ನಾಲೆಗೆ ಬಿದ್ದ ಖಾಸಗಿ ಬಸ್: 25 ಪ್ರಯಾಣಿಕರ ಸಾವು!

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ,ಜಲರೂಪದಲ್ಲಿ ಬಂದ ಯಮಪಾಶಕ್ಕೆ ಸಿಲುಕಿದ ಖಾಸಗಿ‌ ಬಸ್ ನಲ್ಲಿದ್ದ 25 ಪ್ರಯಾಣಿಕರು ಪರಲೋಕಕ್ಕೆ ತೆರಳಿದ್ದಾರೆ.

ನಾಲೆಗೆ ಖಾಸಗಿ‌ ಬಸ್ ಉರುಳಿದ ಪರಿಣಾಮ 25 ಜನರ ದುರ್ಮರಣವನ್ನಪ್ಪಿರುವ ಧಾರುಣ ಘಟನೆ ಇಂದು ನಡೆದಿದೆ. ಮಂಡ್ಯ‌ ಜಿಲ್ಲೆ ಪಾಂಡವಪುರ ತಾಲೂಕಿನ ‌ಕನಗನಮರಡಿ ಬಳಿಯ ವಿಸಿ ನಾಲೆಯಲ್ಲಿ ಘಟನೆ ನಡೆದಿದ್ದು, ಚಾಲಕನ ನಿರ್ಲಕ್ಷ್ಯದಿಂದ ಖಾಸಗಿ ಬಸ್ ನಾಲೆಗೆ ಉರುಳಿದೆ ಎಂದು ಶಂಕಿಸಲಾಗಿದೆ. ನಾಲೆಗೆ ಬಿದ್ದ ಬಸ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ ಪರಿಣಾಮ ಉಸಿರುಗಟ್ಟಿ ೨೫ ಪ್ರಯಾಣಿಕರು ಮೃತಪಟ್ಟಿದ್ದು ಘಟನೆಯಲ್ಲಿ ಇನ್ನು‌ ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ ಇದೆ ಎನ್ನಲಾಗಿದೆ.

ಶವಗಳನ್ನು ಮಂಡ್ಯ ಮಿಮ್ಸ್ ಆಸ್ಪತಗೆ ರವಾನೆ ಮಾಡಲಾಗಿದ್ದು,ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರೈತರ ಹಿತ ಕಾಪಾಡಲು ಸರ್ಕಾರ ಬದ್ದ: ಡಿಕೆಶಿ

ಬೆಳಗಾವಿ: ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆ ಹರಿಸಲು ಸರಕಾರ ಬದ್ದವಾಗಿದೆ. ಸಕ್ಕರೆ ಕಾರ್ಖಾನೆ ಯಾರದ್ದೆ ಇದ್ದರು ಅವರಿಂದ ಬಾಕಿ ಉಳಿಸಿಕೊಂಡ ಹಣವನ್ನು ಜಿಲ್ಲಾಧಿಕಾರಿ ಕೊಡಿಸಬೇಕೆಂದು ಸರಕಾರ ಸೂಚಿಸಲಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಬ್ಬಿಗೆ ಬಾಕಿ‌ ಹಣ ನೀಡುವಂತೆ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.
ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಯಾವುದೇ ಕಾರಣಕ್ಕೂ ಸುವರ್ಣ ವಿಧಾನಸೌಧ ಒಳಗಡೆ ಧರಣಿ ಮಾಡುವುದು ಸರಿಯಲ್ಲ ಎಂದರು.
ಸಕ್ಕರೆ ಕಾರ್ಖಾನೆಯ ಮಾಲೀಕರು ಯಾರೇ ಇದ್ದರು.‌ಅವರಿಂದ ಬಾಕಿ ಹಣ ಕೊಡಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ನಾವು ರೈತ ಮಕ್ಕಳು, ಅಧಿಕಾರಿಗಳು ರೈತ ಮಕ್ಕಳು ಸಿಎಂ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ ಈ ಧರಣಿಯನ್ನು ಕೈ ಬಿಡುವಂತೆ ವಿನಂತಿಸಿಕೊಂಡರು.

ವಿದ್ಯುತ್ ಹಾಗೂ ನೀರಿನ ಬಗ್ಗೆ ಸರಕಾರ ಅಧ್ಯಯನ ಮಾಡುತ್ತಿದ್ದಾರೆ. ಈ ಉದ್ದೇಶದಿಂದ ನಾನು ಬೆಳಗಾವಿಗೆ ಬಂದಿದ್ದೇ‌ನೆ. ನ._೧೫ರಿಂದ ರೈತರು ಧರಣಿ ನಡೆಸಿದ್ದಿರಿ. ಈ ಕುರಿತು ಸಿಎಂ ಕುಮಾರಸ್ವಾಮಿ ಸಭೆ ನಡೆಸಿದ್ದಾರೆ. ನಿಮಗೆ ನ್ಯಾಯ ವದಗಿಸಿಕೊಡುವಲ್ಲಿ ಸರಕಾರ‌ ಬದ್ದವಾಗಿದೆ ಎಂದರು.

ಇದಕ್ಕೂ ಮುನ್ನ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೊದಗಿ ಮಾತನಾಡಿ, ಸಿಎಂ ಬೆಂಗಳೂರಿನಲ್ಲಿ ನಡೆಸಿದ ಸಭೆಗೆ ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಅವರು ಯಾವುದೇ ಮಾಹಿತಿ ನೀಡಿಲ್ಲ. ಎರಡು ವಾರದ ಹಿಂದೆ ಜಿಲ್ಲಾಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸಿಲ್ಲ. ಪ್ರತಿಭಟನೆ ನಡೆಸಿದ ರೈತರ ಬಗ್ಗೆ ಡಿಸಿಗೆ ಕಳಕಳಿ ಇಲ್ಲ. ಇವತ್ತು ಬೆಳಗ್ಗೆ ಪೊಲೀಸ್ ಬಂದೋಬಸ್ತ ನೊಂದಿಗೆ ಕಚೇರಿಗೆ ಆಗಮಿಸುತ್ತಾರೆ. ಜಿಲ್ಲಾ ಉಸ್ತುವಾರಿ‌ ಸಚಿವ ರಮೇಶ ಜಾರಕಿಹೊಳಿ ನೇತೃತ್ವದ ಸೌಭಾಗ್ಯ ಸಕ್ಕರೆ ಕಾರ್ಖಾನೆ ನಾಲ್ಕು ವರ್ಷದಿಂದ ಕಬ್ಬಿನ ಬಾಕಿ ನೀಡಿಲ್ಲ. ಡಿಸಿ ಯಾವುದೇ ಬಾಕಿ ಇಲ್ಲ ಎಂದು ಹೇಳುತ್ತಾರೆ. ಇವರಿಗೆ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.

ಸರಕಾರ ಕೊಟ್ಟ ಯೋಜನೆ ವಿಫಲವಾಗಲು ಬೆಳಗಾವಿ ಜಿಲ್ಲಾಡಳಿತ. ಸಕ್ಕರೆ ಕಾರ್ಖಾನೆಯ ಕಪಿಮುಷ್ಟಿಯಲ್ಲಿರುವ ಸರಕಾರ ಹೋರಾಟ ಮಾಡಿದ ರೈತರಿಗೆ ಗೂಂಡಾ ಎಂದಿತ್ತು. ಎಕ್ಸ್ ಪಿಲ್ಡ್ ದರ, ಜಿಲ್ಲಾಡಳಿತದ ವ್ಯವಸ್ಥೆ ಬದಲಾಯಿಸಬೇಕು ಹಾಗೂ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಸಚಿವ ಡಿ.ಕೆ.ಶಿವಕುಮಾರ ಮಾತಿಗೆ ಸಮ್ಮತಿ ಸೂಚಿಸಿದ ರೈತರು ಧರಣಿಯನ್ನು ಹಿಂಪಡೆದರು.

ಹೊರ ವರ್ತುಲ ರಸ್ತೆ ನಿರ್ಮಾಣ ಭೂಸ್ವಾಧೀನಕ್ಕೆ 4500 ಕೋಟಿ: ಕೃಷ್ಣ ಬೈರೇಗೌಡ

ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಹೊರ ವರ್ತುಲ ರಸ್ತೆ ನಿರ್ಮಾಣ ಮಾಡಲು ನಿರ್ಧರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸಚಿವ ಸಂಪುಟ ಸಭೆಯ ನಂತರ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಹಾಗೂ ಹೊಸೂರು ರಸ್ತೆ ಗಳನ್ನು ಸಂಪರ್ಕಿಸುವ 65 ಕಿ.ಮೀ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಈ ಹಿಂದೆಯೇ 1810 ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿತ್ತು. ಈ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು 4500 ಕೋಟಿ. ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಮಾಹಿತಿ ನೀಡಿದರು.

ಸಚಿವ ಸಂಪುಟ ಸಭೆಯ ಇತರ ನಿರ್ಧಾರಗಳು

• ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ 30 ಕೆರೆಗಳಿಗೆ ಕೆ.ಆರ್.ಪುರಂ ಎಸ್‍ಟಿಪಿ ಯಿಂದ ಸಂಸ್ಕರಿಸಿ ತ್ಯಾಜ್ಯ ನೀರನ್ನು ತುಂಬಿಸುವ ಏತ ನೀರಾವರಿ ಯೋಜನೆಗೆ 100 ಕೋಟಿ ರೂ.ಗಳನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

• ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಲು ರೂ. 58 ಕೋಟಿ ಗಳನ್ನು ಒದಗಿಸಲು ಹಾಗೂ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ 16 ಕೋಟಿ ಒದಗಿಸಲು ಅನುಮೋದನೆ ನೀಡಲಾಗಿದೆ.

• ರಾಯಚೂರಿನಲ್ಲಿ ಇಂಡಿಯನ್ ಇನ್ಸ್‍ಟ್ಯೂಟ್ ಆಫ್ ಇನ್‍ಫರ್‍ಮೇಷನ್ ಟೆಕ್ನಾಲಜಿ (IIIT) ಸ್ಥಾಪನೆಗೆ ಅನುಮೋದನೆ ನೀಡಲಾಗಿತ್ತು. ಇದಕ್ಕೆ 65 ಎಕರೆ ಭೂಮಿಯನ್ನು ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

• ಕಂದಾಯ ಇಲಾಖೆಯ ಸೇವೆಗಳಲ್ಲಿ ಪಹಣಿ ಪಡೆಯಲು ರೂ. 10 ನಿಗಧಿಪಡಿಸಲಾಗಿತ್ತು. ಇದನ್ನು 15 ರೂ. ಗಳಿಗೆ ಹೆಚ್ಚಿಸಲು ಹಾಗೂ ಇತರೆ ಸೇವೆಗಳಿಗೆ ನಿಗಧಿಪಡಿಸಲಾಗಿದ್ದ 15 ರೂ. ಗಳ ಸೇವೆಯನ್ನು 25 ರೂ. ಗಳಿಗೆ ಹೆಚ್ಚಿಸಲು ಇಂದಿನ ಸಚಿವ ಸಂಪುಟ ಸಭೆ ನಿರ್ಧರಿಸಿದೆ ಹಾಗೂ ಅಂಚೆ ಮೂಲಕ ಈ ಸೇವೆಗಳನ್ನು ವಿಸ್ತರಿಸಲು ಸಹ ನಿರ್ಧರಿಸಲಾಗಿದೆ.

• ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 1150 ಹಾಸಿಗೆಗಳ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ 45 ಕೋಟಿ ರೂ. ವೆಚ್ಚವಾಗುತ್ತದೆ. ಇದರಲ್ಲಿ 22.50 ಕೋಟಿಯನ್ನು ರಾಜ್ಯ ಸರ್ಕಾರದಿಂದ ಒದಗಿಸಲು ಹಾಗೂ 22.50 ಕೋಟಿ ರೂ. ಗಳನ್ನು ಜಯದೇವ ಆಸ್ಪತ್ರೆ ಭರಿಸಲು ಉದ್ದೇಶಿಸಿದ್ದು, ಈ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

• ರಾಯಚೂರಿನಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (RIMS) ಆವರಣದಲ್ಲಿ 300 ಹಾಸಿಗೆಗಳ ಸಾಮಥ್ರ್ಯದ ಹೊಸ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲು 32 ಕೋಟಿ ರೂ. ಗಳ ಅಂದಾಜು ಪಟ್ಟಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

• ಪಿಪಿಪಿ ಮಾದರಿಯಲ್ಲಿ ರಾಜ್ಯದ 114 ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಕಲ್ಪಿಸಲಾಗಿದೆ ಇದಲ್ಲದೇ ಇನ್ನೂ 57 ಕಡೆ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಹಾಗೂ ಅವುಗಳ ಖರ್ಚು ಭರಿಸಲು 54.50 ಕೋಟಿ ರೂ. ಗಳನ್ನು ಒದಗಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

• ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಮತ್ತು ನಂತರದ ವೈದ್ಯೋಪಚಾರ ಬಹಳ ದುಬಾರಿ ಆಗಿರುವುದರಿಂದ ಬಡವರಿಗೆ ತೊಂದರೆ ಆಗುತ್ತಿತ್ತು. ಆದ್ದರಿಂದ ಜೀವ ಸಾರ್ಥಕತೆಯಲ್ಲಿ ನೊಂದಾಯಿಸಿಕೊಂಡ (ಸುವರ್ಣ ಆರೋಗ್ಯ ಟ್ರಸ್ಟ್ ಯೋಜನೆಯಡಿ ಆಯ್ಕೆಯಾದ ಬಡರೋಗಿಗಳಿಗೆ ಸರ್ಕಾರ ನಿಗದಿಪಡಿಸಿದ ದರಗಳಲ್ಲಿ) ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು 30 ಕೋಟಿ ರೂ. ಗಳನ್ನು ಬಳಕೆ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

• ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು ಮಾರ್ಪಡಿಸಿ, ಹೊಸ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಲ್ಲಿ ಈವರೆಗೆ ನೆಲಮಹಡಿ ಜೊತೆಗೆ ಮೂರು ಮೇಲ್ಮಹಡಿ ಗಳಿಗೆ ಅನುಮೋದನೆ ನೀಡಲಾಗಿತ್ತು. ಇದನ್ನು ಪರಿಷ್ಕರಿಸಿ ನೆಲಮಹಡಿ ಜೊತೆಗೆ ಹದಿನಾಲ್ಕು ಮೇಲ್ಮಹಡಿ ಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಡಿ ವಸತಿ ಹಂಚಿಕೆಯಾಗುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ 1.5 ಲಕ್ಷ ರೂ. ಆರ್ಥಿಕ ನೆರವನ್ನು ಒದಗಿಸಿದರೆ ರಾಜ್ಯ ಸರ್ಕಾರ ಸಾಮಾನ್ಯ ವರ್ಗದವರಿಗೆ 1.2 ಲಕ್ಷ ಹಾಗೂ ಪರಿಶಿಷ್ಟ ಜಾತಿ ವರ್ಗಗಳಿಗೆ 2 ಲಕ್ಷ ನೆರವನ್ನು ಒದಗಿಸುತ್ತದೆ.

• ರಾಮನಗರ ಜಿಲ್ಲೆ ಬೈರಮಂಗಲ ಜಲಾಶಯಕ್ಕೆ ವೃಷಭಾವತಿಯಿಂದ ನೀರು ಹರಿಸಲು ಕಾಲುವೆ ನಿರ್ಮಾಣಕ್ಕೆ 110 ಕೋಟಿ ರೂ.ಗಳ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

• ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಕಲುಷಿತ ನೀರು ಸೇರದಂತೆ ತಡೆಯಲು ಒಳಹರಿವು ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ 285 ಕೋಟಿ 95 ಲಕ್ಷ ರೂ. ಗಳನ್ನು ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

• ಬಾಲ್ಕಿಯಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ 13 ಕೋಟಿ 20 ಲಕ್ಷ ಹಾಗೂ ಪುತ್ತೂರಿನಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ.ಗಳ ಕಾಮಗಾರಿಗೆ ಒಪ್ಪಿಗೆ ನೀಡಿದೆ.

• ರಾಮನಗರ, ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರ ವ್ಯಾಪ್ತಿಗೆ ಬರುವ ಹಳ್ಳಿಗೆ ಕಾವೇರಿ ನದಿಯಿಂದ ನೀರು ಸರಬರಾಜು ಮಾಡಲು ಸತ್ಯಗಾಲದಿಂದ ಇಗ್ಗಲೂರು ಬಳಿ ಇರುವ ಹೆಚ್.ಡಿ. ದೇವೇಗೌಡ ಬ್ಯಾರೇಜ್‍ಗೆ ನೀರು ಹರಿಸುವ ಯೋಜನೆಯ ಕಾಮಗಾರಿಗೆ 540 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

• ಸ್ಮಾರ್ಟ್ ಪೊಲೀಸಿಂಗ್ ಯೋಜನೆಯಡಿ ಸೈಬರ್ ಫೋರೆನಿಕ್ಸ್ ಘಟಕಗಳಿಗೆ ಹಾಗೂ ಟ್ರಾಫಿಕ್ ಪೊಲೀಸರು ಬಳಸುವ ಆಧುನಿಕ ಉಪಕರಣಗಳನ್ನು ಕೊಳ್ಳಲು 32 ಕೋಟಿ 82 ಲಕ್ಷ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

• ಸರ್ಕಾರಿ ರಜಾ ದಿನಗಳ ಪಟ್ಟಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

• ಲೋಕಾಯುಕ್ತರ ಮೇಲೆ ಸ್ವತಃ ತನಿಖೆ ನಡೆಸುವ ಸಂದರ್ಭ ಒದಗಿ ಬಂದರೆ ಅದರ ಜವಬ್ದಾರಿಯನ್ನು ಉಪಲೋಕಾಯುಕ್ತರಿಗೆ ವಹಿಸಲು ಅಗತ್ಯ ಕಾನೂನು ತಿದ್ದುಪಡಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

• ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಇದುವರೆವಿಗೂ ಅನುಸರಿಸುತ್ತಿದ್ದ ನೇಮಕಾತಿ ನಿಯಮಗಳನ್ನೇ ಮುಂದುವರೆಸಲು ಅಗತ್ಯ ಕಾನೂನು ರೂಪಿಸಲು ಇಂದಿನ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಮ್ಯೂಸಿಕ್ ಫಾರ್ ಎ ಬ್ರೈಟರ್ ಉಷಾ’’ ಸಂಗೀತ ಆಲ್ಬಂ ಬಿಡುಗಡೆ ಮಾಡಿದ ಪವರ್‍ಸ್ಟಾರ್ ಪುನೀತ್,ಅನಿಲ್‌ಕುಂಬ್ಳೆ

ಬೆಂಗಳೂರು: ಉದಯೋನ್ಮುಖ ಗಾಯಕ ಮತ್ತು ಸಂಗೀತ ನಿರ್ದೇಶಕ ಆಶಿಶ್ ಲಕ್ಕಿ ದುಬೆ ಅವರ “ಆಶಿಶ್-ಮ್ಯೂಸಿಕ್ ಫಾರ್ ಎ ಬ್ರೈಟರ್ ಉಷಾ’’ ಎಂಬ ವಿನೂತನವಾದ ಆಲ್ಬಂ ನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ತನ್ನ ಇಲಾಖೆಯ ಆಲ್ಬಂ ಆಗಿ ಅಳವಡಿಸಿಕೊಂಡಿದೆ. ಈ ಗೀತೆಗೆ ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರು ಸಂಗೀತ ನೀಡಿದ್ದಾರೆ.ಈ ಗೀತೆಯ ವೈಶಿಷ್ಟ್ಯತೆ ಮತ್ತು ಸೌಂದರ್ಯವೆಂದರೆ ಮಕ್ಕಳು ಕೇಂದ್ರಬಿಂದುವಾಗಿದ್ದಾರೆ.

ಆಶಿಶ್ ದುಬೆ ಮತ್ತು ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರು ನಿರ್ಮಿಸಿರುವ ಐದು ಹಾಡುಗಳಿದ್ದು, ಇದರಲ್ಲಿ ಎರಡು ಕನ್ನಡ ಗೀತೆಗಳಿವೆ. ಮತ್ತೆ ಎರಡು ರೀಮಿಕ್ಸ್ ಮತ್ತು ಒಂದು ಹಾಡು ಇಂಗ್ಲೀಷ್ ಭಾಷೆಯದ್ದಾಗಿದೆ. ಈ ಗೀತೆಗಳು ಎಲ್ಲಾ ಡೌನ್‍ಲೋಡಿಂಗ್ ಮತ್ತು ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಲಭ್ಯವಿವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಆಲ್ಬಂ ಅನ್ನು ಶನಿವಾರ (ನವೆಂಬರ್ 17) ರಂದು ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಸಂದೇಶಗಳನ್ನು ಸಾರುವ ಮೂಲಕ ಮಕ್ಕಳು ರ್ಯಾಂಪ್ ವಾಕ್ ಮಾಡುವುದರೊಂದಿಗೆ ಸಮಾರಂಭಕ್ಕೆ ಮೆರಗು ತಂದರು.

ಕನ್ನಡದ ಖ್ಯಾತ ನಟ ಪುನೀತ್ ರಾಜ್‍ಕುಮಾರ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಅವರು ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಈ ಸಂದರ್ಭದಲ್ಲಿದ್ದರು.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು (ಎಸ್ ಡಿ ಜಿ) ಗಮನದಲ್ಲಿಟ್ಟುಕೊಂಡು ಈ ಗೀತೆಗಳನ್ನು ರಚಿಸಲಾಗಿದೆ. ಮಕ್ಕಳ ಶಿಕ್ಷಣದ ಹಕ್ಕು, ಆರೋಗ್ಯ, ಪರಿಸರ ರಕ್ಷಣೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು, ನೈರ್ಮಲ್ಯ ಹಾಗೂ ಜೀವನ ಶೈಲಿಯ ಆರೋಗ್ಯ ಸೇರಿದಂತೆ ಒಟ್ಟಾರೆ ಮಕ್ಕಳ ಹಿತರಕ್ಷಣೆಗೆ ಪೂರಕವಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಗೀತೆಗಳನ್ನು ರಚಿಸಲಾಗಿದೆ.

ಈ ಆಲ್ಬಂಗೆ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಹಕಾರ ನೀಡಿದೆ. ಅಲ್ಲದೇ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಈ ಗೀತೆಗಳನ್ನು ಹಾಕಲಾಗುತ್ತದೆ ಮತ್ತು ಈ ಗೀತೆಗಳನ್ನು ಶಿಕ್ಷಣ ಇಲಾಖೆಯ ಅಲ್ಬಂ ಆಗಿ ಅಳವಡಿಸಿಕೊಳ್ಳಲು.

ಆಶಿಶ್ ಲಕ್ಕಿ ಅವರು ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಂದು ಸಂಗೀತ ನೀಡಿ ಹಾಡಿರುವ ಇನ್ನೊಂದು ಹಾಡನ್ನು ಕರ್ನಾಟಕ ಶಿಕ್ಷಣ ಇಲಾಖೆ ತನ್ನ ಗೀತೆಯನ್ನಾಗಿ ಅಳವಡಿಸಿಕೊಂಡಿದೆ.

ಮೊದಲ ಬಾರಿಗೆ ಆಶಿಶ್ ಗೀತೆಗಳನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಗೀತೆಗಳನ್ನು ಕೇಳಿದ ಕುಮಾರಸ್ವಾಮಿ ಅವರು ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಈ ಗೀತೆಗಳನ್ನು ಹೊರ ತಂದಿರುವ ಆಶಿಶ್ ಅವರ ಕಾರ್ಯವನ್ನು ಶ್ಲಾಘಿಸಿದ್ದರು.

ಈ ಬಗ್ಗೆ ಮಾತನಾಡಿದ ಆಶಿಶ್ ಅವರು, “ಸಂಗೀತವೆಂಬುದು ಇಡೀ ವಿಶ್ವಕ್ಕೆ ಆತ್ಮವನ್ನು ನೀಡಿದೆ. ಮನಸಿಗೆ ರೆಕ್ಕೆಯನ್ನು, ಚಿಂತನೆಯನ್ನು ಹಾರುವಂತೆ ಮತ್ತು ಪ್ರತಿಯೊಂದಕ್ಕೂ ಜೀವ ತುಂಬಿದೆ’’ ಎಂದರು.
ಆಶಿಶ್ ಅವರು ಈ ಹಿಂದೆ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಮತ್ತು ಕನ್ನಡದ ಸಂಗೀತ ನಿರ್ದೇಶಕ ಮನೋಮೂರ್ತಿ ಅವರೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ ಅನುಭವ ಹೊಂದಿದ್ದಾರೆ.

ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿರುತ್ತೇ‌ನೆ: ಎಚ್.ಡಿ ದೇವೇಗೌಡ

ಬೆಂಗಳೂರು: ನಾನು ರಾಜಕೀಯ ಬಿಡೋದಿಲ್ಲ.ಶಕ್ತಿ ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ.ಆಗಲ್ಲ ಅಂದಾಗ ವಿಶ್ರಾಂತಿ ಪಡೆಯುತ್ತೇನೆ.ಯಾರಿಗೂ ಮೋಸ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ, ವಂಚನೆ ಮಾಡಿಲ್ಲ.ನಾನು ಬಯಸೋದು ಒಂದೆ.ನನಗೆ ಅನಾಯಾಸ ಮರಣ ಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡ್ರು,ಹಣದಿಂದ ರಾಜಕೀಯ ಮಾಡೋರು ಇದಾರೆ ದೈವೇಚ್ಚೆಯಿಂದ ರಾಜಕೀಯ ಮಾಡಿದೋನು,ನಾನು ಯಾವುದೇ ಜಾತಿ ಯ ವಿರೋಧಿ ಅಲ್ಲ.ಇವತ್ತು ದೇವೇಗೌಡರ ಬಗ್ಗೆ ಭಾರತದ ಯಾವುದೇ ಪ್ರದೇಶಕ್ಕೆ ಹೋದರೂ ಗೌರವ ಕೊಡ್ತಾರೆ.ಪಂಜಾಬ್, ಉತ್ತರ ಪ್ರದೇಶ, ಮಿಜೋರಾಂ ಯಾವುದೇ ಸ್ಥಳಕ್ಕೆ ಹೋದರೂ ಗೌಡ ಅಚ್ಚಾ ಹೈ ಅಂತಾರೆ.ಆದರೆ ಇಲ್ಲಿ ನಮ್ಮ ಮಾದ್ಯಮ ಸ್ನೇಹಿತರು ಕುಮಾರಸ್ವಾಮಿ ಸರ್ಕಾರ ಯಾವಾಗ ಬೀಳುತ್ತೋ ಅಂತಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ರು.

ನಮ್ಮಲ್ಲಿ ಮೂರು ಪ್ರಮುಖ ಪಕ್ಷಗಳಿವೆ.ಎರಡು ರಾಷ್ಟ್ರೀಯ ಪಕ್ಷಗಳು ಇವೆ.ಬಿಜೆಪಿಯನ್ನು ಮಣಿಸಲು ಸಾದ್ಯವಿಲ್ಲ.
ಪ್ರತಿಯೊಬ್ಬರನ್ನೂ ಬಳಸಿಕೊಳ್ತಾರೆ , ಆಮೇಲೆ ಕೈ ಬಿಟ್ಟು ಬಿಡ್ತಾರೆ.ಕೃಷ್ಣ ಅವರನ್ನು ಕರೆದು ಕೊಂಡು ಹೋದ್ರು.ರಾಜಶೇಖರನ್ ಅವರನ್ನು ಕರೆದುಕೊಂಡರು.ಬಂಗಾರಪ್ಪ ಅವರನ್ನು ಕರೆದುಕೊಂಡರು ಒಂದು ದಿನ ಮೆರೆಸಿ ಆಮೇಲೆ ಬಿಟ್ಟೇ ಬಿಟ್ಟರು.
ದೇಶಕ್ಕೆ ಏನು ಬೇಕು ಅಂತಾ ನಾವು ಮೊದಲು ಯೋಚಿಸಬೇಕು.ರಾಜ್ಯದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶ ಇದೆ. ಇದಕ್ಕೆ ಕೇಂದ್ರದ ಸಹಕಾರ ಬೇಕು. ನಾನು ಮತ್ತು ಕುಮಾರಸ್ವಾಮಿ ದಿಲ್ಲಿಗೆ ಹೋಗಿ ಎಲ್ಲ ಸಂಸದರನ್ನು ಭೇಟಿ ಮಾಡಿ ಸಹಕಾರ ನೀಡಿ ಅಂತ ಕೇಳಿದೆ. ಅನಂತ್‌ಕುಮಾರ್, ಸದಾನಂದ ಗೌಡ ಎಲ್ಲರೂ ಇದ್ದರು.‌ ಆದ್ರೆ ಏನೂ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.

ಅಧಿಕಾರ ದಾಹ ಅನ್ನೋದು ಎಲ್ಲರಲ್ಲೂ ಇದೆ.ನಾನು ಶಾಸಕನಾದಾಗ ಇಪ್ಪತ್ತ ಮೂರು ವರ್ಷ. ಸಚಿವ ಆದಾಗಲೂ ಸಣ್ಣ ವಯಸ್ಸೇ.ಆದ್ರೆ ಈಗಲೂ ನಾನು ಹೋರಾಟ ಮಾಡಿಕೊಂಡು ಬರ್ತಿದ್ದೇನೆ.ಒಮ್ಮೆ ಶೋಬಾ ಕರಂದ್ಲಾಜೆ ನಮ್ಮ ಮನೆಗೆ ಬಂದಿದ್ರು.ಯಡಿಯೂರಪ್ಪ ಅವರಿಗೆ ಒಂದು ಮಂತ್ರಿ ಸ್ಥಾನ ಕೊಡಿ ಅಂತಾ ಕೇಳಿದ್ರು. ನನ್ನನ್ನು ಎಂ ಎಲ್‌ ಸಿ ಮಾಡಿ ೨೩ ಶಾಸಕರು ನಮ್ಮ ಜತೆ ಇದ್ದಾರೆ ಅಂದ್ರು.ತಾಳ್ಮೆಯಿಂದ ಇರಿ, ಒಳ್ಳೆ ಕಾಲ ಬರುತ್ತೆ ಅಂತಾ ಸಲಹೆ ನೀಡಿ ಕಳಿಸಿದ್ದೆ. ನಾನು ಯಾರಿಗೂ ತಪ್ಪು ಸಂದೇಶ ನೀಡಲು ಹೋಗಲ್ಲ.ಇವರ್ಯಾರೂ ಮಾತು ಕೇಳಲ್ಲ.ನಾನೇನು ಮಾಡ್ಲಿ ಎಂದ್ರು.

ರಾಜಕೀಯದಲ್ಲಿ ತಾಳ್ಮೆ ಮುಖ್ಯ.‌ ವೇಗವಾಗಿ ಹೋದ್ರೆ ಆಗಲ್ಲ. ನನಗೆ ಯಾರ ಮೇಲೂ ದ್ವೇಷ ಇಲ್ಲ. ರಾಜ್ಯದ ಅಭಿವೃದ್ಧಿ ಗಾಗಿ, ರೈತರಿಗಾಗಿ ಯಾರ ಮನೆ ಬಾಗಿಲಿಗೆ ಹೋಗಲೂ ಸಿದ್ದ ಎಂದ್ರು.

ಸಾಲಮನ್ನ ವಿಚಾರ ನಾಲ್ಕಾರು ಕಡೆ ಕೆಲ ರೈತರು ಸಾಲ ಮಾಡಿಕೊಂಡಿದ್ದಾರೆ ಅದು 8-10.ಲಕ್ಷ ರೂ. ದಾಟಿದೆ ಹೀಗಾಗಿ ಕೆಲ ರೈತರು ಆತ್ಮಹತ್ಯೆಗೆ ಶರಣಾಗ್ತಿದ್ದಾರೆ ಕುಮಾರಸ್ವಾಮಿ ಅವರು ಅನೇಕ ರೀತಿಯ ಸಾಲಮನ್ನ ಮಾಡಬೇಕು ಅಂದುಕೊಂಡಿದ್ದಾರೆ ಇದಕ್ಕೆ ಸಂಪನ್ಮೂಲಕ ಕ್ರೂಢೀಕರಣ ಆಗಬೇಕು.ರೈತರು ತಾಳ್ಮೆಯಿಂದ ಇರಬೇಕು ಎಂದು ದೇವೇಗೌಡ ಕಿವಿಮಾತು ಹೇಳಿದ್ರು.

ಎಲ್ಲರಿಗೂ ತೆರಿಗೆ ವಿಧಿಸುವ ಅಗತ್ಯ ಇಲ್ಲ‌. ಅಕ್ರಮವಾಗಿ ಆಸ್ತಿ ಮಾಡಿರುವ ಮಂದಿಗೆ ತೆರಿಗೆ ಹಾಕಿದ್ರೂ ಸಾಕು.‌ ವ್ಯವಸ್ಥೆ ನಡೆಸಬಹುದು. ಆದ್ರೆ ವ್ಯವಸ್ಥೆಯೇ ಕೆಟ್ಟು ಹೋಗಿದೆ. ನಮ್ಮ ಪಕ್ಷದಲ್ಲಿ ಎಲ್ಲರೂ ಸತ್ಯ ಹರಿಶ್ಚಂದ್ರ ರಿಲ್ಲ ಎನ್ನುವುದೂ ನನಗೆ ಗೊತ್ತು.ಚುನಾವಣೆ ಗೆಲ್ಲುವವರೆಗೆ ಹೋರಾಟ ಮಾಡಿ ಗೆದ್ದ ಮೇಲೆ ವಿರೋಧ ಪಕ್ಷದವರೂ ಸಹಕಾರ ನೀಡಬೇಕು ಮೈತ್ರಿ ಸರ್ಕಾರದ ಗೊಂದಲ, ಆಪರೇಷನ್ ಕಮಲದ ಬಗ್ಗೆ ಪರೋಕ್ಷವಾಗಿ ಸಲಹೆ ನೀಡಿದ್ರು.

ಆಡಳಿತ ನಡೆಸಲು ಆಕ್ಸ್ಫರ್ಡ್ ಯುನಿವರ್ಸಿಟಿಯಲ್ಲಿ ಓದಬೇಕಿಲ್ಲ ಬುದ್ದಿ ಇರಬೇಕು, ಕಾಮನ್ ಸೆನ್ಸ್ ಇರಬೇಕು
ಕಾವೇರಿ ನೀರಿಗಾಗಿ ಅಂದಿನ ಸಿಎಂ ಜಯಲಲಿತಾ ಒಣಗಿದ ಭತ್ತ ಪ್ರದರ್ಶನ ಮಾಡಿದ್ರು ನಾನು ಮೊದಲೇ ವಾಸ್ತವ ಚಿತ್ರಣದ ವಿಡಿಯೋ ಮಾಡಿದ್ದೆ ಆ ಸಿಡಿ ನೋಡಿ ಎಂದಾಗ ಜಯಲಲಿತಾ ಸಭೆಯಿಂದ ಹೊರ ನಡೆದಿದ್ರು ಬಳಿಕ 31 ಟಿಎಂಸಿ ಬದಲು 11 ಟಿಎಂಸಿ ನೀರು ಬಿಟ್ಟರೆ ಸಾಕು ಎಂದ್ರು ಹಳೆಯ ನೆನಪು ಮೆಲುಕು ಹಾಕಿದ್ರು.

ಪಾಕಿಸ್ತಾನ ಸೋಲಿಸಿದ್ದ ಬ್ರಿಗೇಡಿಯರ್ ಕುಲದೀಪ್ ಸಿಂಗ್ ನಿಧನ: ಜಿಟಿಡಿ ಸಂತಾಪ

ಬೆಂಗಳೂರು:ಬ್ರಿಗೇಡಿಯರ್ ಕುಲದೀಪ್​ ಸಿಂಗ್​ ಚಂದ್​ಪುರಿ ಅವರ ಅಕಾಲಿಕ ನಿಧನಕ್ಕೆ ಸಚಿವ ಜಿಟಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ.

1971ರ ಯುದ್ಧದಲ್ಲಿ ಪಾಕ್ ಪಡೆಯನ್ನು ಮಣಿಸಿ “ಭಾರತದ ಹೀರೋ” ಎನಿಸಿಕೊಂಡಿದ್ದ ಬ್ರಿಗೇಡಿಯರ್ ಕುಲದೀಪ್​ ಸಿಂಗ್​ ಚಂದ್​ಪುರಿ ಅವರು ಅಕಾಲಿಕ ನಿಧನ ಈ ದೇಶಕ್ಕೆ ತುಂಬಲಾರದ ನಷ್ಟ. 1997ರಲ್ಲಿ ತೆರೆಕಂಡಿದ್ದ ಸೂಪರ್​ಹಿಟ್​ “ಬಾರ್ಡರ್​“ ಚಿತ್ರಕ್ಕೆ ಸ್ಪೂರ್ತಿಯಾಗಿದ್ದ ಕುಲದೀಪ್​ ಸಿಂಗ್​ ಚಂದ್​ಪುರಿ ಅವರು “ಲಾಂಗೆವಾಲಾ” ಯುದ್ಧದ ಮೂಲಕ ಹೆಸರು ವಾಸಿಯಾಗಿದ್ದರು. ಅವರ ಆತ್ಮಕ್ಕೆ ತಾಯಿ ಚಾಮುಂಡೇಶ್ವರಿ ಶಾಂತಿ ನೀಡಲಿ. ಅವರ
ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ‌ ಎಂದು‌ ತಿಳಿಸಿದ್ದಾರೆ.