ಜೆಡಿಎಸ್ ನಿಂದ ವಿಧಾನಸೌಧದಿಂದ ರಾಜಭವನದವರೆಗೆ ಕಾಲ್ನಡಿಗೆ ಜಾಥಾ

ಬೆಂಗಳೂರು:ಇಂದು ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗು ರಾಜ್ಯಾಧ್ಯಕ್ಷರಾದ ಹೆಚ್.ಕೆ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಉಪಸ್ಥಿತಿಯಲ್ಲಿ ವಿಧಾನಸೌಧದಿಂದ ರಾಜಭವನದವರೆಗೆ ಕಾಲ್ನಡಿಗೆಯ ಮೂಲಕ ತೆರಳಿ “ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಮಹದಾಯಿ ಯೋಜನೆಯ ಅನುಮೋದನೆಗಾಗಿ” ರಾಜ್ಯಪಾಲರ ಮುಖಾಂತರ ರಾಷ್ಟ್ರಪತಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಯಿತು.

Video-ತಂದೆ -ತಾಯಿ ಅವರ ಸಮಾಧಿಗೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ, ಜುಲೈ 29:ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿಸ ಬಸವರಾಜ ಬೊಮ್ಮಾಯಿ ಅವರು , ಹುಬ್ಬಳ್ಳಿ ಧಾರವಾಡ ಅವಳಿನಗರಗಳ ಮಧ್ಯೆ ಅಮರಗೋಳದಲ್ಲಿರುವ ಮಾತೋಶ್ರೀ ಗಂಗಮ್ಮ ಎಸ್ ಬೊಮ್ಮಾಯಿ ಹಾಗೂ ತಂದೆ,ಮಾಜಿಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿ ,ಗೌರವ ಸಮರ್ಪಿಸಿದರು.

ತಂದೆ -ತಾಯಿಯ ಸಮಾಧಿಗೆ ಪ್ರದಕ್ಷಿಣೆ ಹಾಕಿ ಕೆಲನಿಮಿಷ ಮೌನವಾಗಿ ಸ್ಮರಣೆ ಮಾಡಿದರು.ಉಭಯ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.

ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ ತಂದೆ ,ತಾಯಿಯವರ ಆಶೀರ್ವಾದ ಎಲ್ಲಕ್ಕೂ ಮಿಗಿಲು ಅಧಿಕಾರ ಸ್ವೀಕರಿಸಿದ ನಂತರ ಅವರ ಸಮಾಧಿಗಳ ದರ್ಶನ ಪಡೆದಿರುವೆ ಎಂದರು.

ಶಾಸಕರಾದ ಅಮೃತ ದೇಸಾಯಿ, ಮಾಜಿ ಸಚಿವ ,ಶಾಸಕ ಶಿವರಾಮ್ ಹೆಬ್ಬಾರ , ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ ಸೇರಿದಂತೆ ,ಕುಟುಂಬದ ಬಂಧುಗಳು, ರಾಜಕೀಯ ಪಕ್ಷಗಳ ಮುಖಂಡರು,ಅಭಿಮಾನಿಗಳು ನೆರೆದಿದ್ದರು.

Video-ಹುಬ್ಬಳ್ಳಿ ಧಾರವಾಡ ನಗರ ಅಭಿವೃದ್ಧಿಗೆ ಪ್ರಾಶಸ್ತ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ.ಜು.29:ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿದೆ. ಅವಳಿ ನಗರದ ಸಮಸ್ಯೆಗಳನ್ನು ಬಗೆಹರಿಸಿ, ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಷೇಶ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳುವ ಮುನ್ನ ವಿಮಾನ ನಿಲ್ದಾಣದ‌ ಬಳಿ ಮಾಧ್ಯಮ‌ದವರೊಂದಿಗೆ ಮಾತನಾಡಿದರು.

ಹುಬ್ಬಳ್ಳಿ ನನಗೆ ಅತ್ಯಂತ ಪ್ರೀತಿಯ ಊರು. ನನ್ನ ಶೈಕ್ಷಣಿಕ ಜೀವನದ ಅಪಾರ ಪ್ರಮಾಣದ ಸ್ನೇಹಿತರ ಬಳಗ ಇಲ್ಲಿದೆ. ಮುಖ್ಯಮಂತ್ರಿಯಾಗಿ ಹುಬ್ಬಳ್ಳಿಗೆ ಆಗಮಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಪಕ್ಷ ಹಾಗೂ ಕೇಂದ್ರದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆರ್ಶೀವಾದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದೇನೆ.‌ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಹಿರಿಯ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಅನೇಕ ಶಾಸಕ ಮಿತ್ರರು ಇಲ್ಲಿರುವುದರಿಂದ ಪಕ್ಷ ಇಲ್ಲಿ ಬಲಿಷ್ಠವಾಗಿದೆ. ಪಕ್ಷ ಹಾಗೂ ಪರಿವಾರದ ಹಿರಿಯರೊಂದಿಗೆ ಚರ್ಚೆ ಮಾಡಿ ಅವರ ಸಲಹೆ ಸೂಚನೆಗಳನ್ನು ಅನುಷ್ಠಾನ ಮಾಡಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ನಾಳೆ ಬೆಳಗ್ಗೆ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ನಾಯಕರು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಮುಂದಿನ ಎರಡು ಮೂರು ದಿನಗಳಲ್ಲಿ ಮತ್ತೆ ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸುತ್ತೇನೆ.ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಸಚಿವ ಸಂಪುಟ ಸೇರದಿರುವ ಕುರಿತು ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಿದ್ದಾರೆ. ಅದಾಗ್ಯೂ ಸಹ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಈ ಕುರಿತು ಮಾತನಾಡುತ್ತೇನೆ. ರಾಜಕೀಯಕ್ಕೆ ಬರುವ ಮೊದಲಿನಿಂದಲೇ ನಾವಿಬ್ಬರೂ ಸ್ನೇಹಿತರು. ಅವರ ಬಗ್ಗೆ ಅಪಾರವಾದ ಅಭಿಮಾನ, ಪ್ರೀತಿ – ವಿಶ್ವಾಸ ಇದೆ. ಅವರೊಂದಿಗೆ ಮಾತನಾಡಿ ಅವರ ಬಯಕೆಯನ್ನು ತಿಳಿದುಕೊಂಡು ಪಕ್ಷದೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳಕ್ಕೆ ಕ್ರಮ:

ಈ ಸಂದರ್ಭದಲ್ಲಿ ಮಾಧ್ಯಮಮಿತರ ಪ್ರಶ್ನೆಗೆ ಉತ್ತರಿಸಿದ ಅವರು ಕೃಷ್ಣಾ ನದಿ ನೀರಿನ ಹಂಚಿಕೆ ಕುರಿತು ಸುಪ್ರೀಂಕೋರ್ಟ್ ಆದೇಶದಂತೆ ಬ್ರಿಜೇಶ್ ಕುಮಾರ್ ಪಟೇಲ್ ಅವರ ನೇತೃತ್ವದಲ್ಲಿ ಟ್ರುಬ್ಯುನಲ್ ರಚಿಸಲಾಯಿತು. ಇದರ ತೀರ್ಪಿನಂತೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುವ ಹಂತದಲ್ಲಿ ಆಂದ್ರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಏರಿತು. ಮಹಾರಾಷ್ಟ್ರ ಹಾಗೂ ಕರ್ನಾಟಕ ಒಟ್ಟಾಗಿ ಇದನ್ನು ಎದುರಿಸುತ್ತಿದ್ದೇವೆ. ಮುಂದಿನ ಒಂದುವರೆ ತಿಂಗಳ ಒಳಗಾಗಿ ಸುಪ್ರೀಂಕೋರ್ಟ್ ತೀರ್ಪು ಬರಬಹುದು. ನಮ್ಮ ಪಾಲಿನ ನೀರಿನ ಬಳಕೆಗೆ ಅನುಮತಿ ದೊರೆಯುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ತಕ್ಷಣ ಪುನರ್ವಸತಿ ಕಾರ್ಯಕ್ರಮ ರೂಪಿಸಿ, ಆಲಮಟ್ಟಿ ಜಲಾಶಯದ ಎತ್ತರವನ್ನು ಏರಿಸಲಾಗುವುದು. ಈ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯಿದೆ. ಜಲಾಶಯದ ಎತ್ತರ ಹೆಚ್ಚಳದಿಂದ 13.50 ಲಕ್ಷ ಚದುರ ಪ್ರದೇಶ ನೀರಾವರಿಗೆ ಒಳಪಡುವುದು. ಇದಕ್ಕೆ ಪ್ರಾಶಸ್ತ್ಯ ನೀಡಿ ಕೆಲಸ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕಾರದ ಅಮೃತ ದೇಸಾಯಿ, ಅರಬೈಲು ಶಿವರಾಮ ಹೆಬ್ಬಾರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೋಲಿಸ್ ಆಯುಕ್ತ ಲಾಭುರಾಮ, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಸರ್ಕಾರ ಭ್ರಷ್ಟಾಚಾರ, ದುರಾಡಳಿತಗಳಿಂದಲೇ ಎರಡು ವರ್ಷ ಪೂರೈಸಿದೆ:ಸಿದ್ದರಾಮಯ್ಯ

ಬೆಂಗಳೂರು : ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ದುರಾಡಳಿತಗಳಿಂದಲೇ ಎರಡು ವರ್ಷ ಪೂರೈಸಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರ ಇದ್ದರೆ ಸ್ವರ್ಗವನ್ನೇ ಸೃಷ್ಟಿಸುತ್ತೀವಿ ಎಂದು ಜನರನ್ನು ನಂಬಿಸಿ ರಾಜ್ಯವನ್ನು ಲೂಟಿ ಹೊಡೆದರು. ಕೊರೋನ ಸಂದರ್ಭದಲ್ಲೂ ವಿಪರೀತ ಭ್ರಷ್ಟಾಚಾರ ನಡೆಸಿದ್ದು ಮಾತ್ರವಲ್ಲದೆ ಮಕ್ಕಳ ಪೌಷ್ಠಿಕಾಂಶ ಹೆಚ್ಚಿಸಲಿಕ್ಕಾಗಿ ಮೀಸಲಿಟ್ಟ ಮೊಟ್ಟೆಯ ಹಣವನ್ನೂ ಸರ್ಕಾರ ನುಂಗಿ ನೀರು ಕುಡಿಯಿತು ಎಂದು ಅವರು ಕಿಡಿ ಕಾರಿದ್ದಾರೆ.

ಎರಡು ವರ್ಷಗಳ ಬಿಜೆಪಿ ಸರ್ಕಾರದ ವೈಫಲ್ಯಗಳ ಕುರಿತ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊರೋನಾ ಸಲಕರಣೆಗಳು ವೆಂಟಿಲೇಟರ್, ಸ್ಯಾನಿಟೈಸರ್, ಪಿಪಿಇ ಕಿಟ್‌ಗಳ ಖರೀದಿಯಲ್ಲೂ ಲಂಚ ತಿಂದರು. ಮಾರುಕಟ್ಟೆ ದರಕ್ಕಿಂತ ಎರಡು ಮೂರು ಪಟ್ಟು ಹೆಚ್ಚಿನ ಬೆಲೆಗೆ ಖರೀದಿ ಮಾಡಿ ನೂರಾರು ಕೋಟಿ ಬಿಲ್ ಮಾಡಿಕೊಂಡರು. ಕೊರೋನ ಕಾಲದ ಭ್ರಷ್ಟಾಚಾರವನ್ನು ವಿಧಾನಸಭೆಯಲ್ಲಿ ದಾಖಲೆ ಸಮೇತ ಬಹಿರಂಗಗೊಳಿಸಿದೆ ಎಂದ್ರು.

ಇದ್ಯಾವುದಕ್ಕೂ ಮುಖ್ಯಮಂತ್ರಿಗಳು ಉತ್ತರ ಕೊಡಲೇ ಇಲ್ಲ. ಆರೋಗ್ಯ ಸಚಿವ ಸುಧಾಕರ್ ನಾನು ಹೇಳಿದ್ದನ್ನೆಲ್ಲಾ ಒಪ್ಪಿಕೊಂಡರು. ಆದರೂ ಭ್ರಷ್ಟಾಚಾರ ನಡೆದೇ ಇಲ್ಲ ಎಂದು ವಾದಿಸಿ ಸುಳ್ಳು ಹೇಳಿದರು. ಕೊರೋನ ಸಾವಿನ ಪ್ರಮಾಣದಲ್ಲೂ ಸರ್ಕಾರ ವಿಪರೀತ ಸುಳ್ಳು ಹೇಳಿದೆ. ಸರ್ಕಾರ ಹೇಳುತ್ತಿರುವುದಕ್ಕೂ 10 ಪಟ್ಟು ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಬಗ್ಗೆಯೂ ಸುಳ್ಳು ಹೇಳಿದರು. ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುಧಾಕರ್ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು ಕೇವಲ ಮೂರೇ ಮಂದಿ ಎಂದು ಸುಳ್ಳು ಹೇಳಿದರು. ಆದರೆ ಮೃತಪಟ್ಟವರು 24 ಕ್ಕೂ ಹೆಚ್ಚು ಮಂದಿ. ಇವರ ಸುಳ್ಳುಗಳಿಗೆ ಇದೊಂದು ಉದಾಹರಣೆ ಅಷ್ಟೆ ಎಂದ್ರು.

ಆಕ್ಸಿಜನ್ ಕೊರತೆಯಿಂದ ಯಾರೂ ಮೃತಪಟ್ಟೇ ಇಲ್ಲ ಎಂದು ಕೇಂದ್ರವೂ ಸುಳ್ಳು ಹೇಳುತ್ತಿದೆ. ಇಡೀ ದೇಶದಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಕೊರೋನ ನಿರ್ವಹಣೆಯಲ್ಲಿನ ವೈಫಲ್ಯದಿಂದಲೇ ಮೃತಪಟ್ಟಿದ್ದಾರೆ. ಎರಡನೇ ಅಲೆ ಬಂದಿದ್ದು 2021ರ ಫೆಬ್ರವರಿ-ಮಾರ್ಚ್ನಲ್ಲಿ. ಆದರೆ, 2020 ರ ನವೆಂಬರ್‌ನಲ್ಲೇ ತಜ್ಞರು ವರದಿ ನೀಡಿ ಎರಡನೇ ಅಲೆ ಬಗ್ಗೆ ಎಚ್ಚರಿಸಿದ್ದರು. ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಐದು ತಿಂಗಳು ಸಮಯಾವಕಾಶವಿತ್ತು. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಣೆಗೇಡಿತನದಿಂದ ವರ್ತಿಸಿದ್ದರಿಂದಲೆ ಇಷ್ಟೊಂದು ಸಾವುಗಳು ಸಂಭವಿಸಿದವು.ಆಕ್ಸಿಜನ್ ಕೊರತೆ, ಬೆಡ್‌ಗಳ ಕೊರತೆ, ವೆಂಟಿಲೇಟರ್‌ಗಳ ಕೊರತೆ, ಐಸಿಯು ಬೆಡ್‌ಗಳ ಕೊರತೆ, ಜೀವ ರಕ್ಷಕ ಔಷಧಗಳ ಕೊರತೆ, ಆಂಬುಲೆನ್ಸ್ಗಳ ಕೊರತೆಯಿಂದ ಲಕ್ಷಾಂತರ ಮಂದಿ ಆಸ್ಪತ್ರೆಗಳ ಬಾಗಿಲಲ್ಲೇ ಮೃತಪಟ್ಟರು. ಸರ್ಕಾರ ಸರಿಯಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದರೆ ಈ ಸಾವುಗಳನ್ನು ತಡೆಯಬಹುದಿತ್ತು.ಆದ್ದರಿಂದ ಈ ಸಾವುಗಳ ಹೊಣೆಯನ್ನು ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಯಡಿಯೂರಪ್ಪ ಅವರು ಹೊರಬೇಕು ಎಂದ್ರು.

ಲಾಕ್‌ಡೌನ್ ಸಂದರ್ಭದಲ್ಲಿ ದುಡಿಯುವ ವರ್ಗಗಳು ಕೆಲಸವಿಲ್ಲದೆ, ಊಟವಿಲ್ಲದೆ ಕೊರಗಿದರು. ಇವರಿಗೆ 10 ಸಾವಿರ ಪರಿಹಾರ ಹಣ ಮತ್ತು 10 ಕೆಜಿ ಅಕ್ಕಿ ಕೊಡಲು ಒತ್ತಾಯಿಸಿದ್ದೆ. ಆದರೆ ಸರ್ಕಾರದ ಹೃದಯ ಕೆಲಸವನ್ನೇ ಮಾಡಲಿಲ್ಲ. ಎಲ್ಲಾ ಬಿಪಿಎಲ್ ಕಾರ್ಡ್ದಾರರ ಖಾತೆಗಳಿಗೆ ತಲಾ 10 ಸಾವಿರ ರೂಪಾಯಿ ಹಾಕಿದ್ದರೆ ಸರ್ಕಾರಕ್ಕೆ ಹೆಚ್ಚೆಂದರೆ 12 ಸಾವಿರ ಕೋಟಿ ಖರ್ಚಾಗುತ್ತಿತ್ತು. 2 ಲಕ್ಷ 46 ಸಾವಿರ ಕೋಟಿ ಬಜೆಟ್‌ನಲ್ಲಿ ಹಸಿದವರಿಗಾಗಿ, ಬಡವರಿಗಾಗಿ 10 ಸಾವಿರ ರೂಪಾಯಿ ಕೊಡುವುದು ಕಷ್ಟವಿತ್ತಾ ? ಇದು ಎರಡು ವರ್ಷಗಳ ಸಾಧನೆಯಾ ? ವೈಫಲ್ಯವಾ ?

ಆರ್ಥಿಕ ಶಿಸ್ತು ಪಾಲಿಸದೆ ನಿಯಮ ಮೀರಿ ಸಾಲ ಮಾಡಿದ್ದು, ನಿಯಮ ಮೀರಿದ ಸಾಲ ತೀರಿಸುವುದಕ್ಕೇ ಮತ್ತೆ ಸಾಲ ಮಾಡುವ ಸ್ಥಿತಿಗೆ ಸರ್ಕಾರ ಬಂದಿದೆ. ರಾಜ್ಯದ ಇತಿಹಾಸದಲ್ಲೇ ಈ ರೀತಿ ಆಗಿರಲಿಲ್ಲ. 4 ಲಕ್ಷ ಕೋಟಿವರೆಗೂ ಸಾಲ ಮಾಡಿರುವ ರಾಜ್ಯ ಸರ್ಕಾರದ ಬಳಿ ಈ ಸಾಲವನ್ನು ತೀರಿಸುವ ಯೋಜನೆಗಳೇ ಇಲ್ಲ. ಜಿಡಿಪಿಯ ದರದ ಶೇ 25ಕ್ಕಿಂತ ಸಾಲದ ಪ್ರಮಾಣ ಹೆಚ್ಚಾಗಬಾರದು ಎನ್ನುವುದು ನಿಯಮ. ರಾಜ್ಯ ಮತ್ತು ಕೇಂದ್ರ ಎರಡರಲ್ಲೂ ನಿಯಮ ಮೀರಿ ಸಾಲ ಮಾಡಿ ಅದರ ಹೊರೆಯನ್ನು ಜನರ ತಲೆ ಮೇಲೆ ಹೊರಿಸಿದ್ದಾರೆ ಎಂದು ಆರೋಪಿಸಿದ್ರು.

ಯುಪಿಎ ಸರ್ಕಾರದ ಕೊನೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ದೇಶದ ಸಾಲ 53 ಲಕ್ಷ ಕೋಟಿ ಇತ್ತು. ಈಗ ಅದು 135 ಲಕ್ಷ ಕೋಟಿಗೆ ಏರಿಕೆಯಾಗಿದೆ. ದೇಶ ಸ್ವಾತಂತ್ರ್ಯಗೊಂಡ ಬಳಿಕ 70 ವರ್ಷಗಳಲ್ಲಿ ಮಾಡಿದ ಸಾಲ 53 ಲಕ್ಷ ಕೋಟಿ.ಆದರೆ ನರೇಂದ್ರ ಮೋದಿ ಅವರು ಪ್ರಧಾನಿ ಆದ 6 ವರ್ಷಗಳಲ್ಲೇ 82 ಲಕ್ಷ ಕೋಟಿ ಸಾಲ ಮಾಡಿ ಒಟ್ಟು ದೇಶದ ಸಾಲವನ್ನು 135 ಕೋಟಿಗೆ ತಲುಪಿಸಿದ್ದಾರೆ. ಅಚ್ಛೆ ದಿನ್ ಅಂದರೆ ಇದೇನಾ ? ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಜಿಡಿಪಿ ಶೇ10-11 ರಲ್ಲಿ ಇತ್ತು. ಮೋದಿ ಅವರ ಆಡಳಿತದಲ್ಲಿ ಮೈನಸ್ 7 ಕ್ಕೆ ಕುಸಿದಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದರು. ಆದರೆ 12 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. “ಕೆಲಸ ಕೊಡಿ ಮೋದಿ ಅವರೇ’ ಎಂದು ದೇಶದ ವಿದ್ಯಾವಂತ ನಿರುದ್ಯೋಗಿ ಯುವಕರು/ಯುವತಿಯರು ಕೇಳುತ್ತಿದ್ದಾರೆ. ಆದರೆ, ಮೋದಿ ಅವರು ಪಕೋಡ ಮಾರಿ ಎಂದು ಸಲಹೆ ಕೊಡುತ್ತಿದ್ದಾರೆ.ಅಡುಗೆ ಎಣ್ಣೆಯ ಬೆಲೆ 80 ರೂಪಾಯಿ ಇದ್ದದ್ದು 200 ರೂಪಾಯಿ ದಾಟಿದೆ. ಹೀಗಾಗಿ ಪಕೋಡ ಕೂಡ ಮಾರಲಾಗದ ಸ್ಥಿತಿ ಬಂದಿದೆ. “ಮೋದಿ-ಮೋದಿ” ಎಂದು ಕೂಗಿದ ದೇಶದ ಯುವಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊಟ್ಟ ಅಚ್ಛೆ ಅಂದರೆ ಇದೆ‌ ಎಂದು ಟೀಕಿಸಿದ್ರು.

15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ 5495 ಕೋಟಿ ಬರಬೇಕಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಪಾಲಿನ 5495 ಸಾವಿರ ಕೋಟಿ ಕೊಡಲು ಸಾಧ್ಯವಿಲ್ಲ ಎಂದು ಮುಲಾಜಿಲ್ಲದೆ ಹೇಳಿದರು. ಇದನ್ನು ರಾಜ್ಯ ಸರ್ಕಾರವಾಗಲೀ, ರಾಜ್ಯದ ಬಿಜೆಪಿ ಸಂಸದರಾಗಲೀ ಪ್ರಶ್ನಿಸಲೇ ಇಲ್ಲ.ಪೆಟ್ರೋಲ್ ಮೇಲಿನ ಎಕ್ದೈಸ್ ಡ್ಯೂಟಿಯನ್ನು 9 ರೂನಿಂದ 33 ರೂಪಾಯಿಗೆ, ಡೀಸೆಲ್ ಮೇಲಿನ ಎಕ್ಸೈಸ್ ಡ್ಯೂಟಿಯನ್ನು 3 ರೂನಿಂದ 32 ರೂಪಾಯಿಗೆ ಏರಿಸಿದ್ದಾರೆ.ಅಂದರೆ ಹತ್ತು ಪಟ್ಟು ಹೆಚ್ಚಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100 ರೂ. ದಾಟುವಂತೆ ಮಾಡಿದ್ದಾರೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಸ್ವರ್ಗವನ್ನೇ ಸೃಷ್ಟಿಸುತ್ತೀವಿ ಎಂದು ಹೇಳಿದ್ದಿರಿ. ಇದೇನಾ ನೀವು ಸೃಷ್ಟಿಸಿದ ಸ್ವರ್ಗ ಎಂದು ಪ್ರಶ್ನಿಸಿದ್ರು.

ರಾಜ್ಯ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. 2019 ರಲ್ಲಿ 69 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾಳಾಯ್ತು. ಇದರ ಪರಿಹಾರವನ್ನೇ ಇನ್ನೂ ಕೊಟ್ಟಿಲ್ಲ. ಈ ಬಾರಿ ಕೂಡ ಪ್ರವಾಹದ ಪರಿಸ್ಥಿತಿ ಇದೆ.ನಾನು ಬಾಗಲಕೋಟೆಯ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಬಂದಿದ್ದೀನಿ. ಅಲ್ಲಿನ ಜನ ಬಾಯಿ ತುಂಬಾ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಬೆಳೆ ಹಾನಿಗೆ, ಮನೆಗಳು ಮುಳುಗಿರುವುದಕ್ಕೆ ಸರಿಯಾದ ಪರಿಹಾರ ನೀಡಿಲ್ಲ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ವರ್ಗಾಯಿಸಿಲ್ಲ. ಇದೂ ಎರಡು ವರ್ಷಗಳ ಸಾಧನೆಯಾ? ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಾಗ ನಾನು ವರ್ಷಕ್ಕೆ 3 ಲಕ್ಷ ಮನೆ ಕಟ್ಟಿಸುತ್ತಿದ್ದೆ. ಐದು ವರ್ಷದಲ್ಲಿ 15 ಲಕ್ಷ ಮನೆ ಕಟ್ಟಿಸಿದ್ದೀವಿ. ಈ ಸರ್ಕಾರ ಎರಡು ವರ್ಷಗಳಲ್ಲಿ ಒಂದೂ ಮನೆ ಕಟ್ಟಿಸಿಲ್ಲ. ಒಬ್ಬರಿಗೂ ಮನೆ ನೀಡಿಲ್ಲ. ಬೆಂಗಳೂರಿಗೆ ಒಂದು ಲಕ್ಷ ಮನೆ ಕೊಟ್ಟಿದ್ದೆ. ಆದರೆ ಈ ಸರ್ಕಾರ ಮನೆಗಳಿಗಾಗಿ ಹಾಕಿದ್ದ ಅರ್ಜಿಗಳನ್ನೆಲ್ಲಾ ರದ್ದು ಮಾಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಟ್ಟಿಸಿದ ಮನೆಗಳನ್ನೂ ನೀಡುತ್ತಿಲ್ಲ. ನನ್ನ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ 7500 ಮನೆಗಳನ್ನು ಮಂಜೂರು ಮಾಡಿಸಿದ್ದೆ. ಅದರಲ್ಲಿ ಒಂದೂ ಮನೆಯನ್ನು ಕೊಟ್ಟಿಲ್ಲ. ಎಲ್ಲವನ್ನೂ ರದ್ದುಗೊಳಿಸಿದ್ದಾರೆ ಎಂದು ಕಿಡಿಕಾರಿದ್ರು.

ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ವಿದ್ಯಾರ್ಥಿ ವೇತನ ನೀಡುವುದನ್ನು ನಿಲ್ಲಿಸಿದ್ದಾರೆ. ಉತ್ತರ ಕರ್ನಾಟಕಕ್ಕೆ 371-ಜೆ ಪ್ರಕಾರ ನಾವಿದ್ದಾಗ ಸಾವಿರ ಕೋಟಿಗೂ ಹೆಚ್ಚು ಕೊಟ್ಟಿದ್ದೆವು. 30 ಸಾವಿರ ಮಂದಿಗೆ ಉದ್ಯೋಗ ಕೊಟ್ಟಿದ್ದೆವು. ಆದರೆ ಈ ಸರ್ಕಾರ “ಕಲ್ಯಾಣ ಕರ್ನಾಟಕ” ಎಂದು ಹೆಸರು ಬದಲಾಯಿಸಿ ಕೈ ಕಟ್ಟಿ ಕುಳಿತಿದ್ದು ಬಿಟ್ಟರೆ ಒಂದು ರುಪಾಯಿಯನ್ನೂ ನೀಡಿಲ್ಲ.ಇದೆಲ್ಲಾ ಎರಡು ವರ್ಷಗಳ ಬಿಜೆಪಿಯ ಸಾಧನೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಬದಲಾವಣೆ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ಹೊಸ ಮುಖ್ಯಮಂತ್ರಿಗಳು ಪೂರ್ಣಾವಧಿ ಸರ್ಕಾರ ನಡೆಸಲಿ ಎಂದು ಆಶಿಸುತ್ತೇನೆ. ಬಸವರಾಜ ಬೊಮ್ಮಾಯಿ ಅವರೇ “ನಾನು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ” ಎಂದು ಹೇಳಿರುವುದರ ಅರ್ಥ ಏನು ಪ್ರಶ್ನಿಸಿದರು.

ನೂತನ ಮುಖ್ಯಮಂತ್ರಿ ಆಗಿ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ..!

ಬೆಂಗಳೂರು: ಕರ್ನಾಟಕ ರಾಜ್ಯದ 23 ನೇ ಮುಖ್ಯಮಂತ್ರಿಯಾಗಿ ಬಸವರಾಜ ಸೋಮಪ್ಪ ಬೊಮ್ಮಾಯಿ ಅವರು ಇಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದ ಗಾಜಿನ ಮನೆಯಲ್ಲಿ ಬುಧವಾರ ಬೆಳಿಗ್ಗೆ ನಿಗದಿತ ಸಮಯಕ್ಕಿಂತಲೂ ಮೂರು ನಿಮಿಷಗಳ ಮುನ್ನವೇ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ಧಾವರ್ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿ ಬಸಚರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಮತ್ತು ಗೋಪ್ಯತಾ ಪ್ರಮಾಣ ವಚನವನ್ನು ಬೋಧಿಸಿದರು.

ಗಣ್ಯಾತಿಗಣ್ಯರು, ಉನ್ನತ ಅಧಿಕಾರಿಗಳು, ಕುಟುಂಬದ ಸದಸ್ಯರು, ಪಕ್ಷದ ಕಾರ್ಯಕಕತು ಹಾಗೂ ಅಭಿಮಾನಿಗಳಿಂದ ಕಿಕ್ಕಿರಿದಿದ್ದ ಸಭಾಂಗಣದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಕನ್ನಡ ಭಾಷೆಯಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

ಈ ಮುನ್ನ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್ ಅವರು ರಾಜ್ಯಪಾಲರ ಅನುಮತಿ ಕೋರಿ ಪ್ರಮಾಣ ವಚನ ಸಮಾರಂಭವನ್ನು ನಿರೂಪಿಸಿದರು.

ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದೊಡನೆಯೇ ಒಂದೆಡೆ ಅಭಿಮಾನಿಗಳಿಂದ ಹರ್ಷೋದ್ಗಾರ ಮುಗಿಲು ಮುಟ್ಟಿತಲ್ಲದೆ, ಮತ್ತೊಂದೆಡೆ ವೇದಿಕೆಯ ಮೇಲೆ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿಗೆ ಹೂಗುಚ್ಛ ನೀಡಿ ಶುಭ ಕೋರಿದರು.

ನಂತರ, ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿದ್ದ ಗಣ್ಯಾತಿಗಣ್ಯರ ಬಳಿ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಪ್ತಗೊಡನೆ ಶುಭಾಶಯ ವಿನಿಮಯ ಮಾಡಿಕೊಂಡರು.

ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ಧಮೇಂದ್ರ ಪ್ರಧಾನ್, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ವ್ಯವಹಾರಗಳ ಉಸ್ತುವಾರಿ ಅರುಣ್‍ಸಿಂಗ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ನಿರ್ಗಮಿತ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದ ಗೋವಿಂದ ಎಂ ಕಾರಜೋಳ, ಡಾ ಸಿ. ಎನ್. ಅಶ್ವಥನಾರಾಯಣ ಮತ್ತು ಲಕ್ಷ್ಮಣ ಸಂಗಪ್ಪ ಸವದಿ, ಯಡಿಯೂರಪ್ಪ ನಿರ್ಗಮಿತ ಸಚಿವ ಸಂಪುಟದಲ್ಲಿ ಸಹೋದ್ಯೋಗಿಗಳಾಗಿದ್ದ ಕೆ. ಎಸ್. ಈಶ್ವರಪ್ಪ, ಎಸ್. ಸುರೇಶ್ ಕುಮಾರ್, ಉಮೇಶ್ ವಿಶ್ವನಾಥ್, ಮುರುಗೇಶ್ ಆರ್ ನಿರಾಣಿ, ಸಿ. ಸಿ. ಪಾಟೀಲ್, ಜೆ. ಸಿ. ಮಾಧುಸ್ವಾಮಿ, ವಿ. ಸೋಮಣ್ಣ, ಕೋಟಾ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಪ್ರಭು ಚೌವ್ಹಾóಣ್, ಅರಬೇಲ್ ಶಿವರಾಮ್ ಹೆಬ್ಬಾರ್, ಬಿ. ಸಿ. ಪಾಟೀಲ್, ಬೈರತಿ ಬಸವರಾಜು, ಎಸ್. ಟಿ. ಸೋಮಶೇಖರ್, ಎಂ. ಸಿ. ನಾರಾಯಣಗೌಡ, ಎನ್. ನಾಗರಾಜು (ಎಂ. ಟಿ. ಬಿ ನಾಗರಾಜ್ ), ಕೆ. ಗೋಪಾಲಯ್ಯ ಮತ್ತು ಸಿ. ಪಿ. ಯೋಗೇಶ್ವರ್, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಪಕ್ಷದ ರಾಜ್ಯದಲ್ಲಿನ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ, ಪಕ್ಷದ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡ ಆರ್. ವಿ. ದೇಶಪಾಂಡೆ, ಜಾತ್ಯಾತೀತ ಜನತಾ ದಳದ ಮುಖಂಡ ಎ. ಟಿ. ರಾಮಸ್ವಾಮಿ, ರಾಜ್ಯ ವಿಧಾನ ಸಭೆಯ ಸದಸ್ಯರಾದ ಎಲ್. ರವಿಸುಬ್ರಮಣ್ಯ , ಅರವಿಂದ ಬೆಲ್ಲದ್ ಹಾಗೂ ಹಲವು ಗಣ್ಯರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ಮಹಾ ನಿರೀಕ್ಷಕ ಪ್ರವೀಣ್ ಸೂದ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ರಾಜ್ಯದ 11 ನೇ ಮುಖ್ಯಮಂತ್ರಿಯಾಗಿದ್ದ ಸೋಮಪ್ಪ ರಾಯಪ್ಪ ಬೊಮ್ಮಾಯಿ ಅವರ ಸುಪುತ್ರರಾದ ಬಸವರಾಜ ಬೊಮ್ಮಾಯಿ ಅವರು ಪ್ರಸ್ತುತ ರಾಜ್ಯ ವಿಧಾನ ಸಭೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಶಿಗ್ಗಾವಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರೂ ಮುಖ್ಯಮಂತ್ರಿಯಾಗಿದ್ದರು ಎಂಬುದು ವಿಶೇಷ.

ಹೆಚ್. ಡಿ. ದೇವೇಗೌಡ ಮತ್ತು ಹೆಚ್. ಡಿ. ಕುಮಾರಸ್ವಾಮಿ ಅವರ ನಂತರ ಕರ್ನಾಟಕದಲ್ಲಿ ಎರಡನೇ ಬಾರಿಗೆ ಎಸ್. ಆರ್. ಬೊಮ್ಮಾಯಿ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ತಂದೆ ಮತ್ತು ಮಗ ಜೋಡಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ ಎಂಬುದು ಗಮನಾರ್ಹ.

ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಅವರು ಸರಿಪಡಿಸಲಿ: ಡಿ.ಕೆ. ಶಿವಕುಮಾರ್

ಬೆಂಗಳೂರು:‘ಕಳೆದ ಎರಡು ವರ್ಷದಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಿಪಡಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಬುಧವಾರ ಮಾಧ್ಯಮ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು,’ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಅವರು ಸರಿಪಡಿಸುತ್ತಾರೆಂಬ ನಿರೀಕ್ಷೆ ಇದೆ.ಕೇಂದ್ರ ಸರ್ಕಾರ ನೀರಾವರಿ, ಹಣಕಾಸು ಸೇರಿದಂತೆ ಯಾವುದೇ ವಿಚಾರದಲ್ಲೂ ರಾಜ್ಯಕ್ಕೆ ಸಹಕಾರ ಕೊಟ್ಟಿಲ್ಲ. ಯಡಿಯೂರಪ್ಪನವರು ಕಣ್ಣಲ್ಲಿ ನೀರು ಹಾಕಿ, ನೋವು ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಬೊಮ್ಮಾಯಿಯವರ ಹೆಸರು ಸೂಚಿಸಿದ್ದಾರೆ ಎಂದು ಮಾಧ್ಯಮಗಳಿಂದ ಗೊತ್ತಾಗಿದೆ. ನಮಗೆ ಒಳ್ಳೆಯ ಆಡಳಿತ ಬೇಕು ಅಷ್ಟೇ ಎಂದ್ರು.

ಕೇಂದ್ರ ನಾಯಕರು ನನಗೆ ಸಂಪುಟ ರಚನೆಗೆ ಎರಡು ತಿಂಗಳು ಅವಕಾಶ ನೀಡಲಿಲ್ಲ ಎಂದು ಯಡಿಯೂರಪ್ಪನವರು ಹೇಳಿಕೊಂಡಿದ್ದಾರೆ. ಅನೇಕ ರೀತಿಯಲ್ಲಿ ತಮಗಾದ ನೋವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನೇಕರು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಚಂಡ ಹೋರಾಟ ಮಾಡಿದ್ದಾರೆ. ಕೆಲವು ಮಂತ್ರಿಗಳು ಸಿಎಂ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದರು, ಮತ್ತೆ ಕೆಲವರು ಪರೀಕ್ಷೆ ಬರೆದಿರುವುದಾಗಿ ತಿಳಿಸಿದರು. ಶಾಸಕರಿಂದಲೂ ಅವರಿಗೆ ವಿರೋಧ ವ್ಯಕ್ತವಾಗಿದೆ ಎಂದ್ರು.

ಸರ್ಕಾರದಲ್ಲಿ ಸಮನ್ವಯತೆ ಇರಲಿಲ್ಲ. ಹೀಗಾಗಿ ಎರಡು ವರ್ಷಗಳಲ್ಲಿ ರಾಜ್ಯ 20 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಏನೇನಾಗಿದೆ ಎಂದು ಬೇರೆ ಸಮಯದಲ್ಲಿ ಮಾತನಾಡೋಣ. ಬಿಜೆಪಿಯಲ್ಲಿ ಯಾರ ಕೈ ಮೇಲಾಯ್ತು ಎಂಬುದು ಆ ಪಕ್ಷದ ಆಂತರಿಕ ವಿಚಾರ. ಅದು ನಮಗೆ ಬೇಡ.ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡಲಿ, ರಾಜ್ಯಕ್ಕೆ ನ್ಯಾಯ ಒದಗಿಸಲಿ, ಅವರಿಗೆ ಶುಭವಾಗಲಿ ಎಂದ್ರು.