ಪ್ರತಿದಿನ 6 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವುಳ್ಳ ನೂತನ ಮೆಗಾಡೇರಿ ಉದ್ಘಾಟನೆ

ಮೈಸೂರು: ಪ್ರತಿದಿನ 6 ಲಕ್ಷ ಲೀಟರ್ (9 ಲಕ್ಷ ಲೀಟರ್‍ಗೆ ವರ್ಧಿಸಬಹುದಾದ) ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವುಳ್ಳ ನೂತನ ಮೆಗಾಡೇರಿಯನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಮೈಸೂರು ನಗರದ ಆಲನಹಳ್ಳಿಯಲ್ಲಿ ಇಂದು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಹಾಲು ಉತ್ಪಾದನೆ ಹೆಚ್ಚಿಸಲು ಹಾಗೂ ರೈತರ ಆರ್ಥಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮೈಸೂರು ನಗರದ ಆಲನಹಳ್ಳಿ ಬಡಾವಣೆಯಲ್ಲಿ ಸುಮಾರು 38.19 ಎಕರೆ ಜಮೀನಿನಲ್ಲಿ ಸುಮಾರು 13 ಎಕರೆ(ಸುಮಾರು 50000 Sqm) ಸ್ಥಳವನ್ನು ಉಪಯೋಗಿಸಿಕೊಂಡು ಅತ್ಯಾಧುನಿಕ ತಂತ್ರಜ್ಞಾನವುಳ್ಳ ನೂತನ “ಮೈಸೂರು ಮೆಗಾ ಡೇರಿ” ಯನ್ನು ಸ್ಥಾಪಿಸಲಾಗಿರುತ್ತದೆ.

ಕರ್ನಾಟಕದಲ್ಲೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಮೊದಲನೇ ಘಟಕವಾಗಿರುತ್ತದೆ. ಇದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಹಾಗೂ ಹಾಲಿನ ವಿವಿಧ ಉತ್ಪನ್ನಗಳು ಲಭ್ಯವಾಗುತ್ತದೆ ಹಾಗೂ ಇದರಿಂದ ಲಕ್ಷಾಂತರ ರೈತರುಗಳಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಆಭಿವೃದ್ದಿಯಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಮೆಗಾ ಡೇರಿ ಯೋಜನೆ–ಅಂದಾಜು ರೂ. 124 ಕೋಟಿಯದಗಾಗಿದ್ದು, ಮೈಸೂರು ಹಾಲು ಒಕ್ಕೂಟದ ವಂತಿಕೆ ರೂ. 41.66 ಕೋಟಿ, ಖಏಗಿಙ ಅನುದಾನ  – ರೂ. 6.00 ಕೋಟಿ ಓಆಆಃ  ಸಂಸ್ಥೆ ವತಿಯಿಂದ ಸಾಲ- ರೂ. 80.34 ಕೋಟಿಯಾಗಿರುತ್ತದೆ ಎಂದರು.

ಸರ್ಕಾರವು ಹಾಲು ಉತ್ಪದಕರಿಗೆ ಸಹಾಯಧನ ನೀಡುತ್ತಿದ್ದು, ಇದಕ್ಕಾಗಿ 2500 ಕೋಟಿ ರೂ ನೀಡಲಾಗುತ್ತಿದೆ. ರೈತರಿಗೆ ವಿದ್ಯುತ್‍ಗಾಗಿ 11000 ಕೋಟಿ ರೂ ಸಬ್ಸಿಡಿ ನೀಡಲಾಗುತ್ತಿದೆ. ಸಾಲ ಮನ್ನಾ ಯೋಜನೆಯಡಿ  40 ಲಕ್ಷ  ರೈತ ಕುಟುಂಬಗಳ ಸಾಲ ಮನ್ನಾ ಮಾಡಲಾಗುವುದು. ಕಾಯಕ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಗೆ  5 ಲಕ್ಷ ರೂ ಗಳ ವರೆಗೆ ಬಡ್ಡಿ ರಹಿತ ಸಾಲ ಹಾಗೂ 10 ಲಕ್ಷ ರೂಗಳವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತಂದಿರುವ ಮೈತ್ರಿಯ ನಡಿಗೆ ಅಭಿವೃದ್ಧಿಯ ಕಡೆಗೆ ಕಿರುಪುಸ್ತಕ ಬಿಡುಗಡೆ ಮಾಡಿದರು. ಸಾಲಮನ್ನಾ ಯೋಜನೆಯಡಿ ಋಣಮುಕ್ತ ಪತ್ರ ವಿತರಿಸಲಾಯಿತು. ಬಡವರ ಬಂಧು ಯೋಜನೆ ಫಲಾನುಭವಿಗಳಿಗೆ ಚಕ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ,  ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, ಶಾಸಕರಾದ ಹೆಚ್.ವಿಶ್ವನಾಥ್, ಕೆ. ಮಹದೇವ, ಹರ್ಷವರ್ಧನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪತ್ರಕರ್ತರು ಸದಾಕಾಲ ಮಾಧ್ಯಮದ ಮೌಲ್ಯ ಎತ್ತಿ ಹಿಡಿಯಬೇಕು: ಸಿಎಂ

ಮೈಸೂರು: ಸಮಾಜದ ಅಭಿಪ್ರಾಯ ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ನಿರ್ಣಾಯಕವಾಗಿದ್ದು, ಪತ್ರಕರ್ತರು ನೇರವಂತಿಕೆ, ನಿಷ್ಠುರತೆ, ವಸ್ತುನಿಷ್ಠ ಹಾಗೂ ಸತ್ಯನಿಷ್ಠ ವರದಿಗಳನ್ನು ನೀಡುತ್ತಾ ಮಾಧ್ಯಮದ ಮೌಲ್ಯಗಳನ್ನು ಸದಾಕಾಲ ಎತ್ತಿ ಹಿಡಿಯಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ರು.

ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆದ 34ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪಾಲ್ಗೊಂಡ್ರು.ವೇದಿಕೆಯಲ್ಲಿ ಮಾತನಾಡಿದ ಎಚ್ಡಿಕೆ ಪತ್ರಿಕಾರಂಗದ ಕುರಿತು ಸುದೀರ್ಘವಾದ ಭಾಷಣ ಮಾಡಿದರು.ಹಿಂದಿನ ಇಂದಿನ ಪತ್ರಿಕೋದ್ಯಮ,ಸುದ್ದಿಗಾಗಿ ನಡೆಯುತ್ತಿರುವ ಪೈಪೋಟಿ ಇತ್ಯಾದಿಗಳ ಮೇಲೆ ಬೆಳಕು ಚಲ್ಲಿದರು.

ಸಿಎಂ ಭಾಷಣದ ಹೈಲೈಟ್ಸ್:

1. ನನ್ನ ಆತ್ಮೀಯ ಮುದ್ರಣ ಮತ್ತು ದೃಶ್ಯ ಮಾಧ್ಯಮದ ಮಿತ್ರರೆ,

2. ನಿಮಗೆಲ್ಲರಿಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 34ನೇ ರಾಜ್ಯ ಸಮ್ಮೇಳನದ ಶುಭಾಶಯಗಳು.

3. 1932 ರಲ್ಲಿ ಸಾಹಿತ್ಯ ಕ್ಷೇತ್ರದ ದಿಗ್ಗಜರೂ, ಸ್ವತಃ ಪತ್ರಕರ್ತರೂ ಆಗಿದ್ದ ಡಿ. ವಿ. ಗುಂಡಪ್ಪ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶತಮಾನೋತ್ಸವದತ್ತ ಸಂಘಟನಾತ್ಮಕ ಹೆಜ್ಜೆಗಳನ್ನು ಹಾಕುತ್ತಿರುವುದು ಸಂತೋಷದ ಸಂಗತಿ.

4. ಸಂಘದ ಹುಟ್ಟಿಗೆ ಮೈಸೂರು ಸಂಸ್ಥಾನದ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ ನೆರವು ನೀಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸದಾ ಎತ್ತಿಹಿಡಿಯುವ ನಾಡಿನ ಪರಂಪರೆಯ ದ್ಯೋತಕವಾಗಿದೆ. ಅವರ ಕಾರ್ಯ ಸದಾ ಸ್ಮರಣೀಯವಾದದ್ದು.

5. ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳ ಮತ್ತು ಪತ್ರಕರ್ತರ ಗುರಿ ದೇಶಕ್ಕೆ ಸ್ವಾತಂತ್ರ್ಯ ಗಳಿಸುವುದೇ ಆಗಿತ್ತು. ಸಾಹಿತಿಗಳು, ಹೋರಾಟಗಾರರೂ ಪತ್ರಕರ್ತರಾಗಿ ಜನರನ್ನು ಜಾಗೃತಿಗೊಳಿಸಿದ್ದರು.

6. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 80 ವರ್ಷಕ್ಕೂ ಹೆಚ್ಚುಕಾಲ ಸವೆಸಿ ಕ್ರೀಯಾಶೀಲತೆಯನ್ನು ವಿಸ್ತರಿಸುತ್ತಾ ಮುನ್ನೆಡೆದಿರುವುದು ಶ್ಲಾಘನೀಯ. ಈ ಧೀರ್ಘಕಾಲದ ಮುನ್ನಡೆಗೆ ಕಾರಣರಾದ ಎಲ್ಲ ಮಹನೀಯರಿಗೆ ಅಭಿನಂದನೆಗಳು.

7. ಮಹಾತ್ಮ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಸ್ವತಃ ಪತ್ರಕರ್ತರಾಗಿ ಈ ದೇಶಕ್ಕಾಗಿ ಕೊಟ್ಟ ಕೊಡುಗೆ ಅನನ್ಯ.

8. ಸ್ವಾತಂತ್ರ್ಯದ ನಂತರ ಪತ್ರಿಕೆಗಳ. ಸುದ್ದಿಮಾಧ್ಯಮಗಳ ಕಾರ್ಯಸ್ವರೂಪ ಪ್ರಜಾಪ್ರಭುತ್ವವನ್ನು ಕಾಯುವುದು ಮತ್ತು ದೇಶದ ಜನರ ಅಭಿವೃದ್ದಿಯ ಮೂಲ ಗುರಿಯಾಗಿ ಬಂದಿರುವುದನ್ನು ಕಾಣುತ್ತಿದ್ದೇವೆ.

9. ಸಮಾಜದ ಒಳಿತಿಗಾಗಿ ಸುದ್ದಿ ಮಾಧ್ಯಮಕ್ಷೇತ್ರದಲ್ಲಿ ಅವಿರತವಾಗಿ ದುಡಿಯುತ್ತಿರುವ ನೀವುಗಳು ಸಂಘಟನಾತ್ಮಕವಾಗಿ ಇಂದಿಲ್ಲಿ ಸೇರಿರುವುದರ ಉದ್ದೇಶ, ಆಶಯವನ್ನು ಅರ್ಥಮಾಡಿಕೊಂಡಿದ್ದೇನೆ. ನಾನೂ ಕೂಡ ಈ ಮೊದಲಿಂದಲೂ ಮಾಧ್ಯಮಕ್ಷೇತ್ರ ನಂಟು ಮತ್ತು ಅದರ ನಿರ್ವಹಣೆಯ ಜವಾಬ್ದಾರಿಯ ಸಂಪರ್ಕವೂ ಹೊಂದಿರುವುದರಿಂದ ಕೇವಲ ಸುದ್ದಿ ಸಂಸ್ಥೆಯ ನಿರ್ವಹಣೆಯಲ್ಲದೆ ಅಲ್ಲಿ ದುಡಿಯುವ ನಿಮ್ಮೆಲ್ಲರ ಬದುಕು, ಬವಣೆ, ಕಷ್ಟ-ಸುಖಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ.

10. ಈನಾಡಿನ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ವಲಯವನ್ನು ಹೆಚ್ಚು ಮಾನವೀಯಗೊಳಿಸುವ ಮತ್ತು ಆ ಮೂಲಕ ಪ್ರಜಾಪ್ರಭುತ್ವ ಮೂಲ ಆಶಯ, ಅಂತಿಮ ಗುರಿಯೂ ಆದ ಮಾನವನ ಕಲ್ಯಾಣ – ಅಭಿವೃದ್ದಿಗಾಗಿ ದುಡಿಯುತ್ತಿರುವ ಪತ್ರಕರ್ತರ ಪಾತ್ರ ಬಹುದೊಡ್ಡದು ಎಂದು ಭಾವಿಸಿದ್ದೇನೆ ಮತ್ತು ಅದು ನಿಜವೂ ಕೂಡ.

11. ಮಾಧ್ಯಮ ಕ್ಷೇತ್ರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ವಿದ್ಯುನ್ಮಾನ ಕ್ಷೇತ್ರವಂತೂ ವಿಸ್ತಾರಗೊಳ್ಳುತ್ತಲೇ ಇದೆ. ಹಲವಾರು ಹೊಸ ಟಿ.ವಿ. ಚಾನಲ್‍ಗಳು ರಾಜ್ಯದಲ್ಲಿ ಕಾರ್ಯಾರಂಭ ಮಾಡಿ, ವೀಕ್ಷಕರಿಗೆ ಸುದ್ದಿ ನೀಡಲು ಪೈಪೋಟಿಗಿಳಿದಿವೆ.

12. ವೃತ್ತ ಪತ್ರಿಕೆಯೇ ಮಾಧ್ಯಮ ಎನ್ನುವ ದಿನಗಳಿಂದ ಅದೆಷ್ಟೋ ದೂರ ಸಾಗಿ ಬಂದಿದ್ದೇವೆ, ತಂತ್ರಜ್ಞಾನಕ್ಕೆ ಹೊರಳಿಕೊಂಡಿದ್ದೇವೆ. ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಷಣಾರ್ಧದಲ್ಲಿ ಜನರಿಗೆ ಮಾಹಿತಿ ತಲುಪಿಸುವಂತಾಗಿದೆ.

13. ಆದರೆ ಮಾಧ್ಯಮಗಳು ಮಾನವೀಯ ಕಳಕಳಿಯುಳ್ಳ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಸುದ್ದಿಗಳನ್ನು, ವಿಚಾರಗಳೆಡೆ ಹೆಚ್ಚಿನ ಗಮನ ಹರಿಸಬೇಕಿದೆ.

14. ಸಮಾಜದ ಅಭಿಪ್ರಾಯ ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ನಿರ್ಣಾಯಕ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

15. ಅಭಿವೃದ್ಧಿ ಕಾರ್ಯಕ್ರಮಗಳ ಯಶೋಗಾಥೆಯನ್ನು ಹಾಗೂ ಸರ್ಕಾರದ ಜನಪರ ಚಿಂತನೆಗಳ ಬಗೆಗೂ ಮಾಧ್ಯಮಗಳು ಬೆಳಕು ಚೆಲ್ಲುವ ಕೆಲಸವನ್ನು ಮಾಡಬೇಕಿದೆ.

16. ಅಪರಾಧ ಸುದ್ದಿಗಳಲ್ಲಿ ಕ್ರೌರ್ಯವನ್ನು ಹೆಚ್ಚಾಗಿ ವೈಭವೀಕರಿಸದೆ ವಸ್ತುನಿಷ್ಠ ವರದಿಗಳನ್ನು ಜನರ ಮುಂದಿಡಬೇಕು. ಮನರಂಜನೆಯೊಂದಿಗೆ ಮಾಹಿತಿ ನೀಡುವ ಕೆಲಸವನ್ನೂ ಮಾಧ್ಯಮಗಳು ಇಂದು ಮಾಡಬೇಕಿದೆ.

17. ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಬದ್ಧತೆಯನ್ನು ಅಳವಡಿಸಿಕೊಳ್ಳಬೇಕಾದುದು, ಇಂದಿನ ಅಗತ್ಯವಾಗಿದೆ.

18. ಸರ್ಕಾರ ಹಮ್ಮಿಕೊಳ್ಳುವ ಜನಪರ ಕೆಲಸಗಳನ್ನು ನಾಡಿನ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಮಾಧ್ಯಮಗಳಿಗೆ ಸುಲಭಸಾಧ್ಯ.

19. ಆದರೆ ಸರ್ಕಾರದ ಯೋಜನೆಗಳ ಹಿಂದಿನ ಉದ್ದೇಶ, ಅವುಗಳ ಸಂಪೂರ್ಣ ಮಾಹಿತಿಗಳು ಮಾಧ್ಯಮಗಳಲ್ಲಿ ಬಿಂಬಿತವಾಗದೇ ಇರುವುದು ದುರದೃಷ್ಟಕರ.

20. ಪತ್ರಕರ್ತರು ನೇರವಂತಿಕೆ, ನಿಷ್ಠುರತೆ, ವಸ್ತುನಿಷ್ಠ ಹಾಗೂ ಸತ್ಯನಿಷ್ಠ ವರದಿಗಳನ್ನು ನೀಡುತ್ತಾ ಮಾಧ್ಯಮದ ಮೌಲ್ಯಗಳನ್ನು ಸದಾಕಾಲ ಎತ್ತಿ ಹಿಡಿಯಬೇಕು ಎನ್ನುವುದು ನನ್ನ ಆಶಯ.

21. ಸರ್ಕಾರದ ಆಡಳಿತ. ನೀತಿ- ನಿರೂಪಣೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪತ್ರಕರ್ತರು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕೆಂಬುದು ನನ್ನ ಮನವಿ.

22. ಕಳೆದ ಎಂಟು ತಿಂಗಳ ತಮ್ಮ ಆಡಳಿತದಲ್ಲಿ ರೈತರ ಸಾಲಮನ್ನಾ, ಸಣ್ಣ ವ್ಯಾಪಾರಿಗಳ ಶೋಷಣೆ ತಪ್ಪಿಸಲು ಜಾರಿಗೆ ತಂದಿರುವ ಬಡವರ ಬಂಧು ಯೋಜನೆ, ಕಾಯಕ ಯೋಜನೆಗಳು ಈ ನಾಡಿನ ರೈತ, ಶ್ರಮಿಕ ವರ್ಗಗಳನ್ನು ಕೈ ಹಿಡಿದು ಮೇಲೆತ್ತುವ ಕೆಲಸವಾಗಿದೆ. ಇದು ನನ್ನ ಮತ್ತು ನಮ್ಮ ಸರ್ಕಾರದ ಹೃದಯದಿಂದ ರೂಪಿಸಲ್ಪಟ್ಟ ಈ ಯೋಜನೆಗಳು, ಇವು ಅರ್ಥಪೂರ್ಣ ಅನುಷ್ಠಾನಗೊಳ್ಳುವಲ್ಲಿ ಮಾಧ್ಯಮಗಳ ಪಾತ್ರವೂ ಬಹುಮುಖ್ಯ. ನಿಮ್ಮಗಳ ವಿಮರ್ಶೆಯೂ ಹೃದಯದಿಂದ ಹೊರಬರಲಿ.

23. ಉತ್ತಮ ಆಡಳಿತ ನೀಡಲು ಪೂರ್ವಾಗ್ರಹವಿಲ್ಲದ ವಿಮರ್ಶೆ ಯೊಂದು ಆಡಳಿತದ ದಾರಿಯನ್ನು ತೋರುತ್ತದೆ. ಅದನ್ನುನಿಮ್ಮಿಂದ ನಿರೀಕ್ಷಿಸುತ್ತೇನೆ.

24. ಪತ್ರಿಕೋದ್ಯಮ ಇಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅನೇಕ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಸುದ್ದಿಮನೆಗಳಲ್ಲಿ ದುಡಿಯುವ ಪತ್ರಕರ್ತರು ಆರೋಗ್ಯ, ಆರ್ಥಿಕ ಸಂಕಷ್ಟಗಳಿಗೆ ಸಿಕ್ಕಿನಲುಗುವುದು ನಾನು ಕಣ್ಣಾರೆ ಕಂಡಿದ್ದೇನೆ. ಪತ್ರಕರ್ತರು ಅನಾರೋಗ್ಯ, ಅಪಘಾತ ದಂತಹ ದುರಂತಗಳಿಗೆ ಈಡಾಗಿ ಅವರ ಕುಟುಂಬ ದ ದುಃಖ ಕಂಡಾಗ ನನ್ನ ಮನಸ್ಸು ಘಾಸಿಗೊಳ್ಳುತ್ತದೆ.

25. ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಪೂರಕ ನೆರವು ನೀಡಲು ರಾಜ್ಯಸರ್ಕಾರ ಸದಾ ಸಿದ್ದವಿದೆ. ಈಗಾಗಲೇ ಜಾರಿಯಲ್ಲಿರುವ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

26. ಕಾರ್ಯಾಗಾರ, ವಿಚಾರ ಸಂಕಿರಣಗಳ ಮೂಲಕ ಪತ್ರಕರ್ತರ ಬೌದ್ಧಿಕ ಶಕ್ತಿಯನ್ನು ಇನ್ನಷ್ಟು ಸದೃಢಗೊಳಿಸುವ. ಹೊಸತಲೆಮಾರಿನ ಪತ್ರಕರ್ತರನ್ನು ಸಮಾಜಮುಖಿಯಾಗಿ ಸಜ್ಜುಗೊಳಿಸುವ ರಚನಾತ್ಮಕ ಕೆಲಸಗಳನ್ನು ಸರ್ಕಾರ ಮಾಡುತ್ತಾ ಬಂದಿದೆ.

27. ಇಂದು ದೇಶದಲ್ಲಿ ಸುಳ್ಳುಗಳೆ ವಿಜೃಂಬಿಸುತ್ತಾ ಸತ್ಯವನ್ನು ಮರೆಮಾಚಲಾಗುತ್ತಿದೆ. ನಿಜವಾದ ಸುದ್ದಿ ಯಾವುದು ಎಂಬ ಗೊಂದಲವನ್ನೆ ಜನರಲ್ಲಿ ಹುಟ್ಟು ಹಾಕುವ ಷಡ್ಯಂತ್ರಗಳು ನಡೆಯುತ್ತಿದೆ. ಸಾಂಪ್ರದಾಯಿಕ ಮಾಧ್ಯಮಗಳ ಜೊತೆಗೆ ಇಂದಿನ ನವ ಮಾಧ್ಯಮಗಳು ಜನರ ವಿಶ್ವಾಸಾರ್ಹತೆಯನ್ನೆ ನಾಶ ಮಾಡುವ ಸಂದರ್ಭಗಳು ಆತಂಕಕಾರಿಯಾಗಿವೆ.

28. ದೇಶವನ್ನು ಧರ್ಮ. ಜಾತಿ ಹೆಸರಲ್ಲಿ ವಿಭಜಿಸುವ ಶಕ್ತಿಗಳಿಂದ ಜನರನ್ನು ರಕ್ಷಿಸುವುದು ಮತ್ತು ಸಂವಿಧಾನದ ಆಶಯಗಳನ್ನು ಈಡೇರಿಸುವುದು ಮಾಧ್ಯಮಗಳ, ಪತ್ರಕರ್ತರ ಇವತ್ತಿನ ತುರ್ತು ಕೆಲಸವಾಗಿದೆ. ಇದನ್ನು ತಾವೆಲ್ಲರೂ ಮಾಡುತ್ತೀರ ಎಂಬ ವಿಶ್ವಾಸದೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಎಲ್ಲರಿಗೂ ಮತ್ತೊಮ್ಮೆ ಶುಭಾಶಯಗಳು.

5 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ

ಮಂಡ್ಯ: ಸಕ್ಕರೆ ನಾಡು ಮಂಡ್ಯಗೆ ಸಿಎಂ ಕುಮಾರಸ್ವಾಮಿ ಬರಪೂರ ಕೊಡುಗೆ ನೀಡಿದ್ದಾರೆ. ಬರೊಬ್ಬರಿ ಐದು ಸಾವಿರ ಕೋಟಿ ರೂಪಾಯಿ ಯೋಜನೆಗಳನ್ನು ನೀಡಿದ್ದು, ಇಂದು ಈ ಎಲ್ಲಾ ಯೋಜನೆಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಮಂಡ್ಯ ಜನತೆ ಬಗ್ಗೆ ತಮಗಿರುವ ಭಾವನೆಗಳನ್ನು ಬಿಚ್ಚಿಟ್ಟರು.

ಸರ್ಕಾರಿ ಮಹಾ ವಿದ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 5 ಸಾವಿರ ಕೋಟಿ ರೂ.ಗಳ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನೆಯ ಮಗನಾಗಿ ಈ ಜಿಲ್ಲೆಯ ಜನತೆಯ ಋಣವನ್ನು ತೀರಿಸಲು ಪ್ರಯತ್ನಿಸಿದ್ದೇನೆ ಎಂದರು.

ನಾನು ಕೇವಲ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಮಾತ್ರ ಒತ್ತು ನೀಡಿಲ್ಲ. ನಾನು ಯಾವುದೋ ಒಂದು ಭಾಗಕ್ಕೆ ಮಾತ್ರ ಮುಖ್ಯಮಂತ್ರಿಯಲ್ಲ, ಇಡೀ ನಾಡಿನ ಮುಖ್ಯಮಂತ್ರಿಯಾಗಿದ್ದು, ಇಡೀ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

ಮೈಸೂರು ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕಾಗಿ ಎಲ್ಲಾ ಸರ್ಕಾರಗಳು 340 ಕೋಟಿ ರೂ. ನೀಡಿವೆ. ಈ ಹಿನ್ನೆಲೆಯಲ್ಲಿ ಪುನಶ್ಚೇತನ ಮಾಡುವುದನ್ನು ಬಿಟ್ಟು ಸುಮಾರು 450 ಕೋಟಿ ರೂ.ಗಳಲ್ಲಿ ಹೊಸ ಕಾರ್ಖಾನೆ ಸ್ಥಾಪಿಸಲು ನಿರ್ಧರಿಸಿದ್ದು, ಬರುವ ಏಪ್ರಿಲ್ ಅಥವಾ ಮೇ ಮೊದಲ ವಾರದಲ್ಲಿ ಶಂಕುಸ್ಥಾಪನೆ ಮಾಡುತ್ತೇನೆ. ಇದಕ್ಕೆ ಮೊದಲ ಹಂತವಾಗಿ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದಾಗಿ ಅವರು ತಿಳಿಸಿದರು.

ಪಿಎಸ್‍ಎಸ್‍ಕೆ ಕಾರ್ಖಾನೆಯ ಮೇಲೆ 42 ಸಾವಿರ ಕೋಟಿ ರೂ. ಸಾಲ ಇದೆ. ಅದನ್ನೂ ಸಹ ಪ್ರಾರಂಭಿಸಲು ಅಧಿಕಾರಿಗಳ ಜೊತೆ ಸಭೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಇಂದು ಜಿಲ್ಲೆಯ ಅಭಿವೃದ್ಧಿಗೆ ಚಾಲನೆ ನೀಡಿದ್ದೇನೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ನನ್ನ ಹೃದಯದಲ್ಲಿ ಗುರಿ ಇಟ್ಟುಕೊಂಡಿದ್ದೇನೆ. ನನ್ನ ಉಸಿರಿರುವವರೆಗೂ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದರು.

ಮಂಡ್ಯ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸಾ.ರಾ. ಮಹೇಶ್, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ಕೆ.ಸುರೇಶ್‍ಗೌಡ, ಕೆ.ಸಿ.ನಾರಾಯಣಗೌಡ, ಡಾ. ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಇತರರು ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆ ಮೂಲಸೌಕರ್ಯಕ್ಕೆ ಆದ್ಯತೆ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

0

ಬೆಂಗಳೂರು, ಫೆಬ್ರುವರಿ 25-

ರಾಜ್ಯ ಪೊಲೀಸ್ ಇಲಾಖೆಯು ದೇಶದಲ್ಲೇ ಅತ್ಯುತ್ತಮ ವ್ಯವಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಬದಲಾದ ಸನ್ನಿವೇಶಗಳಲ್ಲಿ ಪೊಲೀಸ್ ಇಲಾಖೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ತಿಳಿಸಿದರು.

ಇಂದು ಪೊಲೀಸ್ ಮುಖ್ಯ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಇದಕ್ಕಾಗಿ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಒದಗಿಸಲು ಸಹ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ ಅತ್ಯುತ್ತಮವಾಗಿರುವುದನ್ನು ಗಮನಿಸಿ, ಹರ್ಷ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಮುಂದಿನ ಚುನಾವಣೆ ಸಂದರ್ಭದಲ್ಲಿಯೂ ಶಾಂತಿಗೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಕೋಮುಗಲಭೆಯಿಂದ ಕ್ಷೋಭೆಗೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಅಧಿಕಾರಿಗಳು ಶ್ರಮಿಸಿರುವುದನ್ನು ಶ್ಲಾಘಿಸಿದರು.

ಪೊಲೀಸ್ ಇಲಾಖೆ ಜನಸಾಮಾನ್ಯರಿಗೆ ರಕ್ಷಣೆ ಕೊಡುವ ಇಲಾಖೆ. ಪೊಲೀಸರು ಸೈನಿಕರಿಗಿಂತ ಕಡಿಮೆ ಅಲ್ಲ. ಕೊಡಗು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಅವರಿಗೆ ಅಭಿನಂದನೆ ಸಲ್ಲಿಸಿದರು.

ಪೊಲೀಸ್ ಇಲಾಖೆಯಲ್ಲಿ ಸೈಬರ್ ಅಪರಾಧ ವಿಭಾಗವನ್ನು ಸದೃಢಗೊಳಿಸುವ ಅಗತ್ಯವನ್ನು ಸರ್ಕಾರ ಮನಗಂಡಿದೆ. ಈ ನಿಟ್ಟಿನಲ್ಲಿ ಸೈಬರ್ ಅಪರಾಧ ವಿಭಾಗವನ್ನು ಸಬಲಗೊಳಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್ ಠಾಣೆಗಳಲ್ಲಿ ಜನಸ್ನೇಹಿ ವಾತಾವರಣ ನಿರ್ಮಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸೂಚನೆ ನೀಡಿದರು.

ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿಯ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು.

ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ ಹಿರಿಯ ಅಧಿಕಾರಿಗಳು, ಗೃಹ ಸಚಿವರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಅಂತೆಯೇ ಔರಾದಕರ್ ವರದಿ ಜಾರಿಯ ಕುರಿತು ಸಹ ಚರ್ಚಿಸಲು ಶೀಘ್ರವೇ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಂಚಾರ ವ್ಯವಸ್ಥೆ ನಿರ್ವಹಣೆಯಲ್ಲಿ ಇನ್ನಷ್ಟು ಸುಧಾರಣೆ ಅಗತ್ಯ ಮತ್ತು ಅಪರಾಧ ಸಾಬೀತಾಗಿ ಶಿಕ್ಷೆ ದೊರೆಯುವ ಪ್ರಮಾಣ ಹೆಚ್ಚಳವಾಗುವುದೂ ಅತಿ ಅಗತ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್. ರಾಜು ಮೊದಲಾದವರು ಉಪಸ್ಥಿತರಿದ್ದರು.

ಬೊಮ್ಮನಹಳ್ಳಿಯಲ್ಲಿ ಅನಾವರಣಗೊಳ್ಳಲಿದೆ ರಾಜ್ಯದ ಮೊದಲ ಕಾರ್ ಪಾರ್ಕ್

ಬೆಂಗಳೂರು ಫೆಬ್ರವರಿ 25: ನೂರು ಅಡಿ ಎತ್ತರಕ್ಕೆ ಜೋಡಿಸಿಟ್ಟ ವಿಂಟೇಜ್ ಕಾರ್ ಗಳು. 3 ಸಾವಿರ ಜನರು ಒಟ್ಟಿಗೆ ಕುಳಿತು ಸಂಭ್ರಮಿಸಬಹುದಾದ ಅತ್ಯಾಧುನಿಕ ಸಾಮಗ್ರಿಗಳನ್ನು ಹೊಂದಿರುವ ಬಯಲು ರಂಗ ಮಂದಿರ. ಕಿವಿಗೆ ತಂಪು ನೀಡುವ ಹಕ್ಕಿಗಳ ಕಲವರವ. ಸಮುದ್ರದ ಮರಳಿನ ಮೇಲೆ ಮಕ್ಕಳಿಗೆ ಕುಣಿದಾಡಲು ಅವಕಾಶ ಮಾಡಿ ಕೊಡುವ ಸ್ಯಾಂಡ್ ಪಿಟ್, ಆಮೆಗಳ ಹಾಗೂ ಮೊಲಗಳ ಸದ್ದು.ಇವು ಫೆಬ್ರವರಿ 27 ರಂದು ಬೊಮ್ಮನಹಳ್ಳಿಯಲ್ಲಿ ಉದ್ಘಾಟನೆಯಾಗಲಿರುವ ರಾಜ್ಯದ ಮೊದಲ “ಕಾರ್ ಪಾರ್ಕ್” ನ ಹೈಲೈಟ್ಸ್.

ಸಾರ್ವಜನಿಕರಿಗೆ ಅನುಕೂಲವಾಗುವಂತಹದ್ದೇನಾದರೂ ನೀಡಲೇಬೇಕು ಎನ್ನುವ ಗುರಿ ಜನಪತ್ರಿನಿಧಿಗೆ ಇದ್ದರೆ ಹಲವಷ್ಟನ್ನು ಸಾಧಿಸಬಹುದು. ಕಸದಿಂದ ರಸ ಹಾಗೂ ಕಸದ ಕೊಂಪೆಯನ್ನು ಸ್ವರ್ಗಗೊಳಿಸಲು ತಮ್ಮ ತನು ಮನವನ್ನು ಮುಡಿಪಾಗಿಟ್ಟಿದ್ದಾರೆ ಬೊಮ್ಮನಹಳ್ಳಿ ಬಿಬಿಎಂಪಿ ಸದಸ್ಯ ರಾಮ್ ಮೋಹನರಾಜು.

ಕಸದ ಕ್ವಾರಿಯಲ್ಲಿ ಬಂಡೇಪಾರ್ಕ್, ಅಂತರಾಷ್ಟ್ರೀಯ ಗುಣಮಟ್ಟದ ಸವಲತ್ತುಗಳನ್ನು ಹೊಂದಿರುವ ಬೊಮ್ಮನಹಳ್ಳಿ ಹಿರಿಮೆಗೆ ಮತ್ತೊಂದು ಗರಿ ಕಾರ್ ಪಾರ್ಕ್‍ನ್ನು ಜೋಡಿಸಿದ್ದಾರೆ ಬಿಬಿಎಂಪಿ ಸದಸ್ಯರಾದ ರಾಮ್ ಮೋಹನರಾಜು ಅವರು.

ಪ್ರೆಸ್‍ಕ್ಲಬ್ ನಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಲವಾರು ವರ್ಷಗಳಿಂದ ಸಮರ್ಪಕವಾಗಿ ಬಳಕೆಯಾಗದೇ ಇದ್ದ ಜಾಗವನ್ನು ರಾಜ್ಯದಲ್ಲೆ ಹೆಸರುವಾಸಿ ಯಾಗುವಂತೆ ಮಾಡಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ಈ ಹಿನ್ನಲೆಯಲ್ಲಿ ಶಾಸಕರಾದ ಸತೀಶ್ ರೆಡ್ಡಿ, ಸಂಸದರಾಗಿದ್ದ ದಿವಂಗತ ಅನಂತ ಕುಮಾರ್ ಅವರ ಸಹಕಾರದಿಂದಾಗಿ ರಾಜ್ಯದಲ್ಲೇ ಇಲ್ಲದಂತಹ ಉದ್ಯಾನವನ್ನು ನಿರ್ಮಿಸಲು ಸಾಧ್ಯವಾಗಿದೆ. ವಾರ್ಡ್ ನ ಜನರು ಮೂಲಭೂತ ಸೌಕರ್ಯಗಳ ಜೊತೆಯಲ್ಲಿಯೇ ಆರೋಗ್ಯಕರವಾದ ಜೀವನ ಶೈಲಿಯನ್ನು ಬೆಳೆಸಿಕೊಳ್ಳುವಂತೆ ಮಾಡುವುದು ನಮ್ಮ ಗುರಿಯಾಗಿತ್ತು. ಯುವ ಜನರಲ್ಲಿ ಮೊಬೈಲ್ ಗೀಳನ್ನು ಬಿಡಿಸಿ ದೈಹಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಬೇಕು. ಈ ಹಿನ್ನಲೆಯಲ್ಲಿ ಮಕ್ಕಳಾಟಕ್ಕೆ ಅಗತ್ಯವಾದ ಸಲಕರಣೆಗಳು. ಒಪನ್ ಜಿಮ್ ಹಾಗೂ ಕಲಾವಿದರ ಪ್ರೋತ್ಸಾಹಕ್ಕೆ ಬಯಲು ರಂಗಮಂದಿರವನ್ನು ಇಲ್ಲಿ ನಿರ್ಮಿಸಿದ್ದೇವೆ ಎಂದರು.

ಫೆಬ್ರವರಿ 27 ರಂದು ಉದ್ಘಾಟನೆಯಾಗಲಿರುವ ಈ ಕಾರ್ ಪಾರ್ಕ್ ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ, ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ, ಬಿಬಿಎಂಪಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ, ಬಿಬಿಎಂಪಿ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.

ಯಡಿಯೂರಪ್ಪನವರಿಗೆ ಬುದ್ಧಿ ಭ್ರಮಣೆಯಾಗಿದೆ: ಡಿಕೆಶಿ

ಬೆಂಗಳೂರು:ಯಲಹಂಕ ವಾಯುನೆಲೆಯಲ್ಲಿ ಬೆಂಕಿ ಅವಘಡಕ್ಕೆ ರಾಜ್ಯ ಸರ್ಕಾರ ನೇರ ಹೊಣೆ ಎಂದು ಹೇಳಿಕೆ ನೀಡಿರುವ ಬಿಎಸ್ ವೈ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರ ಬೆಂಗಳೂರಿನ ಬಂಗಲೆಯಲ್ಲಿ ಸೋಮವಾರ ಏರ್ಪಡಿಸಲಾದ ಉಪಹಾರ ಕೂಟದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಕಿಡಿಕಾರಿದ್ದು ಹೀಗೆ…

‘ಅದು ರಕ್ಷಣಾ ಇಲಾಖೆಯ ಕಾರ್ಯಕ್ರಮ
ಅದೇಗೆ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡ್ತಾರೆ? ಸಿಎಂಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿದ್ರು. ಹೀಗಾಗಿ ಕಾರ್ಯಕ್ರಮಕ್ಕೆ ಹೋಗಿದ್ದರು ಅಷ್ಟೇ. ಟೀಕೆ ಮಾಡಬೇಕೆಂದು ಮಾಡೋದು ಬೇಡ. ಯಡಿಯೂರಪ್ಪ ಒಬ್ಬ ಸೀನಿಯರ್ ರಾಜಕಾರಣಿ. ಈ ರೀತಿ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಯಡಿಯೂರಪ್ಪ ಗೆ ಬುದ್ದಿ ಭ್ರಮಣೆ ಆಗಿದೆ. ಅದಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ.’

ಇನ್ನು ಬೆಂಕಿ ಅವಘಡಕ್ಕೂ, ಪುಲ್ವಾಮಾ ಘಟನೆಗೂ ಲಿಂಕ್ ಇದೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವರು, ‘ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಾಗೂ ಸಚಿವರು ಇದ್ದಾರೆ. ಅವರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಲಿ’ ಎಂದರು.

ದಲಿತರಿಗೆ ಸೂಕ್ತ ಸ್ಥಾನಮಾನ:

ಸಿಎಂ ಸ್ಥಾನ ತಪ್ಪಿಸಿರುವ ಬಗ್ಗೆ ಡಿಸಿಎಂ ಪರಮೇಶ್ವರ್ ಹೇಳಿಕೆಗೆ ಡಿಕೆಶಿ ಸ್ಪಷ್ಟನೆ ನೀಡಿದ್ದು, ‘ನಮ್ಮ ಪಕ್ಷದಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನ. ಇಡೀ ದೇಶದಲ್ಲಿ ಎಸ್ಸಿ, ಎಸ್ಟಿ ಕಾಯ್ದೆ ಮಾಡಿಲ್ಲ. ನಮ್ಮಲ್ಲಿ ಮಾತ್ರ ಮಾಡಿದ್ದೀವಿ.

ಖರ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ಹಾಗೂ ಪರಮೇಶ್ವರ್ ಡಿಸಿಎಂ, ಸಚಿವರಾಗಿದ್ದಾರೆ. ದಲಿತ ಸಮುದಾಯದ ಎಲ್ಲ ಉಪಸಮುದಾಯದ ಮುಖಂಡರಿಗೂ ಸ್ಥಾನ ಕೊಟ್ಟಿದೀವಿ. ನಮ್ಮಲ್ಲಿ ಸಮಸ್ಯೆ ಏನೂ ಇಲ್ಲ. ‘ ಎಂದು ಸ್ಪಷ್ಟನೆ ನೀಡಿದ್ದಾರೆ.

ಲೋಕಸಭಾ ಚುನಾವಣಾ ಟಿಕೆಟ್ ಹಂಚಿಕೆ ಸಂಬಂಧ ಯಾವುದೇ ಗೊಂದಲ ಇಲ್ಲ‌. ನಮ್ಮಲ್ಲಿ ಸೀಟು ಹಂಚಿಕೆ ಬಗ್ಗೆ ಗೊಂದಲ ಇಲ್ಲ. ಎರಡೂ ಪಕ್ಷಗಳು ಸೇರಿ ಚುನಾವಣೆ ಎದುರಿಸ್ತೇವೆ. ಕಾಂಗ್ರೆಸ್ ಯಾವಾಗಲೂ ದಲಿತರ ಹಿತ ಕಾಯುತ್ತಿದೆ’ ಎಂದರು.

ಸುಮಲತಾ ಮನವೊಲಿಕೆಯ ಸುಳಿವು:
ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಗಮನ ಸೆಳೆದಿರುವ ಮಂಡ್ಯ ರಾಜಕಾರಣ ಹಾಗೂ ಸುಮಲತಾ ಅವರ ರಾಜಕೀಯ ಪ್ರವೇಶ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು ಹೇಳಿದ್ದಿಷ್ಟು…

‘ಮಂಡ್ಯದಲ್ಲಿ ಈಗಾಗಲೇ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದಾರೆ. ಹಾಗಾಗಿ ಅಲ್ಲಿ ಜೆಡಿ ಎಸ್ ಸ್ಪರ್ಧೆ ಮಾಡುತ್ತದೆ. ಸುಮಲತಾ ಅಂಬರೀಶ್ ರಾಜಕೀಯಕ್ಕೆ ಬರುವುದಾದರೆ ಸಾಕಷ್ಟು ಅವಕಾಶಗಳಿವೆ. ಅವರ ಮನವೊಲಿಸುವ ಕೆಲಸ ನಮ್ಮ ನಾಯಕರು ಮಾಡ್ತಾರೆ. ಕಾರ್ಯಕರ್ತರು ಒತ್ತಡ ಹಾಕಬಹುದು ಅವರ ಜೊತೆ ನಮ್ಮ ನಾಯಕರು ಮಾತುಕತೆ ನಡೆಸುತ್ತಾರೆ. ಕಾರ್ಯಕರ್ಯರಿಗೆ ಬುದ್ಧಿ ಹೇಳ್ತೀವಿ. ಸುಮಲತಾ ಅವರಿಗೂ ಪರಿಸ್ಥಿತಿ ವಿವರಿಸಿದ್ದೇವೆ.