ಸರ್ಕಾರದ ಮಾರ್ಗಸೂಚಿ ಬದುಕಿನ ಭಾಗವಾಗಬೇಕು : ಸಚಿವ ಸುಧಾಕರ್

ಚಿಕ್ಕಬಳ್ಳಾಪುರ : ಕೋವಿಡ್ ರೋಗಕ್ಕೆ ಲಸಿಕೆ ಸಿಗುವತನಕ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಜನರು ಚಾಚೂ ತಪ್ಪದೆ ತಮ್ಮಬದುಕಿನ ಭಾಗವಾಗಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಲಾಕ್‍ಡೌನ್ ಸಡಿಲಿಕೆ ಬಳಿಕ ಕೊರೋನಾ ಸಂಕಿತತರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ನೆರೆಯ ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿರುವ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ರಾಜ್ಯಕ್ಕೆ ಹಿಂದಕ್ಕೆ ಬರುತ್ತಿರುವುದು ಕಾರಣ. ನಮ್ಮವರನ್ನು ರಾಜ್ಯಕ್ಕೆ ಮರಳಿ ಬರಬೇಡಿ ಎಂದು ಅಮಾನವೀಯವಾಗಿ ನಡೆದುಕೊಳ್ಳಲು ಆಗುವುದಿಲ್ಲ. ಆದರೆ ಬರುವ ಎಲ್ಲರನ್ನೂ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್‍ನಲ್ಲಿ ಇಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಲಾಕ್‍ಡೌನ್ ಸಡಿಲಕೆ ಬಳಿಕ ಜನರು ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಸರ್ಕಾರ ನೀಡುವ ಸೂಚನೆಗಳನ್ನು ಪಾಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಸನ್ನಿವೇಶದಲ್ಲಿ ಜನರ ಸಂಕಷ್ಟ ಪರಿಹಾರಕ್ಕೆ ಏನೆಲ್ಲಾ ನೆರವು ನೀಡಬೇಕೊ ಅದೆಲ್ಲವನ್ನೂ ನೀಡಿ ಕ್ರಮ ಜರುಗಿಸಿದೆ. ಇನ್ನು ಮುಂದೆ ಜನರ ಸಹಕಾರ ಅತೀ ಮುಖ್ಯ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ರೋಗಕ್ಕೆ ಲಸಿಕೆ ಲಭ್ಯ ಆಗುವತನಕ ಸಾಮಾಜಿಕ ಮತ್ತು ಭೌತಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಆಗಿಂದಾಗ್ಗೆ ಸಾಬೂನಿನಿಂದ ಕೈತೊಳೆದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು, ಜನದಟ್ಟಣೆ ಕಾರ್ಯಕ್ರಮಗಳನ್ನು ರದ್ದು ಮಾಡಿ, ಹೊರಗೆ ತಿರುಗುವುದು – ಪ್ರವಾಸ ಕೈಬಿಡಬೇಕು. ಹಿರಿಯ ನಾಗರೀಕರು ಮತ್ತು ಮಕ್ಕಳನ್ನು ಇನ್ನೂ ಕೆಲ ತಿಂಗಳು ಮನೆಯಿಂದ ಹೊರಗೆ ಕಳುಹಿಸಬಾರದು. ಇದರೆ ಜತೆಗೆ ಆಗಿಂದಾಗ್ಗೆ ಸರ್ಕಾರ ನೀಡುವ ಸೂಚನೆಗಳನ್ನು ಅನುಸರಿಸಬೇಕು. ಇದು ನಮ್ಮ ಸಂಸ್ಕøತಿಯ ಭಾಗ ಎಂಬಂತೆ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕೊರೋನಾ ಸೋಂಕು ತಗುಲಿರುವ ಶೇಕಡಾ 95 ಕ್ಕೂ ಹೆಚ್ಚು ಮಂದಿಯಲ್ಲಿ ರೋಗದ ಲಕ್ಷಣ ಕಾಣಿಸುತ್ತಿಲ್ಲ. ಕೇವಲ ಶೇಕಡಾ 5 ರಿಂದ 6 ಮಂದಿಗೆ ಮಾತ್ರ ನಾವು ಚಿಕಿತ್ಸೆ ನೀಡುತ್ತಿದ್ದೇವೆ. ಉಳಿದವರು ತಾವಾಗೇ ಗುಣಮುಖರಾಗುತ್ತಿದ್ದಾರೆ. ಅದರಲ್ಲೂ ಶೇಕಡಾ 2 ರಿಂದ 3 ರಷ್ಟು ಮಂದಿಗೆ ಮಾತ್ರ ಪರಿಸ್ಥಿತಿ ಗಂಭೀರ ರೂಪ ಪಡೆಯುತ್ತಿದೆ. ಇದಕ್ಕೆ ಅವರಲ್ಲಿರುವ ಬೇರೆ ಗಂಭೀರ ಕಾಯಿಲೆಗಳು ಕಾರಣವಾಗಿದೆ. ದೇಶದಲ್ಲಿ ಮರಣ ಹೊಂದುತ್ತಿರುವ ಪ್ರಮಾಣ ಕೂಡ ಶೇಕಡಾ 4 ರಷ್ಟಿದೆ ಎಂದು ಸ್ಪಷ್ಟಪಡಿಸಿದರು.

ದೇಶದಲ್ಲಿಯೇ ನಮ್ಮ ರಾಜ್ಯ ಉತ್ತಮ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ವಿಶ್ವದರ್ಜೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ತಜ್ಞರ ಸಲಹೆ ಆಧರಿಸಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸಾ ಪದ್ಧತಿ ಅಳವಡಿಕೊಳ್ಳಲಾಗಿದೆ. ಈ ಕಾರಣಗಳಿಂದಲೇ ಹೆಚ್ಚಿನ ಸಂಖ್ಯೆ ರೊರೋನಾ ಸೋಂಕಿತರು ಗುಣಮುಖರಾಗಿ ಮನೆಗೆ ಹಿಂತಿರುಗುತ್ತಿದ್ದಾರೆ. ಹೀಗಾಗಿ ಯಾರೂ ಕೂಡ ಆತಂಕ, ಭಯಪಡುವ ಅಗತ್ಯವಿಲ್ಲ. ಸರ್ಕಾರ ನೀಡುವ ಸೂಚನೆಗಳನ್ನು ಪಾಲಿಸಿಕೊಂಡು ಸಹಕರಿಸಬೇಕಿದೆ ಎಂದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ, “ರಾಜ್ಯದ ಗಡಿಯಲ್ಲಿ ನಮ್ಮವರೇ ಒಳಗೆ ಬರಲು ಎರಡು ಮೂರು ದಿನಗಳ ಕಾಲ ಪರದಾಡ ನಡೆಸಿ, ಮಹಿಳೆಯರು ಮಕ್ಕಳು ಪರದಾಟ ನಡೆಸಿದ್ದನ್ನು ಗಮನಿಸಿ ಮತ್ತು ಸ್ಥಳೀಯ ಶಾಸಕರು ಮತ್ತು ಚುನಾಯಿತ ಪ್ರತಿನಿಧಿಗಳು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಅವರನ್ನು ಕರೆದುಕೊಳ್ಳಲಾಗಿದೆ. ಆದರೆ ಎಲ್ಲರನ್ನೂ ತಪಾಸಣೆ ನಡೆಸಿ, ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಸದ್ಯ ಹೆಚ್ಚಿನ ಸೋಂಕಿತರು ಇರುವ ತಮಿಳುನಾಡು ಮತ್ತು ಮಹಾರಾಷ್ಟ್ರಗಳಿಂದ ಬರುವವರಿಗೆ ಪ್ರವೇಶ ನಿರ್ಬಂದಿಸಲಾಗಿದೆ ಎಂದರು.’

ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಸರ್ಕಾರಿ ವೆಚ್ಚದಲ್ಲೇ ಸುರಕ್ಷಿತವಾಗಿ ಕಳುಹಿಸಿಕೊಡುವ ಜವಾಬ್ದಾರಿ ನಮ್ಮದು: ಡಾ.ಕೆ.ಸುಧಾಕರ್

ಬೆಂಗಳೂರು ಮೇ, 23: ತಮ್ಮ ತಮ್ಮ ರಾಜ್ಯಗಳಿಗೆ ತೆರಳಲು ಒಡಿಶಾ ಮತ್ತು ಈಶಾನ್ಯ ರಾಜ್ಯಗಳ ವಲಸೆ ಕಾರ್ಮಿಕರು ಭಾರಿ ಸಂಖ್ಯೆಯಲ್ಲಿ ಆಗಮಿಸಿ ಗೊಂದಲ ಉಂಟಾಗಿದ್ದನ್ನು ಗಮನಿಸಿ ವೈದ್ಯಕೀಯ ಶಿಕ್ಷಣ ಸಚಿವರೇ ಖುದ್ದು ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ ಘಟನೆ ಶನಿವಾರ ಅರಮನೆ ಮೈದಾನದ ಬಳಿ ನಡೆಯಿತು.

ಇಲ್ಲಿ ನೆರೆದಿದ್ದ ಜನರುದ್ದೇಶಿಸಿ ಮಾತನಾಡಿದ ಸಚಿವರು, ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಸರ್ಕಾರದ ವೆಚ್ಚದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅದಕ್ಕೆ ಬೇಕಾದ ಎಲ್ಲಾ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ನೀವು ನಿಮ್ಮ ಊರಿಗೆ ಹೋಗಲು ಹೆಚ್ಚುವರಿ ಬೋಗಿಗಳನ್ನು ಒದಗಿಸಲು ರೈಲ್ವೆ ಸಚಿವರಿಗೂ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ತಪ್ಪು ಮಾಹಿತಿಯಿಂದಾಗಿ ಮಣಿಪುರ, ಒಡಿಶಾ ರಾಜ್ಯಗಳ ಸಾವಿರಾರು ಮಂದಿ ಜಮಾಯಿಸಿದ್ದ ಹಿನ್ನೆಲೆಯಲ್ಲಿ ಈ ಗೊಂದಲ ಉಂಟಾಗಿತ್ತು. ಸುಮಾರು ಒಂದೂವರೆ ಸಾವಿರ ಮಂದಿಗೆ ಆಯಾ ರಾಜ್ಯಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿಕೊಂಡು ಸೇವಾಸಿಂಧು ಆ್ಯಪ್ ಮೂಲಕ ಮೊಬೈಲ್ ಗಳಿಗೆ ಸಂದೇಶ ರವಾನಿಸಲಾಗಿತ್ತು. ಆ ಸಂದೇಶ ಅವರಲ್ಲೇ ಫಾರ್ವರ್ಡ್‌ ಆಗಿ ಇಂದು ಪ್ರಯಾಣಕ್ಕೆ ಆಯ್ಕೆ ಆಗದಿದ್ದವರೂ ನೂರಾರು ಸಂಖ್ಯೆ ಯಲ್ಲಿ ಆಗಮಿಸಿ ಭಾರಿ ದಟ್ಟಣೆ ಉಂಟಾಗಿತ್ತು.

ಚಿಕ್ಕಬಳ್ಳಾಪುರ ಪ್ರವಾಸಕ್ಕೆ ಹೊರಟ್ಟಿದ್ದ ಸಚಿವರು ಪ್ಯಾಲೇಸ್ ಗ್ರೌಂಡಿನಲ್ಲಿದ್ದ ಭಾರಿ ದಟ್ಟಣೆ ಗಮನಿಸಿ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳಿಂದ ಗೊಂದಲಕ್ಕೆ ಕಾರಣಗಳನ್ನು ಪಡೆದರು. ತಕ್ಷಣವೇ ಮೊಬೈಲ್ ಮೂಲಕ ಮುಖ್ಯ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಗೊಂದಲ ಬಗೆಹರಿಸಲು ಕ್ರಮಕೈಗೊಳ್ಳುವಂತೆ ಆದೇಶ ನೀಡಿದರು. ಈ ಸಂದರ್ಭದಲ್ಲಿ ಮೂರ್ಛೆ ರೋಗದಿಂದ ಬಳಲುತ್ತಿದ್ದ ಎರ್ಷಾದ್ ಎಂಬಾತ ಕುಸಿದು ಬಿದ್ದಾಗ ಆತನ ಬಳಿ ಧಾವಿಸಿದ, ಸ್ವತಃ ವೈದ್ಯರು ಆಗಿರುವ ಸಚಿವ ಸಧಾಕರ್ ಅವರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಸಂಕಷ್ಟದ ಈ ಸಮಯದಲ್ಲಿ ಸಾರ್ವಜನಿಕರ ಹಿತ ಕಾಪಾಡುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ವದಂತಿಗಳನ್ನು ನಂಬಿ ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಸರ್ಕಾರದೊಂದಿಗೆ ಸಹಕರಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಲಸಿಗರನ್ನು ಆಯಾ ರಾಜ್ಯಗಳಿಗೆ ಸರ್ಕಾರಿ ವೆಚ್ಚದಲ್ಲೇ ಕಳುಹಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.

ಭಾನುವಾರದ ಲಾಕ್ ಡೌನ್ ನಲ್ಲಿ ಏನಿರುತ್ತೆ..? ಏನಿರಲ್ಲ..?

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಮೇ 31 ರವರೆಗೆ ಪ್ರತಿ ಭಾನುವಾರ ರಾಜ್ಯಾದ್ಯಂತ ಕಂಪ್ಲೀಟ್ ಲಾಕ್ ಡೌನ್ ಆದೇಶ ನೀಡಲಾಗಿದೆ‌. ಇಂದು ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆ ವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು, ಸಂಪೂರ್ಣ ಲಾಕ್‍ಡೌನ್ ಇರಲಿದೆ. ಹಾಗಾದ್ರೆ ಭಾನುವಾರ ಏನಿರುತ್ತೆ, ಏನಿರಲ್ಲ ಗೊತ್ತಾಗಬೇಕಾದ್ರೆ ಈ ಸ್ಟೋರಿ ಓದಿ..

ಭಾನುವಾರ ಏನಿರುತ್ತೆ:
ಹಣ್ಣು, ತರಕಾರಿ, ದಿನಸಿ, ಮಾಂಸದ ಅಂಗಡಿಗಳಿಗೆ ತೆರೆಯಲು ಅವಕಾಶ. ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ಸ್, ಫಾರ್ಮಸಿ ಗಳಿಗೆ ಅವಕಾಶ. ಡಾಕ್ಟರ್ಸ್, ನರ್ಸ್, ಆಂಬುಲೆನ್ಸ್, ಮಾಧ್ಯಮಗಳು ಓಡಾಟಕ್ಕೆ ಅವಕಾಶ. ಡಯಾಲಿಸಿಸ್, ಅನಾರೋಗ್ಯ ಸಮಸ್ಯೆ ಇದ್ದವರು ಆಸ್ಪತ್ರೆಗೆ ತೆರಳಲು ಅನುಮತಿ. ಗರ್ಭಿಣಿ ಸ್ತ್ರೀಯರು ಆಸ್ಪತ್ರೆಗೆ ತೆರಳಲು ಅನುಮತಿ. ಮದುವೆ ಸಮಾರಂಭಗಳಿಗೆ ಷರತ್ತಿನ ಅನುಮತಿ

ಭಾನುವಾರ ಏನಿರಲ್ಲ :
ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣ ನಿಷೇಧಖಾಸಗಿ / ಸರ್ಕಾರಿ ಬಸ್ ಸಂಚಾರ ಇರಲ್ಲ. ಅಗತ್ಯ ವಸ್ತುಗಳನ್ನ ಹೊರತು ಪಡಿಸಿ, ಉಳಿದ ಅಂಗಡಿ ಮುಂಗಟ್ಟುಗಳು ಬಂದ್ ನಗರದ ಪ್ರಮುಖ ರಸ್ತೆಗಳು ಬಂದ್ ಬ್ಯೂಟಿ ಪಾರ್ಲರ್, ಸಲೂನ್, ಸ್ಪಾ, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ ಮುಂಗಟ್ಟುಗಳು ತೆರೆಯುವಂತೆ ಇಲ್ಲ. ಗಾರ್ಮೆಂಟ್ಸ್ / ಖಾಸಗಿ ಕಂಪನಿಗಳು/ ಫ್ಯಾಕ್ಟರಿ ಸೇರಿದಂತೆ ಎಲ್ಲಾ ಕಾರ್ಖಾನೆಗಳು ಲಾಕ್, ಪಾರ್ಕ್ ಗಳಿಗೆ ಒಳ ಪ್ರವೇಶ ಇಲ್ಲ. ಚಿನ್ನದ ಅಂಗಡಿಗಳು ಕೂಡ ಬಂದ್ ಆಟೋ, ಟ್ಯಾಕ್ಸಿ ಕ್ಯಾಬ್ ಗಳು ರಸ್ತೆಗೆ ಇಳಿಯುವಂತಿಲ್ಲ. ಖಾಸಗಿ ವಾಹನ ಬಳಸಿ ಓಡಾಡುವಂತೆ ಇಲ್ಲ. ಬೇರೆ ಜಿಲ್ಲೆಗೆ ಹೋಗಲು ಅವಕಾಶವಿಲ್ಲ. ಬಾರ್/ MRP ಔಟ್ ಲೆಟ್ ತೆರೆಯುವಂತೆ ಇಲ್ಲ.

ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ: ಹವಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 25 ರವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಮೇ. 25 ರವರೆಗೆ ಮಳೆ ಮುಂದುವರೆಯಲಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ರಾಜ್ಯಕ್ಕೆ ಮುಂಗಾರು ಪ್ರವೇಶಿಸಲು ಇನ್ನೂ 19 ದಿನಗಳಿವೆ. ಒಂದು ತಿಂಗಳಿಂದ ಹಲವೆಡೆ ಪೂರ್ವ ಮುಂಗಾರು ಮಳೆ ಸುರಿಯುತ್ತಿದ್ದು, ರೈತರಿಗೆ ವರದಾನವಾಗುತ್ತಿದೆ.

ಚಿರತೆ ದಾಳಿಗೆ ಬಲಿಯಾದ ಮಾಗಡಿ ವೃದ್ಧೆ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ಪತ್ರ ವಿತರಿಸಿದ ಡಾ. ಅಶ್ವತ್ಥನಾರಾಯಣ

 

ರಾಮನಗರ: ಮಾಗಡಿ ತಾಲೂಕಿನಲ್ಲಿ ಚಿರತೆ ದಾಳಿಗೆ ಬಲಿಯಾದ ಗಂಗಮ್ಮ (68) ಅವರ ಕುಟುಂಬದವರಿಗೆ ಸಾಂತ್ವನ ಹೇಳಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, 7.5 ಲಕ್ಷ ರೂ. ಪರಿಹಾರದ ಆದೇಶ ಪತ್ರವನ್ನು ಅವರಿಗೆ ಹಸ್ತಾಂತರಿಸಿದರು.

ಮಾಗಡಿಯ ಕೊತ್ತಗೊಂಡನಹಳ್ಳಿಯ ಗಂಗಮ್ಮ ಅವರ ಮನೆಗೆ ಶುಕ್ರವಾರ ಭೇಟಿ ನೀಡಿದ ಡಾ. ಅಶ್ವತ್ಥನಾರಾಯಣ, ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಸಮಾಧಾನ ಹೇಳಿದರು. ಪರಿಹಾರ ಹಣ ಬಿಡುಗಡೆ ಸಂಬಂಧ ಅರಣ್ಯ ಇಲಾಖೆಯ ಜ್ಞಾಪನಾ ಪತ್ರವನ್ನು ವಿತರಿಸಿ, ಎರಡು ಮೂರು ದಿನದೊಳಗೆ ಹಣ ಆನ್‌ಲೈನ್‌ ಮೂಲಕ ಖಾತೆಗೆ ಜಮೆ ಆಗಲಿದೆ ಎಂದು ಕುಟುಂಬದವರಿಗೆ ಭರವಸೆ ನೀಡಿದರು.

ಗಂಗಮ್ಮ ಅವರನ್ನು ಚಿರತೆ ಕೊಂದುಹಾಕಿದ ಸ್ಥಳಕ್ಕೆ ಭೇಟಿ ನೀಡಿದ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಜತೆಯಲ್ಲಿದ್ದ ಪರಿಸರ ತಜ್ಞ ಸಂಜಯ್‌ ಗುಬ್ಬಿ ಚಿರತೆಯ ಚಲನ ವಲನದ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿದರು.

“ಗಂಗಮ್ಮ ಮೇಲೆ ದಾಳಿ ಮಾಡಿದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಎಲ್ಲಾ ಪ್ರಯತ್ನ ಮಾಡುತ್ತಿದೆ. ಈಗಾಗಲೇ 15 ಬೋನುಗಳನ್ನು ಇಟ್ಟು ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸನ್ನದ್ಧ ಸ್ಥಿತಿಯಲ್ಲಿ ಇದ್ದಾರೆ. ಚಿರತೆಯ ಚಲನವಲನ ಗಮನಿಸಲು ಡ್ರೋಣ್ ಬಳಕೆ ಮಾಡಲಾಗುವುದು. ಜನತೆ ಆತಂಕ ಪಡುವ ಅಗತ್ಯವಿಲ್ಲ,” ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಭಾನುವಾರದ ಕರ್ಫ್ಯೂನಿಂದ ಮದುವೆಗಳಿಗೆ ವಿನಾಯಿತಿ

 

ಬೆಂಗಳೂರು: ಕೊರೋನಾ ಲಾಕ್ ಡೌನ್ ಸಡಿಲ ಬಳಿಕ ರಾಜ್ಯ ಸರ್ಕಾರ ಭಾನುವಾರ ಕರ್ಫ್ಯೂ ಘೋಷಿಸಿದೆ. ಆದ್ರೆ ಕರ್ಪ್ಯೂನಿಂದ ಮದುವೆ ಸಮಾರಂಭಗಳಿಗೆ ದೊಡ್ಡ ತೊಡಕಾಗಿತ್ತು. ಇದನ್ನರಿತ ಸರ್ಕಾರ ಇದೀಗ ಭಾನುವಾರದ ಪೂರ್ಣ ಲಾಕ್ ಡೌನ್ ನಲ್ಲಿ ಮದುವೆಗಳಿಗೆ ವಿನಾಯಿತಿ ನೀಡಿದೆ.

ಮದುವೆ ಸಮಾರಂಭಗಳನ್ನ ವಿಶೇಷ ಪ್ರಕರಣವೆಂದು ಪರಿಗಣಿಸಿ ವಿನಾಯಿತಿ ಘೋಷಿಸಿದ ಸರ್ಕಾರ. ಮದುವೆಗಳು ಪೂರ್ವ ನಿರ್ಧರಿತ ಕಾರ್ಯಕ್ರಮಗಳು. ಈ ಹಿಂದೆಯೇ ಮದುವೆ ಕಾರ್ಯಕ್ರಮಗಳಿಗೆ ದಿನಾಂಕ ನಿಗದಿಯಾಗಿರುತ್ತೆ. ಅದ್ರಿಂದ ಭಾನುವಾರ ಮದುವೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದೆ.

ಮದುವೆಯಲ್ಲಿ ಗರಿಷ್ಠ 50 ಜನ ಮಾತ್ರ ಭಾಗವಹಿಸುವ ನಿಯಮ ಕಡ್ಡಾಯ ಪಾಲನೆಗೆ ಸೂಚನೆ ನೀಡಲಾಗಿದೆ. ಸಾಮಾಜಿಕ ಅಂತರ ಪಾಲನೆಯೊಂದಿಗೆ ಸರಳ ವಿವಾಹಕ್ಕೆ ಸರ್ಕಾರದ ಆದೇಶಿಸಿದೆ. ಈ‌ ಹಿಂದಿನ ಆದೇಶ ಮಾರ್ಪಡಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ ಕೆ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.