ಬಿಎಂಟಿಸಿ ಸಿಬ್ಬಂದಿಗೆ ಕರೋನ ಸೋಂಕು: ಆತಂಕದಲ್ಲಿ ಪ್ರಾಯಾಣಿಕರು

ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಕೊರೋನಾ ಸೋಂಕು ಮತ್ತಷ್ಟು ಅಬ್ಬರಿಸತೊಡಗಿದೆ. ಜುಲೈ ತಿಂಗಳಲ್ಲಿ ಕೊರೋನಾ ಅವಾಂತರ ಸೃಷ್ಟಿಸಲಿದೆ ಎನ್ನುವ ಎಚ್ಚರಿಕೆಯ ನಡುವೆ ಜೂನ್ ನಲ್ಲಿಯೇ ಕೊರೋನಾ ಮಹಾ ಬಿರುಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿದೆ.

ಲಾಕ್ ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಗಳ ಓಡಾಟಕ್ಕೆ ಸರ್ಕಾರ ಅವಕಾಶ ಕಲ್ಪಿಸಿತ್ತು. ಆದ್ರೆ, ಇದೀಗ ಬಿಎಂಟಿಸಿ ಬಸ್ ಹತ್ತಿದ ಪ್ರಯಾಣಿಕರಿಗೆ ಆತಂಕ ಶುರುವಾಗಿದೆ. ಕೆ ಆರ್ ಪುರಂನ ಐಟಿಐ ಡಿಪೋ ಸಂಖ್ಯೆ 24ಕ್ಕೆ ಸೇರಿದ ಬಿಎಂಟಿಸಿ ನಿರ್ವಾಹಕನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಲಾಕ್ ಡೌನ್ ಘೋಷಣೆ ಮಾಡಿದಾಗಿಂದಲೂ ತಮ್ಮ ತವರಿನ ಬಿಜಾಪುರದಲ್ಲಿ ನೆಲೆಸಿದ್ದ ವ್ಯಕ್ತಿ ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ವಾಪಸ್ ಆಗಿದ್ದರು. ಮೇ 30ರಂದು ಕರ್ತವ್ಯಕ್ಕೆ ಹಾಜರಾಗಿದ್ದ ಈ ವ್ಯಕ್ತಿ, ಕೆ.ಆರ್ ಮಾರುಕಟ್ಟೆ, ಸಿಲ್ಕ್ ಬೋರ್ಡ್, ಹೆಬ್ಬಾಳ ಸೇರಿದಂತೆ ಅನೇಕ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಕೊರೋನ ಸೋಂಕು ಟೆಸ್ಟ್ ಮಾಡಿದ ನಂತರ ಸಾಕಷ್ಟು ಕಡೆ ಸುತ್ತಾಡಿದ್ದಾರೆ. ನಿನ್ನೆ ಸಂಜೆ ಪಾಸಿಟಿವ್ ದೃಡಪಟ್ಟಿದೆ. ಹೀಗಾಗಿ ಆರೋಗ್ಯ ಅಧಿಕಾರಿಗಳು ಇವರ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕುತ್ತಿದ್ದಾರೆ. ಸದ್ಯ ಕಂಡೆಕ್ಟರ್ ವಾಸಿಸುತ್ತಿದ್ದ ದೇವಸಂದ್ರ ವಾರ್ಡ್ ಗೀತಾ ಕ್ಲಿನಿಕ್ ರಸ್ತೆಯನ್ನ ಸಂಪೂರ್ಣ ಸ್ಯಾನಿಟೈಸ್ ಮಾಡುತ್ತಿದ್ದು, ಸೀಲ್ ಡೌನ್ ಮಾಡುವ ಲಕ್ಷಣಗಳು ಗೋಚರವಾಗುತ್ತಿದೆ.

ತುಮಕೂರಿನಲ್ಲಿ ರೆಡಿಯಾಗ್ತಿದೆ ಆಯುರ್ವೆದಿಕ್ ರೈಸ್: ಕೊರೋನಾ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ ಅಂತೆ ಈ ರೈಸ್..?

ತುಮಕೂರು: ಆಯುರ್ವೇದಿಕ್ ಗುಣವುಳ್ಳ ವಿಶೇಷ ರೈಸ್ ಸಪ್ತಗಿರಿ ರೈಸ್ ಮಿಲ್ ನಲ್ಲಿ ರೆಡಿಯಾಗುತ್ತಿದೆ. ರೋಗ ನಿರೋಧಕ ಶಕ್ತಿಯುಳ್ಳ ಈ ರೈಸ್ ಕ್ಯಾನ್ಸರ್, ಕರೋನಾ ನಿಯಂತ್ರಣಕ್ಕೂ ಸಹಕಾರಿಯಾಗಲಿದೆಯಂತೆ. ವಿಶ್ವದಲ್ಲೇ ತನ್ನದೇ ಆದ ವಿಶೇಷತೆಯನ್ನು ಹೊಂದಿರುವ ತುಮಕೂರಿನ ಅಂತರಸನಹಳ್ಳಿಯ ಸಪ್ತಗಿರಿ ರೈಸ್ ಮಿಲ್ಲಿನಲ್ಲಿ ವಿಶೇಷವಾದಂತಹ ಈ ಅಕ್ಕಿ ತಯಾರಾಗುತ್ತಿದೆ.

ನೈಸರ್ಗಿಕ ವಾದಂತಹ ವಸ್ತುಗಳನ್ನು ಈ ಅಕ್ಕಿಯಲ್ಲಿ ಬೆರೆಸಿ ತಯಾರು ಮಾಡಲಾಗುತ್ತದೆ. ಈ ರೈಸ್ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ ಎನ್ನಲಾಗಿದೆ. ಪ್ರಮುಖವಾಗಿ ಈ ಅಕ್ಕಿ ಸೇವಿಸಿದರೆ ಕ್ಯಾನ್ಸರ್ ಗುಣಮುಖವಾಗುವುದರ ಜೊತೆಗೆ ಕೊರೋನಾ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ ಅನ್ನೋದು ರೈಸ್ ಮಿಲ್ ಮಾಲಿಕ ಶ್ರೀಧರ ಬಾಬು ಅಭಿಪ್ರಾಯ. ಈಗಾಗಲೇ ಪ್ರಾಯೋಗಿಕವಾಗಿ ರೈಸ್ ತಯಾರು ಮಾಡಿ ಮೈಸೂರಿನ ಸಿ ಎಫ್ ಆರ್ ಟಿ ಐ ಲ್ಯಾಬ್ ಗೆ ಕಳುಹಿಸಲಾಗಿದೆ. ಲ್ಯಾಬ್‌ನಿಂದ ಅನುಮೋದನಲ್ಲಿಗೊಂಡರೆ ಈ ರೈಸ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಆಯುರ್ವೇದಿಕ್ ಮಿಶ್ರಿತ ಸೋನಾಮುಸುರಿ ರೈಸ್ ಕೆಜಿಗರ ಕೇವಲ 32 ರೂ. ಗೆ ಸಿಗಬಹುದು ಅನ್ನೋದು ಮಾಲೀಕರ ಅಭಿಪ್ರಾಯ. ಮಲೇಷಿಯಾ, ಆಸ್ಟ್ರೇಲಿಯಾ, ಸರ್ಜಾ ಸರ್ಕಾರಗಳು ಸಪ್ತಗಿರಿ ಮಿಲ್ ನ ಔಷಧಿ ಗುಣವುಳ್ಳ ರೈಸ್ ಗಳಿಗೆ ಬೇಡಿಕೆ ಇಟ್ಟಿವೆ. ಜೊತೆಗೆ ವಿದೇಶದಲ್ಲೂ ಫ್ಯಾಕ್ಟರಿ ಮಾಡಲು ಆಹ್ವಾನಿಸಿವೆ. ಈ ನಡುವೆ ಸಚಿವ ಗೋಪಾಲಯ್ಯ ಸಪ್ತಗಿರಿ ಫ್ಯಾಕ್ಟರಿಗೆ ಭೇಟಿ ಕೊಟ್ಟು ರೈಸ್ ನ ವಿಶೇಷತೆಗಳನ್ನು ತಿಳಿದುಕೊಂಡಿದ್ದಾರೆ.

ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಕ,ಎಸ್ಎಸ್ಎಲ್ಸಿ ಪರೀಕ್ಷೆ ರದ್ದಿಲ್ಲ: ಸಂಪುಟದ ಮಹತ್ವದ ನಿರ್ಧಾರ…!

ಬೆಂಗಳೂರು:ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಕ,ಏಳನೇ ತರಗತಿವರೆಗೆ ಆನ್ ಲೈನ್ ಶಿಕ್ಷಣ ರದ್ದು ಹಾಗು ನಿಗದಿತ ದಿನಾಂಕದಂದೇ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಬೇಕು ಎನ್ನುವ ಮಹತ್ವದ ನಿರ್ಧಾರಗಳನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು.31 ವಿಷಯಗಳ ಮೇಲೆ ಮಹತ್ವದ ಚರ್ಚೆ ನಡೆಸಿ ಹಕವು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಸಂಪುಟ ಸಭೆ ನಂತರ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ,ಗ್ರಾಮ ಪಂಚಾಯತಿ ಚುನಾವಣೆಯನ್ನು ಆದಷ್ಟು ಬೇಗ ನಡೆಸಲು ನಿರ್ಧಾರಿಸಿದ್ದು ಅಲ್ಲಿಯವರೆಗೂ ಆಡಳಿತ ಸಮಿತಿ ಹಾಗು ಆಡಳಿತಾಧಿಕಾರಿ ನೇಮಕಕ್ಕೆ ಚರ್ಚೆ ನಡೆಸಿ ಅಂತಿಮವಾಗಿ ಆಡಳಿತಾಧಿಕಾರಿ ನೇಮಕ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ, ಎಲ್ಲಾ ಗ್ರಾಮಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಿಸಲು ಮಹತ್ವದ ನಿರ್ಧಾರ ಕೈಗೊಂಡಿದ್ದು, ಆರು ತಿಂಗಳೋಳಗೆ ಚುನಾವಣೆಯಾಗಲಿದೆ ಎರಡು ಮೂರು ತಿಂಗಳಿನಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.

ಆನ್ ಲೈನ್ ಶಿಕ್ಷಣದ ಕುರಿತು ಸಂಪುಟದಲ್ಲಿ ಮಹತ್ವದ ಚರ್ಚೆ ನಡೆಯಿತು.ಐದನೇತರಗತಿವರೆಗೆ ಆನ್ ಲೈನ್ ಶಿಕ್ಷಣ ರದ್ದು ನೀತಿಯನ್ನು ಏಳನೇತರಗತಿವರೆಗೆ ವಿಸ್ತರಿಸಲು ನಿರ್ಧರಿಸಿತು ಜೊತೆಗೆ ಈಗಾಗಲೇ ನಿಗದಿಯಾದ ದಿನಾಂಕದಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗುತ್ತದೆ ಎಂದರು.

ಒಂದರಿಂದ ಐದನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ಮಾಡುವಂತಿಲ್ಲ: ಸುರೇಶ್‌ ಕುಮಾರ್‌

ಬೆಂಗಳೂರು: ರಾಜ್ಯದ ಯಾವುದೇ ಪಠ್ಯಕ್ರಮದ ಶಾಲೆಗಳಲ್ಲೂ ಎಲ್‌ಕೆಜಿಯಿಂದ ಐದನೇ ತರಗತಿಗಳ ವಿದ್ಯಾರ್ಥಿಗಳಿಗೆ ಆನ್‌ ಲೈನ್‌ ಬೋಧನೆ ಮಾಡುತ್ತಿದ್ದರೆ, ಅದನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಆನ್‌ಲೈನ್‌ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬುಧವಾರ ನಾಡಿನ ಹಿರಿಯ ಶಿಕ್ಷಣ ತಜ್ಞರು, ಮಾನಸಿಕ ಆರೋಗ್ಯ ವಿಭಾಗದ ಪರಿಣಿತರು, ಖಾಸಗಿ ವಿದ್ಯಾಸಂಸ್ಥೆಗಳ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಶೈಕ್ಷಣಿಕ ಹಾಗೂ ಮಕ್ಕಳ ಸುಧಾರಣೆ ವಿಷಯದ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸುದೀರ್ಘ ಸಮಾಲೋಚನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರಾಥಮಿಕ ಹಂತದಲ್ಲಿ ರಾಜ್ಯದ ಯಾವುದೇ ಶಾಲೆಯಲ್ಲೇ ಆಗಲಿ ಆನ್‌ಲೈನ್‌ ಬೋಧನೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಹಾಗೆಯೇ ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುವುದು ಕಂಡು ಬಂದರೆ ಅಂತಹ ಶಾಲೆಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ:

ಇನ್ನು ಆರರಿಂದ ೧೦ವರೆಗಿನ ಉನ್ನತ ತರಗತಿಗಳಲ್ಲಿ ಆನ್‌ಲೈನ್‌ ಶಿಕ್ಷಣದ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಮತ್ತು ಆ ಕುರಿತಂತೆ ಮಾರ್ಗಸೂಚಿಗಳನ್ನು ರೂಪಿಸಲು ಹಿರಿಯ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದೆ. ಅಂತೆಯೇ ಎಲ್‌ಕೆಜಿ ಯಿಂದ ಐದನೇ ತರಗತಿವರೆಗೆ ಆನ್‌ಲೈನ್‌ ಹೊರತುಪಡಿಸಿ ತಂತ್ರಜ್ಞಾನಾಧಾರಿತವಾದ ಬೋಧನೆಯನ್ನು ಅಳವಡಿಸಿಕೊಳ್ಳುವ ಕುರಿತಂತೆ ಸಹ ಈ ಸಮಿತಿ ಸಾಧಕಬಾಧಕಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲಿದ್ದು, ಸಮಿತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಪ್ರೊ. ಎಂ.ಕೆ. ಶ್ರೀಧರ್‌ , ಹಿರಿಯ ಶಿಕ್ಷಣ ತಜ್ಞರಾದ ಪ್ರೊ. ಗುರುರಾಜ ಕರ್ಜಗಿ, ಡಾ. ವಿ.ಪಿ. ನಿರಂಜನಾರಾಧ್ಯ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಪ್ರತಿನಿಧಿಗಳಾದ ಹೃಷಿಕೇಶ್‌, ನಿಮ್ಹಾನ್ಸ್‌ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞರು, ಅರ್ಲಿ ಚೈಲ್ಡ್‌ ಹುಡ್‌ ಸಂಘಟನೆಯ ಪ್ರತಿನಿಧಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇರುತ್ತಾರೆ ಎಂದು ಸಚಿವರು ತಿಳಿಸಿದರು.

ಸಮಿತಿ ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಿಕೊಳ್ಳಬೇಕು, ತರಗತಿ ಇಲ್ಲದಿರುವಾಗ ಮಕ್ಕಳ ಶಿಕ್ಷಣ ನಿರಂತರತೆಗೆ ಮಾತ್ರ ಇದನ್ನು ಎಷ್ಟು ಬಳಕೆ ಮಾಡಬೇಕು, ರಜಾ ಅವಧಿಯಲ್ಲಿ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿ ಹೇಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಮತ್ತು ಕೋವಿಡ್‌ನಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ತರಗತಿಗಳಿಗೆ ಪರ್ಯಾಯವೆನ್ನುವ ಭಾವನೆಯನ್ನು ಮೂಡಿಸದೇ ಅವರ ಕಲಿಕೆಗೆ ಪ್ರೇರೇಪಣೆಯಾಗುವಂತೆ ಮಾತ್ರವೇ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು, ವಿಶೇಷವಾಗಿ ನಮ್ಮ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿ/ ಪೋಷಕರ ಸಾಮಾಜಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ವಿದ್ಯಾರ್ಥಿ ಕಲಿಕೆಯಿಂದ ವಂಚಿತವಾಗದೇ ಮುಖ್ಯವಾಹಿನಿಯಲ್ಲಿ ಒಳಗೊಳ್ಳುವುದು ಸೇರಿದಂತೆ ಈ ಪರ್ಯಾಯ ಬೋಧನಾ ಕ್ರಮದ ಸಾಧಕ ಬಾಧಕಗಳೊಂದಿಗೆ ಮಾರ್ಗಸೂಚಿಗಳನ್ನು ರೂಪಿಸಿ ಈ ಸಮಿತಿಯು 10 ದಿನಗಳಲ್ಲಿ ವರದಿ ನೀಡಲಿದೆ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

ಶುಲ್ಕ ಹೆಚ್ಚಳ ಮಾಡಿದ ಶಾಲೆಗಳ ವಿರುದ್ಧ ಕ್ರಮ:

ಇದೇ ಸಂದರ್ಭದಲ್ಲಿ ಈ ಶೈಕ್ಷಣಿಕ ಸಾಲಿಗೆ ಬೋಧನಾ ಶುಲ್ಕ ಹೆಚ್ಚಳ ಮಾಡಬಾರದು ಎಂದು ಈಗಾಗಲೇ ಶಿಕ್ಷಣ ಇಲಾಖೆ ಸ್ಪಷ್ಟವಾದ ಸುತ್ತೋಲೆ ಹೊರಡಿಸಿದ್ದು, ಇದನ್ನು ಉಲ್ಲಂಘಿಸಿದ ಶಾಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲು ಇಲಾಖಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.

ಪರಿಶಿಷ್ಟರ ಕಲ್ಯಾಣ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಗೋವಿಂದ ಕಾರಜೋಳ ಸೂಚನೆ

ಬೆಂಗಳೂರು. ಜೂ.10: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಉಪಮುಖ್ಯಮಂತ್ರಿಯವರಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದರು.

ವಿಧಾನಸೌಧದಲ್ಲಿಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟರ ಕಲ್ಯಾಣಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿ, ಅನುದಾನವನ್ನೂ ಒದಗಿಸಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಈ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಸಮುದಾಯವು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಯಾಗಬೇಕು. ಬ್ಯಾಕ್ ಲಾಗ್ ಹುದ್ದೆಗಳ ನೇಮಕಕ್ಕೆ ಈ ಹಿಂದೆ ಪ್ರಗತಿ ಪರಿಶೀಲನೆ ನಡೆಸಿ, ತ್ವರಿತವಾಗಿ ಭರ್ತಿ ಮಾಡುವಂತೆ ಸೂಚಿಸಲಾಗಿತ್ತು. ವಿವಿಧ ಯೋಜನೆಗಳು, ಬ್ಯಾಕ್‍ಲಾಗ್ ಹುದ್ದೆಗಳ ನೇಮಕ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಅವರು ಸೂಚಿಸಿದರು. ವಿವಿಧ ಶಾಸಕರು ವಿವಿಧ ಯೋಜನೆಗಳು, ಅಹವಾಲುಗಳ ಬಗ್ಗೆ ಗಮನ ಸೆಳೆದರು.

ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಿ; ಹಿರಿಯ ಕಲಾವಿದರಿಂದ ಡಾ. ಅಶ್ವತ್ಥನಾರಾಯಣಗೆ ಮನವಿ

ಬೆಂಗಳೂರು: ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವ ಮೂಲಕ ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡುವಂತೆ ಲಾಕ್ ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ಕಲಾವಿದರು ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರ ಬಳಿ ಮನವಿ ಮಾಡಿದ್ದಾರೆ.

ಹಿರಿಯ ಕಲಾವಿದರಾದ ಡಿಂಗ್ರಿ ನಾಗರಾಜ್‌, ಲಕ್ಷ್ಮಿ ದೇವಮ್ಮ, ಬಿ.ಎಲ್‌. ಮಂಜುಳಾ, ಗಣೇಶ್‌ ರಾವ್‌, ಬೆಂಗಳೂರು ನಾಗೇಶ್‌, ಶೋಭಾ ರಾಘವೇಂದ್ರ ಸೇರಿದಂತೆ ಹಿರಿಯ ಕಲಾವಿದರು ಡಾ. ಅಶ್ವತ್ಥನಾರಾಯಣ ಅವರನ್ನು ಬುಧವಾರ ಅವರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಕಲಾವಿದರ ಸಮಸ್ಯೆಗಳನ್ನು ಆಲಿಸಿದ ಡಾ. ಅಶ್ವತ್ಥನಾರಾಯಣ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಜತೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿದರು.

“ಲಾಕ್‌ ಡೌನ್ ಹಿನ್ನಲೆಯಲ್ಲಿ ಸುಮಾರು 2 ತಿಂಗಳ ಕಾಲ ಸ್ಥಗಿತಗೊಂಡಿದ್ದ ಕಿರುತೆರೆ ಚಿತ್ರೀಕರಣ ಮತ್ತೆ ಆರಂಭವಾಗಿರುವುದು ಸಂತಸದ ವಿಷಯ. ಆದರೆ, 60 ವರ್ಷ ಮೇಲ್ಪಟ್ಟವರಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲದಿರುವುದರಿಂದ ಹಿರಿಯ ಕಲಾವಿದರಿಗೆ ಸಂಪಾದನೆ ಇಲ್ಲ. ಇದರಿಂದ ದಿನಸಿ, ಮನೆ ಬಾಡಿಗೆ, ಔಷಧಿಗೆ ಹಣ ಇಲ್ಲದೆ ಪರದಾಡುವಂತಾಗುವುದು. ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಿ,”ಎಂದು ಸಂಘದ ಹಿರಿಯ ಸದಸ್ಯರು ಮನವಿ ಮಾಡಿದರು.

ಮಾಸಾಶನ ಬೇಡಿಕೆ:

ತಮಿಳುನಾಡು, ಆಂಧ್ರಪ್ರದೇಶದ ಹಿರಿಯ ಕಲಾವಿದರಿಗೆ ಪ್ರತಿ ತಿಂಗಳು ಮಾಸಾಶನ ದೊರೆಯುತ್ತಿದೆ. ಕರ್ನಾಟಕದಲ್ಲೂ ಹಿರಿಯ ಕಲಾವಿದರು ಮತ್ತು ತಂತ್ರಜ್ಞರಿಗೆ ಮಾಸಾಶನ ದೊರೆಯುವಂತಾಗಬೇಕು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕಲಾವಿದರು ಮನವಿ ಮಾಡಿದ್ದಾರೆ.