ರೈತರ ಸಾಲಕ್ಕೆ ಆಧಾರ್ ವಿಳಾಸವನ್ನೇ ಕಡ್ಡಾಯ ಮಾಡಬಾರದು:ಸಿಎಂಗೆ ಆರ್.ವಿ ದೇಶಪಾಂಡೆ ಪತ್ರ

ಬೆಂಗಳೂರು: ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುವಾಗ ರೇಷನ್ ಕಾರ್ಡ್ ವಿಳಾಸ ಹಾಗೂ ಆಧಾರ್ ಕಾರ್ಡ್ ವಿಳಾಸವನ್ನೇ ಸಾಲ ನೀಡಲು ಪ್ರಮುಖ ಆಧಾರವನ್ನಾಗಿ ಪರಿಗಣಿಸಬಾರದು, ಕೂಡಲೇ ಈ ಸಂಬಂಧಿತ ಸರ್ಕಾರಿ ಆದೇಶಕ್ಕೆ ತಿದ್ದುಪಡಿ ತರಬೇಕೆಂದು ಶಾಸಕ ಆರ್.ವಿ.ದೇಶಪಾಂಡೆ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಕೃಷಿ ಸಾಲವನ್ನು ಕೃಷಿ ಚಟುವಟಿಕೆಗೆ ನೀಡಲಾಗುತ್ತದೆಯೇ ಹೊರತು ಅವರ ಮನೆಯನ್ನು ಆಧಾರವಾಗಿಟ್ಟುಕೊಂಡು ಸಾಲ ನೀಡುವುದಿಲ್ಲ. ಆದರೆ ಹೊಸ ಆದೇಶದಲ್ಲಿ ಸಾಲ ನೀಡುವಾಗ ಸಹಕಾರ ಸಂಘಗಳು ಆಧಾರ್ ಕಾರ್ಡ್ ವಿಳಾಸವನ್ನು ಪರಿಗಣಿಸಿ ಸಾಲ ನೀಡಬೇಕೆಂದು ಆದೇಶಿಸಲಾಗಿದೆ, ಇದು ರೈತರು ಹಾಗೂ ಸಹಕಾರ ಸಂಘಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗುತ್ತದೆ.ಕೂಡಲೇ ಸರ್ಕಾರ ಇದಕ್ಕೆ ತಿದ್ದುಪಡಿ ತಂದು ಕೃಷಿ ಚಟುವಟಿಕೆ ನಡೆಸುವ ಪ್ರತಿಯೊಬ್ಬರಿಗೂ ಸಾಲ ನೀಡಲು ಸೂಚಿಸಬೇಕಾಗಿ ಮನವಿ ಮಾಡುತ್ತೇನೆ. ಅಲ್ಲದೆ ಕೃಷಿ ಭೂಮಿ ಇದ್ದ ಕ್ಷೇತ್ರದಲ್ಲಿ ವಾಸವಾಗಿರದೆ ಇರುವವರಿಂದ ಶೇ.7ರಷ್ಟು ಬಡ್ಡಿ ಆಕರ ಮಾಡುವಂತೆ ಹಾಗೂ ಆ ಕ್ಷೇತ್ರದಲ್ಲಿ ವಾಸವಾಗಿರದೇ ಇರುವವರಿಗೆ ಹೊಸ ಸಾಲ ನೀಡದಂತೆ ಆದೇಶ ನೀಡಲಾಗಿದೆ, ಇದನ್ನು ಪುನರ್ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

ಸಮನ್ವಯ ಸೂತ್ರದಡಿ ಕಾರ್ಮಿಕ ಕಾಯಿದೆಗೆ ತಿದ್ದುಪಡಿ,ಯಡಿಯೂರಪ್ಪರ ವಿವೇಚನೆಯ ನಿರ್ಧಾರ:ಆಯನೂರು ಮಂಜುನಾಥ್

ಬೆಂಗಳೂರು,ಮೇ.23:ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಕಾರ್ಮಿಕ ಕಾಯಿದೆಗೆ ಸಮನ್ವಯತೆ ಆಧಾರದ ಮೇಲೆ ಬಹಳ ವಿವೇಚನೆಯಿಂದ ತಿದ್ದುಪಡಿ ತರಲಾಗಿದೆ. ಕಾರ್ಮಿಕರಿಗೂ ಹಾಗೂ ಕೈಗಾರಿಕಾ ಮಾಲೀಕರಿಬ್ಬರಿಗೂ ಅನುಕೂಲ ಕಲ್ಪಿಸುವ ತಿದ್ದುಪಡಿ ಇದಾಗಿದೆ ಎಂದು ಮೇಲ್ಮನೆ ಸದಸ್ಯ ಹಾಗೂ ಕಾರ್ಮಿಕ ಮುಖಂಡ ಆಯನೂರು ಮಂಜುನಾಥ್ ಶ್ಲಾಘಿಸಿದ್ದಾರೆ.

ಬೇರೆ ರಾಜ್ಯಗಳಲ್ಲಿ ಕಾಯಿದೆ ತಿದ್ದುಪಡಿಮಾಡುವಲ್ಲಿ ದುಡುಕಿದ್ದಾರೆ.ಆದರೆ ಯಡಿಯೂರಪ್ಪ ದುಡುಕದೇ ವಿವೇಚನೆಯುಳ್ಳ ನಿರ್ಧಾರ ಕೈಗೊಂಡಿದ್ದಾರೆ.ಇದಕ್ಕಿಂತ ಒಳ್ಳೆಯ ತೀರ್ಮಾನ ಕೈಗೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ತಿದ್ದುಪಡಿಯಲ್ಲಿ ಸೆಕ್ಷನ್‌59 ಅನ್ನು ಯಥಾವತ್ತಾಗಿ ಜಾರಿಗೊಳಿಸಲಾಗಿದೆ.ಸರ್ಕಾರದ ಕಾರ್ಮಿಕ ಇಲಾಖೆ ಮೇ.20 ರಂದು ನೋಟಿಫಿಕೇಷನ್ ಹೊರಡಿಸಿ ಕಾರ್ಮಿಕ ಕಾಯಿದೆಗೆ ತಾತ್ಕಾಲಿಕ ತಿದ್ದುಪಡಿ ತಂದಿದೆ.ಕೆಲಸದ ವೇಳೆ ಮತ್ತು ಪಾಳಿಯನ್ನು ಬದಲಾಯಿಸುವಾಗ ಅಧಿಕಾರಿ ಒಪ್ಪಿಗೆ ಪಡೆಯಬೇಕಿತ್ತು.ಆದರೀಗ ಕೊರೊನಾ ನಷ್ಟ ಭರ್ತಿಗಾಗಿ ಇದಕ್ಕೆ ಯಾವುದೇ ಇಲಾಖೆಯ ಅನುಮತಿ ಬೇಕಿಲ್ಲ. ತಿದ್ದುಪಡಿ ಮೂಲಕ ಹೆಚ್ಚುವರಿ ಅವಧಿ ಕೆಲಸಕ್ಕೆ ದುಪ್ಪಟ್ಟು ಕೂಲಿ ನೀಡಲಾಗುತ್ತಿದೆ.ಕಾರ್ಮಿಕರು ಸ್ವಯಂಇಚ್ಛೆಯಿಂದ ಹೆಚ್ಚುವರಿ ಮಾಡಬಹುದು.ಮಹಿಳೆಯರಾಗಲಿ ಯಾರೇ ಆಗಲೀ ಹೆಚ್ಚುವರಿ ಕೆಲಸ ಮಾಡಲೇಬೇಕೆಂಬ ಯಾವುದೇ ಒತ್ತಾಯವಾಗಲೀ ಕಡ್ಡಾಯವಾಗಲಿ ಇಲ್ಲ‌‌‌‌.ಹೆಚ್ಚುವರಿ ಕೆಲಸ ಮಾಡಲಿಚ್ಛಿಸುವವರು ಮಾಡಬಹುದಷ್ಟೆ.ಕೊರೊನಾದಂತಹ ಸಂಕಷ್ಟದ ಪ್ರಸಕ್ತ ಸಮಯದಲ್ಲಿ ಇದಕ್ಕಿಂತ ಒಳ್ಳೆಯ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಕಾರ್ಮಿಕರು ಹಾಗೂ ಮಾಲೀಕರಿಬ್ಬರನ್ನೂ ಗಮನದಲ್ಲಿಟ್ಟುಕೊಂಡು ಮಾಲೀಕರಿಗೆ ಹೆಚ್ಚು ಆದಾಯವಾಗುವಂತೆ ಕಾರ್ಮಿಕರಿಗೆ ಹೆಚ್ಚುವರಿ ಅವಧಿಗೆ ದುಪ್ಪಟ್ಟು ವೇತನ ಸಿಗುವಂತೆ ಸಮನ್ವಯ ಸೂತ್ರಹೆಣೆದಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಆಯನೂರು ಮಂಜುನಾಥ್ ಹೇಳಿದ್ದಾರೆ.

ಕೋವಿಡ್ ವಿಚಾರದಲ್ಲಿ ರಾಜಕೀಯ ಬೇಡ: ನಾರಾಯಣಗೌಡ

ಮಂಡ್ಯ,ಮೇ-23:ಮಾತನಾಡುವವರು ಮಾತಾಡಿಕೊಳ್ಳಲಿ. ಕೆಲಸ ಇಲ್ಲದವರು ಮಾತಾಡುತ್ತಾರೆ. ನಮಗೆ ಮಾಡಲು ಬೇಕಾದಷ್ಟು ಕೆಲಸವಿದೆ. ಕೋವಿಡ್ -19 ತಡೆಗಟ್ಟುವ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಹೇಳಿದ್ದಾರೆ.

ಇಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಿ, ಐಬಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದ್ರು. ನಮ್ಮ ಮೇಲೆ ಆರೋಪ ಮಾಡಿದವರ ಕ್ಷೇತ್ರಕ್ಕೇ ಮುಂಬೈನಿಂದ ಹೆಚ್ಚಿನ ಜನ ಬರುತ್ತಿದ್ದಾರೆ. ಇದಕ್ಕೆ ಅವರು ಏನು ಹೇಳುತ್ತಾರೆ. ಇಂಥ ಸಂದರ್ಭದಲ್ಲಿ ರಾಜಕೀಯ ಮಾಡಬಾರದು. ಬಂದವರಿಗೆ ಕ್ವಾರಂಟೈನ್ ಸೌಲಭ್ಯ ನೀಡುವುದು ನಮ್ಮ ಕರ್ತವ್ಯ. ಆ ಕೆಲಸ ಮಾಡುತ್ತಿದ್ದೇವೆ. ಹಣದ ಕೊರತೆ ಇಲ್ಲ. ಎಲ್ಲ ತಾಲೂಕಿಗೆ ಅಗತ್ಯಕ್ಕೆ ತಕ್ಕಂತೆ ಹಣ ನೀಡುತ್ತಿದ್ದೇವೆ. ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೆಲವರು ಕಣ್ ತಪ್ಪಿಸಿ ಹೊರ ರಾಜ್ಯದಿಂದ ಜಿಲ್ಲೆಗೆ ಬಂದ ಕಾರಣ ಸ್ವಲ್ಪ ಕಷ್ಟ ಆಗಿತ್ತು. ಈಗ ಎಲ್ಲವು ನಿಯಂತ್ರಣಕ್ಕೆ ಬಂದಿದೆ.

ಸ್ವಲ್ಪ ಮಟ್ಟಿಗೆ ಲಾಕ್ ಡೌನ್ ಸಡಿಲಿಕೆ ಅನಿವಾರ್ಯವಾಗಿತ್ತು. ಜನಜೀವನ ಕಷ್ಟ ಆಗುತ್ತೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಆದರೂ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜಾಗೃತೆಯಿಂದ ಇರಬೇಕು. ಜಿಲ್ಲೆಯ ಬಗ್ಗೆ ಮುಖ್ಯಮಂತ್ರಿಗಳು ಹೆಚ್ಚಿನ ಆಧ್ಯತೆ ನೀಡಿದ್ದಾರೆ. ಯಾವುದೆ ವಿಚಾರ ಇದ್ದರೂ ತಕ್ಷಣ ಸ್ಪಂದಿಸುತ್ತಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಅವರೂ ಜಿಲ್ಲೆಯಲ್ಲಿ ಓಡಾಟ ಮಾಡಿ ಪರಿಶೀಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಕೆಲವರು ಮಾತಾಡಿದರೆ ಏನು ಮಾಡಲು ಸಾಧ್ಯವಿಲ್ಲ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಆರೋಪಿಸುವವರಿಗೆ ಸಚಿವರು ತಿರುಗೇಟು ನೀಡಿದ್ದಾರೆ.

ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್, ಡಿಸಿ, ಎಸ್ಪಿ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಕೊರೊನಾ ಸ್ಪೋಟ,216 ಹೊಸ ಪ್ರಕರಣ ಪತ್ತೆ

ಬೆಂಗಳೂರು:ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿಂದು ದಾಖಲೆಯ 216 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ,ಇದರಲ್ಲಿ ಬಹುಪಾಲು ಮಹಾರಾಷ್ಟ್ರದಿಂದ ಬಂದವರು ಸೇರಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 1959 ಆಗಿದೆ.

ಯಾದಗಿರಿ 72,ರಾಯಚೂರು 40,ಮಂಡ್ಯ 28,ಚಿಕ್ಕಬಳ್ಳಾಪುರ26 ಸೇರಿ ಒಟ್ಟು 216 ಕೊರೊನಾ ಪ್ರಕರಣ ಕಂಡು ಬಂದಿವೆ.ಇಂದು 11 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು,ಈವರೆಗೆ ಬಿಡುಗಡೆಯಾದವರ ಸಂಖ್ಯೆ 608 ಆಗಿದೆ.

ಮಾನವೀಯತೆ ಮೆರೆದ ಸುಧಾಕರ್

ಬೆಂಗಳೂರು : ಊರಿಗೆ ಹಿಂತಿರುಗಲು ಆಗಮಿಸಿದ್ದ ಒಡಿಶಾ ಮೂಲದ ಕಾರ್ಮಿಕನೊಬ್ಬ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೂರ್ಛೆ ರೋಗದಿಂದ ಒದ್ದಾಡುತ್ತಿದ್ದಾಗ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದ ಘಟನೆ ಶನಿವಾರ ಅರಮನೆ ಮೈದಾನದಲ್ಲಿ ನಡೆಯಿತು.’

ಸಚಿವ ಸುಧಾಕರ್ ಅವರು ತಾವು ಉಸ್ತುವಾರಿ ವಹಿಸಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶನಿವಾರ ಬೆಳಗ್ಗೆ ಆ ಮಾರ್ಗದಲ್ಲಿ ತೆರಳುತ್ತಿದ್ದರು. ಅರಮನೆ ಮೈದಾನದ ರಸ್ತೆ ಬದಿ ಭಾರಿ ಸಂಖ್ಯೆಯಲ್ಲಿ ಈಶಾನ್ಯ ರಾಜ್ಯದವರು ಜಮಾಯಿಸಿದ್ದನ್ನು ಕಂಡು ಅಲ್ಲಿಗೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದರು.

ಈ ಸಂದರ್ಭದಲ್ಲಿ ಒಡಿಶಾ ಮೂಲದ ಎರ್ಷಾದ್ ಎಂಬಾತ ದಿಢೀರ್ ಎಂದು ಕುಸಿದು ಬಿದ್ದು ಒದ್ದಾಡತೊಡಗಿದ. ನೂರಾರು ಮಂದಿ ಅವರ ರಾಜ್ಯದವರೇ ಇದ್ದರೂ ಯಾರೊಬ್ಬರು ನೆರವಿಗೆ ಧಾವಿಸಲಿಲ್ಲ. ಅಲ್ಲಿಯೇ ಇದ್ದ ಸಚಿವ ಸುಧಾಕರ್ ಅವರು ತಕ್ಷಣ ಆತನಲ್ಲಿಗೆ ತೆರಳಿ ಆತನನ್ನು ಪರೀಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದರು. ತಕ್ಷಣ ಪೊಲೀಸ್ ಇಲಾಖೆ ವಾಹನದಲ್ಲಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಡಿಕೆಶಿ ಬಾಯಿ ಚಪಲ ಬಿಡಲಿ: ಸುಧಾಕರ್

ಚಿಕ್ಕಬಳ್ಳಾಪುರ : ಮಾತನಾಡಬೇಕು ಎಂಬ ಚಪಲಕ್ಕೆ ಟೀಕೆ ಮಾಡುವುದನ್ನು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ವ್ಯಂಗ್ಯವಾಡಿದ್ದಾರೆ.

ರಾಜ್ಯದ ನಾನಾ ಭಾಗಗಳಲ್ಲಿ ನೆಲಿಸಿದ್ದ ಈಶಾನ್ಯ ರಾಜ್ಯದವರು ಅವರ ಊರುಗಳಿಗೆ ಹಿಂತಿರುಗಲು ರಾಜ್ಯ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿಲ್ಲ. ಯಡಿಯೂರಪ್ಪ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ, ಬಡವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಒಡಿಶಾ ಮತ್ತು ಮಣಿಪುರ ರಾಜ್ಯದ ಜನರು ಊರುಗಳಿಗೆ ಹಿಂತಿರುಗಲು ಅರಮನೆ ಮೈದಾನದ ಬಳಿ ಜಮಾಯಿಸಿದ್ದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.

ಇದಕ್ಕೆ ತೀಷ್ಣ ಪ್ರತಿಕ್ರಿಯೆ ನೀಡಿರುವ ಸಚಿವ ಸುಧಾಕರ್, “ಬಾಯಿ ಚಪಲಕ್ಕೆ ಮಾತನಾಡುವುದನ್ನು ಅವರು ಇನ್ನಾದರೂ ಬಿಡಬೇಕು. ಅವರಿಗೆ ಮಾತ್ರ ಹೃದಯ ಇದೆಯೇ? ಹಾಗಿದ್ದರೆ ಯಡಿಯೂರಪ್ಪನವರಿಗೆ ಇಲ್ಲವೇ? ಬಾಯಿಗೆ ಬಂದಂತೆ ಮಾತನಾಡುವುದರಿಂದ ಯಾರಿಗೂ ಲಾಭ ಆಗುವುದಿಲ್ಲ ಎಂಬುದನ್ನು ಇನ್ನಾದರೂ ಅವರು ಅರ್ಥ ಮಾಡಿಕೊಳ್ಳಬೇಕು’ ಎಂದು ತಿರುಗೇಟು ನೀಡಿದರು.

ವಲಸೆ ಕಾರ್ಮಿಕರನ್ನು ಇದುವರೆಗೂ ಅತ್ಯಂತ ಕ್ಷೇಮದಿಂದ ನೋಡಿಕೊಂಡವರು ಯಾರು? ಅವರಿಗೆ ಉಚಿತ ವಸತಿ, ಊಟ, ಔಷಧೋಪಚಾರಗಳನ್ನು ನೀಡಿ ಜತೆಗೆ ತಲಾ ಐದು ಸಾವಿರು ರೂಗಳ ಆರ್ಥಿಕ ನೆರವು ನೀಡಿರುವುದು ಯಡಿಯೂರಪ್ಪನವರ ಸರ್ಕಾರ ಎಂಬುದು ನಾಡಿನ ಜನತೆಗೆ ಗೊತ್ತಿದೆ. ಹೌದು, ಶನಿವಾರ ಮಣಿಪುರ ಮತ್ತು ಒಡಿಶಾ ರಾಜ್ಯದವರು ಹಿಂತಿರುಗುವ ವೇಳೆ ಗೊಂದಲ ಆಗಿದೆ. ನಮ್ಮ ಸರ್ಕಾರ ನೀಡಿದ್ದ ಮಾಹಿತಿಗಿಂತ ಐದಾರು ಪಟ್ಟು ಹೆಚ್ಚು ಮಂದಿ ಅಲ್ಲಿನ ಸರ್ಕಾದ ಮಾಹಿತಿ ಆಧರಿಸಿ ಬಂದ ಕಾರಣಕ್ಕೆ ಜನದಟ್ಟಣೆ ಆಗಿದೆ. ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಅವರನ್ನು ಮಾತನಾಡಿಸಿ ಮಾಹಿತಿ ಪಡೆದು ಅಲ್ಲಿಂದಲೇ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಜತೆ ಮೊಬೈಲ್ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗಿದೆ ಎಂದರು.

ಎಲ್ಲರನ್ನೂ ಅವರ ಊರುಗಳಿಗೆ ಸುರಕ್ಷಿತವಾಗಿ ಕಳುಹಿಸಿಕೊಡುವ ಹೊಣೆ ಸರ್ಕಾರ ವಹಿಸಿಕೊಂಡಿದೆ. ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ದಿನವೊಂದಕ್ಕೆ ಒಂದೂವರೆ ಸಾವಿರ ಜನರನ್ನು ರೈಲಿನಲ್ಲಿ ಕಳುಹಿಸಲಾಗುತ್ತಿದೆ. ಏಕಾಏಕಿ ಐದಾರು ಸಾವಿರ ಮಂದಿ ಆಗಮಿಸಿದ್ದರಿಂದ ಗೊಂದಲವಾಗಿದೆ. ಒಂದೆರಡು ದಿನಗಳಲ್ಲಿಎಲ್ಲರನ್ನೂ ಕಳುಹಿಸಿಕೊಡಲಾಗುತ್ತದೆ. ಇನ್ನಷ್ಟು ಹೆಚ್ಚಿನ ಬೋಗಿಗಳನ್ನು ಕೊಡುವಂತೆ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ಸಿಗರಿಗೆ ಜನರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ರಾಜ್ಯದ ಎಲ್ಲ ಕುಟುಂಬಗಳಿಗೆ ಒಂದು ತಿಂಗಳ ಪಡಿತರವನ್ನು ವಿತರಿಸಿ ಕಾಳಜಿ ತೋರಿಸಲಿ, ಅದು ಬಿಟ್ಟು ಮಾತನಾಡಬೇಕು ಎಂಬ ಕಾರಣಕ್ಕೆ, ಚಪಲಕ್ಕಾಗಿ ಮಾತನಾಡಿದರೆ ಅವರುಗಳೇ ನಗೆಪಾಟಲೀಗೀಡಾಗುತ್ತಾರೆ ಎಂದೂ ಸಚಿವ ಸುಧಾಕರ್ ತಿರುಗೇಟು ನೀಡಿದರು.