1 ಟಿಬಿ ಮೈಕ್ರೊ ಎಸ್‌ಡಿ ಕಾರ್ಡ್‌ ಅಭಿವೃದ್ಧಿ; ವೆಸ್ಟರ್ನ್‌ ಡಿಜಿಟಲ್ ಇಂಡಿಯಾ‌ ಸಾಧನೆಗೆ ಡಾ.ಅಶ್ವತ್ಥನಾರಾಯಣ ಶ್ಲಾಘನೆ

ಬೆಂಗಳೂರು: ವೆಸ್ಟರ್ನ್‌ ಡಿಜಿಟಲ್‌ ಇಂಡಿಯಾದ ಬೆಂಗಳೂರು ಕೇಂದ್ರ 1 ಟಿಬಿ ಮೈಕ್ರೊ ಎಸ್‌ಡಿ ಕಾರ್ಡ್‌ ಅಭಿವೃದ್ಧಿ ಪಡಿಸಿದ್ದು, ಐಟಿ-ಬಿಟಿ ನಗರಕ್ಕೆ ಇದು ಹೆಮ್ಮೆಯ ವಿಷಯ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ವೆಸ್ಟರ್ನ್‌ ಡಿಜಿಟಲ್‌ ಇಂಡಿಯಾದ ಮುಖ್ಯಸ್ಥೆ ಸುಪ್ರಿಯಾ ದಾಂಡ ಅವರ ಜತೆ ಮಂಗಳವಾರ ವೀಡಿಯೋ ಕಾನ್ಫರೆನ್ಸ್‌ ನಡೆಸಿದ ನಂತರ ಅವರು ಮಾತನಾಡಿದರು.

“ತಂತ್ರಜ್ಞಾನ ವಲಯದ ಮಹತ್ವದ ಆವಿಷ್ಕಾರ ಬೆಂಗಳೂರಿನಲ್ಲಿಆಗಿದೆ ಎಂಬುದು ಕರ್ನಾಟಕ ಸರ್ಕಾರಕ್ಕೆ ಹಾಗೂ ಬೆಂಗಳೂರಿನ ನಿವಾಸಿಗಳಿಗೆ ಹೆಮ್ಮೆಯ ವಿಚಾರ. ಬೆಂಗಳೂರನ್ನು ದಕ್ಷಿಣ ಏಷ್ಯಾದ ಆವಿಷ್ಕಾರ ಕೇಂದ್ರವನ್ನಾಗಿಸುವುದು ಐಟಿ-ಬಿಟಿ ಇಲಾಖೆಯ ಗುರಿ ಈ ನಿಟ್ಟಿನಲ್ಲಿ ಉದ್ದಿಮೆಗಳಿಂದ ಸಲಹೆ, ಅಭಿಪ್ರಾಯ ಪಡೆಯಲು ಇಲಾಖೆ ಉತ್ಸುಕವಾಗಿದೆ ಎಂಬ ವಿಷಯವನ್ನು ಸಭೆಯಲ್ಲಿ ತಿಳಿಸಲಾಗಿದೆ,”ಎಂದು ಅವರು ಹೇಳಿದರು.

“1 ಟಿಬಿ ಮೈಕ್ರೊ ಎಸ್‌ಡಿ ಕಾರ್ಡ್‌ಗಳ ಉತ್ಪಾದನೆ ಹೊರ ದೇಶದಲ್ಲಿ ಆಗುತ್ತಿದ್ದು, ಭಾರತದಲ್ಲಿ ಈ ಘಟಕಗಳನ್ನು ಉತ್ಪಾದಿಸುವ ಯೋಜನೆ ಕಾರ್ಯರೂಪಕ್ಕೆ ತರುವುದಾದರೆ ಸರ್ಕಾರದ ಕಡೆಯಿಂದ ಎಲ್ಲ ಅಗತ್ಯ ಸಹಕಾರ, ಸೌಲಭ್ಯ ಒದಗಿಸುವ ಭರವಸೆ ನೀಡಲಾಗಿದೆ. ಕರ್ನಾಟಕ ಹೂಡಿಕೆ ಸ್ನೇಹಿ ಆಡಳಿತ ಇರುವ ರಾಜ್ಯವಾಗಿದ್ದು, ಉದ್ಯಮಿಗಳು ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ,”ಎಂದು ಅವರು ತಿಳಿದರು.

ಕ್ಯಾಲಿಫೋರ್ನಿಯಾ ಮೂಲದ ವೆಸ್ಟರ್ನ್‌ ಡಿಜಿಟಲ್‌ ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯಲ್ಲಿ 3000 ಉದ್ಯೋಗಿಗಳಿದ್ದಾರೆ.

ಹೂಡಿಕೆದಾರರಿಗೆ ರಾಜ್ಯ ಸರ್ಕಾರದಿಂದ ವಿಶೇಷ ರಿಯಾಯಿತಿ: ಇಎಸ್‌ಡಿಎಂ ಉದ್ಯಮಗಳಿಗೆ ಮುಕ್ತ ಆಹ್ವಾನ

ಬೆಂಗಳೂರು: ಐಟಿ, ಬಿಟಿ ಮತ್ತು ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಹಲವು ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

ಇನ್ವೆಸ್ಟ್‌ ಇಂಡಿಯಾ ವತಿಯಿಂದ ಪ್ರಮುಖ ರಾಜ್ಯಗಳ ಐಟಿ ಇಲಾಖೆ ಪ್ರಮುಖರು ಹಾಗೂ ಕಂಪನಿಗಳ ಮುಖ್ಯಸ್ಥರ ಜತೆ ಮಂಗಳವಾರ ಏರ್ಪಡಿಸಿದ್ದ ವೀಡಿಯೋ‌ ಸಂವಾದದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

“ಹೂಡಿಕೆದಾರರಿಗೆ ಭೂ ಸ್ವಾಧೀನ, ತೆರಿಗೆ ಮುಂತಾದ ವಿಚಾರದಲ್ಲಿ ಈಗಾಗಲೇ ಸರ್ಕಾರ ಹಲವು ವಿನಾಯಿತಿಗಳನ್ನುನೀಡುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಕರ್ನಾಟಕ ಹೂಡಿಕೆ ಸ್ನೇಹಿ ಆಡಳಿತ ಇರುವ ರಾಜ್ಯವಾಗಿದ್ದು, ಉದ್ಯಮಿಗಳು ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ,”ಎಂದರು

“ಇಎಸ್‌ಡಿಎಂ (ಎಲೆಕ್ಟ್ರಾನಿಕ್ಸ್ ಸಿಸ್ಟೆಮ್‌ ವಿನ್ಯಾಸ ಮತ್ತು ಉತ್ಪಾದನೆ) ವಲಯದಲ್ಲಿ ಕರ್ನಾಟಕ ದೇಶದಲ್ಲೇ ಅಗ್ರ ಸ್ಥಾನದಲ್ಲಿದ್ದು, ಜಾಗತಿಕ ಹೂಡಿಕೆಗಳನ್ನು ಆಕರ್ಷಿಸಲು ಸಮರ್ಥವಾಗಿದೆ. ನುರಿತ ವೃತ್ತಿಪರರು, ಅಪರಿಮಿತ ಅವಕಾಶಗಳಿರುವ ರಾಜ್ಯ ನಮ್ಮದು. ಇಎಸ್‌ಡಿಎಂ ವಲಯ ಸೇರಿದಂತೆ ಐಟಿ-ಬಿಟಿ ಹೂಡಿಕೆಗೆ ಹೇರಳ ಅವಕಾಶ ಇದ್ದು, ಇದನ್ನು ಬಳಸಿಕೊಳ್ಳುವಂತೆ ಕಂಪನಿಗಳನ್ನು ಆಹ್ವಾನಿಸಲಾಗಿದೆ. ನಮ್ಮ ರಾಜ್ಯ ಎಲ್ಲರಿಗೂ ಸಲ್ಲುವಂತದ್ದು ಉದ್ಯಮಿಗಳಿಗೆ ಪೂರಕ ವಾತಾವರಣ, ಐಟಿ ಕೌಶಲ, ಮಾನವ ಸಂಪನ್ಮೂಲ ಎಲ್ಲವೂ ಇಲ್ಲಿ ಲಭ್ಯವಿದೆ. ಹಾಗಾಗಿ, ನಮ್ಮ ಸರ್ಧೆ ಇತರ ರಾಜ್ಯಗಳ ಜತೆಗಲ್ಲ ಬದಲಾಗಿ ಪ್ರಮುಖ ರಾಷ್ಟ್ರಗಳು ಹಾಗೂ ಕಂಪನಿಗಳೊಂದಿಗೆ,”ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.

“ಹೈಟೆಕ್ ಉದ್ಯಮ ಅದರಲ್ಲೂ ವಿಶೇಷವಾಗಿ ಇಎಸ್‌ಡಿಎಂ ವಲಯದ ಕೇಂದ್ರ ಕರ್ನಾಟಕ ಎಂಬುದು ಗಮನಾರ್ಹ. ಇಎಸ್‌ಡಿಎಂ ರಫ್ತಿನಲ್ಲಿ ರಾಜ್ಯದ ಪಾಲು ಶೇ. 64 ರಷ್ಟಿದೆ. ನಮ್ಮ ರಾಜ್ಯ ಅತಿದೊಡ್ಡ ಚಿಪ್ ವಿನ್ಯಾಸ ಕೇಂದ್ರವಾಗಿದ್ದು, ದೇಶದ ಶೇ. 70 ರಷ್ಟು ಚಿಪ್ ವಿನ್ಯಾಸಕರಿಗೆ ನೆಲೆಯಾಗಿದೆ. ನಮ್ಮ ಕೆಇಎಸ್‌ಡಿಎಂ ನೀತಿ 2017-2022 ರಲ್ಲಿ ಉಲ್ಲೇಖಿಸಿರುವಂತೆ, ಈ ಅವಧಿಯಲ್ಲಿ 2000 ಇಎಸ್‌ಡಿಎಂ ಸ್ಟಾರ್ಟ್ಅಪ್‌ಗಳ ಬೆಳವಣಿಗೆಗೆ ಉತ್ತೇಜಿಸುವ ಜತೆಗೆ 2025ರ ವೇಳೆಗೆ 20 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಕೌಶಲ ಅಭಿವೃದ್ಧಿಗೆ ಒತ್ತು ನೀಡುವ ಜತೆಗೆ ಗುಣಮಟ್ಟದ ಮೂಲಸೌಕರ್ಯ ಒದಗಿಸಿ ಸುಲಲಿತ ವ್ಯವಹಾರಕ್ಕೆ ಅನುವು ಮಾಡಿಕೊಡಲಾಗುವುದು,”ಎಂದು ಹೇಳಿದರು.

“ಉದ್ಯಮ ಸ್ನೇಹಿ ಕಾರ್ಮಿಕ ಕಾನೂನುಗಳು, ಹಿತಕರವಾದ ಹವಾಮಾನ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ನುರಿತ ವೃತ್ತಿಪರರು, ಕಾಸ್ಮೋಪಾಲಿಟನ್ ಪರಿಸರ, ಹೂಡಿಕೆಗೆ ಪೂರಕವಾದ ನೀತಿಗಳು ಮತ್ತು ಉದ್ಯಮ ಸ್ಥಾಪನೆಗೆ ಏಕ ಗವಾಕ್ಷಿ ವ್ಯವಸ್ಥೆ ಇರುವುದರಿಂದ ಕರ್ನಾಟಕ ಹಲವು ವಿದೇಶಿ ಹೂಡಿಕೆದಾರರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಇಎಸ್‌ಡಿಎಂ ವಲಯದಲ್ಲಿ ಲಭ್ಯವಿರುವ ಅಪರಿಮಿತ ಅವಕಾಶಗಳನ್ನು ಬಳಸಿಕೊಳ್ಳಲು ಎಲ್ಲ ಕಂಪನಿಗಳಿಗೆ ಕರ್ನಾಟಕ ಮುಕ್ತ ಆಹ್ವಾನ ನೀಡುತ್ತದೆ. ಮುಂಬರುವ ದಿನಗಳಲ್ಲಿ ಇಎಸ್‌ಡಿಎಂ ವಲಯವನ್ನು ಉತ್ತುಂಗಕ್ಕೆ ಒಯ್ಯವಲ್ಲಿ ನಮ್ಮ ಜತೆ ಕೈಜೋಡಿಸಲು ಸಭೆಯಲ್ಲಿ ಮನವಿ ಮಾಡಲಾಗಿದೆ,”ಎಂದು ತಿಳಿಸಿದರು.

ಇನ್ವೆಸ್ಟ್‌ ಇಂಡಿಯಾ ಸಿಇಒ ದೀಪಕ್ ಬಾಗ್ಲಾ, ಕೇಂದ್ರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಪ್ರಕಾಶ್‌, ಜಂಟಿ ಕಾರ್ಯದರ್ಶಿ ಸೌರಭ್‌ ಗೌರ್‌, ಐಟಿ ಬಿಟಿ, ವಿಜ್ಞಾನ ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ಹೂಡಿಕೆ ತಜ್ಞ ರಾಘವ್‌ ಗುಪ್ತಾ, ಇನ್ವೆಸ್ಟ್‌ ಇಂಡಿಯಾದ ಎಎಸ್‌ಡಿಎಂ ಮುಖ್ಯಸ್ಥ ಅತುಲ್‌ ಬಿಸ್ತಾ, ಆಂಧ್ರಪ್ರದೇಶದ ವಿಶೇಷ ಮುಖ್ಯಕಾರ್ಯದರ್ಶಿ ಕರಿಕಾಲ್‌ ವಾಲ್ವಾನ್‌, ಹರಿಯಾಣದ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್‌ ಮತ್ತು ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಕುರ್‌ ಗುಪ್ತ, ತಮಿಳುನಾಡಿನ ಕೈಗಾರಿಕೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ತಿರು ಎನ್‌ ಮುರುಘಾನಂದಮ್‌ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು.

ಮಕ್ಕಳ ಸುರಕ್ಷತೆ, ಆತ್ಮವಿಶ್ವಾಸ ಮುಖ್ಯ: ಸಚಿವ ಸುರೇಶ ಕುಮಾರ್

ಬೆಳಗಾವಿ, ಜೂನ್ 2: ಕೊರೊನಾ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ ಮತ್ತು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್.ಸುರೇಶ್ ಕುಮಾರ್ ಹೇಳಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ಜೂ. 2) ನಡೆದ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಧನೆ ಮಾಡಬೇಕು ಎಂಬ ಮಕ್ಕಳ ಕನಸಿಗೆ ಪರೀಕ್ಷೆ ಮೂಲಕ ಪೋಷಿಸುವ ಅಗತ್ಯವಿದೆ. ಮಕ್ಕಳ ಭವಿಷ್ಯದ ಹಾಗೂ ಹಿತದ ದೃಷ್ಟಿಯಿಂದ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಮಕ್ಕಳ ಸುರಕ್ಷತೆ ಮತ್ತು ಆತ್ಮವಿಶ್ವಾಸ ಬೆಳೆಸಲು ಮುಂದಾಗುವಂತೆ ಶಿಕ್ಷಕ ಸಮುದಾಯಕ್ಕೆ ತಿಳಿಸಿದರು.
ಎಲ್ಲರಿಗೂ ಸ್ಮಾರ್ಟ್ ಫೋನ್ ಅಥವಾ ನೆಟವರ್ಕ್ ಸಿಗದಿರುವುದರಿಂದ ಮನೆ ಮನೆಗೆ ತೆರಳಿ ಪಾಠ ಮಾಡುವುದರ ಜತೆಗೆ ಗ್ರಾಮದ ದೊಡ್ಡ ಮನೆ ಅಥವಾ ಕಟ್ಟಡಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು “ವಠಾರ ಶಾಲೆ” ನಡೆಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರಾದ ಸುರೇಶ್ ಕುಮಾರ್ ಸಚಿವರು ಸಲಹೆ ನೀಡಿದರು.

ವಿಶೇಷವಾದ ಸನ್ನಿವೇಶದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕಿರುವುದರಿಂದ ರಾಜ್ಯದ ಎಲ್ಲ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ ಎಂದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲಿಸಿದ ನ್ಯಾಯಾಲಯವು ಪರೀಕ್ಷೆ ನಡೆಸಬಹುದು ಎಂದು ಅಭಿಪ್ರಾಯಪಟ್ಟಿದೆ. ಅದೇ ರೀತಿ ಕೇಂದ್ರ ಸರ್ಕಾರ ಕೂಡ ಹಸಿರುನಿಶಾನೆ ತೋರಿಸಿದೆ ಎಂದರು.

ಸಮುದಾಯ ರೆಡಿಯೋ, ವಾಟ್ಸಾಪ್ ಮತ್ತಿತರ ಮಾರ್ಗಗಳ ಮೂಲಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಿರಂತರ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆ ನಡೆದಿದೆ. ಇದೇ ರೀತಿ ಇನ್ನೂ ಹದಿನೈದು ದಿನಗಳ ಕಾಲ ಈ ಪ್ರಕ್ರಿಯೆ ಮುಂದುವರಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಮಾಡಿಸಬೇಕು ಎಂದು ಶಿಕ್ಷಕರಿಗೆ ತಿಳಿಸಿದರು.

ಪರೀಕ್ಷಾ ಕೇಂದ್ರಕ್ಕೆ ಉಚಿತ ಸ್ಯಾನಿಟೈಸರ್ ಪೂರೈಕೆ:

ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಉಚಿತವಾಗಿ ಸ್ಯಾನಿಟೈಸರ್ ಪೂರೈಸಲಾಗಿದೆ. ಪರೀಕ್ಷಾ ಕೇಂದ್ರದ ಎಲ್ಲ ಶಿಕ್ಷಕರು, ಸಿಬ್ಬಂದಿ ಕೂಡ ಕೈಗವಸ ಹಾಕಿಕೊಳ್ಳಬೇಕು. ಪ್ರತಿ ಇನ್ನೂರು ಮಕ್ಕಳಿಗೆ ಒಂದು ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡುವುದು ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವರು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಆರೋಗ್ಯ, ಸಾರಿಗೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಜತೆಗೆ ಸಭೆ ನಡೆಸಿ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಲು ಕ್ರಮ‌ಕೈಗೊಳ್ಳಲಾಗುವುದು ಎಂದರು.

ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಿರಲಿ:

ವಲಸೆ ಕಾರ್ಮಿಕರ ಮಕ್ಕಳಿಗೆ ಅವರು ಇರುವ ಗ್ರಾಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಕಂಟೈನ್ಮೆಂಟ್ ಝೋನ್ ನಲ್ಲಿ ಪರೀಕ್ಷಾ ಕೇಂದ್ರ ಇರದಂತೆ ನೋಡಿಕೊಳ್ಳಬೇಕು.ಪರೀಕ್ಷೆಯ ಪಾವಿತ್ರ್ಯತೆ ಅಥವಾ ಗಾಂಭಿರ್ಯತೆಗೆ ಕುಂದು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದರು.

ಮಕ್ಕಳಲ್ಲಿ‌ ಕಲಿಕೆಯ ಗುಣಮಟ್ಟ ವೃದ್ಧಿಗೊಳಿಸಲು ಶಿಕ್ಷಕರು ಕೈಗೊಂಡ ವಿಶೇಷ ಕಾರ್ಯಕ್ರಮಗಳ ಬಗ್ಗೆ ಸಚಿವರು ಮಾಹಿತಿಯನ್ನು ಪಡೆದುಕೊಂಡರು.ಪರೀಕ್ಷಾ ಪ್ರವೇಶ ಪತ್ರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ಸಮುದಾಯ ಭವನ ಮತ್ತಿತರ ಕಡೆಗಳಲ್ಲಿ ಗುಂಪು ಅಧ್ಯಯನಕ್ಕೆ ಅನುಕೂಲ ಆಗುವಂತೆ ರಾತ್ರಿ ವೇಳೆ ಪಾಠ ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಮಳೆಗಾಲ ಆರಂಭಗೊಂಡಿರುವುದರಿಂದ ಓದಲು ತೊಂದರೆಯಾಗುವ ಮಕ್ಕಳಿಗೆ ವಸತಿನಿಲಯದ ಸೌಲಭ್ಯ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಅದೇ ರೀತಿ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಶುಚಿತ್ವ ಕಡೆಗೆ ಕೂಡ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಡಾ.ರಾಜೇಂದ್ರ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಗ್ರಾಮಗಳ ಗ್ರಂಥಾಲಯಗಳನ್ನು “ಓದುವ ಮನೆ”ಯಾಗಿ ಪರಿವರ್ತಿಸುವ ಸಲಹೆ ನೀಡಿದರು.

ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಸಿದ್ದಲಿಂಗಯ್ಯ ಹಿರೇಮಠ, ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ವ್ಯವಸ್ಥೆಯಿದ್ದು, ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಿದ್ದಾರೆ ಎಂದು ಹೇಳಿದರು.

ಹೆಚ್ಚುವರಿ ಕೊಠಡಿ; ಪರ್ಯಾಯ ವ್ಯವಸ್ಥೆ:

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಸಂದರ್ಭದಲ್ಲಿ ಅಗತ್ಯಬಿದ್ದರೆ ಎರಡು ಹೆಚ್ಚುವರಿ ಕೊಠಡಿಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಜಾನನ ಮನ್ನಿಕೇರಿ ತಿಳಿಸಿದರು.

ಪರೀಕ್ಷೆ ಸಂದರ್ಭದಲ್ಲಿ ಯಾವುದಾದರೂ ಶಾಲೆಯ ವ್ಯಾಪ್ತಿಯಲ್ಲಿ ಸೋಂಕು ಪತ್ತೆಯಾಗಿ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದರೆ ಪರ್ಯಾಯ ವ್ಯವಸ್ಥೆಯನ್ನು ಕೂಡ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಪ್ರತಿದಿನ ಪರೀಕ್ಷೆ ಆರಂಭಕ್ಕಿಂತ ಮುಂಚೆ ಹಾಗೂ ನಂತರ ಕೊಠಡಿಯನ್ನು ಶುಚಿಗೊಳಿಸುವುದು ಮತ್ತು ಪರೀಕ್ಷೆಗೆ ಹಾಜರಾಗುವ ಎಲ್ಲ ಮಕ್ಕಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರಿಗೆ ವಿವರಿಸಿದರು.

ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್ ಗಳನ್ನು ಸ್ವಯಂ ಸೇವಕರಾಗಿ ನಿಯೋಜಿಸಲು ಉದ್ದೇಶಿಸಲಾಗಿದೆ ಎಂದು ಚಿಕ್ಕೋಡಿ ಡಿಡಿಪಿಐ ಮನ್ನಿಕೇರಿ ತಿಳಿಸಿದರು.ಪರೀಕ್ಷೆ ಸಂದರ್ಭದಲ್ಲಿ ಮಕ್ಕಳಿಗೆ ಅಗತ್ಯ ಸಾರಿಗೆ ಸೌಲಭ್ಯ ಒದಗಿಸುವ ಬಗ್ಗೆ ಸಾರಿಗೆ ಇಲಾಖೆ ಜತೆ ಚರ್ಚೆ ನಡೆಸಲಾಗುತ್ತಿದೆ ಎಂದರು.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಸಿದ್ಧತೆ ಕುರಿತು ಹಾಗೂ ಪರೀಕ್ಷೆ ಸಂದರ್ಭದಲ್ಲಿ ತೆಗೆದುಕೊಳ್ಳಲಿರುವ ಕ್ರಮಗಳ ಕುರಿತು ಡಿಡಿಪಿಐ ಎ.ಬಿ‌.ಪುಂಡಲೀಕ ಮಾಹಿತಿಯನ್ನು ನೀಡಿದರು.
ಪರೀಕ್ಷಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಪೂರೈಕೆ ಹಾಗೂ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡುವ ಬಗ್ಗೆ ವಿವರಿಸಿದರು.
ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಬಿಬಿಎಂಪಿ ಹೆಲ್ತ್‌ಕೇರ್‌ಗೆ ಡಿಜಿಟಲ್‌ ರೂಪ, ಸ್ಮಾರ್ಟ್‌ ಕ್ಲಿನಿಕ್‌ಗೆ ಸಿದ್ಧತೆ 65 ವಾರ್ಡ್‌ಗಳಲ್ಲಿ ಹೊಸದಾಗಿ ಪಿಎಚ್‌ಸಿ ಸ್ಥಾಪನೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಡಿಜಿಟಲ್ ರೂಪ ಕೊಟ್ಟು ಅವುಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ಇನ್ನೂ 65 ವಾರ್ಡ್‌ಗಳಲ್ಲಿ ಹೊಸದಾಗಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.


ನಗರದಲ್ಲಿನ ಒಟ್ಟು 198 ವಾರ್ಡ್‌ಗಳಲ್ಲಿ 65 ವಾರ್ಡ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಇಲ್ಲ. ಹೀಗಾಗಿ ತಕ್ಷಣ ಈ ವಾರ್ಡ್‌ಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು. ಜಾಗ ಸಿಗದಿದ್ದರೆ ಬಾಡಿಗೆ ಕಟ್ಟಡಗಳಲ್ಲಿ ಆರಂಭಿಸುವುದಕ್ಕೆ ಉಪ ಮುಖ್ಯಮಂತ್ರಿ ಸೂಚಿಸಿದರು. ಇದಕ್ಕೆ ಅಧಿಕಾರಿಗಳು ಒಪ್ಪಿ, ತಕ್ಷಣ ಆ ಕೆಲಸ ಮಾಡುವ ಭರವಸೆ ನೀಡಿದರು.

ಆರೋಗ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯದ ಅನೇಕ ಯೋಜನೆಗಳು ನಗರದಲ್ಲಿ ಚಾಲನೆಯಲ್ಲಿದ್ದು, ಒಂದೊಂದು ಯೋಜನೆಯ ಮಾಹಿತಿಯನ್ನೂ ಒಂದೊಂದು ರೀತಿ ಸಂಗ್ರಹಿಸಲಾಗುತ್ತಿದೆ. ಇದರಿಂದ ರೋಗಿಗಳ ಮಾಹಿತಿ ಒಂದಕ್ಕೊಂದು ಜೋಡಣೆಯಾಗುತ್ತಿಲ್ಲ. ಹೀಗಾಗಿ ಎಲ್ಲ ಯೋಜನೆಗಳ ಮಾಹಿತಿಯನ್ನು ಒಂದೇ ಡಿಜಿಟಲ್‌ ವೇದಿಕೆಗೆ ತಂದು, ಆ ಪ್ರಕಾರ ಚಿಕಿತ್ಸೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಇದಕ್ಕೆ ತಂತ್ರಜ್ಞಾನದ ನೆರವು ನೀಡಲು ರಾಜ್ಯ ಸರ್ಕಾರದ ಸ್ಟಾರ್ಟ್‌ ಅಪ್‌ ವಿಜನ್ ಗ್ರೂಪ್‌ ಮುಖ್ಯಸ್ಥ ಪ್ರಶಾಂತ ಪ್ರಕಾಶ್‌ ನೇತೃತ್ವದ ತಂಡ ಮುಂದೆ ಬಂದಿದ್ದು, ಒಂದು ತಿಂಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ರೋಗಿಯ ಮಾಹಿತಿಯನ್ನು ಸಂಗ್ರಹಿಸಿ, ಏಕರೂಪದ ಡ್ಯಾಷ್ ಬೋರ್ಡ್‌ ರೂಪಿಸಲಾಗುತ್ತದೆ. ಇದರಿಂದ ಯಾವ ಭಾಗದಲ್ಲಿ ಯಾವ ರೀತಿ ರೋಗಿಗಳು ಇದ್ದಾರೆ; ಅದಕ್ಕೆ ತಕ್ಷಣ ಯಾವ ರೀತಿಯ ಕೈಗೊಳ್ಳಬೇಕು ಎಂಬುದಕ್ಕೂ ಇದು ನೆರವಾಗಲಿದೆ ಎಂದು ಅವರು ಹೇಳಿದರು.

ಇದಲ್ಲದೆ, ನಗರದಲ್ಲಿನ ಎಲ್ಲ ಖಾಸಗಿ ಆಸ್ಪತ್ರೆ ಮತ್ತು ಪ್ರಯೋಗಾಲಯಗಳ ಮಾಹಿತಿ ಕೂಡ ಬಿಬಿಎಂಪಿ ಡ್ಯಾಶ್‌ ಬೋರ್ಡ್‌ಗೆ ಸಿಗುವ ಹಾಗೆ ಮಾಡುತ್ತಿದ್ದು, ಇದು ಕೂಡ ಕೋವಿಂಡ್‌ನಂತಹ ಸಾಂಕ್ರಾಮಿಕ ರೋಗಗಳು ಬಂದಾಗ ತಕ್ಷಣ ಕ್ರಮ ತೆಗೆದುಕೊಳ್ಳಲು ಅನುಕೂಲ ಆಗುತ್ತದೆ ಎಂದರು.

ನಗರದಲ್ಲಿನ ತ್ಯಾಜ್ಯ ನಿರ್ವಹಣೆಯ ಆರೋಗ್ಯ ಕಾರ್ಯಕರ್ತರನ್ನೂ ಆಶಾ ಕಾರ್ಯಕರ್ತರ ಹಾಗೆ ಆರೋಗ್ಯ ಸಂಬಂಧಿ ಮಾಹಿತಿ ಸಂಗ್ರಹಿಸಲು ಬಳಸಿಕೊಳ್ಳಲಾಗುವುದು. ಇದಕ್ಕೆ ಅಗತ್ಯ ಇರುವ ಟ್ಯಾಬ್‌ಗಳನ್ನೂ ಕೊಡಲಾಗುವುದು ಎಂದರು.

ಸ್ಮಾರ್ಟ್‌ ಕ್ಲಿನಿಕ್‌:
ತಜ್ಞ ವೈದ್ಯರ ಚಿಕಿತ್ಸೆ ಬಡವರಿಗೂ ಸಿಗಬೇಕು ಎನ್ನುವ ಕಾರಣಕ್ಕೆ ಕೇಂದ್ರೀಕೃತ ಆರೋಗ್ಯ ಕೇಂದ್ರಗಳನ್ನು ನಗರದ ಐದು ಕಡೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಕೇಂದ್ರಗಳಲ್ಲಿನ ತಜ್ಞ ವೈದ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಇ-ಕ್ಲಿನಿಕ್‌ಗಳ ಮೂಲಕ ರೋಗಿಗಳನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಲಿದ್ದಾರೆ ಎಂದು ವಿವರಿಸಿದರು.

ಬಿಬಿಎಂಪಿ ಹೆಲ್ತ್‌ಕೇರ್‌:
ಈ ಎಲ್ಲ ಆಧುನಿಕ ತಂತ್ರಜ್ಞಾನ ಮತ್ತು ವಿವಿಧ ರೀತಿಯ ತಜ್ಞರಿಂದ ಚಿಕಿತ್ಸೆ ಕೊಡುವ ಈ ಯೋಜನೆಗೆ ಬಿಬಿಎಂಪಿ ಹೆಲ್ತ್‌ಕೇರ್‌ ಎಂದು ಹೆಸರಿಟ್ಟು, ಅದನ್ನೇ ಬ್ರ್ಯಾಂಡ್‌ ಮಾಡುವಂತೆ ಉಪ ಮುಖ್ಯಮಂತ್ರಿ ಸೂಚಿಸಿದರು. ಇದಕ್ಕೆ ಸಿಎಸ್‌ಆರ್‌ ನಿಧಿಯನ್ನೂ ಪಡೆದು, ಮತ್ತಷ್ಟು ಉತ್ಕೃಷ್ಟವಾದಂತಹ ಚಿಕಿತ್ಸಾ ಸೌಲಭ್ಯಗಳನ್ನು ಬಡವರಿಗೆ ಒದಗಿಸಬಹುದು ಎಂದು ಹೇಳಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೇಯರ್‌ ಗೌತಮಕುಮಾರ್‌, ಉಪ ಮೇಯರ್‌ ಮೋಹನರಾಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ಪಾಲಿಕೆ ಆಯುಕ್ತ ಅನಿಲಕುಮಾರ್‌ ಸೇರಿದಂತೆ ಆರೋಗ್ಯ ವಿಭಾಗದ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಿಯಕರನಿಂದ ವಂಚನೆ: ಸೆಲ್ಫಿ ವಿಡಿಯೋ ಮಾಡಿ ನಟಿ ಆತ್ಮಹತ್ಯೆ

ಬೆಂಗಳೂರು: ಇತ್ತಿಚೇಗೆ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗೋ ಪ್ರಕರಣಗಳು ಹೆಚ್ಚಾಗ್ತಿವೆ. ಇಂದು ಪ್ರಿಯಕರನಿಂದ ವಂಚನೆಗೆ ಒಳಗಾದ ಕಿರುತೆರೆ ನಟಿಯೊಬ್ಬರು ವಿಷ ಸೇವನೆಯ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರೋ ಆಘಾತಕಾರಿ ಘಟನೆ ನಡೆದಿದೆ.

ಕಿರುತೆರೆ, ಸಿನಿಮಾ ಹಾಗೂ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದ ಹಾಸನ ಜಿಲ್ಲೆಯ ಬೇಲೂರು ಮೂಲದ ನಟಿ ಚಂದನ(29) ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೇ.28 ರಂದು ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಂದನ ಕಳೆದ 5 ವರ್ಷಗಳಿಂದ ದಿನೇಶ್ ಎಂಬುವವರನ್ನ ಪ್ರಿತಿಸುತ್ತಿದ್ದರು. ಆದ್ರೆ, ದಿನೇಶ್ ಮದುವೆಯಾಗುವುದಾಗಿ ನನ್ನನ್ನು ನಂಬಿಸಿ ಮೋಸ ಮಾಡಿದ್ದಾರೆ. ಅಲ್ಲದೆ ಹಲವು ಭಾರೀ ನನ್ನಿಂದ ಹಣ ಪಡೆದು ವಂಚಿಸಿದ್ದಾರೆ ಅಂತಾ ಸೆಲ್ಫಿ ವಿಡಿಯೋದಲ್ಲಿ ಆರೋಪಿಸಿದ್ದಾರೆ.

ಯಾರ ಜೀವನದಲ್ಲಿಯೂ ಆಟವಾಡಬೇಡಿ, ನಾನು ಇಷ್ಟು ದಿನ ಏನೇ ಮಾಡಿದ್ರು ನಿಮ್ಮನ್ನು ಮದುವೆ ಆಗ್ಬೇಕು ಅಂತಾನೇ ಮಾಡಿದ್ದೇನೆ ಹೊರತು ಬೇರೆನೂ ಅಲ್ಲ ಅಂತಾ ಅಳುತ್ತಲೇ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಅಳುತ್ತಲೇ ವಿಷ ಕುಡಿದು, ಇಷ್ಟು ವಿಷ ಕುಡಿದಿದ್ದೇನೆ ನಾನು ಸಾಯಲು ಇಷ್ಟು ಸಾಕು ಎನಿಸುತ್ತದೆ. ನೀವು ಖುಷಿಯಾಗಿರಿ ಅಂತಾ ವಿಡಿಯೋದಲ್ಲಿ ಹೇಳಿದ್ದಾರೆ. ಇನ್ನೂ ಚಂದನ ವಿಷ ಕುಡಿದ ವಿಚಾರ ಪ್ರಿಯಕರನಿಗೆ ಗೊತ್ತಾಗಿದೆ. ಆತನೇ ಚಂದನಳಾನ್ನ ಆಸ್ಪತ್ರೆಗೆ ಸೇರಿಸಿದ್ದಾನೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಚಂದನ ಸಾವನ್ನಪ್ಪಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ದಿನೇಶ್ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.

70 ವರ್ಷಗಳಲ್ಲಿ ಆಗದ್ದನ್ನು ಒಂದೇ ವರ್ಷದಲ್ಲಿ ಸಾಧಿಸಿದ ಮೋದಿ 2.0: ಡಾ. ಅಶ್ವತ್ಥನಾರಾಯಣ

ರಾಮನಗರ: ಕಳೆದ 70 ವರ್ಷಗಳಲ್ಲಿ ಆಗದ ಎಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮೋದಿ 2.0 ಸರ್ಕಾರ ಮೊದಲ ವರ್ಷದಲ್ಲೇ ಸಾಧಿಸಿ, ದೇಶದಲ್ಲಿ ದೊಡ್ಡ ಮಟ್ಟದ ಸುಧಾರಣೆ ತರಲು ಕಾರಣವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೇರಿ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ರಾಮನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೋದಿ 2.0 ಸರ್ಕಾರದ ಸಾಧನೆಗಳ ಮೇಲೆ ಬೆಳಕು ಚೆಲ್ಲಿದರು.

“ಅದ್ಭುತವಾದ ಜನಾದೇಶದೊಂದಿಗೆ 2019 ಮೇ 30ರಂದು ಎರಡನೇ ಅವಧಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ಈ ಜನಾದೇಶವನ್ನು ಉತ್ತಮ ಆಡಳಿತ ನೀಡಲು ಬಳಸಿಕೊಂಡು, ದೇಶಕ್ಕೆ ಸ್ಥಿರ ಸರ್ಕಾರ ಕೊಟ್ಟ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ತಂತ್ರಜ್ಞಾನ ಬಳಕೆ ಮೂಲಕ ಕಳೆದ 70 ವರ್ಷಗಳಲ್ಲಿ ಆಗದ ಕೆಲಸಗಳನ್ನು ದೃಢ ಸಂಕಲ್ಪದೊಂದಿಗೆ ಮೋದಿ 2.0 ಸರ್ಕಾರ ಸಾಧಿಸಿ ತೋರಿಸಿದೆ,”ಎಂದು ಸಂತಸ ವ್ಯಕ್ತಪಡಿಸಿದರು.

“ಮೊದಲ ಅವಧಿಯಲ್ಲಿ ಜಾರಿ ತಂದ ಜನಧನ್‌, ವಿಮೆ, ಪಿಂಚಣಿ, ಆಯುಷ್ಮಾನ್‌, ಮೇಕ್‌ ಇನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ಸ್ವಚ್ಛ ಭಾರತ, ಉಜಾಲಾ, ಉಜ್ವಲಾ, ಜನೌಷಧಿ ಮುಂತಾದ ಜನಪರ ಯೋಜನೆಗಳು ಹಾಗೂ ನೋಟ್‌ ಬ್ಯಾನ್‌, ಹಣಕಾಸು ವಹಿವಾಟಿಗೆ ಆಧಾರ್‌ ಕಡ್ಡಾಯಗೊಳಿಸುವ ಕಠಿಣ ನಿರ್ಧಾರಗಳು ದೇಶಕ್ಕೆ ಭದ್ರ ಬುನಾದಿಯಾಗಿವೆ. 30 ಕೋಟಿ ಜನರನ್ನು ಹೊಸದಾಗಿ ಬ್ಯಾಂಕಿಂಗ್‌ ವ್ಯವಸ್ಥೆಗೆ ತಂದ ಸರ್ಕಾರ, ಯೋಜನೆಯ ಲಾಭವನ್ನು ಅವರ ಖಾತೆಗೆ ನೇರವಾಗಿ ಜಮೆಯಾಗುವಂತೆ ನೋಡಿಕೊಂಡು ಆಡಳಿತದಲ್ಲಿ ಪಾರದರ್ಶಕತೆ ತಂದಿತು. ಮುಖ್ಯವಾಗಿ, ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಯಾಗಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸುವಂಥ ಮಹತ್ವದ ನಿರ್ಣಯಗಳೇ ಎರಡನೇ ಅವಧಿಗೂ ಜನ ಮೋದಿ ಸರ್ಕಾರವನ್ನು ಆಯ್ಕೆ ಮಾಡಲು ಕಾರಣವಾದವು,”ಎಂದರು.

ಸಿಎಎ ಜಾರಿ-370 ವಿಧಿ ರದ್ದು:

“ಸಂವಿಧಾನದ 370ನೇ ವಿಧಿ ರದ್ದು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಮೋದಿ ಸರ್ಕಾರದ ಐತಿಹಾಸಿಕ ನಿರ್ಣಯ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ತಾತ್ಕಲಿಕವಾಗಿ ಜಾರಿ ತಂದ 370ನೇ ವಿಧಿ ಶಾಶ್ವತಕ್ಕೆ ಉಳಿದುಕೊಂಡಿತ್ತು. ಅದನ್ನು ರದ್ದುಗೊಳಿಸಿದ ಮೋದಿ ಸರ್ಕಾರ, ಜಮ್ಮು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಮಾಡಿತು. ರಾಷ್ಟ್ರ ವಿಭಜನೆ ನಂತರ ನೆರೆ ರಾಷ್ಟ್ರಗಳಲ್ಲಿ ಉಳಿದ ಭಾರತೀಯ ಮೂಲದವರು ಧರ್ಮದ ವಿಚಾರವಾಗಿ ಅಲ್ಲಿ ದೌರ್ಜನ್ಯ ಎದುರಿಸಿ ದೇಶಕ್ಕೆ ವಾಪಸಾದಾಗ ಅವರಿಗೆ ಪೌರತ್ವ ದೊರೆಯದೆ ಒದ್ದಾಡುವ ಪರಿಸ್ಥಿತಿ ಇತ್ತು. ಅಂಥವರ ರಕ್ಷಣೆಗಾಗಿ ‘ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ಮಾಡಿತು. ಪ್ರತಿಪಕ್ಷಗಳ ವಿರೋಧದ ನಡುವೆಯೂ ಈ ವಿಧೇಯಕಗಳಿಗೆ ಅಂಗೀಕಾರ ಪಡೆದದ್ದು ಅಮೋಘ ಸಾಧನೆ,”ಎಂದರು.

ತ್ರಿವಳಿ ತಲಾಖ್‌ ನಿಷೇಧ:

“ತ್ರಿವಳಿ ತಲಾಖ್ ನಿಷೇಧಿಸುವ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳು) ವಿಧೇಯಕ–2019’ ಜಾರಿ ತರುವ ಮೂಲಕ ಮುಸ್ಲಿಂ ಮಹಿಳೆಯರ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯವನ್ನು ಮೋದಿ ಸರ್ಕಾರ ತಡೆಗಟ್ಟಿದೆ. ಜತೆಗೆ, ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸುವ ಕಠಿಣ ಕಾನೂನು ಜಾರಿ ತಂದು, ಮಹಿಳೆಯರು ಮತ್ತು ಮಕ್ಕಳ ನೆರವಿಗೆ ಬಂದಿದೆ,”ಎಂದು ಹೇಳಿದರು.

ರಾಮ ಮಂದಿರದ ಕನಸು ಸಾಕಾರ:

“ದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತದೆ ಎಂಬ ಆಸೆಯನ್ನು ಜನ ಬಿಟ್ಟಿದ್ದರು. ಕೇವಲ ವೋಟಿಗಾಗಿ ರಾಮ ಮಂತ್ರ ಜಪಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಸುಪ್ರೀಂಕೋರ್ಟ್‌ ತೀರ್ಪಿನ ಮೂಲಕ ಶತಮಾನಗಳಷ್ಟು ಹಳೆಯದಾದ ಸಂಘರ್ಷ 2019ರಲ್ಲಿ ಸುಖಾಂತ್ಯ ಕಂಡಿತು. ಸಹಸ್ರಾರು ಭಾರತೀಯರ ಭಾವನೆಗೆ ಮನ್ನಣೆ ತಂದು ಕೊಟ್ಟಿದ್ದು ಕೇಂದ್ರ ಸರ್ಕಾರದ ದೃಢ ನಿರ್ಧಾರ. ಶೀಘ್ರದಲ್ಲೇ ರಾಮ ಮಂದಿರವನ್ನು ಕಣ್ತುಂಬಿಸಿಕೊಳ್ಳುವ ಸೌಭಾಗ್ಯ ನಮ್ಮದಾಗಲಿದೆ,”ಎಂದು ಸಂತಸ ವ್ಯಕ್ತಪಡಿಸಿದರು.

ಕೋವಿಡ್ ನಿರ್ವಹಣೆ ವಿಶ್ವಕ್ಕೆ ಪ್ರೇರಣೆ:

ಕೊವಿಡ್‌ನಂಥ ಪರಿಸ್ಥಿತಿಯಲ್ಲಿ 132 ಕೋಟಿ ಜನರ ರಕ್ಷಣೆಗೆ ಬಂದವರು ನಮ್ಮ ಪ್ರಧಾನಿ. ಅಗತ್ಯ ಕ್ರಮ ವಹಿಸದೇ ಸೋಂಕು ವ್ಯಾಪಕವಾಗಿ ಬೇರೆ ದೇಶಗಳು ತತ್ತರಿಸಿಹೋದ ಸಂದರ್ಭದಲ್ಲಿ ಇಡೀ ವಿಶ್ವ ಈಗ ಭಾರತದತ್ತ ಬೆರಗಿನಿಂದ ನೋಡುವಂತಾಗಿದೆ. ಮೂಲಸೌಕರ್ಯದ ಕೊರತೆ ಹಲವಾರು ಸವಾಲುಗಳ ನಡುವೆ ಕಠಿಣ ನಿರ್ಧಾರ ಕೈಗೊಂಡು ಸೋಂಕು ಹರಡದಂತೆ ತಡೆದು, ಉತ್ತಮ ಆರೋಗ್ಯ ಸೇವೆ ಒದಗಿಸುವ ಜತೆಗೆ ಆರ್ಥಿಕ ಪುನಶ್ಚೇತನಕ್ಕೂ ಕ್ರಮ ಕೈಗೊಂಡಿದ್ದಾರೆ. ನಾಯಕತ್ವ ಉತ್ತಮವಾಗಿದ್ದರೆ ಎಂಥ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂದು ತೋರಿಸಿಕೊಟ್ಟು ಇಡೀ ವಿಶ್ವಕ್ಕೆ ಪ್ರಧಾನಿ ಮೋದಿ ಪ್ರೇರಣೆ ಆಗಿದ್ದಾರೆ,”ಎಂದು ಪ್ರಶಂಸಿಸಿದರು.

“ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಮುಂದಾಗಿರುವ ಪ್ರಧಾನಿ ಮೋದಿ, ಕೊವಿಡ್ ಸಂಕಷ್ಟವನ್ನೇ ಭವಿಷ್ಯದ ಆರ್ಥಿಕ ಮತ್ತು ಉದ್ಯೋಗ ಬೆಳವಣಿಗೆಗೆ ಒಂದು ಅವಕಾಶವಾಗಿ ಪರಿವರ್ತಿಸುವ ಪ್ರಯತ್ನ ಮಾಡಿದ್ದಾರೆ. ವೆಂಟಿಲೇಟರ್‌, ಪಿಪಿಇ ಕಿಟ್‌, ಎನ್‌95 ಮಾಸ್ಕ್‌, ಟೆಸ್ಟಿಂಗ್‌ ಕಿಟ್‌ ಮುಂತಾದ ಪರಿಕರಗಳನ್ನು ದೇಶದಲ್ಲೇ ಉತ್ಪಾದಿಸಿ ಬೇರೆ ರಾಷ್ಟ್ರಗಳಿಗೂ ರಫ್ತು ಮಾಡುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಲಾಕ್‌ಡೌನ್‌ ಸಂಕಷ್ಟದಿಂದ ದೇಶವನ್ನು ಪಾರುಮಾಡಲು ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ,”ಎಂದು ವಿವರಿಸಿದರು.