ಬಿಲ್ ಕಲೆಕ್ಟರ್ ಅನುಮಾನಾಸ್ಪದ ಸಾವು!

ಚಾಮರಾಜನಗರ: ಆಶಾ ಕಾರ್ಯಕರ್ತೆಯೊಬ್ಬರ ಮನೆ ಮುಂದೆ ಬಿಲ್ ಕಲೆಕ್ಟರ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಬಸವರಾಜು(38) ಎಂಬುವವೆಉ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ರಾತ್ರಿ ಬಸವರಾಜು ಯಾರದೋ ಮೊಬೈಲ್ ಕರೆ ಬಂತು ಎಂದು ಹೇಳಿ ಹೋದವರು ಬೆಳಿಗ್ಗೆ ಅದೇ ಗ್ರಾಮದ ಆಶಾ ಕಾರ್ಯಕರ್ತೆ ಶಾರದಾ ಎಂಬುವವರ ಮನೆಯ ಮುಂದೆ ಶವವಾಗಿ ಬಿದ್ದಿದ್ದಾರೆ. ಮೃತ ಬಸವರಾಜು ಬಳಸುತ್ತಿದ್ದ ಬೈಕ್ ಮಾತ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂದೆ ನಿಂತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಸವರಾಜು ಅವರು ಕೋವಿಡ್ – 19 ಹಿನ್ನೆಲೆಯಲ್ಲಿ ಹರದನಹಳ್ಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದರು. ಮೃತ ವ್ಯಕ್ತಿಗೆ ಪತ್ನಿ ಒಂದೂವರೆ ವರ್ಷದ ಗಂಡು ಮಗು ಇದ್ದು ತಾಯಿಯ ಆರೋಗ್ಯ ಸ್ಥಿತಿ ಸಹ ಸರಿ ಇಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನೀಲ್ ಭೇಟಿ ನೀಡಿ‌ ಪರಿಶೀಲನೆ ನಡೆಸಿ ಕೇಸು ದಾಖಲಿಸಿದ್ದಾರೆ.

ಬೆಂಗಳೂರು- ಮಾಗಡಿ ನಾಲ್ಕುಪಥದ ರಸ್ತೆ ಕಾಮಗಾರಿಗೆ ಮುಂದಿನ ತಿಂಗಳು ಚಾಲನೆ

ಬೆಂಗಳೂರು:ರಾಜಧಾನಿ ಬೆಂಗಳೂರಿನಿಂದ (ನೈಸ್ರಸ್ತೆಯಿಂದ) ಮಾಗಡಿ ಪಟ್ಟಣದವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ ಇನ್ನೊಂದು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಇಲ್ಲಿ ತಿಳಿಸಿದರು.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಕೆ-ಶಿಫ್) ಮುಖ್ಯ ಯೋಜನಾಧಿಕಾರಿ ಕೆ.ಎಸ್.ಕೃಷ್ಣಾರೆಡ್ಡಿ, ಮುಖ್ಯ ಎಂಜಿನಿಯರ್ಸುರೇಶ ಬಾಬು ಅವರ ಜತೆ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಯೋಜನೆಯ ಪ್ರಗತಿ ಪರಿಶೀಲಿಸಿದ ನಂತರ ಉಪ ಮುಖ್ಯಮಂತ್ರಿ ಮಾತನಾಡಿದರು.

ಅಂದಾಜು 1036 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ 170 ಎಕರೆ ಭೂಮಿಯನ್ನು ಖರೀದಿ ಮಾಡಿದ್ದು, ಶೇ 90ರಷ್ಟು ಭೂಮಿಯನ್ನು ಹಸ್ತಾಂತರ ಮಾಡಲಾಗಿದೆ. ಆದಷ್ಟು ಬೇಗ ಉಳಿದ ಜಮೀನನ್ನೂ ಕೊಟ್ಟು, ಕಾಮಗಾರಿ ಆರಂಭಿಸಬೇಕು ಎಂದು ಉಪ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.

ತಾಂತ್ರಿಕ ಕಾರಣಗಳಿಂದಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು. ವಾಹನ ದಟ್ಟಣೆ ಹೆಚ್ಚು ಇರುವ ಕಾರಣ ಅಪಘಾತಗಳು ಹೆಚ್ಚಾಗುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭಿಸಬೇಕು. ನಾಡಪ್ರಭು ಕೆಂಪೇಗೌಡರ ಸಮಾಧಿ ಮಾಗಡಿ ತಾಲ್ಲೂಕಿನಲ್ಲಿದ್ದು, ಅದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಈ ಹೆದ್ದಾರಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಇದೇ ರಸ್ತೆ ಹುಲಿಯೂರುದುರ್ಗದ ಮೂಲಕ ರಂಗನಾಥಪುರ ಹಾಗೂ ಸೋಮವಾರಪೇಟೆಗೂ ಸಂಪರ್ಕ ಕಲ್ಪಿಸಲಿದೆ. ಇದು ಒಂದು ರೀತಿ ಪ್ರವಾಸಿ ತಾಣಗಳ ಸಂಪರ್ಕ ಹೆದ್ದಾರಿಯಾಗಿ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ಬೆಳಗಾವಿ, ಮಂಗಳೂರಿನಲ್ಲಿ ಚಿಪ್‌ ಘಟಕ ಸ್ಥಾಪಿಸಿ; ಇಂಟೆಲ್‌ಗೆ ಡಾ.ಅಶ್ವತ್ಥನಾರಾಯಣ ಆಹ್ವಾನ

ಬೆಂಗಳೂರು: ಬೆಳಗಾವಿ, ಮಂಗಳೂರಿನಲ್ಲಿ ಚಿಪ್ ಉತ್ಪಾದನಾ ಘಟಕ ಸ್ಥಾಪಿಸುವುದಾದರೆ ಸರ್ಕಾರದಿಂದ ಎಲ್ಲ ಅಗತ್ಯ ಸಹಕಾರ ನೀಡಲು ಸಿದ್ಧ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ, ಇಂಟೆಲ್‌ ಸಂಸ್ಥೆಗೆ ಭರವಸೆ ನೀಡಿದ್ದಾರೆ.

ಇಂಟೆಲ್‌ ಭಾರತದ ಮುಖ್ಯಸ್ಥೆ ನಿವೃತ್ತಿ ರಾಯ್‌ ಹಾಗೂ ಸಂಸ್ಥೆಯ ಅಧಿಕಾರಿಗಳೊಂದಿಗೆ ಬುಧವಾರ ವೀಡಿಯೋ ಕಾನ್ಫರೆನ್ಸ್‌ ನಡೆಸಿದ ಬಳಿಕ ಡಾ. ಅಶ್ವತ್ಥನಾರಾಯಣ ಮಾತನಾಡಿದರು.

ವೀಡಿಯೋ ಕಾನ್ಫರೆನ್ಸ್‌ಗೂ ಮೊದಲು ಅಶ್ವತ್ಥನಾರಾಯಣ ಅವರನ್ನು ಭೇಟಿಯಾದ ಇಂಟೆಲ್‌ ಇಂಡಿಯಾ ಬಿಸಿನೆಸ್‌ ಆಪರೇಷನ್‌ನ ನಿರ್ದೇಶಕ ಮಾನಸ್‌‌ ದಾಸ್‌ ಅವರು ಒಂದು ಕೋಟಿ ರೂ. ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು.

“ಮಂಗಳೂರಿನಲ್ಲೇ ಬಂದರು ಇದೆ, ಬೆಳಗಾವಿಗೆ ಗೋವಾ ಬಂದರು ಸಮೀಪದಲ್ಲಿದೆ. ಈ ಎರಡೂ ಕಡೆಗಳಲ್ಲಿ ಉತ್ಪಾದನಾ ಘಟಕ ಸ್ಥಾಪನೆಗೆ ಅಗತ್ಯ ಸ್ಥಳಾವಕಾಶವೂ ಇದೆ. ಇಂಟೆಲ್‌ ಸಂಸ್ಥೆ ಈ ಅವಕಾಶವನ್ನು ಬಳಸಿಕೊಳ್ಳುವುದಾದರೆ, ಸರ್ಕಾರದ ಕಡೆಯಿಂದ ಎಲ್ಲ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ಭರವಸೆ ನೀಡಲಾಯಿತು,”ಎಂದು ಅವರು ಹೇಳಿದರು.

“ಕೊವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಇಂಟೆಲ್‌ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಕಷ್ಟದ ಪರಿಸ್ಥಿತಿಯಲ್ಲಿ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂ. ದೇಣಿಗೆ ನೀಡಿರುವುದು ಸಂತಸದ ವಿಷಯ. ಸರ್ಕಾರದ ಪರವಾಗಿ ಅವರಿಗೆ ಧನ್ಯವಾದ ತಿಳಿಸಿದರು.

ಇಂಟೆಲ್‌ ಅಧಿಕಾರಿಗಳಾದ ಅನಂತನಾರಾಯಣ್, ಜಿತೇಂದ್ರ ಚಡ್ಡ, ಮಾನಸ್‌ ದಾಸ್‌, ಆನಂದ್‌ ದೇಶಪಾಂಡೆ, ಅಂಜಲಿ ರಾವ್‌, ವರ್ಟಿಕಲ್‌ ಸಲ್ಯೂಶನ್‌ ಗ್ರೂಪ್‌ನ ಉಪಾಧ್ಯಕ್ಷ ಕಿಶೋರ್‌ ರಾಮಿಶೆಟ್ಟಿ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದರು.

ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ, ರಿಕ್ಷಾ ಟ್ಯಾಕ್ಸಿ ಚಾಲಕರ ಪರಿಹಾರ ಧನ ವಿತರಣೆಯಲ್ಲಿ ವಿಳಂಬವಾಗಬಾರದು :ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜೂನ್ 03: ಆಟೋ ರಿಕ್ಷಾ ಮತ್ತು ಟ್ಯಾಕ್ಷಿ ವಾಹನ ಚಾಲಕರಿಗೆ 5,000 ರೂ.ಗಳ ಪರಿಹಾರ ಧನ ಒದಗಿಸಲು ಅಗತ್ಯವಿರುವ ಎಲ್ಲ ಕ್ರಮ ವಹಿಸಬೇಕು ಹಾಗೂ ಪರಿಹಾರ ಧನ ವಿತರಣೆಯಲ್ಲಿ ಯಾವುದೇ ವಿಳಂಬವಾಗಬಾರದು ಎಂದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಅವರು ಇಂದು ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.

ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಂದ ಪರಿಹಾರ ಧನಕ್ಕೆ ಈಗಾಗಲೇ ಒಟ್ಟು 198929 ಅರ್ಜಿಗಳು ಸ್ವೀಕೃತವಾಗಿದ್ದು, ಈಗಾಗಲೇ ವಾಹನ ಚಾಲಕರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮಾ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಾರಿಗೆ ಸಂಸ್ಥೆ ಬಸ್ಸುಗಳನ್ನು ಬಳಸಲು ಹಿಂಜರಿಯುತ್ತಿದ್ದು, ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಸಾರಿಗೆ ಇಲಾಖೆಯ ವಾಹನಗಳನ್ನು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸುವ ಕೆಲಸವೂ ಆಗಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಮಹಾರಾಷ್ಟ್ರ ಬಿಟ್ಟು ಅಂತರ ರಾಜ್ಯ ಸಾರಿಗೆ ಸೇವೆಯನ್ನು ಕಲ್ಪಿಸಲು ಇತರೆ ರಾಜ್ಯಗಳ ಸಾರಿಗೆ ಸಂಸ್ಥೆಗಳೊಂದಿಗೆ ಸಂಪರ್ಕಿಸಿ ಬಸ್ಸುಗಳ ಸಂಚಾರ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಸಾಮಾಜಿಕ ಅಂತರ ಕಾಪಾಡುವ ನಿರ್ದೇಶನ ಇರುವುದರಿಂದ ಬಸ್ಸುಗಳಲ್ಲಿ ಕಡಿಮೆ ಜನರನ್ನು ಹತ್ತಿಸಿಕೊಳ್ಳುವ ಬಗ್ಗೆ ಪರಿಣಿತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಅವರು ತಿಳಿಸಿದರು.

ಕೋವಿಡ್ 19 ರ ಹಿನ್ನಲೆಯಲ್ಲಿ ನಾಲ್ಕು ನಿಗಮಗಳಲ್ಲಿ ನಷ್ಟ ಉಂಟಾಗಿದ್ದು ಮುಂದಿನ ದಿನಗಳಲ್ಲಿ ಪ್ರಯಾಣಿಕರ ಓಡಾಟದಿಂದ ಪರಿಸ್ಥಿತಿ ಸುಧಾರಿಸಬಹುದೆಂಬ ನಿರೀಕ್ಷೆ ಇದೆ. ಬೆಂಗಳೂರು ನಗರ ಪ್ರದೇಶದಿಂದ ರೈಲ್ವೆ ನಿಲ್ದಾಣಕ್ಕೆ ತಲುಪಿಸುವ ವ್ಯವಸ್ಥೆಗೆ ಹಾಗೂ ವಿಮಾನ ನಿಲ್ದಾಣದಿಂದ ನಗರದ ವಿವಿದ ಪ್ರದೇಶಗಳಿಗೆ ಕಳುಹಿಸಲು ಬಿ.ಎಂ.ಟಿ.ಸಿ ಬಸ್ಸುಗಳನ್ನು ಬಳಸಿಕೊಳ್ಳಲಾಗಿದೆ. ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ಸಾರಿಗೆ ಬಸ್‍ಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಕೋವಿಡ್ 19 ನಿಂದಾಗಿ ರಾಜಸ್ವ ಸಂಗ್ರಹ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಉಂಟಾಗಿರುವ ನಷ್ಟವನ್ನು ಸರಿದೂಗಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೋವಿಡ್ 19 ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕೈಗೊಂಡ ಕ್ರಮಗಳ ಕುರಿತ ವೀಡಿಯೋ ವೀಕ್ಷಿಸಿ ಹಾಗೂ ಸಾರಿಗೆ ಸಂಪದ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ್, ಬಿ.ಎಂ.ಟಿ.ಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೇಜ್, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ.ಸಿ.ಕಳಸದ್, ಬಿ.ಎಂ.ಟಿ.ಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಉಪಸ್ಥಿತರಿದ್ದರು.

ಸುವರ್ಣಸೌಧಕ್ಕೆ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಲು ಕ್ರಮ ವಹಿಸಿ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜೂನ್ 03: ರಾಜ್ಯ ಮಟ್ಟದ ಹಲವಾರು ಸರ್ಕಾರಿ ಕಚೇರಿಗಳನ್ನು ಒಂದು ತಿಂಗಳಲ್ಲಿ ಗುರುತಿಸಿ ಬೆಂಗಳೂರಿನಿಂದ ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತರಿಸುವುದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಗತವಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚಿಸಿದರು.

ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು .

ಮುಂದಿನ ಸಭೆಯೊಳಗೆ ಹಲವಾರು ಕಚೇರಿಗಳು ಅಲ್ಲಿ ಕೆಲಸ ನಿರ್ವಹಿಸುವುದನ್ನು ಖುದ್ದಾಗಿ ಪರಿಶೀಲಿಸುವುದಾಗಿ ಅವರು ಎಚ್ಚರಿಸಿದರು.

ಪ್ರವಾಹದಿಂದ ಹಾಳಾದ ರಸ್ತೆ/ಸೇತುವೆಗಳ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯದಲ್ಲಿ ಪ್ರವಾಹ ಕಾಮಗಾರಿಗಳನ್ನು 500 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿದ್ದು, ಪ್ರವಾಹದಿಂದ ಹಾಳಾಗಿರುವ 1800 ರಸ್ತೆ ಕಾಮಗಾರಿಗಳ ಪೈಕಿ 1700 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಸೇತುವೆ ನಿರ್ಮಾಣ/ ದುರಸ್ಥಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇಂಜಿನಿಯರ್‍ಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿರುವುದರಿಂದ ನಿರುದ್ಯೋಗಿ ಇಂಜಿನಿಯರ್‍ಗಳನ್ನು ಟ್ರೈನಿಗಳೆಂದು ನೇಮಕ ಮಾಡಲು ಮುಖ್ಯಮಂತ್ರಿಗಳು ಆದೇಶಿಸಿದರು.

ಶಿವಮೊಗ್ಗ ನಗರದ ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿಯನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.

ವಿಜಯಪುರ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಜಮೀನನ್ನು ಈಗಾಗಲೇ ಗುರುತಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪುನರ್ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯದ 1650 ಕಿ.ಮೀ ಉದ್ದದ ಗ್ರಾಮೀಣ ರಸ್ತೆ ಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಹಾಗೂ 10,110 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೆರೆ, ಹಳ್ಳ ಹಾಗೂ ನದಿಪಾತ್ರದ ಮಣ್ಣನ್ನು ರಸ್ತೆ ಕಾಮಾಗಾರಿಗಳೀಗೆ ಉಪಯೋಗಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ವಿವಿಧ ಇಂಜಿನಿಯರಿಂಗ್ ಇಲಾಖೆಗಳ ದರಪಟ್ಟಿಯನ್ನು ಪರಿಶೀಲಿಸಿ ರಾಜ್ಯಾದ್ಯಾಂತ ಏಕರೂಪ ದರಪಟ್ಟಿಯನ್ನು ಪ್ರಕಟಿಸಲು ಇಲಾಖೆಯ ನಿವೃತ್ತ ಅಧಿಕಾರಿಗಳ ತಾಂತ್ರಿಕ ಸಮಿತಿ ಅಧ್ಯಯನ ನಡೆಸುತ್ತಿದ್ದು, ಶೀಘ್ರದಲ್ಲಿಯೇ ವರದಿ ಸಲ್ಲಿಸಲಿದ್ದಾರೆ. ಏಕರೂಪ ದರಪಟ್ಟಿ ಹೊರಬಂದಲ್ಲಿ ಇಲಾಖೆಗೆ ನೂರಾರು ಕೋಟಿ ರೂ.ಗಳನ್ನು ಸರ್ಕಾರಕ್ಕೆ ಉಳಿಸಬಹುದಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ರಾಜ್ಯದಲ್ಲಿ ಒಟ್ಟು 4813 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳನ್ನು 30675 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಂತರ್ಜಲ ವೃದ್ಧಿ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಸೇತುವೆಗಳ ತಳಭಾಗದಲ್ಲಿ ಒಂದು ಮೀಟರ್ ತಡೆಗೋಡೆ ನಿರ್ಮಿಸಿ ನೀರಿನ ಸಂಗ್ರಹಣೆ ಮಾಡಲು ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಂದಾನಗರಿಯಲ್ಲಿ ಭಾರೀ ಮಳೆ: ಜನ ಜೀವನ ಅಸ್ತವ್ಯಸ್ತ

ಬೆಳಗಾವಿ: ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ಮಳೆರಾಯನ ಆರ್ಭಟ ಜೋರಾಗಿದೆ. ಕಳೆದ ಎರಡು ದಿನದಿಂದ ಆಗಾಗ ಸುರಿದ ಮಳೆ ಇಂದು ಎಡೆಬಿಡದೇ ಸುರಿದಿದ್ದರಿಂದ ಕುಂದಾ ನಗರಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ.

ಬಾರಿ ಮಳೆ ಹಿನ್ನಲೆಯಲ್ಲಿ ಬೆಳಗಾವಿಯ ಆಟೋ ನಗರ ಮತ್ತು ಇಂಡಾಲ್ಕೊ ಕಂಪನಿ ಆವರಣದಲ್ಲಿ ನಿರ್ಮಿಸಿದ ತಾತ್ಕಾಲಿಕ ತರಕಾರಿ ಮಾರುಕಟ್ಟೆಗೆ ನೀರು ನುಗ್ಗಿದೆ, ತರಕಾರಿ ಅಂಗಡಿ, ಶೆಡ್ ಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಭಾರಿ ಮಳೆಯಿಂದಾಗಿ ತರಕಾರಿ ವ್ಯಾಪಾರಸ್ಥರು, ಸಗಟು ಮಾರಾಟಗಾರರು ಹೈರಾಣಾಗಿದ್ದಾರೆ.

ಇನ್ನೂ ನಗರದ ಕೆಲ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನೀರು ಹೊರಹಾಕಲು ಸಾರ್ವಜನಿಕರು ಹರಸಾಹಸ ಪಡುವಂತಾಗಿದೆ.