ಕೊರೋನಾ ಭೀತಿ ಹಿನ್ನೆಲೆ ಗರ್ಭಿಣಿಯರಿಗೆ ಕೋವಿಡ್-19 ತಪಾಸಣೆ

ಹುಬ್ಬಳ್ಳಿ: ಕೊರೋನಾ ವೈರಸ್ ಭೀತಿ ಎಲ್ಲೆಡೆಯೂ ಹಬ್ಬುತ್ತಿದ್ದು, ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಧಾರವಾಡ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಹು-ಧಾ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಯಿತು.

ಗರ್ಭಿಣಿಯರಲ್ಲಿರುವ ಭಯವನ್ನು ನಿವಾರಣೆ ಮಾಡಲು ಹಾಗೂ ಕೊರೋನಾ ವೈರಸ್ ನಿಯಂತ್ರಣದ ಹಿನ್ನಲೆಯಲ್ಲಿ ಗರ್ಭಿಣಿ ಮಹಿಳೆಯರ ಗಂಟಲು ದ್ರವ ಹಾಗೂ ಮೂಗಿನ ದ್ರವದ ಪರೀಕ್ಷೆ ಮಾಡಲಾಯಿತು. ಈಗಾಗಲೇ ಮೂರು ದಿನಗಳಿಂದ ಕೋವಿಡ್-19 ಪರೀಕ್ಷೆ ಪ್ರಾರಂಭವಾಗಿದ್ದು, ದಿನಕ್ಕೆ 60 ಜನರ ತಪಾಸಣೆ ಮಾಡಲಾಗುತಿದ್ದು, ಇಂದು ಮಧ್ಯಾಹ್ನದವರೆಗೆ 35 ಜನ ಗರ್ಭಿಣಿಯರ ಗಂಟಲು ಹಾಗೂ ಮೂಗಿನ ದ್ರವವನ್ನು ಸಂಗ್ರಹಿಸಲಾಯಿತು.

ಇದೇ ವೇಳೆ ಮಾತನಾಡಿದ ಆರೋಗ್ಯಾಧಿಕಾರಿ ಡಾ.ಪ್ರಭು ಬಿರಾದಾರ,‌ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಕೊರೋನಾ ವೈರಸ್ ನಿಯಂತ್ರಣದ ಹಿನ್ನಲೆಯಲ್ಲಿ ಗರ್ಭಿಣಿಯರ ಗಂಟಲು ದ್ರವ ಹಾಗೂ ಮೂಗಿನ ದ್ರವವನ್ನು ಸಂಗ್ರಹಿಸಿ ಪರೀಕ್ಷೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ಗರ್ಭಿಣಿ ಮಹಿಳೆಯರು ಸ್ವಯಂ ಪ್ರೇರಿತವಾಗಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಲದೇ ಯಾರಿಗಾದರೂ ರೋಗದ ಲಕ್ಷಣಗಳಿದ್ದರೇ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಇಟ್ಟ ಹೆಜ್ಜೆ ಹಿಂದೆ ಇಡದು: ಬಿ.ಸಿ.ಪಾಟೀಲ್

ಕೊಪ್ಪಳ, ಮೇ 27: ಸರ್ಕಾರ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ. ರೈತರನ್ನು ಎಂದಿಗೂ ಕೈಬಿಡುವುದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ ಪರ ಹೋರಾಟ ಮಾಡಿಕೊಂಡು ಬಂದವರು. ನೀತಿ ನಿಯಮಗಳಡಿಯಲ್ಲಿಯೇ ಮೆಕ್ಕೆಜೋಳ ರೈತರಿಗೆ ಪರಿಹಾರ ಒದಗಿಸಲಾಗುವುದು.ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆದಂತಹ ರೈತರಿಗೆ ಬೆಂಬಲ ಬೆಲೆ ನೀಡುವಂತಹ ಐತಿಹಾಸಿಕ ತೀರ್ಪನ್ನು ಮುಖ್ಯಮಂತ್ರಿಗಳು ಘೋಷಿಸಿದ್ದರು. 10 ಲಕ್ಷ ರೈತರಿಗೆ ತಲಾ 5 ಸಾವಿರ ರೂ.ನಂತೆ ಒಟ್ಟು 500 ಕೋಟಿ ರೂ.ಗಳ ಹಣ ಪರಿಹಾರ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಸರ್ಕಾರದಿಂದ ಮಂಗಳವಾರ ಮಾರ್ಗಸೂಚಿ ಹೊರಡಿಸಲಾಗಿದೆ.ಮಾರ್ಗಸೂಚಿಗಳಂತೆ ಫಲಾನುಭವಿಗಳ ಆಯ್ಕೆ ಮಾಡಿ ಸೂಕ್ತ ಆರ್ಥಿಕ ನೆರವು ನೀಡಲಾಗುವುದು ಎಂದರು.

ಹೋಬಳಿಮಟ್ಟದಿಂದ ರಾಜ್ಯಮಟ್ಟದವರೆಗೆ ಸಮಿತಿ ರಚನೆ:
ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರನ್ನೊಳಗೊಂಡ ಹೋಬಳಿ ಮಟ್ಟದ ಸಮಿತಿ, ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನೊಳಗೊಂಡ ತಾಲೂಕು ಸಮಿತಿ,
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಜಂಟಿ ಕೃಷಿ ನಿರ್ದೇಶಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಹಾಗೂ ಉಪ ಕೃಷಿ ನಿರ್ದೇಶಕರನ್ನೊಳಗೊಂಡ ಸಮಿತಿ ಹಾಗೂ ಕೃಷಿ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಕೃಷಿ ನಿರ್ದೇಶಕರು, ಅಪರ ಕೃಷಿನಿರ್ದೇಶಕರು ಮತ್ತು ಜಂಟಿ ಕೃಷಿನಿರ್ದೇಶಕರನ್ನೊಳಗೊಂಡ ರಾಜ್ಯಮಟ್ಟದ ಸಮಿತಿ ರಚಿಸಲಾಗಿದೆ. ಸದ್ಯದಲ್ಲಿಯೇ ಮೆಕ್ಕೆಜೋಳ ರೈತರಿಗೆ ಪರಿಹಾರದ ಹಣ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಲಾಕ್ಡೌನ್ ಸಮಯದಲ್ಲಿ ಮೂವತ್ತು ಜಿಲ್ಲೆಗಳಿಗೆ ಮೂವತ್ತು ದಿನಗಳ ಕಾಲ ಪ್ರವಾಸ ಮಾಡಿ ರೈತರ ಸಮಸ್ಯೆಗಳನ್ನು ಖುದ್ದಾಗಿ ಅವಲೋಕಿಸಿ, ಕೈಗೊಂಡ ಕ್ರಮಗಳು ಸಲಹೆ ಸೂಚನೆಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ಸಂಬಂಧ ಮುಖ್ಯಮಂತ್ರಿಗಳಿಗೆ ನೀಡಿದ ವರದಿಯಲ್ಲಿ ಬಹುತೇಕ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಬಿಜಾಪುರದಲ್ಲಿ ದ್ರಾಕ್ಷಿ ಆನ್ಲೈನ್ ಮಾರಾಟ, ಕೊಪ್ಪಳ ಅಕಾಲಿಕ ಮಳೆ ಬೆಳೆ ನಷ್ಟ ಪರಿಹಾರ , ತರಕಾರಿ, ಹೂವುಹಣ್ಣು ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಒದಗಿಸಿದೆ. ಮೆಕ್ಕೆಜೋಳ ಖರೀದಿಗೆ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. 1610 ಕೋಟಿ ರೂ.ಪ್ಯಾಕೇಜ್ ಘೋಷಿಸಿದ್ದಾರೆ ಎಂದರು.

ಕೋವಿಡ್ ಸೋಂಕು ಪತ್ತೆಗೆ ಸ್ಮಾರ್ಟ್‌ ಕಿಯೋಸ್ಕ್‌ನಿಂದ ಮಾದರಿ ಸಂಗ್ರಹ: ಡಾ. ಅಶ್ವತ್ಥನಾರಾಯಣ

ಬೆಂಗಳೂರು: ಕೊವಿಡ್‌ ಸೋಂಕು ಪತ್ತೆ ಪರೀಕ್ಷೆ ವೇಳೆ ನೇರ ಸಂಪರ್ಕ ಇಲ್ಲದೇ ಮಾದರಿ ಸಂಗ್ರಹಿಸುವ ಸ್ಮಾರ್ಟ್‌ ಕಿಯೋಸ್ಕ್‌ ವ್ಯವಸ್ಥೆ ರೋಗಿ ಹಾಗೂ ವೈದ್ಯ ಸಿಬ್ಬಂದಿಯ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ವಿಪ್ರೊ ಜಿಇ ಹೆಲ್ತ್ ಕೇರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಸ್ಮಾರ್ಟ್ ಕಿಯೋಸ್ಕ್ ಉದ್ಘಾಟಿಸಿದ ಬಳಿಕ ಡಾ.ಅಶ್ವತ್ಥನಾರಾಯಣ ಸುದ್ದಿಗಾರರ ಜತೆ ಮಾತನಾಡಿದರು.

“ಕೊವಿಡ್‌ ಸೋಂಕು ಪತ್ತೆಗಾಗಿ ಸುರಕ್ಷಿತವಾಗಿ ಮಾದರಿ ಸಂಗ್ರಹಿಸುವ ಕಿಯೋಸ್ಕ್‌ಅನ್ನು ವಿಪ್ರೊ ಜಿಯೊ ಸಂಸ್ಥೆಯೇ ವಿನ್ಯಾಸಗೊಳಿಸಿ, 15 ಕಿಯೋಸ್ಕ್‌ಗಳನ್ನು ಉಚಿತವಾಗಿ ನೀಡಿದೆ. ಈ ಸಂದರ್ಭದಲ್ಲಿ ಡಿಜಿಟಲ್‌ ಹೆಲ್ತ್‌ ಕೇರ್‌ ದೊಡ್ಡ ಪಾತ್ರವಹಿಸುತ್ತದೆ. ಸುರಕ್ಷತೆ, ಸ್ವಚ್ಛತೆಯ ಕಾಯ್ದುಕೊಳ್ಳುವ ಜತೆಗೆ ಸುಲಭವಾಗಿ ಮಾದರಿ ಸಂಗ್ರಹಿಸುವ ಕಿಯೋಸ್ಕ್‌ ಅನ್ನು ಎಲ್ಲಿಗೆ ಬೇಕಾದಾರೂ ಒಯ್ಯಬಹುದು. ಜಿಲ್ಲಾ ಆಸ್ಪತ್ರೆಗಳಿಗೂ ಈ ಕಿಯೋಸ್ಕ್‌ಗಳನ್ನು ತಲುಪಿಸಬಹುದು,”ಎಂದರು.

“ವಿಪ್ರೊ ಜಿಯೊ ಸಂಸ್ಥೆಯವರು ರೋಗಿ, ವೈದ್ಯರು ಹಾಗೂ ವೈದ್ಯ ಸಿಬ್ಬಂದಿ ರಕ್ಷಣೆಗೆ ಬರುವ ನಿಟ್ಟಿನಲ್ಲಿ ವಿಶಿಷ್ಟ ಕಿಯೋಸ್ಕ್‌ ವಿನ್ಯಾಸಗೊಳಿಸಿದ್ದಾರೆ. ವೈದ್ಯರು ಹಾಗೂ ರೋಗಿ ಪ್ರತ್ಯೇಕ ಕೊಠಡಿಯಲ್ಲಿ ಇದ್ದು, ಕಿಯೋಸ್ಕ್‌ ಮೂಲಕ ಮಾದರಿ ಸಂಗ್ರಹಿಸಲಾಗುವುದು. ಪರಸ್ಪರ ಸಂಪರ್ಕಕ್ಕೆ ಬರದೇ ಪರೀಕ್ಷೆ ನಡೆಸಲು ಸಾದ್ಯವಾಗುವುದರಿಂದ ರೋಗಿ ಹಾಗೂ ವೈದ್ಯ ಸಿಬ್ಬಂದಿಯ ಆತಂಕ ಕಡಿಮೆ ಆಗುವುದು. ಜತೆಗೆ ಪಿಪಿಇ ಕಿಟ್‌ಗಳ ಬಳಕೆಯೂ ಕಡಿಮೆ ಆಗುವುದು,”ಎಂದು ವಿವರಿಸಿದರು.

“ರಾಮನಗರ ಜಿಲ್ಲೆಯಲ್ಲಿ ರಿಮೋಟ್‌ ಐಸಿಯು ಘಟಕ ಸ್ಥಾಪನೆಗೆ ವಿಪ್ರೊ ಜಿಯೊ ಸಂಸ್ಥೆ ಮುಂದೆ ಬಂದು ಎಲ್ಲ ರೀತಿಯ ಸಹಕಾರ ಒದಗಿಸಿತ್ತು. ಕಾರ್ಪೊರೆಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯನ್ನು ಹಲವಾರು ಸಂಸ್ಥೆಗಳು ಸಮರ್ಥವಾಗಿ ನಿಭಾಯಿಸಿದ್ದು, ಕೊವಿಡ್‌ ವಿರುದ್ಧದ ಸಮರದಲ್ಲಿ ಸರ್ಕಾರದ ಜತೆ ಕೈಜೋಡಿಸಿವೆ. ವಿಪ್ರೊ ಜಿಯೊ ಸಂಸ್ಥೆ ಸಹಕಾರಕ್ಕೆ ಸರ್ಕಾರದ ಪರವಾಗಿ ಧನ್ಯವಾದ,”ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವಿಪ್ರೊ ಜಿಇ ವ್ಯವಸ್ಥಾಪಕ ನಿರ್ದೇಶಕ ನಳಿನಿ ಕಾಂತ್‌ ಉಪಸ್ಥಿತರಿದ್ದರು.

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು: ಎಚ್ಡಿಕೆ, ಸಿದ್ದು ವಿರೋಧ

ಬೆಂಗಳೂರು: ಯಲಹಂಕ ಮೇಲ್ಸೇತುವೆಗೆ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್ ಹೆಸರಿಡಲು ರಾಜ್ಯ ಸರ್ಕಾರ ಮುಂದಾಗಿದ್ದು ರಾಜ್ಯದಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಈ ಸಂಬಂಧ ವಿರೋಧ ಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿವೆ.

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಕುರಿತು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸರ್ಕಾರ ನಾಡಿನ ಅಭ್ಯುದಯಕ್ಕೆ ಹೋರಾಟ ಮಾಡಿದವರಿಗೆ ಮಾಡುತ್ತಿರುವ ಅಪಮಾನ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರದು. ಸ್ವಾತಂತ್ರ್ಯಪೂರ್ವ ಮತ್ತು ನಂತರ ನಾಡಿನ ಅಭಿವೃದ್ಧಿಗೆ ಮತ್ತು ಹಿತಕ್ಕಾಗಿ ದುಡಿದ ಹಲವು ಮಹನೀಯರಿದ್ದಾರೆ. ಅವರ ಹೆಸರನ್ನು ಈ ಮೇಲ್ಸೇತುವೆಗೆ ಇಡಬಹುದಿತ್ತು. ರಾಜ್ಯದ ಹೋರಾಟಗಾರರ ಹೆಸರನ್ನು ಬೇರೆ ರಾಜ್ಯಗಳಲ್ಲಿ ನಾಮಕರಣ ಮಾಡುವುದುಂಟೆ? ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ನಾಡಿನ ಜನತೆಯ ಪರವಾಗಿ ಆಗ್ರಹ ಪಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಇದೇ ವಿಚಾರವಾಗಿ ಟ್ವೀಟ್ ಮಾಡಿರೋ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಯಲಹಂಕ‌ ಮೇಲ್ಸೆತುವೆಗೆ ವಿ.ಡಿ.ಸಾವರ್ಕರ್ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ‌ ಮಾಡುವ ಅವಮಾನ. ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಹೆಸರಿಡಬೇಕೆಂದು ಸಿಎಂ ಅವರನ್ನು ಆಗ್ರಹಿಸುತ್ತೇನೆ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ತೆರೆ ಹಿಂದಿನ‌ ಸೂತ್ರಧಾರರೇ ಹೊರತು, ಚುನಾಯಿತ ಸರ್ಕಾರ ಅಲ್ಲ‌ ಎನ್ನುವುದಕ್ಕೆ ಯಲಹಂಕ ಮೇಲ್ಸೆತುವೆಗೆ ಸಾವರ್ಕರ್ ಹೆಸರಿಡುವ ಅವಸರದ ನಿರ್ಧಾರವೇ‌ ಪುರಾವೆ. ಸಿಎಂ ಬಿಎಸ್ವೈ ಅವರೇ, ನೀವು ವಿರೋಧ ಪಕ್ಷಗಳ ಸಹಕಾರ ಬಯಸುತ್ತಿರುವುದು ಇಂತಹ ಜನವಿರೋಧಿ ನಿರ್ಧಾರಗಳಿಗಾಗಿಯೇ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಪ್ರಯಾಣಿಕರ ಲಭ್ಯತೆ ಆಧಾರದಲ್ಲಿ ಬಸ್ಸುಗಳ ರಾತ್ರಿ ಸಂಚಾರ ಪ್ರಾರಂಭ:ಡಿಸಿಎಂ ಲಕ್ಷ್ಮಣ ಸವದಿ

 

ಹುಬ್ಬಳ್ಳಿ,ಮೇ.26:ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಸದ್ಯ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಸಾರಿಗೆ ಬಸ್ ಸೇವೆ ನೀಡಲಾಗುತ್ತಿದೆ. ದೂರದ ಊರುಗಳ ಪ್ರಯಾಣ ಅವಧಿಯಲ್ಲಿ ಸ್ವಲ್ಪ ಹೆಚ್ಚಳವಾದರೂ ಸೇವೆ ನೀಡಲಾಗುವುದು. ಪ್ರಯಾಣಿಕರ ಲಭ್ಯತೆ ಆಧರಿಸಿ ಶೀಘ್ರದಲ್ಲಿಯೇ ಬಸ್ಸುಗಳ ರಾತ್ರಿ ಸಂಚಾರವನ್ನೂ ಕೂಡ ಪುನರಾರಂಭಿಸಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ವಾಕರಸಾಸಂ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೋವಿಡ್ ಲಾಕ್ ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೂ ರಾಜ್ಯದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳು 1700 ಕೋಟಿ ರೂ.ನಷ್ಟ ಅನುಭವಿಸಿವೆ. ಹಾನಿ ಇನ್ನೂ ಮುಂದುವರೆದಿದೆ.ಸಾರಿಗೆ ನಿಗಮಗಳ ನೌಕರರ ಎಪ್ರೀಲ್ ತಿಂಗಳ ವೇತನಕ್ಕಾಗಿ ಸರ್ಕಾರ 326 ಕೋಟಿ ರೂ.ನೀಡಿದೆ. ಮೇ ತಿಂಗಳ ವೇತನಕ್ಕಾಗಿ ಅರ್ಧದಷ್ಟು ಅನುದಾನ ನೀಡಿದೆ. ಪರಿಸ್ಥಿತಿ ಸಂಕಷ್ಟದಲ್ಲಿದೆಯಾದರೂ, ಸದ್ಯ ಟಿಕೆಟ್ ದರದ ಹೆಚ್ಚಳ ಕುರಿತು ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದರು.

ಲಾಕ್ ಡೌನ್ ಜಾರಿಯಿಂದಾಗಿ ಸ್ಥಗಿತವಾಗಿದ್ದ ಸಾರ್ವಜನಿಕ ಸಾರಿಗೆ ಸೇವೆ ಮೇ.6 ರಿಂದ ಪುನರಾರಂಭವಾಗಿದೆ. ಸಾರ್ವಜನಿಕ ಸಾರಿಗೆ ಅವಲಂಬಿಸಿರುವ ಜನರ ತೊಂದರೆ ನೀಗಿಸಲು ಬಸ್ ಸಂಚಾರ ಪುನರಾರಂಭದ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ವಾಕರಸಾಸಂ, ಈಕರಸಾಸಂ, ಬಿಎಂಟಿಸಿ ಹಾಗೂ ಕೆ ಎಸ್ ಆರ್ ಟಿ ಸಿ ನಿಗಮಗಳು ಇಲ್ಲಿಯವರೆಗೆ ಅನುಭವಿಸಿರುವ ಹಾನಿ ಹಾಗೂ ಮುಂದಿನ ದಿನಗಳ ಸವಾಲುಗಳ ಕುರಿತು ಚರ್ಚಿಸಲು ಎಲ್ಲಾ ನಿಗಮಗಳ ಪರಿಶೀಲನೆ ಸಭೆ ಪ್ರತ್ಯೇಕವಾಗಿ ನಡೆಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ವಾಕರಸಾಸಂ ಪರಿಶೀಲನೆ ಸಭೆ ಮೂಲಕ ಈ ಪ್ರಕ್ರಿಯೆ ಪ್ರಾರಂಭವಾಗಿದೆ.

ಸಾಮಾಜಿಕ ಅಂತರ ನಿಯಮದ ಪಾಲನೆ ಕಡ್ಡಾಯವಾಗಿರುವದರಿಂದ ಶೇ.100 ರಷ್ಟು ಆಸನಗಳ ಭರ್ತಿ ಸಾಧ್ಯವಿಲ್ಲ. ಒಂದು ಬಸ್ಸಿನಲ್ಲಿ 30 ಜನರಿಗೆ ಮಾತ್ರ ಅವಕಾಶವಿರುತ್ತದೆ.ಜೂನ್ 1 ರ ನಂತರ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳು ಏನಿರುತ್ತವೆ ಎಂಬುದನ್ನು ನೋಡಿಕೊಂಡು ಮುಂದಿನ ಕ್ರಮ ವಹಿಸಲಾಗುವುದು.
ರಾಜ್ಯದ 4 ನಿಗಮಗಳಲ್ಲಿ ಒಟ್ಟು ಸುಮಾರು 1,30,000 ಸಿಬ್ಬಂದಿ ವರ್ಗದವರಿದ್ದಾರೆ.ಎಪ್ರಿಲ್ ತಿಂಗಳ ವೇತನಕ್ಕೆ ಸರ್ಕಾರ ಅನುದಾನ ನೀಡಿದೆ.ಮೇ ತಿಂಗಳ ವೇತನಕ್ಕೆ ಅರ್ಧದಷ್ಟು ಅನುದಾನ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಹುಬ್ಬಳ್ಳಿಯ ವಾಕರಸಾಸಂ ಈ ಲಾಕ್ ಡೌನ್ ಅವಧಿಯಲ್ಲಿ 414 ಕೋಟಿ ರೂ.ಹಾನಿ ಅನುಭವಿಸಿದೆ.ಪ್ರತಿ ತಿಂಗಳು ಸುಮಾರು 90 ಕೋಟಿ ರೂ.ನಷ್ಟವಾಗುತ್ತಿದೆ. ಸಿಬ್ಬಂದಿ ವೇತನಕ್ಕೆ 96 ಕೋಟಿ ರೂ.ಹಾಗೂ ಇಂಧನ ವೆಚ್ಚಕ್ಕೆ 90 ಕೋಟಿ ರೂ.ಗಳ ಅಗತ್ಯವಿದೆ.

*ನೀಲನಕ್ಷೆಗೆ ಸೂಚನೆ:* ಕೊರೊನಾ ಇನ್ನೂ ಎಷ್ಟು ದಿನಗಳ ಕಾಲ ಮುಂದುವರೆಯಲಿದೆ ಎಂಬ ಅಂದಾಜು ಯಾರಿಗೂ ಇಲ್ಲ.ಕೊರೊನಾ ನಿಯಂತ್ರಣದ ಮೇಲೆ ಸಾರಿಗೆ ಸಂಸ್ಥೆಯ ಭವಿಷ್ಯ ಅವಲಂಬನೆಯಾಗಿದೆ.ವೆಚ್ಚ ಕಡಿಮೆ ಮಾಡಿ, ಹಾನಿಯ ಪ್ರಮಾಣ ಕಡಿಮೆ ಮಾಡಲು ಮುಂದಿನ ಮೂರು ತಿ‌ಂಗಳ ನೀಲನಕ್ಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಹುಬ್ಬಳ್ಳಿ- ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಗೆ, ರಾಜ್ಯದ ಒಳನಾಡಿನ ದೂರದ ಜಿಲ್ಲೆಗಳಿಗೆ ಬಸ್ ಸೇವೆ ಪುನರಾರಂಭಿಸಲಾಗುವುದು. 2014 ರಲ್ಲಿ ಡೀಸೆಲ್ ದರ ಪ್ರತಿ ಲೀಟರ್ ಗೆ 54 ರೂ.ಇತ್ತು.ಈಗ ಹೆಚ್ಚಾಗಿದೆ.ಸಂಬಳದಲ್ಲಿಯೂ ಈಗ ಶೇ.30 ರಷ್ಟು ಹೆಚ್ಚಾಗಿದೆ. ವಾಹನದ ಬಿಡಿ ಭಾಗಗಳು, ಟಯರ್ ಸೇರಿದಂತೆ ಇತರೆ ವೆಚ್ಚದ ಹೆಚ್ಚಳಕ್ಕೆ ಸಮಾನಾಂತರವಾಗಿ ಟಿಕೆಟ್ ದರದಲ್ಲಿ ಹೆಚ್ಚಳವಾಗದಿರುವದು ಹಾನಿಗೆ ಕಾರಣವಾಗಿದೆ. ಬಜೆಟ್ ಅಧಿವೇಶನದ ಪೂರ್ವದಲ್ಲಿ ಶೇ.12 ರಷ್ಟು ಟಿಕೆಟ್ ದರ ಹೆಚ್ಚಿಸಿದಾಗ, ವಿರೋಧ ಪಕ್ಷಗಳೂ ಕೂಡ ಸಹಮತ ವ್ಯಕ್ತಪಡಿಸಿದವು.ಮುಂಬರುವ ದಿನಗಳಲ್ಲಿ ಭ್ರಷ್ಟಾಚಾರ,ಸೋರಿಕೆ ತಡೆದು ಹಾನಿ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.ಓವರ್ ಟೈಮ್ ಕರ್ತವ್ಯ ಕಡಿಮೆ ಮಾಡಿ, ಎಲ್ಲರನ್ನೂ ಡ್ಯೂಟಿಗೆ ಬಳಸಿಕೊಳ್ಳಲಾಗುವುದು.ಅನಗತ್ಯವಾಗಿ ಹೆಚ್ಚು ಟ್ರಿಪ್ ಗಳಲ್ಲಿ ವಾಹನ ಓಡಿಸುವುದನ್ನು ಸ್ಥಗಿತ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿಗಳು ಹೇಳಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.

ಆನ್ ಲೈನ್ ಮೂಲಕ ಮಾವು ಮಾರಾಟ,ಫ್ಲಿಪ್ ಕಾರ್ಟ್ ಸಹಯೋಗ

 

ಬೆಂಗಳೂರು: ಬೆಳೆಗಾರನೇ ಬೆಲೆ ನಿಗದಿಮಾಡುತ್ತಾನೆ. ಇತಿಹಾಸದಲ್ಲೆ ಮೊದಲಬಾರಿಗೆ ಇಂತಹ ಅವಕಾಶ ರೈತರಿಗೆ ಒದಗಿಸಲಾಗಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ದರ ನಿಗದಿಮಾಡಲಾಗುತ್ತಿತ್ತು. ಈಗ ಆನ್ಲೈನ್ ನಲ್ಲಿ ಮಾವು ಮಾರಾಟ ಆರಂಭಿಸಲಾಗಿದ್ದು, ದರವನ್ನ ಮಾವು ಬೆಳೆಗಾರ ನಿಗದಿಮಾಡುತ್ತಾನೆ. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ ಎಂದು ತೋಟಗಾರಿಕೆ ಸಚಿವ ಡಾ.ನಾರಾಯಣಗೌಡ ಹೇಳಿದ್ದಾರೆ.

ವಿಕಾಸ ಸೌಧದಲ್ಲಿ ಫ್ಲಿಪ್ ಕಾರ್ಟ್ ಸಹಯೋಗದಲ್ಲಿ ಆನ್ಲೈನ್ ಮೂಲಕ ಮಾವು ಮಾರಾಟಕ್ಕೆ ಸಚಿವರು ಚಾಲನೆ ನೀಡಿದರು‌. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಆನ್ಲೈನ್ ಮೂಲಕ ಮಾವು ಮಾರಾಟ ಆರಂಭಿಸಿದ್ದೇವೆ. ಇದು ಪ್ರಾಯೋಗಿಕ. ಇದರಲ್ಲಿ ಇರುವ ನ್ಯೂನ್ಯತೆ ಸರಿಪಡಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತೋತ್ಪನ್ನವನ್ನ ಆನ್ಲೈನ್ ಮೂಲಕ ಮಾರಾಟ ಮಾಡುವ ಪ್ರಯತ್ನಾಡಲಾಗುವುದು. ಈಗ ಮಾವು ಮಾರಾಟ ಶುರುವಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ ಗ್ರಾಹಕರು ಮಾವು ಖರೀದಿ ಮಾಡಬಹುದು. ಆದರೆ ದರ ನಿಗದಿ ಮಾಡುವ ಹಕ್ಕು ಮಾವು ಬೆಳೆಗಾರನದ್ದೇ ಆಗಿದೆ‌. ಮದ್ಯವರ್ತಿಗಳಿಗೆ ಅವಕಾಶ ಇಲ್ಲ. ಇಲ್ಲಿ ಬೆಳೆಗಾರ ನಿಗದಿ ಮಾಡಿದ್ದೇ ದರ ಎಂದು ಸಚಿವರು ಹೇಳಿದ್ದಾರೆ‌. ಫಾರ್ಮರ್ ಪ್ರೊಡ್ಯುಸ್ ಆರ್ಗನೈಸೇಶನ್ (FPO) ನಲ್ಲಿ ಮಾವು ಬೆಳೆಗಾರರು ಹೆಸರು ನೊಂದಾಯಿಸಿಕೊಳ್ಳಬೇಕು. ನೊಂದಾಯಿತ ರೈತರ ಹೆಸರನ್ನ ಫ್ಲಿಪ್ ಕಾರ್ಟ್ ನವರು ಪಡೆದುಕೊಳ್ಳುತ್ತಾರೆ. ಗ್ರಾಹಕರು ಆನ್ಲೈನ್ ನಲ್ಲಿ ಆರ್ಡರ್ ಮಾಡಿದಾಗ, ಸಂಬಂಧಿಸಿದ ತಳಿಯ ಮಾವನ್ನ ರೈತರಿಂದ ಪಡೆದು ಗ್ರಾಹಕರಿಗೆ ಫ್ಲಿಪ್ ಕಾರ್ಟ್ ನೀಡಲಿದೆ ಎಂದರು.

ಈಗ ಫ್ಲಿಪ್ ಕಾರ್ಟ್ ಮಾತ್ರ ಈ ಸೇವೆ ನೀಡಲು ಮುಂದಾಗಿದೆ‌. ಕೆಲ ದಿನಗಳ ಬಳಿಕ ಇತರ ಆನ್ಲೈನ್ ಮಾರಾಟ ಸಂಸ್ಥೆ ಮೂಲಕವೂ ಈ ಕಾರ್ಯ ಆರಂಭವಾಗಲಿದೆ ಎಂದು ಸಚಿವ ಹೇಳಿದ್ದಾರೆ‌. ಅಲ್ಲದೆ ರೈತರಿಗೆ ಅನುಕೂಲ ಆಗುವಂತ ಮಾರುಕಟ್ಟೆ ನಿರ್ಮಿಸುವ ಬಗ್ಗೆಯೂ ಚಿಂತನೆ ಇದೆ. ಕೃಷಿ ಉತ್ಪನ್ನ ಹಾಳಾಗದಂತೆ ನೋಡಿಕೊಳ್ಳಲು ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.