ಬಿಜೆಪಿಯವರಿಗೆ ಒಂದು ಕಾನೂನು ನಮಗೆ ಒಂದು ಕಾನೂನು ಇದೆಯಾ: ಡಿಕೆ ಶಿವಕುಮಾರ್

ಬೆಂಗಳೂರು: ಪಶ್ಚಿಮ ಬಂಗಾಳ, ಬಿಹಾರದಲ್ಲಿ ಅಲ್ಲಿನ ಬಿಜೆಪಿ ನಾಯಕರು ಮೇಗಾ ರ್ಯಾಲಿ ನಡೆಸಿದ್ದಾರೆ.‌ ಬಿಹಾರದಲ್ಲಿ ಎಪ್ಪತ್ತು‌ ಸಾವಿರ ಎಲ್ ಇ ಡಿ ಹಾಕಿ‌ ಕಾರ್ಯಕ್ರಮ ಮಾಡಿದ್ದಾರೆ.‌ ಅವರಿಗೆ ಒಂದು ನಮಗೆ ಒಂದು ಕಾನೂನು ಇದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಡಿಕೆ ಶಿವಕುಮಾರ್ ಇದು ಇಡೀ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕ್ರಮ. ಯಾವುದೇ ಕಾರಣಕ್ಕೂ ನಾವು ಇದನ್ನು ನಿಲ್ಲಿಸುವುದಿಲ್ಲ. ನೀವು ಏನೇ ಪ್ರಯತ್ನ ಮಾಡಿದರೂ ಕಾನೂನಿನ ಚೌಕಟ್ಟಿನಲ್ಲಿ, ನೀವು ಅನುಮತಿ ಕೊಟ್ಟಾಗಲೇ ಕಾರ್ಯಕ್ರಮ ಮಾಡುತ್ತೇನೆ. ಈಗ ಯೋಜಿಸಿರುವಂತೆ ಕಾರ್ಯಕ್ರಮ ನಡೆಯುತ್ತದೆ. ಕಾರ್ಯಕ್ರಮ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದರು.

ಮಾರ್ಚ್ 12ರಂದು ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಯಾದ ಕ್ಷಣದಿಂದ ಒಂದು ನಿಮಿಷ ವ್ಯಯ ಮಾಡದೇ ಕೆಲಸ ಮಾಡುತ್ತಿದ್ದೇನೆ.‌ ಸಾಂಪ್ರದಾಯಿಕವಾಗಿ ಅಧಿಕಾರ ಸ್ವಿಕರಿಸುವ ಕಾರ್ಯಕ್ರಮ ನಡೆಯಬೇಕಿತ್ತು. ಆ ಕಾರ್ಯಕ್ರಮಕ್ಕೆ ಅನೇಕ ಅಡ್ಡಿ ಬರುತ್ತಿವೆ. ಮೂರು ಬಾರಿ ದಿನಾಂಕ ನಿಗದಿ ಮಾಡಿ ಮುಂದೂಡಿಕೆಯಾಗಿದೆ. ಮೇ 31, ಜೂ 7, ಅನಂತರ ಜೂ.14 ದಿನಾಂಕ ನಿಗದಿಯಾಗಿತ್ತು.‌ ಇದಕ್ಕೆ ಪೊಲೀಸ್ ಆಯುಕ್ತರ ಮೌಕಿಕ‌ ಅನುಮತಿ ಪಡೆಯಲಾಗಿತ್ತು ಎಂದರು.

7800 ಕಡೆ ಜಾಗ ನಿಗದ ಪಡಿಸಲಾಗಿತ್ತು, ಹೆಚ್ಚುವರಿಯಾಗಿ ಮೂರುವರೆ ಸಾವಿರ ಜಾಗದಲ್ಲಿ ಎಲ್ ಇ ಡಿ‌ ಸ್ಕ್ರೀನ್ ಹಾಕಿ ಒಂದುವರೆ ತಿಂಗಳಿನಿಂದ ತಯಾರಿ ನಡೆಸಿದ್ದರೆ ನಿನ್ನೆ ಸಂಜೆ ಸರ್ಕಾರ ಅನುಮತಿ ನಿರಾಕರಿಸಿದೆ.‌ ಅನುಮತಿ ಕೇಳಿ ಸಿಎಂ, ಮುಖ್ಯಕಾರ್ಯದರ್ಶಿ ಸೇರಿ‌ ಎಲ್ಲರಿಗೂ ಪತ್ರ ಬರೆಯಲಾಗಿತ್ತು. ಯಾವ ರೀತಿ ಕಾರ್ಯಕ್ರ‌ಮ ನಡೆಯಲಿದೆ ಎಂದು ವಿವರ ನೀಡಲಾಗಿತ್ತು. ಕೆಪಿಸಿಸಿ ಮುಂದೆ ಸಾಮಾಜಿಕ‌ ಅಂತರ ಕಾಪಾಡಿಕೊಂಡು ಪೆಂಡಾಲ್ ಹಾಕಿ, ನೂರೈವತ್ತು ಜನ‌ ಭಾಗವಹಿಸುವವರಿದ್ದರು.‌ ಅದಕ್ಕೂ ಅನುಮತಿ ನಿರಾಕರಿಸಲಾಗಿದೆ ಎಂದರು.

ಯಡಿಯೂರಪ್ಪ ನುಡಿದಂತೆ ನಡೆಯುತ್ತಾರೆ, ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ಅವರು ಸಣ್ಣ ರಾಜಕಾರಣ ಮಾಡಲ್ಲ ಎಂದುಕೊಂಡಿದ್ದೆ. ರಾಜ್ಯ ಸರ್ಕಾರದ ಸಚಿವರು ಹೋದ ಕಡೆಯಲೆಲ್ಲಾ ಯಾವ ರೀತಿ ಕಾರ್ಯಕ್ರಮ‌‌ ನಡೆಯುತ್ತಿದೆ ಎಂದು ಗೋತ್ತಿದೆ. ಪದಗ್ರಹಣಕ್ಕೆ ಅನುಮತಿ‌ ನಿರಾಕರಿಸಿರುವುದು ರಾಜಕೀಯ ದಾಖಲೆ. ಅಷ್ಟೇ ಅಲ್ಲ ಕಾಂಗ್ರೆಸ್ ಗೆ ಶಾಸಕಾಂಗ ಸಭೆಗೂ ಅನುಮತಿ ನಿರಾಕರಿಸಿದರು ಎಂದರು.

ರಾಜ್ಯ ಸರ್ಕಾರ ನಮ್ಮ ಕಾರ್ಯಕ್ರಮಕ್ಕೆ ಅನುಮತಿ ನೀಡಬಹುದಾಗಿತ್ತು. ಆದರೆ ಅನುಮತಿ ಯಾವ ಕಾರಣಕ್ಕೆ ನಿರಾಕರಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇದರಲ್ಲಿ ರಾಜಕೀಯ ದುರುದ್ದೇಶ ಕಾಣುತ್ತಿದೆ. ನಾವು ಕಾನೂನನ್ನು ಗೌರವಿಸುತ್ತೇವೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಹೀಗಾಗಿ ಅವರು ಅನುಮತಿ ಕೊಟ್ಟಾಗಲೇ ಕಾರ್ಯಕ್ರಮ ಮಾಡುತ್ತೇವೆ ಎಂದರು.

ಬಿಜೆಪಿಯ ಅನೇಕ ಮುಖಂಡರು ಸಾವಿರಾರು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರೇ ಕಾನೂನು ಮಾಡಿ ಅದನ್ನು ಉಲ್ಲಂಘನೆ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮ ಇಲ್ಲ. ನಾವು ಕಾನೂನಾತ್ಮಕವಾಗಿ ಅನುಮತಿ ಕೇಳಿದರೆ ಕೊಡುತ್ತಿಲ್ಲ. ಸರ್ಕಾರದ ಈ ದ್ವಂದ್ವ ನಿಲುವು ಅರ್ಥವಾಗುತ್ತಿಲ್ಲ ಎಂದರು.

ಆನ್ ಲೈನ್ ಕಾರ್ಯಕ್ರಮ ನಮ್ಮ ಐಡಿಯಾ, ಇದನ್ನು ಬಿಜೆಪಿ ನಕಲು ಮಾಡಿದೆ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ನಕಲು ಮಾಡುತ್ತಿದ್ದಾರೆ, ಸ್ವಂತ ಕಾರ್ಯಕ್ರಮಗಳನ್ನು ಮಾಡಲು ಆಗದೆ ನಮ್ಮನ್ನು ನಕಲು ಮಾಡುತ್ತಿದ್ದಾರೆ. ನಮಗೆ ಅನುಮತಿ ನಿರಾಕರಿಸಿ, ಬಿಜೆಪಿ ನಮ್ಮದೇ ರೀತಿಯಲ್ಲಿ ವರ್ಚುವಲ್ ಕಾರ್ಯಕ್ರ‌ಮ ಮಾಡುತ್ತಿದೆ. ಅದೇ ದಿನ ಅದೇ ಸಮಯಕ್ಕೆ ಕಾರ್ಯಕ್ರ‌ಮ ನಡೆಸುತ್ತಿದೆ. ನಮ್ಮ ಕಾರ್ಯಕ್ರಮ ಹೈಜಾಕ್ ಮಾಡಿ ಅವರು ಕಾರ್ಯಕ್ರಮ ಮಾಡುವುದಕ್ಕೆ, ರಾಷ್ಟ್ರೀಯ ಪ್ರಕೃತಿ ವಿಕೋಪ ಕಾನೂನನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.

ಡಿ.ಕೆ. ಶಿವಕುಮಾರ್ ಮನೆಯಲ್ಲಿ ಕೂರಲ್ಲ. ‌ವಿಧಾನ ಪರಿಷತ್ ಚುನಾವಣೆ ಬಳಿಕ ರಾಜಕೀಯೇತರ ಪ್ರವಾಸ ಮಾಡುತ್ತೇನೆ. ‌ಕೊರೋನಾದಲ್ಲಿ ಜನರ ಕಷ್ಟಗಳೇನು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ಯಾಕೇಜ್ ತಲುಪಿದ್ಯಾ ಎಂದು‌ ಕೇಳುತ್ತಾ, ಜನರ ಕಷ್ಟಗಳಿಗೆ ಸ್ಪಂದಿಸುತ್ತೇವೆ. ನಮ್ಮ ಪಕ್ಷದ ಎಲ್ಲಾ ನಾಯಕರು ಈ ಪ್ರವಾಸದಲ್ಲಿ ಭಾಗವಹಿಸುತ್ತಾರೆ. ಬಾವುಟ ಬಳಸಲ್ಲ. ಪ್ರತಿಪಕ್ಷದ ಅಧ್ಯಕ್ಷನಾಗಿ ಈ ಸಂದರ್ಭದಲ್ಲಿ ಜನರ ಪರಿಸ್ಥಿತಿ ಹಾಗೂ ಸಮಸ್ಯೆ ಅರಿಯುವುದು ನನ್ನ ಕರ್ತವ್ಯ ಎಂದರು.

ನನಗೆ ಮುಖ್ಯಮಂತ್ರಿಯವರ ಪ್ರೀತಿ ಬೇಕಿಲ್ಲ. ಜನರ ಪ್ರೀತಿ ಸಾಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಪ್ರತಿಜ್ಞಾ ಕಾರ್ಯಕ್ರಮ ಅನುಮತಿ ನಿರಾಕರಿಸಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದರು.

ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಚಿವ ನಾರಾಯಣಗೌಡ

ಮಂಡ್ಯ,ಜೂ-10:ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಸಚಿವ ಡಾ.ನಾರಾಯಣಗೌಡ ಮಾನವೀಯತೆ ಮೆರೆದಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ
ಮಂಡ್ಯದಿಂದ ಪಾಂಡವಪುರಕ್ಕೆ ತೆರಳುತ್ತಿದ್ದ ವೇಳೆ ಶ್ರೀರಂಗಪಟ್ಟಣ ತಾಲೂಕಿನ ಟಿ ಎಮ್ ಹೊಸೂರು ಬಳಿ ರಸ್ತೆ ಅಪಘಾತದ ಘಟನೆ ತಿಳಿದು ವಾಹನ ನಿಲ್ಲಿಸಿ ವಿಚಾರಿಸಿದ್ದಾರೆ. ತಕ್ಷಣವೆ ತಮ್ಮ ಬೆಂಗಾವಲು ವಾಹನದಲ್ಲಿ ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಮಹಿಳೆ ತೀವ್ರ ಗಾಯಗೊಂಡಿದ್ದು.ಸಚಿವರು ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ತೋರಿದ್ದಾರೆ.

ಡಿಕೆ ಶಿವಕುಮಾರ್ ಪದಗ್ರಹಣಕ್ಕಿಂತ ರಾಜ್ಯ ಮುಖ್ಯ: ಅಶೋಕ್

ಬೆಂಗಳೂರು: ಪದಗ್ರಹಣ ಕಾರ್ಯಕ್ರಮ ಮಾಡಬೇಕಾದರೆ ನಿಯಮಗಳನ್ನು ಬದಲಾವಣೆ ಮಾಡಬೇಕು. ಅವರ ಪದಗ್ರಹಣ ದೇಶಕ್ಕೆ ರಾಜ್ಯಕ್ಕೆ ಬಹಳ ಮುಖ್ಯ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ
ಕೆಪಿಸಿಸಿ ಅಧ್ಯಕ್ಷ ರಾದ ಡಿಕೆ ಶಿವಕುಮಾರ್ ಅವರು ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡ್ತಾ ಇದಾರೆ. ಅವರ ಪದಗ್ರಹಣಕ್ಕೆ ಸರ್ಕಾರ ಅಡ್ಡಿ ಮಾಡ್ತಿಲ್ಲ.ಸರ್ಕಾರ ಮತ್ತು ಅವರಿಗೆ ಎಣ್ಣೆ ಸಿಗೇಕಾಯಿ ಇದ್ದ ಹಾಗೆ ಎಂದು ಟೀಕಿಸಿದರು.

ಪರಿಷತ್ ಗೆ ಈಗಷ್ಟೇ ಚುನಾವಣೆ ಘೋಷಣೆ ಆಗಿದೆ. ಕೇಂದ್ರ ಮತ್ತು ರಾಜ್ಯದ ನಾಯಕರು ಚರ್ಚೆ ಮಾಡಿ ಅಭ್ಯರ್ಥಿ ಗಳ ಹೆಸರು ಪ್ರಕಟಿಸಲಾಗುತ್ತದೆ. ಈಗಾಗಲೇ ಯಡಿಯೂರಪ್ಪ ಅವರು ಮಾತು ಕೊಟ್ಟಿರುವವರೂ ಇದ್ದಾರೆ. ಚರ್ಚೆ ನಂತರ ಅಭ್ಯರ್ಥಿ ಗಳ ಹೆಸರು ಹೇಳಲಾಗುತ್ತದೆ. ರಾಜ್ಯಸಭೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ನಂತೆ ಕುಟುಂಬ ರಾಜ ಕಾರಣಕ್ಕೆ ಮಣೆ ಹಾಕಿಲ್ಲ.
ಇದರಿಂದ ಕಾಂಗ್ರೆಸ್ ನಲ್ಲಿ ಈಗಾಗಲೇ ಬಂಡಾಯ ಶುರುವಾಗಿದೆ. ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ನಲ್ಲಿ ಕೂಡಾ ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದು ಅಸಮಧಾಮ ಶುರುವಾಗಿದೆ ಎಂದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವೆಬ್ ಸೈಟ್ ಉದ್ಘಾಟಿಸಿದ ಸಿಎಂ

ಬೆಂಗಳೂರು:ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಕಚೇರಿಯ ಲಾಂಛನ ಮತ್ತು ಜಾಲತಾಣವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ‌ಮಾಡಿದರು.

ಈ ಸಂದರ್ಭದಲ್ಲಿ ‌ ಮಂಡಳಿಯ ಅಧ್ಯಕ್ಷರಾದ ಸಚ್ಚಿದಾನಂದ‌ಮೂರ್ತಿ ಸಚಿವರಾದ ಆರ್ ಅಶೋಕ್. ರಮೇಶ್ ಜಾರಕಿಹೊಳಿ. ಅಶ್ವಥ್ ನಾರಾಯಣ್. ಸಂಸದರಾದ ತೇಜಸ್ವಿ ಸೂರ್ಯ ರಾಜಕೀಯ ಕಾರ್ಯದರ್ಶಿ ಗಳಾದ ವಿಶ್ವನಾಥ್ ‌ಶಂಕರ್ ಗೌಡ ಪಾಟೀಲ್ ಶಾಸಕರಾದ ರಾಜು ಗೌಡ ರಾಮದಾಸ್ ರವಿಸುಬ್ರಮಣ್ಯ. ಅರ್.ವಿ ದೇಶಪಾಂಡೆ ಮುಖಂಡರಾದ ಎಂಟಿಬಿ‌ ನಾಗರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

ನಂತರ ಸಿಎಂ ವೀಡಿಯೋ ಮೂಲಕ ಭಾಷಣ ಮಾಡಿದ್ದು ಭಾಷಣದ ಹೈಲೈಟ್ಸ್:

1. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಕಚೇರಿ, ಲಾಂಛನ ಹಾಗೂ ಜಾಲತಾಣವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ.

2. ಯಾವುದೇ ಒಂದು ಸಮುದಾಯವನ್ನು ಸಾರಾಸಗಟಾಗಿ ಮುಂದುವರೆದ ಸಮುದಾಯ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳಲ್ಲೂ ಮುಂದುವರೆದವರು ಮತ್ತು ಹಿಂದುಳಿದವರು ಇರುತ್ತಾರೆ.

3. ಅದೇ ರೀತಿ ಪಾರಂಪರಿಕವಾಗಿ ಬ್ರಾಹ್ಮಣ ಸಮುದಾಯವನ್ನು ಮುಂದುವರೆದ ಸಮುದಾಯ ಎಂದು ಗುರುತಿಸಿದ್ದರೂ, ಆರ್ಥಿಕವಾಗಿ ಅಶಕ್ತರಾಗಿರುವ ಹಲವಾರು ಮಂದಿ ಈ ಸಮುದಾಯದಲ್ಲಿದ್ದಾರೆ.

4. ಅಂತಹವರ ಅಭ್ಯುದಯಕ್ಕಾಗಿ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಯಿತು.

5. ದೇಶದ ಇತಿಹಾಸದಲ್ಲಿ ಬ್ರಾಹ್ಮಣ ಸಮುದಾಯದವರ ಕೊಡುಗೆ ಉಲ್ಲೇಖಾರ್ಹವಾದುದು.

6. ವಿಶೇಷವಾಗಿ ಶಿಕ್ಷಣ ಹಾಗೂ ಸಾಂಸ್ಕೃತಿಕ ಪರಂಪರೆಯ ರಕ್ಷಣೆಯಲ್ಲಿ ಈ ಸಮುದಾಯದ ಸಾಧನೆ ಅದ್ವಿತೀಯವಾದುದು.

7. ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರಂತಹ ಗುರುಶ್ರೇಷ್ಠರ ತತ್ವ ಹಾಗೂ ಆದರ್ಶಗಳ ಹಾದಿಯಲ್ಲಿ ನಡೆದು ಸಮಾಜ ಒಳಿತನ್ನು ಕಂಡಿದೆ.

8. ವೇದೋಪನಿಷತ್ತುಗಳನ್ನು ಅಭ್ಯಸಿಸುವ ಮೂಲಕ ಆಧ್ಯಾತ್ಮಿಕತೆಯನ್ನು ಮನುಕುಲಕ್ಕೆ ವಿಪ್ರ ಸಮಾಜ ಭೋದಿಸುತ್ತಾ ಬಂದಿದೆ.

9. ಬ್ರ ಹ್ಮಣ ಸಮುದಾಯವು ಸಾವಿರಾರು ವರ್ಷಗಳ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಅಪೂರ್ವ ಕೊಡುಗೆ ನೀಡಿದೆ.

10. ಬ್ರಾಹ್ಮಣ ಸಮುದಾಯ ಹಣ, ಆಸ್ತಿ, ಸಂಪತ್ತಿಗಿಂತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಸಂಸ್ಕಾರಯುತ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿದೆ.

11. ಅಶಕ್ತರಾದ ಬ್ರಾಹ್ಮಣರು ಆರ್ಥಿಕವಾಗಿ ಸಶಕ್ತರಾಗಲು ಮಂಡಳಿಯ ವತಿಯಿಂದ ಅನೇಕ ವಿಭಿನ್ನ ಯೋಜನೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ.

12. ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿ ಅವರ ಜೀವನ ಮಟ್ಟವನ್ನು ಸುಧಾರಿಸಲು ಯೋಜನೆಗಳು ಸಹಕಾರಿಯಾಗಲಿದೆ.

13. ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ವಿದ್ಯಾರ್ಥಿಗಳಿಗೆ ವಸತಿ ನಿಲಯದ ವ್ಯವಸ್ಥೆ ಕಲ್ಪಿಸಲಾಗಿದೆ.

14. ಅನಾಥ, ನಿರಾಶ್ರಿತ ಅಂಗವಿಕಲ / ವಿಧವೆ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ, ವೃದ್ಧಾಶ್ರಮ, ವೈದ್ಯಕೀಯ ತಪಾಸಣೆ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶ ಸ್ವಾಗತಾರ್ಹ.

15. ಸಮುದಾಯದವರಿಗಾಗಿ ಸಾಮೂಹಿಕ ವಿವಾಹ, ಉಪನಯನ ಆಯೋಜನೆ ಸೇರಿದಂತೆ ಯುವ ಪೀಳಿಗೆಯ ಸಂಘಟನೆಗೆ ಅಭಿವೃದ್ಧಿ ಉತ್ಸವಗಳನ್ನು ಆಯೋಜಿಸುವುದು ಇತ್ಯಾದಿ ಪ್ರಶಂಸಾರ್ಹ.

16. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯುವಕ-ಯುವತಿಯರಿಗೆ ಪ್ರೋತ್ಸಾಹ ಹಾಗೂ ಸಹಾಯಧನ ನೀಡುವ ಯೋಜನೆಗಳಿವೆ.

17. ಈ ಎಲ್ಲ ಯೋಜನೆಗಳು ಸಮುದಾಯದವರ ಉನ್ನತಿಗಾಗಿ ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.

18. ಕರ್ನಾಟಕದಲ್ಲಿ ಬ್ರಾಹ್ಮಣರ ಜನಸಂಖ್ಯೆ ಅಂದಾಜು ಶೇಕಡಾ 3 ರಷ್ಟಿದ್ದು, ಬ್ರಾಹ್ಮಣ ಸಮುದಾಯದ ಸಮಗ್ರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ.

19. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಹಳೇಬೀಡು ಶ್ಯಾಮಣ್ಣ ಸಚ್ಚಿದಾನಂದ ಮೂರ್ತಿ ಅವರ ನೇತೃತದಲ್ಲಿ ಸಮುದಾಯ ಸರ್ವತೋಮುಖ ಅಭಿವೃದ್ಧಿ ಹೊಂದಲಿದೆ ಎಂದು ಭಾವಿಸಿದ್ದೇನೆ.

20. ಮಂಡಳಿಯ ನೂತನ ಕಚೇರಿ ಹಾಗೂ ಜಾಲತಾಣ ಬ್ರಾಹ್ಮಣ ಸಮುದಾಯಕ್ಕೆ ಉಪಯುಕ್ತವಾಗಲಿ ಎಂದು ಹಾರೈಸುತ್ತೇನೆ

ದ್ವಿತೀಯ ಪಿಯುಸಿ ವಿಜ್ಞಾನ ಮೌಲ್ಯಮಾಪನ ಕೇಂದ್ರಕ್ಕೆ ಸಚಿವರ ಭೇಟಿ

ಬೆಂಗಳೂರು:ದ್ವಿತೀಯ ಪಿಯು ವಿಜ್ಞಾನ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಇದ್ದ ಅಡೆತಡೆಗಳು ಸಂಪೂರ್ಣವಾಗಿ ನಿವಾರಣೆಯಾಗಿದ್ದು ನಿಗದಿತ ಅವಧಿಯಲ್ಲಿ ಮೌಲ್ಯಮಾಪನ ಪೂರ್ಣಗೊಂಡು ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳುವ ವಿಶ್ವಾಸವನ್ನು ಸಚಿವ ಸುರೇಶ್ ಕುಮಾರ್ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ದಯಾನಂದ ಸಾಗರ ವಿದ್ಯಾ ಸಂಸ್ಥೆಯಲ್ಲಿ ನಡೆಯುತ್ತಿರುವ ಪರೀಕ್ಷಾ ಕೇಂದ್ರಕ್ಕೆ ಇಂದು ಭೇಟಿ‌ ನೀಡಿದ ಸಚಿವ ಸುರೇಶ್ ಕುಮಾರ್, ಉಪನ್ಯಾಸಕ ಸಂಘಟನೆಗಳು ಇಲಾಖೆಯ ಕ್ರಮಕ್ಕೆ ತಮ್ಮ ಸಹಕಾರವನ್ನು ನೀಡುತ್ತಿದ್ದು, ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿವೆಯೆಂದು ಹೇಳಿದರು. ವಿಜ್ಞಾನ ಹೊರತುಪಡಿಸಿದಂತೆ ಅನ್ಯ ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆ ಉಪನ್ಯಾಸಕರ‌ ಸಹಕಾರದಿಂದ ಬಹುಪಾಲು ಪೂರ್ಣಗೊಂಡಿದ್ದು, ಅಂಕಗಳ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದೆಯೆಂದರು. ಎಲ್ಲ ಮೌಲ್ಯಮಾಪನ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಇಲಾಖೆಯು ಜಾರಿಯಲ್ಲಿಟ್ಟಿದ್ದು, ಬೆಂಗಳೂರು ಸುತ್ತ ಮುತ್ತ ಲಿನ 12 ಜಿಲ್ಲೆಗಳ ವಿಜ್ಞಾನ ಬೋಧಕರು, ಇಲಾಖೆಯ ನಿರ್ದೇಶನದಂತೆ ತಕ್ಷಣದಿಂದ ಕಡ್ಡಾಯವಾಗಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಜನರಲ್ಲಿ ವ್ಯವಸ್ಥೆಯ ಬಗ್ಗೆ ವಿಶ್ವಾಸ‌ ಮೂಡಿಸುವ ರೀತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ- ಎಸ್.ಸುರೇಶ್‌ ಕುಮಾರ್

ಬೆಂಗಳೂರು:ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಇಡೀ ಸಮಾಜ ಎದುರು ನೋಡುತ್ತಿದ್ದು, ಯಾವುದೇ ಅವಘಡಗಳಿಗೆ ಅವಕಾಶ ನೀಡದೇ ಪರೀಕ್ಷೆ ಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕೆಂದು ಸಚಿವ ಸುರೇಶ್‌ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವ ಸಿದ್ಧತೆಯ‌ ಕುರಿತಂತೆ ರಾಜ್ಯಾದ್ಯಂತ 31 ಜಿಲ್ಲಾ ಕೇಂದ್ರಗಳಿಗೆ ಕಳೆದ ಹದಿನೈದು ದಿನಗಳಲ್ಲಿ ಸುಮಾರು ಐದು ಸಾವಿರ ಕಿಲೋಮೀಟರ್ ಗಳಷ್ಟು ಸಂಚಾರ ಕೈಗೊಂಡು, ಸಭೆ ನಡೆಸಿ ನಿರ್ದೇಶನ ನೀಡಿರುವ ಸಚಿವ ಸುರೇಶ್ ಕುಮಾರ್, ಇಂದು ತಮ್ಮ ಅಭಿಯಾನದ ಕಡೆಯ ಭಾಗವಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿದರು.

ಉಚ್ಛ ನ್ಯಾಯಾಲಯದ ನಿರ್ದೇಶನದ ಅನುಸಾರ ನಡೆಯುತ್ತಿರುವ ಪರೀಕ್ಷೆಗಳು ಸಮಾಜಕ್ಕೆ ಭರವಸೆಯನ್ನು ಮೂಡಿಸುವ ರೀತಿಯಲ್ಲಿ‌ ಅಚ್ಚುಕಟ್ಟಾಗಿ‌ ನಿರ್ವಹಣೆಯಾಗಬೇಕು, ಪರೀಕ್ಷೆಗಳು ನಡೆಯುತ್ತಿರುವ ಇದೊಂದು ವಿಶಿಷ್ಟ ಸಾಮಾಜಿಕ ಸಂದರ್ಭವನ್ನು ಪ್ರತಿಷ್ಠೆಯಾಗಿ ಪರಿಗಣಿಸದೇ ನಮ್ಮ ಸಾಮಾಜಿಕ ಬದ್ಧತೆಗೆ ಸವಾಲಾಗಿ ಪರಿಗಣಿಸಿ ಎಲ್ಲ‌ ಅಧಿಕಾರಿಗಳು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕೆಂದು ಸಚಿವರು ಸೂಚಿಸಿದರು.
ವಿದ್ಯಾರ್ಥಿ ಪೋಷಕರ ನಿರೀಕ್ಷೆಗೆ ಅನುಗುಣವಾಗಿ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಯಬೇಕೆಂದ ಶಿಕ್ಷಣ ಸಚಿವ ಸುರೇಶ್ ಕುಮಾರ್
ಪರೀಕ್ಷೆಗೆ ಮುಂಚೆಯೇ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಸ್ಥಳೀಯ ಆಡಳಿತ ಸಂಸ್ಥೆಗಳ ಸಹಕಾರದಿಂದ ಸ್ಯಾನಿಟೈಜ್ ಮಾಡಬೇಕಲ್ಲದೇ, ಪ್ರತಿ‌ ದಿನದ ಪರೀಕ್ಷೆಯ ಬಳಿಕವೂ ಸ್ಯಾನಿಟೈಜ್ ಕ್ರಮಗಳನ್ನು ಅನುಸರಿಸಬೇಕೆಂದು ಅವರು ಸೂಚಿಸಿದರು.

*ಜೂನ್ 12 ರಿಂದ 17 ರವರೆಗೆ ದೂರದರ್ಶನ ದ ಚಂದನದಲ್ಲಿ ವಿಶೇಷ ಪುನರ್ಮನನ*

ಪ್ರಶ್ನೆ ಪತ್ರಿಕೆಯಾಧಾರಿತವಾದ ವಿಶೇಷ ಪುನರ್ಮನನ ತರಗತಿಗಳನ್ನು ಇದೇ ತಿಂಗಳ‌12 ರಿಂದ 17 ರವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ‌ ಪ್ರಸಾರ ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್, ಎಲ್ಲ ವಿದ್ಯಾರ್ಥಿಗಳು ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕೆಂದು ಹೇಳಿದರು.

*ಆರೋಗ್ಯ ಇಲಾಖೆಯ ಸಹಕಾರವನ್ನು ಸರಿಯಾಗಿ ಬಳಸಿಕೊಳ್ಳಿ*

ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯು ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆಗೆ ತನ್ನ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದು, ಮಕ್ಕಳು ಹಾಗೂ ಪೋಷಕರಲ್ಲಿ ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ನಿಟ್ಟಿನಲ್ಲಿ ಮಾಹಿತಿ ಕರಪತ್ರಗಳು, ವಿಡಿಯೋ ಸಂದೇಶಗಳನ್ನು ರಾಜ್ಯಾದ್ಯಂತ ಪ್ರತಿ ಪೋಷಕ, ವಿದ್ಯಾರ್ಥಿಗೆ ತಲುಪಿಸುವ ಕ್ರಮಕ್ಕೆ ಮುಂದಾಗಲಾಗುವುದೆಂದ ಸಚಿವರು, ಶಿಕ್ಷಣ ಇಲಾಖೆಯ ಸಿಬ್ಬಂದಿಯು ಇಲಾಖೆಯ ಈ ಸದಾಶಯವನ್ನು ವಿದ್ಯಾರ್ಥಿ-ಪೋಷಕರಿಗೆ ತಲುಪಿಸುವ ವಾಹಕರಾಗಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.

ಶಿಕ್ಷಣ ಇಲಾಖೆ ಆಯುಕ್ತ ಡಾ.ಜಗದೀಶ್, ಬೆಂಗಳೂರು‌ನಗರ ಹಾಗೂ ಗ್ರಾಮಾಂತರ ಜಿಲ್ಲಾ‌ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಈ ಜಿಲ್ಲೆಗಳ‌ ಶಿಕ್ಷಣ ಇಲಾಖೆಯ ಅಧಿಕಾರಿಗಳು‌ ಸಭೆಯಲ್ಲಿ‌ ಹಾಜರಿದ್ದರು.