ಮೈತ್ರಿ ಸಂಪುಟಕ್ಕೆ ಇಬ್ಬರು ನೂತನ ಸಚಿವರ ಸೇರ್ಪಡೆ!

ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜಾತ್ಯಾತೀತ ಜನತಾ ದಳ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಶುಕ್ರವಾರ ಅಪರಾಹ್ನ ಇಬ್ಬರು ಪಕ್ಷೇತರರು ಸೇರ್ಪಡೆಯಾಗುವುದರೊಂದಿಗೆ ರಾಜ್ಯ ಸಚಿವ ಸಂಪುಟದ ಸಂಖ್ಯಾಬಲ 33 ಕ್ಕೆ ಏರಿಕೆಯಾಗಿದೆ. ಇನ್ನೂ ಒಂದು ಸಚಿವ ಸ್ಥಾನ ಖಾಲಿ ಉಳಿದಿದೆ.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರ ಸಮ್ಮುಖದಲ್ಲಿ ರಾಣೇಬೆನ್ನೂರು ವಿಧಾನ ಸಭಾ ಕ್ಷೇತ್ರದ ಸದಸ್ಯ ಆರ್ ಶಂಕರ್ ಹಾಗೂ ಮುಳಬಾಗಿಲು ವಿಧಾನ ಸಭಾ ಕ್ಷೇತ್ರದ ಸದಸ್ಯ ಹೆಚ್ ನಾಗೇಶ್ ಅವರು ಸಂಪುಟ ದರ್ಜೆ ಸಚಿವರಾಗಿ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು. ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವರಿಗೆ ಅಧಿಕಾರ ಪದ ಮತ್ತು ಗೋಪ್ಯತಾ ಪ್ರಮಾಣ ವಚನ ಬೋಧಿಸಿದರು. ಇಬ್ಬರೂ ಸಚಿವರು ಕನ್ನಡ ಭಾಷೆಯಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕøತಿ ಸಚಿವ ಡಿ. ಕೆ. ಶಿವಕುಮಾರ್, ಸಾರಿಗೆ ಸಚಿವ ಡಿ ಸಿ ತಮ್ಮಣ್ಣ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ ಜೆ ಜಾರ್ಜ್, ಗೃಹ ಸಚಿವ ಎಂ ಬಿ ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಆಹಾರ ಮತ್ತು ನಾಗರೀಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಹಜ್ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್, ತೋಟಗಾರಿಕಾ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಂ ಸಿ ಮನಗೂಳಿ, ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ವೆಂಕಟರಾವ್ ನಾಡಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್, ಸಕ್ಕರೆ ಸಚಿವ ಆರ್ ಬಿ. ತಿಮ್ಮಾಪೂರ್, , ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಈಶ್ವರ್ ಖಂಡ್ರೆ, ರಾಜ್ಯ ಸಭಾ ಸದಸ್ಯ ಎಲ್. ಹನುಮಂತಯ್ಯ, ಲೋಕಸಭಾ ಸದಸ್ಯ ಡಿ. ಕೆ. ಸುರೇಶ್, ರಾಜ್ಯ ವಿಧಾನ ಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್, ಕೊಂಡಜ್ಜಿ ಮೋಹನ್ ಮತ್ತು ಯು ಬಿ ವೆಂಕಟೇಶ್, ರಾಜ್ಯ ವಿಧಾನ ಸಭಾ ಸದಸ್ಯರಾದ ಕೆ. ಎಂ. ಶಿವಲಿಂಗೇಗೌಡ, ಬಿ ಎ ಬಸವರಾಜು, ಎಸ್ ಟಿ ಸೋಮಶೇಖರ್, ಮುನಿರತ್ನ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್ ಹೆಚ್ ಕೋನರೆಡ್ಡಿ ಅವರೂ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಅವರೂ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿನ್ನೆಲೆ :

ಕಳೆದ ಮೇ 23 ರಂದು ಮುಖ್ಯಮಂತ್ರಿಯಾಗಿ ಜಾತ್ಯಾತೀತ ಜನತಾ ದಳದ ಹೆಚ್ ಡಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಡಾ ಜಿ ಪರಮೇಶ್ವರ್ ಅವರನ್ನು ಒಳಗೊಂಡು ರಚಿತವಾದ ದ್ವಿ-ಸದಸ್ಯ ಮೈತ್ರಿ ಸರ್ಕಾರಕ್ಕೆ ಅದೇ ಸಾಲಿನ ಜೂನ್ 6 ರಂದು ನಡೆದ ಸಂಪುಟ ವಿಸ್ತರಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ 14 , ಜಾತ್ಯಾತೀತ ಜನತಾ ದಳದ ಒಂಭತ್ತು, ಬಹುಜನ ಸಮಾಜ ಪಕ್ಷ ಹಾಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ತಲಾ ಓರ್ವರೂ ಸೇರಿದಂತೆ 25 ಸಚಿವರು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದರು. ಅಲ್ಲದೆ, ಅಕ್ಟೋಬರ್ 11 ರಂದು ಬಹುಜನ ಸಮಾಜ ಪಕ್ಷದ ಏಕೈಕ ಸದಸ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮತ್ತೆ ಡಿಸೆಂಬರ್ 22 ರಂದು ನಡೆದ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಓರ್ವರೂ ಒಳಗೊಂಡಂತೆ ಇಬ್ಬರನ್ನು ಕೈಬಿಟ್ಟು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಎಂಟು ಸಚಿವರಿಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರಸಕ್ತ ಸಾಲಿನ ಮಾರ್ಚ್ 22 ರಂದು ಕುಂದಗೋಳ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪೌರಾಡಳಿತ ಸಚಿವ ಸಿ ಎಸ್ ಶಿವಳ್ಳಿ ಅವರ ನಿಧನದಿಂದ ಸಚಿವ ಸಂಪುಟದಲ್ಲಿ ಒಂದು ಸ್ಥಾನ ತೆರವಾಗಿತ್ತು. ಇದೀಗ ಮೂರನೇ ಬಾರಿಗೆ ನಡೆದ ಸಂಪುಟ ವಿಸ್ತರಣೆಯಲ್ಲಿ ಇದೇ ಸರ್ಕಾರದಲ್ಲಿ ಈ ಹಿಂದೆ ಸಚಿವರಾಗಿದ್ದ ಓರ್ವರೂ ಒಳಗೊಂಡಂತೆ ಇಬ್ಬರು ಇಬ್ಬರು ಸಚಿವರ ಸೇರ್ಪಡೆಯಾಗಿದೆ.

ಮೇಕೆದಾಟು, ಮಹದಾಯಿ ಯೋಜನೆಗೆ ಅನುಮತಿ; ಕೇಂದ್ರಕ್ಕೆ ಸಚಿವ ಡಿಕೆಶಿ ಆಗ್ರಹ

ನವದೆಹಲಿ: ಮಹದಾಯಿ, ಮೇಕೆದಾಟು ಸಮತೋಲನ ಅಣೆಕಟ್ಟು ಯೋಜನೆ ಸೇರಿದಂತೆ ಅಂತಾರಾಜ್ಯ ಜಲವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕೆಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

ನವದೆಹಲಿಯಲ್ಲಿ ಮಂಗಳವಾರ ನಡೆದ ಜಲ ಸಂರಕ್ಷಣೆ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛ ಭಾರತ ಆಂದೋಲನ ಕುರಿತ ಎಲ್ಲಾ ರಾಜ್ಯಗಳ ಜಲ ಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಅವರು ಈ ಆಗ್ರಹ ಮಾಡಿದ್ದಾರೆ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಈ ಸಮ್ಮೇಳನದಲ್ಲಿ ಇದ್ದರು.

ಕಾವೇರಿ, ಮಹದಾಯಿ, ಕೃಷ್ಣ, ತುಂಗಭದ್ರಾ ಸೇರಿದಂತೆ ಕರ್ನಾಟಕದ ಯಾವುದೇ ನದಿಯ ನೀರು ವೃಥಾ ಸಮುದ್ರದ ಪಾಲಾಗಬಾರದು. ಅದು ಸದ್ಬಳಕೆಯಾಗಬೇಕು ಎಂಬುದು ಕರ್ನಾಟಕದ ಸದಾಶಯವಾಗಿದೆ. ಸ್ಪಷ್ಟ ಜನಾದೇಶದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಈ ದಿಸೆಯಲ್ಲಿ ದೃಢ ಹೆಜ್ಜೆ ಇರಿಸಬೇಕು ಎಂದು ಅವರು ಒತ್ತಾಯಿಸಿದರು.

ದೇಶದ ಜಲಸಂಪತ್ತು ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು. ಹೀಗಾಗಿ ಕೇಂದ್ರ ಸರ್ಕಾರವು ಮಹದಾಯಿ ಹಾಗೂ ಕೃಷ್ಣ ಯೋಜನೆಗಳ ಅನುಷ್ಠಾನ ಸಂಬಂಧ ಅಧಿಸೂಚನೆ ಹೊರಡಿಸಬೇಕು. ಅದೇ ರೀತಿ ಮೇಕೆದಾಟು ವಿಸ್ತೃತ ಯೋಜನೆ ವರದಿಗೆ (ಡಿಪಿಆರ್) ಅನುಮತಿ ನೀಡಬೇಕು ಎಂದು ಸಚಿವ ಶಿವಕುಮಾರ್ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ತಮಿಳುನಾಡು ಸೇರಿದಂತೆ ಯಾವುದೇ ನೆರೆ ರಾಜ್ಯದ ಜತೆಗೆ ಕರ್ನಾಟಕವು ವಿವಾದ, ಜಗಳ ಬಯಸುವುದಿಲ್ಲ. ಎಲ್ಲರ ಜತೆಗಿನ ಸಂಬಂಧ ಸೌಹಾರ್ದಯುತವಾಗಿರಬೇಕು ಎಂದು ನಾವು ಬಯಸುತ್ತೇವೆ. ಆದರೆ ಅದು ಕಾವೇರಿ ನೀರಾಗಲಿ, ಕೃಷ್ಣಾ ನೀರಾಗಲಿ ಅಥವಾ ತುಂಗಭದ್ರಾ ನೀರಾಗಲಿ ಸದ್ಬಳಕೆ ಆಗದೇ ಪೋಲಾಗಬಾರದು, ಸಮುದ್ರದ ಪಾಲಾಗಬಾರದು ಎಂಬುದು ನಮ್ಮ ದೃಢ ಸಂಕಲ್ಪ. ಹೀಗಾಗಿ ಕರ್ನಾಟಕಕ್ಕೆ ಸಂಬಂಧಪಟ್ಟ ಅಂತಾರಾಜ್ಯ ಜಲವಿವಾದಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರವು ನೆರವಾಗಬೇಕು ಎಂದು ಅವರು ಹೇಳಿದರು.

ಅಂತಾರಾಜ್ಯ ಜಲವಿವಾದಗಳನ್ನು ಬಗೆಹರಿಸಲು ಸಂಬಂಧಪಟ್ಟ ರಾಜ್ಯಗಳ ಸಚಿವರ ಸಭೆಯನ್ನು ಕೇಂದ್ರ ಸರ್ಕಾರವು ಶೀಘ್ರ ಕರೆಯಬೇಕು. ಆ ಮೂಲಕ ಎಲ್ಲ ರಾಜ್ಯಗಳ ನಡುವೆ ಸೌಹಾರ್ದಯುತ ಸಂಬಂಧ ಮುಂದುವರಿಯಲು ಸಹಕರಿಸಬೇಕು ಎಂದು ಸಚಿವ ಶಿವಕುಮಾರ್ ತಿಳಿಸಿದರು.

ಜೂನ್ 21ರಂದು ಗುರುಮಿಟ್ಕಲ್ ತಾಲ್ಲೂಕಿನಲ್ಲಿ ಸಿಎಂ ಗ್ರಾಮ ವಾಸ್ತವ್ಯ ಪುನರಾರಂಭ

ಬೆಂಗಳೂರು: ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ತಮ್ಮ ಗ್ರಾಮ ವಾಸ್ತವ್ಯವನ್ನು ಜೂನ್ 21ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನಲ್ಲಿ ಹಾಗೂ ಜೂನ್ 22 ರಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ನಡೆಸಲಿದ್ದಾರೆ.

ಅಂತೆಯೇ ಜುಲೈ 5 ಹಾಗೂ 6 ರಂದು ಬೀದರ್ ಜಿಲ್ಲೆ ಬಸವಕಲ್ಯಾಣ ಹಾಗೂ ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕುಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ.
ಮುಖ್ಯಮಂತ್ರಿಗಳು ತಾವು ಪ್ರಾರಂಭಿಸಲು ಉದ್ದೇಶಿಸಿರುವ ಗ್ರಾಮ ವಾಸ್ತವ್ಯದ ಕುರಿತು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಗ್ರಾಮ ವಾಸ್ತವ್ಯವನ್ನು ಮುಖ್ಯಮಂತ್ರಿಗಳು ಪ್ರಾರಭಿಸುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರದ ಆಡಳಿತ ಚುರುಕುಗೊಳಿಸಲು ಮತ್ತು ಸರ್ಕಾರ ಯೋಜನೆಗಳ ಅನುಷ್ಠಾನ ಕುರಿತು ಜನಾಭಿಪ್ರಾಯ ಪಡೆಯಲು ಇದು ಉತ್ತಮ ಅವಕಾಶ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು ಜೂನ್ 21 ರಂದು ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲ್ಲೂಕಿನಲ್ಲಿ ಗ್ರಾಮ ವಾಸ್ತವ್ಯ ನಡೆಸುವುದಾಗಿ ತಿಳಿಸಿದರು.

ಈ ಗ್ರಾಮ ವಾಸ್ತವ್ಯದ ಸ್ವರೂಪ ಹೇಗಿರಬೇಕು ಎಂಬ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ. ಎಸ್. ಸುಬ್ರಹ್ಮಣ್ಯ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಈ. ವಿ. ರಮಣ ರೆಡ್ಡಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿ ಗಳ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮುಖ್ಯಮಂತ್ರಿಗಳಿಂದ ಮತ್ತೆ ಗ್ರಾಮ ವಾಸ್ತವ್ಯ !

ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರ ಜನಪ್ರಿಯ ಕಾರ್ಯಕ್ರಮ ಗ್ರಾಮ ವಾಸ್ತವ್ಯವನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ. ಮತ್ತಷ್ಟು ವಿಭಿನ್ನವಾಗಿ, ಇನ್ನಷ್ಟು ಜನರಿಗೆ ಹತ್ತಿರವಾಗುವಂತೆ ಈ ಭಾರಿ ಗ್ರಾಮ ವಾಸ್ತವ್ಯ ಕಾರ್ಕ್ರಮವನ್ನು ಜಾರಿಗೆ ತರಲಾಗುತ್ತಿದೆ.

ಗ್ರಾಮ ವಾಸ್ತವ್ಯದ ಹಿನ್ನೆಲೆ: ಕುಮಾರಸ್ವಾಮಿಯವರ ಮೊತ್ತಮೊದಲ ಗ್ರಾಮವಾಸ್ತವ್ಯ ಅಥಣಿ ತಾಲೂಕಿನ ಪಿ.ಕೆ ನಾಗನೂರೆಂಬ ಹಳ್ಳಿಯಿಂದ ಆರಂಭವಾಯಿತು. ಕೃಷ್ಣೆಯಲ್ಲಿ ಪ್ರವಾಹ ಬಂದಾಗ ಪರಿಸ್ಥಿತಿ ಅವಲೋಕಿಸಲು ತೆರಳಿದ ಮುಖ್ಯಮಂತ್ರಿಗಳಿಗೆ ಸಂಜೆ ಆರು ಗಂಟೆಗೆ ಬೆಳಗಾವಿಗೆ ಹೊರಡಲು ಹೆಲಿಕಾಪ್ಟರ್ ಹೊರಡಿಸಿ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಅವಸರಿಸುತ್ತಿದ್ದರು.. ಮುಖ್ಯಮಂತ್ರಿಗಳು ಕಾರಣ ಕೇಳಿದಾಗ ಇಲ್ಲೆಲ್ಲೂ ತಂಗಲು ಸ್ಥಳವಿಲ್ಲವಾದ್ದರಿಂದ ಬೆಳಗಾವಿಗೆ ಹೊರಡುವುದು ಅನಿವಾರ್ಯವೆಂದರು. ಆಗ ಮುಖ್ಯಮಂತ್ರಿಗಳು ಇಲ್ಲೇ ಹತ್ತಿರ ಯಾರ ಮನೆಯಲ್ಲಾದರೂ ತಂಗುವ ಎಂದು ಪ್ರತಿಕ್ರಿಯಿಸಿದರು.

ಸ್ಥಳದಲ್ಲೇ ಉಪಸ್ಥಿತರಿದ್ದ ಶಾಸಕರು ನಾಗನೂರಿನಲ್ಲೊಂದು ಮಠದಲ್ಲಿ ತಂಗಲು ಅವಕಾಶವಿರುವುದಾಗಿ ಹೇಳಿದರು. ಬಳಿಕ ನೆರೆ ಬಂದ ಕೃಷ್ಣೆಯನ್ನು ಮೂರು ಟ್ರ್ಯಾಕ್ಟರ್‍ಗಳಲ್ಲಿ ದಾಟಿ ನಾಗನೂರಿಗೆ ಬಂದು ಮಠದಲ್ಲಿ ವಾಸ್ತವ್ಯ ಮಾಡಿದ್ದು ಮುಖ್ಯಮಂತ್ರಿಗಳ ಮೊದಲ ಗ್ರಾಮ ವಾಸ್ತವ್ಯ. ಅಂದು ಊರ ಜನರೊಂದಿಗೆ ಇದ್ದು ಅಲ್ಲಿನವರೊಂದಿಗೆ ಬೆರೆತು ಅಲ್ಲಿನ ಜನರ ಕಷ್ಟಸುಖಗಳ ಪರಿಚಯವನ್ನು ಮುಖ್ಯಮಂತ್ರಿಗಳು ಮಾಡಿಕೊಂಡದ್ದು ಇತಿಹಾಸ.
ಮುಖ್ಯಮಂತ್ರಿಗಳು ತಮ್ಮ 20 ತಿಂಗಳ ಆಡಳಿತಾವಧಿಯಲ್ಲಿ 47 ಗ್ರಾಮ ವಾಸ್ತವ್ಯ ಮಾಡಿದ್ದಾರೆ.

ಹೆಚ್‍ಐವಿ ಪೀಡಿತರ ಮನೆಯಲ್ಲಿ ವಾಸ್ತವ್ಯ- ರಿಚರ್ಡ್ ಗೇರ್‍ ಮೆಚ್ಚುಗೆ: ನಂತರದ ದಿನಗಳಲ್ಲಿ ವಿಜಯಪುರದ ಎಚ್ ಐ ವಿ ಪೀಡಿತರೊಬ್ಬರ ಮನೆಯನ್ನು ಆರಿಸಿಕೊಂಡು, ಎಚ್ ಐ ವಿ ಪೀಡಿತರ ಕುರಿತ ಸಮಾಜದ ತಪ್ಪು ನಂಬಿಕೆಗಳನ್ನು ದೂರ ಮಾಡಿದರು. ಈ ಘಟನೆಯನ್ನು ಓದಿದ ಹಾಲಿವುಡ್ ನಟ, ಎಚ್ ಐವಿ ಜಾಗೃತಿ ಮೂಡಿಸುವ ರಾಯಭಾರಿಯೂ ಆಗಿದ್ದ ರಿಚರ್ಡ್ ಗೇರ್ ಅವರು ಈ ಘಟನೆಯಿಂದ ಪ್ರಭಾವಿತರಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ಗ್ರಾಮ ವಾಸ್ತವ್ಯದ ಅಪರೂಪದ ಅನುಭವಗಳಲ್ಲೊಂದಾಗಿ ದಾಖಲಾಯಿತು.
ತಮ್ಮ ಆಡಳಿತಾವಧಿಯ ಅತ್ಯುತ್ತಮ ಅನುಭವಗಳು ಗ್ರಾಮ ವಾಸ್ತವ್ಯದಿಂದ ದೊರೆಯಿತಲ್ಲದೆ ಹಲವು ಯೋಜನೆಗಳನ್ನು ರೂಪಿಸಲು ಪ್ರೇರಣೆಯೂ ದೊರೆತಿದ್ದು ಗ್ರಾಮ ವಾಸ್ತವ್ಯದಿಂದಲೇ ಎಂಬುದು ಮುಖ್ಯಮಂತ್ರಿಗಳ ಅನುಭವ.

ಕಾರ್ಯಕ್ರಮ ರೂಪಿಸಲು ಗ್ರಾಮ ವಾಸ್ತವ್ಯ ನೆರವು: ಗ್ರಾಮ ವಾಸ್ತವ್ಯ ಸುಮಾರು ಸಾವಿರದಷ್ಟು ಪ್ರೌಢಶಾಲೆಗಳು, ಸುಮಾರು 500 ರಷ್ಟು ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆಗೆ ಕಾರಣವಾಯಿತು.
ಸಾಲಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಅಂಗವಿಕಲರಿಗೆ ಮಾಸಾಶನ ಸೌಲಭ್ಯಗಳು ಗ್ರಾಮವಾಸ್ತವ್ಯದ ‘ಕೊಡುಗೆ’ಗಳು.

ಈ ಬಾರಿಯ ಗ್ರಾಮ ವಾಸ್ತವ್ಯದ ಸ್ವರೂಪ: ಗ್ರಾಮವಾಸ್ತವ್ಯ ಕಳೆದ ಸಾಲಿನ ಗ್ರಾಮ ವಾಸ್ತವ್ಯಕ್ಕಿಂತ ಭಿನ್ನವಾಗಿ ಆಯೋಜನೆ ಗೊಳ್ಳಲಿದ್ದು, ಮುಖ್ಯಮಂತ್ರಿಗಳು ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡುವರು. ರೈತರು ಕಾರ್ಯಕ್ರಮದ ಆದ್ಯತಾ ವಲಯದಲ್ಲಿರುತ್ತಾರೆ. ರೈತರ ಹಿತವನ್ನು ಗಮನದಲ್ಲಿರಿಸಿ ಈವರೆಗಿನ ರೈತಪರ ಕಾರ್ಯಕ್ರಮಗಳಿಂದ ಕಂಡುಕೊಂಡ ಉತ್ತಮ ಅಂಶಗಳನ್ನು ರೈತರಿಗೆ ಹೇಳುವ ಮತ್ತು ಆಧುನಿಕ ಕೃಷಿ ಪದ್ಧತಿಗೆ ಪೂರಕ, ಯಾಂತ್ರೀಕೃತ ಕೃಷಿಗೆ ನೆರವು ಹಾಗೂ ರೈತ ಮಾಹಿತಿಗಳು ಗ್ರಾಮವಾಸ್ತವ್ಯ ಕಾರ್ಯಕ್ರಮದ ಆದ್ಯತೆಯಾಗಲಿವೆ.

ಮುಖ್ಯಮಂತ್ರಿಗಳು ಭೇಟಿ ನೀಡುವ ಗ್ರಾಮಗಳಿಗೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಭೇಟಿ ನೀಡುವ ಮತ್ತು ಸುತ್ತಮುತ್ತಲ ಗ್ರಾಮಗಳ ಜನರ ಸಮಸ್ಯೆಗಳು, ಬೇಡಿಕೆ ಹಾಗೂ ನೆರವು ನೀಡಲು ಪೂರಕ ಸಮಗ್ರ ವರದಿಯನ್ನು ತಯಾರಿಸುವರು. ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ವೇಳೆ ಸ್ಥಳದಲ್ಲೇ ಹಲವು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ನೀತಿ ನಿರೂಪಣೆಗೂ ಇದು ಸಹಕಾರಿಯಾಗಲಿದೆ ಎನ್ನುವುದು ಮುಖ್ಯಮಂತ್ರಿಗಳ ನಂಬಿಕೆ. ತಾವು ಉಳಿದುಕೊಂಡ ಗ್ರಾಮಕ್ಕೆ, ಜಿಲ್ಲೆಗೆ ಏನು ಬೇಕು? ಯಾವ ಇಲಾಖೆಯಿಂದ ಕೆಲಸ ಕಾರ್ಯಗಳು ಬಾಕಿ ಉಳಿದಿವೆ? ಎಂಬುದನ್ನು ಮನಗಂಡು ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕೆನ್ನುವುದು ಅವರ ಅಭಿಲಾಷೆ.

ಕಿರುಬಂದರುಗಳನ್ನು ಅಭಿವೃದ್ದಿಪಡಿಸಿ, ಉದ್ಯೋಗ ಸೃಜಿಸಿ: ಸಿಎಂ ಹೆಚ್.ಡಿ.ಕೆ

ಬೆಂಗಳೂರು: ರಾಜ್ಯದ 12 ಕಿರು ಬಂದರುಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಒತ್ತು ನೀಡಿ ತನ್ಮೂಲಕ ಉದ್ಯೋಗ ಸೃಜನೆಯನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದರು.

ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಚಟುವಟಿಕೆಗಳ ಕುರಿತ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕಾರವಾರ ಮತ್ತು ಮಂಗಳೂರು ಬಂದರುಗಳನ್ನು ಹೊರತುಪಡಿಸಿದರೆ ಉಳಿದ ಕಿರು ಬಂದರುಗಳಲ್ಲಿ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು ನಡೆಯಬೇಕು. ಮೀನುಗಾರಿಕೆ ಸೇರಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಿ ರಾಜ್ಯದ ಎಲ್ಲ ಬಂದರುಗಳ ಸಂಪೂರ್ಣ ಸಾಮಥ್ರ್ಯವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಮ್ಯಾರಿಟೈಮ್ ಮಂಡಳಿಗೆ ಶೀಘ್ರದಲ್ಲಿಯೇ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಭರವಸೆಯಿತ್ತರು.

ಕಾರವಾರ ಬಂದರಿನ 2 ನೇ ಹಂತದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ಬಂದರಿನ ಉತ್ತರಕ್ಕೆ 1258 ಮೀ.ಉದ್ದದ ಬರ್ರ್ತ್ ನ್ನು ವಿಸ್ತರಿಸಲು ವಿಸ್ತøತ ಯೋಜನಾ ವರದಿಯನ್ನು ತಯಾರಿಸಿದ್ದು, ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಾಗರಮಾಲಾ ಕೋಸ್ಟಲ್ ಬರ್ತ್ ಯೋಜನೆಯಡಿ ಪ್ರಸಕ್ತ ಸಾಲಿಗೆ 54.10 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದ್ದು, ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ ಹಾಗೂ ಕಾರವಾರ ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಮತ್ತು ಮಂಗಳೂರು ಹಳೇ ಬಂದರಿನಲ್ಲಿ ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ ತಾಂತ್ರಿಕ ಮಂಜೂರಾತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಸಭೆ ಮಾಹಿತಿ ಒದಗಿಸಲಾಯಿತು.

ಸಮುದ್ರಕೊರೆತ ತಡೆಯಲು ತಡೆಗೋಡೆ ನಿರ್ಮಾಣ: ಕರಾವಳಿ ಪ್ರದೇಶದಲ್ಲಿ ಕಡಲು ಕೊರೆತ ಪದೇ ಪದೇ ಉಂಟಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ದೀರ್ಘಾವಧಿ ಪರಿಹಾರ ಕಂಡುಕೊಳ್ಳಬೇಕು. ಕಡಲ ಬದಿಯಲ್ಲಿರುವ ಜನರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಕಡಲಕೊರೆತ ಸಂಭವಿಸುತ್ತಿದ್ದ ಪ್ರದೇಶಗಳಲ್ಲಿ ಈವರೆಗೆ 64.35 ಉದ್ದದ ತಡೆ ನಿರ್ಮಿಸಲಾಗಿದೆ. ಉದಯವಾರ, ಮರವಂತೆ, ಕೋಡಿಬೆಂಗ್ರೆ, ಸೋಮೇಶ್ವರ, ಮುಕ್ಕಚೆರ್ರಿ ಸೇರಿದಂತೆ ಒಟ್ಟು 12 ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ ಮತ್ತು ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ತಡೆಗೋಡೆ ಉಳ್ಳಾಲ ಮತ್ತು ಉದಯವಾರದಲ್ಲಿ ತಡೆಗೋಡೆ ನಿರ್ಮಾಣವಾದ ಬಳಿಕ ಕಡಲಕೊರೆತ ಕಡಿಮೆಯಾಗಿದ್ದು ಮೀನುಗಾರಿಕಾ ಚಟುವಟಿಕೆಗಳು ಹೆಚ್ಚಾಗಿದೆ ಎಂದು ಇತ್ತೀಚೆಗೆ ಸ್ವಯಂಸೇವಾ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ವರದಿಯಾಗಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಆರ್ಥಿಕ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಲೋಕೋಪಯೋಗಿ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಉಪಸ್ಥಿತರಿದ್ದರು.

ಮೈಸೂರು ಫ್ಯಾಲ್ಕನ್ ಟೈರ್ಸ್ ಪುನಶ್ಚೇತನ- ಪರಿಶೀಲಿಸಿ ಕ್ರಮ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 

ಬೆಂಗಳೂರು: ಮೈಸೂರಿನ ರೋಗಗ್ರಸ್ತ ಕಾರ್ಖಾನೆ ಫ್ಯಾಲ್ಕನ್ ಟಯರ್ಸ್ ಪುನಶ್ಚೇತನಕ್ಕೆ ಸರ್ಕಾರದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಗೃಹಕಚೇರಿ ಕೃಷ್ಣಾದಲ್ಲಿ ಇಂದು ಫ್ಯಾಲ್ಕನ್ ಟೈರ್ಸ್ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ  ಮಾತನಾಡಿದ ಅವರು, ಫ್ಯಾಲ್ಕನ್ ಟೈರ್ಸ್ ಕಾರ್ಖಾನೆಯನ್ನು ಈಗ ಪುನರಾರಂಭಿಸಿದಲ್ಲಿ ಕಾರ್ಖಾನೆಯನ್ನು ನಡೆಸಲು ಸುಮಾರು 3700 ತಾಂತ್ರಿಕ ಪರಿಣಿತಿಯನ್ನು ಹೊಂದಿರುವ ಕಾರ್ಮಿಕರು ಮುಂದೆ ಬಂದಿದ್ದು, ಕಾರ್ಖಾನೆಯನ್ನು ಪ್ರಾರಂಭಿಸಲು ಸುಮಾರು 120 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿ ಹಾಗೂ ಕಚೇರಿಯ ಮೂಲಭೂತ ಸೌಕರ್ಯಕ್ಕಾಗಿ 20 ಕೋಟಿ ರೂ.ಗಳ ವೆಚ್ಚದ ಅಗತ್ಯವಿದೆ. ಇದಲ್ಲದೆ 150 ಕೋಟಿ ರೂ.ಗಳ ದುಡಿಯುವ ಬಂಡವಾಳದ ಅಗತ್ಯವಿದೆ. ಕಾರ್ಖಾನೆಗೆ ವ್ಯವಸ್ಥಾಪಕ ಮಂಡಳಿಯನ್ನು ಸ್ಥಾಪಿಸುವ ಬಗ್ಗೆ ಪರಿಶೀಲಿಸಬಹುದಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಫ್ಯಾಲ್ಕನ್ ಟೈರ್ಸ್ ಕಾರ್ಖಾನೆಯನ್ನು ಪುನರಾರಂಭಿಸಲು ಸುಮಾರು 3700 ಕಾರ್ಮಿಕರು ಮುಂದೆ ಬಂದಿರುವುದು ಪ್ರಶಂಸನೀಯ ಎಂದು ಮುಖ್ಯಮಂತ್ರಿಗಳು, ಕಾರ್ಖಾನೆಯ
ಪುನಶ್ಚೇತನಕ್ಕೆ ಎಲ್ಲ ನೆರವು ನೀಡುವುದಾಗಿ ಭರವಸೆಯಿತ್ತರು. ಸಭೆಯಲ್ಲಿ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಫ್ಯಾಲ್ಕನ್ ಟೈರ್ಸ್ ಕಾರ್ಖಾನೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.