ಕೆ.ಆರ್.ಪೇಟೆ ವಿಜಯಯಾತ್ರೆ ನಿಲ್ಲದು: ಡಿಸಿಎಂ

ಮಂಡ್ಯ: ಕಳೆದ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಅದೇ ರೀತಿ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಇಡೀ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಗೆಲವು ಸಾಧಿಸುವ ರೀತಿಯಲ್ಲಿ ಅರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿಯೂ ಜನಪರವಾದ ಸರಕಾರಗಳೇ ಇವೆ. ಅತ್ತ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು ವಿಶ್ವದ ಗಮನ ಸೆಳೆಯುತ್ತಿವೆ. ಅವುಗಳ ವಿವರಗಳನ್ನು ಮನೆಮನೆಗೂ ಮುಟ್ಟಿಸಬೇಕಾದ ಹೊಣೆಗಾರಿಕೆ ಕಾರ್ಯಕರ್ತರ ಮೇಲಿದೆ. ಹಾಗೆಯೇ, ರಾಜ್ಯದಲ್ಲಿಯೂ ಯಡಿಯೂರಪ್ಪ ಸರಕಾರವು ಅತ್ಯಂತ ಪರಿಣಾಕಾರಿ, ಜನಪರವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ಕಾರ್ಯಕರ್ತನೂ ಪಕ್ಷದ ಕಟ್ಟಾಳುವಾಗಿ ಕೆಲಸ ಮಾಡಬೇಕು. ಕೆ.ಆರ್.ಪೇಟೆಯಲ್ಲಿ ಶುರುವಾದ ವಿಜಯಯಾತ್ರೆ ಇತರೆ ಕ್ಷೇತ್ರಗಳಿಗೂ ವಿಸ್ತರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಇಡೀ ದೇಶದ ಪ್ರೀತಿ-ನಂಬುಗೆಯನ್ನು ಗಳಿಸಿರುವ ಏಕೈಕ ಪಕ್ಷವೆಂದರೆ ಬಿಜೆಪಿ ಮಾತ್ರ. ನಮ್ಮದು ತಳಮಟ್ಟದ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರೇ ಪಕ್ಷದ ಸಂಪತ್ತು ಮತ್ತು ಶಕ್ತಿ. ಇದನ್ನು ಎಲ್ಲರೂ ಅರ್ಥ ಮಾಡಿಕೊಡು ಕೆಲಸ ಮಾಡಬೇಕು. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ರೀತಿಯಲ್ಲಿ ನಾವು ಹೆಜ್ಜೆಗಳನ್ನು ಇಡಬೇಕಾಗಿದೆ ಎಂದು ಹೇಳಿದರು.

ಅನೇಕ ವರ್ಷಗಳಿಂದ ಜಿಲ್ಲೆಯ ಸಮಸ್ಯೆಗಳು ಸಮಸ್ಯೆಗಳಾಗಿಯೇ ಇವೆ. ಆ ಸಮಸ್ಯೆಗಳೇ ಮತ ಗಳಿಕೆಯ ಯಂತ್ರಗಳಾಗಿವೆ. ಈ ಪರಿಸ್ಥಿತಿ ಬದಲಾಗಬೇಕು. ಆ ಬದಲಾವಣೆ ಈಗಷ್ಟೇ ಆರಂಭವಾಗಿದೆ. ಅದು ನಿಲ್ಲಬಾರದು, ನಿಲ್ಲುವುದೂ ಇಲ್ಲ. ಹೀಗಾಗಿ ಸಹಜವಾಗಿಯೇ ಕೆಲವರಲ್ಲಿ ತಳಮಳ ಉಂಟಾಗಿದೆ ಎಂದು ಡಿಸಿಎಂ ಹೇಳಿದರು.

ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬದಲಾಗುತ್ತಿರುವದನ್ನು ನಾವೆಲ್ಲರೂ ಜನರಿಗೆ ಮನವರಿಕೆ ಮಾಡಿಕೊಡಬೇಕು. ಜಾಗತಿಕವಾಗಿ ಭಾರತದ ಪ್ರತಿಷ್ಠೆ ದಿನೇದಿನೆ ವೃದ್ಧಿಸುತ್ತಿದೆ. ಬಿಜೆಪಿ ಕಾರ್ಯಕರ್ತರಾದ ನಾವು ಹೆಮ್ಮೆಪಡಬೇಕು. ಕೋವಿಡ್ ಬಿಕ್ಕಟ್ಟನ್ನು ಎದುರಿಸಿದ ರೀತಿ ಇಡೀ ಜಗತ್ತೇ ನಮ್ಮತ್ತ ನೋಡುವಂತೆ ಮಾಡಿದೆ. ಅಗಾಧ ಜನಸಾಂಧ್ರತೆಯುಳ್ಳ ದೇಶದಲ್ಲಿ ಮಾರಣಾಂತಿಕ ವೈರಸ್ಸನ್ನು ಎದುರಿಸಿದ ಬಗೆಗೆ ಅಭಿವೃದ್ಧಿಯಾದ ದೇಶಗಳು ಭಾರತವನ್ನು ಹಾಡುಹೊಗಳುತ್ತಿವೆ ಎಂಬುದನ್ನು ನಾವು ಮರೆಯಬಾರದು ಎಂದು ಡಿಸಿಎಂ ಹೇಳಿದರು.

ಕಬ್ಬು ಬೆಳೆಗಾರರಗೆ ಅಭಯ:
ಅಧಿಕಾರದಲ್ಲಿರುವುದು ನಿಮ್ಮ ಸರಕಾರ. ಹೀಗಾಗಿ ಕಬ್ಬು ಬೆಳೆಗಾರರು ಅತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಈಗಾಗಲೇ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಸರಕಾರಕ್ಕೆ ಗೊತ್ತಿದೆ. ಶ್ರೀರಂಗಪಟ್ಟಣ, ಪಾಂಡವಪುರ ಕಬ್ಬು ಬೆಳೆಗಾರರ ಜೀವನಾಡಿಯಾಗಿರುವ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಷುಗರ್ಸ್ ಅವರು 40 ವರ್ಷಗಿಳಿಗೆ ಗುತ್ತಿಗೆ ಪಡೆದಿದ್ದಾರೆ. ಲಿಖಿತ ಒಪ್ಪಂದದಂತೆ ಅವರು ಬೆಳೆಗಾರರ ಎಲ್ಲ ಬೇಡಿಕೆಗಳನ್ನು ತಪ್ಪದೇ ಈಡೇರಿಸುವ ಭರವಸೆ ನನಗಿದೆ. ಅದೇ ರೀತಿ ಮೈಷುಗರ್ ಸಮಸ್ಯೆಗಳನ್ನು ಅದಷ್ಟು ಬೇಗ ಬಗೆಹರಿಸಲಾಗುವುದು. ಎಲ್ಲವೂ ಕಾಲಮಿತಿಯಲ್ಲೆ ಪರಿಷ್ಕಾರವಾಗಲಿವೆ ಎಂದು ಇದೇ ವೇಳೆ ಉಪ ಮುಖ್ಯಮಂತ್ರಿ ಭರವಸೆ ನೀಡಿದರು.

ಎಲ್ಲರಿಗೂ ಉದ್ಯೋಗ:
ನಿರುದ್ಯೋಗ, ಬಡತನವನ್ನೂ ಜಿಲ್ಲೆಯಿಂದ ಮೂಲೋತ್ಪಾಟನೆ ಮಾಡಲು ಕೌಶಾಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಇಲಾಖೆಗಳಿಂದ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಕೆಲಸವಿಲ್ಲದ ಕೈಗಳಿಗೆ ಕೆಲಸ ನೀಡಲಾಗುವುದು. ಪ್ರತಿ ಕುಟುಂಬದಲ್ಲಿರುವ ಮಕ್ಕಳಿಗೆ, ಯುವಕರಿಗೆ ಸೂಕ್ತ ತರಬೇತಿ ನೀಡಲಾಗುವುದು. ಕಾಯಕವೇ ಕೈಲಾಸ ಎಂಬ ತತ್ತ್ವದಡಿಯಲ್ಲಿ ಜಿಲ್ಲೆಯಲ್ಲಿ ಉದ್ಯಮಶೀಲತೆಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಅವರು ಘೋಷಿಸಿದರು.

ಜಿಲ್ಲಾಸ್ಪತ್ರೆಯನ್ನು ಆಧುನೀಕರಣಗೊಳಿಸಲಾಗುವುದು. ಕೋವಿಡ್ 19 ಚಿಕಿತ್ಸೆಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಂಡು ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅದೇ ರೀತಿ ಇತರೆ ಕ್ಷೇತ್ರಗಳಲ್ಲಿಯೂ ಜನತೆಯ ಸಹಕಾರದಿಂದ ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಮುನ್ನೆಡೆಸಲು ಸರಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ಭ್ರಷ್ಟಾಚಾರ ಆರೋಪ: ಇಬ್ಬರು ಅಧಿಕಾರಿಗಳ ವಿರುದ್ಧ ಎಸಿಬಿ ದಾಳಿ

ಬೆಂಗಳೂರು: ರಾಜ್ಯದ 2 ವಿವಿಧ ಸರ್ಕಾರಿ ನೌಕರರು ತಮ್ಮ ಬಲ್ಲ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 6 ಸ್ಥಳಗಳ ಮೇಲೆ ಇಂದು ಎಸಿಬಿ ದಾಳಿ ನಡೆಸಿದೆ.

ಆರೋಪಿತ ಅಧಿಕಾರಿಗಳ ಆಸ್ತಿ-ಪಾಸ್ತಿ ಶೋಧನಾ ಕಾರ್ಯ ಮುಂದುವರೆದಿದ್ದು ಈವರೆಗೆ ಶೋಧನೆ ನಡೆಸಲಾದ ಸ್ಥಳಗಳ ಈ ಕೆಳಕಂಡಂತಿರುತ್ತವೆ. ಹಾಗೂ ಸರ್ಕಾರಿ ಅಧಿಕಾರಿಗಳ ಮಾಹಿತಿ

1. ಶ್ರೀ ಹನುಮಪ್ಪ ಅಂದಪ್ಪ ಪ್ರಭು ಕರೆಣ್ಣವರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಾಗಲಕೋಟೆ,

ಅವರ ಗದಗ ಜಿಲ್ಲೆ, ರಾಜೀವ ಗಾಂಧಿನಗರದಲ್ಲಿರುವ ವಾಸದ ಮನೆ, ಹಾಗೂ ಕ್ಲಬ್ ಕ್ರಾಸ್ ಬಳಿ ಯಲ್ಲಿರುವ ಪ್ರಸ್ತುತ ವಾಸದ ಬಾಡಿಗೆ ಮನೆ ಹಾಗೂ ಬಾಗಲಕೋಟೆಯ ರೋಟ ಅವರು ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಾಗಲಕೋಟೆ.

2 ಶ್ರೀ ಎಂ. ದಾಸೇಗೌಡ, ವಿಶೇಷ ಭೂ ಸ್ವಾಧೀನಾಧಿಕಾರಿ, ಕೆ.ಐ.ಎ.ಡಿ.ಬಿ, ಮಂಗಳೂರು. (ಹಾಲಿ ಅಮಾನತ್ತು) ಇವರು ಮಂಡ್ಯ ಜಿಲ್ಲೆ, ಕಾವೇರಿ ನಗರದಲ್ಲಿನ ನಿವಾಸ, ಹಾಗೂ ಸ್ನೇಹಿತರ ಮಂಡ್ಯ ಜಿಲ್ಲೆ. ಅಶೋಕ ನಗರದಲ್ಲಿನ ಆಡಿಟರ್‌ ಕಛೇರಿ ಹಾಗೂ ಮಂಡ್ಯ ಜಿಲ್ಲೆ, ಚಾಮುಂಡೇಶ್ವರಿನಗರದಲ್ಲಿನ ವಾಸದ ಮನೆ.

ಕರ್ನಾಟಕ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ವಿವಿಧ ತಂಡಗಳಿಂದ ಮೇಲ್ಕಂಡ ಆರೋಪಿತ ಸರ್ಕಾರಿ ನೌಕರರ ವಿರುದ್ಧ ದಾಳಿ ಮುಂದುವರೆದಿದ್ದು, ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ.

ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರಿನಲ್ಲಿ ಪಾರಂಪರಿಕ ಕೇಂದ್ರ ಸ್ಥಾಪನೆಗೆ ಆದ್ಯತೆ- ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

ಬೆಂಗಳೂರು, ಜೂನ್ 12-ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ವೀರಾಪುರ ಗ್ರಾಮ ಹಾಗೂ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಜನ್ಮಸ್ಥಳವಾದ ಬಾನಂದೂರು ಗ್ರಾಮಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಕೋವಿಡ್ 19 ರ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ 16,095 ಕಲಾವಿದರು, ಸಾಹಿತಿಗಳಿಗೆ ತಲಾ ಎರಡು ಸಾವಿರ ರೂ. ಗಳಂತೆ ಒಟ್ಟು 3.21 ಕೋಟಿ ರೂ. ಆರ್ಥಿಕ ನೆರವು ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರವಾಸೋದ್ಯಮ:

ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 20 ಪ್ರಮುಖ ತಾಣಗಳ ಸಮಗ್ರ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿಗಳು ಸಿದ್ಧವಾಗಿವೆ. ಇವುಗಳನ್ನು ಹಂತ ಹಂತವಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಪ್ರವಾಸೋದ್ಯಮ ವಲಯದಲ್ಲಿ ಕೋವಿಡ್ 19 ಸೋಂಕಿನಿಂದಾಗಿ ಸುಮಾರು 15 ಸಾವಿರ ಕೋಟಿ ರೂ. ನಷ್ಟವಾಗಿದ್ದು, 3 ಲಕ್ಷ ಉದ್ಯೋಗ ಅಪಾಯದ ಅಂಚಿನಲ್ಲಿದೆ. ಕೆ.ಎಸ್.ಟಿ.ಡಿ.ಸಿ. ಸಂಸ್ಥೆ ಹಾಗೂ ಜಂಗಲ್ ಲಾಡ್ಜಸ್ ಸಂಸ್ಥೆಗೆ ಕ್ರಮವಾಗಿ 14 ಕೋಟಿ ರೂ. ಹಾಗೂ 15 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೋವಿಡ್ 19ರ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಸಿಲುಕಿಕೊಂಡ 6780 ವಿದೇಶಿ ಪ್ರವಾಸಿಗರನ್ನು ಸ್ವದೇಶಗಳಿಗೆ ಹಿಂತಿರುಗಲು ಸಮನ್ವಯ ಸಾಧಿಸಲಾಗಿದ್ದು, ಈ ಬಗ್ಗೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಕಳೆದ ಆರ್ಥಿಕ ವರ್ಷದಲ್ಲಿ ಕೆಎಸ್ ಟಿಡಿಸಿ ಕಳೆದ 12 ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 6.23 ಕೋಟಿ ಲಾಭ ಪಡೆದಿದೆ. ಅಂತೆಯೇ ಜಂಗಲ್ ಲಾಡ್ಜಸ್ 7.86 ಕೋಟಿ ಲಾಭ ಪಡೆದಿದೆ.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಪ್ರವಾಸೋದ್ಯಮ ಸಚಿವ ಸಿ..ಟಿ. ರವಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಲಾಕ್‌ಡೌನ್‌ ತೆರವಿನ ನಂತರ ಪದವಿ ಪರೀಕ್ಷೆಯ ನಿರ್ಧಾರ: ಡಾ. ಅಶ್ವತ್ಥನಾರಾಯಣ

ಮಂಡ್ಯ: ಲಾಕ್‌ಡೌನ್‌ ತೆರವು ನಂತರ ಪದವಿ ವಿಭಾಗದ ತರಗತಿಗಳನ್ನು ನಡೆಸಲಾಗುವುದು. ಬಳಿಕ ಪರೀಕ್ಷೆಯ ದಿನಾಂಕಗಳನ್ನು ಘೋಷಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಂಡ್ಯ ವಿಶ್ವವಿದ್ಯಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು. ರೂಸಾ ಅನುದಾನ ದಡಿ ಕಟ್ಟುತ್ತಿರುವ ಕಟ್ಟಡಗಳನ್ನೂ ವೀಕ್ಷಿಸಿದರು

“ಜೂನ್‌ 30ರಂದು ಲಾಕ್‌ಡೌನ್‌ ತೆರವಾಗಲಿದ್ದು, ಆ ನಂತರ ಪದವಿ ವಿಭಾಗದ ತರಗತಿ ಮತ್ತು ಪದವಿಯನ್ನು ಯಾವಾಗ ಮತ್ತು ಹೇಗೆ ನಡೆಸಬೇಕು ಎಂಬುದನ್ನು ಸಂಬಂಧಪಟ್ಟವರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಪರೀಕ್ಷೆ ಬಗ್ಗೆ ಗೊಂದಲ ಇಟ್ಟುಕೊಳ್ಳದೇ, ವಿದ್ಯಾರ್ಥಿಗಳು ಅಭ್ಯಾಸ ಮುಂದುವರಿಸಬೇಕು,”ಎಂದು ಅವರು ಹೇಳಿದರು.

“ಮಂಡ್ಯ ಕ್ಲಸ್ಟರ್‌ಗೆ ವಿಶ್ವವಿದ್ಯಾಲಯದ ಮಾನ್ಯತೆ ಕೊಡಲು ಸಂಪುಟದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಈ ಸಂಬಂಧ ಸುಗ್ರೀವಾಜ್ಞೆ ಹೊರಬೀಳಲಿದೆ. ವಿಶ್ವವಿದ್ಯಾಲಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಈ ತಿದ್ದುಪಡಿ ತರಲಾಗಿದೆ. ಜತೆಗೆ, ಕುಲಪತಿ ನೇಮಕಕ್ಕೆ ಇದ್ದ ಅಡ್ಡಿ ನಿವಾರಣೆ ಆಗಿದ್ದು ಆದಷ್ಟು ಬೇಗ ಮಂಡ್ಯ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಮಾಡಲಾಗುವುದು,”ಎಂದು ಭರವಸೆ ನೀಡಿದರು.

“ವಿಶ್ವವಿದ್ಯಾಲಯ ಗುಣಮಟ್ಟ ಹೆಚ್ಚಿಸಿಕೊಂಡು ಜ್ಞಾನ ಕೇಂದ್ರವಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ 40-50 ವರ್ಷಗಳಷ್ಟು ಹಳೆಯ ಪಠ್ಯಕ್ರಮ ಬದಲಾಗುವ ಅಗತ್ಯ ಇದೆ. ಬದುಕು ರೂಪಿಸಿಕೊಳ್ಳಲು ಶಿಕ್ಷಣ ಮುಖ್ಯ ಅದೇ ರೀತಿ ವೃತ್ತಿ ಜೀವನಕ್ಕೆ ಪೂರಕವಾದ ಕೌಶಲ್ಯ ಅಭಿವೃದ್ಧಿಗೂ ಒತ್ತು ನೀಡಲಾಗುವುದು. ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಜಿಲ್ಲಾಧಿಕಾರಿ, ವಿಶೇಷಾಧಿಕಾರಿ ಗಮನ ಹರಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಸರ್ಕಾರದ ಕಡೆಯಿಂದ ಎಲ್ಲ ಸಹಕಾರ ನೀಡಲಾಗುವುದು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ತವರು ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಿ, ಮಂಡ್ಯದ ಗೌರವ ಹೆಚ್ಚಿಸೋಣ,”ಎಂದರು.

ಈ ಸಂದರ್ಭದಲ್ಲಿ ಮಂಡ್ಯ ಶಾಸಕ ಎಂ.ಶ್ರೀನಿವಾಸ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಮಂಡ್ಯ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಎನ್‌.ನಿಂಗೇಗೌಡ ಉಪಸ್ಥಿತರಿದ್ದರು.

ಕೃಷಿ ಅಧಿಕಾರಿಗಳು ಸಹ ಕೊರೊನಾ ವಾರಿಯರ್ಸ್‌ಗಳಂತೆ: ಬಿ.ಸಿ.ಪಾಟೀಲ್

ಬೆಂಗಳೂರು,ಜೂನ್. 12: ರೈತರು ಕೋವಿಡ್ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಕೃಷಿ ಅಧಿಕಾರಿಗಳು ಸಹ ಕೊರೊನಾ ವಾರಿಯರ್ಸ್‌ಗಳಂತೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಕಾಸಸೌಧದಲ್ಲಿ ನಡೆದ‌ 2020-21ನೇ ಸಾಲಿನ‌ ಮುಂಗಾರು ಹಂಗಾಮು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿ ಇಲಾಖೆ ಮುಳ್ಳಿನ ಹಾಸಿಗೆ ಇದ್ದಂತೆ.ಬಹಳಷ್ಟು ಸವಾಲುಗಳು ಈ ಇಲಾಖೆಯಲ್ಲಿಬರುತ್ತವೆ.ಕೃಷಿ ಮತ್ತು ರೈತರಿಗಾಗಿ ದುಡಿಯುವ ಅವಕಾಶ ತಮಗೆ ಲಭಿಸಿದೆ. ಕೃಷಿ ಇಲಾಖೆಯಲ್ಲಿ ಅಭಿವೃದ್ಧಿಗಳಾದರೆ ಸರ್ಕಾರಕ್ಕೂ ಹೆಸರು ಬರುತ್ತದೆ. ದೇಶದ ಜನರಿಗೆ ಅನ್ನವೂ ಸಿಗುತ್ತದೆ. ಕೋವಿಡ್ ಸಂದಿಗ್ಧತೆ ಎನ್ನುವುದು ಯುದ್ಧದಂತೆ‌ ಎಂದರು.

ಕೊರೊನಾ ಸಂದರ್ಭದಲ್ಲಿಯೂ ತಾವು ಸುಮ್ಮನೆ ಕೂರದೇ ಮೂವತ್ತು ದಿನಗಳಲ್ಲಿ ಮೂವತ್ತು ಜಿಲ್ಲೆಗಳ ಪ್ರವಾಸ ಮಾಡಿ ರೈತ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ಮಹತ್ತರ ಕ್ರಮಕೈಗೊಳ್ಳಲಾಯಿತು. ಗ್ರೀನ್ ಪಾಸ್, ಅಗ್ರಿವಾರ್ ರೂಮ್ ಸ್ಥಾಪನೆ ಮಾಡಿರುವುದು ಕೊರೊನಾ ಲಾಕ್ಡೌನ್‌ನಲ್ಲಿ‌ ರೈತರಿಗೆ ಬಹಳಷ್ಟು ಉಪಯುಕ್ತವಾಗಿದೆ.ನಕಲಿ ಗೊಬ್ಬರ ಬಿತ್ತನೆ‌ಬೀಜದ ವಿರುದ್ಧ ಸಮರ ಸಾರಲಾಯಿತು. ಒತ್ತಡಗಳನ್ನು ಲಕ್ಷಿಸಲಿಲ್ಲ. ಒಬ್ಬ ಕೃಷಿ ಸಚಿವನಾಗಿ ಕಳಪೆ‌ಬಿತ್ತನೆ ಬೀಜ ಮಾರಾಟಗಾರರಿಗೆ ಕ್ಷಮೆನೀಡುವುದು ರೈತರಿಗೆ ಮಾಡಿದ ಅನ್ಯಾಯವೆಂದು ಭಾವಿಸಿ ಮನಸಿಗೆ ತೃಪ್ತಿ ಇಲಾಖೆಗೆ ನ್ಯಾಯ ಒದಗಿಸುವಂತೆ ದುಡಿದೆ.‌ನಮ್ಮ ಮನಸಿಗೆ ಒಪ್ಪುವಂತೆ‌ ಕೆಲಸ‌ ಮಾಡಿದರೆ ದೇವರು ಸಹ ಮೆಚ್ಚುತ್ತಾನೆ‌ ಎಂದರು.

ಸೋಯಾಬಿನ್ ಮಧ್ಯಪ್ರದೇಶ ಆಂದ್ರದಿಂದ ಪೂರೈಕೆಯಾಗುತ್ತಿತ್ತು.ಸುಗ್ಗಿ ಸಂದರ್ಭದಲ್ಲಿ ಫ್ಲಡ್ ಬಂದಿರುವುದರಿಂದ ಬಹಳ ಕಡೆ ಸೋಯಾಬೀನ್ ಬೆಳೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ಹೀಗಾಗಿ ಈ ಬಾರಿ ರೈತರು ಸೋಯಾ ಬೆಳೆಯುವುದಕ್ಕೂ ಮೊದಲೇ ಭೂಮಿ ಮತ್ತು ವಾತಾವರಣವನ್ನು ನೋಡಿಕೊಂಡು ಮುಂದಾಗಬೇಕು.1.5 ಲಕ್ಷ ಕ್ವಿಂಟಾಲ್ ಸೋಯಾಬೀನ್ ಬೀಜಕ್ಕೆ ಬೇಡಿಕೆ ಇತ್ತು.ಈಗಾಗಲೇ 1.04 ಲಕ್ಷ ಕ್ವಿಂಟಾಲ್ ಪೂರೈಸಿದ್ದೇವೆ. ಕಳೆದ ಬಾರಿಯ ಪ್ರವಾಹದಿಂದಾಗಿ ಸೋಯಾ ಫಸಲು ಈ ಬಾರಿ ಉತ್ತಮವಾಗಿ ಬರುವುದು ಅನುಮಾನ‌. ಮುನ್ನೆಚ್ಚರಿಕೆ ಕ್ರಮವಾಗಿ ರೈತರು ತಮ್ಮ ಭೂಮಿ ಮತ್ತು ಪೂರಕ ವಾತಾವರಣಕ್ಕೆ ಅನುಗುಣವಾದ ಪರ್ಯಾಯ ಬಿತ್ತನೆಗೆ ಮುಂದಾಗಲಿ ಎಂದು ಸಲಹೆ ನೀಡಿದರು.

ಈ ದೇಶದಲ್ಲಿ ಎಲ್ಲರಿಗೂ ಫಸಲು ಬೆಳೆಯಲು ಹಕ್ಕಿದೆ. ಯುವಕರು ಪದವೀಧರು ಕೃಷಿಯತ್ತ ಆಕರ್ಷಿತರಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವವರಿಗೆ ಇದು ಅನುಕೂಲವಾಗಲಿದೆ. ಕರ್ನಾಟಕದಲ್ಲಿ ಮಾತ್ರ ಕೃಷಿ ಭೂಮಿ ಮಾರಾಟಕ್ಕೆ ನಿಬಂಧನೆ ಇತ್ತು. ಈಗ ಮಾರಾಟಕ್ಕೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೃಷಿ ಭೂಮಿ ಮಾರಾಟದ ಬಗ್ಗೆ ಸರ್ಕಾರ ಕಂದಾಯ ಇಲಾಖೆ ಮಾರ್ಗಸೂಚಿ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಲಿದೆ.

ಕೋವಿಡ್‌ನಿಂದ ಪರಿಸ್ಥಿತಿಯೇ ಬದಲಾಗಿದೆ.
ವರ್ಷಕ್ಕೆ ಕೃಷಿ ವಿಶ್ವವಿದ್ಯಾಲಯದಿಂದ ನಾಲ್ಕು ಲಕ್ಷ ಪದವೀಧರರು ಹೊರಬರುತ್ತಿದ್ದಾರೆ. ಎಲ್ಲರಿಗೂ ಉದ್ಯೋ ಕಷ್ಟ.ಇಂತಹ ಪದವೀಧರರು ಈ ಹೊಸ‌ನಿಯಮದಿಂದ ಕೃಷಿಯತ್ತ ಆಕರ್ಷಕವಾಗಿ ಕೃಷಿಯಲ್ಲಿ
ಆಗ್ರೋ ಇಂಡಸ್ಟ್ರೀಸ್‌ಗೂ ಕೃಷಿ ಭೂಮಿ ಅನುಕೂಲವಾಗಲಿದೆ.ಸಂಸ್ಕರಣಾ ಘಟಕ ಶೀಥಲೀಕರಣ ಆಹಾರ ಉತ್ಪಾದನಾ ಘಟಕಗಳಿಗೂ ಇದು ಬಳಕೆಯಾಗಬಹುದು.ಕೃಷಿ ಭೂಮಿ ಕೃಷಿಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಬೇಕು. ಕೃಷಿಭೂಮಿ ದುರ್ಬಳಕೆಯಾಗಬಾರದು ಎಂದು ಬಿ.ಸಿ.ಪಾಟೀಲರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಜಕುಮಾರ್ ಖತ್ರಿ, ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್, ಕೃಷಿ ಆಯುಕ್ತ ಬ್ರಿಜೆಶ್ ಕುಮಾರ್ ದೀಕ್ಷಿತ್ ಸೇರಿದಂತೆ ಮತ್ತಿತರ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ಐಎಲ್ಐ ಲಕ್ಷಣ ವಿರುವವರು ಕೂಡಲೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ:ಸಚಿವ ಡಾ.ಕೆ.ಸುಧಾಕರ್

 

ಬೆಂಗಳೂರು – ಜೂನ್ 11, 2020: ನಗರದಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಒಟ್ಟು ಕೊರೋನ ಪ್ರಕರಣಗಳಲ್ಲಿ 50% ಜನರು ಗುಣಮುಖರಾಗಿದ್ದು ಮನೆಗೆ ಹಿಂದಿರುಗಿದ್ದಾರೆ. ಇನ್ನು ಉಳಿದ 50% ಪ್ರಕರಣಗಳಲ್ಲಿ 97% ಜನರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ಉಳಿದ 3% ಸೋಂಕಿತರಿಗೆ ಮಾತ್ರ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಇದಕ್ಕೆ ಕಾರಣಗಳನ್ನು ತಿಳಿಸಿದ ಸಚಿವ ಸುಧಾಕರ್, ಹೆಚ್ಚಿನ ಸೋಂಕಿತರು ರೋಗ ತೀವ್ರವಾಗಿ ಉಲ್ಬಣವಾದ ನಂತರ ಆಸ್ಪತ್ರೆಗೆ ಬರುತ್ತಿದ್ದಾರೆ. ಕೊನೆಯ ಹಂತದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯಾರಿಗಾದರೂ ಐಎಲ್‌ಐ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಜ್ವರ ತಪಾಸಣಾ ಕೇಂದ್ರಗಳಿಗೆ ತೆರಳಿ ತೋರಿಸಿಕೊಳ್ಳುವಂತೆ ಸೂಚಿಸಿದರು. ಅದರಲ್ಲೂ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಯಾವುದೇ ಲಕ್ಷಣ ಕಂಡುಬಂದಲ್ಲಿ ಮನೆಯಲ್ಲಿರುವ ಯುವಕರು ಜವಾಬ್ದಾರಿಯಿಂದ ತುರ್ತಾಗಿ ತಪಾಸಣೆ ಮಾಡಿಸುವಂತೆ ಸಚಿವರು ಕೋರಿದರು. ನಗರದಲ್ಲಿ ದೊಡ್ಡ ದೊಡ್ಡ ಸ್ಟೇಡಿಯಂ‌ಗಳನ್ನು ಕ್ವಾರಂಟೈನ್ ಕೇಂದ್ರವಾಗಿ ಮಾರ್ಪಾಡು ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ಹೇಳಿದರು.

ಬಿಬಿಎಂಪಿ ತಂಡ ರಚನೆ:

ರೋಗಲಕ್ಷಣಗಳಿರುವವರನ್ನು ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಲು ಅನುವಾಗುವಂತೆ ಬಿಬಿಎಂಪಿ ವತಿಯಿಂದ 800 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಮನೆಮನೆಗೆ ತೆರಳಿ ರೋಗ ಲಕ್ಷಣವಿರುವವರ ಸಮಿಕ್ಷೆ ನಡೆಸಲಿದ್ದಾರೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಸಚಿವರು ಕೋರಿದರು. ಇದರಿಂದಾಗಿ ಸೋಂಕಿತರ ಪತ್ತೆಗೆ ಅನುಕೂಲವಾಗಲಿದ್ದು, ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ನೀದಬಹುದು ಎಂದು ಅವರು ಹೇಳಿದರು.

ಬದಲಾದ ಕಂಟೈನ್‌ಮೆಂಟ್ ವ್ಯಾಖ್ಯಾನ:

ನಗರದಲ್ಲಿ ಕಂಟೈನ್‌ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಂಟೈನ್‌ಮೆಂಟ್ ಪ್ರದೇಶಗಳು ಈಗ ಮೊದಲಿನಂತಿಲ್ಲ. ಅದರ ವ್ಯಾಖ್ಯಾನ ಬದಲಾಗಿದೆ. ಮೊದಲು ಪೂರ್ಣ ವಾರ್ಡ್‌ಗಳನ್ನು ಅಥವಾ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಕಂಟೈನ್‌ಮೆಂಟ್ ಆಗಿ ಘೋಷಿಸಲಾಗುತ್ತಿತ್ತು. ಈಗ ಅದು ಕೇವಲ ಸೋಂಕಿತ ವ್ಯಕ್ತಿಯ ಮೆನೆಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ 1.2 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ 60 ಕಂಟೈನ್‌ಮೆಂಟ್ ಜ಼ೋನ್ ಹೆಚ್ಚೇನು ಅಲ್ಲ ಅಂದು ಸಚಿವರು ತಿಳಿಸಿದ್ದಾರೆ.

ನಗರದಲ್ಲಿ ಕೋವಿಡ್ ಅಲ್ಲದ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಕೋವಿಡ್ ಅಲ್ಲದ ಚಿಕಿತ್ಸೆಗಾಗಿ ಮುಕ್ತವಾಗಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು. ಪ್ರಥಮ ಹಂತದಲ್ಲಿ ಬೋರಿಂಗ್ ಆಸ್ಪತ್ರೆಯನ್ನು ಕೋವಿಡ್ ಅಲ್ಲದ ರೋಗಗಳಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.