ರೈಲ್ವೆ ಟಿಕೆಟ್ ರಿಸೆರ್ವೇಷನ್ ಕೌಂಟರ್ ಓಪನ್

ಬೆಂಗಳೂರು: ಕೋವಿಡ್ ಲಾಕ್ ಡೌನ್ ನಿಂದಾಗಿ ರದ್ದಾಗಿದ್ದ ರೈಲು ಸಂಚಾರ ಆರಂಭಕ್ಕೆ ಸಿದ್ದತೆಗಳು ನಡೆಯುತ್ತಿದ್ದು, ಕಾಯ್ದಿರಿಸಿದ ಟಿಕೆಟ್‌ಗಳನ್ನು ಹಂತಹಂತವಾಗಿ ಕಾಯ್ದಿರಿಸಲು ಕೌಂಟರ್‌ಗಳನ್ನು ತೆರೆಯಲು ರೈಲ್ವೆ ನಿರ್ಧರಿಸಿದೆ.

ಪ್ರಾರಂಭಿಕವಾಗಿ, ಪ್ರಮುಖ ನಿಲ್ದಾಣಗಳಲ್ಲಿನ ಕೌಂಟರ್‌ಗಳನ್ನು ಮೇ 22 ರಿಂದ ತೆರೆಯಲಾಗುತ್ತದೆ .ನೈರುತ್ಯ ರೇಲ್ವೆ ಯಲ್ಲಿ, ಕಾಯ್ದಿರಿಸಿದ ಟಿಕೆಟ್‌ಗಳಿಗಾಗಿ ಪಿಆರ್‌ಎಸ್ ಕೌಂಟರ್‌ಗಳು ನಾಳೆಯಿಂದ ಮುಂದಿನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಲಿವೆ .

* ಹುಬ್ಬಳ್ಳಿ ವಿಭಾಗ *

ಹುಬ್ಬಳ್ಳಿ,
ಬೆಳಗಾವಿ,
ಬಳ್ಳಾರಿ,
ವಿಜಯಪುರ,
ಧಾರವಾಡ,
ಹೊಸಪೇಟೆ
ವಾಸ್ಕೊ-ಡಾ-ಗಾಮಾ

* ಬೆಂಗಳೂರು ವಿಭಾಗ * .
ಕೆ.ಎಸ್.ಆರ್ ಬೆಂಗಳೂರು,
ಯಶವಂತಪುರ,
ಬೆಂಗಳೂರು ಕ್ಯಾಂಟ್,
ಬಂಗಾರ್‌ಪೇಟೆ,
ಕೆಂಗೇರಿ,
ಕೃಷ್ಣರಾಜಪುರಂ,
ಸತ್ಯಶಾಂತಿಪ್ರಶಾಂತಿ ನಿಲಯಂ

* ಮೈಸೂರು ವಿಭಾಗ *
ಮೈಸೂರು,
ದಾವಣಗೆರೆ
ಶಿವಮೊಗ್ಗ ಟೌನ್ …

ಸಾಮಾಜಿಕ ಅಂತರದ ಕ್ರಮಗಳನ್ನು ಜಾರಿಗೆ ತರಲಾಗುವುದು. ಬುಕಿಂಗ್ ಕಚೇರಿಗಳ ನೈರ್ಮಲ್ಯ ಮತ್ತು ಶುಚಿತ್ವವನ್ನು ಖಚಿತಪಡಿಸಿಕೊಳ್ಳಲಾಗುವುದು‌ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಸೋನಿಯಾ ಗಾಂಧಿ ಅವರ ವಿರುದ್ಧದ ಎಫ್ಐಆರ್ ಹಿಂಪಡೆಯದಿದ್ದರೆ ಉಗ್ರ ಹೋರಾಟ : ಡಿಕೆಶಿ

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಶ್ನಿಸಿರುವುದರ ವಿರುದ್ಧದ ಪ್ರಕರಣವನ್ನು 24 ತಾಸಿನಲ್ಲಿ ಹಿಂಪಡೆದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಒಂದು ವೇಳೆ ವಾಪಸು ಪಡೆಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ತಂಡ ಇಂದು ಸಂಜೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ತಮ್ಮ ಮನವಿಯನ್ನು ಸಲ್ಲಿಸಿತು. ಈ ವೇಳೆ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್ ಉಗ್ರಪ್ಪ ಉಪಸ್ಥಿತರಿದ್ದರು.

ಸಿಎಂ ಭೇಟಿ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ನಮ್ಮ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರು ವಿರೋಧ ಪಕ್ಷದ ನಾಯಕಿಯಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಅದು ಅವರ ಹಕ್ಕು ಹಾಗೂ ಕರ್ತವ್ಯ.

ಆದರೆ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷಗಳ ಧ್ವನಿಯನ್ನು ದಮನ ಮಾಡುವ ಪ್ರಯತ್ನ ಮಾಡುತ್ತಿರುವುದು ಆಘಾತಕಾರಿಯಾಗಿದೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ವಕೀಲರಾದ ಪ್ರವೀಣ್ ಕುಮಾರ್ ಎಂಬುವವರು ತಮ್ಮ ಸಂಬಂಧಿ ಪೊಲೀಸ್ ಅಧಿಕಾರಿಗೆ ದೂರು ನೀಡಿದ್ದು, ದೂರು ದಾಖಲಿಸಿ ಎಫ್ಐಆರ್ ದಾಖಲಿಸಲಾಗಿದೆ.

ಇದು ಸೂಕ್ಷ್ಮ ವಿಚಾರವಾಗಿದ್ದು, ದೇಶದಲ್ಲಿ ದೊಡ್ಡ ಸಂಚಲನ ಉಂಟು ಮಾಡುವ ವಿಚಾರ. ಅಷ್ಟೇ ಅಲ್ಲ ಇದು ದ್ವೇಷ ಮನೋಭಾವ ಹಾಗೂ ಅಧಿಕಾರ ದುರುಪಯೋಗದ ವಿಚಾರವಾಗಿದೆ. ಇಂತಹ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಯಾವ ಮಟ್ಟಿಗೆ ಕೆಲಸ ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸಿದೆ.

ಈ ವಿಚಾರವಾಗಿ ನಾವು ಹೋರಾಟ ಮಾಡುವ ಮುನ್ನ ಚರ್ಚಿಸಬೇಕು ಅಂತಾ ಬೆಳಗ್ಗೆ ಗೃಹಸಚಿವ ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿ, ಈಗ ಮುಖ್ಯಮಂತ್ರಿಗಳ ಜತೆ ಮಾತನಾಡಲು ಆಗಮಿಸಿದೆವು.

ಈ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು, ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ನಾವು ಹೋರಾಟ ಮಾಡಲು ಅವಕಾಶ ನೀಡಬಾರದು, ಅಂತಾ ನಾವು ಆಗ್ರಹಿಸಿದೇವು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು 24 ಗಂಟೆಯಲ್ಲಿ ಎಫ್ಐಆರ್ ಹಿಂಪಡೆದು ಮಾಡಿ ಬಿ ರಿಪೋರ್ಟ್ ಸಿದ್ಧಪಡಿಸಲಾಗುವುದು, ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಂದೊಮ್ಮೆ ವಾಪಸು ಪಡೆಯದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ.’

ಮಂಡ್ಯಕ್ಕೆ ಸಚಿವ ನಾರಾಯಣಗೌಡ ದಿಢೀರ್ ಭೇಟಿ:ಕ್ವಾರಂಟೈನ್ ವ್ಯವಸ್ಥೆ ಪರಿಶೀಲನೆ

ಮಂಡ್ಯ – 21:ಮಂಡ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣ ಗೌಡ ಅವರು ಇಂದು ಸಂಜೆ ದಿಢೀರ್ ಭೇಟಿ ನೀಡಿ, ಕೊರೊನಾ ಸೋಂಕಿತರಿಗೆ ಕ್ವಾರಂಟೈನ್ ಮಾಡಿರುವ ವ್ಯವಸ್ಥೆಯನ್ನ ಪರಿಶೀಲಿಸಿದರು.

ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಜನರನ್ನು ತಪಾಸಣೆ ನಡೆಸಿ ಕ್ವಾರಂಟೈನ್ ಮಾಡುವ ಸಂಬಂಧ
ಅಧಿಕಾರಿಗಳು ತಮ್ಮ ಆದೇಶವನ್ನ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಖುದ್ದು ಸಚಿವರೆ ಭೇಟಿ ನೀಡಿ ಪರಿಶೀಲಿಸಿದರು. ಕೆ ಆರ್ ಪೇಟೆಗೆ ಭೇಟಿ ನೀಡಿ, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದರು. ಇನ್ನೂ ಉತ್ತಮ ರೀತಿಯಲ್ಲಿ ಕ್ವಾರಂಟೈನ್ ನಲ್ಲಿ ಇರುವವರನ್ನ ನೋಡಿಕೊಳ್ಳಬೇಕು. ಚಿಕ್ಕ ಮಕ್ಕಳಿದ್ದಾರೆ ಅವರಿಗೆ ಹಾಲು, ಹಣ್ಣಿನ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು. ಕೆಲವೆಡೆ ಸರಿಯಾದ ವ್ಯವಸ್ಥೆ ಇಲ್ಲ ಎಂಬ ಆರೋಪ ಬಂದಿದೆ. ಅಂತಹ ಆರೋಪ ಮತ್ತೆ ಬರಕೂಡದು. ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಬೇಕು. ದೂರು ಬಂದರೆ ಸುಮ್ಮನಿರಲ್ಲ ಎಂದು ಸಚಿವ ನಾರಾಯಣ ಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಕೊವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ಕ್ರಮವಹಿಸಲು ಮೊನ್ನೆ ವಿಡಿಯೊ ಕಾನ್ಫರೆನ್ಸ್ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ನಿನ್ನೆ ಆದಿಚುಂಚನಗಿರಿ ಶ್ರೀಗಳ ಸಾನ್ನಿಧ್ಯದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿದ್ದರು. ಇಂದು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಸ್ತೂರಿ ರಂಗನ್ ವರದಿ ಜಾರಿ: ಕೇಂದ್ರ ಸಚಿವರ ವಿಡಿಯೋ ಕಾನ್ಫರೆನ್ಸ್

ಬೆಂಗಳೂರು, ಮೇ 21-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಸ್ತೂರಿರಂಗನ್ ವರದಿ ಜಾರಿ ಕುರಿತಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ, ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪರಿಸರ ಪ್ರದೇಶವೆಂದು ಘೋಷಿಸುವ ಕುರಿತು ಚರ್ಚಿಸಿದರು.

ಈ ಕುರಿತು ರಾಜ್ಯದ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳು, ತಾಲ್ಲೂಕು ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿಗಳು, ವಿವಿಧ ಹಂತಗಳ ಜನಪ್ರತಿನಿಧಿಗಳು ಹಾಗೂ ಸಚಿವ ಸಂಪುಟವು ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯನ್ನು ಈಗಿರುವ ಸ್ವರೂಪದಲ್ಲಿ ತಿರಸ್ಕರಿಸಿದೆ. ಅದರಲ್ಲೂ ಸೂಕ್ಷ್ಮ ಪರಿಸರ ಪ್ರದೇಶ ಎಂದು ಘೋಷಿಸಿದ್ದನ್ನು ತಿರಸ್ಕರಿಸಿದ್ದಾರೆ.

ಪ್ರತಿ ರಾಜ್ಯದ ಸಮಸ್ಯೆಗಳು, ಸವಾಲುಗಳು ಭಿನ್ನವಾಗಿರುವುದರಿಂದ ಭಾರತ ಸರ್ಕಾರವು ಎಲ್ಲ ರಾಜ್ಯಗಳಿಗೆ ಏಕ ರೂಪದ ಅಧಿಸೂಚನೆ ಹೊರಡಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಇದಕ್ಕೆ ಸಹಮತ ವ್ಯಕ್ತ ಪಡಿಸಿ, ಪ್ರತಿ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರತ್ಯೇಕವಾಗಿ ಚರ್ಚಿಸುವುದಾಗಿ ತಿಳಿಸಿದರು.

ರಾಜ್ಯದ ಅರಣ್ಯ ಸಚಿವ ಆನಂದ್ ಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅರಣ್ಯ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಮಹಾರಾಷ್ಟ್ರ, ಕೇರಳ, ಗೋವಾ, ತಮಿಳುನಾಡು ಮತ್ತು ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳು/ ಸಚಿವರು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಉಪನ್ಯಾಸಕರ ವರ್ಗಾವಣೆಗೆ ಹೊಸ ನಿಯಮ: ಡಾ. ಅಶ್ವತ್ಥನಾರಾಯಣ

 

ಬೆಂಗಳೂರು-21: ಪದವಿ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆಗೆ ಈಗಿರುವ ಕಾನೂನು ರದ್ದುಗೊಳಿಸಿ, ಹೊಸ ನಿಯಮಗಳನ್ನು ರೂಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಉನ್ನತ ಶಿಕ್ಷಣದ ಪಠ್ಯಕ್ರಮ, ಪರೀಕ್ಷೆ, ಆನ್‌ಲೈನ್‌ ಶಿಕ್ಷಣ, ಉಪನ್ಯಾಸಕರ ವರ್ಗಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ಗುರುವಾರ ಸಭೆ ನಡೆಸಿದ ಬಳಿಕ ಡಾ.ಅಶ್ವತ್ಥನಾರಾಯಣ ಅವರು ಸುದ್ದಿಗಾರರ ಜತೆ ಮಾತನಾಡಿದರು.

“ಕಳೆದ 3-4 ವರ್ಷಗಳಿಂದ ಉಪನ್ಯಾಸಕರ ವರ್ಗಾವಣೆ ಆಗಿಲ್ಲ. ಹಾಗಾಗಿ ಈ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ಉಪನ್ಯಾಸಕರ ವರ್ಗಾವಣೆಯ ಈಗಿನ ಕಾನೂನು ರದ್ದುಪಡಿಸಿ ಹೊಸ ನಿಯಮಗಳನ್ನು ಅನುಷ್ಠಾನಕ್ಕೆ ತರಲಾಗುವುದು. ವರ್ಗಾವಣೆ ಕುರಿತು ಕರಡು ನಿಯಮ ರೂಪಿಸಿ ಉಪನ್ಯಾಸಕರ ಸಂಘದವರಿಗೆ ಕಳುಹಿಸಲಾಗುವುದು. ಜತೆಗೆ ಸಂಬಂಧ ಪಟ್ಟ ಎಲ್ಲರಿಗೂ ಕಳುಹಿಸಿ, ಅವರಿಂದ ಸಲಹೆಗಳನ್ನು ಪಡೆಯಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಕಾನೂನು ತಿದ್ದುಪಡಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.

“ಹೊಸ ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ನೇಮಕ ತಕ್ಷಣ ಆಗಬೇಕೆಂದು ವಿಧಾನಪರಿಷತ್‌ ಸದಸ್ಯರು ಒತ್ತಾಯಿಸಿದ್ದಾರೆ. ಈ ಸಂಬಂಧ ಅಧಿಸೂಚನೆ ಹೊರಡಿಸಿ, ನೇಮಕಕ್ಕೆ ಸೂಕ್ತ ಕ್ರಮ ವಹಿಸಲಾಗುವುದು. ಶೈಕ್ಷಣಿಕ ವರ್ಷ ಪ್ರಾರಂಭವಾಗುವ ವೇಳೆಗೆ ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ನೇಮಕ ಆಗುತ್ತದೆ,”ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜೂನ್‌ ಮೊದಲ ವಾರ ಪರೀಕ್ಷೆ ಮಾಹಿತಿ:

“ಉನ್ನತ ಶಿಕ್ಷಣದ ಪರೀಕ್ಷೆ ಕುರಿತು ಜೂನ್‌ ಮೊದಲ ವಾರ ವಿವರ ಹಂಚಿಕೊಳ್ಳಲಾಗುವುದು. ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಕೊವಿಡ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಆತಂಕ ಪರಿಹರಿಸುವ ನಿಟ್ಟಿನಲ್ಲಿ ಸದಸ್ಯರು ನೀಡಿರುವ ಸಲಹೆಗಳನ್ನು ಪರಿಗಣಿಸಿ ಸಮಸ್ಯೆಗಳಿದ್ದರೆ ಅವುಗಳನ್ನು ಬಗೆಹರಿಸಲಾಗುವುದು,” ಎಂದು ತಿಳಿಸಿದರು.

“ಪ್ರಥಮ, ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ತರಗತಿಗಳು, ಪಠ್ಯಕ್ರಮ ಹಾಗೂ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳಿರುವ ಸರಳ ಪರೀಕ್ಷೆ ನಡೆಸುವ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಶೈಕ್ಷಣಿಕ ಸಾಲಿನ ರಜೆ ಕಡಿತಗೊಳಿಸಿ ಪಠ್ಯಕ್ರಮ ಪೂರ್ಣಗಳಿಸಬಹುದೆಂಬ ಸಲಹೆಯನ್ನು ವಿಧಾನ ಪರಿಷತ್ತಿನ ಸದಸ್ಯರು ನೀಡಿದ್ದಾರೆ,”ಎಂದು ಹೇಳಿದರು.

ಆನ್‌ಲೈನ್‌ ತರಗತಿ ಬಗ್ಗೆ ಮೆಚ್ಚುಗೆ:

“ಕೊವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಸರ್ಕಾರ ಆಯೋಜಿಸಿದ್ದ ಆನ್‌ಲೈನ್‌ ತರಗತಿ, ಯೂಟ್ಯೂಬ್‌ ಪಾಠ, ವಾಟ್ಸ್‌ಆ್ಯಪ್‌ ಮೂಲಕ ಪಠ್ಯ ಸಾರಂಶ, ಸಿಇಟಿ ಹಾಗೂ ನೀಟ್‌ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಗೆಟ್ ಸೆಟ್ ಗೊ ತರಬೇತಿ ಬಗ್ಗೆ ಮೇಲ್ಮನೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ತಮ್ಮ ಬೆಂಬಲ ಇರುವುದಾಗಿ ಭರವಸೆ ನೀಡಿದ್ದಾರೆ,” ಎಂದು ಅವರು ತಿಳಿಸಿದರು.

ಪಠ್ಯಕ್ರಮ ಪರಿಷ್ಕರಣೆ:

“ಹೊಸ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಅದರ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಟಾಸ್ಕ್‌ ಫೋರ್ಸ್‌ ರಚನೆ ಮಾಡಲಾಗಿದೆ . ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಡಿಪ್ಲೊಮಾ ಪಠ್ಯಕ್ರಮದಲ್ಲಿ ಬದಲಾವಣೆ ತರುವ ಮೂಲಕ ಅದನ್ನು ಉದ್ಯೋಗ ಆಧರಿತ ಕೋರ್ಸ್‌ ಆಗಿ ಪರಿವರ್ತಿಸಲಾಗುವುದು. ಡಿಪ್ಲೊಮಾ ಕೋರ್ಸ್‌ ಅನ್ನು ಮತ್ತಷ್ಟು ಪರಿಣಾಮಕಾರಿ ರೂಪಿಸಲು ನಾಸ್ಕಂ ಜತೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಜತೆಗೆ, ಪದವಿ ತರಗತಿಗಳ ಪಠ್ಯಕ್ರಮ ಪರಿಷ್ಕರಣೆ ಮಾಡಲಾಗುವುದು,”ಎಂದು ವಿವರಿಸಿದರು.

ಸಂಬಳ ವಿಳಂಬವಾಗದಂತೆ ಕ್ರಮ:

“ಅತಿಥಿ ಉಪನ್ಯಾಸಕರ ಸಂಬಳ ತಡವಾಗುತ್ತಿರುವ ವಿಚಾರದ ಬಗ್ಗೆ ಈಗಾಗಲೇ ಗಮನಹರಿಸಲಾಗಿದೆ. ಇದು ಬಹಳ ಹಳೆಯ ಸಮಸ್ಯೆಯಾಗಿದ್ದು, ಪರಿಹರಿಸಲು ಯೋಜನಾಬದ್ಧವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಅತಿಥಿ ಉಪನ್ಯಾಸಕರ ವೇತನಕ್ಕೆ ವ್ಯವಸ್ಥಿತವಾಗಿ ಬಜೆಟ್ ರೂಪಿಸುವ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು. ಜುಲೈ ತಿಂಗಳಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು,”ಎಂದರು.

ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಪ್ರತಿಯೊಬ್ಬ ನಾಗರಿಕನ ಸುರಕ್ಷಾ ಕವಚವಿದ್ದಂತೆ; ಡಾ.ಕೆ.ಸುಧಾಕರ್

 

ಬೆಂಗಳೂರು – ಮೇ 21: ನೊವೆಲ್ ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ’ಆರೋಗ್ಯ ಸೇತು’ ಆ್ಯಪ್ ಸಹಕಾರಿಯಾಗಿದೆ, ಇನ್ನೂ ಹೆಚ್ಚು ವ್ಯಾಪಕವಾಗಿ ಇದನ್ನು ಜನರು ಬಳಸುವಂತಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಈ ಕುರಿತು ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು – ಆರೋಗ್ಯ ಸೇತು ಆ್ಯಪ್ ಪ್ರತಿಯೊಬ್ಬ ನಾಗರಿಕನ ಸುರಕ್ಷಾ ಕವಚವಾಗಿದೆ, ಪ್ರತಿಯೊಬ್ಬ ಸರ್ಕಾರಿ ಸಿಬ್ಬಂದಿಗಳೂ ಇದನ್ನು ಡೌನ್ ಲೋಡ್ ಮಾಡಿಕೊಳ್ಳುವದು ಕಡ್ಡಾಯವಾಗಿದ್ದು, ಇದನ್ನು ಬಳಸದೇ ಕಚೇರಿಗೆ ಬರುವ ಹಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಆರೋಗ್ಯ ಸೇತು ಒಂದು ಪ್ರಬಲ ಅಸ್ತ್ರವಾಗಿ ಬಳಕೆಯಾಗುತ್ತಿದ್ದು, 10 ಕೋಟಿಗೂ ಅಧಿಕ ಜನರು ಇದನ್ನು ಬಳಸುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಬಳಸಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡುತ್ತದೆ. ಬಳಕೆದಾರರ ಸುರಕ್ಷತಾ ದೃಷ್ಟಿಯಿಂದ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ಮಾಹಿತಿಯನ್ನೂ ಕೂಡ ಈ ಆ್ಯಪ್ ನೀಡುತ್ತದೆ, ಸೋಂಕಿತರು ನಿಕಟದಲ್ಲಿದ್ದರೆ ಬಳಕೆದಾರರನ್ನು ಈ ಆಪ್ ಎಚ್ಚರಿಸುತ್ತದೆ. ಕೊರೋನ ವೈರಸ್ ಕುರಿತಾದ ಎಲ್ಲಾ ಸಂದೇಹ, ಗೊಂದಲಗಳಿಗೆ ಉತ್ತರವನ್ನೂ ನೀಡುವ ಈ ಆ್ಯಪ್ ಕೊರೋನ ವಿರುದ್ಧದ ಈ ಹೋರಾಟದಲ್ಲಿ ಒಂದು ಪರಿಣಾಮಕಾರಿ ಸಾಧನವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಈ ವರೆಗೆ 63 ಲಕ್ಷ ಜನ ಆರೋಗ್ಯ ಸೇತು ಆ್ಯಪ್ ಅನ್ನು ಬಳಸುತ್ತಿದ್ದು ಇದರಲ್ಲಿನ ಸ್ವಯಂ ನಿಗಾ ಪ್ರಕ್ರಿಯೆ ಮೂಲಕ2,255 ಜನರಿಗೆ ರೆಡ್ ಫ್ಲಾಗ್ ಅಲರ್ಟ್ ನೀಡಲಾಗಿದ್ದು ಅವರೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಂದೇಶ ಹೋಗಿದೆ. ಇವರಲ್ಲಿ 233 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದು 17 ಮಂದಿಗೆ ಪಾಸಿಟೀವ್ ಬಂದಿದೆ. ಅಂದರೆ ಆ್ಯಪ್ ಮೂಲಕ ಪರೀಕ್ಷೆಗೆ ಒಳಪಟ್ಟವರಲ್ಲಿ ರಾಜ್ಯದ ಶೇ.7.5% ಪಾಸಿಟೀವ್ ಪ್ರಕರಣಗಳು ಪಾಸಿಟೀವ್ ಬಂದಿದ್ದು ರಾಷ್ಟ್ರೀಯ ಸರಾಸರಿ ಶೇ.30 ರಷ್ಟಿದೆ ಎಂದು ಸಚಿವರು ತಿಳಿಸಿದ್ದಾರೆ. ರಾಜ್ಯದ ಜನತೆಯ ಜೀವ ಉಳಿಸುವುದು ಸರ್ಕಾರದ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಈ ಆ್ಯಪ್ ಬಹಳಷ್ಟು ಸಹಕಾರಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಆರೋಗ್ಯ ಸೇತು ಆ್ಯಪ್ ನ ಸುರಕ್ಷತೆಯ ಬಗ್ಗೆ ಇರುವ ಗೊಂದಲಗಳಿಗೆ ಉತ್ತರಿಸಿದ ಸಚಿವರು, ಈ ಆ್ಯಪ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಭಾರತ ಸರ್ಕಾರದ ನೇರ ಸುಪರ್ದಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಡಾಟ ರಿಟೆನ್ಷನ್ ಮತ್ತು ಸುರಕ್ಷತೆಯ ದೃಷ್ಟಿಯಲ್ಲಿ ಸುಸ್ಥಾಪಿತ ಗೌಪ್ಯತೆ ತತ್ವಗಳನ್ನು ಅಳವಡಿಸಿಕೊಂಡಿದೆ, ಅದರ ಬಗ್ಗೆ ಯಾವುದೇ ಆತಂಕ ಬೇಡ ಎಂದು ತಿಳಿಸಿದ್ದಾರೆ. ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಬಳಸಿ ಕೋವಿಡ್ ವಿರುದ್ಧದ ಈ ಸಮರದಲ್ಲಿ ಸಹಕರಿಸುವಂತೆ ಸಚಿವರು ಕೋರಿದ್ದಾರೆ.