ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ,ಹಲವು ಮಹತ್ವದ ನಿರ್ಧಾರ ಪ್ರಕಟ

ಬೆಂಗಳೂರು,ಮೇ-28:ಐದು ರಾಜ್ಯಗಳ ವಿಮಾನ ಸಂಖ್ಯೆ ಕಡಿತ,ಪ್ರತಿ ಹೆಕ್ಟೇರ್ ಮೆಕ್ಕೆಜೋಳಕ್ಕೆ ಐದು ಸಾವಿರ ಪರಿಹಾರ,ಪೊಲೀಸ್ ನೇಮಕಾತಿ ವಯೋಮಿತಿ ಸಡಿಲಿಕೆ,ಎಲ್ಲಾ ಚಾಲಕರಿಗೆ ಪರಿಹಾರ ಸೇರಿದಂತೆ ಹಲವು ನಿರ್ಧಾರಗಳನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಂಪುಟ ಸಭೆಯು ಕೆಲ ಮಹತ್ವದ ನಿರ್ಧಾರ ಕೈಗೊಂಡಿತು.

ಸಂಪುಟದ ನಿರ್ಣಯಗಳು:

ಜೂನ್ 23ಕ್ಕೆ ವಿಧಾನ‌ಪರಿಷತ್ ನ ಐದು ನಾಮ ನಿರ್ದೇಶನ ಸ್ಥಾನಗಳು ಖಾಲಿಯಾಗಲಿದೆ.ನಾಮನಿರ್ದೇಶನ ಶಿಫಾರಸ್ಸು ಮಾಡುವ ಅಧಿಕಾರವನ್ನು ಸಿಎಂ ಗೆ ನೀಡಲಾಗಿದೆ

ಉಡುಪಿ,ಚಿಕ್ಕಮಗಳೂರು,ಚಾಮರಾಜನಗರ,ಮಂಡ್ಯ ಜಿಲ್ಲೆಗಳಲ್ಲಿ ಔಷಧ ದಾಸ್ತಾನು ಉಗ್ರಾಣ ನಿರ್ಮಾಣಕ್ಕೆ ನೀಡಲು ನಿರ್ಧರಿಸಲಾಗಿದೆ

ಚಿಕ್ಕಬಳ್ಳಾಪುರ ಜಿಲ್ಕೆ ಮಳ್ಳೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ಜಮೀನನ್ನು ನಿಸಾರ್ ಅಹಮದ್ ಟ್ರಸ್ಟ್ ಗೆ ನೀಡಲು ನಿರ್ಧಾರಿಸಲಾಗಿದೆ

ಕರ್ನಾಟಕ ಸಹಕಾರಿ ಕೃಷಿ ಮತ್ರು ಗ್ರಾಮೀಣಾಭಿವೃದ್ದಿ ಬ್ಯಾಂಕ್ 1500ಕೋಟಿ ರೂ ಸಾಲ ಕ್ಜೆ ಖಾತ್ರಿ ನೀಡಲಾಗಿದೆ

ಪುತ್ತೂರು ತಾಲೂಕಿನಲ್ಲಿ ಕುಮಾರಧಾರ ನದಿಗೆ ಸೇತುವೆ ನಿರ್ಮಾಣಕ್ಕೆ 15ಕೋಟಿ ರೂ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ

ಪೊಲೀಸ್ ನೇಮಕಾತಿ ವಯೋಮತಿ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ.ಸಾಮಾನ್ಯ ವರ್ಗಕ್ಕೆ 30 ವರ್ಷಮತ್ತು ಮೀಸಲು ಕ್ಯಾಟಗರಿಗೆ 38 ವರ್ಷದವರಗೆ ಒನ್ ಟೈಮ್ ಸಡಿಲಿಕೆ ನೀಡಲಾಗಿದೆ.

ಕೋವಿಡ್ ಪ್ಯಾಕೇಜ್ ಮೆಕ್ಕೆ ಜೋಳ ಬೆಳೆದ ರೈತರಿಗೆ ಹೆಕ್ಟೇರ್ ಗೆ ಎಕರೆಗೆ ಐದು ಸಾವಿರ ರೂ.ನೀಡಲು ನಿರ್ಧರಿಸಲಾಗಿದೆ.ಕ್ಷೌರಿಕರು,ಆಟೋ ರಿಕ್ಷಾ,ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂ ಪರಿಹಾರ ನೀಡಲು ವಿಧಿಸಲಾಗಿದ್ದ ಷರತ್ತುಗಳನ್ನು ಸಡಿಲಿಸಲಾಗಿದೆ.ಎಲ್ಲ ಚಾಲಕರಿಗೂ ಪರಿಹಾರ ನೀಡಲು ನಿರ್ಧರಿಸಲಾಗಿದೆ.

ಮಹಾರಾಷ್ಟ್ರ,ಗುಜರಾತ್,ತಮಿಳುನಾಡು,ಮಧ್ಯಪ್ರದೇಶ,ರಾಜಸ್ತಾನಗಳಿಂದ ಏರ್ ಟ್ರಾಫಿಕ್ ನಿರ್ಬಂಧ ಮಾಡಲು ನಿರ್ಧಾರ.ರಸ್ತೆ ಮೂಲಕವೂ ಸಹ ಈ ರಾಜ್ಯಗಳಿಂದ ಬರುವವರಿಗೆ ವಿಧಿಸುವ ನಿರ್ಬಂಧ ಮುಂದುವರಿಸಲಾಗಿದೆ

ಮಹಾರಾಷ್ಟ್ರದಿಂದ ಬರುವವರ‌ಲೋಡ್ ಹೆಚ್ಚಾಗುತ್ತಿದೆ.ವಿಶೇಷವಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ಕಡೆಯಿಂದ ಬರುವವರಿಗೆ ಹೆಚ್ಚು ನಿರ್ಬಂಧ ವಿಧಿಸಲಾಗುತ್ತಿದೆ.ಕಳ್ಳದಾರಿಯಿಂದ ರಾಜ್ಯ ಪ್ರವೇಶ ಮಾಡುವುದನ್ಬು ತಡೆಯಲು ಹೆಚ್ಚು ನಿಗಾ ವಹಿಸುವಂತೆ ಪೊಲೀಸರಿಗೆ ಆದೇಶ ನೀಡಲಾಗಿದೆ.

ಹೊರ ರಾಜ್ಯಗಳಿಂದ ಬಂದಿರುವವರ ಟೆಸ್ಟ್ ಹಾಗೂ ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಮತ್ತೆ ಬೇರೆಯವರಿಗೆ ರಾಜ್ಯ ಪ್ರವೇಶಕ್ಕೆ ಅವಕಾಶವಿಲ್ಲ.ಬ್ಯಾಚ್ ಬೈ ಬ್ಯಾಚ್ ಕರೆಸಿಕೊಳ್ಳುತ್ತೇವೆ

ಬಿಕ್ಷಾಟನೆ ನಿರ್ಮೂಲನಾ ಕಾಯ್ದೆ ತಿದ್ದುಪಡಿ ಯನ್ನು ಸಚಿವ ಸಂಪುಟ ಸಭೆ ಅಂಗೀಕರಿಸಲಾಗಿದೆ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗ್ಲೋವ್ ಬಾಕ್ಸ್ ಟೆಸ್ಟಿಂಗ್‍ ಬೂತ್‌ ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು – ಮೇ 28, 2020: ತ್ವರಿತವಾಗಿ ಮತ್ತು ಹೆಚ್ಚಿನ ಸಂಖ್ಯೆಯ ಕೋವಿಡ್ ಮಾದರಿ ಪರೀಕ್ಷೆ ನಡೆಸಲು ಅನುವಾಗುವಂತೆ ವಿಶಿಷ್ಟ ವಿನ್ಯಾಸದ ಸ್ವಾಬ್ ಕಲೆಕ್ಟಿಂಗ್ ಬೂತ್‍ಗೆ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಗ್ಲೋವ್ ಬಾಕ್ಸ್ ಟೆಸ್ಟಿಂಗ್ ಬೂತ್ ಹೆಸರಿನ ಈ ವಿಶಿಷ್ಟ ವಿನ್ಯಾಸದ ಬೂತ್‍ಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಇದೊಂದು ವಿಶೇಷ ರೀತಿಯ ಮೊಬೈಲ್ ಸ್ವಾಬ್ ಸ್ವೀಕೃತಿ ಬೂತ್ ಆಗಿದ್ದು ಪರೀಕ್ಷಿಸುವವರಿಗೆ ಹಾಗೂ ಪರೀಕ್ಷೆಗೆ ಒಳಗಾಗುವವರಿಗೆ ಸೋಂಕು ತಗುಲುವ ಯಾವುದೇ ಅಪಾಯವಿಲ್ಲದೆ ಸುಲಭವಾಗಿ ಮತ್ತು ಸುರಕ್ಷಿತವಾಗಿ ಕಾರ್ಯನಿರ್ವಹಿಸಬಹುದೆಂದು ತಿಳಿಸಿದ್ದಾರೆ.

ಗ್ಲಾಸ್ ಬಾಕ್ಸ್ ಒಳಗಿನಿಂದ ಮಾದರಿಗಳನ್ನು ಸ್ವೀಕರಿಸುವ ವಿನ್ಯಾಸ ಹೊಂದಿರುವ ಈ ಬೂತ್‍ಗಳಲ್ಲಿ, ಪರೀಕ್ಷಾ ಮಾದರಿ ನೀಡುವ ವ್ಯಕ್ತಿಯು ಹೊರಗಿನಿಂದಲೇ ಸ್ಯಾಂಪಲ್ ನೀಡಬಹುದಗಿದೆ. ಇದರಿಂದ ನೇರ ಸಂಪರ್ಕವಿಲ್ಲದೆ ಶಂಕಿತರ ರಕ್ತಮಾದರಿಗಳನ್ನು ಪಡೆಯಬಹುದಾಗಿರುವುದರಿಂದ ಉಭಯ ಕಡೆಯಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಅತ್ಯಂತ ವಿರಳವಾಗಿವೆ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ. ಪಿಪಿಇ ಕಿಟ್ ಅವಶ್ಯಕತೆ ಇಲ್ಲದೆ ಕಡಿಮೆ ಸಿಬ್ಬಂದಿಯಿಂದಲೇ ಕಾರ್ಯನಿರ್ವಹಿಸಬಹುದಾದ ಈ ಬೂತ್‌ಗಳು ಪರೀಕ್ಷಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಿವೆ. ಕೋವಿಡ್ ವಿರುದ್ಧದ ಸಮರದಲ್ಲಿ ಇದು ಮಹತ್ವದ ಪಾತ್ರ ವಹಿಸಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಕೊರೋನ ವಿರುದ್ಧದ ಹೋರಾಟದಲ್ಲಿ ಆರಂಭದಿಂದಲೂ ಟೆಸ್ಟಿಂಗ್‍ಗೆ ಹೆಚ್ಚಿನ ಒತ್ತು ನೀಡುತ್ತಿರುವ ಕರ್ನಾಟಕ ಸೋಂಕಿತರ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದೆ. ಈ ನಿಟ್ಟಿನಲ್ಲಿ ಇಂತಹ ವಿಶಿಷ್ಟ ವಿನ್ಯಾಸದ ಬೂತ್ ಸಿದ್ಧಪಡಿಸಿರುವುದಕ್ಕಾಗಿ ಲ್ಯಾಮ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್‍ನ ಇಂಜಿನಿಯರ್‌ಗಳು ಮತ್ತು ವಿವಿಧ ತಜ್ಞ ವೈದ್ಯರುಗಳನ್ನು ಅಭಿನಂದಿಸಿರುವ ಸಚಿವ ಸುಧಾಕರ್ ಅವರು ಈ ಬೂತ್‍ಗಳನ್ನು ಗಡಿಭಾಗದ ಚೆಕ್ ಪೋಸ್ಟ್‌ಗಳಲ್ಲಿ ಮತ್ತು ಸೋಂಕು ಹೆಚ್ಚಿರುವ ಹಾಟ್ ಸ್ಪಾಟ್‌ಗಳಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವರು ಮಿಂಟೋ ಕಣ್ಣಿನ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ಯಾಸ್ಟ್ರೋಎಂಟೆರಾಲಜಿಯ ಕಟ್ಟಡದ ಪರಿವೀಕ್ಷಣೆ ನಡೆಸಿದರು.

ಸಾವರ್ಕರ್‌ ವಿವಾದ ಪ್ರತಿಪಕ್ಷಗಳ ಸಣ್ಣತನ: ಡಾ.ಅಶ್ವತ್ಥನಾರಾಯಣ

ಬೆಂಗಳೂರು : ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಮಕರಣ ಮಾಡುವ ಸಂಬಂಧ ಪ್ರತಿಪಕ್ಷಗಳ ವಿರೋಧ ಅವರ ಸಣ್ಣತನಕ್ಕೆ ಸಾಕ್ಷಿಯಾಗಿದೆ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಾನ್ ವ್ಯಕ್ತಿ ಬಗ್ಗೆ ಈ ರೀತಿ ಅಗೌರವ ಸೂಚಿಸುವುದು ಸರಿ ಅಲ್ಲ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಕಿಡಿ ಕಾರಿದ್ದಾರೆ.

ಕೆ-ಸೆಟ್ ತರಬೇತಿ ಕಾರ್ಯಕ್ರಮಕ್ಕೆ ಆನ್‌ಲೈನ್‌ ಮೂಲಕ ಗುರುವಾರ ನಡೆದ ಸಮಾರೋಪದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

“ಸಾವರ್ಕರ್ ಬಗ್ಗೆ ಪ್ರತಿಪಕ್ಷಗಳು ಹಲವಾರು ಬಾರಿ ಕ್ಷುಲ್ಲಕ ಆರೋಪ ಮಾಡಿ, ಅವರ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಿವೆ. ರಾಜ್ಯಕ್ಕೆ ಸೇರದ ವ್ಯಕ್ತಿಯ ಹೆಸರನ್ನು ಮೇಲ್ಸೇತುವೆಗೆ ನಾಮಕರಣ ಮಾಡಬಾರದು ಎಂಬ ಹೇಳಿಕೆ ಒಪ್ಪಲಾಗದು. ರಾಜ್ಯಕ್ಕೆ ಸೇರದ ಅನೇಕರ ಹೆಸರನ್ನು ಪ್ರತಿಪಕ್ಷಗಳು ಧಾರಾಳವಾಗಿ ಬಳಸಿಕೊಂಡಿವೆ. ಆದರೆ, ಸ್ವಾತಂತ್ರ್ಯ ಸೇನಾನಿ ಸಾವರ್ಕರ್‌ ಹೆಸರಿನ ಬಗ್ಗೆ ಮಾತ್ರ ಆಕ್ಷೇಪ ತೆಗೆಯುವುದನ್ನು ಖಂಡಿಸುತ್ತೇನೆ,”ಎಂದರು.

“ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷರಿಂದ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಒಳಪಟ್ಟಿದ್ದ ಅಪ್ರತಿಮ ದೇಶ ಭಕ್ತನ ಹೆಸರನ್ನು ನಗರದ ಮೇಲ್ಸೇತುವೆಗೆ ಇಡಲು ವಿರೋಧ ವ್ಯಕ್ತಪಡಿಸುವ ಮೂಲಕ ಪ್ರತಿಪಕ್ಷಗಳು ಜನರ ಭಾವನೆಯನ್ನು ಘಾಸಿಗೊಳಿಸಿವೆ,”ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಸಮಾರಂಭಕ್ಕೆ ಸದ್ಯ ಹೆಚ್ಚು ಜನ ಸೇರುವಂತಿಲ್ಲ ಎಂಬ ಕಾರಣಕ್ಕೆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮ ಮುಂದೂಡಲಾಗಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಬಗ್ಗೆ ಯಾವುದೇ ಅನುಮಾನ ಬೇಡ,” ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಪ್ರವೇಶ ಪ್ರಮಾಣ ಹೆಚ್ಚಿಸಿ: ಮುಕ್ತ ವಿವಿಗೆ ಡಾ.ಅಶ್ವತ್ಥನಾರಾಯಣ ಸೂಚನೆ

ಬೆಂಗಳೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಪ್ರಮಾಣ (ಗ್ರಾಸ್ ಎನ್‌ರೋಲ್‌ಮೆಂಟ್ ರೇಶ್ಯೊ) ಹೆಚ್ಚಿಸಲು ಅಗತ್ಯ ಕ್ರಮ ವಹಿಸಿ, ಕಾರ್ಯಸೂಚಿ ರೂಪಿಸಲು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ತರಬೇತಿ ಕಾರ್ಯಕ್ರಮಕ್ಕೆ ಆನ್‌ಲೈನ್‌ ಮೂಲಕ ಗುರುವಾರ ನಡೆದ ಸಮಾರೋಪದಲ್ಲಿ ಪಾಲ್ಗೊಂಡ ನಂತರ ಅವರು ಮಾತನಾಡಿದರು.

“ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಪ್ರಮಾಣ ಹೆಚ್ಚಿಸುವಲ್ಲಿ ಮುಕ್ತ ವಿಶ್ವವಿದ್ಯಾಲಯ ಅತಿ ಮುಖ್ಯವಾದ ಪಾತ್ರವಹಿಸಬೇಕು. ಈ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕಾರ್ಯಸೂಚಿ ರೂಪಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇನೆ,”ಎಂದು ತಿಳಿಸಿದರು.

“ಮುಕ್ತ ವಿವಿ ವಿರುದ್ಧ ಹಣ ದುರ್ಬಳಕೆ ಸೇರಿದಂತೆ ಹಲವು ಆರೋಪಗಳಿದ್ದು, ಇಂತಹ ಕಳಂಕಗಳಿಂದ ಮುಕ್ತರಾಗಲು ಕ್ರಿಯಾ ಯೋಜನೆ ರೂಪಿಸಬೇಕು. ಉತ್ತಮ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸುವ ಜತೆಗೆ ಆಡಳಿತದಲ್ಲಿ ಪಾರದರ್ಶಕತೆಗೆ ಒತ್ತು ನೀಡಿ ಮಾದರಿ ವ್ಯವಸ್ಥೆ ತರಲು ಆದೇಶಿಸಲಾಗಿದೆ,” ಎಂದು ಅವರು ಹೇಳಿದರು.

*ಕೆಸೆಟ್‌ ಆನ್‌ಲೈನ್‌ ತರಬೇತಿ*
“ಕೊರೊನ ಲಾಕ್‌ಡೌನ್‌ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದವರು ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದವರ ಅಭ್ಯಾಸಕ್ಕೆ ಅಡ್ಡಿಯಾಗದಂತೆ, ಆನ್‌ಲೈನ್‌ ಮೂಲಕ ತರಬೇತಿ ಮುಂದುವರಿಸಿದ್ದು ಶ್ಲಾಘನೀಯ. ಯುಪಿಎಸ್‌ಸಿ, ಕೆಪಿಎಸ್‌ಸಿ, ಕೆಸೆಟ್‌, ಯುಜಿಸಿ-ನೆಟ್‌, ಪಿಎಸ್‌ಐ, ಬ್ಯಾಂಕಿಂಗ್‌, ಶಿಕ್ಷಕರ ತರಬೇತಿ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್ ತರಬೇತಿ ನಡೆಯುತ್ತಿರುವುದು ಮೆಚ್ಚುವ ವಿಷಯ ಎಂದು ಹೇಳಿದರು.

“ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ನಾನಾ ವಿಷಯ ತಜ್ಞರನ್ನು ಈ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡು, ವಿದ್ಯಾರ್ಥಿಗಳಿಗೂ ಎಲ್ಲ ರೀತಿಯ ಸೌಕರ್ಯ ಕಲ್ಪಿಸಿ ಕೆಸೆಟ್‌ ಪರೀಕ್ಷೆಗೆ ಉತ್ತಮ ತರಬೇತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಶುಭ ಕೋರುತ್ತೇನೆ,”ಎಂದು ಹೇಳಿದರು.

ಕರ್ನಾಟಕಕ್ಕೆ ಮಿಡತೆ ಹಾವಳಿ ಸಾಧ್ಯತೆ ತೀರಾ ಕಡಿಮೆ,ರೈತರು ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ; ಕೃಷಿ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು, ಮೇ.28: ಕೋಲಾರದಲ್ಲಿ ಕಂಡುಬಂದಿರುವುದು ಸಾಮಾನ್ಯ ಎಕ್ಕೆಗಿಡದ ಮಿಡತೆಯಾಗಿದ್ದು, ಲೋಕ್ಟಸ್ ಮಿಡತೆಗೂ ಇದಕ್ಕೂ ಸಂಬಂಧವಿಲ್ಲ.ಕರ್ನಾಟಕಕ್ಕೆ ಲಾಕ್ಟಸ್ ಮಿಡತೆ ಹಾವಳಿ ಸಾಧ್ಯತೆ ತೀರಾ ಕಡಿಮೆಯಿದ್ದು, ರೈತರು ಯಾವುದೇ ಕಾರಣಕ್ಕೂ ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಮಧ್ಯಪ್ರದೇಶ, ಮಹಾರಾಷ್ಟ್ರ ರಾಜಸ್ಥಾನ ಸೇರಿದಂತೆ ಇತರೆ ರಾಜ್ಯಗಳಲ್ಲಿ ರೈತರನ್ನು ಬಾಧಿಸಿರುವ ಲೋಕ್ಟಸ್ ಮಿಡತೆ ಹಾವಳಿ ರಾಜ್ಯಕ್ಕೆ ಬಾಧಿಸದಂತೆ ತೆಗೆದುಕೊಳ್ಳಬಹುದಾದ ಕ್ರಮಗಳು ಮುನ್ನೆಚ್ಚರಿಕೆಗಳ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲರು ವಿಕಾಸಸೌಧದಲ್ಲಿಂದು, ಕೃಷಿ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ಕೀಟಶಾಸ್ತ್ರಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿಸಚಿವರು, ಮಿಡತೆ ಗಾಳಿಯನ್ನು ಅವಲಂಬಿಸಿರುವುದರಿಂದ ಗಾಳಿಯ ದಿಕ್ಕು ಬದಲಾದಂತೆ ಮಿಡತೆಗಳು ಪಸರಿಸುವುದು ಬದಲಾಗುತ್ತದೆ. ಕೃಷಿ ತಜ್ಞರ ಪ್ರಕಾರ ಕರ್ನಾಟಕಕ್ಕೆ ಮಿಡತೆ ಹಾವಳಿ ಸಾಧ್ಯತೆ ಕಡಿಮೆಯಿದೆ. ಮೇ.26 ರಿಂದ ಎರಡು ದಿನಗಳು ಮಾತ್ರ ದಕ್ಷಿಣಾಭಿಮುಖವಾಗಿ ಗಾಳಿ ಬೀಸುತ್ತಿದ್ದು, ಎರಡು ದಿನಗಳ ಬಳಿಕ ಅಂದರೆ ಮೇ.30 ರಷ್ಟೊತ್ತಿಗೆ ಅದರ ದಿಕ್ಕು ಬದಲಾಗುವ ಸಾಧ್ಯತೆಯಿದೆ. ಹೀಗಾಗಿಮಿಡತೆಗಳು ಕರ್ನಾಟಕ ಮುಟ್ಟುವ ಸಾಧ್ಯತೆ ಕಡಿಮೆಯಿದೆ. ಬೀದರ್ ಗಡಿಯಿಂದ ಮಿಡತೆಗಳು ಸುಮಾರು 450 ಕಿ.ಮೀ.ದೂರದಲ್ಲಿರುವುದರಿಂದ ರಾಜ್ಯ ಮುಟ್ಟುವ ಸಾಧ್ಯತೆ ಬಹಳಷ್ಟು ಕಡಿಮೆ ಇದೆ ಎಂದರು.

ಗಾಳಿಯ ದಿಕ್ಕು ಬದಲಾಗಿದೆ;
ಒಂದು ವೇಳೆ ಕಾರಣಾಂತರಗಳಿಂದ ಗಾಳಿ ದಿಕ್ಕು ಬದಲಾಗದೇ ಮಿಡತೆಗಳು ಕರ್ನಾಟಕ ಮುಟ್ಟಿದಲ್ಲಿ ಯಾವ ಮುಂಜಾಗ್ರತೆ ವಹಿಸಬೇಕು ಎನ್ನುವ ಬಗ್ಗೆ ಡೆವಲಪ್ಮೆಂಟ್ ಕಮಿಷನರ್ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಎಸ್ ಓಪಿ(STANDARD OPERATING PROCEDURE)ಸಿದ್ಧಗೊಳಿಸಲಾಗಿದೆ. ಅದೇ ರೀತಿ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಮುನ್ನೆಚ್ಚರಿಕೆ ನೀಡಿದ್ದು, ಅಗತ್ಯಬಿದ್ದಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಅವಶ್ಯಕಕ್ರಮಗಳಲ್ಲಿ ಮುಖ್ಯವಾಗಿ ಮೊದಲನೆಯದಾಗಿ ರೈತರು ತಮ್ಮ ಜಮೀನುಗಳಲ್ಲಿ ಮಿಡತೆ ಬಾದೆ ಕಂಡುಬಂದಲ್ಲಿ ಶಬ್ದ ಮಾಡುವ ಮೂಲಕ ದೂರ ಓಡಿಸಬಹುದು. ಇಂತಹ ಬೆಳೆಗಳು ದುಬಾರಿ ಬೆಳೆಗಳಾಗಿದ್ದಲ್ಲಿ ಅವುಗಳ ರಕ್ಷಣೆಗೋಸ್ಕರ ಬೇವು ಆಧಾರಿತ ಕೀಟನಾಶಕಗಳನ್ನು ರೈತರೇ ಸಿಂಪಡಿಸಿಕೊಳ್ಳಬೇಕಾಗುತ್ತದೆ. ಮಿಡತೆಗಳು ಅವುಗಳ ಹಾರುವ ಕ್ರಮದಲ್ಲಿ ಸಾಮಾನ್ಯವಾಗಿ ಸಂಜೆ ವೇಳೆಗೆ ಯಾವುದಾದರೂ ಮರ ಗಿಡಗಳ ಮೇಲೆ ಕೂರುವುದು ಹೆಚ್ಚಿರುವುದರಿಂದ ಅಂತಹ ಸಂದರ್ಭಗಳಲ್ಲಿ ಇವುಗಳ ಹತೋಟಿಗಾಗಿ ಕ್ಲೋರ್ ಫೈರಿಫಾಸ್ ಅಥವಾ ಲಾಮ್ಡಾಸಿಹಲೋತ್ರಿನ್ ಔಷಧಿಗಳನ್ನು ಸರಿಯಾದ ಪ್ರಮಾಣದಲ್ಲಿ ಸಿಂಪಡಣೆ ಮಾಡುವುದು ಎಂದು ತೀರ್ಮಾನಿಸಲಾಗಿದೆ. ಇದಕ್ಕಾಗಿ ಅವಶ್ಯಕವಾದಂತಹ ಸಿಂಪಡಣಾ ವ್ಯವಸ್ಥೆಗಾಗಿ ಫೈರ್ ಇಂಜಿನ್ಸ್, ಟ್ರ್ಯಾಕ್ಟರ್ ಚಾಲಿತ ಸ್ಪ್ರೇಯರ್ ಗಳು ಹಾಗೂ ಡ್ರೋಣ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತ ಕ್ರಮವಾಗಿ ಮಹಾರಾಷ್ಟ್ರದ ಕೃಷಿ ಆಯುಕ್ತರೊಂದಿಗೆ ನಮ್ಮ ರಾಜ್ಯದ ಕೃಷಿ ಆಯುಕ್ತರು ಪ್ರತಿಗಂಟೆಗೊಮ್ಮೆ ಮಿಡತೆಗಳ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ನಿರ್ವಹಣಾ ಕ್ರಮಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು.

ನಿರ್ವಹಣಾ ಕ್ರಮಗಳು:ಜಿಲ್ಲಾಮಟ್ಟದಲ್ಲಿ ಕೀಟನಾಶಕ ನಿರ್ವಹಣಾ ಸಮಿತಿ:

ಜಿಲ್ಲಾಮಟ್ಟದಲ್ಲಿ ಕೀಟನಾಶಕ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿಯಿದ್ದು, ಸಮಿತಿಯಲ್ಲಿ ಜಂಟಿ ಕೃಷಿ ನಿರ್ದೇಶಕರು,ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ತೋಟಗಾರಿಕಾ ಉಪನಿರ್ದೇಶಕರು, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆಯನ್ನೊಳಗೊಂಡ ಸಮಿತಿಯಿದೆ. ಮಿಡತೆಗಳು ಹಗಲಿಗಿಂತ ರಾತ್ರಿವೇಳೆ ಹೆಚ್ಚು ಸಂಚರಿಸುವುದರಿಂದ ರಾತ್ರಿವೇಳೆ ಮರ,ಗಿಡಗಳ ಮೇಲೆ ಔಷಧಿ, ಕ್ರಿಮಿನಾಶಕ ಸಿಂಪಡಣೆ ಮಾಡಿ ನಾಶಮಾಡಬಹುದಾಗಿದೆ.ಗಾಳಿಯ ದಿಕ್ಕು ಆಧರಿಸಿ ಲೋಕ್ಟಸ್ ಮಿಡತೆಗಳು ಚಲಿಸುವುದರಿಂದ ಇವುಗಳ ಚಲನವಲನಗಳ ಮೇಲೆ ನಿಗಾವಹಿಸಲು ಭಾರತೀಯ ಹವಾಮಾನ ಸಂಸ್ಥೆಯಿಂದ ಸತತವಾಗಿ ಗಾಳಿಯ ವೇಗ ಹಾಗೂ ದಿಕ್ಕಿನ ಮಾಹಿತಿ ಸಂಗ್ರಹಿಸಿ ಅದರಾಧರದ ಮೇಲೆ ಮುನ್ಸೂಚನೆ ನೀಡುವುದು.
ಹೋಗುತ್ತಿರುವ ದಾರಿಯಲ್ಲಿ ಹೊಗೆ ಹಚ್ಚಿಸಿ ಮಿಡತೆಗಳನ್ನು ಮಂಕಾಗಿಸಿ ಶಬ್ದಮಾಡಿ ನಾಶ ಮಾಡುವುದು.ರಾತ್ರಿ ಮರದಲ್ಲಿ ಇವು ವಿಶ್ರಮಿಸುವುದರಿಂದ ರಾಸಾಯನಿಕ ಸಿಂಪಡಣೆ ಬಳಸಿ ನಿಯಂತ್ರಿಸಬಹುದು.

ರಾಜ್ಯಮಟ್ಟದ ತಂಡ:

ಮುಂಜಾಗ್ರತಾ ಕ್ರಮವಾಗಿ ರಾಜ್ಯಮಟ್ಟದಲ್ಲಿ ಕೃಷಿ ಮತ್ತು ತೋಟಗಾರಿಕಾ ನಿರ್ದೇಶಕರು ಹಾಗೂ ಉನ್ನತಮಟ್ಟದ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು, ಈ ತಂಡ ಬೀದರ್, ಕೊಪ್ಪಳ, ಗುಲ್ಬರ್ಗಾ,ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿ ಮಿಡತೆ ನಿಯಂತ್ರಣ ಮುನ್ನೆಚ್ಚರಿಕೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲು ಸೂಚನೆ ನೀಡಲಾಗಿದೆ.

ರಾಜ್ಯವಿಪತ್ತು ನಿರ್ವಹಣಾ ನಿಧಿಯಲ್ಲಿ ಶೇ.25 ರಷ್ಟನ್ನು ಮಿಡತೆ ನಿರ್ವಹಣೆಗೆ ಬಳಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದರು.

ಈ ಸಂದರ್ಭದಲ್ಲಿ ತೋಟಗಾರಿಕಾ ಸಚಿವ ನಾರಾಯಣಗೌಡ ಸಹ ಉಪಸ್ಥಿತರಿದ್ದರು.