ಸಾರಿಗೆ ಸೇವೆ ಆರಂಭ;ರಸ್ತೆಗಿಳಿದ 1500 ಬಸ್ ಗಳು

ಬೆಂಗಳೂರು: ಅಂತರ್ಜಿಲ್ಲಾ ಸಾರಿಗೆ ಸೇವೆ ಆರಂಭಗೊಂಡಿದ್ದು ಮೊದಲ ದಿನವಾದ ಇಂದು ಕೆಎಸ್ಆರ್‌ಟಿಸಿ ಯ 1500 ಬಸ್ ಗಳು ರಸ್ತೆ ಗಿಳಿದವು,ಬಹುತೇಕವಾಗಿ ಎಲ್ಲಾ ಜಿಲ್ಲೆಗಳಿಂದಲೂ ಬಸ್ ಸೇವೆ ನಡೆಸಲಾಯಿತು.

ಮೆಜೆಸ್ಟಿಕ್ ನಿಲ್ದಾಣದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಸ್ ಗಳು ಸಂಚಾರ ನಡೆಸಿದ್ದು ಪ್ರತಿ ಬಸ್ ನಲ್ಲಿ 30 ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಯಿತು.ಡ್ರೈವರ್,ಕಂಡಕ್ಟರ್ ಗೂ ಥರ್ಮಲ್ ಸ್ಕ್ರೀನಿಂಗ್ ನಡೆಸಿದ್ದು ನಂತರ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಬಸ್ ಹತ್ತಿಸಲಾಯಿತು.

 

20 ಲಕ್ಷ ಕೋಟಿ ಪ್ಯಾಕೇಜ್ ಜನರ ನೆರವಿಗೆ ಬರಲ್ಲ: ಎಚ್ಡಿಕೆ

ಬೆಂಗಳೂರು: ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಕೋವಿಡ್-19 ವಿಶೇಷ ಪ್ಯಾಕೇಜ್ ನ ಅಸಲಿಯತ್ತನ್ನ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜನರ ಮುಂದಿಟ್ಟಿದ್ದಾರೆ. ದೇಶದ ಜನರನ್ನ ಮೋದಿ ಸರ್ಕಾರ ಲಘುವಾಗಿ ಪರಿಗಣಿಸಿದ್ದಾರೆ. ನಾವು ಏನ್ ಹೇಳಿದ್ರು ಜನ ನಂಬ್ತಾರೆ ಅಂತಾ ತಿಳ್ಕೊಂಡಿದ್ದಾರೆ ಅಂತಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.

ಕೊರೋನಾ ವೈರಸ್ ನಿಂದ ಪಾತಾಳಕ್ಕೆ ಕುಸಿದಿರೋ ದೇಶದ ಆರ್ಥಿಕತೆ ಯನ್ನ ಮೇಲೆತ್ತಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿತ್ತು. ಪ್ಯಾಕೇಜ್ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎಚ್ಡಿಕೆ, 20 ಲಕ್ಷ ಕೋಟಿ ಪ್ಯಾಕೇಜ್ ಯಾರ ನೆರವಿಗೂ ಬರುವುದಿಲ್ಲ ಅಂತಾ ಆರೋಪಿಸಿದ್ರು.

ಕೇಂದ್ರದ ಫೈನಾನ್ಸ್ ಕಮಿಷನ್ ಕೊಟ್ಟಿರುವ ಶಿಫಾರಸ್ಸನ್ನು ಸರ್ಕಾರ ಹೇಗೆ ಪರಿಗಣಿಸುತ್ತದೆ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ. ಪ್ಯಾಕೇಜ್ ಘೋಷಣೆ ಮಾಡುವುದರಲ್ಲಿ ಆತುರ ಬೇಡ. ಆರ್ಥಿಕವಾಗಿ ಬಲಾಢ್ಯರನ್ನಾಗಿ ಮಾಡಲು ಹೋಗಿದ್ದೀರಿ. ಎಂಎಸ್ಎಂಇ ಗೆ ಘೋಷಿಸಿರೋ 6.54 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ನಲ್ಲಿ ಕೇಂದ್ರ ಸರ್ಕಾರದ ಪಾಲು ಕೇವಲ 2500 ಕೋಟಿ ಅಷ್ಟೇ. ಅದರಲ್ಲಿ ಕೇಂದ್ರ ಸರ್ಕಾರದ ಪಾಲು ದೊಡ್ಡದೇನು ಇಲ್ಲ. 13 ನೇ ತಾರೀಖಿನ ಪ್ಯಾಕೇಜ್‌ ದೊಡ್ಡಮಟ್ಟದಲ್ಲಿ ಯಾರ ನೆರವಿಗೂ ಬರುವುದಿಲ್ಲ ಅಂತಾ ಮಾಹಿತಿ ನೀಡಿದ್ರು.

ಸಾಲ ಕೊಡುತ್ತೇವೆ ಎಂದು 3 ಲಕ್ಷ ಕೋಟಿ ಘೋಷಿಸಿದ್ದಾರೆ. ಈ 3 ಲಕ್ಷ ಕೋಟಿ ಕೇಂದ್ರ ಸರ್ಕಾರದ ಖಜಾನೆಯಿಂದ ಕೊಡುವುದಲ್ಲ. ಅದು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್‌ಗಳಿಂದ ಕೊಡುವುದು. 2019 ರಲ್ಲಿ ಎಂಎಸ್ಎಂಇಗೆ ದೇಶದ ಎಲ್ಲಾ ಬ್ಯಾಂಕ್ ಗಳು 87.67 ಲಕ್ಷ ಕೋಟಿ ಸಾಲ ನೀಡಿದ್ದಾರೆ. ಎಂಎಸ್ಎಂಇಗೆ 100 ಲಕ್ಷ ಕೋಟಿ ಸಾಲ ನೀಡುವಷ್ಟು ಸಾಮರ್ಥ್ಯ ಬ್ಯಾಂಕ್ ಗಳಿಗಿದೆ. ಅದನ್ನ 3 ಲಕ್ಷ ಕೋಟಿಗೆ ಯಾಕೆ ಇಳಿಸಿದ್ರಿ ಅಂತಾ ಪ್ರಶ್ನಿಸಿದ್ರು. ಇನ್ನೂ ಮ್ಯೂಚುಯಲ್‌ ಫಂಡ್‌‌ಗೆ 50 ಸಾವಿರ ಕೋಟಿ ಕೊಡುತ್ತೇವೆ ಎಂದಿದ್ದಾರೆ. ಇದು ನಾಳೆ ನಮ್ಮ ಕೈ ಸೇರುವುದಿಲ್ಲ ಅಂತಾ ವಾಗ್ದಾಳಿ ನಡೆಸಿದ್ರು.

ರಾಜ್ಯ ಸರ್ಕಾರದ 1610 ಕೋಟಿ ರೂಪಾಯಿಗಳ ಪ್ಯಾಕೇಜ್‌ನಲ್ಲಿ ಅಟೋ ಚಾಲಕರಿಗೆ ಸೇವಾ ಸಿಂಧು ಮೂಲಕ ಪರಿಹಾರ ನೀಡುತ್ತಿದ್ದಾರೆ. ಇದಕ್ಕೆ ನಾನು ಅವತ್ತು ಸರ್ಕಾರಕ್ಕೆ ಹೇಳಿದ್ದೇ. ಹೂವು ಮುಡಿಸುವ ಕೆಲಸ ಮಾಡಬೇಡಿ ಅಂತಾ. 7.75 ಲಕ್ಷ ಚಾಲಕರಿಗೆ 5 ಸಾವಿರ ರೂಪಾಯಿಗಳನ್ನು ನೀಡುತ್ತೇವೆ ಎಂದಿದ್ದಾರೆ. 20 ಕೋಟಿ ಸರ್ಕಾರದ ಕಡೆಯಿಂದ ‌ಬಿಡುಗಡೆಯಾಗಿದೆ. 20 ಕೋಟಿ ರೂಪಾಯಿಗಳನ್ನು ಎಷ್ಟು ಚಾಲಕರಿಗೆ ಕೊಡಲು ಸಾಧ್ಯ?
ಅವರ ಮಾನದಂಡದಂತೆ ಇರುವುದು ಏನು? ಆರ್ಥಿಕವಾಗಿ ಸದೃಢವಾದ ಚಾಲಕರಿಗೆ ನೀಡುವುದಿಲ್ಲ ಎನ್ನುತ್ತಾರೆ. ಇದು ಎಷ್ಟರಮಟ್ಟಿಗೆ ಸರಿ? ಇಂಗ್ಲೀಷ್ ಮಾತನ್ನಾಡಲು ಬರುತ್ತದೆ ಎಂದು ಜನರಿಗೆ ಮೋಸ ಮಾಡಬೇಡಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ರು.

ರಾಜ್ಯಕ್ಕೆ ಕೊರೊನಾಘಾತ,ಒಂದೇ ದಿನ 149 ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಸ್ಪೋಟಗೊಂಡಿದ್ದು ಇಂದು ಒಂದೇ ದಿನ ದಾಖಲೆತ 149 ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ.ಸೋಂಕಿತರ ಸಂಖ್ಯೆ 1395 ಕ್ಕೆ ತಲುಪಿದೆ.

ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಂಗಳವಾರ ಬೆಳಗಿನ ಹೆಲ್ತ್ ಬುಲೆಟಿನ್ ನಲ್ಲಿ 25 ಮಕ್ಕಳು ಸೇರಿ 149 ಸೋಂಕಿತ ಪ್ರಕರಣ ಪತ್ತೆಯಾಗಿದ್ದು,ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ ಆ ಮೂಲಕ ಮೃತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

ಮುಂಗಡ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಸಿ: ಕೆಎಸ್ಆರ್‌ಟಿಸಿ ಮನವಿ

ಬೆಂಗಳೂರು: ಮುಂಗಡ ಟಿಕೇಟು ಕಾಯ್ದಿರಿಸುವ ( online ticketing ) ಮೂಲಕ ಪ್ರಯಾಣಿಸಿ ಇದರಿಂದ ವೃಥಾ ಬಸ್ ನಿಲ್ದಾಣದಲ್ಲಿ ಜನ ಸಂದಣಿ‌ ಮತ್ತು ಸರತಿ ಸಾಲುಗಳಲ್ಲಿ ಕಾಯುವುದನ್ನು ತಪ್ಪಿಸಬಹುದಾಗಿರುತ್ತದೆ ಎಂದಿ ಕೆ ಎಸ್ ಆರ್ ಟಿ‌ ಪ್ರಯಾಣಿಕರಲ್ಲಿ ಮನವಿ‌ ಮಾಡಿದೆ.

ಬಸ್ಸುಗಳು 50% ಆಸನಗಳ ಪ್ರಮಾಣದಲ್ಲಿ‌ ಕಾರ್ಯಚರಣೆಯಾಗುತ್ತಿರುವುದರಿಂದ ,ಅತ್ಯಧಿಕ ಬಸ್ಸುಗಳು‌ ಕಾರ್ಯಚರಣೆಗೆ ಅವಶ್ಯಕವಿದ್ದು, ಈ ಸಂಬಂಧ ಪ್ರಯಾಣಿಕರು ಮುಂಗಡ ಟಿಕೇಟು ಕಾಯ್ದಿರಿಸಿದ್ದಲ್ಲಿ ಅವರ ಪ್ರಯಾಣವು ಸುಗಮವಾಗಿರಲಿದೆ ಎಂದಿದೆ.

ದಯವಿಟ್ಟು ಮುಂಗಡ ಟಿಕೇಟು‌ ಬುಕ್ ಮಾಡಲು
www.ksrtc.in ಹಾಗು ಹೆಚ್ಚಿನ ಮಾಹಿತಿಗಾಗಿ‌‌ ನಿಗಮದ ಕಾಲ್‌ಸೆಂಟರ್ 9449596666 ಅನ್ನು ಸಂಪರ್ಕಿಸಲು ಸಂಸ್ಥೆ ಕೋರಿದೆ.

ಕೃಷ್ಣ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ಈಜಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ ಪಟ್ಟಣದ ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ.

ಬನಹಟ್ಟಿ ನಿವಾಸಿ ವರ್ಷದ ಪ್ರಕಾಶ್ ಮಂಟೂರು (31) ಮೃತ ವ್ಯಕ್ತಿಯಾಗಿದ್ದು, ಈತ ಸಿವಿಲ್ ಗುತ್ತಿಗೆದಾರನಾಗಿದ್ದ ಎಂದು ತಿಳಿದು ಬಂದಿದೆ. ಮೃತ ಪ್ರಕಾಶ್ ಹಾಗೂ ಸ್ನೇಹಿತರೆಲ್ಲರೂ ಸೇರಿ ಈಜೋಕೆ ಅಂತಾ ಕೃಷ್ಣಾ ನದಿಗೆ ಹೋಗಿದ್ದರು ಎನ್ನಲಾಗ್ತಿದೆ. ಸದ್ಯ ನದಿಯಲ್ಲಿ ಮುಳುಗಿದ್ದ ಪ್ರಕಾಶ್ ಮೃತದೇಹವನ್ನು ಹೊರ ತೆಗೆಯಲಾಗಿದ್ದು, ಈ ಬಗ್ಗೆ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಜೂ. 18ಕ್ಕೆ ಪಿಯು ಇಂಗ್ಲಿಷ್ ಪರೀಕ್ಷೆ: ಸುರೇಶ್ ಕುಮಾರ್

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳು ಮತ್ತು ಪೋಷಕರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆ ಮತ್ತು ಬಾಕಿ ಉಳಿದ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ದಿನಾಂಕಗಳನ್ನು ಪ್ರಕಟಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸಂಪೂರ್ಣ ಆರೋಗ್ಯಕರ ವಾತಾವರಣದಲ್ಲಿ ಪರೀಕ್ಷೆಗಳು ನಡೆಯಲಿವೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜೂನ್ 25ರಿಂದ ಜುಲೈ 4ರವರೆಗೆ ನಡೆಯಲಿದ್ದು, ಇಂಗ್ಲೀಷ್, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿ ವಿಷಯಕ್ಕೆ ಒಂದು ದಿನದ ಅಂತರವನ್ನು ನೀಡಿ 10 ದಿನಗಳ ಒಟ್ಟು ಅವಧಿಯಲ್ಲಿ ಪರೀಕ್ಷೆ ಮುಗಿಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಾಕಿ ಉಳಿದಿದ್ದ ಪಿ.ಯು.ಸಿ. ಇಂಗ್ಲೀಷ್ ಪರೀಕ್ಷೆ ಜೂನ್ 18 ರಂದು ನಡೆಯಲಿದೆ. ಈ ಬಾರಿ 8,48,196 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಳ್ಳಲಿದ್ದು, ಅದಕ್ಕಾಗಿ 2879 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 43,720 ಕೊಠಡಿಗಳನ್ನು ಸೃಜಿಸಲಾಗಿದೆ. ಆರೋಗ್ಯ ಇಲಾಖೆಯ ಸಲಹೆಯಂತೆ ವಿದ್ಯಾರ್ಥಿಗಳ ನಡುವೆ ಅಗತ್ಯ ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ರೀತಿಯಲ್ಲಿ ಆಸನ ವ್ಯವಸ್ಥೆಯನ್ನು ಮಾಡಲಾಗುವುದು. ವಿದ್ಯಾರ್ಥಿಗಳು ಪರೀಕ್ಷಾ ಕೆಂದ್ರಗಳಿಗೆ ಬೆಳಿಗ್ಗೆ 9.30 ಕ್ಕೆ ಹಾಜರಾಗಿ ಥರ್ಮಲ್ ಸ್ಕ್ಯಾನರ್ ಮೂಲಕ ವೈದ್ಯಕೀಯ ತಪಾಸಣೆಗೆ ಒಳಪಟ್ಟ ನಂತರವೇ 10.30ಕ್ಕೆ ಪ್ರಾರಂಭವಾಗುವ ಪರೀಕ್ಷೆಗೆ ಹಾಜರಾಗಲಿದ್ದು, ಇದಕ್ಕಾಗಿ ಆರೋಗ್ಯ ಇಲಾಖೆ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಸಚಿವರು ವಿವರಿಸಿದರು.

ಪ್ರತಿ ವಿದ್ಯಾರ್ಥಿಯು ಮಾಸ್ಕ್ ಮತ್ತು ಸ್ಯಾನಿಟೈಜರ್ ಬಳಸಿ ಪರೀಕ್ಷೆ ಹಾಜರಾಗುವ ವ್ಯವಸ್ಥೆ ಮಾಡಲಾಗಿದ್ದು, ಮಾಸ್ಕ್‍ಗಳನ್ನು ಇಲಾಖೆಯ ವತಿಯಿಂದಲೇ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಇತರೆ ಸಂಘ ಸಂಸ್ಥೆಗಳ ಮೂಲಕ ಉಚಿತವಾಗಿ ಪೂರೈಸಲಾಗುವುದು. ಸ್ಯಾನಿಟೈಜರ್ ವಿತರಣೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುವುದು. ಸ್ಯಾನಿಟೈಜರ್‍ಗಳನ್ನು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಉಚಿತವಾಗಿ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪೂರೈಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಅನುಕೂಲವಾಗುವಂತೆ ಹಾಜರಿರಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಲ್ಲಿ ಆರೋಗ್ಯದ ಸಮಸ್ಯೆಗಳು ಇದ್ದಲ್ಲಿ ಅಂತಹವರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಸುವ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಪ್ರಾರಂಭವಾಗುವ ಒಂದೆರೆಡು ದಿನಗಳ ಮುಂಚೆ ಎಲ್ಲಾ ಸ್ವಚ್ಛತಾ ಕ್ರಮಗಳ ಮೂಲಕ ಸ್ಯಾನಿಟೈಜ್ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಬಹುತೇಕ ಜಿಲ್ಲೆಗಳಲ್ಲಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳು, ವಸತಿ ಶಾಲೆಗಳು ಹಾಗೂ ಕೆಲವೊಂದು ಜಿಲ್ಲೆಗಳಲ್ಲಿ ಖಾಸಗಿ ಸಂಸ್ಥೆಗಳ ಹಾಸ್ಟೆಲ್‍ಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಉಪಯೋಗಿಸಿಕೊಳ್ಳುತ್ತಿರುವುದರಿಂದ ಈ ಹಾಸ್ಟೆಲ್ ವಾಸಿಗಳಾಗಿದ್ದ ಮಕ್ಕಳು ತಂತಮ್ಮ ಗ್ರಾಮಗಳಿಗೆ ಹೋಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಆವರು ನೊಂದಾಯಿಸಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲವಾದ್ದರಿಂದ ಅಂತಹ ವಿದ್ಯಾರ್ಥಿಗಳು ಹಾಗೂ ಪೋಷಕರು ತಾವು ಪ್ರಸ್ತುತ ತಂಗಿರುವ ಸ್ಥಳಕ್ಕೆ ಹತ್ತಿರವಿರುವ ಪರೀಕ್ಷಾ ಕೇಂದ್ರದ ಮೂಲಕ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಈ ಕುರಿತಂತೆ ಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿಚ್ಛಿಸುವ ಅಂತಹ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯ ಶಿಕ್ಷಕರನ್ನು ಈ ತಿಂಗಳ 25 ರೊಳಗೆ ಸಂಪರ್ಕಿಸಿ ವಿವರಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ಯಾವುದಾದರೂ ವಲಸೆ ಕಾರ್ಮಿಕರ ಕುಟುಂಬಗಳ ಮಕ್ಕಳು ತಮ್ಮ ಸ್ವಂತ ಊರುಗಳಿಗೆ ತೆರಳಿದ್ದಲ್ಲಿ ಅಂತಹ ಮಕ್ಕಳಿಗೂ ಸಹ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶ ನೀಡಲಾಗಿದೆ ಎಂದು ಸುರೇಶ್ ಕುಮಾರ್ ವಿವರಿಸಿದರು.

ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬೇರೆ ರಾಜ್ಯಗಳಿಂದ ಬಂದು ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ಚಂದನ ದೂರದರ್ಶನ ವಾಹಿನಿಯಲ್ಲಿ ಈಗಾಗಲೇ ಪ್ರಸಾರವಾಗುತ್ತಿರುವ ಪುನರ್‍ಮನನ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಕಾರ್ಯಕ್ರಮದ ಅಂತ್ಯದಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳ ಬಗ್ಗೆ ವಿಶೇಷ ತರಗತಿಗಳನ್ನು 3 ದಿನದ ಅವಧಿಗೆ ರೂಪಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯುವ ಮನಸ್ಥಿತಿಗೆ ಸಜ್ಜುಗೊಳಿಸಲಾಗುವುದು ಎಂದೂ ಸಚಿವರು ತಿಳಿಸಿದರು.

ಕೊರೋನಾ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಸಂಬಂಧದಲ್ಲಿ ಹತ್ತಾರು ಬಾರಿ ಅಧಿಕಾರಿಗಳ ಸಭೆ ಈ ಕುರಿತು ಕೈಗೊಳ್ಳಬಹುದಾದ ಸಾಧ್ಯತೆಗಳ ಕುರಿತು ಚರ್ಚಿಸಲಾಗಿದೆ. ಹಾಗೆಯೇ ರಾಜ್ಯದ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಖುದ್ದಾಗಿ ಹಾಗೂ ಫೋನ್ ಮೂಲಕ ಚರ್ಚಿಸಲಾಗಿದೆ. ಶಿಕ್ಷಣ ತಜ್ಞರಾದ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರ್ಜಗಿ, ಡಾ. ಎಂ.ಕೆ. ಶ್ರೀಧರ್, ಹಿಂದಿನ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಎಸ್.ಜಿ. ಸಿದ್ಧರಾಮಯ್ಯ, ಹಿಂದಿನ ಶಿಕ್ಷಣ ಸಚಿವರುಗಳಾದ ಬಿ.ಕೆ. ಚಂದ್ರಶೇಖರ್, ಬಸವರಾಜ ಹೊರಟ್ಟಿ, ಮಾಜಿ ಸಭಾಪತಿ ಬಿ.ಎಲ್. ಶಂಕರ್, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಸುತ್ತೂರು, ಸಿದ್ಧಗಂಗಾ ಸೇರಿದಂತೆ ಶಿಕ್ಷಣ ದಾನ ಮಾಡುತ್ತಿರುವ ಹಲವಾರು ಸ್ವಾಮೀಜಿಗಳು ಸೇರಿದಂತೆ ಹಲವರೊಂದಿಗೆ ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬರಲಾಯಿತು ಎಂದು ಸಚಿವರು ತಿಳಿಸಿದರು.

ರಾಜ್ಯದ ಎಸ್ಸೆಸ್ಸೆಲ್ಸಿ ಮಕ್ಕಳ ಕೋರಿಕೆಯಂತೆ ಬಹಳ ಮೊದಲೇ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಅವರಿಗೆ ಈ ತನಕ ಅಭ್ಯಸಿಸಿದ್ದನ್ನು ಮತ್ತೊಮ್ಮೆ ಪುನರ್ಮನನ ಮಾಡಲು ಸಾಕಷ್ಟು ಸಮಯ ದೊರೆತಂತಾಗಿದೆ. ಒಂದೆರಡು ದಿನಗಳಲ್ಲಿ ಪರೀಕ್ಷೆಯ ಸವಿವರ ವೇಳಾಪಟ್ಟಿ ಪ್ರಕಟಿಸಲಾಗವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾಶಿಇ ಆಯುಕ್ತ ಡಾ. ಕೆ.ಜೆ.ಜಗದೀಶ್, ಸರ್ವಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕ ಡಾ. ಎಂ.ಟಿ. ರೇಜು, ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ, ಕಪ್ರೌಶಿ ಪರೀಕ್ಷಾ ಮಂಡಳಿ ನಿರ್ದೇಶಕಿ ಸುಮಂಗಲಾ ಹಾಜರಿದ್ದರು.