ಮಲ್ಲೇಶ್ವರದ ಅಂಗನವಾಡಿ ಕಾರ್ಯಕರ್ತೆಯರಿಗೆ ಡಾ. ಅಶ್ವತ್ಥನಾರಾಯಣ ಫೌಂಡೇಶನ್‌ನಿಂದ ತರಬೇತಿ

ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರಿಗೆ ಡಾ. ಅಶ್ವತ್ಥನಾರಾಯಣ ಫೌಂಡೇಶನ್‌ ವತಿಯಿಂದ ಪ್ರಿ ನರ್ಸರಿ ಟೀಚರ್ಸ್‌ ಟ್ರೈನಿಂಗ್ ಹಾಗೂ ಮಕ್ಕಳ ನಿರ್ವಹಣೆ ಕುರಿತು ತರಬೇತಿ ನೀಡಲು ನಿರ್ಧರಿಸಲಾಗಿದೆ.

ಈ ಕುರಿತಂತೆ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ಶನಿವಾರ ಖ್ಯಾತ ಶಿಕ್ಷಣತಜ್ಞ ಡಾ. ಗುರುರಾಜ ಕರ್ಜಗಿ ಅವರ ಜತೆ ಸಮಾಲೋಚನೆ ನಡೆಸಿದರು. ತರಬೇತಿ ನೀಡಲು ಡಾ. ಕರ್ಜಗಿ ಸಮ್ಮತಿ ಸೂಚಿಸಿದ್ದಾರೆ.

ಮಾತುಕತೆ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ, “ಅಂಗನವಾಡಿ ಕಾರ್ಯಕರ್ತೆಯರ ತರಬೇತಿಗೆ ತಗಲುವ ವೆಚ್ಚವನ್ನು ಡಾ. ಅಶ್ವತ್ಥನಾರಾಯಣ ಫೌಂಡೇಶನ್‌ ಭರಿಸಲಿದೆ. ಡಾ.ಗುರುರಾಜ ಕರ್ಜಗಿ ನೇತೃತ್ವ ಸಂಸ್ಥೆ ಬೋಧನಾ ಕೌಶಲ, ಸಣ್ಣ ಮಕ್ಕಳ ನಿರ್ವಹಣೆ, ಅವರ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರದ ಕುರಿತು ತರಬೇತಿ ನೀಡಲಿದೆ. ಶೀಘ್ರದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಡಾ. ಕರ್ಜಗಿ ಅವರು ಈ ಜವಾಬ್ದಾರಿ ವಹಿಸಿಕೊಂಡಿರುವುದು ಬಹಳ ಸಂತಸದ ವಿಷಯ,”ಎಂದು ಹೇಳಿದರು.

ನ್ಯಾಯಯುತವಾಗಿ ಹಾಗೂ ಪಾರದರ್ಶಕವಾಗಿ ನಿರಾಣಿ ಗ್ರೂಪ್‌ ಗೆ ಪಾಂಡವಪುರ ಸಕ್ಕರೆ ಕಾರ್ಖಾನೆ ಗುತ್ತಿಗೆ ದೊರೆತಿದೆ: ಮುರಗೇಶ್‌ ನಿರಾಣಿ

ಬೆಂಗಳೂರು ಜೂನ್‌ 06: ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಕಾನೂನು ಬದ್ದವಾಗಿ ಹಾಗೂ ಪಾರದರ್ಶಕವಾಗಿ ನಡೆದ ಈ-ಟೆಂಡರ್‌ ನಲ್ಲಿ ಅತಿ ಹೆಚ್ಚು ಬಿಡ್‌ ಮಾಡುವ ಮೂಲಕ ನಿರಾಣಿ ಗ್ರೂಫ್‌ ಪಡೆದುಕೊಂಡಿದೆ.

ಈಗಿರುವ 3500 ಟಿ.ಸಿ.ಡಿ ಇಂದ 5000 ಟಿ.ಸಿ.ಡಿ ಗೆ ವಿಸ್ತರಣೆ ಮಾಡುವುದು ಮತ್ತು 20 ಮೆಗಾವ್ಯಾಟ್‌ ವಿದ್ಯುತ್‌ ಘಟಕ ಪ್ರಾರಂಭಿಸುವುದು, ಹಾಗೆಯೇ, ದಿನ ನಿತ್ಯ 60 ಸಾವಿರ ಲೀಟರ್‌ ಇಥೆನಾಲ್ ಉತ್ಫಾದಿಸುವ ಡಿಸ್ಟಿಲರಿಯನ್ನು ಪ್ರಾರಂಭಿಸುವ ಷರತ್ತಿಗೆ ಒಳಪಟ್ಟು ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ನಿರಾಣಿ ಗ್ರೂಪ್‌ ಗೆ ಗುತ್ತಿಗೆಯನ್ನು ನೀಡಲಾಗಿದೆ.

ಅಲ್ಲದೆ, 40 ವರ್ಷದಲ್ಲಿ 405 ಕೋಟಿ ರೂಪಾಯಿಗಳನ್ನು ಸರಕಾರಕ್ಕೆ ಕೊಡುವ ನಿಯಮಕ್ಕೆ ಒಳಪಟ್ಟು ಅತಿ ಹೆಚ್ಚು ಬಿಡ್‌ ಮಾಡಿರುವ ನಿರಾಣಿ ಗ್ರೂಫ್‌ ಗೆ ನ್ಯಾಯಬದ್ದವಾಗಿ ಗುತ್ತಿಗೆ ನೀಡಲಾಗಿದೆ. ಇಲ್ಲಿಯವರೆಗೆ 9 ಕೋ ಆಪರೇಟಿವ್‌ ಸಕ್ಕರೆ ಕಾರ್ಖಾನೆಗಳು, 30 ವರ್ಷದ ಲೀಸ್‌ ಗೆ ಕೊಟ್ಟಿರುವುದರಲ್ಲಿ ಅತಿ ಕಡಿಮೆ 40 ಕೋಟಿ ರೂಪಾಯಿಯಿಂದ 162 ಕೋಟಿ ರೂಪಾಯಿ ಅತಿ ಹೆಚ್ಚು ಬಿಡ್‌ ಗೆ ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು. ಈ 9 ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಿಡ್‌ ಅಮೌಂಟನ್ನು ನಿರಾಣಿ ಗ್ರೂಪ್‌ ನ ಬಿಡ್‌ ಗೆ ಹೋಲಿಸಿ ನೋಡಿದಾಗ ಅಂದಾಜು ಶೇಕಡಾ 250 ರಷ್ಟು ಹೆಚ್ಚಿನ ದರದಲ್ಲಿ ಬಿಡ್‌ ಮಾಡಲಾಗಿದೆ. ಇದು ಅತಿ ಹೆಚ್ಚಿನ ಬಿಡ್‌ ಎಂದು ನಮೂದಾಗಿದೆ.

ನಿರಾಣಿ ಗ್ರೂಪ್‌ ನ ಸಕ್ಕರೆ ಕಾರ್ಖಾನೆ ದೇಶದಲ್ಲಿಯೇ ಅತಿ ಹೆಚ್ಚು ಕಬ್ಬು ನುರಿಯುವಂತಹ ಮೂರು ಕಾರ್ಖಾನೆಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಕಬ್ಬು ನುರಿಸುವ ಹಾಗೂ ಭಾರತದಲ್ಲೇ ಅತಿ ಹೆಚ್ಚು ಇಥೇನಾಲ್‌ ತಯಾರಿಸುವ ಘಟಕ ಇದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿರಾಣೀ ಗ್ರೂಫ್‌ ಕೃಷಿ ಕುಟುಂಬದಿಂದ ಬಂದಿರುವ ಹಾಗೂ ರೈತರ ಜೊತೆ ಒಳ್ಳೆಯ ಸಂಪರ್ಕ, ಬ್ಯಾಂಕುಗಳ ಜೊತೆಗೆ ಯಾವುದೇ ಎನ್‌ಪಿಎ ಇಲ್ಲದೆ, ಸತತವಾಗಿ ಸಾಲ ಮರುಪಾವತಿ ಮಾಡಿರುವ ಕಂಪನಿಯಾಗಿದೆ.

ಕಬ್ಬು ಖರೀದಿಸಿ ಹಣವನ್ನು ಮರುಪಾವತಿಸುವಲ್ಲದೆ ರೈತರ ಜೊತೆಗೆ ಭಾವನಾತ್ಮಕವಾದ ಸಂಬಂಧ ಹೊಂದಿದೆ. ನಿರಂತರವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ಕೃಷಿ ಉತ್ಸವಗಳು, ಗ್ರಾಮೀಣ ಕ್ರೀಡೆಗಳು, ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಿರುದ್ಯೋಗಿ ಯುವಕ ಯುವತಿಯರಿಗೆ ತರಬೇತಿ ಕೊಟ್ಟು ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸುವಂತಹ ಸತತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೆ, 1.25 ಲಕ್ಷ ಜನರಿಗೆ ವಿಮೆ ಮಾಡಿಸುವುದರ ಮುಖಾಂತರ ಆ ಭಾಗದ ಜನರ ಜೀವನದಲ್ಲಿ ಆಶಾಕಿರಣವಾಗಿದೆ. ಹಾಗೆಯೇ, ಸುಪರ್‌ ಮಾರ್ಕೇಟನ್ನು ಸ್ಥಾಪಿಸುವ ಮೂಲಕ ಖರೀದಿ ಬೆಲೆಯಲ್ಲಿಯೇ ಜೀವನಾವಶ್ಯಕ ವಸ್ತುಗಳನ್ನು ರೈತರಿಗೆ ಹಾಗೂ ಕಾರ್ಮಿಕರಿಗೆ ನೀಡುತ್ತಿದ್ದೇವೆ.

ನಿರಾಣೀ ಗ್ರೂಪ್‌ ಕೇವಲ ಸಕ್ಕರೆ ಉತ್ಪಾದನೆ ಮಾಡುವುದಷ್ಟೇ ಅಲ್ಲದೆ, ವಿದ್ಯುತ್‌, ಇಥೆನಾಲ್‌, ಈಎನ್‌ಎ, ಆರ್‌ ಎಸ್‌ (ರೆಕ್ಟಿಫೈಡ್‌ ಸ್ಪರಿಟ್‌) ಸಿಓ2, ಸಿಎನ್‌ಜಿ, ಸ್ಯಾನಿಟೈಸರ್‌, ರಸಗೊಬ್ಬರ ಇತ್ಯಾದಿ ಉಪ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಅಲ್ಲದೆ, ಸಿಮೆಂಟ್‌, ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು, ಹೋಟೇಲ್‌ ಉದ್ಯಮ, ಆಸ್ಪತ್ರೆ, ಇತ್ಯಾದಿಗಳನ್ನು ನಡೆಸುತ್ತಿರುವ ಮೂಲಕ ಸುಮಾರು 70 ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿರುವ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಾಡಿರುವಂತೆ ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿಯೂ ಇದೇ ರೀತಿಯ ರೈತರಿಗೆ ಅನುಕೂಲ ಆಗುವಂತಹ ಎಲ್ಲಾ ಯೋಜನೆಗಳನ್ನು ಅಳವಡಿಸುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಈ ಭಾಗದ ರೈತ ಭಾಂಧವರಿಗೆ ಹೆಚ್ಚಿನ ಅನುಕೂಲತೆ ಮಾಡಿಕೊಡಲು ಸಾಧ್ಯವಿದೆ.

ಸ್ಥಳೀಯವಾಗಿ ಹಾಗೂ ನಮ್ಮದೇ ಆದ ಬ್ಯಾಂಕನ್ನು ಸ್ಥಾಪಿಸುವ ಮೂಲಕ ಆ ಭಾಗದ ರೈತರಿಗೆ ಹೆಚ್ಚಿನ ಅನುಕೂಲತೆಗಳನ್ನು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ, ಗುಣಮಟ್ಟದ ಕಬ್ಬಿನ ಬೀಜಗಳು, ಕಡಿಮೆ ದರದಲ್ಲಿ ರಸಗೊಬ್ಬರ, ಕ್ರಿಮಿನಾಶಕ, ರೈತರಿಗೆ ತರಬೇತಿ ಕ್ಯಾಂಫ್‌, ಕೊಡುವಂತಹ ಗುರಿಯನ್ನು ಹೊಂದಲಾಗಿದೆ.

*ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ತುಂಬಾ ಚೆನ್ನಾಗಿ ನಡೆಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲು ನಾನು ಪ್ರಾಮಾಣಿಕತೆಯಿಂದ ಪ್ರಯತ್ನಿಸುವೆ*. *ಮಂಡ್ಯ ಜಿಲ್ಲೆಗೆ ಇರುವ ಸಕ್ಕರೆ ನಾಡು ಎಂಬ ಹೆಗ್ಗಳಿಕೆಯನ್ನು ಇನ್ನೂ ಹೆಚ್ಚು ಎತ್ತರಕ್ಕೆ ಹೆಚ್ಚಿಸುವ ಕನಸು ನನ್ನದಾಗಿದೆ. ಎಲ್ಲರೂ ಕೂಡಿ ಬೆಳೆಯಬೇಕು ಎಂಬುದು ನನ್ನ ನಂಬಿಕೆ ಆಗಿದೆ ಎಂದು ಮುರಗೇಶ್‌ ನಿರಾಣೀಯವರು ಸ್ಪಷ್ಟಪಡಿಸಿದರು*. *ಇದೇ ವೇಳೆ ಈ ಕಾರ್ಖಾನೆ ಹೆಚ್ಚಿನ ಅಭಿವೃದ್ದಿ ಹೊಂದಲು ಹಾಗೂ ಲಾಭ ಪಡೆಯುವಂತೆ ಮಾಡಲು ಅಲ್ಲಿನ ಸ್ಥಳೀಯ ರೈತ ಭಾಂಧವರ ಸಹಕಾರ ಅಗತ್ಯ ಎಂದು ತಿಳಿಸಿದರು*.

ಮುರಗೇಶ್‌ ನಿರಾಣೀಯವರ ಬಗ್ಗೆ: ಮೂಲತಃ ಕೃಷಿ ಕುಟಂಬದಿಂದ ಬಂದಿರುವ ಇಂಜಿನೀರಿಂಗ್‌ ಹಾಗೂ ಮ್ಯಾನೇಜ್‌ಮೆಂಟ್‌ ಪದವೀಧರ. ಮೂರು ಬಾರಿ ಶಾಸಕರಾಗಿ ೫ ವರ್ಷಗಳ ಕಾಲ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಲಾಕ್ ಡೌನ್ ನಡುವೆಯೂ ರೈತರ ಸಾಲ ಮರುಪಾವತಿಗೆ ಬ್ಯಾಂಕ್ ನೋಟೀಸ್!

ಚಿತ್ರದುರ್ಗ: ಕೊರೊನಾ ಲಾಕ್ ಡೌನ್ ನಿಂದಾಗಿ ಇಡೀ ದೇಶವೇ ತತ್ತರಿಸಿದೆ, ಆರ್ಥಿಕ ವಹಿವಾಟು ಇಲ್ಲದೇ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ, ರೈತರು ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ಕಂಗಾಲಾಗಿದ್ದಾರೆ, ಇಂತಹ ಸಂದರ್ಭದಲ್ಲಿ ಅನ್ನದಾತರಿಗೆ ಬ್ಯಾಂಕ್ ಶಾಕ್ ಕೊಟ್ಟಿದೆ.. ಕೇಂದ್ರ ಸರ್ಕಾರದ ಆದೇಶವನ್ನೂ ಕಡೆಗಣಿಸಿರುವ ಬ್ಯಾಂಕ್ ರೈತರಿಗೆ ನೋಟೀಸ್ ಜಾರಿ ಮಾಡಿದ್ದು ರೈತರು ಕಂಗಾಲಾಗಿದ್ದಾರೆ..

ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಮ್ಯಾನೇಜರ್ ರೈತರಿಗೆ ಸಾಲ ಮರುಪಾವತಿ ಮಾಡುವಂತೆ ವಕೀಲರ ಮೂಲಕ ನೋಟೀಸ್ ಜಾರಿ ಮಾಡಿದ್ದು, ಒಂದು ವಾರದ ಒಳಗೆ ಸಾಲ ಮರುಪಾವತಿ ಮಾಡದಿದ್ದರೆ ನ್ಯಾಯಾಲಯದಲ್ಲಿ ದಾವೆ ಹಾಕುವ ಬೆದರಿಕೆಯೊಡ್ಡಿದ್ದಾರೆ, ಲಾಕ್ ಡೌನ್ ನಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಪರಿಣಾಮ ಆರ್.ಬಿ.ಐ ಎಲ್ಲಾ ರೀತಿಯ ಸಾಲ ಮರುಪಾತಿಗಳನ್ನು ಮೂರು ತಿಂಗಳು ಮುಂದೂಡಿದೆ, ಆದರೆ ಬ್ಯಾಂಕ್ ನವರು ಅತಿಯಾದ ಬುದ್ದಿ ಉಪಯೋಗಿಸಿ ಲಾಕ್ ಡೌನ್ ಗೂ ಹಿಂದಿನ ದಿನಾಂಕ ನಮೂದಿಸಿ ಮೂರು ದಿನಗಳ ಹಿಂದೆ ರೈತರಿಗೆ ನೋಟೀಸ್ ಕಳುಹಿಸಿದೆ, ಬ್ಯಾಂಕ್ ನೋಟೀಸ್ ಕಂಡು ಕಂಗಾಲಾಗಿರುವ ರೈತರು ನಾವು ಆತ್ಮಹತ್ಯೆ ಮಾಡಿಕೊಳ್ಳದೆ ಬೇರೆ ದಾರಿ ಏನಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ..

ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮಳೆ ಬೆಳೆ ಇಲ್ಲದೆ ರೈತರು ಸಾಲದ ಸುಳಿಗೆ ಸಿಲುಕಿದ್ರು, ಕಳೆದ ಸೆಪ್ಟೆಂಬರ್ ನಲ್ಲಿ ಒಳ್ಳೆಯ ಮಳೆ ಆಗಿದ್ರಿಂದ ರೈತರು ಒಳ್ಳೆ ಫಸಲು ಬೆಳೆದಿದ್ರು, ಆದರೆ ಕೊರೊನಾ ಮಹಾಮಾರಿ ಭೀತಿಯಿಂದ ಲಾಕ್ ಡೌನ್ ಮಾಡಿದ ಸಂದರ್ಭದಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇರಲಿಲ್ಲ, ಬೆಳೆದ ಬೆಳೆಗೂ ನಿರೀಕ್ಷಿಸಿದಷ್ಟು ಬೆಲೆ ಸಿಗದ ಕಾರಣ ರೈತರು ಮತ್ತಷ್ಟು ತೊಂದರೆಗೆ ಒಳಗಾಗಿದ್ದಾರೆ. ಹೀಗಾಗಿ ಸಾಲ ಮರುಪಾವತಿಸಲು ಸರ್ಕಾರ ನಮಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ..

ವಿದ್ಯುತ್ ತಂತಿ ಸ್ಪರ್ಶ ರೈತ ಸಾವು!

ದಾವಣಗೆರೆ: ವಿದ್ಯುತ್ ತಂತಿ ಸ್ಪರ್ಶಿಸಿ ರೈತನೊರ್ವ ಮೃತಪಟ್ಟ ಘಟನೆ, ತಾಲೂಕಿನ ಆಲೂರು ಗ್ರಾಮದ ಜಮೀನೊಂದರಲ್ಲಿ ನಡೆದಿದೆ.

ಶಿವರಾಜ್(50) ಮೃತ ರೈತನಾಗಿದ್ದು, ನಿನ್ನೆ ಆಲೂರು ಭಾಗದಲ್ಲಿ ಮಳೆ ಗಾಳಿ ಬಂದಿದ್ದರಿಂದ ಪವರ್ ಲೈನ್ ಕಿತ್ತು ಬಿದ್ದಿತ್ತು. ಬಿದ್ದ ವಿದ್ಯುತ್ ಲೈನ್ ನೋಡದೆ ರೈತ ಶಿವರಾಜ್ ಅದನ್ನು ತುಳಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತ ಬಲಿಯಾಗಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಕೊರೋನ ವಿರುದ್ಧ ಜಾಗೃತಿ ಮೂಡಿಸುವ ’ಬದಲಾಗು ನೀನು, ಬದಲಾಯಿಸು ನೀನು’ ದೃಶ್ಯರೂಪಕ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು – ಜೂನ್ 5, 2020: ಕೊರೋನ ವಿರುದ್ಧದ ಹೋರಾಟದಲ್ಲಿ ಹಲವು ವಿಶಿಷ್ಟ ಪ್ರಯತ್ನಗಳನ್ನು ನಡೆಸಿರುವ ಕರ್ನಾಟಕ ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಕೊರೋನ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡದ ಚಿತ್ರರಂಗ ಹಾಗು ಕ್ರೀಡಾ ರಂಗದ ಖ್ಯಾತನಾಮರು ಪಾಲ್ಗೊಂಡಿರುವ ದೃಶ್ಯರೂಪಕ ’ಬದಲಾಗು ನೀನು, ಬದಲಾಯಿಸು ನೀನು’ #MYHERO ವನ್ನು ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಲೋಕಾರ್ಪಣೆ ಮಾಡಿದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಈ ಪ್ರಯತ್ನಕ್ಕೆ ಮಾನ್ಯ ಮುಖ್ಯಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯವರ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ದೃಶ್ಯರೂಪಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಚಿವ ಸುಧಾಕರ್ ಅವರು, ಇದು ವೈದ್ಯಕೀಯ ಶಿಕ್ಷಣ ಇಲಾಖೆಯ ವಿನೂತನ ಪ್ರಯತ್ನವಾಗಿದೆ. ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ‘*ಬದಲಾಗು ನೀನು, ಬದಲಾಯಿಸು ನೀನು*’ ಎಂಬ ಸುಂದರ ದೃಶ್ಯರೂಪಕವೊಂದನ್ನು ರೂಪಿಸಿದ್ದೇವೆ. ಚಲನಚಿತ್ರ ಕಲಾವಿದರು, ಸಂಗೀತ ನಿರ್ದೇಶಕರು, ಕ್ರೀಡಾ ತಾರೆಯರು ದನಿಯಾಗಿರುವ ಈ ದೃಶ್ಯರೂಪಕದ ಪರಿಕಲ್ಪನೆ ನಾನು ಸ್ವಯಂ-ಕ್ವಾರಂಟೈನ್’ಗೆ ಒಳಗಾಗಿದ್ದಾಗ ನನ್ನಲ್ಲಿ ಮೂಡಿತ್ತು. ಇಡೀ ವಿಶ್ವವೇ ಕೋವಿಡ್ ಸಂಕಷ್ಟಕ್ಕೆ ಒಳಗಾಗಿರುವ ಸಮಯದಲ್ಲಿ ರಾಜ್ಯದ ಜನರ ಸೇವೆ ಮಾಡುವ ಸದವಕಾಶ ನನಗೆ ಒದಗಿ ಬಂದಿತು. ಸರ್ಕಾರ ತೆಗೆದುಕೊಳ್ಳುತ್ತಿರುವ ಅಪಾರ ಮುಂಜಾಗ್ರತಾ ಕಾರ್ಯಕ್ರಮಗಳ ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ ಕೆಲಸ ಪ್ರಮುಖವಾಗಿ ಆಗಬೇಕಿದೆ ಎಂಬ ಯೋಚನೆ ನನಗೆ ಬಂದಿತು. ಅದನ್ನು ಈಗ ಕಾರ್ಯರೂಪಕ್ಕೆ ತಂದಿದ್ದೇವೆ ಎಂದು ಹೇಳಿದರು.

ಈ ಕಾರ್ಯಕ್ಕಾಗಿ ಚಲನಚಿತ್ರ ಹಾಗೂ ಕ್ರೀಡಾ ರಂಗದ ಖ್ಯಾತನಾಮರನ್ನು ಸಂಪರ್ಕಿಸಿದಾಗ ಅವರೆಲ್ಲಾ ಕೂಡಲೆ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿ, ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಕೊರೋನ ಕುರಿತಾಗಿ ಹಲವು ಉಪಯುಕ್ತ ಸಲಹೆಗಳನ್ನು ಕೂಡ ನೀಡಿದ್ದಾರೆ. ಇದಕ್ಕಾಗಿ ಸರ್ಕಾರದ ಪರವಾಗಿ ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದರು.

ಕೊರೊನಾ ವೈರಾಣುವನ್ನು ಹಿಮ್ಮೆಟ್ಟಿಸುವ ಸಂಕಲ್ಪ ಮಾಡಲು ನಾಡಿನ ಜನತೆಗೆ ಈ ಸಾಧಕರ ಸಂದೇಶ ಉಪಯುಕ್ತವಾಗಲಿ ಎಂದು ಆಶಿಸುತ್ತೇನೆ. ಇಡೀ ವಿಶ್ವವನ್ನು ಕಾಡುತ್ತಿರುವ ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ನಾಗರಿಕರ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಕುರಿತಂತೆ ಕಲಾವಿದರು ಮನೋಜ್ಞ ಸಂದೇಶಗಳನ್ನು ನೀಡಿದ್ದಾರೆ. ಅದರಲ್ಲಿಯೂ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ನಾಗರಿಕರು, ವೈದ್ಯರು, ಆರೋಗ್ಯ ಕಾರ್ಯಕರ್ತರ ಬಗ್ಗೆ ಸರ್ಕಾರ ಹಾಗೂ ಸಮುದಾಯ ಕೃತಜ್ಞವಾಗಿದೆ ಎಂಬುದನ್ನು ಈ ದೃಶ್ಯರೂಪಕ ಅನಾವರಣಗೊಳಿಸಲಿದೆ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 100 ಎಕರೆ ಪ್ರದೇಶದಲ್ಲಿ ಸಸಿ ನೆಡುವ ಹಾಗೂ ಜಿಲ್ಲೆಯಾದ್ಯಂತ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಏಕಕಾಲಕ್ಕೆ ಚಾಲನೆ ನೀಡಿದ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ – ಜೂನ್ 5, 2020: ಜಿಲ್ಲೆಯ ಹಲವೆಡೆ ಸಾಮೂಹಿಕವಾಗಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು, ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದ್ದಾರೆ. ಕೊರೋನ ನಮಗೆ ಪರಿಸರ ಸಂರಕ್ಷಣೆ ಹಾಗೂ ನೈರ್ಮಲ್ಯದ ಪ್ರಾಮುಖ್ಯತೆಗಳನ್ನು ತೋರಿಸಿಕೊಡುತ್ತಿದೆ. ಪರಿಸರದೊಂದಿಗೆ ಸೌಹಾರ್ದತೆಯಿಂದ ಬಾಳುವುದನ್ನು ನಾವು ಮತ್ತೆ ರೂಢಿಸಿಕೊಂಡು ಆರೋಗ್ಯಪೂರ್ಣ ಪರಿಸರವನ್ನು ನಿರ್ಮಿಸಬೇಕು. ಪರಿಸರ ಸಂರಕ್ಷಣೆ ಕೇವಲ ಇಂದಿನ ಚಟುವಟಿಕೆಯಾಗಬಾರದು, ದೈನಂದಿನ ಹೊಣೆಗಾರಿಕೆಯಾಗಬೇಕು ಎಂದು ಸಚಿವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಮತ್ತು ಪರಿಸರ ಇಲಾಖೆವತಿಯಿಂದ ಜಿಲ್ಲೆಯ ಅಮಾನಿ ಗೋಪಾಲಕೃಷ್ಣ ಕೆರೆ, ರಾಷ್ಟ್ರೀಯ ಹೆದ್ದಾರಿ ಜಡಲತಿಮ್ಮನಹಳ್ಳಿ ಹಾಗೂ ಮಂಚನಬೆಲೆ ಗುಂಡು ತೋಪಿನಲ್ಲಿ ಸಸಿ ನೆಡುವ ಮೂಲಕ ಅರಣ್ಯ ನಿರ್ಮಿಸುವ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು. 100 ಎಕರೆ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯ ಎಂದ ಸಚಿವರು, ನಾವು 21ನೇ ಶತಮಾನದಲ್ಲಿ ಜೀವಿಸುತ್ತಿರುವುದು ಬಹಳ ಹೆಮ್ಮೆಯ ವಿಷಯ. ಆದರೆ, ಅಷ್ಟೇ ದುರದೃಷ್ಟಕರ ಎಂದು ಹೇಳಿದರು. ಪ್ರಕೃತಿ ಈಗಾಗಲೇ ನಮ್ಮ ಮೂಗಿಗೆ ಮಾಸ್ಕ್ ಧರಿಸುವಂತೆ ಮಾಡಿದೆ. ಇದೇ ರೀತಿ ಮುಂದುವರೆದರೆ ಆಕ್ಸಿಜನ್ ಸಿಲಿಂಡರ್ ಹೊತ್ತು ತಿರುಗುವ ಕಾಲ ದೂರವಿಲ್ಲವೆಂದು ಸಚಿವರು ಹೇಳಿದರು. ನಾವು ಇಂದು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದ ಪೀಳಿಗೆಯ ಜಗತ್ತನ್ನು ನಿರ್ಮಿಸಲಿದೆ. ಪ್ರತಿಯೊಬ್ಬರು ಪರಿಸರದ ಸಂರಕ್ಷಣೆಗಾಗಿ ತಮ್ಮ ಜವಾಬ್ದಾರಿಯನ್ನು ಅರಿತು ಮುನ್ನಡೆದರೆ ಉತ್ತಮ ಭವಿಷ್ಯ ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜ಼ಿಯಾ ತರನ್ನಮ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್, ತಾ.ಪಂ ಅಧ್ಯಕ್ಷರಾದ ರಾಮಸ್ವಾಮಿ, ಎಪಿ‌ಎಂಸಿ ಅಧ್ಯಕ್ಷರಾದ ನಾರಾಯಣಸ್ವಾಮಿ, ಮುಖಂಡರಾದ ಕೆ.ವಿ.ನಾಗರಾಜ್, ಜಿ.ಆರ್.ನಾರಾಯಣಸ್ವಾಮಿ, ಮರಳಕುಂಟೆ ಕೃಷ್ಣಮೂರ್ತಿ, ಎಂ.ಎಫ್.ಸಿ ನಾರಾಯಣಸ್ವಾಮಿ ಇನ್ನಿತರರು ಹಾಜರಿದ್ದರು.