ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ: ಬೈಕ್ ಸವಾರರು ಸ್ಥಳದಲ್ಲೇ ಸಾವು!

ಹಾವೇರಿ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸವಣೂರು ತಾಲೂಕಿನ ಈಚಲ ಯಲ್ಲಾಪುರ ಗ್ರಾಮದ ಬಳಿ ನಡೆದಿದೆ.

ಮೃತ ಬೈಕ್ ಸವಾರರನ್ನು ಮಾಲತೇಶ ಆಡಿನ (25), ಹಾಗೂ ಮಂಜಪ್ಪ ಓಲೇಕಾರ (27) ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿದ್ದ ಹೊನ್ನವ್ವ ತಳವಾರ (34) ಮುತ್ತಪ್ಪ (22) ಎಂಬುವರಿಗೆ ತೀವ್ರ ಗಾಯಗಳಾಗಿದ್ದು ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸವಣೂರು ಠಾಣೆ ಪೊಲೀಸರು ಘಟನೆ ಕುರಿತು ಪರಿಶೀಲನೆ ನಡೆಸಿದ್ದು, ಸವಣೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೇಲಿಯೇ ಎದ್ದು ಹೊಲ ಮೇಯ್ದಂಗೆ: ಆರೋಗ್ಯ ಸಚಿವರ ನಡೆಗೆ ಭಾರೀ ಆಕ್ರೋಶ!

ಚಿತ್ರದುರ್ಗ:  ಕೊರೋನಾ ಸಂಕಷ್ಟದಿಂದ ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಗುಂಪು ಸೇರಬೇಡಿ ಎಂದೆಲ್ಲಾ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ, ಆದ್ರೆ ಈ ಎಲ್ಲಾ ಜಾಗೃತಿ ಕೇವಲ ಜನ ಸಾಮಾನ್ಯರಿಗೆ ಮಾತ್ರನಾ ಎಂಬ ಅನುಮಾನ ಮೂಡುವಂತಾಗಿದೆ. ಯಾಕಂದ್ರೆ ಜವಬ್ದಾರಿ ಮರೆತ ಆರೋಗ್ಯ ಸಚಿವರೊಬ್ಬರು ಜನ ಸೇರಿಸಿ ದೊಂಬಿ ಮಾಡಿದ್ದಾರೆ.

ಆರೋಗ್ಯ ಸಚಿವ ಶ್ರೀರಾಮುಲು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಭಾಗದಲ್ಲಿ ಹರಿಯುತ್ತಿರುವ ವೇದಾವತಿ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ರು.  ಅರೋಗ್ಯ ಸಚಿವರಿಗೆ ಅಭಿಮಾನಿಗಳು, ಕಾರ್ಯಕರ್ತರು ಭರ್ಜರಿ ಸ್ವಾಗತ ಆಯೋಜಿಸಿದ್ದರು.  ಕನಿಷ್ಠ ಜ್ಞಾನವೂ ಇಲ್ಲದೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನ, ಜನಪ್ರತಿನಿಧಿಗಳು ಅಕ್ಷರಶಃ ಅನಾಗರಿಕರಂತೆ ವರ್ತಿಸಿದ್ರು. ಪಟಾಕಿ ಸಿಡಿಸಿ, ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿ ನೂರಾರು ಕೆಜಿ ತೂಕದ ಸೇಬಿನ ಹಾರ ಹಾಕಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನ ಉಲ್ಲಂಘಿಸಿದರು.

ಇನ್ನೂ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಬುದ್ಧಿ ಹೇಳಬೇಕಿದ್ದ ಸಚಿವ ಶ್ರೀರಾಮುಲು ಸಾಮಾಜಿಕ ಅಂತರವೂ ಕಾಪಾಡಿಕೊಳ್ಳದೆ, ಮಾಸ್ಕ್ ಕೂಡ ಹಾಕದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚತ್ತ ಶ್ರೀರಾಮುಲು ಯೂ ಟರ್ನ್ ಹೊಡೆದಿದ್ದು, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರಿಗೆ ನೀತಿ ಪಾಠ ಹೇಳಿದ್ದಾರೆ. ಮೆರವಣಿಗೆಯಲ್ಲಿ ನಗು ಮೊಗದಿಂದಲೇ ಸೇಬಿನ ಹಾರಕ್ಕೆ ಕೊರಳೊಡ್ಡಿದ ರಾಮುಲು ನಂತರ ಹಾಗೆಲ್ಲ ಮಾಡಿದ್ದು ತಪ್ಪು, ನಾವು ಪ್ರಧಾನಿ, ಮುಖ್ಯಮಂತ್ರಿ ಮಾತಿಗೆ ಬೆಲೆ ಕೊಡಬೇಕು. ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕು ಅಂತ ಹೇಳೋ ಮೂಲಕ ತೇಪೆ ಹಚ್ಚೋ ಕೆಲಸ ಮಾಡಿದ್ರು. ಅಲ್ಲದೆ ಮುಂದಿನ ಊರುಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡ್ಕೊಂಡು ವಾಪಸ್ ಬೆಂಗಳೂರಿಗೆ ಹೋಗ್ತಿನಿ ಅಂತ ತಪ್ಪು ಮರೆಮಾಚೋ ಕೆಲಸ ಮಾಡಿದ್ರು.

ಸಚಿವರು ಕಾರ್ಯಕ್ರಮ ಮುಗಿಯೋವರೆಗೂ ಸಂಭ್ರಮದಿಂದಲೇ ಸಭೆಯಲ್ಲಿ ಭಾಗವಹಿಸಿದ್ದರು. ಶ್ರೀರಾಮುಲುಗೆ ಸಂಸದ ಎ.ನಾರಾಯಣಸ್ವಾಮಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಾಥ್ ನೀಡಿದ್ರು..

ಕಡಲ ಕೊರೆತ ಹೆಚ್ಚಳ,ತಡೆಗೋಡೆ ನಿರ್ಮಾಣ: ಕೋಟಾ ಶ್ರೀನಿವಾಸ ಪೂಜಾರಿ

ಮಂಗಳೂರು: ಕಡಲಿನ ಅಬ್ಬರ, ತೀವ್ರತೆ ಜಾಸ್ತಿಯಾಗಿರುವ ಹಿನ್ನೆಲಯಲ್ಲಿ,ಸರಕಾರದಿಂದ ಯಾವ ಯಾವ ಕಾರ್ಯ ರೂಪಿಸ ಬೇಕು, ಮತ್ತು ಜಿಲ್ಲಾಧಿಕಾರಿ ಮತ್ತು ಬಂದರು ಇಲಾಖೆ ಎ.ಡಿ.ಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಡೆಗೋಡೆ ಹೇಗೆ ನಿರ್ಮಿಸುವುದು ಮತ್ತು ತುರ್ತಾಗಿ ಯಾವ ಕಾರ್ಯ ಮಾಡಬೇಕುಂಬುದರ ಗಮನ ಕೊಡುತ್ತೇನೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲ ಮೊಗವೀರ ಪಟ್ನ, ಕೈಕೋ, ಹಿಲರಿಯ ನಗರ,ಪ್ರದೇಶಗಳಲ್ಲಿ ಕಡಲಿನ ಅಬ್ಬರ ಜಾಸ್ತಿಯಾಗಿರುವ ಹಿನ್ನೆಲಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಕೋಟಾ,ಸ್ವಾಭಾವಿಕವಾಗಿ ಕಡಲ್ಕೊರೆತದಿಂದಾಗಿ ಅಲ್ಲಿಯ ಮೀನುಗಾರರಿಗೆ, ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಅನೇಕ ಕುಟುಂಬಗಳಿಗೆ ತೊಂದರೆ ಆದ ಹಿನ್ನೆಲೆಯಲ್ಲಿ ತುರ್ತಾಗಿ ತಡೆಗೋಡೆ ಮಾಡಬೇಕಾದ ಅಗತ್ಯವಿದೆ. 230 ,ಕೋಟಿ ಅನುದಾನದಲ್ಲಿ ಕಡಲ್ಕೊರೆತ ಕಾಮಗಾರಿಯು ಪ್ರಗತಿಯಲ್ಲಿದೆ, ಒಟ್ಟಾರೆಯಾಗಿ ಮೀನುಗಾರರು ಸಂಕಷ್ಟದಿಂದ ಪಾರಾಗಬೇಕೆಂಬುದು ಸರಕಾರದ ಆಶಯವಾಗಿದೆ ಅದಕ್ಕೆ ಅಗತ್ಯ ಕ್ರಮವಹಿಸಿವುದಾಗಿ ತಿಳಿಸಿದರು.

ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವರ ನೂರುದಿನಗಳ ಸಾಧನೆ ಕೃತಿ ಬಿಡುಗಡೆ

ಬೆಂಗಳೂರು- 02: ಕೋವಿಡ್ – 19 ನಿಂದಾಗಿ ಸಂಕಷ್ಟಕ್ಕೀಡಾಗಿದ್ದ ಹೂವು ಬೆಳೆಗಾರರಿಗೆ ಪರಿಹಾರ ನೀಡುವ ಕಾರ್ಯಕ್ಕೆ ಸಿಎಂ ಯಡಿಯೂರಪ್ಪ ಇಂದು ಚಾಲನೆ ನೀಡಿದ್ದಾರೆ. ಇದೆ ವೇಳೆ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವರ ನೂರುದಿನಗಳ ಸಾಧನೆಯ 64 ಪುಟಗಳ ಪುಸ್ತಕವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಿಡುಗಡೆ ಮಾಡಿದರು.

ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಇಂದು ಹೂವು ಬೆಳೆಗಾರರಿಗೆ ಪರಿಹಾರ ನೀಡು ಕಾರ್ಯಕ್ಕೆ ಚಾಲನೆ ನೀಡಿದರು.12735 ಹೆಕ್ಟೇರ್ ನಲ್ಲಿ ಹೂವು ಬೆಳೆದ ರೈತರಿಗೆ ಪರಿಹಾರವಾಗಿ 31.83 ಕೋಟಿ ರೂ. ಪರಿಹಾರವನ್ನ ಸರ್ಕಾರ ಘೋಷಿಸಿತ್ತು, ಇಂದು ಪರಿಹಾರ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ ತೋಟಗಾರಿಕೆ, ಪೌರಾಡಳಿತ, ರೇಷ್ಮೆ ಸಚಿವ ಡಾ| ನಾರಾಯಣಗೌಡ, ಗೃಹ ಸಚಿವ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ಕಂದಾಯ ಸಚಿವ ಆರ್ ಅಶೋಕ್ ಮತ್ತಿತರು ಉಪಸ್ಥಿತರಿದ್ದರು.

ನೂರು ದಿನಗಳ ಸಾಧನೆ ಪುಸ್ತಕದಲ್ಲಿ, ಕೋವಿಡ್-19 ಸಂದರ್ಭದಲ್ಲಿ ರೈತರಿಗೆ ನೆರವಾದ ವಿಚಾರಗಳನ್ನು ವಿವರಿಸಲಾಗಿದೆ. ಮೂರು ಇಲಾಖೆ ಅಡಿಯಲ್ಲಿ ಕೈಗೊಂಡ ಕಾರ್ಯಕ್ರಮದ ಬಗ್ಗೆ ತಿಳಿಸಲಾಗಿದ್ದು, ಹೂವು, ಹಣ್ಣು, ತರಕಾರಿ ಹಾಗೂ ರೇಷ್ಮೆ ಬೆಳೆಗಾರರಿಗೆ ಸರಕಾರ ಘೋಷಿಸಿದ ಅನುದಾನದ ವಿವರವನ್ನು ನೀಡಲಾಗಿದೆ. 50083 ಹೆಕ್ಟೇರ್ ನಲ್ಲಿ ತರಕಾರಿ ಹಾಗೂ 41053 ಹೆಕ್ಟೇರ್ ನಲ್ಲಿ ಹಣ್ಣು ಬೆಳೆದ ರೈತರಿಗೆ 137 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಪೌರಾಡಳಿತ ಇಲಾಖೆ ಅಡಿ ರಾಜ್ಯಾದ್ಯಂತ ಕೋವಿಡ್-19 ಸಂದರ್ಭದಲ್ಲಿ ಕೈಗೊಂಡ ಕ್ರಮದ ಬಗ್ಗೆ ಪುಸ್ತಕದಲ್ಲಿ ವಿವರಣೆ ನೀಡಲಾಗಿದೆ.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ನಾರಾಯಣಗೌಡ, ರೈತರಿಗೆ ಹೆಚ್ಚಿನ ನೆರವು ನೀಡಿದ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿದ್ರು. ರೈತರ ಖಾತೆಗೆ ಆನ್ಲೈನ್ ಮೂಲಕ ಹಣ ಹಾಕುವ ಕೆಲಸ ಇಂದಿನಿಂದಲೇ ಪ್ರಾರಂಭ ಆಗಿದೆ. 15-20 ದಿನಗಳಲ್ಲಿ ಎಲ್ಲ ಅರ್ಹ ರೈತರ ಖಾತೆಗೆ ಹಣ ತಲುಪಲಿದೆ. ಕೋವಿಡ್ -19 ನಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚಿನ ನೆರವು ನೀಡಿದೆ. ಮುಖ್ಯಮಂತ್ರಿಗಳು ದಿನ ನಿತ್ಯ 16 ಗಂಟೆ ಕೆಲಸ ಮಾಡುತ್ತಿದ್ದಾರೆ. ಅವರಂತೆ ಸಚಿವರೆಲ್ಲರೂ ಅವಿರತ ಶ್ರಮಿಸುತ್ತಿದ್ದಾರೆ. ಅಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣಕ್ಕಾಗಿ 18 ಕೋಟಿ ರೂ. ಗು ಹೆಚ್ಚು ಹಣ ನೀಡಿದ್ದೇವೆ. ಆದ್ರೆ ಜಿಲ್ಲೆಯ ಶಾಸಕರಿಗೆ ನೇರವಾಗಿ ಅನುದಾನ ನೀಡಲು ಸಾಧ್ಯವಿಲ್ಲ. ಜಿಲ್ಲಾಡಳಿತದ ಮೂಲಕ ಎಲ್ಲ ತಾಲೂಕಿಗೂ ಸಾಕಷ್ಟು ಅನುದಾನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಜೆಡಿಎಸ್ ಭದ್ರಕೋಟೆಯನ್ನ ಒಡೆಯುವ ಸಲುವಾಗಿ ಹಾಸನಕ್ಕೆ ಜಿಲ್ಲಾ ಉಸ್ತುವಾರಿಯಾಗಿ ಸಚಿವ ಗೋಪಾಲಯ್ಯರನ್ನ ನೇಮಿಸಲಾಗಿದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜೆಡಿಎಸ್ ಭದ್ರಕೋಟೆ ಈಗಾಗಲೆ ಛಿದ್ರವಾಗಿದೆ. ಆ ಬಗ್ಗೆ ಹೆಚ್ಚಿಗೆ ಮಾತಾಡಲ್ಲ ಎಂದು ಸಚಿವ ನಾರಾಯಣ ಗೌಡ ಮಾಧ್ಯಮಕ್ಕೆ ಹೇಳಿದ್ದಾರೆ.

ರಾಜ್ಯದಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಗಾದವರಲ್ಲಿ ಪಾಸಿಟಿವ್ ಪ್ರಮಾಣ ದೇಶದಲ್ಲಿಯೇ ಅತ್ಯಂತ ಕಡಿಮೆ: ಡಾ.ಸುಧಾಕರ್

ಹಾಸನ, ಜೂನ್ 2: ರಾಜ್ಯದಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಗಾದವರಲ್ಲಿ ಪಾಸಿಟಿವ್ ವರದಿ ದೃಢಪಡುತ್ತಿರುವವರ ಪ್ರಮಾಣ ಇಡೀ ದೇಶದಲ್ಲಿಯೇ ಅತ್ಯಂತ ಕಡಿಮೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಹೇಳಿದ್ದಾರೆ. ರಾಜ್ಯದಲ್ಲಿ ಇದುವರೆಗೆ 3,04,816 ಮಂದಿಯನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 3450 ಮಂದಿಗೆ ಮಾತ್ರ ಸೋಂಕು ಪಾಸಿಟಿವ್ ಇರುವುದು ದೃಢಪಟ್ಟಿದೆ. ಅಂದರೆ ಇದರ ಪ್ರಮಾಣ ಶೇಕಡ 1.1ರಷ್ಟಿದ್ದು, ಇದು ದೇಶದಲ್ಲಿಯೇ ಅತ್ಯಂತ ಕಡಿಮೆಯದ್ದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಾಸನದಲ್ಲಿ ಇಂದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯಲ್ಲಿನ ಕೋವಿಡ್ 19 ಸ್ಥಿತಿಗತಿಗಳನ್ನು ಪರಾಮರ್ಶಿಸಿ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಈ ಸೋಂಕು ಕಾಣಿಸಿಕೊಂಡಾಗ ಕೇವಲ 2 ಕೋವಿಡ್ ಪರೀಕ್ಷಾ ಕೇಂದ್ರಗಳಿದ್ದವು, ಈಗ ರಾಜ್ಯದಲ್ಲಿ 64 ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಇಂದು ಸಹ ಬೀದರ್ ನಗರದಲ್ಲಿ ಪರೀಕ್ಷಾ ಕೇಂದ್ರವನ್ನು ಆರಂಭಿಸಲಾಯಿತು ಎಂದು ಹೇಳಿದರು. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕೋವಿಡ್ ಶಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಕೋವಿಡ್ ಸೋಂಕು ನಿವಾರಣೆಗೆ ರಾಜ್ಯ ಕೈಗೊಂಡಿರುವ ಕ್ರಮಗಳನ್ನು ಸ್ವತಃ ಪ್ರಧಾನಮಂತ್ರಿಗಳು ಶ್ಲಾಘಿಸಿದ್ದಾರೆ ಎಂದು ಹೇಳಿದ ಮಾನ್ಯ ಮಂತ್ರಿಗಳು ಲಾಕ್ ಡೌನ್ ಮುಂಜಾಗ್ರತಾ ಕ್ರಮಗಳ ಮೂಲಕ ಜನರ ಜೀವ ರಕ್ಷಿಸಿದ್ದಾಗಿದೆ, ಈಗ ಜೀವನವೂ ಮುಖ್ಯವಾದುದರಿಂದ ಪುನಃ ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಅಂದ ಮಾತ್ರಕ್ಕೆ ಸರ್ಕಾರ ಕೈ ಚಾಚಿ ಕುಳಿತುಕೊಂಡಿದೆ ಎಂದು ಭಾವಿಸಬಾರದು, ನಾವು ಕೋವಿಡ್ ವೈರಸ್ ಎದುರಿಸಿ, ಅದರ ಜೊತೆ ಜೊತೆಗೆ ಬದುಕುವ ಸಂಕಲ್ಪ ಮಾಡಬೇಕಾಗಿದೆ ಎಂದು ಹೇಳಿದರು.

ರಾಜ್ಯದ ಸಾವಿರಾರು ಮಕ್ಕಳಿಗೆ ನೀಡಬೇಕಾಗಿದ್ದ ಲಸಿಕೆಗಳನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ, ಕೊರೋನರಹಿತ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ, ಈ ಸ್ಥಿತಿಯಿಂದ ನಾವು ಹೊರಬರಬೇಕಾಗಿದೆ. ಈ ಕಾರಣದಿಂದ ಖಾಸಗಿ ಕ್ಲಿನಿಕ್, ಡಿಸ್ಪೆನ್ಸರಿ ಹಾಗೂ ನರ್ಸಿಂಗ್ ಹೋಂಗಳು ತಕ್ಷಣವೇ ಕಾರ್ಯಾರಂಭಿಸಬೇಕು, ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುವುದು ಎಂದು ಸಚಿವರು ಎಚ್ಚರಿಸಿದರು. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಹಿಂದಿರುಗುತ್ತಿರುವವರಲ್ಲಿ ಕೋವಿಡ್ ವೈರಾಣು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಇಂತಹ ಪ್ರಯಾಣಿಕರನ್ನು 14 ದಿನಗಳ ಕಾಲ ಕ್ವಾರಂಟೈನಿಗೆ ಒಳಪಡಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿಯೂ ಸಚಿವರು ತಿಳಿಸಿದರು.

ಹಾಸನದ ವೈದ್ಯಕೀಯ ಕಾಲೇಜಿನಲ್ಲಿ ಪಾಳಿಯ ಮೇರೆಗೆ ಪ್ರತಿ ದಿನ 500 ಮಂದಿಯ ಕೋವಿಡ್ 19 ಪರೀಕ್ಷೆಯನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆವಹಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಮಾಧುಸ್ವಾಮಿ, ಶಾಸಕರಾದ ಶಿವಲಿಂಗೇಗೌಡ, ಬಾಲಕೃಷ್ಣ, ಪ್ರೀತಂಗೌಡ, ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಜಿಲ್ಲಾಧಿಕಾರಿ ಗಿರೀಶ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ಮೆಡಿಕಲ್ ಕಾಲೇಜಿಗೆ ಭೇಟಿ:

ಸಭೆಯ ನಂತರ ಹಾಸನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ಸಚಿವರು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಪರಾಮರ್ಶೆ ನಡೆಸಿದರು. ಸಂಸ್ಥೆಯಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆ ಭರ್ತಿಗೆ ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶಕರಿಗೆ ಸೂಚನೆ ನೀಡಿದರು. ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ನೌಕರರ ಹಾಜರಾತಿ ಸರಿಯಾಗಿ ಇರುವಂತೆ ಮತ್ತು ತಪ್ಪು ಲೆಕ್ಕ ನಮೂದಿಸದಂತೆ ನೋಡಿಕೊಳ್ಳಲು ತಿಳಿಸಿದರು. ಕೋವಿಡ್ ಚಿಕಿತ್ಸೆ ಮತ್ತು ಸೋಂಕಿತರ ಸಂಪರ್ಕಗಳ ನಿಗಾ ವ್ಯವಸ್ಥೆಯನ್ನು ಮಾರ್ಗಸೂಚಿಗೆ ಅನುಗುಣವಾಗಿ ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕೋರ್ಸುಗಳ ವಿದ್ಯಾರ್ಥಿಗಳು ಹಾಗೂ ನಾನಾ ವಿಭಾಗಗಳ ಮುಖ್ಯಸ್ಥರ ಜೊತೆಗೆ ಸಚಿವ ಡಾ .ಸುಧಾಕರ್ ಸಮಾಲೋಚನೆ ನಡೆಸಿದರು

ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್‌ಗೆ ಚಿಂತನೆ: ಡಾ. ಅಶ್ವತ್ಥನಾರಾಯಣ

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯಿಂದ ಲ್ಯಾಪ್‌ಟಾಪ್ ಪಡೆದಿರುವ 1.10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್‌ ಸೇವೆ ಒದಗಿಸುವ ಸಂಬಂಧ ಈ ಸೇವೆ ಒದಗಿಸುವ ಕಂಪನಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ನಗರದಲ್ಲಿ ಮಂಗಳವಾರ ಇಂಟರ್‌ನೆಟ್‌ ಪೂರೈಕೆದಾರ ಸಂಸ್ಥೆಗಳ ಪ್ರತಿನಿಧಿಗಳ ಜತೆ ವಿಡಿಯೊ ಸಂವಾದ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

“ಲ್ಯಾಪ್‌ಟಾಪ್‌ ಕೊಟ್ಟ ನಂತರ ಅವುಗಳ ಸದುಪಯೋಗ ಸರಿಯಾಗಿ ಆಗುತ್ತಿಲ್ಲ. ಈ ಕಾರಣಕ್ಕೆ ಇಂಟರ್‌ನೆಟ್‌ ಸೇವೆ ಒದಗಿಸುವಂತೆ ಕೋರಲಾಗಿದೆ. ಇದಕ್ಕೆ ಕಂಪನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯ ಮಾಹಿತಿ ಒದಗಿಸುವಂತೆ ಕೋರಿವೆ. ಇದರ ನಡುವೆ ಆನ್‌ಲೈನ್‌ ಕಂಟೆಂಟ್‌ ಕೂಡ ಒದಗಿಸುವ ಕೆಲಸ ಇಲಾಖೆಯಿಂದ ಆಗುತ್ತಿದೆ” ಎಂದು ವಿವರಿಸಿದರು.

“ಲ್ಯಾಪ್ ಟಾಪ್ ಇಲ್ಲದವರಿಗೆ ಆನ್ ಲೈನ್ ಶಿಕ್ಷಣ ಪಡೆಯಲು ತೊಂದರೆಯಾಗುತ್ತಿದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಲ್ಯಾಪ್ ಟಾಪ್ ಹೊಂದಿರುವವರು ಅದನ್ನು ಸದ್ಬಳಕೆ ಮಾಡಿಕೊಳ್ಳಲು ಬೇಕಾದ ಸೌಲಭ್ಯ ಒದಗಿಸುವುದು ನಮ್ಮ ಗುರಿ. ಲ್ಯಾಪ್ ಟಾಪ್ ಇಲ್ಲದೇ ಇರುವವರಿಗೆ ಏನು ಎಂಬುದನ್ನು ಮುಂದೆ ತೀರ್ಮಾನ ಮಾಡಲಾಗುವುದು,” ಎಂದು ಹೇಳಿದರು.

“ಪ್ರಥಮ ವರ್ಷದ 1.10 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅವರು ದ್ವಿತೀಯ ಪದವಿಯಲ್ಲಿ ವ್ಯಾಸಂಗ ಮಾಡಲಿದ್ದಾರೆ. ಇವರಿಗೆ ಸಾಮಾನ್ಯ ತರಗತಿ ಜತೆಗೆ ಆನ್ ಲೈನ್ ಮೂಲಕ ಶಿಕ್ಷಣ ನೀಡುವ, ತರಬೇತಿ ಒದಗಿಸುವ ಬಗ್ಗೆಯು ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.

“ಈಗಾಗಲೇ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಆರಂಭವಾದರೂ ಇಂಟರ್ ನೆಟ್ ಸಮಸ್ಯೆ ಇದೆ. ಇದರ ಜತೆಗೆ ಸಾಕಷ್ಟು ವಿದ್ಯಾರ್ಥಿಗಳಲ್ಲಿ ಲ್ಯಾಪ್ ಟಾಪ್ ಕೂಡ ಇಲ್ಲ. ಈ ರೀತಿಯ ಸಮಸ್ಯೆ, ಸವಾಲುಗಳು ಬಂದಾಗ ಅದನ್ನು ಬಗೆಹರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಕೊವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಅನಿಯಂತ್ರಿತ ಇಂಟರ್ ನೆಟ್ ಮತ್ತು ವಿದ್ಯುತ್ ಪೂರೈಕೆ ಮಾಡುವ ಮೂಲಕ ನಮ್ಮ ಸರ್ಕಾರ ಸೈ ಎನಿಸಿಕೊಂಡಿದ್ದು, ಅದೇ ಮಾದರಿಯಲ್ಲಿ ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗುವುದು,” ಎಂದರು.

ಸೇವಾ ಸಂಸ್ಥೆಗಳೂ ಜವಾಬ್ದಾರಿ ಹೊರಬೇಕು
“ನಗರ ಪ್ರದೇಶಗಳಲ್ಲಿ ಇಂಟರ್ ನೆಟ್ ಸೇವಾ ಪೂರೈಕೆದಾರರು ಅತ್ಯುತ್ತಮ ಸೇವೆ ಒದಗಿಸುತ್ತಿದ್ದಾರೆ. ಇದರ ಮಧ್ಯೆ ಕೆಲವರು ಅನುಮತಿ ಪಡೆಯದೆ ರಸ್ತೆ, ಪಾದಚಾರಿ ಮಾರ್ಗಗಳನ್ನು ಅಗೆಯುವುದು, ಹಾಳು ಮಾಡುವುದು ಮುಂತಾದ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಸಮಸ್ಯೆ ಆಗುವುದಿಲ್ಲ. ಆದ್ದರಿಂದ ಇಂಟರ್ ನೆಟ್ ಸೇವಾ ಪೂರೈಕೆದಾರರು, ಬಿಎಂಆರ್‌ಸಿಎಲ್‌, ಗೇಲ್‌, ಬಿಬಿಎಂಪಿ, ಜಲಮಂಡಲಿ, ಬೆಸ್ಕಾಂ ಮುಂತಾದ ಸಂಸ್ಥೆಗಳ ಜತೆಗೆ ಸಮನ್ವಯತೆ ಅಗತ್ಯ. ಇದಕ್ಕೆ ಪೂರಕವಾಗಿ ಎಲ್ಲಾ ಮಾಹಿತಿಗಳನ್ನೊಳಗೊಂಡ ರೋಡ್ ಹಿಸ್ಟರಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ,” ಎಂದರು.

“ಕೊವಿಡ್ ಲಾಕ್ ಡೌನ್ ಬಳಿಕ ವರ್ಕ್ ಫ್ರಂ ಹೋಮ್ ವ್ಯವಸ್ಥೆಗೆ ಹೆಚ್ಚಿನ ಮಾನ್ಯತೆ ಸಿಕ್ಕಿದೆ. ಅನೇಕ ಕಂಪನಿಗಳು ಈ ವ್ಯವಸ್ಥೆಯೇ ಸೂಕ್ತ ಎಂದು ಹೇಳಿವೆ. ಭವಿಷ್ಯದಲ್ಲಿ ಕಂಪನಿಗಳು ವರ್ಕ್ ಫ್ರಂ ಹೋಮ್ ಮುಂದುವರಿಸಲು ಬಯಸಿದರೆ ಅದಕ್ಕೆ ಬೇಕಾದ ಇಂಟರ್ನೆಟ್ ಸೌಲಭ್ಯ ಒದಗಿಸಬೇಕು. ಈ ವಿಚಾರದಲ್ಲಿ ಇಂಟರ್ನೆಟ್ ಸೇವಾ ಪೂರೈಕೆದಾರರು, ಕಂಪನಿಗಳು ಮತ್ತು ಜನರ ಮಧ್ಯೆ ಸೇತುವೆಯಾಗಿ ಕೆಲಸ ಮಾಡಲು ಸರ್ಕಾರ ಸಿದ್ಧವಿದೆ,” ಎಂದು ಭರವಸೆ ನೀಡಿದರು.

ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಐಟಿ ನಿರ್ದೇಶಕಿ ಮೀನಾ ನಾಗರಾಜು, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.