ಅನ್ಯ ಪಕ್ಷದಿಂದ ಬರುವವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ನಿರ್ಣಯಿಸಲು ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಸಮಿತಿ ರಚನೆ: ಡಿ.ಕೆ. ಶಿವಕುಮಾರ್

ಬೆಂಗಳೂರು:ಕಾಂಗ್ರೆಸ್ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋಗಿರುವ ಅನೇಕ ನಾಯಕರು ಮತ್ತೆ ಕಾಂಗ್ರೆಸ್ ಗೆ ಮರಳಲು ಇಚ್ಛಿಸಿದ್ದಾರೆ. ಇವರನ್ನು ಸೇರಿಸಿಕೊಳ್ಳುವ ಕುರಿತು ಪರಾಮರ್ಶೆ ನಡೆಸಲು ಅಲ್ಲಂ ವಿರಭದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಈ ಸಮಿತಿ ಶಿಫಾರಸ್ಸು ಮಾಡುವ ನಾಯಕರನ್ನು ಇತರೆ ನಾಯಕರು ಹಾಗೂ ಸ್ಥಳೀಯ ಕಾರ್ಯಕರ್ತರ ಜತೆ ಚರ್ಚಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಶ್ವ ಪರಿಸರ ದಿನ ಅಂಗವಾಗಿ ಶುಕ್ರವಾರ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಕೇವಲ ಅಧಿಕಾರದ ಆಸೆಯಿಂದ ಪಕ್ಷಕ್ಕೆ ಮರಳುವವರ ಅಗತ್ಯ ನಮಗಿಲ್ಲ. ಪಕ್ಷದ ಸಿದ್ಧಾಂತ, ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು, ತಾಲೂಕು ಮಟ್ಟದಲ್ಲಿ ಕಾರ್ಯಕರ್ತರ ಜತೆ ಬೆರೆತು ಕೆಲಸ ಮಾಡಲು ಸಿದ್ಧವಿದ್ದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ. ಈ ವೇಳೆ ಅವರು ಹೇಳಿದ್ದಿಷ್ಟು…

‘ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋಗಿರುವವರುವವರಲ್ಲಿ ಅನೇಕರು ಮತ್ತೆ ಕಾಂಗ್ರೆಸ್ ಗೆ ಮರಳಲು ಇಚ್ಚಿಸಿದ್ದಾರೆ. ಅಂತಹ ನಾಯಕರನ್ನು ಏಕಪಕ್ಷೀಯ ನಿರ್ಧಾರದಿಂದ ಪಕ್ಷಕ್ಕೆ ಸೇರಿಸಿಕೊಳ್ಳಲು ನಾನು ಸಿದ್ಧವಿಲ್ಲ. ಈ ವಿಚಾರದಲ್ಲಿ ಎಲ್ಲ ನಾಯಕರು ಹಾಗೂ ಸ್ಥಳೀಯ ನಾಯಕರ ಜತೆ ಜತೆ ಚರ್ಚೆ ನಡೆಸಬೇಕಿದೆ. ಹೀಗಾಗಿ ಪಕ್ಷಕ್ಕೆ ಮರಳಲು ಇಚ್ಛಿಸುವ ನಾಯಕರನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ಸರಿಯಾದ ಪರಾಮರ್ಶೆ ನಡೆಸಲು ಮಾಜಿ ಅಧ್ಯಕ್ಷರು ಹಾಗೂ ಹಿರಿಯ ನಾಯಕರಾದ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡ ನಂತರ ಪಕ್ಷಕ್ಕೆ ಯಾವುದೇ ತೊಂದರೆಯಾಗಬಾರದು. ಪಕ್ಷ ಹಾಗೂ ಅದರ ಮೇಲಿನ ನಿಷ್ಠೆ ಪ್ರಮುಖವಾಗಿದೆ. ಕೇವಲ ಅಧಿಕಾರದ ಆಸೆಗೆ ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಇದು ಸುದೀರ್ಘ ಪರಿಣಾಮ ಬೀರುವಂತಹ ವಿಚಾರ. ಹೀಗಾಗಿ ಪಕ್ಷದ ಸಿದ್ಧಾಂತ ಒಪ್ಪಿ, ನಮ್ಮ ಹೈಕಮಾಂಡ್ ನಾಯಕತ್ವವನ್ನು ಒಪ್ಪಿ ಪಕ್ಷಕ್ಕೆ ಬರಬೇಕಿದೆ. ಈ ಸಮಿತಿ ಪರಾಮರ್ಷೆ ನಡೆಸಿದ ನೀಡುವ ಹೆಸರುಗಳನ್ನು ನಂತರ ಇತರೆ ನಾಯಕರ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.

ಬೇರೆ ಪಕ್ಷದಲ್ಲಿ ಏನಾಗುತ್ತಿದೆ ಎಂಬ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ. ನಮ್ಮ ಪಕ್ಷದ ನಾಯಕರೂ ಕೂಡ ಬೇರೆ ಪಕ್ಷದ ಆಂತರಿಕ ವಿಚಾರದ ಬಗ್ಗೆ ಹೇಳಿಕೆ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದೇನೆ. ಆದರೆ ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಜತೆ ಕೈಜೋಡಿಸಲು ಇಚ್ಛಿಸುವವರಲ್ಲಿ ಕೆಲವರು ಅರ್ಜಿ ಕೊಟ್ಟಿದ್ದು, ಈ ಅರ್ಜಿ ಸುದೀರ್ಘ ಸಮಯದಿಂದ ಹಾಗೇ ಉಳಿದಿದೆ. ಈ ಅರ್ಜಿಗಳನ್ನು ಸಮಿತಿಗೆ ನೀಡಿದ್ದೇನೆ.

ಕಾಂಗ್ರೆಸ್ ಪಕ್ಷಕ್ಕೆ ಬರುವ ನಾಯಕರು ಕೇವಲ ಮೇಲ್ಮಟ್ಟದ ನಾಯಕರ ಜತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದರೆ ಸಾಲದು. ಅವರು ಜಿಲ್ಲೆ ಹಾಗೂ ತಾಲೂಕು ಮಟ್ಟದ ನಾಯಕರು, ಕಾರ್ಯಕರ್ತರ ಜತೆ ಸೇರೆ ಕೆಲಸ ಮಾಡುವಂತಿರಬೇಕು. ಪಕ್ಷಕ್ಕೆ ಬರುವ ನಾಯಕರು ತಾಲೂಕು ಮಟ್ಟದಲ್ಲಿ ಪಕ್ಷಕ್ಕೆ ಆಸ್ತಿಯಾಗುವಂತಿರಬೇಕು. ಸ್ಥಳೀಯವಾಗಿ ಇವರು ಅನೇಕ ವರ್ಷಗಳಿಂದ ಪರಸ್ಪರ ಹೋರಾಟ ನಡೆಸಿದ್ದಾರೆ. ಹೀಗಾಗಿ ಈ ಮಟ್ಟದಲ್ಲಿ ಪಕ್ಷಕ್ಕೆ ಬರುವ ನಾಯಕರೂ ಹಾಗೂ ಕಾರ್ಯಕರ್ತರು ಮುಂದೆ ಹೊಂದಾಣಿಕೆಯಿಂದ ಕೆಲಸ ಮಾಡುವಂತಿರಬೇಕು.

ಈ ವಿಚಾರದಲ್ಲಿ ನನಗೆ ಆದ ಕೆಲವು ಅನುಭವಗಳಿವೆ. ಸ್ಥಳೀಯ ಮಟ್ಟದಲ್ಲಿ ಚರ್ಚೆ ನಡೆಸದೇ ಪಕ್ಷಕ್ಕೆ ಸೇರಿಸಿಕೊಂಡರೆ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಎದುರಾಗದಂತೆ ಸ್ಥಳೀಯ ಮಟ್ಟದಲ್ಲೂ ಕಾರ್ಯಕರ್ತರು ಹಾಗೂ ಪಕ್ಷಕ್ಕೆ ಸೇರ್ಪಡೆಗೊಳ್ಳುವ ನಾಯಕರ ನಡುವೆ ಸಮರಸ್ಯ ಸೃಷ್ಟಿಸಬೇಕಿದೆ. ಹೀಗಾಗಿ ಬೇರೆ ಪಕ್ಷದ ನಾಯಕರನ್ನು ಸೇರಿಸಿಕೊಳ್ಳುವ ಮುನ್ನ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ.’

ಹಸಿರೊಳಗೆ ನಮ್ಮ ಉಸಿರಿದೆ:

ಇಂದು ಪರಿಸರ ದಿನ, ಹಸಿರೇ ನಮ್ಮ ಉಸಿರು, ಹಸಿರೊಳಗೆ ಉಸಿರಿದೆ. ಗಿಡ ಮರಗಳನ್ನು ನಾವು ಬೆಳೆಸಿ, ಪ್ರಕೃತಿಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ನಾವು ಒಂದು ಗಿಡವನ್ನಾದರೂ ನೆಟ್ಟು ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಇಂದು ನಮ್ಮ ಕಾಂಗ್ರೆಸ್ ಭವನದಲ್ಲಿ ಸಾಂಕೇತಿಕವಾಗಿ ಗಿಡ ನೆಡುವ ಕಾರ್ಯ ನೆರವೇರಿಸುತ್ತಿದ್ದೇನೆ. ಈ ಕಾರ್ಯವನ್ನು ನಾವೆಲ್ಲರೂ ಮುಂದುವರಿಸಿಕೊಂಡು ಹೋಗಬೇಕು. ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯುವುದು ನಮ್ಮ ಜವಾಬ್ದಾರಿ. ಈ ಗಿಡ ಮರ ಇರೋದು ಜನರಿಗೆ ನೆರಳು, ಹಣ್ಣು, ಒಳ್ಳೆಯ ಗಾಳಿ ನೀಡಲು. ಇದನ್ನು ನಾವು ಗಮನದಲ್ಲಿಟ್ಟುಕೊಂಡು ಕಾಪಾಡಬೇಕು. ಈ ಸಂದರ್ಭದಲ್ಲಿ ನಾಡಿನ ಜನರಿಗೆ ಪರಿಸರ ದಿನದ ಶುಭಾಶಯ ತಿಳಿಸಲು ಬಯಸುತ್ತೇನೆ.

ರಾಜ್ಯಸಭೆ ವಿಚಾರ ಹೈಕಮಾಂಡ್ ತೀರ್ಮಾನ:

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ‘ಈ ವಿಚಾರದಲ್ಲಿ ರಾಷ್ಟ್ರೀಯ ನಾಯಕರು ರಾಷ್ಟ್ರಮಟ್ಟದಲ್ಲಿ ತೆಗೆದುಕೊಂಡಿರುವ ತೀರ್ಮಾನ. ಇವತ್ತಿನವರೆಗೂ ಈ ಬಗ್ಗೆ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ. ರಾಷ್ಟ್ರೀಯ ನಾಯಕರು ನಮಗೆ ನೀಡುವ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ.’

ದೇವೇಗೌಡರಿಗೆ ಬೆಂಬಲ, ಸೋನಿಯಾ ಗಾಂಧಿ ಅವರು ತೀರ್ಮಾನಿಸುತ್ತಾರೆ:

‘ಕುಮಾರಸ್ವಾಮಿ ಅವರು ಹಿರಿಯರಿದ್ದಾರೆ. ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಮ್ಮ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರು ನಮಗೆ ನೀಡುವ ಆದೇಶವನ್ನು ನಾವು ಪಾಲಿಸುತ್ತೇವೆ. ಇದು ಪಕ್ಷದ ಅಧ್ಯಕ್ಷನಾಗಿ ನನ್ನ ಅಭಿಪ್ರಾಯ’

ಮೆಂಟಲ್ ಗಳು ಸುಮ್ಮನೆ ಮಾತನಾಡುತ್ತಾರೆ:

ಕೆಲವು ಮೆಂಟಲ್ ಗಳು ತಮಗೆ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಚುನಾವಣೆಯನ್ನು ಕಡಲೆಪುರಿ ವ್ಯಾಪಾರ ಎಂದು ಭಾವಿಸಿ 20, 30 ಎಂದು ನಂಬರ್ ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಶಾಸಕರಿಗೆ ಅಗೌರವ ನೀಡುವುದು ಬೇಡ. ಯಾವ ಮಂತ್ರಿ ಯಾವ ಹೇಳಿಕೆ ನೀಡುತ್ತಿದ್ದಾರೆ. ಯಾವ ಹೊಟೇಲ್ ನಲ್ಲಿ ಯಾರು ಸಭೆ ನಡೆಸುತ್ತಿದ್ದಾರೆ, ನಿನ್ನೆ ರಾತ್ರಿ ಯಾರು, ಎಲ್ಲಿ, ಏನು ಸಭೆ ನಡೆಸಿದ್ದಾರೆ ಎಂಬುದನ್ನು ಗಮನಿಸುತ್ತಿದ್ದೇವೆ. ನಾವು ಇಲ್ಲಿ ಸುಮ್ಮನೆ ಕೂತಿಲ್ಲ. ನಮಗೆ ಬೇರೆಯವರ ಮನೆ ವಿಚಾರ ಬೇಡ. ನಾವುಂಟು ನಮ್ಮ ಮನೆ ಉಂಟು, ನಮ್ಮ ಶಾಸಕರುಂಟು.

ಶಾಲೆ ತೆರಿಯುವ ವಿಚಾರದಲ್ಲಿ ಸಚಿವರಿಗೆ ಅಭಿಪ್ರಾಯ ತಿಳಿಸಿದ್ದೇನೆ:

ಕೊರೋನಾ ಸಂದರ್ಭದಲ್ಲಿ ಶಾಲೆ ತೆರೆಯುವ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕರೆ ಮಾಡಿದ್ದರು, ಪತ್ರ ಬರೆದಿದ್ದಾರೆ. ನಾನು ಅವರಿಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ನೀವು ಪೋಷಕರ ಜತೆ ಚರ್ಚಿಸಿ. ಪ್ರತಿ ಪೋಷಕರಿಗೂ ಅವರ ಮಕ್ಕಳ ವಿಚಾರವಾಗಿ ಆತಂಕವಿರುತ್ತದೆ. ಶಿಕ್ಷಣ ಸಂಸ್ಥೆಗಳು ಕೂಡ ಪಾಠದ ಬಗ್ಗೆ ಜವಾಬ್ದಾರಿ ಹೊಂದಿದ್ದಾರೆ ಅವರೊಂದಿಗೆ ಕೂತು ಚರ್ಚಿಸಿ ಎಂದಿದ್ದೇನೆ. ಸರ್ಕಾರದ ಆಡಳಿತದಲ್ಲಿ ನಾನು ಹಸ್ತಕ್ಷೇಪ ಮಾಡಲು ಇಚ್ಛಿಸುವುದಿಲ್ಲ.

ಬಿಐಎಎಲ್: ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ‌ ನಿರ್ಮಾಣಕ್ಕೆ 27ರಂದು ಪೂಜೆ

ಬೆಂಗಳೂರು:ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್‌ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಇದೇ 27ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಶುಕ್ರವಾರ ಇಲ್ಲಿ ತಿಳಿಸಿದರು.

ಈ ಕುರಿತು ಇಲ್ಲಿ ನಡೆದ ಅಧಿಕಾರಿಗಳ ಸಭೆ ಬಳಿಕ ಅವರು ಮಾತನಾಡಿದರು.ಜೂನ್‌ 27ರಂದು ಕೆಂಪೇಗೌಡರ 511ನೇ ಜಯಂತಿ ಇದೆ. ಹೀಗಾಗಿ ಅಂದು ಭೂಮಿ ಪೂಜೆ ಇಟ್ಟುಕೊಂಡಿದ್ದು, ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಚರ್ಚಿಸಿದ ನಂತರ ಅಂತಿಮಗೊಳಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆ ಇರುವ ಗಾಂಧೀಜಿ ಪ್ರತಿಮೆಯನ್ನು ನಿರ್ಮಾಣ ಮಾಡಿದ ಖ್ಯಾತ ಕಲಾವಿದ ಅನಿಲ್‌ ರಾಮಸುತಾರ್‌ ಅವರಿಗೇ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೂ ಗುತ್ತಿಗೆ ನೀಡುತ್ತಿದ್ದು, ಸದ್ಯದಲ್ಲೇ ಅವರೊಟ್ಟಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ ಎಂದರು.
ಪ್ರತಿಮೆ ನಿರ್ಮಾಣಕ್ಕೆ ಅಂದಾಜು 66 ಕೋಟಿ ರೂಪಾಯಿ ಬೇಕಾಗುತ್ತದೆ. ಪ್ರತಿಮೆಯ ಮಾದರಿ ಸಿದ್ಧ ಆಗಿದ್ದು, ಅದನ್ನು ಮುಖ್ಯಮಂತ್ರಿಯವರಿಗೆ ತೋರಿಸಿದ ನಂತರ ಅಂತಿಮಗೊಳಿಸಲಾಗುವುದು. ಕಾಮಗಾರಿಯನ್ನು ಒಂದು ವರ್ಷದಲ್ಲಿ ಮುಗಿಸುವ ಉದ್ದೇಶ ಇದೆ ಎಂದು ಅವರು ಹೇಳಿದರು.

ಪ್ರತಿಮೆ ಸ್ಥಳಕ್ಕಾಗಿಯೇ ವಿಮಾನ ನಿಲ್ದಾಣದ ಮುಂದಿನ 23 ಎಕರೆ ಜಾಗವನ್ನು ಗುರುತಿಸಿದ್ದು, ಅಲ್ಲಿ ಕಾಮಗಾರಿ ಆರಂಭಿಸುವುದಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಒಪ್ಪಿಗೆಯೂ ನೀಡಿದೆ. ಪ್ರತಿಮೆ ಸುತ್ತ ವಿಶೇಷ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಒಟ್ಟಾರೆ 80 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದು, ಪ್ರಮುಖ ಆಕರ್ಷಣೆಗಳಲ್ಲಿ ಇದು ಕೂಡ ಒಂದಾಗಲಿದೆ ಎಂದರು.

ಸಮಾಧಿ ಅಭಿವೃದ್ಧಿ:
ಮಾಗಡಿ ತಾಲ್ಲೂಕಿನ ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿ ಇದ್ದು, ಅದರ ಅಭಿವೃದ್ಧಿಗೆ 41 ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಸಮಾಧಿ ಜತೆಗೆ ಅದರ ಸುತ್ತಲಿನ ಪ್ರದೇಶ ಮತ್ತು ಊರಿನ ಕೆರೆಯನ್ನು ಕೂಡ ಅಭಿವೃದ್ಧಿಪಡಿಸಲಾಗುವುದು. ಈ ಸಲುವಾಗಿ ಭೂಸ್ವಾಧೀನ ಮಾಡುತ್ತಿದ್ದು, ಇದಕ್ಕೆ ಅಂದಾಜು 17 ಕೋಟಿ ಬೇಕಾಗುತ್ತದೆ ಎಂದರು.

ಈ ಎರಡೂ ಯೋಜನೆಗಳಿಗೆ ಐಡೆಕ್‌ ಸಂಸ್ಥೆ, ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿದೆ.
ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಮೂಲಸೌಲಭ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌, ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ್‌, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ‍ವಿ.ಶ್ರಿನಿವಾಸಗೌಡ ಹಾಜರಿದ್ದರು.

ಶ್ರೀರಂಗ ಏತ ನೀರಾವರಿ ಯೋಜನೆ ವರ್ಷದೊಳಗೆ ಪೂರ್ಣ: ಡಾ.ಅಶ್ವತ್ಥನಾರಾಯಣ ಭರವಸೆ…!

ಬೆಂಗಳೂರು: ರಾಮನಗರ ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕುಗಳ 277 ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ ಶ್ರೀರಂಗ ಏತ ನೀರಾವರಿ ಯೋಜನೆಯ 324.67 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯುವುದಾಗಿ ಹೇಳಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ನಂತರದ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಶ್ರೀರಂಗ ಏತ ನೀರಾವರಿ ಯೋಜನೆಯ ಪ್ರಗತಿ ಕುರಿತಂತೆ ಶುಕ್ರವಾರ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಾ.ಅಶ್ವತ್ಥನಾರಾಯಣ, “2014ರಿಂದ ಕುಂಟುತ್ತಾ ಸಾಗಿರುವ ಈ ಯೋಜನೆಯ ಕಾಮಗಾರಿಯನ್ನು ಚುರುಕುಗೊಳಿಸಬೇಕು. ಅದಕ್ಕೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ಇರುವ ತೊಡಕುಗಳನ್ನು ತಕ್ಷಣ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟಾಜ್ಞೆ ಮಾಡಿದರು.

“ಮಾಗಡಿ ತಾಲೂಕಿನ 211 ಹಳ್ಳಿಗಳು, ಕುಣಿಗಲ್‌ ತಾಲೂಕಿನ 66 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತದೆ. ಇದರಿಂದಾಗಿ ಮಾಗಡಿಯ 66 ಕೆರೆಗಳು, ಕುಣಿಗಲ್‌ನ 17 ಕೆರೆಗಳನ್ನು ತುಂಬಿಸಲು ಹೇಮಾವತಿ ನದಿಯಿಂದ ಏತ ನೀರಾವರಿ ಮೂಲಕ ಹರಿಸುವ 277.5 ಕೋಟಿ ರೂ. ವೆಚ್ಚದ ಯೋಜನೆಯನ್ನು 2014ರಲ್ಲಿ ಆರಂಭಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಿ ಕಾಮಗಾರಿ ಪುನಾರಂಭಿಸಲಾಗುವುದು,” ಎಂದರು.

“ಭೂಸ್ವಾಧೀನ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗುವುದನ್ನು ತಪ್ಪಿಸಲು 277 ಕಿ.ಮೀ. ಉದ್ದದ ರಸ್ತೆ ಬದಿ ಗ್ರ್ಯಾವಿಟಿ ಮೈನ್ ಪೈಪ್ ಅಳವಡಿಸಲು ನಿರ್ಧರಿಸಿದ್ದರಿಂದ ಯೋಜನೆಗೆ 53.42 ಕೋಟಿ ರೂ. ಹೆಚ್ಚುವರಿ ಅನುದಾನ ಬೇಕಾಗಿದ್ದು, ಯೋಜನಾ ವೆಚ್ಚ 324.67 ಕೋಟಿ ರೂ.ಗೆ ಏರಿಕೆಯಾಗಿದೆ. ಈಗಾಗಲೇ ಪರಿಷ್ಕೃತ ಅಂದಾಜು ಸಿದ್ಧವಾಗಿದ್ದು, ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು,” ಎಂದು ತಿಳಿಸಿದರು.

ಭೂಸ್ವಾಧೀನ ತ್ವರಿತಗೊಳಿಸಲು ಸೂಚನೆ
ಯೋಜನೆಗೆ ರಾಮನಗರ ಜಿಲ್ಲೆಯಲ್ಲಿ 57 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, 14 ಎಕರೆ, 24 ಗುಂಟೆ ಜಮೀನನ್ನು ನೇರ ಖರೀದಿ ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕುಣಿಗಲ್‌ ತಾಲೂಕಿನಲ್ಲಿ 23 ಎಕರೆ ಜಮೀನು ಬೇಕಾಗಿದ್ದು, ರೈತರು ಭೂಮಿ ನೀಡಲು ಸಿದ್ಧರಿಲ್ಲ. ಹೀಗಾಗಿ ಸಾಮಾಜಿಕ ಪರಿಣಾಮ ನಿರ್ಧರಣಾ ಅಧ್ಯಯನ (ಎಸ್ಐಎ) ನಡೆಸಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಅಶ್ವತ್ಥನಾರಾಯಣ, “ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇದಕ್ಕೆ ಇರುವ ತೊಡಕುಗಳನ್ನು ತಕ್ಷಣವೇ ಬಗೆಹರಿಸಿ ಅಗತ್ಯ ಭೂಮಿ ಸ್ವಾಧೀನಪಡಿಸಿಕೊಂಡು ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಸುಮಾರು 324.67 ಕೋಟಿ ರೂ. ವೆಚ್ಚದ ಈ ಯೋಜನೆ 2014ರಲ್ಲೇ ಆರಂಭಗೊಂಡರೂ ಇದುವೆರೆಗೆ 163.38 ಕೋಟಿ ರೂ. ವೆಚ್ಚದ ಕಾಮಗಾರಿ ಮಾತ್ರ ನಡೆದಿದೆ. ಮುಂದೆ ಈ ರೀತಿಯ ವಿಳಂಬ ಆಗಬಾರದು. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಆದ್ಯತೆ ಮೇಲೆ ಈ ಕುರಿತು ಕ್ರಮ ಕೈಗೊಳ್ಳಬೇಕು” ಎಂದು ಸೂಚನೆ ನೀಡಿದರು.

ಮಾಗಡಿ ಶಾಸಕ ಮಂಜುನಾಥ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ ಸಿಂಗ್‌, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್‌ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸೆಂಟ್ರೆಲ್ ವಿವಿಯಲ್ಲೇ ಸಾಹಿತ್ಯ ಅಕಾಡೆಮಿ ಉಳಿಯಲು ಬಿಡಿ: ಡಾ. ಅಶ್ವತ್ಥನಾರಾಯಣ ಬಳಿ ಸಾಹಿತಿಗಳ ಮನವಿ

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಗೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಗ್ರಂಥಾಲಯ ಕಟ್ಟಡದಲ್ಲೇ ಸದ್ಯಕ್ಕೆ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ಡಾ. ಸಿದ್ದಲಿಂಗಯ್ಯ ನೇತೃತ್ವದ ಸಾಹಿತಿಗಳ ತಂಡ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಬಳಿ ಮನವಿ ಮಾಡಿದೆ.

ಸೆಂಟ್ರಲ್‌ ಕಾಲೇಜಿನ ಗ್ರಂಥಾಲಯ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಅನುಮತಿ ನೀಡುವ ಜತೆಗೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ 7 ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಹಿರಿಯ ಸಾಹಿತಿಗಳು ಶುಕ್ರವಾರ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಡಾ. ಅಶ್ವತ್ಥನಾರಾಯಣ, ಈ ಸಂಬಂಧ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು.

“ಕರ್ನಾಟಕ ಸರ್ಕಾರದ ಆದೇಶದಂತೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಟ್ಟಡ ನಿರ್ಮಾಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಮಲ್ಲತ್ತಹಳ್ಳಿಯಲ್ಲಿ ಒಂದು ಎಕರೆ ಜಮೀನನ್ನು ಲೀಸ್‌ ಆದಾರದ ಮೇಲೆ ನೀಡಿದೆ. ಅಕಾಡೆಮಿಯ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಒಪ್ಪಿ ಮುಂದಿನ ಆರ್ಥಿಕ ವರ್ಷದಲ್ಲಿ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಅನುದಾನ ಬಂದ ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು. ಸದ್ಯ ಗುತ್ತಿಗೆ ನಿಯಮದಂತೆ ತನ್ನ ಕಾರ್ಯವನ್ನು ಸೆಂಟ್ರಲ್‌ ಕಾಲೇಜಿನ ಗ್ರಂಥಾಲಯದ ಕಟ್ಟಡದಲ್ಲಿ ಮುಂದುವರಿಸಲು ಅನುಮತಿ ನೀಡಬೇಕು. ಜತೆಗೆ, ಅಕಾಡೆಮಿಯ ವಿರುದ್ಧ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಹಿಂತೆಗೆದುಕೊಳ್ಳುವಂತೆ ಆದೇಶ ನೀಡಿ,” ಎಂದು ಸಾಹಿತಿಗಳ ತಂಡ ಮನವಿ ಮಾಡಿದೆ.

“ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳಿಗೆ 6-7 ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಸರ್ಕಾರ ಸಮ್ಮತಿಸಿದೆ. ಅದೇ ರೀತಿ ಕನ್ನಡ ವಿಭಾಗಕ್ಕೂ 7 ಹುದ್ದೆಗಳನ್ನು ಮಂಜೂರಾತಿ ಮಾಡಿರುವುದಕ್ಕಾಗಿ ಧ್ಯನವಾದ. ಆದರೆ, ಅನ್ಯ ವಿಭಾಗಗಳಿಗೆ 7 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಕೊಟ್ಟು, ಕನ್ನಡ ವಿಭಾಗಕ್ಕೆ 2 ಅಧ್ಯಾಪಕರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡುವಂತೆ ಆದೇಶಿಸಿರುವುದು ಭಾಷೆಗೆ ಅನ್ಯಾಯ ಮಾಡಿದಂತಾಗಿದೆ. ಹಾಗಾಗಿ ಕನ್ನಡ ವಿಭಾಗಕ್ಕೆ ಬಾಕಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿ” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸಂಚಾಲಕರಾದ ಡಾ. ಸಿದ್ದಲಿಂಗಯ್ಯ, ಸಾಹಿತ್ಯ ಅಕಾಡೆಮಿಯ ಪ್ರಾಂತೀಯ ಕಾರ್ಯದರ್ಶಿ ಎಸ್.ಪಿ ಮಹಾಲಿಂಗೇಶ್ವರ, ವಿಜಯ್‌ ಶಂಕರ್‌ ಹಾಗೂ ಇನ್ನಿತರರು ಮನವಿ ಪತ್ರ ಸಲ್ಲಿಸಿದರು.

ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದಾರೆ: ಬಿ.ಸಿ ಪಾಟೀಲ್

ಕೊಪ್ಪಳ,ಜೂ. 5: ಬಿಜೆಪಿ ಸರ್ಕಾರ ರಚನೆಗೆ ಆರ್.ಶಂಕರ್, ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಅವರ ಕೊಡುಗೆಯೂ ಹೆಚ್ಚಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಕೃಷಿ ಸಚಿವ ಬಿ.ಸಿ‌.ಪಾಟೀಲ್ ಹೇಳಿದ್ದಾರೆ.

ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೊಸಕೋಟೆಯಲ್ಲಿ ಶರತಗ ಬಚ್ಚೇಗೌಡಗೆ ಸ್ಪರ್ಧಿಸುವುದು ಬೇಡ ಎಂದು ಬಿಜೆಪಿ ನಾಯಕರು ಹೇಳಿದ್ದರು.ಆದರೆ ಅವರು ಸ್ಪರ್ಧಿಸಿ ಎಂಟಿಬಿಗೆ ಅನ್ಯಾಯವಾದಂತಾಗಿದೆ ಎಂದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಸಿದ್ದರಾಮಯ್ಯರನ್ನು ಒಂದುಕಡೆ ಮುಖ್ಯಮಂತ್ರಿ ಅವರ ಮಗ ದಿ.ರಾಕೇಶ್ ಅವರನ್ನು ಮತ್ತೊಂದು ಕಡೆ ಮುಖ್ಯಮಂತ್ರಿ ಹಾಗೂ ಕೆಂಪಯ್ಯ ಅವರನ್ನು ಡಿಫ್ಯಾಕ್ಟ್ ಹೋಮ್‌ಮಿನಿಸ್ಟರ್ ಎನ್ನುತ್ತಿದ್ದರು.ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಎಲ್ಲರನ್ನು ಸರಿಯಾಗಿ ನಡೆಸಿಕೊಂಡಿದ್ದರೆ.ಸರಿಯಾಗಿ ಆಡಳಿತ ನಡೆಸಿದಿದ್ದರೆ ಕಾಂಗ್ರೆಸ್‌ಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ.ಎಲ್ಲರೂ ತಮ್ಮತಮ್ಮ ಸ್ವಾರ್ಥಕ್ಕೆ ಗೋಡೆಗಳನ್ನು ಕಟ್ಟಿಕೊಂಡು ಸರ್ಕಾರ ಕೆಡವಿದ್ದಾರೆ.ಧರ್ಮಸ್ಥಳದ ಪ್ರಕೃತಿ ಚಿಕಿತ್ಸೆಗೆ ಹೋಗಿದ್ದಾಗಲೇ ಸಿದ್ದರಾಮಯ್ಯ ಮೈತಗರಿ ಸರ್ಕಾರ ಉಳಿಯುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದರಲ್ಲ ಎಂದು ತಿರುಗೇಟು ನೀಡಿದರು.

ಕರ್ನಾಟಕದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ.ಹೊರರಾಜ್ಯದಿಂದ ಬಂದವರಿಂದ ಸೋಂಕು ಹರಡುತ್ತಿದೆಯಷ್ಟೆ.ವಿಪಕ್ಷಗಳು ಸುಕಾಸುಮ್ಮನೆ ದೂರುವುದರಲ್ಲಿ ಅರ್ಥವಿಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.