ರಾಜ್ಯದ ಅಭಿವೃದ್ಧಿ ಸಭೆಗೆ ಕೇಂದ್ರ ಸಚಿವರೇ ಗೈರು!

ಬೆಂಗಳೂರು: ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯಕ್ಕೆ ಬರಬೇಕಾದ ಅನುಧಾನಗಳನ್ನ ಬಿಡುಗಡೆ ಮಾಡಿಸುವಂತೆ ಮತ್ತು ಮೇಕೆದಾಟು ಯೋಜನೆ ಸಂಬಂಧ ಕೇಂದ್ರದ ನಾಯಕರ ಮನವೊಲಿಕೆ ಮಾಡವಂತೆ ಸಂಸದರಿಗೆ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರು.

ಅಭಿವೃದ್ದಿ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯವನ್ನು ಪ್ರತಿನಿಧಿಸುವ ಸಂಸದರ ಜೊತೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಧಾನಸೌಧದಲ್ಲಿ ಸಭೆ ನಡೆಸಿದರು. ಸಭೆ ನಂತರ ಮಾತನಾಡಿದ ಅವರು, ಕೇಂದ್ರದಿಂದ ನರೇಗಾ ಯೋಜನೆಯಡಿ 938 ಕೋಟಿ ರೂ., ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 1100 ಕೋಟಿ ರೂಪಾಯಿ ಬಿಡುಗಡೆ ಆಗಬೇಕು. ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ 560 ಕೋಟಿ ಮಾತ್ರ ಬಿಡುಗಡೆ ಆಗಿದೆ. ಇನ್ನೂ 60% ಹಣ ಕೇಂದ್ರದಿಂದ ಬರಬೇಕಿದೆ ಎಂದು ಹೇಳಿದರು.

ಮೇಕೆದಾಟು ಯೋಜನೆ ಸಂಬಂಧ ಕೇಂದ್ರದ ನಾಯಕರ ಮನವೊಲಿಕೆ ಮಾಡಬೇಕು ಎಂದು ಸಿಎಂ ಸಂಸದರಿಗೆ ಮನವಿ ಮಾಡಿದರು. ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಕಲ್ಲಿದ್ದಲು ಸಿಕ್ತಿಲ್ಲ. ರಾಜ್ಯಕ್ಕೆ ಮೈನಿಂಗ್ ಅಲಾಟ್ ಆಗಬೇಕು. ರೈಲ್ವೇ ಯೋಜನೆಗೆ 50% ರಾಜ್ಯ ಹಣ ಕೊಡತ್ತೆ. ಆದಾಗ್ಯೂ ರೇಲ್ವೆ ಯೋಜನೆ ನೆನೆಗುದಿಗೆ ಬಿದ್ದಿದೆ. ಇದೆಲ್ಲದರ ಬಗ್ಗೆಯೂ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಬೇಕು ಅಂತ ಸಿಎಂ ಕುಮಾರಸ್ವಾಮಿ ಸಂಸದರಿಗೆ ಮನವಿ ಮಾಡಿದ್ರು.

ರಾಜ್ಯದಲ್ಲಿ ವ್ಯಾಪಕವಾಗಿ ಬೆಳೆಯುವ ತೊಗರಿ, ಹೆಸರುಕಾಳು, ಕಬ್ಬು, ಭತ್ತ, ಈರುಳ್ಳಿ, ಟೋಮ್ಯಾಟೋ, ತೆಂಗು ಮುಂತಾದ, ಬೆಳೆ ಗಳಿಗೆ ಬೆಂಬಲ ಬೆಲೆ ದೊರಕುತ್ತಿಲ್ಲ. ಈ ಸಂಬಂಧ ಕೇಂದ್ರದ ಸಚಿವರನ್ನು ಭೇಟಿ ಮಾಡಲಾಗಿದೆ. ಸಕಾಲಕ್ಕೆ ಬೆಂಬಲ ಬೆಲೆ ಪ್ರಕಟಿಸುವಂತೆ ಕೇಂದ್ರದ ಗಮನ ಸೆಳೆಯುವಂತೆಯೂ ಸಿಎಂ ಮನವಿ ಮಾಡಿದ್ರು.

ಸಭೆಯಲ್ಲಿ ಸಂಸದರಾದ ಪ್ರಕಾಶ್ ಹುಕ್ಕೇರಿ, ಪ್ರಹ್ಲಾದ್ ಜೋಶಿ, ಪಿ.ಸಿ ಮೋಹನ್, ವಿಎಸ್ ಉಗ್ರಪ್ಪ, ಮುದ್ದ ಹನುಮೇಗೌಡ, ಶಿವರಾಮೇಗೌಡ ಸೇರಿ ಹಲವು ಉಪಸ್ಥಿತರಿದ್ರು. ಕೇಂದ್ರ ಸಚಿವರಾದ ಸದಾನಂದಗೌಡ, ಅನಂತ್ ಕುಮಾರ್ ಹೆಗಡೆ, ನಿರ್ಮಲಾ ಸೀತಾರಾಮನ್, ರಮೇಶ್ ಜಿಗಜಿಣಗಿ ಗೈರಾಗಿದ್ರು.

ಮೇಕೆದಾಟು ಯೋಜನೆ ಜಾರಿಗೆ ಸಹಕಾರ: ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿದ ಸಿಎಂ

ಹಾಸನ: ಕಳೆದ 25 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಮೇಕೆದಾಟು ಯೋಜನೆ ಜಾರಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಅನುಮತಿ ನೀಡುವ ಸಂಬಂಧ ಕೇಂದ್ರ ಸರ್ಕಾರ ನೀಡಿದ ಸಹಕಾರಕ್ಕೆ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಸನ ನಗರದ ನೂತನ ಬಸ್ ನಿಲ್ದಾಣದಲ್ಲಿಂದು ರಾಷ್ಟ್ರೀಯ ಹೆದ್ದಾರಿ ವಲಯದ ವತಿಯಿಂದ ಏರ್ಪಡಿಸಲಾಗಿದ್ದ, 1865 ಕೋಟಿ ರೂಪಾಯಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೂಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಆಧುನಿಕ ಕೃಷಿ ಪದ್ಧತಿ ಅಳವಡಿಕೆ ಬಗ್ಗೆ ತಾವು 12 ವರ್ಷಗಳ ಹಿಂದೆಯೇ ಚಿಂತಿಸಿದ್ದು ಈಗಾಗಲೇ ಇಸ್ರೆಲ್ ಮಾದರಿಯಲ್ಲಿ ತಂತ್ರಜ್ಞಾನಗಳ ಅಳವಡಿಕೆಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ ಕ್ರಮವಹಿಸಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಜೈವಿಕ ಇಂಧನ ಉತ್ಪಾದನೆಗೆ ಆಧ್ಯತೆ ನೀಡಲಾಗುತ್ತಿದೆ, ಪ್ರತಿ ಜಿಲ್ಲೆಗೆ ಇಬ್ಬರಂತೆ 60 ತಜ್ಞ ರೈತರ ಸಮಿತಿ ರಚಿಸಲಾಗಿದೆ, ಅವರೊಂದಿಗೆ ಚರ್ಚಿಸಿ ಹೊಸ ಕೃಷಿ ಜಾರಿಗೆ ತರಲು ಕ್ರಮವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ರಾಜ್ಯದ ಸಮಗ್ರ ಅಭಿವೃದ್ಧಿ ತಮ್ಮ ಆಧ್ಯತೆಯಾಗಿದ್ದು ಎಲ್ಲರನ್ನೊಳಗೊಂಡು ಸುದೀರ್ಘ ಅಭಿವೃದ್ಧಿಯತ್ತ ಗಮನ ಹರಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಸಹಭಾಗಿತ್ವ ಮತ್ತು ಸಹಕಾರವನ್ನು ಕೋರುತ್ತೇನೆ ಎಂದರು.

ತಮ್ಮ ತಂದೆ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ‍ಗಡ್ಕರಿ ಅವರ ನಡುವೆ ಉತ್ತಮ ಬಾಂಧವ್ಯ ಇದ್ದು, ಅದರ ಫಲವಾಗಿ ಅನೇಕ ಯೋಜನೆಗಳಿಗೆ ಕೇಂದ್ರದಿಂದ ನೆರವು ದೊರೆತಿದೆ. ಇದ್ದಕ್ಕಾಗಿ ಧನ್ಯವಾದಗಳನ್ನು ಸಮರ್ಪಿಸುವುದಾಗಿ ಅವರು ಹೇಳಿದರು.

ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವರಾದ ನಿತಿನ್‍ಗಡ್ಕರಿ ಅವರು ಮಾತನಾಡಿ ಅಭಿವೃದ್ಧಿ ವಿಚಾರದಲ್ಲಿ ತಾವೆಂದೂ ರಾಜಕೀಯ ಬೆರೆಸುವುದಿಲ್ಲ ಮತ್ತು ಹುಸಿ ಅಶ್ವಾಸನೆಗಳನ್ನು ನೀಡುವುದಿಲ್ಲಾ ಎಂದರು.

ಸಾಧ್ಯವಾದುದ್ದನ್ನು ಮಾತ್ರವೇ ಹೇಳುತ್ತೇನೆ ಮತ್ತು ಅದನ್ನು ಮಾಡಿಯೇ ತೀರುತ್ತೇನೆ ಎಂದ ಸಚಿವರು, ಕರ್ನಾಟಕ ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 2 ಲಕ್ಷ ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕೇಂದ್ರ ಸರ್ಕಾರದ ವತಿಯಿಂದ ಕೈಗೊಳ್ಳಲಾಗಿದೆ. ಇದರಲ್ಲಿ ಕೆಲವು ಕಾಮಗಾರಿಗಳು ಪ್ರಾರಂಭವಾಗಿದ್ದು, ಉಳಿದಿರುವ ಕಾಮಗಾರಿಗಳು ವಿವಿಧ ಹಂತದಲ್ಲಿವೆ ಎಂದು ಸಚಿವರು ಹೇಳಿದರು.

ಕರ್ನಾಟಕ ಸಾಕಷ್ಟು ಅಭಿವೃದ್ದಿ ಸಾಧಿಸಿರುವದು ಹೆಮ್ಮೆಯ ವಿಚಾರ. ಕೇಂದ್ರ ಸರ್ಕಾರ ರಾಜ್ಯದ ಪ್ರಗತಿಗೆ ಎಲ್ಲಾ ರೀತಿಯ ಸಹಕಾರ ಮತ್ತು ನೆರವು ನೀಡಲು ಸಿದ್ಧ ಎಂದ ನಿತಿನ್‍ಗಡ್ಕರಿ ಅವರು ನೀರಿನ ಬವಣೆ ನೀಗಿಸಲು ನದಿಗಳ ಜೋಡಣೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಕ್ರಮವಹಿಸಿಲಾಗಿದೆ ಎಂದರು.

ಪೊಲಾವರ ಅಣೆಕಟ್ಟು ಯೋಜನೆಗೆ 80,000 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು. ಗೋದಾವರಿ ನದಿಯಿಂದ ವ್ಯರ್ಥವಾಗಿ ಸಮುದ್ರ ಸೇರಿ ನೀರನ್ನು ಕೃಷ್ಣ ನದಿಗೆ ಅಲ್ಲಿಂದ ಕಾವೇರಿ ನದಿಗೆ ಹರಿಸುವ ಯೋಜನೆ ಇದಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿಗೆ 452 ಟಿ.ಎಂ.ಸಿ. ಹೆಚ್ಚುವರಿ ನೀರು ಲಭ್ಯವಾಗಲಿದೆ. ಇದರಿಂದ ಎರಡು ರಾಜ್ಯಗಳ ನಡುವೆ ನೀರಿನ ವಿಷಯವಾಗಿ ಇರುವ ಸಂಘರ್ಷ ಅಂತ್ಯಗೊಳ್ಳಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಅನಿವಾರ್ಯ ಕಾರಣಗಳಿಂದ ಬರಲಾಗದ ಹಿನ್ನಲೆಯಲ್ಲಿ ಮಾಜಿ ಪ್ರದಾನಿ ಹೆಚ್.ಡಿ ದೇವೆಗೌಡ ಅವರು ತಮ್ಮ ಸಂದೇಶವನ್ನು ಕಳುಹಿಸಿದ್ದರು, ಅದನ್ನು ಸಮಾರಂಭದಲ್ಲಿ ಓದಿ ಕೇಂದ್ರ ಸಚಿವರ ಗಮನಕ್ಕೆ ತರಲಾಯಿತು.

ದೇವೇಗೌಡರು ತಮ್ಮ ಸಂದೇಶದಲ್ಲಿ ಸಚಿವ ನಿತಿನ್‍ಗಡ್ಕರಿ ಅವರಿಗೆ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ತಿಳಿಸಿದ್ದು ವಿಶೇಷವಾಗಿತ್ತು.

ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ.ರೇವಣ್ಣ ಅವರು ಮಾತನಾಡಿ ಇಂದು ಶಂಕುಸ್ಥಾಪನೆಗೊಳ್ಳುತ್ತಿರುವ 1865 ಕೋಟಿರೂಗಳ ಯೋಜನೆಯಿಂದ ಮಂಡ್ಯ, ಮೈಸೂರು ,ತುಮಕೂರು ಹಾಗೂ ಹಾಸನ ಜಿಲ್ಲೆಗೆ ಪ್ರಯೋಜನವಾಗಲಿದೆ ಎಂದರು.

ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿಗಳು ಮತ್ತು ಜಲಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಪಕ್ಷತೀತವಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಗೆ ಕುರಿತಂತೆ 200 ಕೋಟಿ ರೂಗಳಿಗೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕಕ್ಕೆ ಸಲ್ಲಿಸಲಾಗಿದೆ ಅದಕ್ಕೆ ಮಂಜೂರಾತಿ ನೀಡುವಂತೆ ನಿತಿನ್ ಗಡ್ಕರಿಯವರಲ್ಲಿ ಮನವಿ ಮಾಡಿದರು.

ರಾಷ್ಟ್ರೀಯ ಹೆದ್ದಾರಿಗಳ ಕುರಿತಂತೆ ಮುಖ್ಯ ಮಂತ್ರಿಯವರಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು ರಾಜ್ಯ ಸರ್ಕಾರದಿಂದ ಸಹಕಾರ ನೀಡಲಾಗುವುದು ಎಂದರು.

ಲೋಕಸಭಾ ಸದಸ್ಯರಾದ ಎಲ್.ಆರ್. ಶಿವರಾಮೇಗೌಡ, ವಿಧಾನಸಭಾ ಸದಸ್ಯರುಗಳಾದ ಪ್ರೀತಂ ಜೆ ಗೌಡ, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಹೆಚ್.ಕೆ.ಕುಮಾರಸ್ವಾಮಿ, ಎ.ಟಿ. ರಾಮಸ್ವಾಮಿ, ಕೆ.ಎಸ್. ಲಿಂಗೇಶ್, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಎ. ಗೋಪಾಲಸ್ವಾಮಿ, ಆರ್. ಚೌಡರೆಡ್ಡಿ ತೂಪಲ್ಲಿ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಜಿಲ್ಲಾ ಉಸ್ತುವಾರಿ ಕಾರ್ಯದಶೀಗಳಾದ ನವೀನ್‍ರಾಜ್‍ಸಿಂಗ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಡಿ.ಐ.ಜಿ. ಶರತ್ ಚಂದ್ರ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮತ್ತಿತರರು ಹಾಜರಿದ್ದರು.

ರೈತರ ಮನೆ ಬಾಗಿಲಿಗೆ ಸರ್ಕಾರ : ಸಿಎಂ ಹೆಚ್.ಡಿ.ಕೆ

ಬೆಂಗಳೂರು: ಕರ್ನಾಟಕ ರಾಜ್ಯ ರೈತರ ಸಲಹಾ ಸಮಿತಿಯ ಪ್ರಥಮ ಸಭೆಯು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸರ್ಕಾರ ಮತ್ತು ರೈತರ ನಡುವೆ ಕಂದಕವಿರಬಾರದು . ರೈತರ ಮನೆಬಾಗಿಲಿಗೆ ಸರ್ಕಾರ ಬರುತ್ತಿದೆ. ಕೃಷಿಕರು ನೆಮ್ಮದಿಯಾಗಿ ಬದುಕಬೇಕೆಂಬ ಕನಸು ಸರ್ಕಾರದ್ದು. ಗ್ರಾಮಗಳು ಬದುಕಿ, ರೈತರ ಸಂಕಷ್ಟಗಳು ದೂರವಾಗಿಸುವ ನಿಟ್ಟಿನಲ್ಲಿ ಮೈತ್ರಿ ಸರ್ಕಾರ ಕಾರ್ಯೋನ್ಮುಖವಾಗಿದೆ.

ಪ್ರತಿ ಜಿಲ್ಲೆಯಿಂದ ಇಬ್ಬರು ಪ್ರಗತಿಪರ ರೈತರನ್ನು ಒಳಗೊಂಡ ಒಟ್ಟು ೬೦ ರೈತ ಪ್ರತಿನಿಧಿಗಳ ಸಲಹಾ ಸಮಿತಿಯನ್ನು ರಚಿಸಿದೆ. ಆಯವ್ಯಯದಲ್ಲಿ ಘೋಷಿಸಿದ್ದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಮತ್ತು ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರೈತರು ಇಂದು ನೀಡಿರುವ ಸಲಹೆಗಳನ್ನು ಆಧರಿಸಿ ತಕ್ಷಣದಿಂದ ಸರ್ಕಾರ ಕಾರ್ಯೋನ್ಮುಖವಾಗಿ, ಹಂತಹಂತವಾಗಿ ಜಾರಿಗೆ ತರಲಾಗುವುದು ಹಾಗೂ ಪ್ರತಿ ೨ ತಿಂಗಳಿಗೊಮ್ಮೆ ರೈತರ ಸಲಹಾ ಸಮಿತಿ ಸಭೆಯನ್ನು ಏರ್ಪಡಿಸಿ , ಅವರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.

• ರೈತರ ಬೆಳೆಗೆ ಉತ್ತಮ ಬೆಲೆ, ರೈತರರಿಗೆ ಹೊಸ ಕೃಷಿ ಪದ್ಧತಿಗಳ ಬಗ್ಗೆ ತಿಳುವಳಿಕೆ, ವೈಜ್ಞಾನಿಕವಾಗಿ ಬೆಳೆ ಬೆಳೆಯುವ ಪದ್ಧತಿಯ ಅಳವಡಿಕೆ.
• ವಿದೇಶಗಳಿಗೆ ತಮ್ಮ ಉತ್ಪಾದನೆಯನ್ನು ರಫ್ತು ಮಾಡುವ ದಿಸೆಯಲ್ಲಿ ಗುಣಮಟ್ಟದ ಹೆಚ್ಚಳ.
• ಸಾಮೂಹಿಕ ಕೃಷಿ ಪದ್ಧತಿ, ಕೃಷಿ ಉಪ ಕಸುಬುಗಳ ಬೆಳವಣಿಗೆ.
• ಮಾರುಕಟ್ಟೆ ವ್ಯವಸ್ಥೆ , ಉಗ್ರಾಣ ಹಾಗೂ ಶೈತ್ಯಾಗಾರದ ನಿರ್ಮಾಣ , ಉತ್ತಮ ಬಿತ್ತನೆ ಬೀಜಗಳ ಪೂರೈಕೆ.
• ನೀರಿನ ಸಂರಕ್ಷಣೆ ಹಾಗೂ ಸದ್ಬಳಕೆ ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ರೈತರೊಂದಿಗೆ ಸುದೀರ್ಘವಾಗಿ ಸಭೆಯಲ್ಲಿ ಚರ್ಚಿಸಲಾಗಿದೆ.
ಕೃಷಿ ಸಚಿವ ಶಿವಶಂಕರ್ ರೆಡ್ಡಿ, ತೋಟಗಾರಿಕೆ ಸಚಿವ ವಿ.ಮನಗೊಳಿ, , ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಪಶುಸಂಗೋಪನೆ ಸಚಿವ ನಾಡಗೌಡ,ಅರಣ್ಯ ಸಚಿವ ವಿ.ಶಂಕರ್, ಪ್ರವಾಸೋದ್ಯಮ ಸಚಿವ ಸಾ.ರ.ಮಹೇಶ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ರಾಜ್ಯದ ಎಲ್ಲ ಜಿಲ್ಲೆಗಳ ರೈತರು ಸಭೆಯಲ್ಲಿ ಭಾಗವಹಿಸಿದ್ದರು.

ಮನಸೂರೆಗೊಂಡ ಈಜಿಪ್ಟ್ ನ ಸಾಂಪ್ರದಾಯಿಕ ನೃತ್ಯ ಪ್ರದರ್ಶನ

ಬೆಂಗಳೂರು: ಗಿರ ಗಿರನೆ ಸುತ್ತುತ್ತಾ, ತನ್ನ ಕೈ ಹಾಗೂ ವಿಶಿಷ್ಟ ಉಡುಪನ್ನು ತಿರುಗಿಸುತ್ತಾ ಪ್ರೇಕ್ಷಕರು ತಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವಲ್ಲಿ ಈಜಿಪ್ಟಿನ ಸಾಂಪ್ರದಾಯಿಕ ನೃತ್ಯ “ತನುರಾ” ಡ್ಯಾನ್ ಯಶಸ್ವಿಯಾಯಿತು.

ಸೂಫೀ ಸಂಪ್ರದಾಯದ ಹಿನ್ನಲೆಯನ್ನು ಹೊಂದಿರುವ ಈ ತನುರಾ ನೃತ್ಯ, ಈಜಿಪ್ಟ್ ಹಾಗೂ ಸೌದಿ ದೇಶಗಳಲ್ಲಿ ಬಹಳ ಪ್ರಸಿದ್ದಿಯಾಗಿವೆ. ಇಸ್ಲಾಮಿಕ್ ದೇಶಗಳಲ್ಲಿ ಈ ನೃತ್ಯಕ್ಕೆ ಬಹಳ ಮಾನ್ಯತೆ ಇದೆ. ತುರ್ಕಿ ಹಾಗೂ ಈಜಿಪ್ಟಿನ ಸೂಫಿ ಸಂಪ್ರದಾಯಿಕ ನೃತ್ಯದಿಂದ ಪ್ರಭಾವಿತವಾಗಿರುವ ಈ ನೃತ್ಯ ಕಲೆ ಬಹಳ ಆಕರ್ಷಣೀಯ.

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ನಡೆಯುತ್ತಿರುವ ದಿ ಸೋಕ್ ಮಾರ್ಕೇಟ್ ನ ಭಾಗವಾಗಿ ಆಯೋಜಿಸಿದ್ದ ಈ ನೃತ್ಯ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಭಾನುವಾರದ ಸಂಜೆಗೆ ಮತ್ತಷ್ಟು ಮೆರಗು ನೀಡಿದ ಈ ಡ್ಯಾನ್ಸ್ ನ್ನು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿತ್ತು. ಈ ನೃತ್ಯ ಪ್ರದರ್ಶನದಲ್ಲಿ ಎಲ್ ಈ ಡಿ ಲೈಟ್‍ಗಳಿಂದ ಆಲಂಕೃತಗೊಂಡಿರುವ ಸ್ಕರ್ಟ್‍ನ್ನು ಧರಿಸಿದ ನೃತ್ಯಗಾರರ ಮನಮೋಹಕ ನೃತ್ಯ ಪ್ರದರ್ಶನ ನೀಡಿದರು.

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ನವೆಂಬರ್ 23 ರಿಂದ ಪ್ರಾರಂಭವಾಗಿರುವ ಕಲಾಕಾರರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಡಿಸೆಂಬರ್ 2 ರ ವರೆಗೆ ನಡೆಯಲಿದೆ. ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 100 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಬೆಂಗಳೂರು ಜನತೆಯ ಮುಂದೆ ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 7.30 ರವರೆಗೆ ಪ್ರದರ್ಶಿಸಿ ಮಾರಾಟ ಮಾಡುವರು.

ದ ಸೋಕ್ ಮಾರ್ಕೇಟ್ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್

(ಶಿವಾನಂದ ವೃತ್ತದ ಬಳಿ)

ದಿನಾಂಕ: ನವೆಂಬರ್ 23 ರಿಂದ ಡಿಸೆಂಬರ್ 2 ರ ವರೆಗೆ

ಸಮಯ: ಬೆಳಿಗ್ಗೆ 11 ಗಂಟೆಯಿಂದ ಸಂಜೆ 7.30 ರ ವರೆಗೆ

ಹೆಚ್ಚಿನ ಮಾಹಿತಿಗಾಗಿ

ಮೊ: 8861792505

ಪಂಚ ಭೂತಗಳಲ್ಲಿ ಅಂಬರೀಶ್ ಲೀನ: ಜಲೀಲ ಇನ್ನು ನೆನಪು ಮಾತ್ರ

ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ.ಸಕಲ‌ ಸರಕಾರಿ ಗೌರವದೊಂದಿಗೆ ಕರ್ಣನ ಅಂತ್ಯಸಂಸ್ಕಾರ ನಡೆದಿದ್ದು ಹಿರಿಯ ನಟ ಅಂಚಭೂತಗಳಲ್ಲಿ ಲೀನವಾದರು.

ಮಂಡ್ಯದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಅಂಬರೀಶ್ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಲಾಯಿತು. ರಕ್ಷಣಾ ಇಲಾಖೆಯ ಹೆಲಿಕ್ಯಾಪ್ಟರ್ ಮೂಲಕ ಎಚ್ಎಎಲ್ ವಿಮಾನಕ್ಕೆ ಬಂದ ಪಾರ್ಥೀವ ಶರೀರವನ್ನು ಆಂಬ್ಯುಲೆನ್ಸ್ ಮೂಲಕ ಕಂಠೀರವ ಸ್ಟೇಡಿಯಂ ಗೆ ತರಲಾಯಿತು.

ಮಧ್ಯಾಹ್ನ12 ಗಂಟೆಗೆ ಆಗಮಿಸಿದ‌ ಪಾರ್ಥೀವ ಶರೀರವನ್ನು ಹೂವುನಿಂದ ಅಲಂಕರಿಸಿದ್ದ ವಾಹನಕ್ಕೆ ಬದಲಾಯಿಸಲಾಯಿತು.ನಂತರ 12.30 ಕ್ಕೆ ಸ್ಟೇಡಿಯಂ ನಿಂದ ಹೊರಟ ಪಾರ್ಥೀವ ಶರೀರ ಸಂಜೆ 4 ಗಂಟೆಗೆ ಕಂಠೀರವ ಸ್ಟುಡಿಯೋ ತಲುಪಿತು.ರಸ್ತೆಯುದ್ದಕ್ಕೂ ಸೇರುದ್ದ ಜನಸಾ್ರ ಅಂಬಿಗೆ ಅಂತಿಮ ವಿದಾಯ ಹೇಳಿತು.

ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಟ, ಮಾಜಿ ಸಚಿವ ಅಂಬರೀಷ್ ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರಾಷ್ಟ್ರಧ್ವಜವನ್ನು ಅಂಬರೀಶ್ ಪತ್ನಿ ಸುಮಲತಾ ಅವರಿಗೆ ಹಸ್ತಾಂತರಿಸಿದರು.

ರವಿಚಂದ್ರನ್, ಶಿವಕುಮಾರ್, ದರ್ಶನ್,ಯಶ್ ಸೇರಿದಂತೆ ಚಿತ್ರರಂಗದ ಗಣ್ಯರು,ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷ ನಾಯಕ ಯಡಿಯೂರಪ್ಪ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಜಲಸಂಪನ್ಮೂಲ ಸಚಿವ ಡಿ ಕೆ. ಶಿವಕುಮಾರ್,ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಮೊದಲಾದವರು ಅಂಬರೀಶ್ ಗೆ ಅಂತಿಮ ನಮನ ಸಲ್ಲಿಸುವ ಮೂಲಕ
ಅಂಬಿಗೆ ಭಾವಪೂರ್ಣ ವಿದಾಯ ಹೇಳಲಾಯಿತು.

ನಂತರ ಒಕ್ಕಲಿಗ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ಬಳಿಕ ಚಿತೆಗೆ ಪುತ್ರ ಅಭಿಷೇಕ್ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯ ಸಂಸ್ಕಾರ ಪೂರ್ಣಗೊಳಿಸಿದ್ದು ಅಗ್ನಿಜ್ವಾಲೆಯ ಮೂಲಕ ಅಂಬಿ ಪಂಚ ಭೂತಗಳಲ್ಲಿ ಲೀನವಾದರು.

ತವರಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿಂದ ಅಂಬಿ ಅಂತಿಮ ದರ್ಶನ: ಸಿಎಂ

ಮಂಡ್ಯ: ಹಿರಿಯ ನಟ ಹಾಗೂ ಮಾಜಿ ಸಚಿವರಾದ ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವುದು ಸರ್ಕಾರಕ್ಕೆ ಸವಾಲಾಗಿತ್ತು. ಹಲವಾರು ಸಮಸ್ಯೆಗಳ ನಡುವೆಯೂ ಅಂತಿಮ ದರ್ಶನ ಸುಸೂತ್ರವಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇಂದು ಮಂಡ್ಯ ನಗರದಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯವರು ಅಂಬರೀಶ್ ಅವರ ಸ್ವಚ್ಚ ಮನಸ್ಸಿನಿಂದ ಅವರ ಅಂತ್ಯ ಕಾಲದಲ್ಲೂ ಸುಗಮವಾದ ರೀತಿ ಕಾರ್ಯ ನಡೆಯುತ್ತಿದೆ‌‌‌. ಎಲ್ಲರೂ ಕೊಟ್ಟ ಸಹಕಾರಕ್ಕೆ ನಾನು ಆಬಾರಿ ಎಂದು ಕೃತಜ್ಞತೆ ಸಲ್ಲಿಸಿದರು.

ಬೆಂಗಳೂರಿನ ಕಂಠೀರವ ಸ್ಟುಡಿಯೋ ದಲ್ಲಿ ರಾಜ್‍ಕುಮಾರ್ ಅವರ ಸಮಾಧಿಯ ಬಳಿ ಅಂಬರೀಶ್ ಅವರ ಅಂತ್ಯ ಸಂಸ್ಕಾರ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದ ಮುಖ್ಯಮಂತ್ರಿಯವರು
ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲೇ ಬೇಕು ಅನ್ನೋದು ಅವರ ಅಭಿಮಾನಿಗಳು ಬಯಕೆಯಾಗಿತ್ತು‌‌. ಅದರಂತೆ ಸರ್ಕಾರದವತಿಯಿಂದ ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು ಎಂದರು.

ಸುಮಾರು ಎರಡುವರೆ ಲಕ್ಷ ಜನರು ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ‌‌. ಮಂಡ್ಯದ ಜನತೆ ಹಾಗೂ ಎಲ್ಲರೂ ಅವರ ಮೇಲೆ ಇಟ್ಟಿರುವ ಪ್ರೀತಿ ಎಂಥದ್ದು ಅಂತ ಗೊತ್ತಾಗುತ್ತದೆ ಎಂದು ಹೇಳಿದರು.

ಸರ್ಕಾರದ ವತಿಯಿಂದ ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ಪ್ರಮುಖ ರಸ್ತೆಗಳಲ್ಲಿ ಅಂಬರೀಶ್ ಅವರ ಪಾರ್ಥಿವ ಶರೀರದ ಮೆರವಣಿಗೆ ಸಾಗಲಿದೆ. ನಂತರ ಕಂಠೀರವ ಸ್ಟುಡಿಯೋ ದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿಸಿದರು.

ಕಲಾವಿದರು ನಾಡಿಗೆ ಸೇವೆ ಸಲ್ಲಿಸಿದ್ದಾರೆ. ಹಲವಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಕೊಡಬೇಕು. ನನ್ನ ಆರೋಗ್ಯದ ಬಗ್ಗೆ ಕರೆ ಮಾಡಿ ಎಚ್ಚರಿಕೆ ಕೊಡುತ್ತಿದ್ದರು. ನಿಮ್ನ ಸೇವೆ ಸಮಾಜಕ್ಕೆ ಬೇಕು ಎಂದು ಹೇಳುತ್ತಿದ್ದರು‌. ನನಗಿಂತ ಅಂಬರೀಶ್ ಅವರು ಎಂಟು ವರ್ಷ ದೊಡ್ಡವರು. ನನಗೆ ಅವರು ಅಣ್ಣನ ರೀತಿ. ಸರ್ಕಾರದ ವತಿಯಿಂದ ಹಾಕಿಕೊಂಡಿರುವ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ನಮನ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿ ಬಸ್ ದುರಂತ ಮೃತರ ಕುಟುಂಬಕ್ಕೆ ಪರಿಹಾರ ಬಂದಿದೆ. ಸುಮಾರು ಒಂದುವರೆ ಕೋಟಿಯಷ್ಟು ಹಣ ಬಿಡುಗಡೆ ಮಾಡಲಾಗಿದೆ‌. ಮೃತರ ಕುಟುಂಬಸ್ಥರಿಗೆ ತಲಾ ಐದು ಲಕ್ಷಪರಿಹಾರ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್. ಪುಟದಟರಾಜು, ಪ್ರವಾಸೋದ್ಯಮ ಸಚಿವ ಸಾ‌.ರಾ.ಮಹೇಶ್ ಹಾಗೂ ಇತರೆ ಗಣ್ಯರಿಗೆ ಉಪಸ್ಥಿತರಿದ್ದರು.