ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದ ಡಿಸಿಎಂ

ಮುಧೋಳ ಜೂ.1: ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಮುಧೋಳ್ ತಾಲ್ಲೂಕ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯನ್ನು ನಡೆಸಿ, ಪ್ರಗತಿ ಪರಿಶೀಲನೆ ನಡೆಸಿದರು.

ಎಲ್ಲಾ ಇಲಾಖೆಗಳು ಶೇ. 100 ಪ್ರಗತಿ ಸಾಧಿಸಬೇಕಿತ್ರು. ಆದರೆ ಆರ್ಥಿಕ ವರ್ಷದ ಅಂತ್ಯದಲ್ಲಿ ‌ಕೊನೊನಾ ವೈರಸ್ ಹಿನ್ನೆಲೆಯಲ್ಲಿ ಕೆಲವೊಂದು ಇಲಾಖೆಗಳು ಶೇ. 100ರಷ್ಟು ಪ್ರಗತಿ ಸಾಧಿಸಲಾಗಿಲ್ಲ. ಸ್ಥಗಿತ ಗೊಳಿಸಿದ್ದ ಕಾಮಗಾರಿಗಳನ್ನು ಪುನರ್ ಪ್ರಾರಂಭಿಸಿ ಪೂರ್ಣಗೊಳಿಸಿ, ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳು ಕ್ಷೇತ್ರ ಪರಿವೀಕ್ಷಣೆ ನಡೆಸಿ, ಕಾಮಗಾರಿಗಳನ್ನು ಪರಿಶೀಲಿಸಬೇಕು. ಕೊರೊನಾ ನಿಯಂತ್ರಣ ಕ್ಕಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಕ್ವಾರಂಟೈನ್ ನಲ್ಲಿರುವವರು ಹಸಿವಿನಿಂದ ಬಳಲಬಾರದು. ಅವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿ, ಸುರಕ್ಷಿತ ವಾಗಿರುವಂತೆ ಕ್ರಮಕೈಗೊಳ್ಳಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೊನಾ ಹಿನ್ನೆಲೆಯಲ್ಲಿ ಅನೇಕ ಸಮುದಾಯದವರಿಗೆ ಘೋಷಿಸಿದ ಪರಿಹಾರ ಧನವನ್ನು ಕೂಡಲೇ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು. ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಮುಂಗಾರು ಹಂಗಾಮು ಈಗಾಗಲೇ ಪ್ರಾರಂಭವಾಗಿರುವುದರಿಂದ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಬೇಕು.
ಎಲ್ಲಾ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಸಕ್ರೀಯವಾಗಿ ಕಾರ್ಯನಿರ್ವಹಿಸಿ , ಕ್ಷೇತ್ರದ ಅಭಿವೃದ್ಧಿ ಗೆ ಶ್ರಮಿಸಬೇಕು ಎಂದು ಅವರು ಸೂಚಿಸಿದರು.

ಮುಧೋಳ್ ಬೈಪಾಸ್ ರಸ್ತೆ ಕಾಮಗಾರಿ ವೀಕ್ಷಿಸಿದ ಕಾರಜೋಳ:

ಡಿಸಿಎಂ ಗೋವಿಂದ ಎಂ ಕಾರಜೋಳ ಅವರು ಇಂದು ಮುಧೋಳ್ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ಪರಿಶೀಲನೆ ಹಾಗೂ‌ ಗುಣಮಟ್ಟವನ್ನು ‌ಪರಿಶೀಲನೆ ನಡೆಸಿ, ಈ ಕಾಮಗಾರಿ ನಿರ್ಮಾಣ ಮತ್ತು ಭೂಸ್ವಾಧೀನಕ್ಕಾಗಿ ಒಟ್ಟು 72 ಕೋಟಿ ವೆಚ್ಚದ್ದಾಗಿದ್ದು, ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರಂತರವಾಗಿ ಭೇಟಿ ನೀಡಿ, ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಬೇಕು. ಈ ಕಾಮಗಾರಿಯಿಂದ ಮುಧೋಳ್ ನಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ; ಸೋರಿಕೆ ತಡೆಗೆ ವಿಶೇಷ ಕ್ರಮವಹಿಸಲು: ಡಿಸಿಎಂ ಲಕ್ಷ್ಮಣ ಸವದಿ ಸೂಚನೆ

ಸಂಗ್ರಹ ಚಿತ್ರ

ಬಳ್ಳಾರಿ,ಜೂ.1: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಮತ್ತು ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕ್ರಮವಹಿಸಬೇಕು ಎಂದು ಸಾರಿಗೆ ಸಚಿವರು ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಪೊಲೀಸ್ ಜಿಮ್‍ಖಾನಾದಲ್ಲಿ ಸೋಮವಾರ ನಡೆದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ನಮ್ಮ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ಬಹುದೊಡ್ಡ ಹೊಡೆತ ನೀಡಿದ್ದು,ನಾಲ್ಕು ಸಾರಿಗೆ ನಿಗಮಗಳು ಬಹಳಷ್ಟು ನಷ್ಟ ಅನುಭವಿಸಿವೆ.

ರಾಜ್ಯದಲ್ಲಿ 4 ಕೋಟಿ ಜನರು ನಮ್ಮ ಸಾರಿಗೆ ವ್ಯವಸ್ಥೆ ನಂಬಿಕೊಂಡಿದ್ದಾರೆ. ಇದಕ್ಕೆ ಯಾವುದೇ ರೀತಿಯ ಧಕ್ಕೆ ಆಗಬಾರದು ಮತ್ತು ಕರ್ನಾಟಕ ಸಾರಿಗೆ ಸಂಸ್ಥೆಗಳಲ್ಲಿ 1.30ಲಕ್ಷ ಅಧಿಕಾರಿಗಳು ಮತ್ತು ಸಿಬ್ಬಂದಿಯಿದ್ದು, ನಾವೇ ಶ್ರಮಪಡಬೇಕು ಮತ್ತು ಆದಾಯ ಗಳಿಸಬೇಕು ಮತ್ತು ನಮ್ಮ ಸಂಬಳ ತೆಗೆದುಕೊಳ್ಳಬೇಕು ಎನ್ನುವ ಸ್ಥಿತಿ ಇದ್ದು, ನಮ್ಮವರ ಭದ್ರತೆಗೂ ಧಕ್ಕೆ ಆಗದಂತೆ ಕಾರ್ಯನಿರ್ವಹಿಸುವ ಜವಾಬ್ದಾರಿ ನಮ್ಮ ಮುಂದಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಜಾಗೂರಕತೆಯಿಂದ ಹಾಗೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಅನಧಿಕೃತ ವಾಹನಗಳ ಓಡಾಟ ಗಮನಕ್ಕೆ ತನ್ನಿ:

ಯಾವ ಮಾರ್ಗದಲ್ಲಿ ಖಾಸಗಿ ಅನಧಿಕೃತ ವಾಹನಗಳ ಓಡಾಟ ಮಾಡಲಾಗುತ್ತಿವೆಯೋ ಎಂಬುದರ ಕುರಿತು ತಮ್ಮ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಎನ್‍ಇಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಎನ್‍ಇಕೆಎಸ್‍ಆರ್‍ಟಿಸಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಆರ್‍ಟಿಒ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಹೇಳಿದ ಡಿಸಿಎಂ ಸವದಿ ಅವರು ಬಸ್ ನಿಲ್ದಾಣದ 500 ಮೀಟರ್ ಒಳಗಡೆ ಖಾಸಗಿ ವಾಹನಗಳು ಓಡಾಟ ನಡೆಸದಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಹೊಸ್ ಬಸ್ ನಿಲ್ದಾಣ ನಿರ್ಮಾಣ ಹಾಗೂ ಹಳೆ ಬಸ್ ನಿಲ್ದಾಣಗಳ ದುರಸ್ತಿ ಸೇರಿದಂತೆ ಇನ್ನೀತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಿಲ್ಲಾ ಖನಿಜ ನಿಧಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿ ಅಡಿ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪ್ರಸ್ತಾವನೆ ನೀಡುವ ಕೆಲಸ ಮಾಡಿ ಎಂದು ಎನ್‍ಇಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.

ಕೋವಿಡ್ ಲಾಕ್‍ಡೌನ್ ಅವಧಿಯಲ್ಲಿ 401ಕೋಟಿ ರೂ.ನಷ್ಟ:

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಕೋವಿಡ್-19 ನಿಮಿತ್ತ ಸಾರಿಗೆ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ 396.46 ಕೋಟಿ ರೂ. ಸಾರಿಗೆ ಆದಾಯ ಮತ್ತು 4.48 ಕೋಟಿ ರೂ. ವಾಣಿಜ್ಯ ಆದಾಯ ಸೇರಿದಂತೆ 400.92 ಕೋಟಿ ರೂ. ನಷ್ಟವುಂಟಾಗಿದೆ ಎಂದು ಎನ್‍ಇಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಹೀರಾನಸೀಂ ಅವರು ಸಭೆಗೆ ತಿಳಿಸಿದರು.
ಕಲಬುರಗಿ ವಿಭಾಗ-1 ಮತ್ತು ವಿಭಾಗ-2ಗೆ 81.80 ಕೋಟಿ ರೂ.,ಯಾದಗಿರಿ-31.86 ಕೋಟಿ ರೂ.,ರಾಯಚೂರು-54.76 ಕೋಟಿ ರೂ.,ಬೀದರ್-52.38 ಕೋಟಿ ರೂ.,ಕೊಪ್ಪಳ-37.94ಕೋಟಿ ರೂ.,ಬಳ್ಳಾರಿ-33.35ಕೋಟಿ ರೂ.,ವಿಜಯಪುರ-66.78ಕೋಟಿ ರೂ.,ಹೊಸಪೇಟೆ-41.29ಕೋಟಿ ರೂ.ಹಾಗೂ ಕೇಂದ್ರ ಕಚೇರಿ-0.76ಕೋಟಿ ರೂ ನಷ್ಟವುಂಟಾಗಿದೆ ಎಂದು ಅವರು ಹೇಳಿದರು.

ನಾಲ್ಕು ಗ್ರಾಮಗಳಿಗೆ ಸಿಟಿಬಸ್ ಓಡಿಸಿ:

ಬಳ್ಳಾರಿ ನಗರಕ್ಕೆ ಹತ್ತಿರವಿರುವ ಮೋಕಾ,ರೂಪನಗುಡಿ,ಕೋಳಗಲ್ಲು ಮತ್ತು ಬೆಳಗಲ್ಲು ಗ್ರಾಮಗಳಿಗೆ ಬಳ್ಳಾರಿಯಿಂದ ಸಿಟಿ ಬಸ್ ಓಡಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಡಿಸಿಎಂ ಸವದಿ ಅವರಲ್ಲಿ ಕೋರಿದರು.

ಶಾಸಕರ ಅಹವಾಲು ಆಲಿಸಿದ ಡಿಸಿಎಂ ಸವದಿ ಅವರು ಕೂಡಲೇ ಆ ಗ್ರಾಮಗಳಿಗೆ ಸಿಟಿ ಬಸ್ ಓಡಿಸುವುದಕ್ಕೆ ವ್ಯವಸ್ಥೆ ಮಾಡಿ ಎಂದು ಎನ್‍ಇಕೆಎಸ್‍ಆರ್‍ಟಿಸಿ ಡಿಸಿ ಚಂದ್ರಶೇಖರ ಅವರಿಗೆ ಸೂಚಿಸಿದರು.

ಬಳ್ಳಾರಿ ತಾಲೂಕಿನ 3 ಮತ್ತು ಸಿರಗುಪ್ಪ ತಾಲೂಕಿನ 2 ಗ್ರಾಮಗಳಿಗೆ ಜನವಸತಿ ಇಲ್ಲದ ಗ್ರಾಮಗಳಿಗೆ ಬಸ್ ಸೇವೆ ಒದಗಿಸಲಾಗಿಲ್ಲ. ಹೊಸಪೇಟೆ ವಿಭಾಗದ ಕೂಡ್ಲಿಗಿ ಗ್ರಾಮದ 1,ಸಂಡೂರು ತಾಲೂಕಿನ 02 ಮತ್ತು ಹರಪನಳ್ಳಿ ತಾಲೂಕಿನ 5 ಗ್ರಾಮಗಳಿಗೆ ಬಸ್ ಸೇವೆ ಒದಗಿಸಬೇಕಾಗಿದೆ ಎಂದು ಹೊಸಪೇಟೆ ಎನ್‍ಇಕೆಎಸ್‍ಆರ್‍ಟಿಸಿ ವಿಭಾಗೀಯ ಅಧಿಕಾರಿ ಶೀನಯ್ಯ ಅವರು ಡಿಸಿಎಂ ಅವರ ಗಮನಕ್ಕೆ ತಂದರು.

ಬಸ್ ನಿಲ್ದಾಣದಲ್ಲಿ ಕೋವಿಡ್ ಸಾಕಷ್ಟು ಮುಂಜಾಗ್ರತೆ:

ಕೋವಿಡ್ ಅವಧಿಯಲ್ಲಿ ಬಸ್ ನಿಲ್ದಾಣಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಳ್ಳಾರಿ ಮತ್ತು ಹೊಸಪೇಟೆ ವಿಭಾಗೀಯ ಅಧಿಕಾರಿಗಳಾದ ಚಂದ್ರಶೇಖರ ಮತ್ತು ಶೀನಯ್ಯ ಅವರು ಸಭೆಗೆ ತಿಳಿಸಿದರು.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಿಂಗಲ್ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡಲಾಗುತ್ತಿದ್ದು, ಮಾಸ್ಕ್ ಧರಿಸಿದ ಪ್ರಯಾಣಿಕರಿಗೆ ಅನುಮತಿಸಲಾಗುತತಿದೆ. ಸಾರ್ವಜನಿಕರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಬಸ್‍ಗಳಲ್ಲಿ ಗರಿಷ್ಠ 30 ಜನರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.

ಘಟಕಗಳಲ್ಲಿ ಎಲ್ಲ ಸಿಬ್ಬಂದಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಡಿಸ್‍ಇನ್‍ಫೆಕ್ಟ್ ಮಾಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡುವಿಕೆ ಮತ್ತು ಕಡ್ಡಾಯ ಮಾಸ್ಕ್ ಧರಿಸಲಾಗುತ್ತಿದೆ ಎಂದರು.

ಜಿಲ್ಲಾ ವ್ಯಾಪ್ತಿಯಲ್ಲಿ 61778 ವಲಸೆ ಕಾರ್ಮಿಕರ ಕಾರ್ಯಾಚರಣೆ:

ಏ.23ರಿಂದ ಮೇ 31ರವರೆಗೆ ವಲಸೆ ಕಾರ್ಮಿಕರಿಗಾಗಿ ಜಿಲ್ಲಾ ವ್ಯಾಪ್ತಿಯಲ್ಲಿ 2239 ಬಸ್‍ಗಳು ಕಾರ್ಯಾಚರಣೆ ಮಾಡಿಸಲಾಗಿದ್ದು,ಎನ್‍ಇಕೆಎಸ್‍ಆರ್‍ಟಿಸಿ ವ್ಯಾಪ್ತಿಯ ಜಿಲ್ಲೆಗಳಲ್ಲಿ 61778 ವಲಸೆ ಕಾರ್ಮಿಕರನ್ನು ಕಾರ್ಯಚರಣೆ ಮಾಡಲಾಗಿದೆ ಎಂದು ಎನ್‍ಇಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸಭೆಗೆ ತಿಳಿಸಿದರು. ಅಂತರರಾಜ್ಯ ವ್ಯಾಪ್ತಿಯಲ್ಲಿ 311 ಬಸ್‍ಗಳು ಕಾರ್ಯಚರಣೆ ಮಾಡಲಾಗಿದ್ದು,8762 ಪ್ರಯಾಣಿಕರನ್ನು ಕಾರ್ಯಚರಣೆ ಮಾಡಲಾಗಿದೆ ಎಂದರು.
ಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು ಕರೆದುಕೊಂಡು ಬರಲು 3570 ಬಸ್‍ಗಳನ್ನು ಒದಗಿಸಲಾಗಿದ್ದು,70540 ಪ್ರಯಾಣಿಕರನ್ನು ಕರೆದುಕೊಂಡು ಬರಲಾಗಿದೆ. ಕರಾರು ಒಪ್ಪಂದದ ಅನ್ವಯ 10.07ಕೋಟಿ ರೂ. ಬರಬೇಕಾಗಿದೆ ಎಂದರು.

ಸಭೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಆನಂದಸಿಂಗ್, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕ ನಾಗೇಂದ್ರ, ಎನ್‍ಇಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಹೀರಾನಸಿಂ,ಜಿಲ್ಲಾಧಿಕಾರಿ ಎಸ್.ಎಸ್.ನಕುಲ್,ಜಿಪಂ ಸಿಇಒ ಕೆ.ನಿತೀಶ್, ಎಸ್ಪಿ ಸಿ.ಕೆ.ಬಾಬಾ ಮತ್ತಿತರರು ಇದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ ನಿರ್ವಹಣೆಗೆ ಆರೋಗ್ಯ ಇಲಾಖೆಯಿಂದ‌ ಸಂಪೂರ್ಣ ಸಹಕಾರ -ಸುರೇಶ್‌ ಕುಮಾರ್

ಬೆಂಗಳೂರು: ಇದೇ ತಿಂಗಳ 25ರಿಂದ ಪ್ರಾರಂಭವಾಗುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ಮತ್ತು ಸಮರ್ಪಕ ನಿರ್ವಹಣೆಗೆ ವಿಶೇಷವಾಗಿ ಗೃಹ ಮತ್ತು ಆರೋಗ್ಯ ಇಲಾಖೆಗಳ ಹೆಚ್ಚಿನ ಸಹಾಯ-ಸಹಕಾರಗಳೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಪರೀಕ್ಷೆಗಳ ಪೂರ್ವಭಾವಿ ಸುರಕ್ಷತಾ ಕ್ರಮಗಳ ಕುರಿತು ವಿಧಾನಸೌಧದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದರು. ಆರೋಗ್ಯ ಇಲಾಖೆಯ ಹೆಚ್ಚಿನ ಸಹಾಯ ಸಹಕಾರದ ಅಗತ್ಯವಿದೆ ಎಂದು ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು.

ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದಾಗಿ ತಡವಾಗಿ ನಡೆಯುತ್ತಿರುವ ಈ ಬಾರಿಯ ಪರೀಕ್ಷೆಯ ಸುಗಮ ನಿರ್ವಹಣೆ ಮತ್ತು ಪರೀಕ್ಷೆಯ ಪಾವಿತ್ರ್ಯ ಕಾಪಾಡುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಹಕಾರ ಈ ಬಾರಿ ಎಂದಿಗಿಂತ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟ ಸುರೇಶ್‍ಕುಮಾರ್, ಕೊರೊನಾ ಹಿನ್ನೆಲೆಯಲ್ಲಿ ವಿಶೇಷವಾಗಿ ಇಲಾಖೆ ಕೈಗೊಂಡ ಕ್ರಮಗಳು ಮತ್ತು ಆರೋಗ್ಯ ಇಲಾಖೆ ಯಾವ ಯಾವ ಹಂತದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ವಿವರಿಸಿದರು.

*ಆರೋಗ್ಯ ಇಲಾಖೆಯ ಸಂಪೂರ್ಣ ಸಹಕಾರ- ಶ್ರೀರಾಮುಲು*

ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವುದು ಶಿಕ್ಷಣ ಇಲಾಖೆ ಜವಾಬ್ದಾರಿಯಾಗಿದ್ದರೂ ಈ ಬಾರಿಯ ಪರೀಕ್ಷೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದರು.

ರಾಜ್ಯದ 8.5 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಹಾಗೂ ಅವರ ಪೋಷಕರು ಅತ್ಮವಿಶ್ವಾಸವನ್ನ ಕಳೆದುಕೊಳ್ಳದ ರೀತಿಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ಆರೋಗ್ಯ ಸಹಾಯಕ/ ಆಶಾ ಕಾರ್ಯಕರ್ತೆಯರನ್ನ ನಿಯೋಜಿಸಲಾಗುವುದೆಂದ ಸಚಿವ ಶ್ರೀರಾಮುಲು, ಮಕ್ಕಳ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೈಕೋರ್ಟ್ ಆದೇಶ ಮಾಡಿರುವುದರಿಂದ ಇದರಲ್ಲಿ ಆರೋಗ್ಯ ಇಲಾಖೆಯ ಜವಾಬ್ದಾರಿಯೂ ಹಿರಿದಾಗಿದ್ದು, ಪರೀಕ್ಷೆಯ ಸುಗಮ ನಿರ್ವಹಣೆಗೆ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಶ್ರೀರಾಮುಲು ಹೇಳಿದರು. ಹಾಗೆಯೇ ಈ ಕುರಿತು ಇಲಾಖೆಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆದೇಶ ಹೊರಡಿಸಬೇಕು ಮತ್ತು ಪರೀಕ್ಷೆ ಕುರಿತು ಹೆಚ್ಚಿನ ಆಸ್ಥೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾಕಷ್ಟು ಮುಂಚಿತವಾಗಿ ಪರೀಕ್ಷಾ ಕೇಂದ್ರಗಳನ್ನು ರೋಗನಿವಾರಕಗೊಳಿಸಲು ಆರೋಗ್ಯ ಇಲಾಖೆ‌ ಸಹಕರಿಸಲಿದ್ದು, ತಾಲ್ಲೂಕು ಹಂತದಲ್ಲಿ‌ ಆಂಬುಲೆನ್ಸ್ ವ್ಯವಸ್ಥೆ, ಎಲ್ಲ ಪರೀಕ್ಷಾ ಕೇಂದ್ರಗಳು ಕ್ವಾರಂಟೈನ್ ಹಣೆಪಟ್ಟಿಯಿಂದ ಮುಕ್ತಿ, ಅನ್ಯ ರಾಜ್ಯಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು‌ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ‌ಸಂಪೂರ್ಣ ಸಹಕಾರ ನೀಡಲಾಗುವುದೆಂದು ಭರವಸೆ‌ ನೀಡಿದರು.‌

ಸಭೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಆಯುಕ್ತ ಡಾ. ಕೆ.ಜಿ.ಜಗದೀಶ್, ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ದ್ವಿತೀಯ ಪಿಯು ಮೌಲ್ಯಮಾಪನ ಅಬಾಧಿತವಾಗಿದ್ದು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ- ಸಚಿವ ಸುರೇಶ್ ಕುಮಾರ್‌ ವಿಶ್ವಾಸ

ಬೆಂಗಳೂರು:ರಾಜ್ಯದಲ್ಲಿ‌ ಎಂಟು ಜಿಲ್ಲೆಗಳ 34 ಕೇಂದ್ರಗಳಲ್ಲಿ ದ್ವಿತೀಯ ಪಿಯು ವಿವಿಧ ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದ್ದು ಸುಮಾರು 6500 ಉಪನ್ಯಾಸಕರು ಈ ಪ್ರಕ್ರಿಯೆ ಯಲ್ಲಿ ತೊಡಗಿಸಿಕೊಂಡಿದ್ದು, ನಿಗದಿತ ಅವಧಿಯಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ವಿಜಯ ಹಾಗೂ ಎಸ್ ಎಸ್.ಎಂ ಆರ್ ವಿ‌ ಕಾಲೇಜುಗಳಲ್ಲಿನ ಮೌಲ್ಯಮಾಪನ ಕೇಂದ್ರಗಳಿಗೆ ಇಂದು ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್, PCMB ಹಾಗೂ ಇನ್ನೂ ನಡೆದಿರದ‌‌ ಇಂಗ್ಲಿಷ್ ಪರೀಕ್ಷಾ ಪತ್ರಿಕೆ‌‌ ಹೊರತುಪಡಿಸಿ ಉಳಿದೆಲ್ಲ ವಿಷಯಗಳ‌ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದ್ದು, ಇಂತಹ ಸಂದರ್ಭದಲ್ಲಿಯೂ ಉಪನ್ಯಾಸಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ, ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಕೋವಿಡ್ ಹಿನ್ನೆಲೆಯಲ್ಲಿ ಕಂಟೇನ್ ಮೆಂಟ್ ವಲಯಗಳು, ಅನಾರೋಗ್ಯ ಪೀಡಿತರು, ಗರ್ಭಿಣಿಯರು ಸೇರಿದಂತೆ ಹಲವು ವ್ಯಕ್ತಿಗಳಿಗೆ ಮೌಲ್ಯಮಾಪನ ಪ್ರಕ್ರಿಯೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದ್ದು ಸಾಮರ್ಥ್ಯವುಳ್ಳ‌ ಉಪನ್ಯಾಸಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸ್ವಯಂಪ್ರೇರಿತ ರಾಗಿ ಮುಂದಿನ‌ ದಿನಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಪಿಸಿಎಂಬಿ ವಿಷಯಗಳ ಮೌಲ್ಯಮಾಪನಕ್ಕೆ ಹೆಚ್ಚುವರಿ ಉಪನ್ಯಾಸಕರ‌ ಅಗತ್ಯತೆ ಇದ್ದು, ನಗರ ಕೇಂದ್ರಗಳಲ್ಲಿ ವಸತಿ, ಆಹಾರ‌ಸೌಕರ್ಯಗಳ ಲಭ್ಯತೆ ಆಧಾರದ‌ ಮೇಲೆ ಆರಂಭ ದಿನಾಂಕ ನಿರ್ಧರಿಸಲಾಗುವುದೆಂದ ಸಚಿವ ಸುರೇಶ್ ಕುಮಾರ್, ಜೂನ್ 18 ರಂದು ನಡೆಯಲಿರುವ ಇಂಗ್ಲಿಷ್ ಭಾಷಾ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ‌ ನಡೆಸಲು ಈಗಾಗಲೇ ಸೂಚನೆ‌ ನೀಡಲಾಗಿದೆ‌ ಎಂದು ಹೇಳಿದರು.

ಪಿಯುಸಿ ಇಂಗ್ಲಿಷ್ ಪರೀಕ್ಷೆ: ವಲಸೆ ಕಾರ್ಮಿಕರ ಮಕ್ಕಳು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ

ಬೆಂಗಳೂರು: ಜೂನ್ 18 ರಂದು ನಡೆಯಲಿರುವ ಪಿಯುಸಿ ಇಂಗ್ಲಿಷ್ ಪತ್ರಿಕೆಯ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿನಿಲಯವಾಸಿಯಾಗಿದ್ದ ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರ ಮಕ್ಕಳಿಗೆ ಕೊರೋನಾ ಹಿನ್ನೆಲೆಯಲ್ಲಿ ತಮಗೆ ಸನಿಹವಾಗುವ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ವಿದ್ಯಾರ್ಥಿನಿಲಯ ವಾಸಿಗಳು ಮತ್ತು ವಲಸೆ ಕಾರ್ಮಿಕರ ಮಕ್ಕಳು ಲಾಕ್-ಡೌನಿಂದಾಗಿ ತಮ್ಮ ತಮ್ಮ ಸ್ವಂತ ಸ್ಥಳಗಳಿಗೆ ತೆರಳಿರುವ ಹಿನ್ನೆಲೆಯಲ್ಲಿ ಅವರಿರುವ ಸ್ಥಳದ ಸಮೀಪದ ಜಿಲ್ಲೆಯ, ತಾಲೂಕಿನ ಅವರು ಬಯಸುವ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ 16229 ವಿದ್ಯಾರ್ಥಿಗಳು ಪ್ರಸ್ತುತ ತಾವಿರುವ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಇಚ್ಛೆ ವ್ಯಕ್ತಪಡಿಸಿದ್ದು, ಅದರಂತೆ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗುವ ಪ್ರಕ್ರಿಯೆ ನಡೆಯುತ್ತಿದ್ದು, ಇವರಿಗೆ ನಿಗದಿಪಡಿಸಲಾದ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಶೀಘ್ರದಲ್ಲೆ ಪಿಯು ಮಂಡಳಿ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಹಾಗೆಯೇ ರಾಜ್ಯದಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದ ಹೊರ ರಾಜ್ಯದ ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳಿದ್ದು, ಅವರ ಇಚ್ಛೆಯಂತೆ ಆ ರಾಜ್ಯದ ಗಡಿ ಭಾಗದ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ವಿಶೇಷವಾಗಿ ಕಾಸರಗೋಡಿನ ಗಡಿ ಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ಗಡಿಭಾಗದಿಂದ ಪರೀಕ್ಷಾ ಕೇಂದ್ರಕ್ಕೆ ಮತ್ತು ಪರೀಕ್ಷೆ ಸಮಯದ ನಂತರ ಗಡಿ ಭಾಗದವರೆಗೆ ಬಸ್ ವ್ಯವಸ್ಥೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ಪಿಯು ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತಂತೆ ಹೆಚ್ಚಿನ ವಿವರಗಳಿಗೆ ಪಿಯು ಮಂಡಳಿಯ ಸಹಾಯವಾಣಿ ಸಂಖ್ಯೆ- 080-23083900 ನ್ನು ಸಂಪರ್ಕಿಸಬಹುದಾಗಿದೆ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಡಿಯೂರಪ್ಪ ಪೂರ್ಣಾವಧಿ ಮುಗಿಸಲಿದ್ದಾರೆ: ಶ್ರೀರಾಮುಲು

ಬೆಂಗಳೂರು: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಬಸವರಾಜ್ ಪಾಟೀಲ್ ಯತ್ನಾಳ್, ನಿರಾಣಿ, ಕತ್ತಿಯವರು ನಮ್ಮ ಹಿರಿಯ.ನಾಯಕರು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಅದು ವ್ಯತ್ಯಾಸ ಅಲ್ಲ. ಈ ಬಗ್ಗೆ ಜನರಲ್ಲಿ ಗೊಂದಲ ಉಂಟಾಗಬಾರದು. ಯಡಿಯೂರಪ್ಪ ಮುಂದಿನ ಮೂರು ವರ್ಷ ಸಿಎಂ ಆಗಿ ಇರ್ತಾರೆ. ಎಲ್ಲಾ ಒಗ್ಗಟ್ಟಿನಿಂದ ಇದ್ದೇವೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

7 ಮಿನಿಸ್ಟರ್ ಕ್ವಾಟ್ರಸ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು
ಮುಖ್ಯಮಂತ್ರಿ ಯಡಿಯೂಪ್ಪನವರು ನಾಡಿನ ಅಭಿವೃದ್ಧಿಗೂ ಪಣತೊಟ್ಟು ನಿಂತವರು. ಕೊರೋನಾ ಶುರುವಾದಗಲೇ ಲಾಕ್ ಡೌನ್ ಷೋಷಣೆ ಮಾಡಿ ಸಮಸ್ಯೆ ಗೆ ಸ್ಪಂದಿಸಿದ್ದಾರೆ. ಆಹಾರ ಪೂರೈಕೆಯಲ್ಲಿ ಕೂಡ ಯಾವುದೇ ಸಮಸ್ಯೆಯಾಗದ ಹಾಗೆ ನೋಡಿಕೊಂಡಿದ್ದಾರೆ.Front line worries ಗೆ ಮೃತ ಪಟ್ಟರೆ 30ಲಕ್ಷ ರೂ ಅನುದಾನ ಘೋಷಣೆ ಮಾಡಿದ್ದಾರೆ.ಇನ್ನು ಸರ್ಕಾರ ರಚನೆಯಾದ ಹೊಸತರಲ್ಲಿ ನೆರೆಹಾವಳಿ ವೇಳೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ 24ಗಂಟೆ ಸಿಎಂ ಕೆಲಸ ಮಾಡಿದ್ದಾರೆ. ಅವರು ಸಮರ್ಥ ನಾಯಕರು ಎಂದು ಶ್ರೀರಾಮುಲು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪಕ್ಷ. ಇಲ್ಲಿ ಯಾರೇ ಮಂತ್ರಿಯಾಗಬೇಕು ಅಂದ್ರು ಹೈಕಮಾಂಡ್ ತೀರ್ಮಾನ ಮಾಡುತ್ತೆ.
ನಾನು 3ನೇ ಬಾರಿ ಮಂತ್ರಿಯಾಗಿದ್ದೇನೆ
ಸ್ವಾರ್ಥದಿಂದ ರಾಜಕೀಯ ಮಾಡಿದ ವ್ಯಕ್ತಿ ಅಲ್ಲ ನಾನು. ಸಮರ್ಥವಾಗಿ ಈ ಹಿಂದೆ ಆರೋಗ್ಯ ಇಲಾಖೆ ನಿರ್ವಹಿಸಿದೆ.
ಹಾಗಾಗೀ ಈ ಬಾರಿ ಅದೇ ಕೊಟ್ಟಿದ್ದಾರೆ.
ನಾನು ಡಿಸಿಎಂ ಕೊಟ್ಟಿಲ್ಲ ಅಂತ ಯಾವತ್ತು ನೋವು ಪಟ್ಟಿಲ್ಲ. ಪಕ್ಷ ನಂಗೆ ರಾಜೀನಾಮೆ ಕೊಡೊದಕ್ಕೆ ತಿಳಿಸಿದ್ರೆ
ಖಂಡಿತವಾಗಿಯೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಪಿಪಿಈ ಕಿಟ್ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ . ಯಾವುದೇ ದಾಖಲೆ ಬೇಕಾದ್ರೂ ಕೊಡ್ತೇವೆ.ಹೆಚ್ ಕೆ ಪಾಟೀಲ್ ಕೇಳಿರುವ ದಾಖಲೆಯನ್ನು ನಾನೇ ಅವರಿಗೆ ಕಳುಹಿಸಿ ಕೊಡ್ತೇನೆ. ಸ್ಪೀಕರ್ ಪರಮಾಧಿಕಾರ ದ ಬಗ್ಗೆ ನಾನು ಪ್ರಶ್ನೆ ಮಾಡಲ್ಲ ಎಂದು ಸಚಿವರಾದ ಶ್ರೀರಾಮುಲು ತಿಳಿಸಿದ್ದಾರೆ.