ಎಸ್ಸೆಸ್ಸೆಲ್ಸಿ ಪರೀಕ್ಷೆ; ಜಿಲ್ಲಾಡಳಿತಗಳಿಗೆ ಸವಾಲು-ಅವಕಾಶ: ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ಕಾಲಘಟ್ಟದಲ್ಲಿ ಹಾಗೂ ಉಚ್ಛ ನ್ಯಾಯಾಲಯದ ಕಣ್ಗಾವಲಿನಲ್ಲಿ ನಡೆಯತ್ತಿರುವ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಸುಗಮ ನಿರ್ವಹಣೆಯನ್ನು ಜಿಲ್ಲಾಡಳಿತಗಳು ಸವಾಲು ಮತ್ತು ಅವಕಾಶಗಳೆಂದು ಭಾವಿಸಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಪ್ರ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.

ಜೂ. 25ರಿಂದ ನಡೆಯುತ್ತಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಸುಗಮ ನಿರ್ವಹಣೆ ಹಿನ್ನೆಲೆಯಲ್ಲಿ ಗುರುವಾರ ವಿಕಾಸಸೌಧದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್‍ಪಿ, ಜಿಲ್ಲಾ ಮತ್ತು ತಾಲೂಕು ಖಜಾನೆ ಅಧಿಕಾರಿಗಳು, ಡಿಡಿಪಿಐ, ಬಿಇಒರೊಂದಿಗೆ ವಿಡಿಯೋ ಕಾನ್ಫೆರೆನ್ಸ್‍ನಲ್ಲಿ ಮಾತನಾಡಿದ ಅವರು, ತಂತಮ್ಮ ಜಿಲ್ಲೆಯ ಕೊರೋನಾ ವಾರಿಯರ್ಸ್‍ಗಳ ನೇತೃತ್ವ ವಹಿಸಿ ಕೊರೋನಾ ಎದುರಿಸಿದಂತೆ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಸಮರ್ಪಕವಾಗಿ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಕೈಗೊಳ್ಳುವಲ್ಲಿ ತಮ್ಮೆಲ್ಲರ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದರು.

ಈ ಬಾರಿಯ ಪರೀಕ್ಷೆ ಉಚ್ಛ ನ್ಯಾಯಾಲಯದ ಸ್ಪಷ್ಟ ಆದೇಶದಂತೆ ಶಿಕ್ಷಣ, ಆರೋಗ್ಯ, ಗೃಹ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ಸಮನ್ವಯದಲ್ಲಿ ನಡೆಯುತ್ತಿರುವುದರಿಂದ ಯಾವುದೇ ಒಬ್ಬ ವಿದ್ಯಾರ್ಥಿಯೂ ಯಾವುದೇ ಕಾರಣದಿಂದಲೂ ಪರೀಕ್ಷೆಯಿಂದ ವಂಚಿತವಾಗದಂತೆ ಹಾಗೂ ಪ್ರತಿ ವಿದ್ಯಾರ್ಥಿಯೂ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತೆ ಮಾಡುವಲ್ಲಿ ಜಿಲ್ಲಾಡಳಿತದ ಹೊಣೆಗಾರಿಕೆ ಈ ಬಾರಿ ಎಂದಿಗಿಂತ ಹೆಚ್ಚಾಗಿದ್ದು, ಅದಕ್ಕಾಗಿ ಸಮರೋಪಾದಿಯಲ್ಲಿ ಈಗಿನಿಂದಲೇ ಎಲ್ಲ ಪರೀಕ್ಷಾ ಪೂರ್ವ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಪರೀಕ್ಷೆ ವಿರೋಧಿಗಳು, ವದಂತಿ ಕೋರರಂತಹ ವ್ಯಕ್ತಿಗಳು ಪರೀಕ್ಷೆ ಕುರಿತಂತೆ ಮಕ್ಕಳಲ್ಲಿ ಗೊಂದಲ ಮೂಡಿಸುವ ಸಾಧ್ಯತೆಗಳಿರುವುದರಿಂದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಈ ಮೊದಲೇ ಅಂತಹ ವ್ಯಕ್ತಿಗಳನ್ನು ಗಮನಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನೂ ಸಚಿವರು ವಿವರಿಸಿ, ಪರೀಕ್ಷಾ ಕೇಂದ್ರದ ಬಳಿ ಅವರು ಸುಳಿದಾಡಿ, ಚೆನ್ನಾಗಿ ಓದಿ ಪರೀಕ್ಷೆಗೆ ಸಜ್ಜಾಗಿ ಬಂದ ಪರೀಕ್ಷಾರ್ಥಿಗಳಲ್ಲಿ ಆತ್ಮವಿಶ್ವಾಸ ಕದಡುವಂತಹ ಸಾಧ್ಯತೆಗಳಿರುವ ಕಾರಣ ಪರೀಕ್ಷಾ ಕೇಂದ್ರ ಮತ್ತು ಉತ್ತರ ಪತ್ರಿಕೆಗಳ ಸಂಗ್ರಹಣಾ ಕೇಂದ್ರಗಳನ್ನು ಚುನಾವಣಾ ಸ್ಟ್ರಾಂಗ್‍ರೂಮ್‍ಗಳಿಗೆ ಕೈಗೊಳ್ಳುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕೆಂದು ಸುರೇಶ್ ಕುಮಾರ್ ಸೂಚನೆ ನೀಡಿದರು.

ಜಿಲ್ಲಾಡಳಿತಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೂಡಲೇ ಸಹಾಯವಾಣಿ ಪ್ರಾರಂಭಿಸಿ ಈ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಈಗಾಗಲೇ ಪರೀಕ್ಷಾ ಕೇಂದ್ರದಲ್ಲಿ ಎಲ್ಲ ರೀತಿಯ ಅಂತಿಮ ಸಿದ್ಧತೆಗಳಾಗಿರುವ ಕೊನೇ ಸಂದರ್ಭದಲ್ಲಿ ಕಂಟೈನ್‍ಮೆಂಟ್ ವಲಯಗಳಾಗಿ ಘೋಷಿತವಾದರೆ ತಕ್ಷಣದ ಅನುಕೂಲಕ್ಕಾಗಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬದಲಿ ಐದು ಕೇಂದ್ರಗಳನ್ನು ಗುರುತಿಸಿ ಸಿದ್ಧವಾಗಿಟ್ಟುಕೊಳ್ಳಬೇಕು. ಮಳೆಗಾಲದಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಈಗಾಗಲೇ ಗುರುತಿಸಲಾದ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿ ಪರ್ಯಾಯ ಕೇಂದ್ರಗಳ ಅಗತ್ಯವಿದ್ದರೆ ಸಿದ್ಧಪಡಿಸಿಟ್ಟುಕೊಳ್ಳಬೇಕು. ಮಕ್ಕಳಿಗೆ ಮಳೆ ಇರುಚಲಿನಿಂದ ನೀರು ಸೋಂಕುವಂತಿದ್ದರೆ ತಕ್ಷಣವೇ ಆ ಕೊಠಡಿಗಳನ್ನು ಬದಲಿಸುವುದು, ಮಳೆಗಾಲದಲ್ಲಿ ವಿದ್ಯುತ್ ಕೈಕೊಡುವುದರಿಂದ ಪರೀಕ್ಷಾ ಕೊಠಡಿಯಲ್ಲಿ ಕತ್ತಲಾಗದಂತೆ ಅದಕ್ಕೆ ಅಗತ್ಯವಾದ ಬೆಳಕಿನ ವ್ಯವಸ್ಥೆಯನ್ನು ಶಾಲಾ ಸಂಚಿತನಿಧಿ ಬಳಸಿ ಪರ್ಯಾಯ ವ್ಯವಸ್ಥೆ ಮಾಡುವುದು, ಪರೀಕ್ಷಾ ಕೇಂದ್ರದ ಸುತ್ತ 144ನೇ ಕಲಂ ನಿಷೇಧಿತ ಪ್ರದೇಶ ಘೋಷಿಸುವುದು, ಕೆಲ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳು ಕ್ವಾರಂಟೈನ್ ಕೇಂದ್ರಗಳಾಗಿದ್ದರೆ, ಜಿಲ್ಲಾಧಿಕಾರಿಗಳು ತಕ್ಷಣವೇ ಅಂತಹ ಕೇಂದ್ರಗಳಲ್ಲಿನ ಕೊರೋನಾ ಶಂಕಿತರನ್ನು ಬೇರೆಡೆಗೆ ಸ್ಥಳಾಂತರಿಸಿ ಅವುಗಳನ್ನು ಸ್ಯಾನಿಟೈಜೇಷನ್ ಮಾಡಿ ತಕ್ಷಣವೇ ಶಿಕ್ಷಣ ಇಲಾಖೆಗೆ ವಹಿಸಬೇಕೆಂದು ಸೂಚಿಸಿದರು. ವಿಶೇಷವಾಗಿ ದಕ್ಷಿಣಕನ್ನಡ, ಯಾದಗಿರಿ, ಬೆಳಗಾವಿ ಜಿಲ್ಲೆಗಳಂತಹ ಪರೀಕ್ಷಾ ಕೇಂದ್ರಗಳಿಗೆ ಗಡಿಯಾಚೆಯಿಂದ ಬರುವ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಲು ಸಾರಿಗೆ ವ್ಯವಸ್ಥೆ ಮಾಡುವುದು, ಯಾವುದೇ ಹಳ್ಳಿಯಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ಸೌಕರ್ಯವಿಲ್ಲದ ಮಕ್ಕಳಿಗೆ ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಸಾರಿಗೆ ವ್ಯವಸ್ಥೆ ಮಾಡುವುದು ಮತ್ತು ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರು, ಭಾರತ್ ಸ್ಕೌಟ್ಸ್ ಗೈಡ್ಸ್, ಸೇವಾದಳ, ಎನ್‍ಸಿಸಿಯಂತಹ ಸಂಸ್ಥೆಗಳ ಸ್ವಯಂಸೇವಕರುಗಳು ಸೇವೆ ಒದಗಿಸುತ್ತಿದ್ದು, ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸೇಷನ್ ಮಾಡುವುದು, ಸಂಜೆ ಪರೀಕ್ಷೆ ನಂತರ ಡೆಸ್ಕ್‍ಗಳನ್ನು ಸ್ಯಾನಿಟೈಸ್ ಮಾಡುವುದು, ಪರೀಕ್ಷಾ ಕೊಠಡಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಉತ್ತಮವಾದ ಡೆಸ್ಕ್‍ಗಳನ್ನು ಅಳವಡಿಸುವುದು ಸೇರಿದಂತೆ ಪ್ರತಿಯೊಬ್ಬ ಪರೀಕ್ಷಾರ್ಥಿಯೂ ಸುರಕ್ಷತಾ ವಾತಾವರಣದಲ್ಲಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸುರೇಶ್ ಕುಮಾರ್ ಜಿಲ್ಲಾಡಳಿಗಳಿಗೆ ಸೂಚನೆ ನೀಡಿದರು.
ಈ ತನಕ ಹಾಸ್ಟೆಲ್ ವಾಸಿ ಮಕ್ಕಳು, ವಲಸೆ ಕಾರ್ಮಿಕರ ಮಕ್ಕಳು ಮತ್ತು ಗಡಿಯಾಚೆಗಿನ ಒಟ್ಟು 12,674 ಮಕ್ಕಳು ತಮ್ಮ ಸನಿಹದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಂಡಿದ್ದು, ಅವರಿಗೆ ಬದಲಿ ಹಾಲ್‍ಟಿಕೆಟ್ ನೀಡಲಾಗುತ್ತಿದ್ದು, ಅವರಿಗೆಲ್ಲ ತಮ್ಮ ಇಚ್ಛಿತ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ವಿವರ ನೀಡಿದರು.

ಪರೀಕ್ಷಾ ಸಿದ್ಧತೆ ಕುರಿತಂತೆ ಈಗಾಗಲೇ ತಾವು ರಾಜ್ಯದ 19 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ವಾರದೊಳಗೆ ಉಳಿದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇನೆ. ಈ ಬಾರಿಯ ಪರೀಕ್ಷೆ ಸಂಕ್ರಮಣ ಕಾಲಘಟ್ಟದಲ್ಲಿ ನಡೆಯಲಿರುವುದರಿಂದ ಇಡೀ ಪರೀಕ್ಷೆಗಳು ‘ಇನ್ಸಿಡೆಂಟ್ ಫ್ರೀ’/ಪ್ರಸಂಗ ರಹಿತವಾಗಿ ನಡೆಯವಂತೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಸಚಿವರು ವಿವರವಾಗಿ ತಿಳಿಸಿದರು. ಆಯಾ ಜಿಲ್ಲಾಧಿಕಾರಿಗಳು ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.

ವಿಡಿಯೋ ಕಾನ್ಫೆರೆನ್ಸ್‍ನಲ್ಲಿ ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾಶಿಇ ಆಯುಕ್ತ ಡಾ. ಕೆ.ಜಿ.ಜಗದೀಶ್, ಎಸ್‍ಎಸ್‍ಎ ಎಸ್‍ಪಿಡಿ ಡಾ. ಎಂ.ಟಿ. ರೇಜು ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಅನರ್ಹ ಮತ್ತು ನಕಲಿ ಪಡಿತರ ಚೀಟಿ ರದ್ದುಪಡಿಸಲು ಕ್ರಮ: ಮುಖ್ಯಮಂತ್ರಿ ಸೂಚನೆ

ಬೆಂಗಳೂರು, ಜೂನ್ 4-ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರು, ಟ್ರಾಕ್ಟರ್, ಇತರೆ ವಾಹನ ಹೊಂದಿರುವವರು ತಮ್ಮ ಕಾರ್ಡುಗಳನ್ನು ಕೂಡಲೇ ಹಿಂತಿರುಗಿಸಿ, ರದ್ದುಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಅರ್ಹ ಫಲಾನುಭವಿಗಳಿಗೆ ಪಡಿತರ ಸೌಲಭ್ಯ ಸಮರ್ಪಕವಾಗಿ ತಲುಪಬೇಕು. ಜೊತೆಗೆ ಅನರ್ಹರು ಈ ಸೌಲಭ್ಯ ದುರುಪಯೋಗ ಪಡಿಸಿಕೊಳ್ಳದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ಪ್ರಾರಂಭಕ್ಕೆ ಮೊದಲು 63 ಸಾವಿರ ಪಡಿತರ ಕಾರ್ಡುಗಳನ್ನು ರದ್ದುಪಡಿಸಲಾಗಿತ್ತು. ಈಗ ಮತ್ತೆ ಅನರ್ಹ ಮತ್ತು ನಕಲಿ ಪಡಿತರ ಚೀಟಿಗಳ ರದ್ದುಪಡಿಸಲು ಅಭಿಯಾನ ನಡೆಸುವಂತೆ ಸೂಚಿಸಿದರು. ರಾಜ್ಯದ ಬೊಕ್ಕಸಕ್ಕೆ ಆಗುವ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಅಭಿಯಾನ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆಹಾರ ಮತ್ತು ನಾಗರಿಕರ ಸರಬರಾಜು ನಿಗಮಕ್ಕೆ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಖರೀದಿಗೆ ರೈತರಿಗೆ ಹಣ ಪಾವತಿಸಲು ಬಾಕಿ ಇರುವ 240 ಕೋಟಿ ರೂ. ಆವರ್ತ ನಿಧಿಯಿಂದ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪಡಿತರ ವಿತರಣೆ ಮಾಡಲಾಗಿದೆ. ಶೇ. 95ರಷ್ಟು ಪಡಿತರಚೀಟಿದಾರರು ಪಡಿತರ ಪಡೆದುಕೊಂಡಿದ್ದಾರೆ.

ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆ ಅಡಿ 98,079 ಫಲಾನುಭವಿಗಳಿಗೆ 3 ಅನಿಲ ಸಿಲಿಂಡರುಗಳನ್ನು ಉಚಿತವಾಗಿ ವಿತರಿಸಲು ಕ್ರಮ ವಹಿಸಲಾಗಿದೆ.

ನಿಗಮದ 53 ಗೋದಾಮುಗಳು ಶಿಥಿಲಾವಸ್ಥೆಯಲ್ಲಿದ್ದು, 42 ಖಾಲಿ ನಿವೇಶನಗಳು ನಿಗಮದ ಒಡೆತನದಲ್ಲಿದೆ. ಈ ಸ್ಥಳಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವ ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ 95 ಗೋದಾಮುಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ..ಎಂ. ವಿಜಯಭಾಸ್ಕರ್, ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಗೃಹ ಇಲಾಖೆ ಪ್ರಗತಿ ಪರಿಶೀಲನೆ ಸಭೆ: ಇಲಾಖೆ ಬಲಪಡಿಸಲು ನೆರವು- ಮುಖ್ಯಮಂತ್ರಿ ಭರವಸೆ

ಬೆಂಗಳೂರು, ಜೂನ್ 4-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಗೃಹ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.

ಕೋವಿಡ್ 19 ನಿಯಂತ್ರಣ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಕುರಿತು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಇಲಾಖೆಯ ಸುಧಾರಣೆಗೆ ಅಗತ್ಯ ನೆರವು ನೀಡುವುದಾಗಿ ಭರವಸೆ  ನೀಡಿದರು.

ರಾಜ್ಯದಲ್ಲಿ ಪೊಲೀಸ್ ಇಲಾಖೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಬದಲಾದ ಸನ್ನಿವೇಶಗಳಲ್ಲಿ ಸಿಇಎನ್ (ಸೈಬರ್ ಕ್ರೈಂ, ಎಕನಾಮಿಕ್ ಅಫೆನ್ಸ್ ಮತ್ತು ನಾರ್ಕೊಟಿಕ್ಸ್) ಠಾಣೆಗಳನ್ನು ಬಲಪಡಿಸಲು ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಅಂತೆಯೇ ಅಪರಾಧಗಳನ್ನು ತ್ವರಿತವಾಗಿ ಪತ್ತೆ ಹಚ್ಚುವ ನಿಟ್ಟಿನಲ್ಲಿ ಫಾರೆನ್ಸಿಕ್ ಪ್ರಯೋಗಾಲಯಗಳನ್ನು ಬಲಪಡಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ತುರ್ತು ಸ್ಪಂದನೆ ವ್ಯವಸ್ಥೆ ಯೋಜನೆಯಡಿ ವಾಹನ ಖರೀದಿಗೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಮೂರು ಸಾವಿರಕ್ಕೂ ಹೆಚ್ಚು ಹೋಂ ಗಾರ್ಡ್ ಗಳನ್ನು ಸೇವೆಯಲ್ಲಿ ಮುಂದುವರಿಸಿ ವಿವಿಧ ಇಲಾಖೆಗಳಿಗೆ ನಿಯೋಜಿಸಲು ತೀರ್ಮಾನಿಸಲಾಯಿತು. ಮುಂದಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳಿಗೆ ಹೋಂ-ಗಾರ್ಡ್ ಗಳ ಸೇವೆಯನ್ನು ಒದಗಿಸುವ ಕುರಿತು ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಮುಂಗಾರು ಸಂದರ್ಭದಲ್ಲಿ 200 ಮಂದಿ ಎಸ್.ಡಿ.ಆರ್.ಎಫ್ ಸಿಬ್ಬಂದಿಗೆ ತರಬೇತಿ ಪ್ರಾರಂಭವಾಗಿದೆ. ಕೆಲವು ದಿನಗಳಲ್ಲಿ ಅವರನ್ನು ನಾಲ್ಕು ವಿಭಾಗಗಳಲ್ಲಿ ನಿಯೋಜಿಸಲು ಸಾಧ್ಯವಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಾರಾಗೃಹಗಳಲ್ಲಿ ಕೋವಿಡ್-19 ಸಂದರ್ಭದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಒಂದೇ ಒಂದು ಪ್ರಕರಣ ವರದಿಯಾಗಿಲ್ಲ. ಸುಪ್ರೀಂ ಕೋರ್ಟಿನ ಸೂರ್ಚಿ ಅನ್ವಯ 5005 ಮಂದಿಯನ್ನು ಜಾಮೀನಿನ ಮೇಲೆ ಹಾಗೂ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಕಾರಾಗೃಹಗಳಲ್ಲಿ ಬಂಧಿಗಳ ದಟ್ಟಣೆಯನ್ನು ಶೇ. 110 ರಿಂದ ಶೇ. 95 ಕ್ಕೆ ಇಳಿಸಲಾಗಿದೆ.

ಗೃಹ ಇಲಾಖೆಯಡಿ ಬರುವ ಎಲ್ಲ ಇಲಾಖೆಗಳ ವಿವಿಧ ಮೂಲ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಸ್ತುಸ್ಥಿತಿ ಆಧರಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ರಾಜ್ಯದಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಬೃಹತ್ ಮೊತ್ತದ ಅನುದಾನವನ್ನು ಬ್ಯಾಂಕಿನಲ್ಲಿ ಠೇವಣಿ ಇಡುವ ಸಂದರ್ಭದಲ್ಲಿ ಯಾವುದೇ ರೀತಿಯ ದುರುಪಯೋಗವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ದುರುಪಯೋಗಗೊಂಡ ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು  ಸೂಚಿಸಿದರು.

ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರಾದ ಪ್ರವೀಣ್ ಸೂದ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

`ದಲಿತ` ಪದ ಬಳಸದಂತೆ ಆದೇಶ : ಗೋವಿಂದ ಎಂ ಕಾರಜೋಳ

File photo:

ಬೆಂಗಳೂರು. ಜೂ.4: ಕೇಂದ್ರ ಗೃಹ ಸಚಿವಾಲಯ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಆಡಳಿತ ಭಾಷೆ, ಪತ್ರವ್ಯವಹಾರ, ಪ್ರಮಾಣ ಪತ್ರಗಳಲ್ಲಿ “ದಲಿತ’’ ಎನ್ನುವ ಪದವನ್ನು ಬಳಸದಂತೆ ಸಮಾಜ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿದೆ ಎಂದು ಉಪಮುಖ್ಯಮಂತ್ರಿಯವರಾದ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.

ಹರಿಜನ ಮತ್ತು ಗಿರಿಜನ ಎನ್ನುವ ಪದವನ್ನು ಬಳಕೆ ಮಾಡಬಾರದು. ಆಂಗ್ಲ ಭಾಷೆಯಲ್ಲಿ ಎಸ್‍ಸಿ/ ಎಸ್‍ಟಿ ಎಂದು ನಮೂದಿಸಬಹುದಾಗಿದ್ದು, ಇತರೇ ಭಾಷೆಗಳಲ್ಲಿ ಸೂಕ್ತ ಭಾಷಾಂತರಗೊಳಿಸಿದ ಪದವನ್ನು ಬಳಸಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಎಂದು ನಮೂದಿಸಬಹುದಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಾರಿಗೆ ಇಲಾಖೆಯಿಂದ ಬಸ್ ಸೌಲಭ್ಯ-ಸುರೇಶ್‍ಕುಮಾರ್

ಬೆಂಗಳೂರು: ಇದೇ ಮೊದಲ ಬಾರಿ ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತಡವಾಗಿ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ ಮತ್ತು ಸಮರ್ಪಕ ನಿರ್ವಹಣೆಗೆ ವಿಶೇಷವಾಗಿ ಸಾರಿಗೆ ಇಲಾಖೆಯ ಹೆಚ್ಚಿನ ಸಹಾಯ-ಸಹಕಾರಗಳೊಂದಿಗೆ ಶಿಕ್ಷಣ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಜೂ. 25ರಿಂದ ನಡೆಯುತ್ತಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಸುಗಮ ನಿರ್ವಹಣೆ ಹಿನ್ನೆಲೆಯಲ್ಲಿ ಮಕ್ಕಳಿಗೆ ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಸುಲಲಿತ ಪ್ರಯಾಣ ವ್ಯವಸ್ಥೆ ಸಂಬಂಧÀದಲ್ಲಿ ವಿಧಾನಸೌಧದಲ್ಲಿ ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ್ ಎಸ್. ಸವದಿಯವರ ಅಧ್ಯಕ್ಷತೆಯಲ್ಲಿ ಸಾರಿಗೆ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರ ಸಭೆಯಲ್ಲಿ ಮಾತನಾಡಿದ ಅವರು, ನಾಡಿನ ಮಕ್ಕಳ ಹಿತದೃಷ್ಟಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಬೇಕೆನ್ನುವುದನ್ನು ರಾಜ್ಯದ ಘನ ಉಚ್ಛ ನ್ಯಾಯಾಲಯವೂ ಪುರಸ್ಕರಿಸಿದ್ದು, ಯಾವುದೇ ದೃಷ್ಟಿಯಿಂದಲೂ ಯಾವೊಬ್ಬ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತವಾಗಬಾರದೆಂದು ಸೂಚಿಸಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಪರ್ಕದ ತೊಂದರೆಯಿಂದ ಪರೀಕ್ಷೆಗೆ ಮಕ್ಕಳು ಗೈರುಹಾಜರಾಗದಂತೆ ನೋಡಿಕೊಳ್ಳಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ಈಗಾಗಲೇ ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದು, ಇಲಾಖೆಯ ವಾಹನಗಳು, ಆಯಾ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಗಳ ವಾಹನಗಳನ್ನು ಇಲಾಖೆ ಪಡೆದುಕೊಂಡಿದೆ. ಪೋಷಕರ ವಾಹನಗಳಲ್ಲಿ ಬರುವ ಮಕ್ಕಳು ಹಾಗೂ ನಿಗದಿತ ಮಾರ್ಗದ ಬಸ್‍ಗಳ ಹೊರತಾಗಿ ಅಗತ್ಯವಿರುವ ಕಡೆಗಳಲ್ಲಿ ಸಾರಿಗೆ ಸಂಸ್ಥೆಯ ವಾಹನಗಳನ್ನು ನೀಡಲು ಸಾರಿಗೆ ಇಲಾಖೆ ಸಹಕರಿಸಬೇಕೆಂದು ಸುರೇಶ್ ಕುಮಾರ್ ಕೋರಿದರು. ಹಾಗೆಯೇ ನಿಗದಿತ ಮಾರ್ಗಗಳ ಬಸ್‍ಗಳಲ್ಲಿ ಸಂಚರಿಸುವ ವಾಹನಗಳಲ್ಲಿ ಸಂಚರಿಸುವ ಮಕ್ಕಳಿಗೆ ಅವರ ಶಾಲಾ ಗುರುತುಪತ್ರ ಇಲ್ಲವೇ ಪರೀಕ್ಷೆಯ ಹಾಲ್‍ಟಿಕೆಟ್ ಆಧಾರದಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕೆಂದೂ ಅವರು ಮನವಿ ಮಾಡಿದರು. ಅದೇ ರೀತಿ ಇದೇ 18ರಂದು ನಡೆಯುವ ಪಿಯುಸಿ ಇಂಗ್ಲಿಷ್ ಪರೀಕ್ಷೆಯ ದಿನವೂ ಅಗತ್ಯವಿರುವ ಸಾರಿಗೆ ಸೌಲಭ್ಯ ಒದಗಿಸಬೇಕೆಂದು ಸಚಿವರು ಕೋರಿದರು.

ಸಾರಿಗೆ ಇಲಾಖೆಯಿಂದ ಬಸ್ ಸೌಲಭ್ಯ: ಲಕ್ಷ್ಮಣ್ ಸವದಿ:

ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮಾತನಾಡಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವುದು ಶಿಕ್ಷಣ ಇಲಾಖೆ ಜವಾಬ್ದಾರಿಯಾಗಿದ್ದರೂ ಈ ಬಾರಿಯ ಪರೀಕ್ಷೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಿದೆ ಎಂದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ತಡವಾಗಿ ನಡೆಯುತ್ತಿರಬಹುದು. ಆದರೆ ರಾಜ್ಯದ 8.5 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಯಾವುದೇ ರೀತಿಯಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಮಾಡುವ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದಲೂ ಶಾಲಾ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೇತೃತ್ವದಲ್ಲಿ ಇಡೀ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳನ್ನು ಗಮನಿಸಿದ್ದೇನೆ. ಇದು ನಿಜಕ್ಕೂ ಅತ್ಯಂತ ಶ್ಲಾಘನೀಯ ಕಾರ್ಯವಾಗಿದ್ದು, ಈ ಬಾರಿಯ ಪರೀಕ್ಷೆಗೆ ಮತ್ತು ಯಾವೊಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ಸಾರಿಗೆ ಇಲಾಖೆ ಗಮನ ಹರಿಸಲಿದೆ ಎಂದು ಡಿಸಿಎಂ ಹೇಳಿದರು.
ಘನ ಉಚ್ಛ ನ್ಯಾಯಾಲಯವು ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವುದನ್ನು ಪುರಸ್ಕರಿಸಿರುವುದರೊಂದಿಗೆ, ಪರೀಕ್ಷೆಯನ್ನು ಮಕ್ಕಳ ಆರೋಗ್ಯ, ರಕ್ಷಣೆ, ಸಾರಿಗೆ, ಸಾಗಣೆ ಸೇರಿದಂತೆ ಯಾವುದೇ ರೀತಿಯಲ್ಲಿ ತೊಂದರೆಯಾದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಆದೇಶ ಮಾಡಿರುವುದರಿಂದ ಇದರಲ್ಲಿ ಸಾರಿಗೆ ಇಲಾಖೆಯ ಜವಾಬ್ದಾರಿಯೂ ಹಿರಿದಾಗಿದ್ದು, ಮಕ್ಕಳು ಪರೀಕ್ಷೆಗೆ ಹಾಜರಾಗುವಂತೆ ಸಾರಿಗೆ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಲಕ್ಷ್ಮಣ್ ಸವದಿ ಹೇಳಿದರು. ಹಾಗೆಯೇ ಈ ಕುರಿತು ಇಲಾಖೆಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆದೇಶ ಹೊರಡಿಸಬೇಕು ಮತ್ತು ಪರೀಕ್ಷೆ ಕುರಿತು ಹೆಚ್ಚಿನ ಆಸ್ಥೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾಗೆಯೇ ಗಡಿ ರಾಜ್ಯದಿಂದ ಬರುವ ಮಕ್ಕಳು ಪರೀಕ್ಷೆಗೆ ಬಂದು ಹೋಗಲು ಅನುವಾಗುವಂತೆ ಗಡಿ ಭಾಗದಿಂದ ಪರೀಕ್ಷಾ ಕೇಂದ್ರದವರೆಗೆ ಬಸ್ ಸೌಲಭ್ಯದ ಅಗತ್ಯವಿದ್ದರೆ ಅದನ್ನೂ ಪೂರೈಸಲಾಗುವುದು ಹಾಗೆಯೇ ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಲಿದೆ ಎಂದು ಅವರು ಅಭಯ ನೀಡಿದರು. ಸಾರಿಗೆ ಇಲಾಖೆಯೂ ಸಹ ಕೋವಿಡ್ ನಂತರದ ಸಾಮಾಜಿಕ ಸನ್ನಿವೇಶದಲ್ಲಿ ತೀವ್ರ ಸಂಕಷ್ಟಕ್ಕೀಡಾಗಿದ್ದು, ಇಂತಹ ಸಂದರ್ಭದಲ್ಲಿ ಸಕ್ರಿಯವಾಗಿ ಕೈಜೋಡಿಸುವಲ್ಲಿ ಶಿಕ್ಷಣ ಇಲಾಖೆಯ ಸಹಕಾರವನ್ನು ಡಿಸಿಎಂ ಕೋರಿದರು.

ಸಭೆಯಲ್ಲಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಸಾರಿಗೆ ಆಯುಕ್ತ ಎನ್. ಶಿವಕುಮಾರ್, ಕೆಎಸ್‍ಆರ್‍ಟಿಸಿ ಎಂ.ಡಿ. ಶಿವಯೋಗಿ ಕಳಸದ್, ಬಿಎಂಟಿಸಿ ಎಂ.ಡಿ. ಶಿಖಾ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾಶಿಇ ಆಯುಕ್ತ ಡಾ. ಕೆ.ಜಿ.ಜಗದೀಶ್, ಪಿಯು ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ, ಸಾರಿಗೆ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತ್ರಿವಳಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಆರೋಪಿಗಳು ಅಂದರ್

ಚಾಮರಾಜನಗರ: ಜನರನ್ನು ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣವನ್ನು ಪೋಲೀಸರು ಒಂದು ವಾರದಲ್ಲಿಯೇ ಭೇದಿಸಿ 15 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಹಣಕಾಸು ವಿಚಾರದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣವನ್ನು ಪೋಲೀಸರು ಚಾಲೆಂಜಾಗಿ ತೆಗೆದುಕೊಂಡು 18 ಆರೋಪಿಗಳನ್ನು ಕಂಡು ಹಿಡಿದು 15 ಆರೋಪಿಗಳನ್ನು ಬಂಧಿಸಿದ್ದಾರೆ.
ಹಣಕಾಸು ವಿಚಾರದಲ್ಲಿ ಮೇ26 ರಂದು ರಾತ್ರಿ 8.30 ರಲ್ಲಿ ನಡೆದ ಪ್ರಕರಣದಲ್ಲಿ ಜಕಾವುಲ್ಲ, ಇದ್ರೀಶ, ಕೈಸರ್ ಕೊಲೆಯಾಗಿದ್ರು.

ಪ್ರಕರಣದ ಸಂಬಂದ ಅನ್ಸು, ಅಸ್ಲಂಪಾಷಾ, ಅಕ್ರಂಪಾಷಾ, ಅನೀಶ್ ಪಾಷಾ, ಜಮೀರ್, ಮನ್ಸೂರ್, ಇನಾಯತ್, ಅನ್ವರ್ ಪಾಷಾ, ಏಜಿಯಸ್ ಪಾಷಾ, ಮುದಾಸಿರ್, ಫಾರುಕ್, ಸುಹೇಲ್ ಪಾಷಾ, ಇದಿಯಾಸ್, ಅಲ್ತಾಫ್, ಮುಜಾಮಿಲ್, ಅಮ್ಜದ್ ಪಾಷಾ ಎಂಬ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.

ಚಾಮರಾಜನಗರದಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದಕುಮಾರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತ್ರಿವಳಿ ಕೊಲೆ ಪ್ರಕರಣವನ್ನು ಭೇದಿಸಲು ಪೋಲೀಸರು ಹಗಲು ರಾತ್ರಿ ಶ್ರಮಿಸಿದ್ದಾರೆ ಘಟನೆಗ ಸಂಬಂಧಿಸದಂತೆ ಒಟ್ಟು 18 ಆರೋಪಿಗಳನ್ನು ಕಂಡು ಹಿಡಿದು ಇದೀಗ 15 ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ತ್ರಿವಳಿ ಪ್ರಕರಣ ಭೇದಿಸಲು ಡಿವೈಎಸ್ಪಿಗಳ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿತ್ತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಲಾಗಿತ್ತು ಎಂದು ತಿಳಿಸಿದ್ರು.