ಐಟಿ ವಿಚಾರಣೆ ಬಳಿಕ ಮೊದಲ ಬಾರಿಗೆ ಭಾವುಕರಾದ ಡಿಕೆಶಿ!

ಬೆಂಗಳೂರು: ನಾನು ನ್ಯಾಯ ಬದ್ಧವಾಗಿ ದುಡಿದು ಸಂಪಾದಿಸಿದ್ದೇನೆ. ಎಲ್ಲ ಹಂತದಲ್ಲೂ ಕಾನೂನು ಬದ್ಧವಾಗಿ ನಡೆದುಕೊಂಡಿದ್ದೇನೆ. ಕಾನೂನಿನ ಮೇಲೆ ನನಗೆ ಗೌರವವಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ. ಆದ್ರೆ, ಆರು ಗಂಟೆಗಳ ಕಾಲ ನನ್ನ ವಯಸ್ಸಾದ ತಾಯಿಯನ್ನು ಕೂರಿಸಿ ವಿಚಾರಣೆ ಮಾಡಿದ್ದು ಬಹಳ ನೋವು ತಂದಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಭಾವುಕರಾದರು‌.

ನಮ್ಮ ತಾಯಿ, ನನ್ನ ತಮ್ಮ ಮತ್ತು ನಾನು ಮನೆಯಲ್ಲಿ ಇಲ್ಲದ ಕಾರಣ ಐಟಿ ಅಧಿಕಾರಿಗಳು ನಮ್ಮ ಮನೆಗೆ ಹೋಗಿ ನೋಟೀಸ್ ಅಂಟಿಸಿ ಬಂದಿದ್ದರು. ನೋಟೀಸ್‌ಗೆ ಗೌರವ ನೀಡುವ ಉದ್ದೇಶದಿಂದ ನಮ್ಮ ತಾಯಿಯನ್ನು ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದೆ. ನನ್ನ ತಾಯಿಗೆ 80 ವರ್ಷ ವಯಸ್ಸಾಗಿರುವುದರಿಂದ ಅವರಿಗೆ ನೆರವಾಗಲು ಐಟಿ ಅಧಿಕಾರಿಗಳು ನನಗೂ ಅವಕಾಶ ನೀಡಿದರು. ಐಟಿ ಅಧಿಕಾರಿಗಳು ನಮ್ಮೊಂದಿಗೆ ಗೌರವದಿಂದ ನಡೆದುಕೊಂಡಿದ್ದಾರೆ ಎಂದರು.

ಪುನೀತ್ ನಮ ಪಕ್ಕದ ಮನೆಯವರು. ಬೆಳಿಗ್ಗೆ ಎದ್ದ ತಕ್ಷಣ ಅವರ ಮುಖ ನೋಡಬೇಕು. ಐಟಿ ದಾಳಿ ಮುಗಿತೇನೋ ಅಂತಾ ನೋಡೋಣ, ಮಾತಾಡೋಣ ಅಂತಾ ಹೋಗಿದ್ದೆ. ಇನ್ನೂ ನಡೀತಿದೆ ಅಂತಾ ಹೇಳಿದ್ರು. ಹೀಗಾಗಿ ವಾಪಸ್ ಬಂದೆ.

ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ,ಯಾರೂ ಆತಂಕಪಡುವ ಅಗತ್ಯವಿಲ್ಲ:ಸಿಎಂ

ತುಮಕೂರು: ಸಿದ್ದಗಂಗಾ ಮಠದ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿಯವರು ಆರೋಗ್ಯವಾಗಿದ್ದು,ಭಕ್ತ ಸಮೂಹ ಯಾವುದೇ ರೀತಿಯ ಆತಂಕ‌ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ‌ ಕುಮಾರಸ್ವಾಮಿ ತಿಳಿಸಿದರು.

ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಭೇಟಿ ನೀಡಿದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,
ಶ್ರೀಗಳ ಆರೋಗ್ಯ ಸುಧಾರಣೆಗಾಗಿ ವೈದ್ಯರು ಉತ್ತಮವಾಗಿ ಕಾರ್ಯ‌ನಿರ್ವಹಿಸಿದ್ದಾರೆ.ವೈದ್ಯರ ತಂಡಕ್ಕೆ ಭಕ್ತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಶಿವಕುಮಾರ ಶ್ರೀಗಳು ಇಳಿ ವಯಸ್ಸಿನಲ್ಲಿ ಚಿಕಿತ್ಸೆ ಸ್ಪಂದಿಸುತ್ತಿರುವುದು ವೈದ್ಯಕೀಯ ಲೋಕಕ್ಕೆ ಅಚ್ಚರಿ ಮತ್ತು ಪವಾಡ ಸದೃಶವಾಗಿದೆ ಎಂದರು.ಭಕ್ತರು ಶ್ರೀಗಳ ಆರೋಗ್ಯ ದೃಷ್ಠಿಯಿಂದ ಭೇಟಿ ಮಾಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.ನಾನೂ ಕೂಡಾ ಬಂದರೆ ತೊಂದರೆ ಆಗುತ್ತದೆ ಎಂದು ಕೊಂಡೆ. ಕಿರಿಯ ಶ್ರೀಗಳ ಅನುಮತಿ ಪಡೆದು ಭೇಟಿ ನೀಡಿದ್ದೇನೆ ಎಂದರು.

ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ ತೆರಳುವ ಮಾರ್ಗ ಮಧ್ಯೆ ಶ್ರೀಗಳ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದು ತೆರಳೋಣ ಅಂತ ಬಂದಿದ್ದೇನೆ ಎಂದು ಹೇಳಿದರು.

ಸಿಎಂ ಜೊತೆ ಸಚಿವ ಎಸ್.ಆರ್. ಶ್ರೀನಿವಾಸ, ಶಾಸಕ ಜಿ.ಬಿ. ಜ್ಯೋತಿಗಣೇಶ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ನಿಂಗಪ್ಪ ಇದ್ದರು.

ಸ್ಯಾಂಡಲ್‌ವುಡ್‌ಗೆ ಶಾಕ್ ನೀಡಿದ ಐಟಿ!

ಬೆಂಗಳೂರು: ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ‌ ಅಧಿಕಾರಿಗಳು ಸ್ಯಾಂಡಲ್ ವುಡ್‌ಗೆ ಬಿಗ್ ಶಾಕ್ ನೀಡಿದ್ದಾರೆ. ಚಿತ್ರರಂಗದ ಗಣ್ಯಾತೀಗಣ್ಯ ನಟರು, ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳು ಮತ್ತು ಚಿನ್ನಾಭರಣಗಳನ್ನು ವಶಪಡಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಶಿವರಾಜ್ ಕುಮಾರ್, ಸುದೀಪ್, ಯಶ್, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ವಿಜಯ್ ಕಿರಗಂದೂರು, ನಿರ್ಮಾಪಕ ಸಿ.ಆರ್.ಮನೋಹರ್ ಮನೆ ಮೇಲೆ ಇಂದು ಬೆಳಗಿನ ಜಾವ 5 ಗಂಟೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸುಮಾರು 200 ಅಧಿಕಾರಿಗಳು 8 ಅಧಿಕಾರಗಳ ತಂಡ ಮಾಡಿಕೊಂಡು ಬೆಳ್ಳಂಬೆಳಗ್ಗೆ 50 ಕ್ಕೂ ಹೆಚ್ಚುಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಬ್ಲ್ಯಾಕ್‌ಮನಿ ವಹಿವಾಟು ಹೆಚ್ಚಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಯಾಂಡಲ್‌ವುಡ್ ನಟರು ಮತ್ತು ನಿರ್ಮಾಪಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ಸುಳ್ವಾಡಿ ವಿಷಪ್ರಸಾದ ಸೇವನೆ ಪ್ರಕರಣ: ಸಂತ್ರಸ್ತರಿಗೆ ಸಿಎಂ ಸಾಂತ್ವನ

ಕೊಳ್ಳೆಗಾಲ: ಸುಳ್ವಾಡಿ ಪ್ರಸಾದ ಸೇವನೆ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಗಳ ಸಂತ್ರಸ್ತರಿಗೆ ಹನೂರು ತಾಲ್ಲೂಕು ಬಿದರಹಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಾಂತ್ವನ ಹೇಳಿದರು.

ಈ ಪ್ರಕರಣದಲ್ಲಿ ಮೃತಪಟ್ಟ 17 ಜನರ ಕುಟುಂಬದವರು ಹಾಗೂ ಅಸ್ವಸ್ತರಾಗಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬಗಳಿಗೆ ಸ್ಥೈರ್ಯ ತುಂಬಿದರು.

ಪ್ರತೀ ಸಂತ್ರಸ್ಥರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅವರು ಕುಂದುಕೊರತೆಗಳನ್ನು ವಿಚಾರಿಸಿದರು. ಸರ್ಕಾರದಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದೇವೆ. ಸರ್ಕಾರ ನಿಮ್ಮೊಂದಿಗಿದೆ ಧೈರ್ಯವಾಗಿ ಇರಿ ಎಂದು ಮುಖ್ಯಮಂತ್ರಿಗಳು ಆತ್ಮವಿಶ್ವಾಸ ತುಂಬಿದರು..

ಸಂತ್ರಸ್ತ ಕುಟುಂಬದವರ ಮುಂದಿನ ನೆಮ್ಮದಿ ಜೀವನ ನಿರ್ವಹಣೆಗೆ ಸರ್ಕಾರದಿಂದ ಶಾಶ್ವತ ಯೋಜನೆ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಈಗಾಗಲೇ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಲು 80 ಲಕ್ಷ ರೂಪಾಯಿಗಳು ಬಿಡುಗಡೆ ಮಾಡಲಾಗಿದೆ ಎಂದರು.
ಸಂತ್ರಸ್ತರ ಭವಿಷ್ಯದ ಜೀವನ, ಯುವಕರು, ಮಹಿಳೆಯರು, ಕೂಲಿ ಕಾರ್ಮಿಕರ ಆರ್ಥಿಕ ಸ್ಥಿತಿ ಉತ್ತಮವಾಗಿಸಲು ನೆರವಾಗಲು ಪೈಲಟ್ ಯೋಜನೆಯೊಂದನ್ನು ತಯಾರಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಮುಖ್ಯಮಂತ್ರಿ ಅವರು ಸೂಚಿಸಿದರು.

ಈ ವೇಳೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ, ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ, ಸಣ್ಣ ನೀರಾವರಿ ಸಚಿವರಾದ ಸಿ.ಎಸ್.ಪುಟ್ಟರಾಜು ಪ್ರವಾಸೋದ್ಯಮ ಸಚಿವರಾದ ಸಾ.ರಾ. ಮಹೇಶ್ ಮತ್ತಿತರರು ಹಾಜರಿದ್ದರು.

ಸರಕಾರ ಸುಭದ್ರವಾಗಿದೆ, ಯಾರೂ ಪಕ್ಷ ತೊರೆಯುವುದಿಲ್ಲ:ಡಿಸಿಎಂ

ತುಮಕೂರು: ರಮೇಶ್‌ ಜಾರಕಿಹೋಳಿ ವಿಚಾರವಾಗಿ ಮಾಧ್ಯಮಗಳು ತೋರುತ್ತಿರುವುದು ಸತ್ಯಕ್ಕೆ ದೂರವಾದದ್ದು. ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಸಾಮಾನ್ಯ. ಅವರನ್ನು ಸಮಾಧಾನ ಪಡಿಸುವ ಕೆಲಸವನ್ನು ಪಕ್ಷ ಮಾಡಲಿದೆ.ಒಂದು ವಾರದ ಬಳಿಕ ಎಲ್ಲವೂ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಪರಮೇಶ್ವರ್‌ ಹೇಳಿದರು.

ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟ ಸೇರಲು ಹಿರಿಯರು, ಕಿರಿಯರು ಎಲ್ಲರಿಗೂ ಸಾಮರ್ಥ್ಯವಿದೆ. ಆದರೆ ಈ ವಿಚಾರವಾಗಿ ವರಿಷ್ಠರ ನಿರ್ಧಾರದಂತೆ ನಡೆದುಕೊಳ್ಳಬೇಕು ಎಂದರು. ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಸಾಮಾನ್ಯವಾಗಿರುತ್ತದೆ. ಪ್ರತಿಯೊಬ್ಬರಿಗೂ ಸಚಿವರಾಗುವ ಆಕಾಂಕ್ಷೆ ಇರುತ್ತದೆ. ಹಾಗೆಂದು ಪಕ್ಷ ತೊರೆದು ಹೋಗುವ ವಿಚಾರ ಸುಳ್ಳು. ನಾನೂ ಕೆಲ ಶಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಯಾರೂ ಸಹ ಪಕ್ಷ ಬಿಡುವ ಬಗ್ಗೆ ಹೇಳಿಲ್ಲ.

ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಲು ನಾನಾಗಲಿ ಅಥವಾ ಕೃಷ್ಣಭೈರೇಗೌಡ ಆಗಲಿ ಕಾರಣರಲ್ಲ. ಪ್ರತಿಯೊಂದೂ ವರಿಷ್ಠರ ನಿರ್ಧಾರ. ನಮ್ಮ ಬಳಿ ಸಲಹೆ ಕೇಳಬಹುದು.‌ಆದರೆ ಅದೇ ಅಂತಿಮವಾಗುವುದಿಲ್ಲ. ಸಂಪುಟ ವಿಸ್ತರಣೆಯಲ್ಲಿ ಯಾರದ್ದೂ ಕೈ ಮೇಲಲ್ಲ. ವರಿಷ್ಠರು ತಮ್ಮ ವಿವೇಚನೆಯಂತೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಶಾಸಕರು ಯಾರೂ ಪಕ್ಷ ತೊರೆಯುತ್ತಿಲ್ಲ. ನಮ್ಮ ಸರಕಾರ ಸುಭದ್ರವಾಗಿದೆ. ಇನ್ನೆರಡು ದಿನಗಳಲ್ಲಿ ಖಾತೆ ಹಂಚಿಕೆ ಪೂರ್ಣವಾಗಲಿದೆ. ಅಸಮಾಧಾನ ಕೂಡ ಶಮನವಾಗಲಿದೆ ಎಂದರು.

ಎಂಟು ಮಂದಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ:ರಹೀಂಖಾನ್ ಇಂಗ್ಲೀಷ್ ನಲ್ಲಿ‌ ಪ್ರಮಾಣವಚನ ಸ್ವೀಕಾರ!

ಬೆಂಗಳೂರು:ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂಪುಟಕ್ಕೆ ಇಂದು 8 ಸಚಿವರು ಸೇರ್ಪಡೆಯಾದರು. ರಾಜ್ಯಪಾಲ ವಜುಭಾಯ್ ವಾಲಾ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.ಏಳು ಮಂದಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ರಹೀಂಖಾನ್ ಇಂಗ್ಲೀಷ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದ ಗಾಜಿನ ಮನೆಯಲ್ಲಿ ನೂತನ‌ಸಚುವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು. ಸರಿಯಾಗಿ 5.20 ನಿಮಿಷಕ್ಕೆ ರಾಜಭವನದ ಗಾಜಿನ ಮನೆಗೆ ರಾಜ್ಯಪಾಲರು ಆಗಮಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮುಖ್ಯಮಂತ್ರಿ ಕುಮಾರಸ್ವಾಮಿ,ಡಿಸಿಎಂ ಪರಮೇಶ್ವರ್ ಹಾಗು ಸಂಪುಟ ಸದಸ್ಯರ ಸಮ್ಮುಖದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು.

ಮೊದಲಿಗೆ ಎಂ.ಬಿ ಪಾಟೀಲ್ ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ನಂತರ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ್ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವನಚ ಸ್ವೀಕರಿಸಿದರು.ಸತೀಶ್ ಜಾರಕಿಹೊಳಿ‌ ಸಂಪುಟದರ್ಜೆ ಸಚಿವರಾಗಿ ಬುದ್ದ ಬಸವ, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಸಿ.ಎಸ್ ಶಿವಳ್ಳಿ ಸಂಪುಟದರ್ಜೆ ಸಚಿವರಾಗಿ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಪಿ.ಟಿ ಪರಮೇಶ್ವರ್ ನಾಯ್ಕ್ ಸಂಪುಟದರ್ಜೆ ಸಚಿವರಾಗಿ ಶ್ರೀ ತುಳಜಾಭವಾನಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಇ.ತುಕಾರಾಂ ಸಂಪುಟದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಹೀಂ ಖಾನ್ ಸಂಪುಟದರ್ಜೆ ಸಚಿವರಾಗಿ ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಎಂಟಿಬಿ ನಾಗರಾಜ್ ಸಂಪುಟದರ್ಜೆ ಸಚಿವರಾಗಿ ಮಂಜುನಾಥಸ್ವಾಮಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.