಲ್ಲಿ ಜಾಗೃತಿ‌ ಮೂಡಿಸಬೇಕು ಎಂದರು.

ರಾಜ್ಯದಲ್ಲಿ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು. ಗುಣಮುಖರಾಗುತ್ತಿರುವವರ ಸಂಖ್ಯೆಯು ಹೆಚ್ಚಾಗಿದೆ. ಇನ್ನು ಶೇ 97ರಷ್ಟು ಜನರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಉಳಿದ ಶೇ 3 ರಷ್ಟು ಸೋಂಕಿತರಿಗೆ ಮಾತ್ರ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಕೋವಿಡ್ -19 ಕುರಿತು ಪರಿಣಿತರು ನಡೆಸಿದ ಅಧ್ಯಯನದ ಪೈಕಿ ಆಗಸ್ಟ್ ಅಂತ್ಯಕ್ಕೆ ಕೊರೋನಾ ಪ್ರಕರಣ ಹೆಚ್ಚಲಿದೆ ಎಂದು ತಿಳಿದು ಬಂದಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ದತೆಯನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಆದ್ದರಿಂದ ಈ ಕುರಿತು ಜನತೆ ಯಾವುದೇ ಭಯಪಡಬೇಕಾಗಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.