ನಾಳೆ ಅಂಬರೀಶ್ ಅಂತ್ಯ ಸಂಸ್ಕಾರ: ತವರಿನಲ್ಲಿ ಅಂತಿಮ‌ ದರ್ಶನ

ಬೆಂಗಳೂರು: ಅಗಲಿದ ಹಿರಿಯ ನಟ ಹಾಗೂ ರಾಜಕಾರಣಿ ಅಂಬರೀಶ್ ಅವರ ಪಾರ್ಥೀವ ಶರೀರವನ್ನು ರಾಜಧಾನಿ ಜನರು ವೀಕ್ಷಿಸಿ ಕಂಬನಿ ಮಿಡಿದ ನಂತರ ತವರು ಜಿಲ್ಲೆಗೆ ರವಾನಿಸಲಾಗಿದೆ ನಾಳೆ ಮತ್ತೆ ನಗರಕ್ಕೆ ಪಾರ್ಥೀವ ಶರೀರವನ್ನು ಮರಳಿ ಬೆಂಗಳೂರಿಗೆ ತರಲಿದ್ದು ಕಂಠೀರವ ಸ್ಟುಡಿಯೋದಲ್ಲಿ ಸಕಲ‌ ಸರಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.

ಜೆ.ಪಿ ನಿವಾಸದಿಂದ ಬೆಳಗ್ಗೆ 7.30 ಕ್ಕೆ ಕಂಠೀರವ ಕ್ರೀಡಾಂಗಣಕ್ಕೆ ಅಂಬರೀಶ್ ಪಾರ್ಥೀವ ಶರೀರವನ್ನು ತರಲಾಯಿತು.ಬೆಳಗ್ಗೆ 8 ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಂಬಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿ ನೆಚ್ಚಿನ ನಟನಿಗೆ ಅಂತಿಮ ನಮನ ಸಲ್ಲಿಸಿದರು.

ಡಾ.ರಾಜ್ ಕುಮಾರ್ ಕುಟುಂಬದಿಂದ ರಾಘವೇಂದ್ರ ರಾಜ್ ಕುಮಾರ್,ಶಿವರಾಜ್ ಕುಮಾರ್,ಪುನೀತ್ ರಾಜ್ ಕುಮಾರ್ ದಂಪತಿ, ರವಿಚಂದ್ರನ್, ಸುದೀಪ್,ಯಶ್,ರಮೇಶ್,ಪ್ರಕಾಶ್ ರಾಜ್ ಸೇರಿದಂತೆ ಕನ್ನಡ ಚಿತ್ರರಂಗದ ನಟ ನಟಿಯರು ಅಂಬರೀಶ್ ಅಂತಿಮ‌ದರ್ಶನ ಪಡೆದುಕೊಂಡರು.

ರಜನೀಕಾಂತ್, ಚಿರಂಜೀವಿ,ಸುಹಾಸಿನಿ ಸೇರಿದಂತೆ ಹಲವು ಬಹುಭಾಷಾ ತಾರೆಯರು ಕೂಡ ಅಂಬರೀಶ್ ಅಂತಿಮ‌ದರ್ಶನ ಪಡೆದುಕೊಂಡರು, ದರ್ಶನ್ ವಿದೇಶದಲ್ಲಿರುವ ಕಾರಣ ನಾಳೆ ಆಗಮಿಸಲಿದ್ದಾರೆ.

ಸಿಎಂ ಕುಮಾರಸ್ವಾಮಿ, ದೇವೇಗೌಡ ದಂಪತಿ,ಯಡಿಯೂರಪ್ಪ, ಸಿದ್ದರಾಮಯ್ಯ,ಪರಮೇಶ್ವರ್,ಡಿ.ಕೆ ಶಿವಕುಮಾರ್ ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯದ ರಾಜಕಾರಣಿಗಳು ಪಕ್ಷಬೇಧವಿಲ್ಲದೇ ಆಗಮಿಸಿ ಅಂತಿಮ‌ದರ್ಶನ ಪಡೆದರು.ಆದಿಚುಂಚನಗಿರಿ‌ ಶ್ರೀಗಳು,ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡ ಆಗಮಿಸಿದ್ದರು.

ಸಂಜೆ 4 ಗಂಟೆಗೆ ಪಾರ್ಥೀವ ಶರೀರವನ್ನು ಕಂಠೀರವ ಕ್ರೀಡಾಂಗಣದಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ರಕ್ಷಣಾ ಇಲಾಖೆಯ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಮಂಡ್ಯಕ್ಕೆ ಕೊಂಡೊಯ್ಯಲಾಗಿದ್ದು ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.

ರಾತ್ರಿಯಿಡೀ ಅಂತಿಮ‌ದರ್ಶನ ನಡೆಯಲಿದ್ದು ನಾಳೆ ಬೆಳಗದಗೆ ಬೆಂಗಳೂರಿನ ಎಚ್ಎಎಕ್ ವಿಮಾನ ನಿಲ್ದಾಣಕ್ಕೆ ಪಾರ್ಥೀವ ಶರೀರವನ್ನು ಮರಳಿ ತರಲಾಗುತ್ತದೆ, ಭವ್ಯ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ಸಾಗಿ ಸಕಲ‌ ಸರಕಾರಿ ಗೌರವದೊಂದಿಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.

ಮಂಡ್ಯದ ಗಂಡು ಅಂತಿಮ ದರ್ಶನಕ್ಕೆ ತವರಿನಲ್ಲೂ ವ್ಯವಸ್ಥೆ!

ಬೆಂಗಳೂರು: ಮಂಡ್ಯದಲ್ಲಿ ಅಂಬರೀಷ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ಅಭಿಮಾನಿಗಳು ಬೇಡಿಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಸಚಿವರೊಂದಿಗೆ ಮುಖ್ಯಮಂತ್ರಿಗಳು ಮಾತನಾಡಿ ಸೂಕ್ತ ಹೆಲಿಕಾಪ್ಟರ್ ಒದಗಿಸುವಂತೆ ಮನವಿ ಮಾಡಿದ್ದಾರೆ. ಅದರಂತೆ ರಕ್ಷಣಾ ಇಲಾಖೆಯವರು ಹೆಲಿಕಾಪ್ಟರ್ ಒದಗಿಸಲು ಸಮ್ಮತಿಸಿದ್ದಾರೆ.

ಇಂದು ಸಂಜೆ 4 ಗಂಟೆಗೆ ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಒಯ್ಯಲು ವ್ಯವಸ್ಥೆ ಮಾಡಲಾಗಿದ್ದು, ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜನತೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಳೆ ಬೆಳಿಗ್ಗೆ 6 ಗಂಟೆಗೆ ಅಂಬರೀಷ್ ಪಾರ್ಥಿವ ಶರೀರವನ್ನು ಮತ್ತೆ ಕಂಠೀರವ ಕ್ರೀಡಾಂಗಣಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ನಾಳೆ ಬೆಳಿಗ್ಗೆ 10 ಗಂಟೆಗೆ ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋ ವರೆಗೆ ಮೆರವಣಿಗೆಯಲ್ಲಿ ತೆರಳಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು.

ಮುಖ್ಯಮಂತ್ರಿಗಳು ಇಂದು ಬೆಳಿಗ್ಗೆಯಿಂದಲೇ ಕಂಠೀರವ ಕ್ರೀಡಾಂಗಣದಲ್ಲಿ ಹಾಜರಿದ್ದು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅಂಬರೀಷ್ ಪತ್ನಿ ಸುಮಲತಾ, ಉಪಮುಖ್ಯಮಂತ್ರಿ ಡಾ. ಪರಮೇಶ್ವರ, ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮತ್ತಿತರರೊಂದಿಗೆ ನಾಳೆ ಅಂತ್ಯಕ್ರಿಯೆಯ ಪೂರ್ವಸಿದ್ಧತೆ ಕುರಿತು ಚರ್ಚಿಸಿದರು.

ಅಂತ್ಯಕ್ರಿಯೆ ನಡೆಯಲಿರುವ ಕಂಠೀರವ ಸ್ಟುಡಿಯೋದಲ್ಲಿನ ವ್ಯವಸ್ಥೆ ಪರಿಶೀಲಿಸುವಂತೆ ಉಪಮುಖ್ಯಮಂತ್ರಿ ಯವರಿಗೆ ಮನವಿ ಮಾಡಿದ್ದು ಅದರಂತೆ ಅವರು ಕಂಠೀರವ ಸ್ಟುಡಿಯೋಗೆ ತೆರಳಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಕ್ರಿಯೆ!

ಬೆಂಗಳೂರು:ಮಾಜಿ ಸಚಿವ, ಹಿರಿಯ ಚಲನಚಿತ್ರ ನಟ ಅಂಬರೀಶ್ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸೋಮವಾರ (26-11-2018) ಕಂಠೀರವ ಸ್ಟುಡಿಯೋದಲ್ಲಿ ಜರುಗಲಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿ ಸ್ಮಾರಕದ ಬಳಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಭಾನುವಾರ (25-11-2018) ಇಡೀ ದಿನ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಇರಿಸಲಾಗುತ್ತಿದೆ. ಅಂತಿಮ‌ ದರ್ಶನಕ್ಕೆ ಆಗಮಿಸಲು ಮಂಡ್ಯ ಜಿಲ್ಲೆಯಿಂದ ವಿಶೇಷ ಸಾರಿಗೆ ಬಸ್ ವ್ಯವಸ್ಥೆಗೊಳಿಸಲಾಗಿದೆ.

ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ರೆಬಲ್ ಸ್ಟಾರ್ ನಡೆದು ಬಂದ ಹಾದಿ

ಬೆಂಗಳೂರು:ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಮಳವಳ್ಳಿ ಹುಚ್ಚೇಗೌಡ ಅಮರನಾಥ್ (ಅಂಬರೀಶ್) ಅವರು ಜನಿಸಿದ್ದು 29 ಮೇ 1952 ಮಂಡ್ಯ ಜಿಲ್ಲೆಯ ದೊಡ್ದರೆಸಿಕೆರೆಯಲ್ಲಿ. ತಂದೆ ಹುಚ್ಚೇಗೌಡ ತಾಯಿ ಪದ್ಮಮ್ಮ. ಬಾಲ್ಯ ವಿದ್ಯಾಬ್ಯಾಸ ಮುಗಿಸಿದ್ದು ಮಂಡ್ಯದಲ್ಲಿ. ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದುಕೊಂಡಿದ್ದರು. ಅಂಬರೀಶ್ ಅವರು 1991 ರಲ್ಲಿ ಕನ್ನಡದ ಖ್ಯಾತ ನಟಿ ಸುಮಲತಾ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದರು.

1972 ರಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಅವರು ಖಳ ನಾಯಕನ ಪಾತ್ರ ನಿರ್ವಹಿಸಿದ್ದರು.

ಅಂತ, ಪಡುವಾರಳ್ಳಿ ಪಾಂಡವರು, ಮಸಣದ ಹೂವು, ಶುಭಮಂಗಳ, ರಂಗನಾಯಕಿ ಹೀಗೆ ಪ್ರಸಿದ್ದ ಕನ್ನಡ ಚಿತ್ರಗಳಲ್ಲಿ ನಾಯಕನ ಪಾತ್ರದಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಅಂಬರೀಷ್​, ಕನ್ನಡ ಚಿತ್ರ ರಂಗದ ರೆಬೆಲ್ ಸ್ಟಾರ್. ಮಂಡ್ಯದ ಗಂಡು, ಕಲಿಯುಗದ ಕರ್ಣ ಇವರಿಗಿರುವ ಬಿರುದುಗಳು.

ಕನ್ನಡ ಸಿನಿಮಾರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸಾಧನೆ ಮಾಡಿರುವ ಅಂಬರೀಶ್ ಅವರಿಗೆ 2013 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಅಂಬರೀಶ್ ಅವರ ರಾಜಕೀಯ ಕ್ಷೇತ್ರ

ಕನ್ನಡ ಚಿತ್ರರಂಗದಲ್ಲಿ ಹಲವು ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ರೆಬೆಲ್ ಸ್ಟಾರ್ ಅಂಬರೀಶ್, ಜನತಾದಳದ ಮೂಲಕ ರಾಜಕೀಯ ಪ್ರವೇಶಿಸಿದ್ದರು. ನಂತರ ಅವರು ರಾಜಕೀಯ ಜೀವನ ಕಂಡುಕೊಂಡಿದ್ದು ಕಾಂಗ್ರೆಸ್ ಪಕ್ಷದಲ್ಲಿ. ಶಾಸಕ, ಸಂಸದ, ರಾಜ್ಯ, ಕೇಂದ್ರ ಸಚಿವರಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಢಾಳಾಗಿ ಹೊಂದಿರುವ ಅವರಿಗೆ ಅಸಂಖ್ಯ ಅಭಿಮಾನಿ ಬಳಗವಿದೆ. ಅಭಿಷೇಕ್​ ಅಂಬರೀಷ್​ ಅವರ ಏಕೈಕ ಪುತ್ರ.

1998-99: 12ನೇ ಲೋಕಸಭಾ ಸದಸ್ಯರು.
1999-04: 13ನೇ ಲೋಕಸಭಾ ಸದಸ್ಯರು.
2004-09: 14ನೇ ಲೋಕಸಭಾ ಸದಸ್ಯರು.
2006-08: ಕರ್ನಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು.
2008 ರಲ್ಲಿ ಕಾವೇರಿ ನೀರಿನ ವಿವಾದದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
2012: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು.
2013 ರ ಚುನಾವಣೆಯಲ್ಲಿ ಗೆದ್ದು ಕರ್ನಾಟಕ ರಾಜ್ಯ ವಸತಿ ಸಚಿವರು.

ಇವರಿಗೆ ಲಭಿಸಿದ ಪ್ರಶಸ್ತಿಗಳು

ಕರ್ನಾಟಕ ರಾಜ್ಯ ಪ್ರಶಸ್ತಿ – ಅತ್ಯುತ್ತಮ ನಟ – 1982.
‘ಕರ್ನಾಟಕ ರಾಜ್ಯ ಪ್ರಶಸ್ತಿ – ಅತ್ಯುತ್ತಮ ಸಹಾಯ ನಟ – ಮಸಣದ ಹೂವು(1985-86)
ಫಿಲ್ಮ್ ಫೇರ್ ಪ್ರಶಸ್ತಿ – ಅತ್ಯುತ್ತಮ ನಟ – ಒಲವಿನ ಉಡುಗೊರೆ.
ಎನ್.ಟಿ.ಆರ್ ನ್ಯಾಷನಲ್ ಪ್ರಶಸ್ತಿ – 2005.
ಜೀವಮಾನ ಫಿಲ್ಮ್ ಫೇರ್ ಪ್ರಶಸ್ತಿ – 2009.
‘ನಂದಿ ಪ್ರಶಸ್ತಿ( ಆಂಧ್ರಸರ್ಕಾರ) – 2009.
ವಿಷ್ಣುವರ್ಧನ್ ಪ್ರಶಸ್ತಿ (ಕರ್ನಾಟಕ ಸರ್ಕಾರ) – 2011.
ಗೌರವ ಡಾಕ್ಟರೇಟ್ (ಕರ್ನಾಟಕ ವಿವಿ) – 2013.

ಅಂಬಿ ನಿಧನ: ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ

ಬೆಂಗಳೂರು:ಇಹಲೋಕ ತ್ಯಜಿಸಿರುವ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಕಾಲ ಶೋಕಾಚರಣೆಯನ್ನು‌ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ವಿಕ್ರಂ ಆಸ್ಪತ್ರೆಯಲ್ಲಿ ಸುಧೀರ್ಘ ಸಮಯ ಇದ್ದು ಅಂಬರೀಶ್ ನಿಧನದ ನಂತರದ ಬೆಳವಣಿಗೆಗಳನ್ನು ಖುದ್ದು ಪರಿಶೀಲಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಂತರ ಸುದ್ದಿಗಾರರೊಂದಿಗೆ ಮಾಡನಾಡಿದರು.

ನಾಳೆ ಬೆಳಗ್ಗೆ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ‌ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗುವುದು. ಅಂಬರೀಶ್ ಅವರ ಸ್ಮರ್ಣಾರ್ಥ ಸ್ಮರಕವನ್ನು ನಿರ್ಮಿಸಬೇಕಿರುವುದರಿಂದ ಬೆಂಗಳೂರಿನಲ್ಲೆ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇಂದಿನಿಂದ ಮೂರು ದಿನ ಕಾಲ ರಾಜ್ಯದಲ್ಲಿ ಶೋಕಾಚರಣೆ ಆಚರಿಸಲಾಗುವುದು ಎಂದು ಹೇಳಿದರು.

ಅಂಬರೀಶ್ ಅವರು ನನಗೆ ಆತ್ಮೀಯರಾಗಿದ್ದರು.‌ ಚಿತ್ರರಂಗದ ಉತ್ತಮ‌ಕಲಾವಿದ ಇಂದು ನಿಧನರಾಗಿದ್ದಾರೆ. ಅನೇಕ ಬಾರಿ‌ ಕ್ಲಿಷ್ಠ ಸಂದರ್ಭದಲ್ಲಿ ಜೀವ ಉಳಿಸಿಕೊಂಡಿದ್ದರು. ಆದರೆ ಇಂದು ಅವರು ಸಾವನ್ನು ಜಯಿಸಲಾಗಿಲ್ಲ. ಅಂಬರೀಶ್ ವಿಷಯದಲ್ಲಿ ನಮಗೆ ದೇವರ ಕರುಣೆ ಇಲ್ಲವಾಗಿದೆ ಎಂದು ಶೋಕ ವ್ಯಕ್ತ ಪಡಿಸಿದರು.

ಭಾನುವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ‌ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳದೆ, ಶಾಂತಿಯುತವಾಗಿರಬೇಕು. ಅಂಬರೀಶ್ ಅಂಯ್ಯಕ್ರಿಯೆಗೆ ತಾಳ್ಮೆಯಿಂದ ಸಹಕರಿಸಿ.‌ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಕುಟುಂಬದ ಕ್ರಿಯಾವಿಧಿಗಳು ಪೂರ್ಣಗೊಂಡ ನಂತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.
ಮಂಡ್ಯಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಿ ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂಬುದು ಅಂಬರೀಶ್ ಅವರ ಪುತ್ರ ಅಭಿಷೇಕ ಅವರ ಆಸೆ. ಆದರೆ ಬೆಂಗಳೂರಿನಿಂದ ಮಂಡ್ಯಕ್ಕೆ ತೆಗೆದುಕೊಂಡು ಹೋಗಿ ಮತ್ತೆ ವಾಪಾಸ್ ತರುವುದು ಕಷ್ಟವಾಗುವುದೆ. ಅಭಿಷೇಕ್ ನನ್ನ ಮಗನ ಸಮಾನ ಆತನ ಆಸೆ ನನಗೆ ಅರ್ಥವಾಗುತ್ತದೆ. ಆದರೆ ವಾಸ್ತವವಾಗಿ ಆ ರೀತಿ ಮಾಡುವುದು ಕಷ್ಟವಾಗಲಿದೆ. ಮಂಡ್ಯದ ಜನ ಬೆಂಗಳೂರಿಗೆ ಬಂದು ಅಂತಿಮ ದರ್ಶನ ಪಡೆಯಲು ಮಂಡ್ಯ, ಮೈಸೂರು ಭಾಗದ ಜನರಿಗೆ ಕೆಎಸ್ ಆರ್ ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಮಂಡ್ಯದ ಗಂಡು ಇನ್ನಿಲ್ಲ,ಜೀವನ ಯಾತ್ರೆ ಮುಗಿಸಿದ ಜಲೀಲ!

ಬೆಂಗಳೂರು: ಆರೋಗ್ಯ ದಿಡೀರ್ ಕುಸಿತಗೊಂಡು ಚಿತ್ರರಂಗದ ಹಿರಿಯ ನಟ, ಮಾಜಿ‌ಸಚಿವ ಅಂಬರೀಶ್ (66) ಅಕಾಲಿಕ ನಿಧನಕ್ಕಿಡಾಗಿದ್ದಾರೆ.

ಸಂಜೆ ಮನೆಯಲ್ಲಿ ಕುಸಿದು ಬಿದ್ದ ಅಂಬರೀಶ್ ರನ್ನು ಕುಟುಂಬದ ಸದಸ್ಯರು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗಾಗಲೇ ಉಸುರಾಟದ ಸಮಸ್ಯೆ ಮತ್ತು ಕಿಡ್ನಿ‌ ತೊಂದರೆಯಿಂದ ಬಳಲುತ್ತಿದ್ದ ಅಂಬರೀಶ್ ಅವರಿಗೆ ವಿಕ್ರಂ ಆಸ್ಪತ್ರೆಯ ಡಾ.ಸತೀಶ್ ಅವರ ತಂಡ ಚಿಕಿತ್ಸೆ ನೀಡಲು ಸತತ ಪ್ರಯತ್ನ‌ ನಡೆಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಂಬರೀಶ್ ರಾತ್ರಿ 9.30ರ ಸುಮಾರಿಗೆ ಹೃದಯಘಾತದಿಂದ ನಿಧನರಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಕೆ.ಜೆ.ಜಾರ್ಜ್, ಮಂಡ್ಯದ ಸಂಸದ ಎಲ್‌. ಆರ್.ಶಿವರಾಮೇಗೌಡ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಮುನಿರತ್ನ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದ್ದರು.‌ನಗರ ಪೊಲೀಸ್ ಆಯುಕ್ತರಾದ ಸಿನೀಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಬಿಗಿ ಬಂದೋಬಸ್ತ್ ಕೈಗೊಂಡರು.

ಇಂದು ಮಂಡ್ಯ ಬಳಿ ಖಾಸಗಿ ಬಸ್ ನಾಲೆಗೆ ಉರುಳಿ ಬಿದ್ದು 28ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆಯ ಬಗ್ಗೆ ಅಂಬರೀಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿ ತಮ್ಮ ದುಖಃ ತೋಡಿಕೊಂಡಿದ್ದರು.

ಅಂಬರೀಶ್ ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯಾಗಿದ್ದರು.‌ ಕಳೆದ ನಾಲ್ಕು ವರ್ಷಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಗಂಭೀರ ಸ್ಥಿತಿ ತಲುಪಿದ್ದ ಅಂಬರೀಶ್ ಅವರ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್ ಕಳೆದ ವಿಧಾನ ಸಭೆ ಚುನಾವಣೆಯಿಂದ ರಾಜಕೀಯವಾಗಿ ತಟಸ್ಥವಾಗಿ ಉಳಿದಿದ್ದರು. ಇತ್ತೀಚೆಗೆ ಅಂಬಿ ನಿಂಗೆ ವಯಸ್ಸಾತೋ ಚಿತ್ರದಲ್ಲೂ ನಟಿಸಿದ್ದರು. ಅದೇ ಅವರ ಕೊನೆಯ ಚಿತ್ರವಾದಂತಾಗಿದೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಮೂಲಕ ವಿಷ್ಣುವರ್ಧನ್ ಮತ್ತು‌ ಅಂಬರೀಶ್ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಜಲೀಲನಾಗಿ ಪರಿಚಿತರಾಗಿ ನೂರಾರು ಚಿತ್ರದಲ್ಲಿ ನಟಿಸಿದ್ದರು.

ರಾಜಕೀಯ ಪ್ರವೇಶಿಸಿ ಶಾಸಕರಾಗಿ‌ ಸಂಸರಾಗಿ, ಕೇಂದ್ರ ಸಚಿವರಾಗಿ, ರಾಜ್ಯ ಸರ್ಕಾರದ ಸಚಿವರಾಗಿ ಕೆಲಸ ಮಾಡಿದ್ದ ಅವರು ಎಂದಿಗೂ ಖುರ್ಚಿಗೆ ಅಂಟಿಕೊಂಡವರಲ್ಲ. ಕಾವೇರಿ ವಿವಾದ ಹೆಚ್ಚಾದ ಸಂದರ್ಭದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದರು.‌ ಸಿದ್ದರಾಮಯ್ಯ ಅವರು ಸಂಪುಟ ಪುನರ್ರಚನೆ ವೇಳೆ ಸಚಿವ ಸ್ಥಾನದಿಂದ ಕೈಬಿಟ್ಟಾಗಲೂ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಸಿದ್ದರಾಮಯ್ಯ ಅವರನ್ನು ಮನೆಗೆ ಊಟಕ್ಕೆ ಕರೆದು ಔತಣ ನೀಡಿ ಸ್ನೇಹಪರತೆ ಮೇರೆದಿದ್ದರು. ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಒತ್ತಡ ಇದ್ದರೂ ತಮ್ಮಷ್ಟಕ್ಕೆ ತಾವೇ ಹಿಂದೆ ಸರಿದಿದ್ದರು.
ಚಿತ್ರರಂಗದ ಕೊಡುಗೈ ಕರ್ಣ, ನೇರ ಮಾತಿನ ಅಂಬಿಯಣ್ಣ ಇನ್ನಿಲ್ಲವಾಗಿದ್ದಾರೆ.

ಚಿತ್ರರಂಗದ ಯಜಮಾನರಾಗಿದ್ದ ಅಂಬರೀಶ್ ಯಾವುದೇ ಸಮಸ್ಯೆ ಎದುರಾದರು ಮಧ್ಯ ಪ್ರವೇಶಿಸಿ ಬಗೆ ಹರಿಸುತ್ತಿದ್ದರು. ಇತ್ತಿಚೆಗೆ ಬಹುಭಾಷ ನಟ ಅರ್ಜುನ್ ಸರ್ಜಾರ ವಿರುದ್ಧ ನಟಿ ಶೃತಿ ಹರಿಹರನ್ ಮೀ ಟೂ ಆರೋಪ ಮಾಡಿದಾಗ ವಿವಾದವನ್ನು ಸೌಹಾರ್ದಯುತವಾಗಿ ಬಗೆ ಹರಿಸಲು ಅಂಬರೀಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು ಸಮಾಲೋಚನೆಯಲ್ಲಿ ಭಾಗವಹಿಸಿದ್ದರು.

ಅಂಬರೀಶ್ ನಿಧನದ ಸುದ್ದಿ ಕಾಡ್ಚಿನಂತೆ ಹರಡಿ ಅಭಿಮಾನಿಗಳು ವಿಕ್ರಮ್ ಆಸ್ಪತ್ರೆಯೆದುರು ರಾತ್ರೋರಾತ್ರಿ ಜಮಾಯಿಸಿದರು. ಅಭಿಮಾನಿಗಳ ಆಕ್ರಂದನ‌ ಮುಗಿಲು ಮುಟ್ಟಿತ್ತು.