ಖರ್ಗೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒತ್ತಡವಿತ್ತು: ಡಿ.ಕೆ ಶಿವಕುಮಾರ್

ಬೆಂಗಳೂರು:ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಬೇಕು ಎಂದು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೂ ಕಾಂಗ್ರೆಸ್ ನಾಯಕರ ಮಾತ್ರವಲ್ಲ ಬೇರೆ ಪಕ್ಷದ ನಾಯಕರೂ ನಮಗೆ ಒತ್ತಡ ಹೇರಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಸೋಮವಾರ ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ನಂತರ ಹಾಗೂ ನಾಮಪತ್ರ ಸಲ್ಲಿಸುವ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ರಾಜ್ಯಕ್ಕೆ ಸೀಮಿತವಾದ ನಾಯಕರಲ್ಲ. ರಾಷ್ಟ್ರಕ್ಕೆ ಸೀಮಿತವಾದ ನಾಯಕ. ಅರಲ್ಲಿ ರಾಷ್ಟ್ರ ನಾಯಕನ ಗುಣಗಳಿವೆ. ಹೀಗಾಗಿ ಅವರು ರಾಷ್ಟ್ರದ ಆಸ್ತಿ. ಕಳೆದ ಐದು ವರ್ಷಗಳ ಕಾಲ ಅವರು ವಿರೋಧ ಪಕ್ಷದಲ್ಲಿದ್ದು ಮಾಡಿದ ಕಾರ್ಯ ಹಾಗೂ ಅವರ ಅನುಭವ ಅತ್ಯುತ್ತಮವಾದುದು. ಅದಕ್ಕೆ ಪರ್ಯಾಯವಿಲ್ಲ. ಅವರ ಕಾರ್ಯ ನೋಡಿ ದೇಶದ ಮೂಲೆ ಮೂಲೆಯಿಂದ ಬೇರೆ ಪಕ್ಷಗಳ ನಾಯಕರೂ ಕೂಡ ಖರ್ಗೆ ಅವರನ್ನು ರಾಜ್ಯಸಭೆಯಿಂದ ಆರಿಸಿ ಸಂಸತ್ತಿಗೆ ಕಳುಹಿಸಬೇಕು ಎಂದು ಒತ್ತಡ ಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರೆಲ್ಲರೂ ಕೂತು ಚರ್ಚೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬಂದೆವು. ನಮ್ಮ ಒಮ್ಮತದ ನಿರ್ಧಾರ ಕಂಡು ನಮ್ಮ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಖುಷಿಪಟ್ಟು ಎರಡನೇ ಮಾತಿಗೆ ಅವಕಾಶ ನೀಡದೇ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು. ಇದರಿಂದ ದೇಶದ ಎಲ್ಲ ಕಾರ್ಯಕರ್ತರಿಗೆ ಸಂತೋಷ ತಂದಿದೆ.

ಮುಂದಿನ ದಿನಗಳಲ್ಲಿ ರಾಜ್ಯದಿಂದ ಆಯ್ಕೆಯಾಗುವ ಖರ್ಗೆ ಅವರು ರಾಷ್ಟ್ರದ ಎಲ್ಲ ವರ್ಗದ ಜನರ ಸಮಸ್ಯೆಗೆ ಧ್ವನಿಯಾಗಿ ಹೋರಾಟ ಮಾಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ನಮ್ಮ ಪಕ್ಷಕ್ಕೆ ಶಕ್ತಿಯಾಗಿರುವ ಖರ್ಗೆ ಅವರನ್ನು ರಾಜ್ಯಸಭೆಗೆ ಕಳುಹಿಸಲು ಅವಕಾಶ ಮಾಡಿಕೊಟ್ಟ ನಮ್ಮ ನಾಯಕಿ ಸೋನಿಯಾ ಗಾಂಧಿ ಅವರಿಗೆ ನಮ್ಮ ಶಾಸಕಾಂಗ ಪಕ್ಷದ ನಾಯಕರ ನೇತೃತ್ವದಲ್ಲಿ ಎಲ್ಲ ಶಾಸಕರು ಅಭಿನಂದನೆ ಸಲ್ಲಿಸಲು ತಿರ್ಮಾನಿಸಿದ್ದು, ಇದನ್ನು ಅವರಿಗೆ ಕಳುಹಿಸಿಕೊಡುತ್ತೇವೆ.’

ಸೋನಿಯಾ ಗಾಂಧಿ ಅವರ ತೀರ್ಮಾನವೇ ಅಂತಿಮ:
ರಾಜ್ಯಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಬೆಂಬಲಿಸುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಈ ವಿಚಾರದಲ್ಲಿ ನಮ್ಮ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ತೆಗೆದುಕೊಳ್ಳುವ ವಿಚಾರದಲ್ಲಿ ನಾವು ಸ್ಥಳೀಯ ನಾಯಕರು ಆಕ್ಷೇಪ ಮಾಡುವುದಿಲ್ಲ. ಅವರು ನಮ್ಮ ಜತೆ ಚರ್ಚೆ ಮಾಡಿದ್ದಾರೆ. ಆದರೆ ಯಾವ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ಅವರೇ ತೀರ್ಮಾನಿಸುತ್ತಾರೆ. ಮಾಜಿ ಪ್ರಧಾನಿಯಾದವರನ್ನು ಆಯ್ಕೆ ಮಾಡುವ ಬಗ್ಗೆ ನಾನು ಮಾತನಾಡುವುದಲ್ಲ.

ಮಾಜಿ ಮುಖ್ಯಮಂತ್ರಿಗಳು ಅವರ ಅಭಿಪ್ರಾಯ ತಿಳಿಸಿದ್ದಾರೆ ಎಂದರೆ ನೀವೆ ತಿಳಿದುಕೊಳ್ಳಿ. ನಾವು ದೇಶದ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆಯೇ ಹೊರತು ವೈಯಕ್ತಿಕ ವಿಚಾರ ಬರುವುದಿಲ್ಲ. ರಾಷ್ಟ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರದ ನಾಯಕರು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕೆ ನಾವು ಬದ್ಧರಾಗಿದ್ದೇವೆ. ಅವರು ತಮ್ಮ ಟ್ವೀಟ್ ನಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಪ್ರಸ್ತಾಪಿಸಿರುವುದು ಅವರ ದೊಡ್ಡಗುಣ. ನಾನು ಹಾಗೂ ನಮ್ಮ ಶಾಸಕಾಂಗ ಪಕ್ಷದ ನಾಯಕರು ಈಗಾಗಲೇ ಹೇಳಿದ್ದೇವೆ, ನಮ್ಮ ರಾಷ್ಟ್ರದ ನಾಯಕರು ಏನು ಹೇಳ್ತಾರೋ ಅದನ್ನು ನಾವು ಪಾಲಿಸುತ್ತೇವೆ. ಇನ್ನು ಅದರ ಬಗ್ಗೆ ಚರ್ಚೆ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದ ತತ್ವ ಹಾಗೂ ಸಿದ್ಧಾಂತ ಉಳಿದುಕೊಳ್ಳುವುದು ಮುಖ್ಯ.

ನಾವು ಬಿಜೆಪಿ ಬೆಂಬಲಿಸುವ ಪ್ರಶ್ನೆ ಇಲ್ಲ:

ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು ಜಾತ್ಯಾತೀತ ಸಿದ್ದಾಂತವನ್ನು ಅನುಸರಿಸಿಕೊಂಡು ಬಂದಿದ್ದೇವೆ. ಬಿಜೆಪಿ ಆಂತರಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಬಾರದು ಎಂದು ನಮ್ಮ ಪಕ್ಷ ಈಗಾಗಲೇ ತೀರ್ಮಾನಕ್ಕೆ ಬಂದಿದೆ. ಜಾತ್ಯಾತೀತ ಪಕ್ಷಕ್ಕೆ ಪ್ರಯೋಜನವಾಗಬೇಕು, ನಾವು ಕೇವಲ ಒಬ್ಬ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಿದ್ದು, ನಾವು ಬಿಜೆಪಿ ಬೆಂಬಲಿಸುವುದಿಲ್ಲ.

ನಮ್ಮ ರಾಷ್ಟ್ರೀಯ ನಾಯಕರು ನನಗೆ ಅಗತ್ಯ ವಿಚಾರಗಳನ್ನು ತಿಳಿಸಿದ್ದಾರೆ. ಅದನ್ನು ನಾನು ಬಹಿರಂಗವಾಗಿ ಚರ್ಚಿಸುವುದಿಲ್ಲ. ನಾನು ನಮ್ಮ ಎಲ್ಲ ಶಾಸಕರಿಗೂ ನಿರ್ದೇಶನ ನೀಡಿದ್ದು, ಯಾವುದೇ ಶಾಸಕರು ಬಿಜೆಪಿ ನಾಯಕರು, ಮಂತ್ರಿಗಳ ಜತೆ ಸಂಪರ್ಕ ಇಟ್ಟುಕೊಳ್ಳಬಾರದು. ಅವರು ಅಭಿವೃದ್ಧಿ ಕಾರ್ಯದ ಹೆಸರಲ್ಲಿ ಕರೆದು ನಿಮ್ಮನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಾರೆ. ನಿಮ್ಮ ಹೆಸರು ದುರುಪಯೋಗ ಮಾಡಿಕೊಳ್ಳುತ್ತಾರೆ. ಹೀಗಾಗಿ ಯಾರೂ ಕೂಡ ಅವರ ಜತೆ ಹೋಗಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದ್ದೇನೆ. ನಮ್ಮ ರಾಷ್ಟ್ರೀಯ ನಾಯಕರು ರಾಷ್ಟ್ರೀಯ ನಾಯಕರ ಜತೆ ಮಾತನಾಡುತ್ತಾರೆ, ಅವರ ಆದೇಶ ನಾವು ಪಾಲಿಸುತ್ತೇವೆ.

ಧನ್ಯವಾದ ಅರ್ಪಿಸಿದ ಖರ್ಗೆ:
ರಾಜ್ಯಸಭೆಗೆ ನಮ್ಮನ್ನು ಆಯ್ಕೆ ಮಾಡಲು ನಿರ್ಧರಿಸಿರುವ ಎಐಸಿಸಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ಕೃತಜ್ಞತೆ ಸಲ್ಲಿಸುತ್ತೇನೆ.

ಚುನಾವಣೆ ನಡೆದರೆ ಕರ್ನಾಟಕ ವಿಧಾನಸಭೆ ಎಲ್ಲ ಶಾಸಕರು ನನಗೆ ಮತ ಹಾಕಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ನಾಯಕರು ನನ್ನ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಅಪೇಕ್ಷೆ ಉಲಿಸಿಕೊಳ್ಳುವಂತೆ ಮುಂದಿನ ದಿನಗಳಲ್ಲಿ ನಡೆದುಕೊಳ್ಳುತ್ತೇನೆ.

ಚಿರಂಜೀವಿ ಸರ್ಜಾ ನಿಧನಕ್ಕೆ‌ ಕಂಬನಿ ಮಿಡಿದ ಚಿತ್ರರಂಗ; ಸಂತಾಪ ಸೂಚಿಸಿದ ರಾಜಕೀಯ ಗಣ್ಯರು

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.ರವಿಚಂದ್ರನ್, ಶಿವರಾಜ್ ಕುಮಾರ್‌ ಸೇರಿದಂತೆ ಚಿತ್ರರಂಗದ ಗಣ್ಯರು ಅಗಲಿದ ನಟನಿಗೆ ಸಂತಾಪ ಸೂಚಿಸಿದ್ದಾರೆ.

ಇಂದು ನಮ್ಮ ಕನ್ನಡ ಚಿತ್ರರಂಗ ಒಬ್ಬ ಅದ್ಭುತ ಕಲಾ ಪುತ್ರನನ್ನು ಕಳೆದುಕೊಂಡಿದೆ. ಸದಾ ಲವಲವಿಕೆಯಿಂದ ಕನ್ನಡ ಚಿತ್ರರಂಗದ ಎಲ್ಲರಲ್ಲೂ ಚಿರಂಜೀವಿಯಾಗಿ ಉಳಿದ ಪ್ರತಿಭೆ ಈ ಚಿರಂಜೀವಿ.. ಆ ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ ಎಂದು ರವಿಚಂದ್ರನ್ ಸರ್ಜಾ ಜೊತೆಗಿನ ಫೋಟೋ‌ ಷೇರ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಶಿವರಾಜ್ ಕುಮಾರ್, ಜಗ್ಗೇಶ್, ದರ್ಶನ್,ಸುದೀಪ್,ಹಿರಿಯ ನಟಿ ಸುಮಲತಾ,ತಾರ ಸೇರಿದಂತೆ ಚಿತ್ರರಂಗದ ಗಣ್ಯರು ನಿರ್ದೇಶಕರು,‌ನಿರ್ಮಾಪಕರು,ಸಹಕಲಾವಿದರು ಚಿರಂಜೀವಿ ಸರ್ಜಾ ವ್ಯಕ್ತಿತ್ವವನ್ನು ಸ್ಮರಿಸುತ್ತಾ ಕಂಬನಿ ಮಿಡಿದಿದ್ದಾರೆ.

ಚಿತ್ರರಂಗದ ಗಣ್ಯರು ಮಾತ್ರವಲ್ಲ ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.ಯುವ, ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಹಲವಾರು ಜನಪ್ರಿಯ ಹಾಗೂ ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿರುವ ಅವರು, ಇನ್ನೂ ಪ್ರವರ್ಧಮಾನಕ್ಕೆ ಬರಬೇಕಿದ್ದ, ಉಜ್ವಲ ಭವಿಷ್ಯ ಹೊಂದಿದ್ದ ಕಲಾವಿದ ಅವರ ನಿಧನದಿಂದ ಕನ್ನಡ ಚಲನಚಿತ್ರ ರಂಗ ಓರ್ವ ಉತ್ತಮ ನಟನನ್ನು ಕಳೆದುಕೊಂಡಂತಾಗಿದೆ.
ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಯುವ ನಟ ಚಿರಂಜೀವಿ ಸರ್ಜಾ ಅವರ ಸಾವಿನ ಸುದ್ದಿ ನೋವುಂಟುಮಾಡಿದೆ. ಇನ್ನಷ್ಟು ಕಾಲ ನಟಿಸುತ್ತಾ, ಎಲ್ಲರನ್ನು ರಂಜಿಸುತ್ತಾ ನಮ್ಮ ನಡುವೆ ಈ ಹುಡುಗ ಇರಬೇಕಿತ್ತು. ಅವರ ದುಃಖತಪ್ತ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರಖ್ಯಾತ ಕಲಾ ಕುಟುಂಬದಿಂದ ಬಂದಿದ್ದ ಚಿರಂಜೀವಿ ಸರ್ಜಾ ಕುಟುಂಬ, ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದ ಸುಂದರ್ ರಾಜ್ ಕುಟುಂಬದೊಂದಿಗೆ ಬೆರೆತಿತ್ತು. ಹಾಲು ಜೇನಿನಂತೆ ಕೂಡಿದ್ದ ಈ ಕುಟುಂಬಕ್ಕೆ ಚಿರಂಜೀವಿ ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ರೈತರಿಂದ ಪಡಿತರ ಚೀಟಿ ವಾಪಸ್ ಪಡೆಯಲು ಬಿಡಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು: ರೈತರು ಬಡವರು ಯಾವ ರೈತರಿಂದಲೂ ಪಡಿತರ ಚೀಟಿ ವಾಪಸ್ ಪಡೆಯಲು ಬಿಡಲ್ಲ. ವಾಪಸ್ ಪಡೆದರೆ ರೈತರ ಪರ ನಿಂತು ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಜೂನ್ 14ರಂದು ನಿಗದಿಯಾಗಿರುವ ತಮ್ಮ ಪದಗ್ರಹಣ ನಿಮಿತ್ತ ಪ್ರತಿಜ್ಞಾ ವಿಧಿ ಕಾರ್ಯಕ್ರಮದ ಪೂರ್ವ ತಯಾರಿ ಅಂಗವಾಗಿ ಭಾನುವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳ ಜತೆ ವಿಡಿಯೋ ಕಾನ್ಫರೆನ್ಸ್ ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಧ್ಯಮಗಳ ಜತೆ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಎರಡು ಎಕರೆ ಜಮೀನು ಇರುವವರು ಕೂಡ ಟ್ರ್ಯಾಕ್ಟರ್ ಇಟ್ಟುಕೊಂಡಿರುತ್ತಾರೆ. ಅವರನ್ನು ದೊಡ್ಡ ರೈತ ಎಂದು ಪರಿಗಣಿಸಲು ಸಾಧ್ಯವಿಲ್ಲ. ರೈತರು ಬಡವರಾಗಿದ್ದು, ಅವರಿಂದ ಪಡಿತರ ಚೀಟಿ ವಾಪಸ್ ಪಡೆಯುವ ಪ್ರಶ್ನೆ ಇಲ್ಲ.

ದೇಶದಲ್ಲಿ ಆಹಾರ ಭದ್ರತೆ ಕಾನೂನು ಇದೆ. ಈಗ ಪಡಿತರ ಚೀಟಿ ಹೊಂದಿರುವ ರೈತರಿಗೆ ಅನ್ನಭಾಗ್ಯ ಯೋಜನೆ ಮೂಲಕ ಅಕ್ಕಿ ವಿತರಿಸಬೇಕು. ಕಾರ್ಡ್ ಹೊಂದಿರುವವರ ರೈತರ ಪರ ನಿಂತು ಅವರ ರಕ್ಷಣೆ ಮಾಡುವ ಕೆಲಸ ನಾವು ಮಾಡುತ್ತೇವೆ.’

ಕೋವಿಡ್ ವಿಚಾರದಲ್ಲಿ ಸರ್ಕಾರದಿಂದ ಕೇವಲ ಘೋಷಣೆ:

ಕೋವಿಡ್ ವಿಚಾರದಲ್ಲಿ ಸರ್ಕಾರ ಪ್ರಕಟಿಸಿರುವ ಪ್ಯಾಕೇಜ್ ಕೇವಲ ಘೋಷಣೆಯಾಗಿದ್ದು, ಯಾವುದೇ ರೈತ, ಕಾರ್ಮಿಕರಿಗೆ ತಲುಪಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರು ತಮ್ಮ ಹಳ್ಳಿ ಸುತ್ತಮುತ್ತಲಿನಲ್ಲಿರುವ ರೈತರು, ಕಾರ್ಮಿಕರಿಗೆ ಆನ್ ಲೈನ್ ನಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ನೇರವಾಗಿ.

14ರಂದು ಪದಗ್ರಹಣ ಕಾರ್ಯಕ್ರಮ ಕಾರ್ಯಕ್ರಮ ನಡೆಸಲು ಸರ್ಕಾರಕ್ಕೆ ಅನುಮತಿ ಕೋರಿದ್ದೇವೆ. ಕೇವಲ 150 ಜನರನ್ನು ಮಾತ್ರ ಸೇರಿ ಕೆಪಿಸಿಸಿ ಕಚೇರಿಯಲ್ಲಿ ಪದಗ್ರಹಣ ಮಾಡಲಿದ್ದು, ಆನ್ ಲೈನ್ ಮೂಲಕ ಪ್ರತಿಜ್ಞಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಹೀಗಾಗಿ ಯಾರು ಕೂಡ ಈ ಕಾರ್ಯಕ್ರಮಕ್ಕೆ ಬೇರೆ ಕಡೆಯಿಂದ ಯಾರು ಬರುವುದು ಬೇಡ. ನಿಮ್ಮ ಪಂಚಾಯಿತಿ ಹಾಗೂ ವಾರ್ಡ್ ಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ. ಈ ಕಾರ್ಯಕ್ರಮ ಎಲ್ಲ ಪಂಚಾಯಿತಿ, ವಾರ್ಡ್ ಗಳಲ್ಲಿ ಸೇರಿ 7800 ಕಡೆಗಳಲ್ಲಿ ನಡೆಸಲಾಗುತ್ತದೆ.

ಇಂದು ಈ ಕಾರ್ಯಕ್ರಮದ ಪೂರ್ವ ತಯಾರಿ ನಡೆಸಲಾಯಿತು. ಪಕ್ಷವನ್ನು ಕೆಡರ್ ಬೇಸ್ ಪಕ್ಷವಾಗಿ ಕಟ್ಟಬೇಕಿದ್ದು, ನಿಮ್ಮ ಸಹಕಾರ ಮುಖ್ಯ. ಹೀಗಾಗಿ ಪ್ರತಿ ವೀಕ್ಷಕರು ಪಂಚಾಯ್ತಿಗಳಿಗೆ ಕಡ್ಡಾಯವಾಗಿ ಪ್ರವಾಸ ಮಾಡಬೇಕು.

ಮೊದಲು ಕಂಪ್ಯೂಟರ್, ಇಂಟರ್ ನೆಟ್ ಸೌಲಭ್ಯ ಕಲ್ಪಿಸಿ:

ಆನ್ ಲೈನ್ ಶಿಕ್ಷಣ ವ್ಯವಸ್ಥೆ ಆರಂಭಿಸುವ ಮುನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರ, ಹಳ್ಳಿ ಹಳ್ಳಿ ಗಳಲ್ಲಿ ಅಂತರ್ಜಾಲ ಹಾಗೂ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿ. ಮೊದಲು ಸವಲತ್ತು ನೀಡಿ ಆಮೇಲೆ ಆನ್ ಲೈನ್ ಶಿಕ್ಷಣ ನೀಡಿ.

ಮೈಶುಗರ್ ಕಾರ್ಖಾನೆ ಮಾರುವುದರಿಂದ ಪ್ರಯೋಜನವಿಲ್ಲ:

ಮೈಶುಗರ್ ಕಾರ್ಖಾನೆಗೂ ಮಂಡ್ಯ ಜನರಿಗೂ ಉತ್ತಮ ಬಾಂಧವ್ಯವಿದೆ. ಸರ್ಕಾರ ಕಾರ್ಖಾನೆ ನಡೆಸಲು ಆಗದಿದ್ದರೆ ಅದು ಅವರ ಅಸಮರ್ಥತೆಯನ್ನು ತೋರುತ್ತದೆ. ಕಾರ್ಖಾನೆಯನ್ನು ಸರ್ಕಾರ ನಡೆಸಬೇಕು. ಇರುವ ನ್ಯೂನ್ಯತೆ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಖಾಸಗಿ ಅವರಿಗೆ ಮಾರಲು ಅವಕಾಶ ನೀಡುವುದಿಲ್ಲ. ಈ ವಿಚಾರದಲ್ಲಿ ಮಂಡ್ಯ ರೈತರ ಪರ ಹೋರಾಟ ಮಾಡುತ್ತೇವೆ.

ನಟ ಚಿರಂಜೀವಿ ಸರ್ಜಾ ಇನ್ನಿಲ್ಲ!

ಬೆಂಗಳೂರು: ನಟ ಚಿರಂಜೀವಿ ಸರ್ಜಾ(39) ಹೃದಾಯಘಾತದಿಂದ ಕೊನೆಯುಸಿರೆಳೆದಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಲಘು ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಅವರನ್ನು ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆ ಕಾಣಿಸಿಕೊಂಡು ಚಿಕಿತ್ಸೆ ಫಲಕಾರಿಯಾಗದೆ ಚಿರಂಜೀವಿ ಸರ್ಜಾ ಇಹ ಲೋಕ ತ್ಯಜಿಸಿದ್ದಾರೆ.

ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟಿದ್ದ ಚಿರಂಜೀವಿ ಸರ್ಜಾ ದಂಡಂ ದಶಗುಣಂ, ವರದ ನಾಯಕ, ಸಿಂಗ, ಚಿರು, ಅಮ್ಮ ಐ ಲವ್ ಯು ಸೇರಿ 22 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮೇ2, 2018 ರಂದು ನಟಿ ಮೇಘನ ರಾಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಚಿರಂಜೀವಿ ಸರ್ಜಾ, ಬಹು ಭಾಷಾ ನಟ ಅರ್ಜುನ್ ಸರ್ಜಾ ಸೋದರಳಿಯ.

ರೈತರ ಮೇಲೆ ಗುಂಡಿಕ್ಕಲು ಸರ್ಕಾರ ತುದಿಗಾಲ ಮೇಲೆ ನಿಂತಿದೆ: ಎಚ್ಡಿಕೆ

ಬೆಂಗಳೂರು: ಟ್ರ್ಯಾಕ್ಟರ್‌, ವಾಹನ ಇರುವ ರೈತರು ಬಿಪಿಎಲ್‌ ಕಾರ್ಡ್‌ಗಳನ್ನು ಹಿಂದಿರುಗಿಸಬೇಕು, ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಇದು ಮೂರ್ಖತನದ ಸೂಚನೆ. ರೈತರ ಮೇಲೆ ದೌರ್ಜನ್ಯ ಎಸಗುವ, ಗುಂಡಿಕ್ಕುವ, ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಈ ಸರ್ಕಾರ ತುದಿಗಾಲಿನ ಮೇಲೆ ನಿಂತಂತೆ ಕಾಣುತ್ತಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ರೈತರಿಗೆ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಲು ಹೇಳಿರುವ ಸರ್ಕಾರ ಅದಕ್ಕೆ ಟ್ರ್ಯಾಕ್ಟರ್‌, ವಾಹನಗಳನ್ನು ಮಾನದಂಡ ಮಾಡಿದೆ. ವೈಜ್ಞಾನಿಕ ಕೃಷಿ, ಟ್ರಾಕ್ಟರ್‌ ಖರೀದಿಗೆ ಪ್ರೋತ್ಸಾಹ ನೀಡುತ್ತಿರುವುದು ಸರ್ಕಾರಗಳೇ ಅಲ್ಲವೇ? ಟ್ರ್ಯಾಕ್ಟರ್‌ ಖರೀದಿಸಲು ಹೇಳಿ, ಅದನ್ನೇ ಮುಂದಿಟ್ಟು ಬಿಪಿಎಲ್‌ ಕಾರ್ಡ್‌ ಕಿತ್ತುಕೊಳ್ಳುವುದು ಮೂರ್ಖತನವಲ್ಲವೇ?

ಇಂದಿನ ಪೈಪೋಟಿ ಯುಗದಲ್ಲಿ ಕೃಷಿಕ ಯಂತ್ರ, ವಾಹನಗಳನ್ನು ಹೊಂದುವುದು ಅಗತ್ಯ. ಸರ್ಕಾರ ಅದಕ್ಕೆ ಪ್ರೋತ್ಸಾಹ ನೀಡಬೇಕು. ಬಿಪಿಎಲ್‌ ಕಾರ್ಡ್‌ ಕಿತ್ತುಕೊಳ್ಳುವ ಬೆದರಿಕೆಯೊಡ್ಡಬಾರದು. ಬಿಪಿಎಲ್‌ ಕಾರ್ಡ್‌ ಈಗ ಕೇವಲ ಪಡಿತರಕ್ಕೆ ಮಾತ್ರ ಸೀಮಿತವಲ್ಲ. ಹಲವು ಸವಲತ್ತು, ಸೌಲಭ್ಯಗಳಿಗೆ ಬಿಪಿಎಲ್‌ ಕಾರ್ಡೇ ಆಧಾರ ಎಂಬುದು ಸರ್ಕಾರದ ಗಮನದಲ್ಲಿರಲಿ.

ಅರ್ಹ ಫಲಾನುಭವಿಗಳಿಗೆ ಸವಲತ್ತು ಸಿಗಬೇಕು. ಅದಕ್ಕಾಗಿ ರೈತರ ಅನ್ನದ ತಟ್ಟೆಗೆ ಕೈ ಹಾಕಬಾರದು. ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ದೋಷಗಳಿವೆ. ಪಟ್ಟಭದ್ರ ಹಿತಾಸಕ್ತಿಗಳಿವೆ. ಅದನ್ನು ಮೊದಲು ಹೋಗಲಾಡಿಸಬೇಕು. ಸರ್ಕಾರ ಅದರತ್ತ ಗಮನ ಹರಿಸಲಿ. ಮಾತಿಗೆ ಮೊದಲು ರೈತರ ಕೊರಳು ಹಿಂಡುವ ತನ್ನ ಎಂದಿನ ಅಭ್ಯಾಸವನ್ನು ಸರ್ಕಾರ ತೊರೆಯಲಿ ಎಂದು ಟ್ವೀಟ್ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜೂನ್ 14ರಂದು ಪದಗ್ರಹಣದ ‘ಪ್ರತಿಜ್ಞೆ’ ಕಾರ್ಯಕ್ರಮಕ್ಕೆ ಅನುಮತಿ ಕೋರಿದ್ದೇನೆ: ಡಿ.ಕೆ. ಶಿವಕುಮಾರ್

ಬೆಂಗಳೂರು:ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ‘ಪ್ರತಿಜ್ಞೆ’ ಕಾರ್ಯಕ್ರಮಕ್ಕೆ ಜೂನ್ 14ರಂದು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಈ ವಿಚಾರವಾಗಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು…

ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವ ‘ಪ್ರತಿಜ್ಞೆ’ ಕಾರ್ಯಕ್ರಮವನ್ನು ಜೂನ್ 14ರಂದು ನಡೆಸಲು ಅನುಮತಿ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇನೆ.

ಜೂನ್ 8ರ ನಂತರ ಲಾಕ್ ಡೌನ್ ಸಡಿಲ ಮಾಡುವ ನಿರೀಕ್ಷೆ ಇದ್ದು, ನನ್ನ ಕಾರ್ಯಕ್ರಮಕ್ಕೆ ಅನುಮತಿ ನೀಡುವ ವಿಶ್ವಾಸವಿದೆ. ಹೀಗಾಗಿ 14ರಂದು ಕಾರ್ಯಕ್ರಮ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.

ಅವರು ನನಗೆ ಈವರೆಗೆ ಅನುಮತಿ ನಿರಾಕರಿಸಿಲ್ಲ. ಒಂದುವೇಳೆ ನಿರಾಕರಿಸಿದರೆ ಆಮೇಲೆ ಅವರ ವರ್ಚುವಲ್ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತೇನೆ.

 

 

ನಮ್ಮ ಪಕ್ಷದಿಂದ ಒಬ್ಬರೇ ಅಭ್ಯರ್ಥಿ ಸ್ಪರ್ಧೆ:

ರಾಜ್ಯಸಭೆ ಚುನಾವಣೆಗೆ ನಮ್ಮ ಪಕ್ಷದಿಂದ ಕೇವಲ ಒಬ್ಬ ಅಭ್ಯರ್ಥಿ ಕಣಕ್ಕಿಳಿಯುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಜೂನ್8ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಯಾವುದೇ ಕಾರ್ಯಕರ್ತರು ಈ ವೇಳೆ ಆಗಮಿಸಬಾರದು. ಅವರು ಗೆದ್ದ ಬಳಿಕ ಅವರ ಮನೆಗೆ ಹೋಗಿ ಅಭಿನಂದನೆ ಸಲ್ಲಿಸಿ. ನಾಮಪತ್ರ ಸಲ್ಲಿಕೆ ವೇಳೆ ಹೆಚ್ಚು ಜನ ಜಮಾಯಿಸಿ ಸಾಮಾಜಿಕ ಅಂತರ ಕಾಪಾಡಲಿಲ್ಲ ಅಂತಾ ಆರೋಪ ಬರುವಂತೆ ಮಾಡಿ ಅವರ ಹಿರಿತನಕ್ಕೆ ಅಗೌರವ ತರುವುದು ಬೇಡ. ದೂರದಿಂದಲೇ ನಿಮ್ಮ ಪ್ರೀತಿ, ಅಭಿಮಾನ ತೋರಿಸಿ ಎಂದು ಮನವಿ ಮಾಡುತ್ತೇನೆ.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತುಪಡಿಸಿ ಉಳಿದ ಮತಗಳನ್ನು ಯಾರಿಗೆ ಹಾಕಬೇಕು ಎಂಬುದನ್ನು ನಮ್ಮ ಹೈಕಮಾಂಡ್ ನಾಯಕರು ಸೂಚನೆ ನೀಡಲಿದ್ದು, ಅದನ್ನು ನಾವು ಪಾಲಿಸುತ್ತೇವೆ.

ಮೈಶುಗರ್ ಕಾರ್ಖಾನೆಯನ್ನು ಬಿಜೆಪಿ ನಾಯಕ ಹಾಗೂ ಉದ್ಯಮಿ ಮುರುಗೇಶ್ ನಿರಾಣಿ ಅವರಿಗೆ ಮಾರುವ ವಿಚಾರವಾಗಿ ಹಳೇ ಮೈಸೂರು ಭಾಗದ ನಾಯಕರಾಗಿ ನಿಮ್ಮ ಅಭಿಪ್ರಾಯ ಏನು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ನಾನು ಅಖಂಡ ಕರ್ನಾಟಕದ ನಾಯಕ. ಕೇವಲ ಹಳೇ ಮೈಸೂರು ಭಾಗದ ನಾಯಕ ಅಲ್ಲ. ಕಾರ್ಖಾನೆಯನ್ನು ಅವರದೇ ಪಕ್ಷದ ನಾಯಕರಿಗೆ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮಂಡ್ಯ ಜನರಿಗೂ ಮೈಶುಗರ್ ಕಾರ್ಖಾನೆಗೂ ಭಾವನಾತ್ಮಕ ಸಂಬಂಧವಿದೆ. ಅದು ವ್ಯಾಪಾರ ವಸ್ತುವಾಗಲು ಸಾಧ್ಯವಿಲ್ಲ. ಖಾಸಗಿಯವರು ಕಾರ್ಖಾನೆ ನಡೆಸಬಹುದು ಸರ್ಕಾರ ನಡೆಸಲು ಸಾಧ್ಯವಿಲ್ಲವೇ? ಏನೇನು ನ್ಯೂನ್ಯತೆ ಇದೆಯೋ ಅದನ್ನು ಸರಿಪಡಿಸಿಕೊಂಡರೆ ಸಾಕು. ಕಾರ್ಖಾನೆಗೆ ದೊಡ್ಡ ಪ್ರಮಾಣದ ಆಸ್ತಿ ಇದೆ. ಸರ್ಕಾರಕ್ಕೆ ಕಾರ್ಖಾನೆ ನಡೆಸಲು ಆಗದಿದ್ದರೆ ಹೇಳಲಿ, ಅದನ್ನು ಹೇಗೆ ನಡೆಸುವುದು ಅಂತಾ ನಾವು ತೋರಿಸುತ್ತೇವೆ.