ರಾಜ್ಯದಲ್ಲಿ ಮುಂದುವರೆದ ಕೊರೋನಾರ್ಭಟ!

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದು ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆ ಪುನರಾರಂಭಗೊಳ್ಳುತ್ತಿದೆ. ಒಂದೆಡೆ ಜನಜೀವನ ಸಹಜಸ್ಥಿತಿಯತ್ತ ಮರಳುತ್ತಿದ್ದರೆ, ಮತ್ತೊಂದೆಡೆ ಕರೊನಾ ಅಟ್ಟಹಾಸ ಮುಂದುವರಿದೆ.

ಸೋಮವಾರ ಒಂದೇ ದಿನ ಕರ್ನಾಟಕದಲ್ಲಿ ಬರೋಬ್ಬರಿ 84 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಈವರೆಗೆ ದಿನವೊಂದರಲ್ಲಿ ವರದಿಯಾದ ಗರಿಷ್ಠ ಪ್ರಕರಣ ಎನಿಸಿದೆ. ಒಂದೇ ದಿನ 69 ಪ್ರಕರಣಗಳು ದೃಢಪಟ್ಟಿದ್ದು ಈ ಹಿಂದಿನ ದಾಖಲೆಯಾಗಿತ್ತು.

84 ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ ಗರಿಷ್ಟ 18, ಮಂಡ್ಯದಲ್ಲಿ 17, ಉತ್ತರ ಕನ್ನಡ 8, ಕಲಬುರಗಿ 6, ರಾಯಚೂರು 6, ವಿಜಯಪುರ 5, ಯಾದಗಿರಿ 5, ಗದಗ 5, ಹಾಸನ 4, ಕೊಪ್ಪಳ 3, ಬೆಳಗಾವಿ 2, ಬಳ್ಳಾರಿ, ದಾವಣಗೆರೆ, ಬೀದರ್, ಕೊಡಗು ಹಾಗೂ ಮೈಸೂರಿನಲ್ಲಿ ತಲಾ 1 ಪ್ರಕರಣಗಳು ಸೇರಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,231ಕ್ಕೆ ಏರಿಕೆಯಾಗಿದೆ. ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

672 ಸಕ್ರಿಯ ಪ್ರಕರಣಗಳು:
1,231 ಸೋಂಕಿತರ ಪೈಕಿ 521 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದರೆ, 37 ಮಂದಿ ಸಾವಿಗೀಡಾಗಿದ್ದಾರೆ. ಓರ್ವ ಸೋಂಕಿತ ವ್ಯಕ್ತಿ ಕೋವಿಡ್-19 ಅಲ್ಲದೆ ಅನ್ಯ ಕಾರಣದಿಂದ ಮೃತಪಟ್ಟಿದ್ದು, ಸದ್ಯ ರಾಜ್ಯದಲ್ಲಿ 672 ಸಕ್ರಿಯ ಪ್ರಕರಣಗಳಿವೆ.

ಗ್ರೀನ್ ಝೋನ್‌ನಲ್ಲಿ ಕಾಣಿಸಿಕೊಂಡ ಕೋವಿಡ್-19:
ಸೋಮವಾರ ದೃಢಪಟ್ಟ ಪ್ರಕರಣಗಳ ಪೈಕಿ ಕೆಲ ಪ್ರಕರಣಗಳು ಹಸಿರು ವಲಯದಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಗ್ರೀನ್ ರೆನ್ ಜಿಲ್ಲೆಯಾಗಿದ್ದ ರಾಯಚೂರಿನಲ್ಲಿ ಒಂದೇ ದಿನ 6 ಕೇಸ್‌ಗಳು ದಾಖಲಾಗಿದ್ದು, ರೆಡ್ ಝೋನ್ ಆಗಿ ಪರಿವರ್ತನೆಗೊಂಡಿದೆ. ಆರೂ ಸೋಂಕಿತರು ಮುಂಬೈನಿಂದ ಬಂದವರಾಗಿದ್ದಾರೆ. ಕೊಪ್ಪಳದಲ್ಲೂ ಮೂರು ಪ್ರಕರಣಗಳ ದಾಖಲಾಗಿದ್ದು ಓರ್ವ ವ್ಯಕ್ತಿ ಚೆನ್ನೈ ಮತ್ತಿಬ್ಬರು ಮಹಾರಾಷ್ಟ್ರದ ನಂಟು ಹೊಂದಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಎಲ್ಲ 89 ರೋಗಿಗಳೂ ಗುಣಮುಕ್ತರಾಗಿದ್ದರಿಂದ ಕರೊನಾ ಮುಕ್ತ ಎನಿಸಿಕೊಂಡಿದ್ದ ಮೈಸೂರಿನಲ್ಲಿ ಸೋಮವಾರ ಮತ್ತೊಂದು ಪ್ರಕರಣ ದಾಖಲಾಗಿದ್ದು, ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ ಸೃಷ್ಟಿಮಾಡಿದೆ.

ನಾಪತ್ತೆಯಾದ ಯುವಕ ಶವವಾಗಿ ಪತ್ತೆ: ಕೊಲೆ ಶಂಕೆ

ಉಡುಪಿ: ತಿಂಡಿ ತಿನ್ನಲು ಹೋಗಿ ನಾಪತ್ತೆಯಾದ  ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ.  ಹೆಬ್ರಿಯ ಅರಣ್ಯ ಪ್ರದೇಶದಲ್ಲಿ ಯುವಕನ ಮೃತ ದೇಹ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದೆ.

ಯುವಕನ ಮೃತ ದೇಹ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಮುದ್ರಾಡಿ ಗ್ರಾಮದ ಜಕ್ಕನಾಡಿ ನಿವಾಸಿ ಶಿವಕುಮಾರ್ (28 ) ನಾಪತ್ತೆಯಾಗಿ ಶವವಾದ ದುರ್ದೈವಿ. ಹೆಬ್ರಿ ಗ್ರಾಮದ ಜರವತ್ತು ಅರಣ್ಯ ಪ್ರದೇಶದ ನಡುವೆ ಈತನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸಭೆ ಸಮಾರಂಭಗಳಿಗೆ ಧ್ವನಿವರ್ಧಕ ಜೋಡಿಸುವ ಕೆಲಸ ಮಾಡಿಕೊಂಡಿದ್ದ ಶಿವಕುಮಾರ್, ಇತ್ತೀಚೆಗೆ ಲಾಕ್ ಡೌನ್ ನಿಂದಾಗಿ ಮನೆಯ ಬಳಿಯ ಹೊಲೋ ಬ್ಲಾಕ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದ .ಮೇ13 ರಂದು ಬೆಳಿಗ್ಗೆ ಕೆಲಸದ ಸ್ಥಳದಿಂದ ಹೊಟೇಲ್‌ಗೆ ತಿಂಡಿ ತಿನ್ನಲು ಹೋದವ ನಾಪತ್ತೆಯಾಗಿದ್ದ. ಈತನ
ಮೃತದೇಹ ಅಂಗಾತ ಮಲಗಿದ ಸ್ಥಿತಿಯಲ್ಲಿ, ಕುತ್ತಿಗೆಯಲ್ಲಿ ಬೈರಾಸು ಸುತ್ತಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶಿವಕುಮಾರ್ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿರುವ ಸಹೋದರ ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಾಳೆಯಿಂದ ಬಸ್,ಆಟೋ ಸಂಚಾರ ಆರಂಭ,ಎಲ್ಲಾ ಬಗೆಯ ಅಂಗಡಿ ಮುಂಗಟ್ಟು,ಪಾರ್ಕ್ ಗಳು ರೀ ಓಪನ್

ಬೆಂಗಳೂರು: ರಾಜ್ಯದ ರೆಡ್ ಜೋನ್ ಹಾಗು ಕಂಟೈನ್ ಜೋನ್ ಹೊರತುಪಡಿಸಿ ನಾಳೆಯಿಂದ ಮಾಲ್,ಸಿನಿಮಾ,ಹೋಟೆಲ್ ಬಿಟ್ಟು ಎಲ್ಲಾ ಅಂಗಡಿ ಮುಂಗಟ್ಟು ತೆರೆಯಲಿದ್ದು ಜಿಲ್ಲೆಯೊಳಗೆ ಸಾರ್ವಜನಿಕ ಸಮೂಹ ಸಾರಿಗೆ ಸಂಚಾರಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ವಿಧಾನಸೌಧದಲ್ಲಿ ಸಂಪುಟ‌‌ ಸಹೋದ್ಯೋಗಿಗಳ ಜೊತೆ ಸಭೆ ನಡೆಸಿದ ನಂತರ ಮಾಧ್ಯಮ ಗೋಷ್ಟಿ ನಡೆಸಿದ ಸಿಎಂ ಲಾಕ್ ಡೌನ್ ಮೇ 31 ರವರೆಗೆ ಮುಂದುವರಿಕೆ ಮಾಡುತ್ತಿದ್ದು ಯಾವುದಕ್ಕೆಲ್ಲಾ ಅವಕಾಶ ನೀಡಬೇಕು ಎಂದು ವಿವರ ನೀಡಿದರು.

ಯಾವುದಕ್ಕೆಲ್ಲಾ ಅವಕಾಶ:

ಕಂಟೈನ್ ಮೆಂಟ್ ಜೀನ್ ಬಿಗಿ ಭದ್ರತೆ,ಕಾನೂನು ಬಾಹಿರ ವರ್ತನೆಗೆ ಕ್ರಿಮಿನಲ್ ಕೇಸ್ ದಾಖಲು

ಜನರ ಸಂಚಾರಕ್ಕೆ ಅನುಕೂಲವಾಗಲು ಬಿಎಂಟಿಸಿ ಕೆಎಸ್ಆರ್‌ಟಿಸಿ, ಈಶಾನ್ಯ,ವಾಯುವ್ಯ ನಿಗಮ ಬಸ್ ಗಳ ಸಂಚಾರಕ್ಕೆ ಅವಕಾಶ

ರೆಡ್ ಜೋನ್, ಕಂಟೈನ್ ಮೆಂಟ್ ಜೋನ್ ಬಿಟ್ಟು ಉಳಿದ ಕಡೆ ನಾಳೆ ಬೆಳೆಗ್ಗೆಯಿಂದ ಬಸ್ ಸಂಚಾರ ಆರಂಭ.

ಖಾಸಗಿ ಬಸ್ ಗಳ ಸಂಚಾರಕ್ಕೂ ಅವಕಾಶ, ಬಸ್ ನಲ್ಲಿ 30 ಪ್ರಯಾಣಿಕರು ಸೀಮಿತ

ಎಲ್ಲಾ ಕಡೆ ಮಾಸ್ಕ್ ಕಡ್ಡಾಯ, ಉಲ್ಲಂಘಿಸಿದರೆ ದಂಡ

ಹೊರರಾಜ್ಯದಿಂದ ಬರುವವರಿಗೆ ಹಂತ ಹಂತವಾಗಿ ಸಾಂಸ್ಥಿಕ ಕ್ವಾರಂಟೈನ್ ಮುಂದುವರಿಕೆ.

ಆಟೋ,ಟ್ಯಾಕ್ಸಿ ಗಳಲ್ಲಿ ಒನ್ ಪ್ಲಸ್ ಟು, ಕ್ಯಾಬ್ ಒನ್ ಪ್ಲಸ್ ತ್ರೀಯಂತೆ ನಾಳೆಯಿಂದ ಸೇವೆಗೆ ಅನುಮತಿ.

ನಾಳೆಯಿಂದ ಮಾಲ್,ಸಿನಿಮಾ,ಹೋಟೆಲ್ ಬಿಟ್ಟು ಎಲ್ಲಾ ಅಂಗಡಿ ತೆರೆಯಬಹುದು.

ರೈಲು ರಾಜ್ಯದ ಒಳಗೆ ಸಂಚಾರ ಮಾಡಬಹುದು, ಹೊರ ರಾಜ್ಯದ ರೈಲಿಗೆ ಅವಕಾಶ ನೀಡಲ್ಲ.

ಸಲೂನ್ ಶಾಪ್ ತೆರೆಯಬಹುದು.

ಪ್ರತಿ ಭಾನುವಾರ ಕಂಪ್ಲೀಟ್ ಲಾಕ್ ಡೌನ್, ಯಾವುದೇ ಅಂಗಡಿ ತೆಗೆಯುವಂತಿಲ್ಲ,ಸಂಚಾರವೂ ನಿರ್ಬಂಧ

ಬೆಳಗ್ಗೆ 7-9 ಸಂಜೆ 5-7 ರವರೆಗೆ ಎಲ್ಲಾ ಪಾರ್ಕ್ ಗಳಲ್ಲಿ ಜನರ ಸಂಚಾರಕ್ಕೆ ಅವಕಾಶ.

ಪಾನಿಪೂರಿ ಸೇರಿ ಬೀದಿಬದಿ ವ್ಯಾಪಾರಕ್ಕೂ ಸಮ್ಮತಿ

ಬಸ್ ಪ್ರಯಾಣದರ ಜಾಸ್ತಿ ಮಾಡಲ್ಲ, ನಷ್ಟವನ್ನು ಸರ್ಕಾರ ಭರಿಸಲಿದೆ.

ವೈದ್ಯರು ಸರ್ಕಾರಿ ಸೇವೆಯತ್ತ ಹೆಚ್ಚಿನ ಆಸಕ್ತಿ ತೋರಲಿ: ಬಿ.ಸಿ.ಪಾಟೀಲ್

 

ಕೊಪ್ಪಳ,ಮೇ.18: ಉನ್ನತ ವೈದ್ಯಕೀಯ ಶಿಕ್ಷಣ, ವೈದ್ಯಕೀಯ ಶಿಕ್ಷಣ ಪಡೆದ ನಂತರ ವೈದ್ಯರು ಖಾಸಗಿ ಸೇವೆಗಿಂತ ಸರ್ಕಾರಿ ಸೇವೆಗೆ ಹೆಚ್ಚಿನ ಆಸಕ್ತಿ ತೋರಲಿ ಎಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಗತಿಪರಿಶೀಲನಾ ಸಭೆಗೂ ಮುನ್ನ ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕೊಪ್ಪಳ ಅಷ್ಟೇ ಅಲ್ಲದೇ ರಾಜ್ಯದ ಬಹುತೇಕ ಕಡೆ ಸರ್ಕಾರಿ ವೈದ್ಯರ ಕೊರತೆಯಿದೆ.ಇದಕ್ಕೆ ವೈದ್ಯರು ಖಾಸಗಿ ಸೇವೆಯತ್ತ ಹೆಚ್ಚು ಆಸಕ್ತಿ ತೋರುತ್ತಿರುವುದೇ ಕಾರಣ.ವೈದ್ಯರು ಸರ್ಕಾರಿ ಸೇವೆಗೆ ಹೆಚ್ಚಿನ ಆದ್ಯತೆಕೊಡಲಿ.ಇದರಿಂದ ಗ್ರಾಮೀಣ ಜನರಲ್ಲಿಯೂ ಸರ್ಕಾರಿ ವೈದ್ಯರ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲು ಸಾಧ್ಯ.ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದೆ ಎಂದರು.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ತಾವು ಕಳೆದ ತಿಂಗಳು ಕೋವಿಡ್-19 ಲಾಕ್ಡೌನ್‌ನಿಂದ ರೈತರು ಮತ್ತು ಕೃಷಿ ಚಟುವಟಿಕೆಗಳ ಸ್ಥಿತಿಗತಿ ಬಗ್ಗೆ ಅರಿಯಲು ಭೇಟಿ ನೀಡಿ ಸಭೆ ನಡೆಸಲಾಗಿತ್ತು.ಈಗ ತಾವು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲು ಪ್ರಗತಿ ಪರಿಶೀಲನಾ ಸಭೆ ನಡೆಸಲು ಆಗಮಿಸಿರುವುದಾಗಿ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಎಚ್ಡಿಡಿಗೆ 88ನೇ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಇಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ 88 ನೇ ಹುಟ್ಟುಹಬ್ಬದ ಸಂಭ್ರಮ. ಕೊರೋನಾ ಹಿನ್ನಲೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಎಚ್ಡಿಡಿ ನಿರ್ಧರಿಸಿದ್ದಾರೆ. ಇಂದು ಇಡೀ ದಿನ ಮನೆಯಲ್ಲಿಯೇ ಕುಟುಂಬಸ್ಥರ ಜೊತೆ ಕಾಲ ಕಳೆಯಲಿದ್ದಾರೆ.

ತಮ್ಮ ನೆಚ್ಚಿನ ನಾಯಕ ಹುಟ್ಟುಹಬ್ಬ ಆಚರಿಸಲು ಮನೆ ಬಳಿ ಬರೋ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಮನೆ ಬಳಿ ಬಾರದಂತೆ ದೊಡ್ಡ ಗೌಡರು ಮನವಿ ಮಾಡಿದ್ದಾರೆ. ಕೊರೋನಾ ಹಿನ್ನಲೆಯಲ್ಲಿ ಜನ ಸೇರುವುದು ಅಪಾಯಕಾರಿ. ಹಾಗಾಗಿ ಯಾರೂ ಕೂಡಾ ಮನೆ ಬಳಿ ಬಾರದಂತೆ ಮನವಿ ಮಾಡಿದ್ದಾರೆ. ತಾವೆಲ್ಲರೂ ಇದ್ದಲ್ಲಿಂದಲೇ ಹರಸಿ, ಮನೆ ಬಳಿ ಜನಸ್ತೋಮ ಸೇರುವುದು ಬೇಡ. ದೇಶದ ಇಂದಿನ ಸ್ಥಿತಿ ಆತಂಕಕಾರಿಯಾಗಿದೆ ಎಂದು ಕಾರ್ಯಕರ್ತರಿಗೆ ಗೌಡರು ಮನವಿ ಮಾಡಿದ್ದಾರೆ.

ಇನ್ನೂ  ಮಾಜಿ ಪ್ರಧಾನಿಗಳ ಹುಟ್ಟು ಹಬ್ಬದ ಪ್ರಯುಕ್ತ ಜೆಡಿಎಸ್ ಕಛೇರಿಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನ ಎಚ್ಡಿಡಿ ಉದ್ಘಾಟನೆ ಮಾಡಲಿದ್ದಾರೆ. ನಂತರ ಇಡೀ ದಿನ ಮನೆಯಲ್ಲೇ ಕಾಲ ಕಳೆಯಲಿರುವ ಮಾಜಿ ಪ್ರಧಾನಿ..

ರಾಜಕೀಯ ಹಗೆತನಕ್ಕೆ ತಮ್ಮನ್ನು ಬಲಿಪಶು ಮಾಡಲು ಪಿತೂರಿ: ಡಿಕೆ ಶಿವಕುಮಾರ್

ಬೆಂಗಳೂರು: ರಾಜಕೀಯವಾಗಿ ನನ್ನನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ನಾನು ಹೆದರಿ ಓಡಿ ಹೋಗುವುದಿಲ್ಲ. ಧೈರ್ಯವಾಗಿ ಎದುರಿಸುತ್ತೇನೆ. ಕಾನೂನಿಗೆ ಗೌರವ ನೀಡಿ, ಇಡಿ ಸೇರಿದಂತೆ ಯಾವುದೇ ಸಂಸ್ಥೆ ವಿಚಾರಣೆ ಮಾಡಿದರು ಅದಕ್ಕೆ ಸಂಪೂರ್ಣ ಸಹಕಾರಿ ನೀಡುತ್ತೇನೆ. ಅವರಿಗೆ ಕೊಡಬೇಕಾದ ಉತ್ತರ ಕೊಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಸದಾಶಿವನಗರದ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ನನಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದು, ಇಂದು ಮಧ್ಯಾಹ್ನ 1 ಗಂಟೆಗೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಆದರೆ ವೈಯಕ್ತಿಕ ಹಾಗೂ ಕೌಟುಂಬಿಕ ಕಾರ್ಯನಿಮಿತ್ತ 1 ಗಂಟೆಗೆ ಆಗಲ್ಲ, ಸ್ವಲ್ಪ ತಡವಾಗಿ ವಿಚಾರಣೆಗೆ ಆಗುವುದಾಗಿ ತಿಳಿಸಿದ್ದಾನೆ. ಇಂದು ದೆಹಲಿಗೆ ತೆರಳಿ ಇಡಿ ವಿಚಾರಣೆಗೆ ಹಾಜರಾಗುತ್ತೇನೆ’ ಎಂದರು. ಈ ವೇಳೆ ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ ಶಿವಕುಮಾರ್ ಹೇಳಿದ್ದಿಷ್ಟು…

‘ಕಾಂಗ್ರೆಸ್ ನ ಕಾರ್ಯಕರ್ತನಾಗಿ, ನಾಯಕನಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಾನು ನಡೆಸುಕೊಂಡು ಬಂದಿದ್ದೇನೆ. ಗುಜರಾತ್ ಶಾಸಕರು, ಅದಕ್ಕಿಂತ ಹಿಂದೆ ಮಹಾರಾಷ್ಟ್ರ ಶಾಸಕರು, ನಮ್ಮ ರಾಜ್ಯದಲ್ಲಿ ಅನೇಕ ಬಾರಿ ನಮ್ಮ ಶಾಸಕರುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಪಕ್ಷ ನೀಡಿದಾಗ ನಾನು ಅದನ್ನು ನಿಭಾಯಿಸಿಕೊಂಡು ಬಂದಿದ್ದೇನೆ. ಕಳೆದ ನಲವತ್ತು ವರ್ಷದಿಂದ ನಾನು ನಂದೇ ಆದಂತಹ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೆಲವರಿಗೆ ಸಹಾಯ ಆಗಿರಬಹುದು, ಟೀಕೆ ಆಗಿರಬಹುದು, ಫಲ ಸಿಕ್ಕಿರಬಹುದು ಫಲ ಸಿಕ್ಕಿಲ್ಲದೇ ಇರಬಹುದು. ಕೆಲವರಿಗೆ ಸಂತೋಷ ಗಿರಬಹುದು ಮತ್ತೆ ಕೆಲವರಿಗೆ ದುಃಖ ಆಗಿರಬಹುದು. ನಿರಂತರವಾಗಿ ನಾನು ಪ್ರಾಮಾಣಿಕತೆಯಿಂದ ನನ್ನ ಕರ್ತವ್ಯ ಮಾಡಿಕೊಂಡು ಬಂದಿದ್ದೇನೆ.

ಈಗ ನನ್ನ ಮೇಲೆ, ನನ್ನ ಸ್ನೇಹಿತರು, ಕುಟುಂಬ ಸದಸ್ಯರ ಮೇಲೆ ಆದಾಯ ತೆರಿಗೆ ಪ್ರಕರಣ ದಾಖಲಿಸಲಾಗಿದೆ. ಮೊದಲ ಬಾರಿಗೆ ಸಿಆರ್ ಪಿಎಫ್ ಪಡೆ ಬಂದು ನನ್ನ ಹಾಗೂ ನಮ್ಮವರ ಮನೆ ಮೇಲೆ ರೈಡ್ ಮಾಡಿದ್ದರು. ನಾನೋಬ್ಬ ನ್ಯಾಯಬದ್ಧವಾದ, ಕಾನೂನಿಗೆ ಗೌರವ ಕೊಡುವ ಶಾಸಕ. ನ್ಯಾಯಾಲಯಕ್ಕೆ, ಸಾಸಕಾಂಗಕ್ಕೆ ಹಾಗೂ ವ್ಯವಸ್ಥೆಗೆ ಏನೆಲ್ಲಾ ಗೌರವ ಕೊಡಬೇಕೋ ಅದನ್ನು ಕೊಡುತ್ತಾ ಬಂದಿದ್ದೇನೆ. ನನಗೆ ಅನೇಕ ಸಂದರ್ಭದಲ್ಲಿ ಅನೇಕ ನೋಟೀಸ್ ಗಳು ಬಂದಿದೆ. ಎಲ್ಲ ನನ್ನ ಸ್ನೇಹಿತರಿಗೆ ನೋಟೀಸ್ ಬಂದದ್ದು, ಸ್ವತಃ ನಾನು ಹೋಗಿ ಉತ್ತರ ಕೊಡುತ್ತಿದ್ದೇನೆ. ಆದರೂ ಇನ್ನಷ್ಟು ಉತ್ತರ ಬೇಕು ಎಂದು ಅಪೇಕ್ಷಿಸುತ್ತಿದ್ದಾರೆ. ಆದರೆ ಅವರು ಅವರದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ.

84-85 ವರ್ಷದ ನನ್ನ ತಾಯಿಯನ್ನು ಬಿಡದೇ ಐಟಿ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗಿದೆ. ಆ ತಾಯಿಗೆ ಪತಿ ಕೆಂಪೇಗೌಡ ಇಲ್ಲ. ಇರೋದು ಇಬ್ಬರು ಮಕ್ಕಳು ಒಬ್ಬ ಸಂಸತ್ ಸದಸ್ಯ. ಮತ್ತೊಬ್ಬ ಶಾಸಕ. ಆ ತಾಯಿ ಪತಿ ಇಲ್ಲದಿದ್ದಾಗ ಯಾರ ಮೇಲೆ ಅಪೇಕ್ಷೆ ಪಡುತ್ತಾಳೆ. ಮಕ್ಕಳ ಮೇಲೆ ಆಪೇಕ್ಷೆ ಇಟ್ಟುಕೊಳ್ಳುತ್ತಾಳೆ. ಅದು ಸಹಜ. ನಾವು ಬಡತನದಿಂದ ಬಂದವರು ಎಂದು ನಾನು ಎಲ್ಲಿಯೂ ಹೇಲಿಕೊಂಡಿಲ್ಲ. ನಾವು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ನನ್ನ ತಾಯಿ ತನ್ನ ಕಾಲದಲ್ಲಿ ಸಂಪಾದನೆ ಮಾಡಿದ ಎಲ್ಲ ಆಸ್ತಿಯನ್ನು ಸೇರಿ ಅಧಿಕಾರಿಗಳು ಬೇನಾಮಿ ಎಂದು ಪರಿಗಣಿಸಿದ್ದಾರೆ. ನನ್ನನ್ನು ಬೇನಾಮಿದಾರ ಎಂದು ತೀರ್ಮಾನ ಮಾಡಿದ್ದಾರೆ. ನನ್ನ ಕನಕಪುರದ ಮನೆಯಿಂದ ಎಲ್ಲವನ್ನು ಅಟ್ಯಾಚ್ ಮಾಡಿದ್ದಾರೆ.

ಇದರ ವಿರುದ್ಧ ನಾನು ನ್ಯಾಯಾಲಯಕ್ಕೆ ಹೋಗಿದ್ದೇನೆ. ಅದಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಆ ಕಾನೂನು ಹೋರಾಟನಾನು ಮುಂದುವರಿಸುತ್ತೇನೆ. ತಾಯಿ ಮಗನನ್ನು, ಮಗ ತಾಯಿಯನ್ನು ನಂಬದೇ ಹೇಗೆ ಬದುಕು ನಡೆಸಬೇಕು ಎಂಬುದು ತಿಳಿಯುತ್ತಿಲ್ಲ. ಇನ್ನು ಆರ್ಥಿಕ ಅಪರಾಧಿ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾವು ಕಾನೂನು ಹೋರಾಟ ಮಾಡಿ ಅದನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದೆವು. ಹೈಕೋರ್ಟ್ ಅದನ್ನು ರದ್ದು ಮಾಡುವುದಿಲ್ಲ ವಿಚಾರಣೆ ನಡೆಯಲಿ ಎಂದು ಹೇಳಿದೆ. ನಾನು 16 ದಿನ ಆರ್ಥಿಕ ಅಪರಾಧಿ ಕೋರ್ಟ್ ಮುಂದೆ ನಮ್ರತೆಯಿಂದ ಹೋಗಿ ಅವರಿಗೆ ಗೌರವ ಸಲ್ಲಿಸಿ ಇತ್ತರ ಕೊಟ್ಟಿದ್ದೇನೆ. ಈಗ ವಿಚಾರಣೆ ಮಾಡುವಂತೆ ಕೋರ್ಟ್ ಹೇಳಿರುವುದರಿಂದ ನಾನು ಮೇಲ್ಮನವಿಗೆ ಹೋಗಿದ್ದೇನೆ.

ಆರ್ಥಿಕ ಅಪರಾಧ ಕೋರ್ಟ್ನಲ್ಲಿರುವ ವಿಚಾರಣೆಯನ್ನು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿದ್ದಾರೆ. ನಾನು ಇಡಿ ಅದಿಕಾರಿಗಳ ಮುಂದೆ ನ್ಯಾಯಾಲಯಕ್ಕೆ ಹೋಗಿದ್ದೇವೆ. ನನ್ನ ಹಾಗೂ ನನ್ನ ಸ್ನೇಹಿತರ ಮನೆಯಲ್ಲಿ ಸಿಕ್ಕ ಹಣ ಬೇರೆ ಯಾರದ್ದೂ ಅಲ್ಲ ಅದು ನಮ್ಮದೇ ಎಂದು ಆದಾಯ ತೆರಿಗೆ ಇಲಾಖೆ ಮುಂದೆ ಒಪ್ಪಿಕೊಂಡಿದ್ದೇವೆ. ಆ ಹಣ ನಮ್ಮದಲ್ಲ ಎಂದು ಹೇಳುತ್ತಿಲ್ಲ. ಪ್ರಕರಣ ಆಗಿ ಒಂದೂವರೆ ವರ್ಷ ಆದ ಮೇಲೆ, ಚುನಾವಣೆ ಸಂದರ್ಭದಲ್ಲಿ ಇಡಿಗೆ ಪ್ರಕರಣ ನೀಡಲಾಗಿದೆ. ಈ ವಿಚಾರದಲ್ಲಿ ಯಾವ ನಾಯಕರು ಏನೇನು ಮಾತನಾಡಿದ್ದಾರೆ ಎಲ್ಲವೂ ಗೊತ್ತಿದೆ. ಈಗ ಆ ವಿಚಾರ ಮಾತನಾಡುವುದಿಲ್ಲ. ಅವರ ಹೇಸರು ಹೇಳಿ ನಾನು ನನ್ನ ರಕ್ಷಣೆ ಮಾಡಿಕೊಳ್ಳುವುದಿಲ್ಲ. ಬೇರೆ ಪಕ್ಷದ ನಾಯಕರು ಏನೇನು ಹೇಳಿದ್ದಾರೆ ಎಂಬುದೆಲ್ಲ ದಾಖಲೆಗಳಿವೆ. ಮಾಧ್ಯಮಗಳು ಅವುಗಳನ್ನು ತೆಗೆದು ಸಾರ್ವಜನಿಕರಿಗೆ ತಿಳಿಸಿದರೆ ತಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗದ ನ್ಯಾಯ ಒದಗಿಸಿಕೊಂಡಂತೆ ಆಗುತ್ತದೆ ಎಂದು ಮನವಿ ಮಾಡಿಕೊಳ್ಳುತ್ತೇನೆ.

ಈ ಮಧ್ಯೆ ಇಡಿಯಿಂದ ಸಮನ್ಸ್ ಬಂದಾಗ, ಇದು ಆದಾಯ ತೆರಿಗೆ ಪ್ರಕರಣ, ಇಡಿಗೂ ಇದಕ್ಕೂ ಸಂಬಂಧ ಇಲ್ಲ. ನಾವು ಯಾವುದೇ ವಿದೇಶಿ ಹಣ ವ್ಯವಹಾರ ಮಾಡಿಲ್ಲ. ಸರ್ಕಾರಕ್ಕೆ ಮೋಸ ಮಾಡಿಲ್ಲ. ಲಂಚ ಪಡೆದಿಲ್ಲ. ಏನು ತೆರಿಗೆ ಕಟ್ಟಬೇಕೋ ಕಟ್ಟುತ್ತೇವೆ. ಇದರಲ್ಲಿ ಯಾವುದೇ ಪಿತೂರಿ ಇಲ್ಲ. ನಾವು ನಮ್ಮ ಪಕ್ಷದ ಕೆಲಸವನ್ನಷ್ಟೇ ಮಾಡಿದ್ದೇವೆ ಎಂದು ತಿಳಿಸಲು ಕಾಲಾವಕಾಶ ಕೋರಿ ಕೋರ್ಟ್ಗೆ ಹೋದೆ. ಇದನ್ನು ಕೋರ್ಟ್ ರದ್ದು ಮಾಡಿದೆ. ನಮಗೆ ಇನ್ನು ಆದೇಶ ಸಿಕ್ಕಿಲ್ಲ.

ನಿನ್ನೆ ರಾತ್ರಿ ನಾನು ಕುಂಟುಂಬದವರ ಜತೆ ಹೊರಗೆ ಹೋಗಿದ್ದೆವು. 9.35ಕ್ಕೆ ಮನೆಗೆ ಬಂದಾಗ ನಾಲ್ಕರಿಂದ ಐವರು ಇಡಿ ಅಧಿಕಾರಿಗಳು ಸಮನ್ಸ್ ನೀಡಿದರು. ನಾನು ಅದನ್ನು ಗೌರವದಿಂದ ಸ್ವೀಕರಿಸಿದೆ. ನಾನು ಮಧ್ಯಾಹ್ನ 1 ಗಂಟೆಗೆ ಬರಬೇಕು ಎಂದು ಸಮನ್ಸ್ ನಲ್ಲಿ ತಿಳಿಸಿದೆ. ಆದರೆ ನನಗೆ ವೈಯಕ್ತಿಕ ಕೆಲಸ, ಕೌಟುಂಬಿಕ ವಿಚಾರವಾಗಿ ಕೆಲವು ಕಾರ್ಯಗಳಿವೆ. ಗೌರಿ ಹಬ್ಬದ ಸಮಯದಲ್ಲಿ ನಮ್ಮ ಹಿರಿಯರಿಗೆ ಗೌರವ ಸಲ್ಲಿಸುವ ಪದ್ಧತಿ ನಮ್ಮದು. ಅದನ್ನು ನೆರವೇರಿಸಬೇಕಿದೆ. ಹೀಗಾಗಿ ಸ್ವಲ್ಪ ತಡವಾಗಿ ಬರುತ್ತೇನೆ ಎಂದು ಹೇಳಿದ್ದೇನೆ.

ಅವರು ಹೇಗೆ ಕಾನೂನನ್ನು ಉಪಯೋಗಿಸಿಕೊಳ್ಳುತ್ತಿದ್ದಾರೋ ಅದೇರೀತಿ ನಮಗಿರುವ ಕಾನೂನನ್ನು ನಾವು ಉಪಯೋಗಿಸಿಕೊಳ್ಳುತ್ತಿದ್ದೇವೆ. ರಾಜಕೀಯವಾಗಿ ನನ್ನನ್ನು ಮುಗಿಸಲು ನಮ್ಮ ರಾಜಕೀಯ ಸ್ನೇಹಿತರು, ಅಧಿಕಾರಿಗಳು ಷಡ್ಯಂತ್ರ ಮಾಡುತ್ತಿದ್ದಾರೆ. ಅವರು ಮಾಡಲಿ ನಾನು ನನ್ನ ಹೋರಾಟ ಮಾಡುತ್ತೇನೆ. ಆ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಬೇಕು. ಈ ಷಡ್ಯಂತ್ರಕ್ಕೆ ಯಾವ ರೀತಿ ಉತ್ತರ ಕೊಡಬೇಕು ಎಂಬುದುನ್ನು ನಾವು ಚರ್ಚಿಸಬೇಕಿದೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಹಾಗೂ ರಾಜಕಾರಣದಲ್ಲೂ ಎದುರಿಸಬೇಕಿದೆ. ಇದು ರಾಜಕೀಯ ಪ್ರೇರಿತ ಷಡ್ಯಂತ್ರ ಇದಾಗಿದೆ. ನಾನು ಲಂಚ ಪಡೆದಿಲ್ಲ, ಕೊಲೆ ಮಾಡಿಲ್ಲ, ಮಾಡಬಾರದ ಕೆಲಸ ಮಾಡಿಲ್ಲ. ನ್ಯಾಯಬದ್ಧ ವ್ಯವಹಾರ ಮಾಡಿದ್ದೇನೆ, ನ್ಯಾಯಯುತವಾಗಿ ಬದುಕುತ್ತಿದ್ದೇನೆ, ಪ್ರಾಮಾಣಿಕವಾಗಿದ್ದೇನೆ, ಕಾನೂನಿಗೆ ಗೌರವ ಕೊಡಲು ಬದ್ಧನಾಗಿದ್ದೇನೆ. ಈ ಸಂದರ್ಭದಲ್ಲಿ ಈ ಷಡ್ಯಂತ್ರ ಎದುರಿಸಲು ತಯಾರಿದ್ದೇನೆ. ಯಾವುದೇ ತನಿಖೆ ನಡೆಸಿದರೂ ಗೌರವದಿಂದ ನಮ್ರತೆಯಿಂದ ಕಾನೂನಿಗೆ ಗೌರವ ನೀಡುತ್ತೇನೆ.

1 ಗಂಟೆಗೆ ವಿಚಾರಣೆಗೆ ಹಾಜರಾಗಬೇಕು ಅಂತಾ ಹೇಳಿದ್ರು. 1 ಗಂಟೆಗೆ ಆಗಲ್ಲ. ನಾನು ದೆಹಲಿಗೆ ಹೋರಡುತ್ತಿದ್ದೇನೆ. ಖಂಡಿತವಾಗಿ ನಾನು ಹೋಗಿ ಕಾನೂನು ಚೌಕಟ್ಟಿನಲ್ಲಿ ಇರುವ ಅವಕಾಶವನ್ನು ಕೇಳುತ್ತೇನೆ. ಹೈಕೋರ್ಟ್ ನಲ್ಲೂ ಮನವಿ ಮಾಡಿದ್ದೇನೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಧ್ಯಾಹ್ನ ವಿಚಾರಣೆ ಮಾಡುವುದಾಗಿ ಹೇಳಿದ್ದಾರೆ. ಬೇರೆ ಕಾನೂನಿನ ದಾರಿಯನ್ನು ಪರಿಗಣಿಸುತ್ತೇವೆ. ಈ ವಿಚಾರದಲ್ಲಿ ನ್ಯಾಯಮೂರ್ತಿಗಳ ಆದೇಶಕ್ಕೆ ಗೌರವ ನೀಡುತ್ತೇನೆ.

ನಾನು ನನ್ನ ಕುಟುಂಬದ ಕಾರ್ಯವಾಗಿ ಎಲ್ಲಿ ಹೋದರೂ ಅದನ್ನು ತಿರುಚಲಾಗಿದೆ. ನನ್ನ ಹೆಂಡತಿ ಅಳುತ್ತಾ ಕಾಲುಕಟ್ಟಿಕೊಂಡಿದ್ದಾರೆ ಎಂದೆಲ್ಲಾ ಬಿಂಬಿಸಲಾಗುತ್ತಿದೆ. ನಾನು ಎಲ್ಲೇ ಹೋದರೂ ನನ್ನನ್ನು ಹಿಂಬಾಲಿಸಿ ನಾನು ಎಲ್ಲಾದರು ಪರಾರಿಯಾಗಿಬಿಡುತ್ತೇನೆ ಎಂಬಂತೆ ಹಿಂಬಾಲಿಸುತ್ತಿದ್ದಾರೆ. ನಾನು ಯಾರಿಗೂ ಹೆದರುವ ಅಗತ್ಯ ಇಲ್ಲ. ಹೆದರಿ ಒಡಿಹೋಗುವ ಕೆಂಪೇಗೌಡನ ಮಗ ಅಲ್ಲ. ನಾನು ಎಲ್ಲವನ್ನು ಧೇರ್ಯವಾಗಿ ಎದುರಿಸುತ್ತೇನೆ. ರಾಜಕೀಯವಾಗಿ, ಕಾನೂನಾತ್ಮಕವಾಗಿ ಹಾಗೂ ಸಾಮಾಜಿಕವಾಗಿ ನಾನು ಸವಾಲನ್ನು ಎದುರಿಸುತ್ತೇನೆ. ಅವರು ಗೌರವದಿಂದ ಸಮನ್ಸ್ ನೀಡಿದ್ದಾರೆ. ನಾನು ಕೂಡ ಸಮನ್ಸ್ ಗೆ ಗೌರವ ನೀಡಿ ವಿಚಾರಣೆಗೆ ಹಾಜರಾಗುತ್ತೇನೆ. ಸಮನ್ಸ್ ನಲ್ಲಿ ಏನೇನಿದೆ ಎಂಬ ಗೌಪ್ಯ ವಿಚಾರದ ಬಗ್ಗೆ ನಾನೀಗ ಮಾತನಾಡುವುದಿಲ್ಲ.

ನನ್ನ, ನನ್ನ ತಮ್ಮ ಹಾಗೂ ಸ್ನೇಹಿತರ ಮನೆಯಲ್ಲಿ ಸಿಕ್ಕ 6,7 ಕೋಟಿ ಹಣ ಇದ್ದಿದ್ದು ಕೇಸ್ ಇದೆ. ಇರಲಿ ಅದಕ್ಕೆ ಉತ್ತರ ನೀಡುತ್ತೇನೆ. ಆದರೆ ಇತ್ತೀಚೆಗೆ ಆಪರೇಷನ್ ಕಮಲ ನಡೆಯಿತಲ್ಲಾ, ಅದರಲ್ಲಿ ಒಬ್ಬೊಬ್ಬ ಶಾಸಕನಿಗೆ 20, 30 ಕೋಟಿ ನೀಡುವ ಚರ್ಚೆಯಾಯಿತು. ಪೇಪರ್ ಟೀವಿಯಲ್ಲಿ ಬಂತಲ್ಲ. ಅವೆಲ್ಲಾ ಏನಾಯ್ತು. ಸದನದಲ್ಲಿ ಶ್ರೀನಿವಾಸ ಗೌಡರು ಬಿಜೆಪ ನಾಯಕರು ನಮಗೆ ಐದು ಕೋಟಿ ತಂದು ಕೊಟ್ಟಿದ್ದರು ಎಂದು ಆರೋಪ ಮಾಡಿದ್ದರಲ್ಲ ಆ ವಿಚಾರ ಏನಾಯ್ತು? ಅವರಿಗೆ ಯಾಕೆ ಇಡಿಯಿಂದ ನೋಟೀಸ್ ಹೋಗಿಲ್ಲ. ಆದಾಯ ತೆರಿಗೆ ಯಾಕೆ ಪ್ರಶ್ನಿಸಿಲ್ಲ? ಯಾಕೆ ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯಾನಾ?

ಹಿಂದೆ ಗೋವಿಂದರಾಜ್ ಅವರ ಡೈರಿ ಪ್ರಕರಣದಲ್ಲಿ ನನಗೆ, ಮಹದೇವಪ್ಪ ಸೇರಿದಂತೆ ನಮ್ಮ ನಾಯಕರಿಗೆ ನೋಟೀಸ್ ಕೊಟ್ಟರಲ್ಲಾ, ಈಗ ಇಷ್ಟು ದಿನ ಆಪರೇಷನ್ ಕಮಲದ ವಿಚಾರವಾಗಿ ಯಾಕೆ ಯಾರಿಗೂ ನೋಟೀಸ್ ಕೊಟ್ಟಿಲ್ಲ? ನನಗೆ, ನನ್ನ ಕುಟುಂಬ, ಪಕ್ಷಕ್ಕೆ ಏನೆಲ್ಲಾ ತೇಜೋವಧೆ ಮಾಡಲು ಸಾಧ್ಯನೋ ಅದು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾನು ಕಾನೂನಿನ ಚೌಕಟ್ಟಲ್ಲಿ ನಮ್ರತೆಯಿಂದ ಇಡಿ ಆಗಿರಲಿ ಅಥವಾ ಬೇರೆ ಯಾವುದೇ ಸಂಸ್ಥೆಯಾಗಿರಲಿ ಅವರಿಗೆ ಉತ್ತರ, ಸಹಕಾರ ನೀಡಲು ತಯಾರಾಗಿದ್ದೇನೆ ಎಂದು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ.