ಸಿದ್ದರಾಮಯ್ಯಗೆ ನಾನು ಟಾಂಗ್ ಕೊಟ್ಟಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು: ಪಕ್ಷದ ಹುದ್ದೆ ವಿಚಾರವಾಗಿ ನಾನು ಕೊಟ್ಟ ಹೇಳಿಕೆಯನ್ನು ತಿರುಚಲಾಗಿದೆ. ಸಿದ್ದರಾಮಯ್ಯನವರ ಕೈಕೆಳಗೆ ಕೆಲಸ ಮಾಡಿದ್ದು ಅವರಿಗೆ ಟಾಂಗ್ ಕೊಡುವ ಅಗತ್ಯ ನನಗೆ ಇಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರ ಜತೆ ಮಾತನಾಡಿದ ಅವರು ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು ಹೀಗೆ…

‘ಮೊನ್ನೆ ನಾನು ಪಕ್ಷದ ಹುದ್ದೆ ವಿಚಾರವಾಗಿ ಕೊಟ್ಟ ಹೇಳಿಕೆಯನ್ನು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿರುವುದಾಗಿ ತಿರುಚಿ ಗೊಂದಲ ಮೂಡಿಸಲಾಗಿದೆ. ನಮ್ಮ ಪಕ್ಷದ ನಾಯಕರಿಗೆ ಟಾಂಗ್ ಕೊಡುವ ಅಗತ್ಯ ನನಗಿಲ್ಲ. ನನಗೆ ಅಷ್ಟೂ ಸಾಮಾನ್ಯ ಪ್ರಜ್ಞೆ ಇಲ್ಲವೇ? ನಾನು ಒಬ್ಬ ನಾಯಕರ ಕೈಕೆಳಗೆ ಕೆಲಸ ಮಾಡಿದರೆ ಅವರನ್ನು ಗೌರವಿಸುತ್ತೇನೆ. ಬಂಗಾರಪ್ಪ, ಎಸ್.ಎಂ ಕೃಷ್ಣ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಯಾರೇ ಆದರೂ ಅವರ ಬಗ್ಗೆ ನನಗೆ ಉಪಕಾರ ಸ್ಮರಣೆ ಇದೆ. ನನಗೆ ಯಾರು ಸಹಾಯ ಮಾಡಿರುತ್ತಾರೋ ಅವರಿಗೆ ದ್ರೋಹ ಮಾಡುವುದು ಟಾಂಗ್ ಕೊಡುವುದು ಮಾಡುವುದಿಲ್ಲ.

ನನ್ನ ರಾಜಕೀಯ ಏನೇ ಇದ್ದರು ವಿರೋಧ ಪಕ್ಷದವರ ಮೇಲೆ ಮಾಡ್ತೀನಿ. ನಮ್ಮ ಪಕ್ಷದ ನಾಯಕರ ಕೆಳಗೆ ಕೆಲಸ ಮಾಡಿ ಅವರಿಗೆ ಟಾಂಗ್ ಕೊಡುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯನವರಿಗೆ ಕಾರು, ಮನೆ, ರಾಜಕೀಯ ಇಲ್ಲವೇ? 10 ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಗಳಾಗಿ, ಶಾಸಕಾಂಗ ಪಕ್ಷದ ನಾಯಕರಾಗಿ ನಮ್ಮ ಜತೆ ಕೆಲಸ ಮಾಡಿದ್ದಾರೆ. ಅವರಿಗೆ ನಾನೇಕೆ ಟಾಂಗ್ ನೀಡಲಿ? ವಿರೋಧ ಪಕ್ಷದಲ್ಲಿ ನಾನು ಯಾರಿಗೆ ಟಾಂಗ್ ಕೊಡಬೇಕೋ ಅವರಿಗೆ ಕೊಟ್ಟಿದ್ದೇನೆ. ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ನಮಗೆ ಭಿನ್ನಾಭಿಪ್ರಾಯ ಇತ್ತು. ಆಗ ಹೋರಾಟ ಮಾಡಿದ್ದೇವೆ. ಈಗ ಅವರ ಜತೆ ಕೆಲಸ ಮಾಡಿದ ಮೇಲೆ ಅವರ ಬಗ್ಗೆ ಮಾತನಾಡಲು ತಲೆ ಕೆಟ್ಟಿದೆಯಾ? ನಮ್ಮ ನಡುವೆ ಏನೇ ರಾಜಕೀಯ ವ್ಯತ್ಯಾಸ ಬಂದರೂ ನಮ್ಮ ಪಕ್ಷದ ನಾಯಕರ ಬಗ್ಗೆ ನಾನು ಆ ರೀತಿ ಮಾತನಾಡುವುದಿಲ್ಲ.

ಪ್ರವಾಹ ಪೀಡಿತ ರಾಜ್ಯಕ್ಕೆ ಕೂಡಲೇ ಅನುದಾನ ಬಿಡುಗಡೆಗೆ ಸಿಎಂ ಮನವಿ!

ನವದೆಹಲಿ: ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಪ್ರವಾಹದಿಂದ ತತ್ತರಿಸಿರುವ ರಾಜ್ಯಕ್ಕೆ ಪರಿಹಾರ ಕಾರ್ಯಗಳಿಗಾಗಿ ಕೂಡಲೇ ಅನುದಾನ ಬಿಡುಗಡೆಗೆ ಮಾಡುವಂತೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಪ್ರಧಾನಿಯವರು ಕೂಡಲೇ ನಷ್ಟದ ಅಂದಾಜು ಮಾಡಲು ಕೇಂದ್ರ ಸರ್ಕಾರದ ಅಧ್ಯಯನ ತಂಡವನ್ನು ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕದ ಪ್ರವಾಹ ಪರಿಸ್ಥಿತಿಯ ಗಂಭೀರತೆಯ ಕುರಿತು 45 ನಿಮಿಷಗಳ ಕಾಲ ಚರ್ಚಿಸಿ, ಪ್ರಧಾನಿಯವರಿಗೆ ಮನವರಿಕೆ ಮಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ನಷ್ಟ ಸಂಭವಿಸಿದೆ. ಪುನರ್‌ ನಿರ್ಮಾಣ ಮತ್ತು ಪರಿಹಾರ ಕಾರ್ಯಗಳಿಗೆ ಹೆಚ್ಚುವರಿ ಅನುದಾನ ಅಗತ್ಯವಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಉಪಸ್ಥಿತರಿದ್ದರು.

ಕನ್ನಡಿಗರ ಸ್ವಾಭಿಮಾನ, ಗೌರವಕ್ಕೆ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸುವೆ: ಸಿಎಂ

ಬೆಂಗಳೂರು: ಕನ್ನಡಿಗರ ಸ್ವಾಭಿಮಾನ, ಗೌರವ ಮತ್ತು ಉದ್ಯೋಗಾವಕಾಶಗಳಿಗೆ ಧಕ್ಕೆ ಬರದಂತೆ ಎಚ್ಚರ ವಹಿಸಲು ನಾವು ಬದ್ಧರಾಗಿದ್ದೇವೆ ಎಂದು ಸಿಎಂ ಬಿಎಸ್ವೈ ಘೋಷಿಸಿದರು. ಜೊತೆಗೆ ಇತರರಿಗೂ ಅವಕಾಶಗಳನ್ನು ಕಲ್ಪಿಸಲು ನಾವು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಡಗರ ಸಂಭ್ರಮದಿಂದ 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ‌ ಧ್ವಜಾರೋಹಣ ನೆರವೇರಿಸಿದರು. ಧ್ವಜರೋಹಣ ವೇಳೆ ಹೆಲಿಕಾಪ್ಟರ್ ನಿಂದ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಪಣೆ ನೆರವೇರಿಸಲಾಯಿತು. ನಂತರ ತೆರೆದ ವಾಹನದಲ್ಲಿ ಪೊಲೀಸ್ ಹಾಗೂ ಸೇನಾ ಪಡೆಗಳಿಂದ ಸಿಎಂ ಗೌರವ ವಂದನೆ ಸ್ವೀಕಾರ ಮಾಡಿದರು.

ನಂತರ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಸಿಎಂ, ಹೊರ ರಾಜ್ಯ ಹೊರ ದೇಶಗಳಿಂದ ಬಂದು ರಾಜ್ಯದಲ್ಲಿ ನೆಲೆಸಿರುವ ಜನ ಇಲ್ಲಿನ ಭಾಷೆ ಸಂಸ್ಕೃತಿ ಮತ್ತು ಜೀವನ ವಿಧಾನಗಳಿಗೆ ಹೊಂದಿಕೊಂಡು ಕನ್ನಡತನವನ್ನು ಗೌರವಿಸುವುದಲ್ಲದೆ ತಮ್ಮತನವನ್ನು ವಹಿಸಿಕೊಳ್ಳಿ ಎಂದು ಕರೆ ನೀಡಿದರು.
ಈ ವಿಚಾರದಲ್ಲಿ ಕನ್ನಡಿಗರು ಇತರರಿಗೆ ಮಾದರಿಯಾಗಿದ್ದಾರೆ ಕನ್ನಡಿಗರು ನಿಂತ ನೆಲ ಮತ್ತು ಅಲ್ಲಿನ ಜನರ ಜೊತೆ ಹೊಂದಿಕೊಂಡು ಬಾಳುತ್ತಿದ್ದಾರೆ ಇದು ಎಲ್ಲರಿಗೂ ಅನುಕರಣೀಯ ಮಾದರಿಯಾಗಿದೆ ಎಂದ್ರು.

ಕರ್ನಾಟಕ ರಾಜ್ಯ ಅತಿವೃಷ್ಟಿ-ಅನಾವೃಷ್ಟಿ ಗಳ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದು ಎರಡು ಪರಿಸ್ಥಿತಿಗಳನ್ನು ಎದುರಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ನಲವತ್ತೈದು ವರ್ಷಗಳಲ್ಲಿ ಕಂಡರಿಯದ ಪ್ರಕೃತಿ ವಿಕೋಪ ಎದುರಾಗಿದೆ 22 ಜಿಲ್ಲೆಗಳ ವ್ಯಾಪ್ತಿಯಲ್ಲಿ 103 ತಾಲೂಕುಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ, ಪ್ರವಾಹದಿಂದ 61 ಮಂದಿ ಈವರೆಗೂ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ 48 ಗಂಟೆಗಳ ಒಳಗಾಗಿ 5ಲಕ್ಷ ರೂ ಗಳಂತೆ ಪರಿಹಾರ ನೀಡಲಾಗುತ್ತಿದೆ, ಸಂತ್ರಸ್ತರಿಗೆ ತಕ್ಷಣಕ್ಕೆ 10 ಸಾವಿರ, ಮನೆ ಕಳೆದುಕೊಂಡವರಿಗೆ 5 ಲಕ್ಷ, ಮನೆ ದುರಸ್ತಿಗೆ 1 ಲಕ್ಷ ನೆರವು ಘೋಷಣೆ ಮಾಡಿದ್ದೇನೆ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ರಾಯಚೂರು, ಯಾದಗಿರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಮೈಸೂರು ಮತ್ತು ಗದಗ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಂಡಿದ್ದೇನೆ ವೈಮಾನಿಕ ಸಮೀಕ್ಷೆ ಹಾಗೂ ಸ್ಥಳ ಪರಿಶೀಲನೆಗಳನ್ನು ಮಾಡಿ ಸಂತ್ರಸ್ತರಿಗೆ ತಡವಿಲ್ಲದೆ ಪರಿಹಾರ ಒದಗಿಸಲು ಪ್ರಯತ್ನಿಸಿದ್ದೇನೆ ಎಂದು ನೆರೆಹಾನಿ ಪರಿಹಾರ ಕಾರ್ಯಾಚರಣೆ ಕುರಿತು ಪ್ರಸ್ತಾಪಿಸಿದರು.

ನಾ‌ನು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿ ಮೂರು ವಾರವಾಗಿದೆ ರಾಜ್ಯ ಬರ ಮತ್ತು ಭಾರೀ ಪ್ರವಾಹದಿಂದ ತತ್ತರಿಸಿದೆ, ನಾನು ನೀವೆಲ್ಲರೂ ಜೊತೆಗೂಡಿ ಸಂತ್ರಸ್ತರ ನೆರವಿಗೆ ನಿಲ್ಲೋಣ ಎಂದು ಕರೆ ನೀಡಿದರು.

ನೆರೆಹಾ‌ನಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿದೆ, ಸೇನೆ, ವಿಪತ್ತು ನಿರ್ವಹಣಾ ಪಡೆ, ಸೇನಾ ಹೆಲಿಕ್ಯಾಪ್ಟರ್, ರಕ್ಷಣಾ ದೋಣಿಗಳ ಸೌಲಭ್ಯ ಒದಗಿಸಿದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ, ನಿರ್ಮಲಾ ಸೀತಾರಾಮನ್, ಸದಾನಂದಗೌಡ, ಪ್ರಹ್ಲಾದ್ ಜೋಷಿ ಭೇಟಿ ನೀಡಿ ಹೆಚ್ಚಿನ ಪರಿಹಾರದ ಭರವಸೆ ನೀಡಿದ್ದಾರೆ. ನೆರೆಹಾನಿ ವರದಿ ಪಡೆದು ಹೆಚ್ಚಿನ ನೆರವಿಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.

ಅನ್ನದಾತ ರೈತರ ಹಿತರಕ್ಷಣೆಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ ಅತಿವೃಷ್ಟಿ-ಅನಾವೃಷ್ಟಿ ಮಾರುಕಟ್ಟೆ ಸಮಸ್ಯೆ ಮತ್ತಿತರ ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ಕಂಗಾಲಾಗಿರುವ ರೈತರಲ್ಲಿ ನವ ಚೈತನ್ಯ ತುಂಬುವ ಆಶ್ರಯ ನನ್ನ ಸರ್ಕಾರದ ಎಂದು ರೈತ ಸಮುದಾಯಕ್ಕೆ ಅಭಯ ನೀಡಿದರು.

ಸಂಕಷ್ಟದಲ್ಲಿರುವ ನೇಕಾರರು ಮತ್ತು ಮೀನುಗಾರರ ಸಾಲ ಮನ್ನಾ ಮಾಡುವ ಮೂಲಕ ಅವರ ಬದುಕಿನಲ್ಲಿ ಸಂಕಷ್ಟವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದರು.

ಬಹುಜನ ಹಿತಾಯ ಬಹುಜನ ಸುಖಾಯ ಎಂಬಂತೆ ಜನರ ಹಿತಕ್ಕಾಗಿ ಸಮೃದ್ಧಿ ಶಾಂತಿಗಾಗಿ ನಿಮ್ಮ ಸರ್ಕಾರ ಶ್ರಮಿಸಲಿದೆ ಸರ್ಕಾರದ ಅಧ್ಯತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಿದೆ, ಪ್ರಧಾನಿ ಮೋದಿ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸಲು ಕನಸನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರ ರೈತರಿಗೆ ಅಗತ್ಯ ಬೆಂಬಲ, ಮಾರ್ಗದರ್ಶನ ನೀಡಲಿದೆ. ಗ್ರಾಮೀಣ ಭಾಗದಲಿ ಶುದ್ಧ ಕುಡಿಯುವ ನೀರು, ತ್ಯಾಜ್ಯ ವಿಲೇವಾರಿಗೆ, ಮೂಲಸೌಕರ್ಯ ಕಲ್ಪಿಸಲು ಆಧ್ಯತೆ ನೀಡುವುದಾಗಿ ಸಿಎಂ ಪ್ರಕಟಿಸಿದರು.

2019 ರ ಸೆಪ್ಟೆಂಬರ್ ಗೆ ಕೈಗಾರಿಕಾ ನೀತಿ ಮುಕ್ತಾಯಗೊಳ್ಳಲಿದ್ದು ಎರಡು ಮತ್ತು ಮೂರನೇ ಹಂತದ ಕೇಂದ್ರಗಳಿಗೆ ಬಂಡವಾಳ ಆಕರ್ಷಣೆ ಮಾಡುವ ವಿನೂತನ ತಂತ್ರಜ್ಞಾನ, ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅವಕಾಶವಿರುವಂತೆ ನೂತನ ಕೈಗೊಳ್ಳುವ ನೀತಿ ರೂಪಿಸುವ ಭರವಸೆ ನೀಡಿದರು.

ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಮಾಡುವುದು ನನ್ನ ಉದ್ದೇಶ ಕ್ಯಾಲಿಫೋರ್ನಿಯ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಸಿಲಿಕಾನ್ ವ್ಯಾಲಿಗಳಂತೆ ಬೆಂಗಳೂರು ಅಭಿವೃದ್ಧಿಯಾಗಬೇಕು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಐಟಿ-ಬಿಟಿ ವಲಯ ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿದ್ದು, ಈ ವಲಯಗಳ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಬೆಂಗಳೂರಿನ ಹೊರಗೂ ಈ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಆಧ್ಯತೆ ನೀಡಲಿದೆ ಎಂದರು.

ದುರ್ಬಲ ವರ್ಗದವರಿಗೂ ಸ್ವಾಭಿಮಾನದ ಬದುಕು‌ಕಟ್ಟಿಕೊಡುವ ಮಹದಾಶಯವನ್ನು ನಮ್ಮ ಸರ್ಕಾರ ಹೊಂದಿದೆ, ಪರಿಶಿಷ್ಟ ಜಾತಿ,ಪಂಗಡ, ಅಲ್ಪಸಂಖ್ಯಾತ, ಮಹಿಳೆ,ಮಕ್ಕಳು,ವಿಕಲಚೇತನರು,ಹಿರಿಯ ನಾಗರಿಕರು,ಎಲ್ಲರಿಗೂ ಸುರಕ್ಷತೆಯ ಭಾವ ಮೂಡಿಸುವುದರೊಂದಿಗೆ ಗೌರವಯುತ ಬದುಕು ನಡೆಸಲು ಉತ್ತೇಜನ ನೀಡುವ ಕಾರ್ಯಕ್ರಮ ರೂಪಿಸಲಿದೆ ಎಂದರು.

ಕಾಶ್ಮೀರ ವಿಚಾರದಲ್ಲಿ ಮೋದಿ ಕೈಗೊಂಡ ಚರಿತ್ರಾರ್ಹ ನಿರ್ಧಾರದಿಂದ ಭಾರತೀಯ ಇತಿಹಾಸದಲ್ಲಿ ಮೋದಿ ಹೆಸರು ಸುವರ್ಣಾಕ್ಷರದಲ್ಲಿ ದಾಖಲಾಗುವಂತೆ ಮಾಡಿದೆ. ಶ್ಯಾಮ್ ಪ್ರಶದ್ ಮುಖರ್ಜಿ,ವಾಜಪೇಯಿ ಅವರಂತಹ ಧೀಮಂತ ನಾಯಕರ ಕನಸು ಮತ್ತು ಅಸಂಖ್ಯಾತ ರಾಷ್ಟ್ರಾಭಿಮಾನಿಗಳ ಆಸೆ ನೆರವೇರಿದೆ.ಅಖಂಡ ಭಾರತದ ಪರಿಕಲ್ಪನೆ ಪರಿಪುರ್ಣಗೊಂಡಂತಾಗಿದೆ ಎಂದರು.

ರವಿ ಕಾಣದನ್ನ ಕಲಾವಿದ ಕಂಡ!

ಬೆಂಗಳೂರು: ಡೇರಾ ಆರ್ಟ್ ಸ್ಟುಡಿಯೋ ಪ್ರಸ್ತುತ ಪಡೆಸುತ್ತಿರುವ ಸಿಟಿ ಲೈಟ್ಸ್ ಎಂಬ ಶಿರ್ಷಿಕೆಯಡಿಯಲ್ಲಿ ಚಿತ್ರಕಲೆಗಳ ಪ್ರದರ್ಶನ ನಡೆಯಲಿದೆ. ಇವು ಖ್ಯಾತ ಚಿತ್ರಗಾರ ಎಸ್.ಎ. ವಿಮಲನಾಥನ್ ಅವರ ಕುಂಚದಲ್ಲಿ ಅರಳಿದ ಕಲೆಗಳಾಗಿವೆ. 2019 ಆಗಸ್ಟ್ 2 ರಿಂದ 7ರವರೆಗೂ ನಗರದ ಚಿತ್ರಕಲಾ ಪರಿಷತ್‍ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಈ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ 12.30 ಕ್ಕೆ ಜರಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನ ಚಿತ್ರಕಲಾ ಪರಿಷತ್ ಬೆಂಗಳೂರು ಅಧ್ಯಕ್ಷರಾದ ಡಾ. ಬಿ.ಎಲ್ ಶಂಕರ್ ನೇರವೆರಿಸಿದರು. ಮುಖ್ಯ ಅತಿಥಿಗಳಾಗಿ ಕಮಾಲ್ ಕಪೂರ್ ವ್ಯವಸ್ಥಾಪಕ ನಿರ್ದೇಶಕರು ರೆಕ್ಸ್ ಥೇಟರ್ ಬೆಂಗಳೂರು ಹಾಗೂ ಸುನೀಲ್ ಫರ್ನಾಂಡೀಸ್ ಪ್ರಾಂಶುಪಾಲರು ಶೆಂಟ್ ಜೋಷಪ್ ಬಾಯ್ಸ್ ಹೈಸ್ಕೂಲ್, ಸುಭಾಷಿಶ್ ಮಂಡಲ್ ಡಿಜೈನ್ ನಿರ್ದೇಶಕರು ಜನ್ಸಲರ್ ಭಾಗವಹಿಸಿದ್ದರು.

ಪ್ರದರ್ಶನದಲ್ಲಿ ಸಂದೇಶ ಸಾರುವ ಚಿತ್ರಗಳು ಕಾಣಬಹುದಾಗಿದೆ. 50ಕ್ಕೂ ಹೆಚ್ಚು ವರ್ಣಚಿತ್ರಗಳು ಪ್ರದರ್ಶನದಲ್ಲಿ ಇಡಲಾಗಿದೆ. ಒಂದೊಂದು ಚಿತ್ರ ಒಂದೂಂದು ಸಂದೇಶ ಸಾರುತ್ತದೆ. ಅದರಲ್ಲೂ ಪ್ರಮುಖವಾಗಿ ಅಧುನಿಕರಣವನ್ನ ದೂರದೆ ನಗರಗಳ ಬೆಳವಣೆಗೆ ಯಾವ ಹಂತಕ್ಕೆ ತಲುಪಿದೆ ಎಂಬುದು ಕಲಾವಿದರು ಅಚ್ಚುಕಟ್ಟಾಗಿ ಚಿತ್ರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದೆಡೆ ಬೆಳೆಯುತ್ತಿರುವ ನಗರಗಳು, ಆಕಾಶಕ್ಕೆ ಮುತ್ತಿಡುವ ಬಿಲ್ಡಿಂಗ್‍ಗಳು, ಮತ್ತೊಂದೆಡೆ ದೊಡ್ಡ ದೊಡ್ಡ ರೆಸ್ಟೋರೆಂಟ್‍ಗಳು ಇವುಗಳ ನಡುವೆ ಆರೋಗ್ಯ ನೀಡುವ ಹಸಿರು ಮಾತ್ರ ಕಾಣೆಯಾಗುತ್ತಿದೆ. ಹಸಿರು ನಿಧಾನಕ್ಕೆ ಹಿಂದೆ ವಾಲುತ್ತಿದ್ದರೆ, ಸಿಲಿಕಾನ್ ಸಿಟಿಗಳು ಕಲರ್ ಫುಲ್ ಆಗಿದೆ ಎಂದು ಕಲಾವಿದರು ವ್ಯಂಗ್ಯವಾಗಿ ತಿಳಿಸಿದ್ದಾರೆ.

ಬಾಯಲ್ಲಿ ನೀರೂರಿಸೋ ಹಾಲಿನ ರುಚಿಯ ಜೊತೆ… ಡುಮಾಂಟ್..!

ಬೆಂಗಳೂರು: ಇದುವರೆಗೆ ಮಾರ್ಕೆಟ್‍ನಲ್ಲಿ ವಿವಿಧ ಬಗೆಯ ಮಿಲ್ಕ್ ಶೇಕ್ಸ್, ಡ್ರಿಂಕ್ಸ್ & ಐಸ್‍ಕ್ರೀಮ್‍ಗಳು ಬಂದಿವೆ. ಅದ್ಭುತವಾದ ರುಚಿ ಹಾಗೂ ಸ್ವಚ್ಛವಾದ ಹಾಲಿನ ಪ್ಲೇವರ್ ಹೊಂದಿರುವಂತಹವು ಇಲ್ಲವೆಂದೇ ಹೇಳಬಹುದು. ಇದೀಗ ಆ ಸ್ಥಾನವನ್ನು ತುಂಬಲು ಹೊಚ್ಚಹೊಸ ರುಚಿಯೊಂದಿಗೆ ಐಸ್‍ಕ್ರೀಮ್ ಮತ್ತು ಮಿಲ್ಕ್ ಶೇಕ್‍ಗಳೊಂದಿಗೆ ಮಾರುಕಟ್ಟೆಗೆ ಬಂದಿದೆ ಡುಮಾಂಟ್.

ಮಾವಿನ ಸ್ವಾದ ಸವಿಯಬೇಕಾದರೆ ಮಾವಿನ ಹಣ್ಣನ್ನೇ ತಿನ್ನಬೇಕು. ಆದರ ಬದಲಾಗಿ ಕೃತಕ ಮಾವಿನ ಪ್ಲೇವರ್ ತಿಂದ್ರೆ ಮಾವು ತಿಂದ ಅನುಭವ ಆಗೋದಿಲ್ಲ. ಐಸ್‍ಕ್ರೀಮ್‍ನ್ನ ತಿನ್ನೋವಾಗಲೂ ಇಷ್ಟಪಟ್ಟು ಇದೇ ಪ್ಲೇವರ್ ಬೇಕು ಅಂತ ತಗೊಳ್ತೇವೆ. ಆದ್ರೆ ಅವು ಸಂಪೂರ್ಣ ಆ ಪ್ಲೇವರ್ ನಲ್ಲಿ ಇರೋದಿಲ್ಲ. ಬಹುತೇಕ ಸಲ ಮಿಲ್ಕ್ ಶೇಕ್ ಕುಡಿದಾಗ್ಲೂ ಏನೋ ಕುಡಿದೆವು ಅಂತ ಅಂದ್ಕೊಬೇಕಷ್ಟೇ.
ಆದ್ರೆ ನೇರವಾಗಿ ರೈತರಿಂದ ಶೇಖರಿಸಿದ ಹಣ್ಣು, ಹಾಲಿನಿಂದ ಐಸ್‍ಕ್ರೀಮ್, ಮಿಲ್ಕ್ ಶೇಕ್ ತಯಾರಿಸಿ ಗ್ರಾಹಕರಿಗೆ ಒದಗಿಸಲು ಮುಂದಾಗಿದೆ ಡುಮಾಂಟ್. ಬೆಂಗಳೂರಿನ ಕೋಡಿಹಳ್ಳಿಯ ಸ್ಟರ್‍ಲಿಂಗ್ ಮ್ಯಾಕ್ ಹೋಟೆಲ್‍ನಲ್ಲಿ ಡುಮಾಂಟ್ ಐಸ್‍ಕ್ರೀಮ್ ಅಂಡ್ ಮಿಲ್ಕ್ ಶೇಕ್ ಪ್ರೀ ಲಾಂಚ್ ಕಾರ್ಯಕ್ರಮ ನಡೆಯಿತು. ಮ್ಯೂಜಿಕ್ ವಿತ್ ಮಿಲ್ಕ್ ಶೇಕ್ ಹೆಸರಿನಲ್ಲಿ ನಡೆದ ವಿನೂತನ ಕಾರ್ಯಕ್ರಮ ನಗರದ ಜನತೆಯನ್ನ ಆಕರ್ಷಿಸಿತು.

ಡುಮಾಂಟ್ ಐಸ್‍ಕ್ರೀಮ್ ಅಂಡ್ ಮಿಲ್ಕ್ ಶೇಕ್ ಪ್ರೀ ಲಾಂಚ್ ಕಾರ್ಯಕ್ರಮದಲ್ಲಿ ಸಂಸ್ಥೆ ಎಂಡಿ ಸುನೀಲ್ ಮಾತನಾಡಿ ದಕ್ಷಿಣ ಭಾರತದಲ್ಲಿ ಎಲ್ಲೂ ಸಿಗದ ಸುಮಾರು 15 ಬಗೆಯ ಪ್ಲೇವರ್‍ಗಳನ್ನು ಡುಮಾಂಟ್ ಪರಿಚಯಿಸುತ್ತಿದೆ. ಒಂದ್ಕಡೆ ಐಸ್ ಕ್ರೀಮ್, ಮತ್ತೊಂದ್ಕಡೆ ಮಿಲ್ಕ್ ಶೇಕ್ ಸಹ ತಯಾರಿಸುತ್ತಿರೋ ಸಂಸ್ಥೆಗಳು ಗುಣಮಟ್ಟ ಕಾಯ್ದುಕೊಳ್ತಿರೋ ಬೆರಳೆಣಿಕೆಯಷ್ಟು ಸಂಸ್ಥೆಗಳಲ್ಲಿ ಡುಮಾಂಟ್ ಸಹ ಒಂದು. ರುಚಿ, ಶುಚಿ, ಕ್ವಾಲಿಟಿ, ಕ್ವಾಂಟಿಟಿ ವಿಷಯದಲ್ಲಿ ಎಳಷ್ಟೂ ರಾಜಿಯಾಗದೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಡುಮಾಂಟ್. ಬೆಂಗಳೂರು, ಹೈದರಾಬಾದ್ ಮತ್ತು ವಿಜಯವಾಡದಲ್ಲಿ ಇದೇ ತಿಂಗಳ 19 ರಿಂದ ಸ್ಟೋರ್‍ಗಳು ಗ್ರಾಹಕರ ಸೇವೆಗೆ ಲಭ್ಯವಿರಲಿವೆ ಎಂದು ತಿಳಿಸಿದರು.

ರೈತರ ಬಗ್ಗೆ ಮೃದು ಧೋರಣೆ ಇರಲಿ: ಬ್ಯಾಂಕರ್ ಗಳಿಗೆ ಸಿಎಂ ಸಲಹೆ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಬ್ಯಾಂಕರುಗಳೊಂದಿಗೆ ಚರ್ಚೆ ನಡೆಸಿದರು. ಈ ಸಭೆಯಲ್ಲಿ 14 ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಾಲ ಮನ್ನಾ ಯೋಜನೆಯಡಿ 4 ವರ್ಷಗಳಲ್ಲಿ ಹಂತ ಹಂತವಾಗಿ ಬ್ಯಾಂಕುಗಳಿಗೆ ಮೊತ್ತ ಪಾವತಿಸುವುದಾಗಿ ತಿಳಿಸಲಾಗಿತ್ತು. ಆದರೆ ಒಂದೇ ವರ್ಷದೊಳಗಾಗಿ ಎಲ್ಲ ಅರ್ಹ ಖಾತೆಗಳಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಸಂಪೂರ್ಣ ಮೊತ್ತ ಪಾವತಿ ಮಾಡಲಾಗಿದೆ. ಆದ್ದರಿಂದ ಈ ರೈತರಿಗೆ ಮತ್ತೆ ಬೆಳೆ ಸಾಲ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗಳು ಬ್ಯಾಂಕರುಗಳಿಗೆ ತಿಳಿಸಿದರು.

ಕಳೆದ 15 ವರ್ಷಗಳಲ್ಲಿ ಕರ್ನಾಟಕ 12 ವರ್ಷ ಬರ ಪರಿಸ್ಥಿತಿಯನ್ನು ಎದುರಿಸಿದೆ. ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಬ್ಯಾಂಕುಗಳು ರೈತರ ಬಗ್ಗೆ ಸ್ವಲ್ಪ ಮೃದು ಧೋರಣೆಯನ್ನು ಅನುಸರಿಸುವಂತೆ ಮುಖ್ಯಮಂತ್ರಿಗಳು ಬ್ಯಾಂಕರುಗಳಿಗೆ ಸಲಹೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೀಡ್‍ಬ್ಯಾಂಕ್ ಮುಖ್ಯಸ್ಥರು, ಬ್ಯಾಂಕುಗಳೂ ರೈತರ ಬಗ್ಗೆ ಕಾಳಜಿ ವಹಿಸುವುದು ಎಂದು ತಿಳಿಸಿದರು.

ಮಾಧ್ಯಮಗಳಲ್ಲಿ ರೈತರ ಸಾಲ ಖಾತೆಯಿಂದ ಮನ್ನಾ ಮೊತ್ತ ಹಿಂಪಡೆದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸರ್ಕಾರದ ಮಾರ್ಗಸೂಚಿಯನ್ವಯ ಫಲಾನುಭವಿಗಳನ್ನು ಗುರುತಿಸುವಾಗ ಕೆಲವು ಬ್ಯಾಂಕುಗಳು ತಪ್ಪು ಗ್ರಹಿಕೆಯಿಂದ ಲೋಪವುಂಟಾಗಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಇಂದು ಎನ್‍ಪಿಎ ಸಾಲಗಳ ಮನ್ನಾ ಮೊತ್ತ ಬಿಡುಗಡೆಗೆ ಸರ್ಕಾರಿ ಆದೇಶ ಹೊರಡಿಸಿದ್ದು, ಈ ತಿಂಗಳೊಳಗಾಗಿ ಎಲ್ಲ ಬ್ಯಾಂಕುಗಳ ಎಲ್ಲ ಅರ್ಹ ಫಲಾನುಭವಿಗಳ ಸಾಲ ಖಾತೆಗೆ ಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಲು ಕ್ರಮ ವಹಿಸುವಂತೆ ಮನವಿ ಮಾಡಲಾಯಿತು.

ಈ ಯೋಜನೆಯಲ್ಲಿ ಹಗಲು ರಾತ್ರಿ ಶ್ರಮಿಸಿದ, ಅಧಿಕಾರಿಗಳು, ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಯನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಸಹಕಾರ ಸಚಿವ ಬಂಡೆಪ್ಪಾ ಕಾಶೆಂಪೂರ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ಭೂದಾಖಲೆಗಳು ಮತ್ತು ಭೂಮಾಪನಾ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.