ಏರೋ ಇಂಡಿಯಾ ಅವಘಡ ಕುರಿತು ಉನ್ನತ ಮಟ್ಟದ ಸಭೆ

ಬೆಂಗಳೂರು, ಫೆಬ್ರುವರಿ 24:ಇಂದು ಮುಕ್ತಾಯಗೊಂಡ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಕುರಿತು ಪರಾಮರ್ಶೆ ನಡೆಸಲು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಎಂ. ಬಿ. ಪಾಟೀಲ್ ಅವರು ಈ ಕಾರ್ಯಕ್ರಮದ ಕುರಿತು ಕೂಲಂಕಷವಾಗಿ ಚರ್ಚಿಸಿದರು.

ಬೆಂಗಳೂರಿನಿಂದ ಈ ಕಾರ್ಯಕ್ರಮ ಸ್ಥಳಾಂತರವಾಗುವ ಕುರಿತು ಪುಕಾರುಗಳು ಹಬ್ಬಿದ್ದರೂ ಬೆಂಗಳೂರಿನಲ್ಲಿಯೇ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ರಕ್ಷಣಾ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿಯೂ ಈ ಕಾರ್ಯಕ್ರಮ ವನ್ನು ಬೆಂಗಳೂರಿನಲ್ಲಿಯೇ ಆಯೋಜಿಸುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಡೆದ ಎರಡು ಅಹಿತಕರ ಘಟನೆಗಳ ಬಗ್ಗೆ ಮುಖ್ಯಮಂತ್ರಿಗಳು ವಿಷಾದ ವ್ಯಕ್ತಪಡಿಸಿದರು.
ಸಭೆಯಲ್ಲಿ ಕಾರ್ಯಕ್ರಮದ ಪಾರ್ಕಿಂಗ್ ಸ್ಥಳದಲ್ಲಿ ಸಂಭವಿಸಿದ ಬೆಂಕಿ ಅವಘಡ ಹಾಗೂ ಘಟನೆಯ ನಂತರ ಕೈಗೊಂಡ ರಕ್ಷಣಾ ಕ್ರಮಗಳ ಕುರಿತು ಪರಾಮರ್ಶೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಂಬಂಧಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇಲಾಖೆಗಳು ಹಾಗೂ ಸಂಸ್ಥೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಲು ತೀರ್ಮಾನಿಸಲಾಯಿತು. ವಾಹನ ಕಳೆದುಕೊಂಡವರಿಗೆ ಎಲ್ಲ ರೀತಿಯ ಅಗತ್ಯ ನೆರವು ನೀಡಲು ನಿರ್ಧರಿಸಲಾಯಿತು.

ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ಅಯೋಜಿಸುವಾಗ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಹ ನಿರ್ಧರಿಸಲಾಯಿತು.ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸೀಟು ಹಂಚಿಕೆ ಸಂಬಂಧ ನಾಳೆ ಜೆಡಿಎಸ್‌ ನಾಯಕರೊಂದಿಗೆ ಸಭೆ:ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ದಾವಣಗೆರೆ: ಜೆಡಿಎಸ್ ಜೊತೆ ಲೋಕಸಭೆ ಚುನಾವಣೆ ಸಂಬಂಧ ಸೀಟು ಹಂಚಿಕೆಯ ಚರ್ಚೆ ನಡೆಯುತ್ತಿದೆ,ನಾಳೆ ಈ ಕುರಿತು ಜೆಡಿಎಸ್ ನಾಯಕರೊಂದಿಗೆ ಸಭೆ ನಡೆಸಲಿದ್ದು, ಬಗೆಹರಿಯದ ಕ್ಷೇತ್ರಗಳ ಹಂಚಿಕೆಯನ್ನು ಹೈಕಮಾಂಡ್‌ ನಿರ್ಧಾರ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ದಾವಣಗೆರೆ ಐಬಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಎಲ್ಲ ತಯಾರಿ ಮಾಡುತ್ತಿದೆ. ಅಧ್ಯಕ್ಷರು ಅನೇಕ‌ ಸಭೆ ಮಾಡಿದ್ದಾರೆ. ಚುನಾವಣಾ ಸಮಿತಿ ಸಭೆ ಕೂಡ ಆಗಿದೆ. ಜೊತೆಗೆ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ನಾವೆಲ್ಲ ಚರ್ಚೆ ಮಾಡಿದ್ದೇವೆ. ಕೆಳಹಂತದಲ್ಲಿ ಪಕ್ಷದ ಸಂಘಟನೆ ಮಾಡಲಾಗುತ್ತಿದೆ.‌ ನಮ್ಮ ತಯಾರಿ ಆಗಿದೆ. ಸಮ್ಮಿಶ್ರ ಸರಕಾರ ಇರುವುದರಿಂದ ಲೋಕಸಭಾ ಚುನಾವಣೆಗೂ ಒಟ್ಟಾಗಿ ಹೋಗಲಿದ್ದೇವೆ.

ಕೆಪಿಸಿಸಿ ಅಧ್ಯಕ್ಷರು ದೇವೇಗೌಡರ ಜೊತೆ ಮಾತನಾಡಿದ್ದಾರೆ. ನಾಳೆ ನಾನು ಹಾಗೂ ದಿನೇಶ್ ಗುಂಡೂರಾವ್‌ ಇಬ್ಬರು ಜೆಡಿಎಸ್ ಪಕ್ಷದ‌ ಮುಖಂಡರ ಜೊತೆ ಮಾತನಾಡಲಿದ್ದೇವೆ. ಆ ನಂತರ ಪರಸ್ಪರ ಸೀಟು ಹಂಚಿಕೆ ಮಾಡಲಾಗುತ್ತದೆ.
ಬಗೆಹರಿಯದ ಕ್ಷೇತ್ರವನ್ನು ರಾಹುಲ್ ಗಾಂಧಿ ಅವರ ಹಂತದಲ್ಲಿ ತೀರ್ಮಾನ ಮಾಡಲಿದ್ದೇವೆ. ಬಹುತೇಕ ನಮ್ಮ ಹಂತದಲ್ಲೇ ತೀರ್ಮಾನ ಮಾಡುವ ಭರವಸೆ ಇದೆ ಎಂದರು.

ಏರ್‌ಶೋನಲ್ಲಿ ನೆನ್ನೆ ನಡೆದ ಘಟನೆ ಬಹಳ ದುರಾದೃಷ್ಟಕ‌. ಈ ಬಗ್ಗೆ ತನಿಖೆಯಾದ ಬಳಿಕ ಘಟನೆಗೆ ಕಾರಣ ತಿಳಿಯಲಿದೆ. ಏರ್‌ ಶೋನಲ್ಲಿ ಹೆಚ್ಚಿನ‌ ಭದ್ರತೆ ತೆಗೆದುಕೊಳ್ಳಬೇಕಿತ್ತು.
ಕಾರು‌ ಕಳೆದುಕೊಂಡವರಿಗೆ ಯಾವ ರೀತಿ ಪರಿಹಾರ ಎಂಬುದನ್ನು ಚರ್ಚೆ ಮಾಡ್ತೀವಿ ಎಂದರು.

ಆಪರೇಷನ್ ಕಮಲ ಪ್ರಕರಣ ಸಂಬಂಧ ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ಆಡಿಯೋ ಪ್ರಕರಣವನ್ನು ಎಸ್‌ಐಟಿಗೆ ವಹಿಸುತ್ತೇವೆ.‌ ಇದರಿಂದ ಹಿಂದೆ ಸರಿಯೋ ಪ್ರಶ್ನೆ ಇಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ರು.

ಎಸ್‌ಸಿ ಎಸ್‌ಟಿ ಬಡ್ತಿ ಮೀಸಲಾತಿ ಕಾಯಿದೆಗೆ ನಿಯಮ ಮಾಡಬೇಕಿದೆ. ನಿಯಮ ಮಾಡುವ ಪ್ರಕ್ರಿಯೆ ಕೂಡ ಬಹುತೇಕ‌ಪೂರ್ಣವಾಗಿದ್ದು, ನಾಳೆ ಕ್ಯಾಬಿನೆಟ್‌ಗೆ ತೆಗೆದುಕೊಂಡು ಹೋಗಲಿದ್ದೇವೆ ಎಂದರು.

ಬಿಜೆಪಿ ತೊರೆದು ಜೆಡಿಎಸ್, ಕಾಂಗ್ರೆಸ್‍ಗೆ ಬನ್ನಿ: ಡಿಕೆಶಿ ಕರೆ

ಚನ್ನಪಟ್ಟಣ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರದು ಬಡವರ ಮಕ್ಕಳನ್ನು ಬಾವಿಗೆ ತಳ್ಳಿ, ಆಳ ನೋಡುವ ಜಾಯಮಾನ. ಅಂಥ ನಾಯಕನನ್ನು ನಂಬಿ, ಬದುಕು ಮತ್ತು ಭವಿಷ್ಯ ಹಾಳು ಮಾಡಿಕೊಳ್ಳುವ ಬದಲು ಜೆಡಿಎಸ್ ಇಲ್ಲವೇ ಕಾಂಗ್ರೆಸ್ ಸೇರ್ಪಡೆಗೊಳ್ಳುವಂತೆ ಚನ್ನಪಟ್ಟಣದ ಬಿಜೆಪಿ ಕಾರ್ಯಕರ್ತರಿಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆಹ್ವಾನ ನೀಡಿದರು.

ಚನ್ನಪಟ್ಟಣದಲ್ಲಿ ಇಂದು ನಡೆದ 745 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಚನ್ನಪಟ್ಟಣದಲ್ಲಿ ಬಿಜೆಪಿಗೆ ಹೋಗಿ ಅನೇಕರು ಮೋಸ ಹೋಗಿದ್ದಾರೆ. ಯಾರನ್ನೋ ಬದುಕಿಸಲು ಶ್ರಮಪಡುವ ಬದಲು ನಿಮ್ಮ ಬದುಕು, ಭವಿಷ್ಯವನ್ನು ರೂಪಿಸಿಕೊಳ್ಳಲು ಪಕ್ಷಾಂತರ ಮಾಡಬೇಕು ಎಂದರು.

ಬಿಜೆಪಿಗೆ ಹೋಗಿದ್ದವರಿಗೆ ತಮ್ಮ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮನೆ ಬಾಗಿಲು ಸದಾ ತೆರೆದಿರುತ್ತದೆ. ಬಿಜೆಪಿ ತೊರೆದು, ಜೆಡಿಎಸ್ ಅಥವಾ ಕಾಂಗ್ರೆಸ್ ಪೈಕಿ ಯಾವುದಾದರೂ ಪಕ್ಷ ಸೇರ್ಪಡೆಗೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಂಸದ ಡಿ.ಕೆ.ಸುರೇಶ್ ಪರ ಕೆಲಸ ಮಾಡಿ ಎಂದು ಶಿವಕುಮಾರ್ ಕರೆ ನೀಡಿದರು.

ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರವನ್ನು ಕೆಡವಿ, ನಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಮಾಜಿ ಸಚಿವ ಯೋಗೇಶ್ವರ್ ನಡೆಸಿದ ಸಂಚು ಫಲಿಸಲಿಲ್ಲ. ರಾಮನಗರ ಉಪ ಚುನಾವಣೆಯಲ್ಲಿ ಒಬ್ಬ ಗಂಡನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬಂದು, ಅರ್ಜಿ ಹಾಕಿಸಿದರು. ಆದರೆ, ಆ ಗಂಡು ತಾನು ಮೋಸ ಹೋಗಿದ್ದನ್ನು ಮನಗಂಡು ನಮ್ಮ ಬಳಿ ವಾಪಸ್ಸಾದ ಎಂದು ಅವರು ವ್ಯಂಗ್ಯವಾಡಿದರು.

ನಾವು ರೆಡಿಮೇಡ್ ಗಂಡುಗಳು:

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಾನು, ನನ್ನ ತಮ್ಮ ಡಿ.ಕೆ.ಸುರೇಶ್ ರೆಡಿಮೇಡ್ ಗಂಡುಗಳು. ನಮ್ಮನ್ನು ಸೋಲಿಸಲು ಆಗದು. ಹಾಲು ಕುಡಿದ ಮಕ್ಕಳೇ ಬದುಕೋದಿಲ್ಲ. ಇನ್ನು, ವಿಷ ಕುಡಿದ ಮಕ್ಕಳು ಬದುಕುತ್ತವಾ ಎನ್ನುವ ನಾಣ್ಣುಡಿಯೊಂದಿಗೆ ಶಿವಕುಮಾರ್ ಅವರು ತಮ್ಮ ರಾಜಕೀಯ ಕಡುವೈರಿ ಯೋಗೇಶ್ವರ್ ಅವರನ್ನು ತಮ್ಮ ಭಾಷಣದುದ್ದಕ್ಕೂ ಟಾಂಗ್ ನೀಡಿದರು.

ರಾಜ್ಯದಲ್ಲಿ ಜಾತ್ಯತೀತ ತತ್ವ, ಸಿದ್ಧಾಂತರದ ಮೇಲೆ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರಕಾರಕ್ಕೆ ಕೆಲಸ ಮಾಡಲು ಕನಿಷ್ಠ 1 ವರ್ಷದ ಅವಕಾಶವ ನೀಡುವಷ್ಟೂ ತಾಳ್ಮೆ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಲ್ಲ. ಸರಕಾರ ಕೆಡವಲು ಯಡಿಯೂರಪ್ಪ ಜತೆ ಯೋಗೇಶ್ವರ್ ಇನ್ನಿಲ್ಲದ ಕಸರತ್ತು, ಮಸಲತ್ತು ನಡೆಸಿದರು. ಅದ್ಯಾವುದೂ ಕೈಗೂಡಲಿಲ್ಲ. ಮುಂದೆಯೂ ಕೈಗೂಡುವುದಿಲ್ಲ ಎಂದು ಶಿವಕುಮಾರ್ ಗೇಲಿ ಮಾಡಿದರು.

ತೇಜಸ್ ಲಘು ಯುದ್ದ ವಿಮಾನದಲ್ಲಿ ಹಾರಾಟ ನಡೆಸಿದ ಪಿ.ವಿ ಸಿಂಧು!

ಬೆಂಗಳೂರು: ದೇಸಿ ತಂತ್ರಜ್ಞಾನದ ಮೊದಲ ಲಘು ಯುದ್ದ ವಿಮಾನ ತೇಜಸ್ ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಹಾರಾಟ ನಡೆಸಿದ್ದು,ತೇಜಸ್ ನಲ್ಲಿ ಸಂಚರಿಸಿದ‌ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಹೆಮ್ಮೆಗೆ ಪಾತ್ರರಾಗಿದ್ದಾರೆ.

ಏರ್ ಶೋದ ನಾಲ್ಕನೇ ದಿನದ ಥೀಮ್ ಮಹಿಳಾ ದಿನ ಹಾಗಾಗಿ ಇಂದಿನ ಶೋ ಹೈಲೈಟ್ ಪಿ.ವಿ ಸಿಂಧು.ಯಲಹಂಕ ವಾಯುನೆಲೆಗೆ ಬಂದ ಸಿಂಧೂ ಪೈಲೆಟ್ ದಿರಿಸು ಧರಿಸಿ ತೇಜಸ್ ಬಳಿ ಬಂದರು,ಭಾರತೀಯ ಹೆಮ್ಮೆಯ ಲಘು ಯುದ್ದ ವಿಮಾನವನ್ನು ಏರಿ ಜನರತ್ತಾ ಕೈಬೀಸುತ್ತಾ ಕಾಕ್ ಪೀಟ್ ನಲ್ಲಿ ಕುಳಿತರು, ಕೋ ಪೈಲಟ್ ಆಗಿ ತೇಜಸ್ ನಲ್ಲಿ 15 ನಿಮಿಷಗಳ ಕಾಲ ಹಾರಾಟ ನಡೆಸಿದರು.

ತೇಜಸ್ ನಲ್ಲಿ ಯಾವುದೇ ಸ್ಟಂಟ್ ಗಳನ್ನು ನಡೆಸದೇ ಸಾಧಾರಣ ಹಾರಾಟ ನಡೆಸಿದರೂ ಕೂಡ ಯುದ್ದ ವಿಮಾನದಲ್ಲಿನ ಹಾರಾಟ ನಿಜಕ್ಕೂ ಹೆಮ್ಮೆಯ ವಿಷಯ.ಇದೇ ಏರ್ ಶೋನಲ್ಲಿ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕೂಡ ಹಾರಾಟ ನಡೆಸಿದ್ದರು ಅದರ ಬೆನ್ನಲ್ಲೇ ಪಿ.ವಿ ಸಿಂಧೂ ಹಾರಾಟ ನಡೆಸಿದ್ದು ಗಮನಾರ್ಹ.

ಇನ್ನು ಈ ಸಾಧನೆ ಮಾಡಿದ‌ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಕೀರ್ತಿ ಕೂಡ ಸಿಂಧೂ ಅವರದ್ದಾಗಿದೆ.ತೇಜಸ್ ಲಘು ಯುದ್ದ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ಮಹಿಳಾ ಕ್ರೀಡಾಪಟು ಸಿಂಧೂ ಆಗಿದ್ದು,ತೇಜಸ್ ನಲ್ಲಿನ ಹಾರಾಟಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ತೇಜಸ್ ಯಾನ ರೋಮಾಂಚನ ಅನುಭವವಾಯಿತು,ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ,ತೇಜಸ್ ನಿಜವಾದ ಹೀರೋ ಎಂದು ತಮ್ಮ ಅನುಭವ ಹಂಚಿಕೊಂಡರು.

ಏರ್ ಶೋ ಪಾರ್ಕಿಂಗ್ ನಲ್ಲಿ ಭಾರೀ ಅಗ್ನಿ ಅವಘಡ:ಮುನ್ನೂರಕ್ಕೂ‌ ಹೆಚ್ಚು ಕಾರು ಭಸ್ಮ!

ಬೆಂಗಳೂರು: ಏರ್ ಶೋ ಪಾರ್ಕಿಂಗ್ ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು,ಬೆಂಕಿಯ ಕೆನ್ನಾಲಿಗೆಗೆ
ಮುನ್ನೂರು ಕಾರುಗಳು ಹೊತ್ತಿ ಉರಿದಿದ್ದು,ದಟ್ಟ‌ ಹೊಗೆಯಿಂದ‌ ಏರ್ ಶೋ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಏರ್ ಶೋ ಪ್ರದರ್ಶನದ ವೇಳೆ ಪಾರ್ಕಿಂಗ್ ಜಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ,ಎಲೆಗಳು ಹಾಗು‌ ಒಣಗಿದ್ದ ಹುಲ್ಲಿನಿಂದಾಗಿ ಪಾರ್ಕಿಂಗ್ ನಲ್ಲಿ ಬೆಂಕಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದ್ದು ಗೇಟ್ 5G ರ ಸಾವಿರಕ್ಕೂ ಹೆಚ್ಚಿನ ಕಾರುಗಳು ನಿಂತಿದ್ದ ಪಾರ್ಕಿಂಗ್ ಜಾಗದಲ್ಲಿ ಕಾರುಗಳಿಗೆ ತಗುಲಿದೆ ಸಾಲು ಸಾಲು ನಿಂತಿದ್ದ ಕಾರುಗಳು ಬೆಂಕಿಗೆ ಸಿಲುಕಿದ್ದು ಸ್ಪೋಟಗೊಳ್ಳುತ್ತಾ ನೋಡು ನೋಡುತ್ತಿದ್ದಂತೆ ಹೊತ್ತಿ‌ ಉರಿದಿವೆ.

ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದರೂ‌ ಗಾಳಿಯು‌ ಜೋರಾಗಿ ಬೀಸುತ್ತಿರುವ ಕಾರಣ ಬೆಂಕಿ ನಿಯಂತ್ರಣಕ್ಕೆ ತರಲು ಸಾಧ್ಯವಾಗದೆ ಪರದಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಮುನ್ನೂರಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ.

ಕಾರುಗಳಿಗೆ ಬೆಂಕಿ ತಗುಲಿದ ವಿಷಯ ತಿಳಿದ ಕಾರುಗಳ ಮಾಲೀಕರು ತಮ್ಮ ತಮ್ಮ ಕಾರುಗಳನ್ನು ತೆಗೆದುಕೊಂಡು ಹೋಗಲು ಮುಗಿಬಿದ್ದಿದ್ದಾರೆ,ತಡವಾಗಿ ಬಂದು ನಿಲ್ಲಿಸಿದ್ದವರ ಕಾರುಗಳೇ ಹೊತ್ತಿ‌ ಉರಿದಿವೆ ಎನ್ನಲಾಗಿದ್ದು ಸಧ್ಯ ಕಾರುಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ‌

ದಟ್ಟ ಹೊಗೆ ಆ ರಿಸಿದ ಹಿನ್ನಲೆಯಲ್ಲಿ ಏರ್ ಶೋ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ಮಧ್ಯಾಹ್ನದ ಪ್ರದರ್ಶನದ ಆರಂಭ ಎಷ್ಟೊತ್ತಿದೆ ಎನ್ನುವ ಪ್ರಶ್ನೆ ಎದುರಾಗಿದೆ.

ಆತಂಕಪಡುವ ಅಗತ್ಯವಿಲ್ಲ:

ಏರೋ ಇಂಡಿಯಾ ಶೋ ವೇಳೆ ಅಗ್ನಿ ಅವಘಡ ಸಂಬಂಧ ಆತಂಕಪಡುವ ಅಗತ್ಯವಿಲ್ಲ. ಯಾವುದೇ ಜೀವಹಾನಿಯಾಗಿಲ್ಲ. ವಾಹನಗಳು ಬೆಂಕಿಯಲ್ಲಿ ಸುಟ್ಟುಹೋಗಿರುವ ಬಗ್ಗೆ ವರದಿಯಾಗಿದ್ದು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಹಾಗೂ ಅಗ್ನಿಶಾಮಕ ವರಿಷ್ಠರಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ‌ ಟ್ವೀಟ್ ಮಾಡಿದ್ದಾರೆ.

ಸಬ್‌ಹರ್ಬನ್ ರೈಲ್ವೇ ಯೋಜನೆ ಅಂತಿಮ ಹಂತಕ್ಕೆ: ಸಿಎಂ

ಬೆಂಗಳೂರು: 20 ವರ್ಷದ ಹಳೆಯ ಸಬ್ ಹರ್ಬನ್ ರೈಲ್ವೆ ಯೋಜನೆ‌ಗೆ ಕೊನೆಗೂ ಮುಕ್ತಿ ಸಿಗುವ ಲಕ್ಷಣ ಗೋಚರವಾಗಿದ್ದು, ರೈಲ್ವೆ ಯೋಜನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು‌ ಸ್ವತಃ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಸಿಎಂ ಕುಮಾರಸ್ವಾಮಿ ಇಂದು ಸಭೆ ನಡೆಸಿದರು.

ಸಬರ್ಬನ್ ರೈಲ್ವೆ ಯೋಜನೆಗೆ ಇದ್ದ ಎಲ್ಲಾ ಅಡತಡೆಗಳು ಇಂದಿ‌ನ ಸಭೆಯಲ್ಲಿ ಬಹುತೇಕ ನಿವಾರಣೆ ಆಗಿದ್ದು, 19 ನಿಬಂಧನೆಗಳನ್ನು ಹಾಕಿದ್ದ ರಾಜ್ಯ ಸರ್ಕಾರ ಕೂಡಾ ನಿಬಂಧನೆಗಳನ್ನು ವಾಪಸ್ ಪಡೆಯಲು ನಿರ್ಧಾರ ಮಾಡಿದೆ. ಸ್ವತಃ ಸಿಎಂ ಕುಮಾರಸ್ವಾಮಿ ನಿಬಂಧನೆಗಳನ್ನು ವಾಪಸ್ ಪಡೆಯಲು ಒಪ್ಪಿದ್ದು, ಯೋಜನೆಗಾಗಿ ಕೇಂದ್ರ ಸರ್ಕಾರ 6 ಸಾವಿರ ಕೋಟಿ ಮೊತ್ತದ ಭೂಮಿಯನ್ನ ಕೇವಲ ಒಂದು ರೂಪಾಯಿಗೆ ನೀಡಲು ಒಪ್ಪಿಕೊಂಡಿದೆ.

ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಸಿಎಂ ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ಪಿಯೂಶ್ ಗೋಯಲ್ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಒಟ್ಟಾಗಿ ಕೆಲಸ ಮಾಡಿದ್ರೆ ಆದಷ್ಟು ಬೇಗ ಕೆಲಸವೂ ಮುಗಿಯುತ್ತೆ ಎಂದು ಪಿಯೂಶ್ ಘೋಯಲ್ ತಿಳಿಸಿದರು. ಸುಮಾರು 23 ಸಾವಿರ ಕೋಟಿ ಮೊತ್ತದ ಯೋಜನೆ ಇದಾಗಿದ್ದು, 160 ಕಿಲೋ ಮೀಟರ್ ರೈಲ್ವೆ ಮಾರ್ಗ ಇರಲಿದೆ. ಮೆಟ್ರೋ, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೈ ಕ್ಲಾಸ್ ಯೋಜನೆ ಇದಾಗಿದ್ದು, ರಾಜ್ಯ ಸರ್ಕಾರ ಸಹಕಾರ ಕೊಟ್ರೆ ಆದಷ್ಟು ಬೇಗ ಯೋಜನೆ ಪ್ರಾರಂಭ ಮಾಡ್ತೀವಿ ಎಂದರು.

ಸಿಎಂ ಕುಮಾರಸ್ವಾಮಿ ಮಾತನಾಡಿ ಯೋಜನೆ ಬಗ್ಗೆ ಕೆಲವೊಂದು ಅನುಮಾನಗಳು ಇತ್ತು. ಇಂದಿನ ಸಭೆಯಲ್ಲಿ ಎಲ್ಲಾ ಅನುಮಾನಗಳು ಕ್ಲಿಯರ್ ಆಗಿದ್ದು, ಯೋಜನೆ ಪ್ರಾರಂಭ ಬಹುತೇಕ ಅಂತಿಮವಾಗಿದೆ. ಅಲ್ಲದೆ ಪ್ರಧಾನಿಗಳು ದಿನಾಂಕ ನಿಗಧಿ ಮಾಡಿದ್ರೆ ಆದಷ್ಟು ಬೇಗ ‌ಸಬ್ ಹರ್ಬನ್ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ಮಾಡೋದಾಗಿ ತಿಳಿಸಿದ್ರು.