ಪರಿಶಿಷ್ಟ ಜಾತಿ / ಪಂಗಡಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ಮುಖ್ಯಮಂತ್ರಿಗಳ ಕರೆ

ಬೆಂಗಳೂರು, ಮೇ 28 : ಪರಿಶಿಷ್ಟ ಜಾತಿ / ಪಂಗಡಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕರೆ ನೀಡಿದರು.

ರಾಜ್ಯ ಅನುಸೂಚಿತ ಜಾತಿಗಳು / ಅನುಸೂಚಿತ ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್ತು ಸಭೆಯಲ್ಲಿ 2020-21ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ರೂ. 19432.22 ಕೋಟಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ರೂ. 8267.30 ಕೋಟಿಗಳು ಒಟ್ಟಾರೆಯಾಗಿ ರೂ. 27,699.52 ಕೋಟಿ ಅನುದಾನ ಒದಗಿಸಲಾಗಿದ್ದು, ಎಲ್ಲಾ ಇಲಾಖೆಗಳ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಯಿತು.

ನಂತರ ನಿಗದಿತ ಅವಧಿಯೊಳಗೆ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಪ್ರಸಕ್ತ ವರ್ಷದ ಪರಿಸ್ಥಿತಿಯನ್ನು ಗಮನಿಸಿ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಜನರಿಗೆ ಸಹಾಯವಾಗುವಂತಹ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೋವಿಡ್ 19 ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಿಗೆ 25 – 30 ಸಾವಿರ ಜನ ಹಿಂದಿರುಗಿದ್ದಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾರ್ಯಕ್ರಮದಡಿ ಪ್ರತಿಯೊಂದು ಪರಿಶಿಷ್ಟ ಜಾತಿ/ಪಂಗಡದ ಕುಟುಂಬಕ್ಕೆ ಜಾಬ್ ಕಾರ್ಡ್‍ಗಳನ್ನು ಕಡ್ಡಾಯವಾಗಿ ವಿತರಿಸುವಂತೆ ಸೂಚಿಸಿದ ಅವರು, ಉದ್ಯೋಗ ಖಾತರಿ ಯೋಜನೆಯಡಿ, ಕಾರ್ಮಿಕರಿಗೆ ಪ್ರಸ್ತುತ ಕನಿಷ್ಟ 100 ದಿನಗಳಿರುವ ಕೆಲಸದ ದಿನಗಳನ್ನು 150 ಕೆಲಸದ ದಿನಗಳಿಗೆ ಹೆಚ್ಚಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಿದರು.

ಈ ವಿಶೇಷ ಉಪಯೋಜನೆಗಳಡಿ ನಿಗಧಿಪಡಿಸಿದ ಅನುದಾನ ಸದ್ಬಳಕೆಯಾಗಬೇಕು ಎಂದ ಮುಖ್ಯಮಂತ್ರಿಗಳು, ಪರಿಶಿಷ್ಟ ಜಾತಿ/ಪಂಗಡದವರು ಸ್ವಾಭಿಮಾನದಿಂದ ಬದುಕುವ ಎಲ್ಲ ಅವಕಾಶಗಳನ್ನು ಕಲ್ಪಿಸಬೇಕು ಎಂದರು.

ಉಪಮುಖ್ಯಮಂತ್ರಿಗಳು ಹಾಗೂ ರಾಜ್ಯ ಅಭಿವೃದ್ಧಿ ಪರಿಷತ್ ಉಪಾಧ್ಯಕ್ಷರಾದ ಗೋವಿಂದ ಕಾರಜೋಳ ಅವರು ಮಾತನಾಡಿ ಕೋವಿಡ್ 19 ಹಿನ್ನೆಲೆಯಲ್ಲಿ ಮಂಡಿಸಿರುವ ಬಜೆಟ್‍ಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಂಪನ್ಮೂಲ ಕ್ರೋಢೀಕರಣ ಹಾಗೂ ಅನುದಾನ ಲಭ್ಯತೆಯ ಆಧಾರದ ಮೇಲೆ ಕ್ರಿಯಾಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.

ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್, ಕಾನೂನು ಮತ್ತು ಸಂಸದೀಯ ಸಚಿವ ಜೆ.ಎಸ್.ಮಾಧುಸ್ವಾಮಿ, ಕಂದಾಯ ಸಚಿವ ಆರ್. ಅಶೋಕ್, ಅಭಿವೃದ್ದಿ ಪರಿಷತ್ತಿನ ಸದಸ್ಯರಾದ ದುರ್ಯೋಧನ ಐಹೊಳೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ. ಎಸ್. ಈಶ್ವರಪ್ಪ, ಸಂಸದ ಉಮೇಶ್ ಜಾದವ್, ಶಾಸಕರಾದ ಎನ್.ಮಹೇಶ್ ಹಾಗೂ ನರಸಿಂಹ ನಾಯಕ್ , ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಕುಮಾರ ನಾಯಕ್ ಉಪಸ್ಥಿತರಿದ್ದರು.

ಜೂನ್ 1 ರಿಂದ ಭಕ್ತರಿಗೆ ದರ್ಶನ ನೀಡಲಿರುವ ಧರ್ಮಸ್ಥಳ ಮಂಜುನಾಥೇಶ್ವರ

ಧರ್ಮಸ್ಥಳ: ಕೋವಿಡ್-19 ಲಾಕ್‌ಡೌನ್ ನಿಂದ ಮುಚ್ಚಲ್ಪಟ್ಟಿರುವ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ ಜೂನ್ 1 ಕ್ಕೆ ತೆರೆಯಲಿದ್ದು ಭಕ್ತರ ಪ್ರವೇಶ ಅವಕಾಶ ನೀಡುವುದಾಗಿ ಪ್ರಕಟಿಸಿದೆ.

ಸರ್ಕಾರ ಜೂನ್ 1 ರಿಂದ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿದ್ದು ಅದರಂತೆ ಧರ್ಮಸ್ಥಳ ಕ್ಷೇತ್ರದ ಮಂಜುನಾಥೇಶ್ವರ ಸ್ವಾಮಿಯ ದೇವಸ್ಥಾನ ಕೂಡ ತೆರೆಯಲಿದೆ, ಸರ್ಕಾರದ ಸೂಚನೆಯಂತೆ ಸ್ಯಾನಿಟೈಸರ್, ಮಾಸ್ಕ್,ಸಾಮಾಜಿಕ ಅಂತರ ಪಾಲಿಸಿಕೊಂಡು ಪ್ರತಿಯೊಬ್ಬ ಭಕ್ತರ ಥರ್ಮಲ್ ಸ್ಕ್ರೀನಿಂಗ್ ಮಾಡಿಯೇ ದೇವಾಲಯ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ ಭಕ್ತರ ಧರ್ಮಸ್ಥಳಕ್ಕೆ ಬರಬಹುದು ಎಂದು‌ ಧರ್ಮಸ್ಥಳದ ಧರ್ಮಾಧಿಕಾರಿಗಳ ಕಚೇರಿ ತಿಳಿಸಿದೆ.

ಭಾರತಕ್ಕೆ ಕಂಟಕವಾದ ಮಿಡತೆ!

ಬೆಂಗಳೂರು: ಕೊರೋನಾ ಮಹಾಮಾರಿ‌ ಜೊತೆಗೆ ಇದೀಗ ದೇಶಕ್ಕೆ ಮತ್ತೊಂದು ಗಂಡಾತರ ಎದುರಾಗಿದೆ. ರಕ್ಕಸ ಮಿಡತೆಗಳು ರೈತರ ಪಾಲಿಗೆ, ಮನುಕುಲದ ಪಾಲಿಗೆ ವಿನಾಶಕಾರಿಯಾಗಿವೆ. ಈ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಎಚ್ಚರಿಸೋ ಕೆಲಸ ಮಾಡಿದ್ದಾರೆ. ಉತ್ತರ ಭಾರತವನ್ನು ಬಾಧಿಸುತ್ತಿರುವ ರಕ್ಕಸ ಮಿಡತೆಗಳು ಮಹಾರಾಷ್ಟ್ರ ಪ್ರವೇಶಿಸಿದ್ದು ಕರ್ನಾಟಕಕ್ಕೂ ಪ್ರವೇಶಿಸುವ ಆತಂಕವಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕ್ಷಣಾರ್ಧದಲ್ಲಿ ಬೆಳೆ ತಿಂದು ಹೋಗುವ ಈ ಮಿಡತೆಗಳು ಭವಿಷ್ಯದಲ್ಲಿ ಆಹಾರ ಕೊರತೆಗೆ ಕಾರಣವಾಗುತ್ತವೆ. ಹೀಗಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

ಮಿಡತೆಗಳ ಹಿಂಡು ಸದ್ಯ ಮಹಾರಾಷ್ಟ್ರದ ಅಮರಾವತಿಯಲ್ಲಿವೆ ಎಂಬ ಮಾಹಿತಿ ಇದೆ. ಅಮರಾವತಿ ಭೌಗೋಳಿಕವಾಗಿ ನಮ್ಮ ಬೀದರ್, ಕಲಬುರ್ಗಿಗೆ ಹತ್ತಿರದ ಜಿಲ್ಲೆ. ಪೂರ್ವ ಆಫ್ರಿಕಾ, ಇರಾನ್ ಮರುಭೂಮಿಯಲ್ಲಿ ಕಂಡುಬರುವ ಈ ಮಿಡತೆಗಳು ಪಾಕಿಸ್ತಾನದ ಮೂಲಕ ಭಾರತ ಪ್ರವೇಶಿಸಿವೆ. ಇವುಗಳಿಗೆ ಜಿಲ್ಲೆಗಳನ್ನು ದಾಟುವುದು ಅಸಾಧ್ಯವೇನಲ್ಲ.

1 ಚದರ ಕಿ.ಮೀ ಪ್ರದೇಶದಲ್ಲಿ 4ಕೋಟಿ ಮಿಡತೆಗಳು ಇರುತ್ತವೆ. ತಮ್ಮ ದೇಹ ಗಾತ್ರದದಷ್ಟೇ ಆಹಾರವನ್ನು ಈ ಮಿಡತೆಗಳು ತಿನ್ನುತ್ತವೆ ಎಂದರೆ, ಇವು ಯಾವ ಪ್ರಮಾಣದಲ್ಲಿ ಬೆಳೆ ನಾಶ ಮಾಡುತ್ತವೆ ಎಂಬುದನ್ನು ಲೆಕ್ಕಿಸಬಹುದು. ಹೀಗಾಗಿ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಔಷಧ ಸಿಂಪಡಣೆ  ದೊಡ್ಡ ಪ್ರಮಾಣದಿಂದ ನಡೆಯುತ್ತಿದೆ.

ರಾಜ್ಯಕ್ಕೂ ಇವುಗಳ ಭೀತಿ ಇರುವುದರಿಂದ ಸರ್ಕಾರ ಕೂಡಲೇ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶದ ಅಭಿಪ್ರಾಯ ಪಡೆದು ಕಾರ್ಯತಂತ್ರಗಳಿಗೆ ಸಿದ್ಧವಾಗಬೇಕು.ಸಂಭಾವ್ಯ ಅಪಾಯವನ್ನು ಮೊದಲೇ ಹಿಮ್ಮೆಟ್ಟಿಸಬೇಕು ಅಂತಾ ಸಲಹೆ ನೀಡಿದ್ದಾರೆ. ಅಲ್ಲದೆ, ಬೆಳೆ ತಿಂದು ರೈತರ ಬದುಕು ಅತಂತ್ರ ಮಾಡುವ ಈ ರಕ್ಕಸ ಮಿಡತೆಗಳು ರಾಜ್ಯಕ್ಕೆ ಬಾರದೇ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡ ನಿರ್ಲಕ್ಷ್ಯ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ: ಸುರೇಶ್ ಕುಮಾರ್

ಬೆಂಗಳೂರು: ಕನ್ನಡ ನೆಲದಲ್ಲಿ ನಡೆಯುವಂತಹ ಯಾವುದೇ ಶಾಲೆಯಾಗಿರಲಿ ಅಲ್ಲಿ ಕನ್ನಡ ಭಾಷೆಯ ಬೋಧನೆ ಕಡ್ಡಾಯವಾಗಿ ಆಗಲೇಬೇಕು. ಈ ಸಂಬಂಧದ ಕಡ್ಡಾಯ ಕನ್ನಡ ಕಲಿಕಾ ವಿಧೇಯಕ-2015ರ ಅನುಷ್ಠಾನಕ್ಕೆ ಅನಾದರ ಇಲ್ಲವೇ ನಿರ್ಲಕ್ಷ್ಯ ತೋರುವ ಶಿಕ್ಷಣಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಬುಧವಾರ ಕಡ್ಡಾಯ ಕನ್ನಡ ಕಲಿಕಾ ವಿಧೇಯಕ-2015ರ ಅನುಷ್ಠಾನದ ಪರಾಮಾರ್ಶೆ ಕುರಿತು ರಾಜ್ಯದ ಎಲ್ಲ ಡಿಡಿಪಿಐಗಳೊಂದಿಗೆ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಇದಕ್ಕಾಗಿ 2015ರಲ್ಲಿ ಜಾರಿಗೆ ತರಲಾದ ಕನ್ನಡ ಕಲಿಕಾ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಕಟಿಬದ್ಧವಾಗಿದೆ ಎಂದು ಹೇಳಿದರು.

ಈ ನೆಲದ ಕಾನೂನಿನ ಅನುಷ್ಠಾನದ ವಿಷಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಕ್ಷಣ ಇಲಾಖೆಯೊಂದಿಗೆ ನಿರ್ವಹಿಸುತ್ತಿರುವ ಸಮನ್ವಯ ಜವಾಬ್ದಾರಿ ನಿಜಕ್ಕೂ ಪ್ರೇರಣಾದಾಯಕ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಜೋಡೆತ್ತಿನಂತೆ ಕೆಲಸ ಮಾಡಲಿವೆ ಎಂದು ಸುರೇಶ್ ಕುಮಾರ್ ಹೇಳಿದರು.

ಕನ್ನಡ ನೆಲದಲ್ಲಿ ಓದುವ ಪ್ರತಿಯೊಂದು ಮಗುವೂ ಕನ್ನಡವನ್ನು ಕಲಿಯಬೇಕು. ಅರ್ಹ ಶಿಕ್ಷಕರು ಈ ಮಕ್ಕಳಿಗೆ ಕನ್ನಡ ಕಲಿಸಬೇಕು. ಇದನ್ನು ಕರ್ನಾಟಕದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಅರ್ಥೈಸಿಕೊಂಡು ಮಕ್ಕಳ ಹಿತದೃಷ್ಟಿಯಿಂದ ಸರ್ಕಾರದ ಈ ಕ್ರಮವನ್ನು ಬೆಂಬಲಿಸಬೇಕು ಎಂದು ಸುರೇಶ್ ಕುಮಾರ್ ಹೇಳಿದರು.

ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿಯಂತೆ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲೇ ಉಳಿಸಿಕೊಳ್ಳಲು ತಮ್ಮದೇ ಆದ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ. ಈಗ ಕೂಲಿ ಮಾಡಿ ಜೀವನ ಸಾಗಿಸುವವರೂ ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ. ಅದಕ್ಕೆ ಅವರು ತಮ್ಮ ದುಡಿಮೆಯ ಶೇ. 40 ಭಾಗ ವೆಚ್ಚ ಮಾಡುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳನ್ನೇ ಸಬಲೀಕರಣ ಮಾಡಿ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಗುಣಮಟ್ಟವನ್ನು ಕಾಪಾಡಿಕೊಂಡರೆ ಅವರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದಕ್ಕೆ ಮುಂದಾದರೆ ಅವರೆಲ್ಲಾ ಖಾಸಗಿ ಶಾಲೆಗಳಿವೆ ವೆಚ್ಚ ಮಾಡುವ ಶೇ. 40 ಭಾಗ ಹಣವನ್ನು ತಮ್ಮ ಕುಟುಂಬದ ಅಭಿವೃದ್ಧಿಗೆ ವಿನಿಯೋಗಿಸಬಹುದಾಗಿದೆ ಎಂದು ಸುರೇಶ್‌ ಕುಮಾರ್ ಹೇಳಿದರು.

1000 ಉಭಯ ಮಾಧ್ಯಮ ಶಾಲೆಗಳ ಪ್ರಾರಂಭ:

ಜಾಗತಿಕ ನಿರೀಕ್ಷೆಗೆ ತಕ್ಕಂತೆ ನಮ್ಮ ಸರ್ಕಾರಿ ಶಾಲೆ ಮಕ್ಕಳನ್ನು ತಯಾರು ಮಾಡಬೇಕು ಮತ್ತು ನಮ್ಮ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ ಉಳಿಸಿ ಬೆಳೆಸುವ ಮಹೋನ್ನತ ಉದ್ದೇಶದಿಂದ ಈ ವರ್ಷದಿಂದಲೇ ರಾಜ್ಯದಲ್ಲಿ 1000 ‘ಉಭಯ ಮಾಧ್ಯಮ ಶಾಲೆ’ಗಳನ್ನು ಆರಂಭಿಸಲಾಗುವುದೆಂದು ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದ್ದಾರೆ.

ನಮ್ಮ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ, ಹಾಗೆಯೇ ಅವುಗಳ ಗುಣಮಟ್ಟ ಹೆಚ್ಚಿಸಿ ಸರ್ಕಾರಿ ಶಾಲೆ ಮಕ್ಕಳನ್ನು ಜಾಗತಿಕ ನಿರೀಕ್ಷೆಗೆ ತಕ್ಕಂತೆ ಬೆಳೆಸುವ ಉದ್ದೇಶದಿಂದ 1000 ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ಬೋಧಿಸುವ ಉಭಯ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಶಾಲೆಗಳಲ್ಲಿ ಬಳಸಲಾಗುವ ಪಠ್ಯಪುಸ್ತಕಗಳಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ಪಠ್ಯಗಳು ಇರುತ್ತವೆ. ಹಾಗೆಯೇ ಎರಡೂ ಮಾಧ್ಯಮಗಳಲ್ಲೂ ಬೋಧಿಸಲಾಗುತ್ತದೆ. ಆ ಮೂಲಕ ನಮ್ಮ ಮಕ್ಕಳು ಉಭಯ ಮಾಧ್ಯಮಗಳಲ್ಲಿ ಕಲಿತು ಜಾಗತಿಕ ನಿರೀಕ್ಷೆಗೆ ತಕ್ಕಂತೆ ಬೆಳವಣಿಗೆ ಹೊಂದಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ ಹಾಗೂ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವಂತಹ ಇಂತಹ ಉಪಕ್ರಮಕ್ಕೆ ಸಾರ್ವಜನಿಕರ ಬೆಂಬಲ ಮತ್ತು ಸಹಕಾರದ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಕಾರ್ಯದರ್ಶಿ ಡಾ. ಕೆ. ಮುರಳಿಧರ, ರಾಜ್ಯದ ಎಲ್ಲ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಭಾಗವಹಿಸಿದ್ದರು.

ಹೆಲ್ತ್ ರಿಜಿಸ್ಟರ್ ಗೆ ಮುನ್ನುಡಿ ಬರೆದ ಸರ್ಕಾರ: ಹೆಸರಾಂತ ತಜ್ಞರ ಜತೆ ಸಚಿವ ಸುಧಾಕರ್ ಸಮಾಲೋಚನೆ

ಬೆಂಗಳೂರು : “ಆರೋಗ್ಯ ಕರ್ನಾಟಕ’ಕ್ಕೆ ವೇದಿಕೆ ಕಲ್ಪಿಸಲಿರುವ “ಹೆಲ್ತ್ ರಿಜಿಸ್ಟರ್’ ಯೋಜನೆ ಅನುಷ್ಠಾನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮುನ್ನಡಿ ಬರೆದರು.

ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಹೆಲ್ತ್ ರಿಜಿಸ್ಟರ್ ಯೋಜನೆ ಸಂಬಂಧ ಆರೋಗ್ಯ ವಲಯದ ತಜ್ಞರ ಜತೆ ಸಚಿವ ಸುಧಾಕರ್ ಮೊದಲ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಂಡರು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಹದಿನೆಂಟು ಮಂದಿ ತಜ್ಞರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಈಗಾಗಲೇ ಇಂಥ ಯೋಜನೆ ಜಾರಿಗೊಳಿಸಿರುವ ದೇಶಗಳಲ್ಲಿ ಅಳವಡಿಸಿಕೊಂಡಿರುವ ಪದ್ಧತಿ, ಯೋಜನೆ ಜಾರಿಗೆ ರಾಜ್ಯದಲ್ಲಿ ಎದುರಾಗುವ ಸವಾಲು, ಅಡ್ಡಿ- ಆತಂಕಗಳು, ಯೋಜನೆಯ ಸ್ವರೂಪ, ಮನೆ ಮನೆ ಸಮೀಕ್ಷೆಗೆ ಅಳವಡಿಸಿಕೊಳ್ಳಬೇಕಿರುವ ಅಂಶಗಳು, ಅಗತ್ಯವಿರುವ ಮಾನವ ಸಂಪನ್ಮೂಲ, ಆರೋಗ್ಯ ಇಲಾಖೆಯ ನಾನಾ ವಿಭಾಗಗಳು ಈಗಾಗಲೇ ಹೊಂದಿರುವ ಮಾಹಿತಿ, ಖಾಸಗಿ ವಲಯದ ನೆರವು ಪಡೆಯುವುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ತಜ್ಞರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು. ಆ ಮೂಲಕ ಸದೃಢ, ಆರೋಗ್ಯವಂತ ಕರ್ನಾಟಕ ರೂಪಿಸಬೇಕು ಎಂಬುದು ನಮ್ಮ ಕನಸು. ಅದಕ್ಕಾಗಿ ಹೆಲ್ತ್ ರಿಜಿಸ್ಟರ್ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಇದನ್ನು ಸಾಕಾರಗೊಳಿಸಲು ತಜ್ಞರು ಕೈಜೋಡಿಸಬೇಕು. ಆ ನಿಟ್ಟಿನಲ್ಲಿ ಮೊದಲ ಸಭೆ ನಡೆಸಲಾಗಿದೆ. ಸಭೆಯಲ್ಲಿ ರಾಜ್ಯದ ಆರೋಗ್ಯಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಪರಿಣಿತರು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಯೋಜನೆ ರೂಪುರೇಷೆ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಚಿವ ಸುಧಾಕರ್ ತಿಳಿಸಿದರು.

ರಾಜ್ಯದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬರಿಗೂ ಸರ್ಕಾರ ವೆಚ್ಚ ಮಾಡುವ ಪ್ರತಿ ಪೈಸೆಯ ಪ್ರಯೋಜನ ಸಿಗಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆ ವಿವರ ತಿಳಿದು ಮುಂದುವರಿಯಲು ಸೂಚನೆ ನೀಡಿದ್ದಾರೆ. ದೇಶದಲ್ಲೇ ಮೊದಲ ಸಲ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದೇವೆ. ನಮಗೆ ಇದೊಂದು ದೊಡ್ಡ ಸವಾಲು, ಅಸಾಧಾರಣ ಪ್ರಯತ್ನ ಎಂಬ ಅಂಶವೂ ಗಮನದಲ್ಲಿದೆ. ಇದು ಗಣತಿ ಮಾದರಿಯ ಮನೆ ಮನೆಗೂ ತೆರಳಿ ಮಾಹಿತಿ ಪಡೆಯಬೇಕಿರುವ ಕಾರ್ಯಕ್ರಮ. ಪ್ರಾಯೋಗಿಕವಾಗಿ ಬೆಂಗಳೂರಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಅವರು ವಿವರಿಸಿದರು.

ಹೆಲ್ತ್ ರಿಜಿಸ್ಟರ್ ಯೋಜನೆಗೆ ಮೊದಲ ಹಂತದಲ್ಲಿ ಸಾರ್ವಜನಿಕ ಮಾಹಿತಿ ಪಡೆಯುವುದು ದೊಡ್ಡ ಸವಾಲು. ಇದನ್ನು ನಿಭಾಯಿಸಲು ಖಾಸಗಿ ರಂಗದ ತಜ್ಞರು ಜತೆಗೆ ತಾಂತ್ರಿಕತೆಯ ನೆರವು ಅಗತ್ಯ. ಇವತ್ತಿನ ಸಂದರ್ಭದಲ್ಲಿ ಅನುದಾನ ಒದಗಿಸುವುದು ಕೂಡ ತ್ರಾಸದಾಯಕ ಸಂಗತಿ. ಅದಕ್ಕಾಗಿ ಕೈಗಾರಿಕೆಗಳವರ ನೆರವು ಪಡೆಯಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯ ರೂಪು ರೇಷೆ ಇತ್ಯರ್ಥಪಡಿಸಲಾಗುತ್ತದೆ. ಒಮ್ಮೆ ನಮಗೆ ರಾಜ್ಯದ ಆರೂವರೆ ಕೋಟಿ ಜನರ ಮಾಹಿತಿ ಸಿಕ್ಕರೆ ಲಿಂಗ, ಪ್ರದೇಶ, ವಯೋಮಾನ ಆದಿಯಾಗಿ ಅನೇಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಯೋಜನೆಗಳನ್ನು ವಿನ್ಯಾಸಗೊಳಿಸಬಹುದು. ಕೊರೋನಾ ನಂತರದ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ ಮುನ್ನೆಲೆಗೆ ಬರವುದು ಅನಿವಾರ್ಯ ಎಂದರು.

ಈಗಾಗಲೇ ಇಸ್ರೇಲ್‍ನಲ್ಲಿ ಜಾರಿಗೊಳಿಸಿರುವ ಇಂಥದ್ದೇ ಕಾರ್ಯಕ್ರಮ ಯಶಸ್ವಿಯಾಗಿದ್ದು ಪರಿಣಾಮಕಾರಿ ಆರೋಗ್ಯ ಸೇವೆ ನೀಡುತ್ತಿದೆ. ಅದನ್ನು ಮಾದರಿಯಾಗಿ ಇಟ್ಟುಕೊಳ್ಳಬಹುದು. ನಮ್ಮಲ್ಲಿ ಈಗಾಗಲೇ ಲಭ್ಯವಿರುವ ದತ್ತಾಂಶವನ್ನು ಮೊದಲು ಬಳಕೆ ಮಾಡಿಕೊಳ್ಳಬಹುದು, ಅದರ ಜತೆಗೆ ಖಾಸಗಿ ಆಸ್ಪತ್ರೆಗಳಿಂದ ಮಾಹಿತಿ ಪಡೆಯಲು ಯಾವ ಕ್ರಮ ಅಳವಡಿಸಿಕೊಳ್ಳಬೇಕು ಎಂಬುದನ್ನು ತಜ್ಞರು ವಿವರಿಸಿದರು. ಸರ್ಕಾರ ಕೈಗೊಂಡಿರುವ ಈ ಯೋಜನೆಯನ್ನು ಎಲ್ಲ ತಜ್ಞರು ಮುಕ್ತಕಂಠದಿಂದ ಶ್ಲಾಘಿಸಿ, ಎಂದೊ ಆಗಬೇಕಿದ್ದ ಈ ಕೆಲಸ ಕೊರೋನಾ ವಿರುದ್ಧದ ಹೋರಾಟ ನಡೆಸಿರುವ ಈಗಲಾದರೂ ಕೈಗೊಳ್ಳಲು ನಿರ್ಧರಿಸಿ ಸಚಿವ ಸುಧಾಕರ್ ಚಾಲನೆ ನೀಡಿರುವುದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಡಾ. ಸಚ್ಚಿದಾನಂದ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಗಿರೀಶ್, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ. ಪ್ರಕಾಶ್ ಅವರಲ್ಲದೆ, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಪ್ರಭುದೇವ್, ಸಾರ್ವಜನಿಕ ಆರೋಗ್ಯ ವಿಭಾಗದ ತಜ್ಞರಾದ ಡಾ. ಎಂ.ಕೆ. ಸುದರ್ಶನ್, ಹೆಸರಾಂತ ತಜ್ಞರುಗಳಾದ ಡಾ. ವಿವೇಕ್ ಜವಳಿ, ಡಾ. ಶರಣ್ ಪಾಟೀಲ್, ಡಾ. ರಾಮಚಂದ್ರ, ಡಾ. ಸತೀಶ್‍ಬಾಬು, ಡಾ. ಸವಿತಾ, ಡಾ. ಅರವಿಂದ ಶೆಣೈ, ಡಾ. ದಿವಾಕರ್, ಡಾ. ಆಂಜಿನಪ್ಪ, ಡಾ. ಗಂಗಾಧರ್, ಡಾ. ಕಿರಣ್ ಮತ್ತಿತರರು ಪಾಲ್ಗೊಂಡಿದ್ದರು.
————————–
ಪ್ರತಿಕ್ರಿಯೆಗಳು….

“ಹೆಲ್ತ್ ರಿಜಿಸ್ಟರ್ ಬಹು ವರ್ಷಗಳ ನನ್ನ ಕನಸಿನ ಕೂಸು. ಆರೂವರೆ ಕೋಟಿ ಕನ್ನಡಿಗರಿಗೂ ಅಂತಾರಾಷ್ಟ್ರೀಯ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಇದು ಸಹಕಾರಿಯಾಗಲಿದೆ. ಜನರು ಮುಕ್ತವಾಗಿ ಮಾಹಿತಿ ಹಂಚಿಕೊಳ್ಳುವ ಮೂಲಕ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಭಾಗಿಗಳಾಗಬೇಕು’ – ಡಾ. ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವರು

“ತಾಂತ್ರಿಕತೆ ಮತ್ತು ತಜ್ಞರ ಸಹಯೋಗದೊಂದಿಗೆ ಇಸ್ರೇಲ್‍ನಲ್ಲಿ ಜಾರಿಗೊಳಿಸಿರುವ ಆರೋಗ್ಯ ವ್ಯವಸ್ಥೆ ಜಗತ್ತಿಗೆ ಮಾದರಿ. ಅಂಥದ್ದೇ ಸಾಹಸಕ್ಕೆ ಕರ್ನಾಟಕ ಸರ್ಕಾರ ಕೈ ಹಾಕಿರುವುದು ಮಹತ್ವದ ಬೆಳವಣಿಗೆ. ಸರ್ಕಾರದ ಈ ಪ್ರಯತ್ನವನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಕೈಲಾದ ಎಲ್ಲ ಸಹಕಾರ ನೀಡಲಾಗುವುದು’ – ಡಾ. ಶರಣ್ ಪಾಟೀಲ್, ಖ್ಯಾತ ಮೂಳೆ ತಜ್ಞರು

“ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಈ ಮಹತ್ವಾಕಾಂಕ್ಷಿ ಯೋಜನೆಗೆ ಕೈಜೋಡಿಸಬೇಕಿದೆ. ಪ್ರತಿಯೊಬ್ಬರ ಆರೋಗ್ಯ ಮಾಹಿತಿ ಸಂಗ್ರಹ ಪೂರ್ಣಗೊಂಡರೆ ಆರೋಗ್ಯ ಸೇವೆಯಲ್ಲಿ ಅದ್ಬುತಗಳನ್ನು ಸೃಷ್ಟಿಸಬಹುದು’ – ಡಾ. ವಿವೇಕ್ ಜವಳಿ, ಖ್ಯಾತ ಹೃದ್ರೊಗ ತಜ್ಞರು

150 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಕೇಂದ್ರ ವಿವಿ ಅಭಿವೃದ್ಧಿ: ಡಾ. ಅಶ್ವತ್ಥನಾರಾಯಣ

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವನ್ನು 150 ಕೋಟಿ ರೂ. ವೆಚ್ಚದಲ್ಲಿ ವಿಶ್ವದರ್ಜೆಯ ಕ್ಯಾಂಪಸ್‌ ಆಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಅಭಿವೃದ್ಧಿ ಕುರಿತ ಪರಿಶೀಲನಾ ಸಭೆಯಲ್ಲಿ ಬುಧವಾರ ಪಾಲ್ಗೊಂಡ ನಂತರ ಅವರು ಮಾತನಾಡಿದರು.

ಕುಲಪತಿ ಪ್ರೊ.ಎಸ್‌. ಜಾಫೆಟ್ ನೇತೃತ್ವದ ತಂಡ ಪ್ರಸ್ತುತ ಪಡಿಸಿದ ಬೆಂಗಳೂರು ಸೆಂಟ್ರಲ್‌ ವಿವಿಯ ಅಭಿವೃದ್ಧಿ ಕಾರ್ಯಗಳ ಕುರಿತ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ, ವಿಶ್ವದರ್ಜೆಯ ಕ್ಯಾಂಪಸ್‌ ನಿರ್ಮಾಣದ ಕುರಿತು ಹಲವಾರು ಸಲಹೆಗಳನ್ನು ನೀಡಿದರು.

” ಆದಷ್ಟು ಬೇಗ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗುವುದು. 31 ಎಕರೆ ಜಾಗ ಇದ್ದು, ಅಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಸಮುಚ್ಚಯ ಗಳ ನಿರ್ಮಾಣ ಮಾಡಲಾಗುವುದು. ಮೊದಲ ಹಂತದಲ್ಲಿ ಅಭಿವೃದ್ಧಿ ಪಡಿಸಲಾಗುವ ಶೈಕ್ಷಣಿಕ ಘಟಕ, ಐತಿಹಾಸಿಕ ಕಟ್ಟಡಗಳ ನವೀಕರಣಕ್ಕೆ 100 ಕೋಟಿ ರೂ. ಹಾಗೂ ಕ್ರೀಡಾ ಸೌಲಭ್ಯಕ್ಕೆ 50 ಕೋಟಿ ರೂ. ಮೀಸಲಿಡಲಾಗುವುದು. 18 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲು ಸೂಚಿಸಲಾಗಿದೆ,”ಎಂದು ಅವರು ತಿಳಿಸಿದರು.

“ಸದ್ಯ ವಿಶ್ವವಿದ್ಯಾಲಯದಲ್ಲಿ 800 ವಿದ್ಯಾರ್ಥಿಗಳಿದ್ದು, ಹಲವು ಹೊಸ ಕೋರ್ಸ್‌ಗಳು ಆರಂಭಿಸಲಾಗುವುದು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಒಳಗೊಂಡ ಇಂಟಿಗ್ರೇಟೆಡ್‌ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು. ಒಟ್ಟು 50,000 ವಿದ್ಯಾರ್ಥಿಗಳು ಓದಲು ಅನುಕೂಲವಾಗುವಂಥ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇನೆ,”ಎಂದು ಹೇಳಿದರು.

*ಕ್ರೀಡಾ ಸೌಕರ್ಯ*
“ಶಿಕ್ಷಣದಷ್ಟೇ ಕ್ರೀಡೆಗೂ ವಿಶ್ವವಿದ್ಯಾಲಯದಲ್ಲಿ ಒತ್ತು ನೀಡಲಾಗುವುದು. ಅದಕ್ಕಾಗಿಯೇ ವಿಶ್ವವಿದ್ಯಾಲಯ ದಲ್ಲಿ ಪ್ರತ್ಯೇಕ ಕ್ರೀಡಾ ಘಟಕ ನಿರ್ಮಿಸಿ ಅಲ್ಲಿ ಮಲ್ಟಿ ಗೇಮ್‌ ಕ್ರೀಡಾಂಗಣದ ಸೌಕರ್ಯ ಒದಗಿಸಲಾಗುವುದು. 400 ಮೀಟರ್‌ ಟ್ರ್ಯಾಕ್‌ ಸಹ ಅಲ್ಲಿರಲಿದೆ. ಜತೆಗೆ, ಕ್ಯಾಂಪಸ್‌ ಸುತ್ತ ವಾಕಿಂಗ್ ಪಾತ್‌ ನಿರ್ಮಿಸಲಾಗುವುದು,”ಎಂದು ವಿವರಿಸಿದರು.

*ಪರಿಸರ ಸ್ನೇಹಿ*
“ವಿಶ್ವವಿದ್ಯಾಲಯವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗುವುದು. ಮಳೆ ನೀರು ಸಂಗ್ರಹಕ್ಕೆ 4-5 ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಲಾಗುವುದು. ನೀರನ್ನು ಶೇಕಡ 100ರಷ್ಟು ಪುನರ್‌ಬಳಕೆ ಮಾಡಲಾಗುವುದು. ಜತೆಗೆ, 125 ಕಿ.ಲೋ ವ್ಯಾಟ್‌ ಸಾಮರ್ಥ್ಯದ ಸೌರ ಶಕ್ತಿ ಉತ್ಪಾದನಾ ಘಟಕ ಸ್ಥಾಪಿಸಲಾಗುವುದು. ಕ್ಯಾಂಪಸ್‌ ಮಧ್ಯ ಹಸಿರು ವಾತಾವರಣ ಸೃಷ್ಟಿಸಿ, ವಿದ್ಯಾರ್ಥಿಗಳು ಅಲ್ಲೇ ಕುಳಿತು ಅಧ್ಯಯನ ನಡೆಸಲು ಅನುಕೂಲ ಮಾಡಿಕೊಡಲಾಗುವುದು,” ಎಂದರು.

ಇ-ಆಡಳಿತಕ್ಕೆ ಒತ್ತು:
“ವಿಶ್ವವಿದ್ಯಾಲಯದ ಆಡಳಿತ ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಎಲ್ಲವೂ ಆನ್‌ಲೈನ್‌ನಲ್ಲಿರಬೇಕು. ಸರ್ಕಾರದ ಜತೆಗೆ ಆನ್‌ಲೈನ್‌ನಲ್ಲೇ ವ್ಯವಹರಿಸಲು ಸೂಚಿಸಲಾಗಿದೆ. ಈಗಿನಿಂದಲೇ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬೋಧನಾ ವಿಧಾನವನ್ನೂ ರೂಢಿಸಿಕೊಳ್ಳಬೇಕು,” ಎಂದು ಹೇಳಿದರು.