29ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನಕ್ಕೆ ಸಿಎಂ ಚಾಲನೆ

ದಾವಣಗೆರೆ:ನಗರದಲ್ಲಿ ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿದರು. ಆರೋಗ್ಯ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್ ಮತ್ತಿತರರು ಉಪಸ್ಥಿತರಿದ್ದರು.

29ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನದ ಉದ್ಘಾಟನಾ ಸಮಾರಂಭ
ಸಂಕಲ್ಪ- 2018 ಚಿಂತನ ಮಂಥನ ಸನ್ಮಾನ್ಯ ಮುಖ್ಯಮಂತ್ರಿಯವರ ಭಾಷಣದ ಸಂಪೂರ್ಣ ವಿವರ ಇಂತಿದೆ.

1. ವೈದ್ಯರಲ್ಲಿ ದೇವರನ್ನು ಕಂಡ ಸಂಸ್ಕೃತಿ ನಮ್ಮದು. ನಮ್ಮ ಜನ ಮುಗ್ಧರು, ಅವರ ಅನಾರೋಗ್ಯದ ಸಂದರ್ಭದಲ್ಲಿ ವೈದ್ಯರು ಹೇಳುವುದು ಅವರಿಗೆ ವೇದವಾಕ್ಯ. ವೈದ್ಯರ ಮೇಲೆ ಅಚಲ ನಂಬಿಕೆಯನ್ನು ಇರಿಸಿರುವ ನಮ್ಮ ಜನ ಅವರು ಹೇಳಿದಂತೆಯೇ ಕೇಳುವವರು.
2. ಜನರ ಈ ಮುಗ್ಧನಂಬುಗೆಯನ್ನು ಹುಸಿಹೋಗದಂತೆ ಕಾಪಾಡುವ ಹೊಣೆಗಾರಿಕೆ ಎಲ್ಲ ವೈದ್ಯರದ್ದು. ವಿಶೇಷವಾಗಿ ಸರ್ಕಾರಿ ವೈದ್ಯಾಧಿಕಾರಿಗಳದ್ದು.
3. ಎಲ್ಲ ಜನರಿಗೂ ಹೈಟೆಕ್ ಆಸ್ಪತ್ರೆಗಳಿಗೆ ತೆರಳಿ, ದುಬಾರಿ ಹಣ ತೆತ್ತು, ಚಿಕಿತ್ಸೆ ಪಡೆಯುವ ಅವಕಾಶಗಳಿರಲಾರವು. ಬಹುತೇಕ ಜನ ನಂಬುವುದು ಮತ್ತು ಧಾವಿಸುವುದು ಸರ್ಕಾರಿ ಆಸ್ಪತ್ರೆಗಳಿಗೆ.
4. ಕರ್ನಾಟಕ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆಯನ್ನು ಅಕ್ಟೋಬರ್ ೩೦ ರಿಂದ ಚಾಲನೆಗೊಳಿಸಿದೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಗೆ ಪೂರಕವಾಗಿ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆ ಕಾರ್ಯನಿರ್ವಹಿಸುತ್ತದೆ.
5. ಈ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ ೫ ಲಕ್ಷ ರೂ. ಮತ್ತು ಎಪಿಎಲ್ ಕುಟುಂಬಗಳಿಗೆ ವರ್ಷಕ್ಕೆ ೧.೫ ಲಕ್ಷ ರೂ. ಆರೋಗ್ಯ ಚಿಕಿತ್ಸೆಗೆಂದು ದೊರೆಯಲಿದೆ. ಒಟ್ಟಾರೆ ೧೬೪೦ ಸೇವೆಗಳನ್ನು ನಿಗದಿಪಡಿಸಲಾಗಿದೆ.
6. ಎಲ್ಲ ಜನರಿಗೂ ಎಲ್ಲ ರೀತಿಯ ಆರೋಗ್ಯ ಸೇವೆ ದೊರೆಯಬೇಕು ಎನ್ನುವುದು ರಾಜ್ಯ ಸರ್ಕಾರದ ಮಹದಾಶೆ. ಈ ಆಶಯಕ್ಕೆ ಪೂರಕವಾಗಿ ಸರ್ಕಾರಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸರ್ಕಾರಿ ಆಸ್ಪತ್ರೆಗಳ ಸೇವಾ ಗುಣಮಟ್ಟ ಮತ್ತು ಅಲ್ಲಿನ ಇತರ ಮೂಲಭೂತ ಸೌಲಭ್ಯಗಳು ಉತ್ಕೃಷ್ಟ ಮಟ್ಟದಲ್ಲಿ ಇರಬೇಕಾದದ್ದು ಅತ್ಯಗತ್ಯ.
7. ನಮ್ಮ ವೈದ್ಯರು ಹಾಗೂ ವೈದ್ಯೇತರ ಸಿಬ್ಬಂದಿಗಳ ಸತತ ಪರಿಶ್ರಮ ಮತ್ತು ಸೇವೆಯಿಂದ ಸಿಡುಬು, ಪ್ಲೇಗು, ಪೋಲಿಯೋ ಮುಂತಾದ ರೋಗಗಳ ನಿರ್ಮೂಲನೆ ಮಾಡಲಾಗಿದೆ, ಕ್ಷಯ, ಕುಷ್ಠ, ಕಾಲರ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣಕ್ಕೆ ತರಲಾಗಿದೆ. ಇದಕ್ಕಾಗಿ ನಮ್ಮ ವೈದ್ಯ ಮತ್ತು ವೈದ್ಯೇತರ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ.
8. ನಿಮ್ಮೆಲ್ಲರ ಪರಿಶ್ರಮದಿಂದ ತಾಯಂದಿರ ಮರಣ ಪ್ರಮಾಣ ಪ್ರತಿ 1 ಲಕ್ಷ ಜೀವಂತ ಜನನಗಳಿಗೆ 213 (ಎಸ್.ಆರ್.ಎಸ್ 2005-06) ರಿಂದ 108 ಕ್ಕೆ (ಎಸ್.ಆರ್.ಎಸ್ 2014-16) ಇಳಿಕೆಯಾಗಿದೆ ಹಾಗೂ ಪ್ರತಿ ಸಾವಿರ ಜೀವಂತ ಜನನಗಳಿಗೆ ಶಿಶು ಮರಣ ಪ್ರಮಾಣವು 24 ಕ್ಕೆ ಇಳಿಕೆಯಾಗಿದೆ. ಇದಕ್ಕಾಗಿ ಹಲವು ಪ್ರಶಸ್ತಿಗಳನ್ನು ನಮ್ಮ ರಾಜ್ಯ ಪಡೆದಿದೆ. ಶ್ರಮಿಸಿದ ಎಲ್ಲ ಅಧಿಕಾರಿಗಳಿಗೂ ಅಭಿನಂದನೆಗಳು.
9. ಮೂತ್ರಪಿಂಡ ತೊಂದರೆಗೊಳಗಾಗಿ ಸಾವಿರಾರು ರೂಪಾಯಿಗಳ ವೆಚ್ಚದಲ್ಲಿ ಡಯಾಲಿಸಿಸ್ ಚಿಕಿತ್ಸೆ ಮಾಡಿಸಲಾಗದೆ ಬದುಕು ನರಕಸದೃಶವಾಗಿರುವ ರೋಗಿಗಳ ಬದುಕಿಗೆ ಆಸರೆಯಾಗಿ ರಾಜ್ಯದಲ್ಲಿ 160 ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಿ ಉಚಿತವಾಗಿ ಸೇವೆಯನ್ನು ನೀಡಲಾಗುತ್ತಿದೆ. ಇದೊಂದು ರಾಷ್ಟ್ರೀಯ ಪ್ರಥಮ. ಇದು ನಿಜವಾಗಿಯೂ ರಾಜ್ಯ ಸರ್ಕಾರಕ್ಕೆ ಹೆಮ್ಮೆ ತರುವ ವಿಷಯ.
10. ಜೀವನ್ಮರಣಗಳ ಮಧ್ಯೆ ಹೋರಾಡುವ ರೋಗಿಗಳ ಪ್ರಾಣ ಉಳಿಸುವ ಸಲುವಾಗಿ ರಾಜ್ಯದ ಎಲ್ಲಾ ಮೇಲ್ದರ್ಜೆ ಆಸ್ಪತ್ರೆಗಳು ಜಿಲ್ಲಾ ಆಸ್ಪತ್ರೆಗಳಲ್ಲಿ 10 ಹಾಸಿಗೆಗಳ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ 3 ಹಾಸಿಗೆಗಳ ಸಾಮಥ್ರ್ಯದ ತೀವ್ರ ನಿಗಾ ಘಟಕ (ಐ.ಸಿ.ಯು) ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ 103 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
11. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರೋಗಪತ್ತೆ ಸೌಲಭ್ಯ ಒದಗಿಸಲು ಚಿತ್ರದುರ್ಗ ವಿಜಯಪುರ, ಉಡುಪಿ, ಕೋಲಾರ ಮತ್ತು ತುಮಕೂರಿನಲ್ಲಿ ಸಿ.ಟಿ. ಸ್ಕ್ಯಾನ್ ಸೌಲಭ್ಯ ಹಾಗೂ ಕೋಲಾರ ಮತ್ತು ತುಮಕೂರಿನಲ್ಲಿ ಎಂ.ಅರ್.ಐ.ಸ್ಕ್ಯಾನ್ ಈಗಾಗಲೇ ಪ್ರಾರಂಭಿಸಲಾಗಿದೆ. ಈ ಯೋಜನೆಗಳನ್ನು ಶೀಘ್ರದಲ್ಲಿಯೇ ವಿಸ್ತರಿಸಲಾಗುವುದು.
12. ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಮಾನಸಿಕ ಅಸ್ವಸ್ಥರಲ್ಲಿ ಮನೋಸ್ಥೈರ್ಯವನ್ನು ತುಂಬಿ ಸರಳ ಜೀವನ ನಡೆಸುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ “ಮನೋಚೈತನ್ಯ” ಮತ್ತು “ಮಾನಸಧಾರ” ಕೇಂದ್ರಗಳನ್ನು ಸ್ಥಾಪಿಸಿ ಪ್ರತಿ ಮಂಗಳವಾರ (ಸೂಪರ್ ಮಂಗಳವಾರ) ಮಾನಸಿಕ ರೋಗಗಳಿಂದ ಬಳಲುವ ಜನರಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.
13. ದೇಶದಲ್ಲಿಯೇ ಪ್ರಪ್ರಥಮವಾಗಿ ನಮ್ಮ ರಾಜ್ಯದಲ್ಲಿ ಮಾನಸಿಕ ಆರೋಗ್ಯ ಪ್ರಾಧಿಕಾರವನ್ನು ಆರಂಭಿಸಲಾಗುತ್ತಿದೆ.
14. ಇತ್ತೀಚೆಗೆ ಭಾರತ ಸರ್ಕಾರವು ಆಯೋಜಿಸಿದ್ಧ ರಾಷ್ಟ್ರಮಟ್ಟದ ಆರೋಗ್ಯ ಸಮಾವೇಶದಲ್ಲಿ ರಾಜ್ಯಕ್ಕೆ 3 ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ವಿಷಯ. ಸಂಬಂಧಿಸಿದ ಎಲ್ಲರಿಗೂ ನಾನು ಅಭಿನಂದಿಸುತ್ತೇನೆ.
15. ದೇಶದಲ್ಲೇ ಪ್ರಥಮ ಬಾರಿಗೆ ಹೆಚ್.ಐ.ವಿ ರೋಗಿಗಳಿಗೆ ಅವರ ವಾಸಸ್ಥಳಗಳ ಹತ್ತಿರ ಎ.ಆರ್.ಟಿ ಮಾತ್ರೆಗಳು ದೊರೆಯುವಂತೆ ಮಾಡಲು 130 ಉಪ-ಎ.ಆರ್.ಟಿ. ಕೇಂದ್ರಗಳನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ.
16. ನಾನು ಈಗಾಗಲೇ ಹಲವಾರು ವೇದಿಕೆಗಳಲ್ಲಿ ಹೇಳಿರುವಂತೆ, ನಮ್ಮ ಸರ್ಕಾರದ ಪ್ರಥಮ ಆದ್ಯತೆ ಕೃಷಿ, ಶಿಕ್ಷಣ ಮತ್ತು ಆರೋಗ್ಯ ವಲಯಗಳು. ಇವುಗಳನ್ನು ಒಳಗೊಂಡಂತೆ ಅಭಿವೃದ್ಧಿಯ ಪ್ರಸ್ತಾಪ ಬಂದಾಗ ರಾಜ್ಯ ಸರ್ಕಾರದಲ್ಲಿ ಹಣದ ಕೊರತೆಯಂತೂ ಇಲ್ಲ. ಅಭಿವೃದ್ಧಿಗೆ ಅಗತ್ಯವಿರುವ ಹಣಕಾಸು ಸಮೃದ್ಧಿ ನಮಗಿದೆ. ಅಭಿವೃದ್ಧಿಗಾಗಿ ವೆಚ್ಚ ಮಾಡುವ ಇಚ್ಛಾಶಕ್ತಿಯೂ ಇದೆ.
17. ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿನ ಮನ:ಸ್ಥಿತಿ ಬದಲಾಗಬೇಕು. ಸೇವೆಗಾಗಿಯೇ ಸರ್ಕಾರಿ ನೌಕರಿ ಎನ್ನುವ ಭಾವನೆ ಮೂಡಬೇಕು.
18. ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳು ಮತ್ತು ಇತರೆ ಸರ್ಕಾರಿ ಸೇವೆಗಳಲ್ಲಿ ಕಂಡುಬರುತ್ತಿರುವ ಲೋಪಗಳ ಕುರಿತು ಮಾಧ್ಯಮದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ನಾನು ತೀವ್ರವಾಗಿ ಗಮನಿಸಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲು ನಾನು ಸಿದ್ಧನಿದ್ದೇನೆ. ನಮ್ಮ ವ್ಯವಸ್ಥೆಗಳು ಸಶಕ್ತವಾಗಬೇಕು. ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆ, ಸರ್ಕಾರಿ ಉಪಕ್ರಮಗಳು ವಿಶ್ವಾಸಾರ್ಹ ಎನ್ನುವ ಭಾವ ಮೂಡಬೇಕು.
19. ನಮ್ಮ ಕೆಲ ಸರ್ಕಾರಿ ವೈದ್ಯ ಸಂಸ್ಥೆಗಳು ವಿಶ್ವಖ್ಯಾತಿಯನ್ನು ಪಡೆದಿವೆ. ಜಗತ್ತಿನ ಮೂಲೆ ಮೂಲೆಗಳಿಂದ ಚಿಕಿತ್ಸೆಗಾಗಿ ನಮ್ಮಲ್ಲಿ ಬರುವವರಿದ್ದಾರೆ. ಆದರೆ ಕೆಳಸ್ತರದ ಸರ್ಕಾರಿ ಆಸ್ಪತ್ರೆಗಳು, ಕೆಲವೊಮ್ಮೆ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳ ಸ್ಥಿತಿಯನ್ನು ಅತ್ಯಂತ ಶೋಚನೀಯವಾಗಿರುವುದನ್ನು ನಾನು ಕಂಡಿದ್ದೇನೆ. ಇದು ಬದಲಾಗಬೇಕಿದೆ.
20. ಮೂಲಸೌಲಭ್ಯಗಳು ಮತ್ತು ಇತರ ಅಗತ್ಯಗಳನ್ನು ಪೂರೈಸಲು ಸರ್ಕಾರ ಸಿದ್ಧವಿದೆ. ಆದರೆ ತಾನು ಒದಗಿಸುವ ಸವಲತ್ತುಗಳ, ವೈದ್ಯೋಪಕರಣ ಸಲಕರಣೆಗಳ ದುರುಪಯೋಗವಾದಲ್ಲಿ ಸರ್ಕಾರ ಖಂಡಿತವಾಗಿಯೂ ಸಹಿಸುವುದಿಲ್ಲ.
21. ನಮ್ಮ ವೈದ್ಯರು ಸೇವಾ ಮನೋಭಾವವನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ.
22. ಸರ್ಕಾರಿ ವೈದ್ಯರು ಮತ್ತು ವೈದ್ಯೇತರ ಸಿಬ್ಬಂದಿ ಸಲ್ಲಿಸಿರುವ ಅನೇಕ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರ ಸಿದ್ಧವಿದೆ.
23. ವೈದ್ಯಕೀಯ ಸಮ್ಮೇಳನ ಯಶಸ್ವಿಯಾಗಲಿ, ಈ ಸಮ್ಮೇಳನದಲ್ಲಿ ಹೊರಬರುವ ಉತ್ತಮಾಂಶಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಸಂಕಲ್ಪ ಶಕ್ತಿ ನಿಮ್ಮದಾಗಲಿ

ಕೇಂದ್ರದ ನೋಟಿಸ್ ಗೆ ಹೆದರಲ್ಲ: ಡಿಕೆ‌ ಶಿವಕುಮಾರ್

ಬೆಂಗಳೂರು:ನನಗೆ ಇಡಿಯಿಂದ ನೊಟೀಸ್ ಬಂದಿಲ್ಲ.ಆದರೆ ಕೇಂದ್ರ ಸರ್ಕಾರದ ವಿಶೇಷ ಸಂಸ್ಥೆಯೊಂದರಿಂದ ನೊಟೀಸ್ ಬಂದಿದೆ‌.ಆ ಸಂಸ್ಥೆ ಯಾವುದು ಎಂಬುದನ್ನು ಇಷ್ಟರಲ್ಲೇ ಬಹಿರಂಗ ಪಡಿಸುತ್ತೇನೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಸಚಿವರು,ಅವರು ಯಾವುದೇ ಸಂಸ್ಥೆಯಿಂದ ನೊಟೀಸ್ ಕೊಟ್ಟರೂ ಎದುರಿಸುವ ಶಕ್ತಿ ನನಗಿದೆ.ಕಳೆದ ಎರಡೂವರೆ ವರ್ಷದಿಂದ ಈ ರೀತಿ ಕಿರುಕುಳ‌ಕೊಡುತ್ತಲೇ ಇದ್ದಾರೆ. ಅದರಲ್ಲೂ ಉಪಚುನಾವಣೆ ಆದನಂತರ ಇದು ಹೆಚ್ಚಾಗಿದೆ.ಇದು ರಾಜಕೀಯ ಪ್ರೇರಿತ ಹೌದೋ ಅಲ್ಲವೋ ಎಂಬುದನ್ನು ಬಳ್ಳಾರಿಯ ನಮ್ಮ ಅಣ್ಣನೇ ಸ್ಪಷ್ಟ ಮಾಡಬೇಕು.ಈ ಮೊದಲು ಅವರು ನನಗೆ ಅಕ್ಟೋಬರ್ 30ರ ಗಡುವು ಕೂಡ ಕೊಟ್ಟಿದ್ದರು ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ರು.

ನವೆಂಬರ್ 19ರಂದು ಬಳ್ಳಾರಿಯಲ್ಲಿ ಕೆಡಿಪಿ ಸಭೆ ಇದೆ,22ರಂದು ಕೃತಜ್ಞತಾ ಸಮಾವೇಶ ಹಮ್ಮಿಕೊಂಡಿದ್ದೇವೆ. ಮಾಜಿ‌ ಪ್ರಧಾನಿ ದೇವೇಗೌಡರು ಹಾಗೂ ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗುತ್ತಾರೆ.ನವೆಂಬರ್ 23ರಂದು ಜಮಖಂಡಿಯಲ್ಲಿ ಕೃತಜ್ಞತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ‌ ಎಂದ್ರು.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ವರ್ಗಾವಣೆ ಮಾಡಿದ್ರೂ ಹೋಗಿ ಅಧಿಕಾರ ಸ್ವೀಕರಿಸದ ಜಲಸಂಪನ್ಮೂಲ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ನರಸಿಂಹ ರಾಜು ಸೇರಿದಂತೆ ಆರು ಇಂಜಿನಿಯರ್ ಗಳ ಅಮಾನತು ಮಾಡಲಾಗಿದೆ ಎಂದ್ರು.

ನೀರಾವರಿ ಯೋಜನೆಗಳ ಕುರಿತು ಚರ್ಚಿಸಲು ಡಿ. 6ರಂದು ಮಾಜಿ ಮುಖ್ಯಮಂತ್ರಿಗಳು, ನೀರಾವರಿ ಸಚಿವರುಗಳ ಸಭೆ

ಬೆಂಗಳೂರು: ರಾಜ್ಯದ ಎಲ್ಲ ನೀರಾವರಿ ಯೋಜನೆ ಗಳ ಕುರಿತು ಸೂಕ್ತ ನಿಲುವು ತಳೆಯುವ ನಿಟ್ಟಿನಲ್ಲಿ ಚರ್ಚಿಸಲು ಡಿಸೆಂಬರ್ 6 ರಂದು ಎಲ್ಲ ಮಾಜಿ ಮುಖ್ಯಮಂತ್ರಿ ಗಳು ಹಾಗೂ ಮಾಜಿ ನೀರಾವರಿ ಸಚಿವರ ಸಭೆ ಕರೆಯಲು ಇಂದು ನಿರ್ಧರಿಸಲಾಯಿತು.

ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮಹದಾಯಿ ನ್ಯಾಯಾಧಿಕರಣದ ಇತ್ತೀಚಿನ ಬೆಳವಣಿಗೆ ಕುರಿತು ವಿರೋಧ ಪಕ್ಷಗಳು ಹಾಗೂ ಸಂಬಂಧಪಟ್ಟವರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಇಂದು ನಡೆದ ಸಭೆಯಲ್ಲಿ ಮಹದಾಯಿ ನ್ಯಾಯಾಧಿಕರಣ ನೀರು ಹಂಚಿಕೆ ತೀರ್ಪು ನೀಡಿದ ನಂತರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಲಾಯಿತು.

ರಾಜ್ಯದ ರೈತರ ಹಿತದೃಷ್ಟಿಯಿಂದ ನೀರಿನ ಬಳಕೆಗೆ ಕಾಮಗಾರಿ ಪ್ರಾರಂಭಿಸಲು ಸರ್ಕಾರ ತಯಾರಿ ನಡೆಸಲು ಅನುವಾಗುವಂತೆ ನೀರು ಹಂಚಿಕೆಯ ಗಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ಜೊತೆಗೆ ನಿಯಮ 5(3) ರಡಿ ಸ್ಪಷ್ಟೀಕರಣಕ್ಕೆ ಮನವಿ ಸಲ್ಲಿಸಲಾಗಿದೆ ಹಾಗೂ ಹೆಚ್ಚುವರಿ ನೀರು ಪಡೆಯುವ ನಿಟ್ಟಿನಲ್ಲಿ ಸ್ಪೆಷಲ್ ಲೀವ್ ಪೆಟಿಷನ್ ಸಲ್ಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಆ ಭಾಗದ ರೈತರ ಹಿತಾಸಕ್ತಿ ಕಾಯಲು ಒಟ್ಟಾಗಿ ಶ್ರಮಿಸಲು ತೀರ್ಮಾನಿಸಲಾಯಿತು.

ಇಂದಿರಾ ಕ್ಯಾಂಟೀನ್‌ನಲ್ಲಿ ಶೀಘ್ರವೇ ಟೀ,ಕಾಫಿ: ಪರಮೇಶ್ವರ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಡವಿಟ್ಟಿದ್ದ ಕಟ್ಟಡಗಳ ಪೈಕಿ ಇಂದು ಸ್ಲ್ಯಾಟರ್‌ ಹೌಸ್ ಹಾಗೂ ರಾಜಾಜಿನಗರ ಕಾಂಪ್ಲೆಕ್ಸ್‌‌ನನ್ನು ಹಿಡ್ಕೋ ಸಂಸ್ಥೆಯಿಂದ ಹಿಂಪಡೆಯಲಾಯಿತು.

ಈ‌ ಸಂಬಂಧ ಬಿಎಂಆರ್‌ಡಿಎ ಕಚೇರಿಯಲ್ಲಿ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಹುಡ್ಕೋ ಸಂಬಂಧ ಈ ಕಟ್ಟಡಗಳ ದಾಖಲೆ ಪತ್ರಗಳನ್ನು ಪಡೆದು ಮಾಧ್ಯಮದೊಂದಿಗೆ ಮಾತನಾಡಿದರು.

ಬಿಜೆಪಿ ಸರಕಾರದವಿದ್ದ ಸಂದರ್ಭದಲ್ಲಿ ಹಣಕಾಸಿನ‌ ಕೊರತೆಯಿಂದಾಗಿ 2,389 ಕೋಟಿ ರು.‌ಮೊತ್ತದ 11 ಕಟ್ಟಡ, ಆಸ್ತಿಗಳನ್ನು ಅಡವಿಟ್ಟಿತ್ತು. ಈ ಪೈಕಿ ಮಲ್ಲೇಶ್ವರ ಮಾರುಕಟ್ಟೆ, ಜಾನ್ಸನ್‌ ಮಾರುಕಟ್ಟೆ, ಮೇಯೋ ಕೋರ್ಟ್‌, ಕೆಂಪೇಗೌಡ ಮ್ಯೂಸಿಯಂ ಗೆ ೧.೦೮೮ ಕೋಟಿ ರು. ಮರುಪಾವತಿಸಿ ಈ ಕಟ್ಟಗಳನ್ನು ವಾಪಾಸ್‌ ಪಡೆದಿದ್ದೇವೆ. ಇದೀಗ ರಾಜಾಜಿನಗರ ಹಾಗೂ ಸ್ಲಾಟರ್ ಹೌಸ್‌ ಟ್ಯಾನರಿ ರಸ್ತೆಯನ್ನು ಹಿಂಪಡೆಯಲಾಗಿದೆ. ಉಳಿದಂತೆ ಕೆ.ಆರ್.‌ಮಾರುಕಟ್ಟೆ , ಪಿಯುಬಿ ಕಟ್ಟಡ, ಪಶ್ಚಿಮ ವಲಯ ಕಚೇರಿ, ಕಲಾಸಿಪಾಳ್ಯ ಮಾರುಕಟ್ಟೆ ಮೇಲಿರುವ 652.43 ಕೋಟಿ ರು.‌ಸಾಲವನ್ನು ಈ ಆರ್ಥಿಕ ವರ್ಷದಲ್ಲಿಯೇ ಮರುಪಾವತಿಸಿ, ಈ ಕಟ್ಟಡಗಳನ್ನು ಹಿಂಪಡೆಯಲಿದ್ದೇವೆ ಎಂದರು.

ಬಿಬಿಎಂಪಿ ಆರ್ಥಿಕವಾಗಿ ಸದೃಢವಾಗುತ್ತಿದೆ‌ ಎಂಬುದಕ್ಕೆ ಅಡವಿಟ್ಟ ಕಟ್ಟಡಗಳನ್ನು ಹಿಂಪಡೆಯುತ್ತಿರುವುದೇ ಸಾಕ್ಷಿಯಾಗಿದೆ. ಬಿಬಿಎಂಪಿ ಬ್ಯಾಂಕ್‌ ಸ್ಟೇಟ್‌ಮೆಂಟ್‌ನಲ್ಲಿಯೂ ಎಸಿಎಆರ್‌ ರೇಟಿಂಗ್‌ನಲ್ಲಿ ಎ ಗ್ರೇಡ್‌ ಸ್ಥಾನ ಪಡೆದುಕೊಂಡಿದೆ.
ಒಟ್ಟಾರೆ ಬಿಬಿಎಂಪಿ ಹಂತಹಂತವಾಗಿ ಆರ್ಥಿಕವಾಗಿ ಸದೃಢವಾಗುತ್ತಿದೆ ಎಂದರು.

* 2018-19 ಸಾಲಿನಲ್ಲಿ 3 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ನೀಡಿದ್ದು, ಈ ವರೆಗೂ 2031 ಕೋಟಿ ರು.‌ ಸಂಗ್ರಹವಾಗಿದೆ. ಮಾರ್ಚ್ ಒಳಗಾಗಿ ನಿಗದಿತ ಗುರಿ ತಲುಪಲಿದ್ದೇವೆ. ಹಿಂದಿನ‌ ಆರ್ಥಿಕ ವರ್ಷದ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡಲೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ‌ ಎಚ್ವರಿಕೆ ನೀಡಿದ್ದೇನೆ. 300 ಕೋಟಿ ರು.ಗೂ ಬಾಕಿ ತೆರಿಗೆ ಸಂಗ್ರಹವಾಗಿದೆ ಎಂದರು.

* ನಿಯಮ ಬಾಹಿರವಾಗಿ ಕಟ್ಟಿದ ಕಟ್ಟಡಗಳ ಮೇಲೆ ಮುಂದಿನ ದಿನಗಳಲ್ಲಿ ದ್ವಿಗುಣ ತೆರಿಗೆ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಕೆಲವರು ಬಿಬಿಎಂಪಿಯಿಂದ ಒಪ್ಪಿಗೆ ಪಡೆದ ರೀತಿಯಲ್ಲಿ ಕಟ್ಟಡ ನಿರ್ಮಿಸದೇ ಇರುವುದು ಗಮನಕ್ಕೆ ಬಂದಿದೆ. ಹೀಗಾಗಿ ಅಂಥ ಕಟ್ಟಡಗಳ ವಿರುದ್ಧ ಡಬಲ್ ತೆರಿಗೆ ವಿಧಿಸಲಾಗುವುದು. ಒಂದು ವೇಳೆ ಈ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಲು ಮುಂದಾದರೆ ಈ ಪ್ರಕರಣಕ್ಕೆ ಶೇ.೫೦ ರಷ್ಟು ಶುಲ್ಕ ವಿಧಿಸಲು ಕೆಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.

* ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಮೊತ್ತ‌ ಮೂಲ ಸೌಕರ್ಯಗಳ ನಿರ್ವಹಣೆಗೆ ಸಾಕಾಗಲಿದೆ. ಹೊಸ ಯೋಜನೆ, ದೊಡ್ಡ ಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ದೇಶದಿಂದ ರಾಜ್ಯ ಸರಕಾರ ಸಾವಿರಾರು ಕೋಟಿ ರು. ಅನುದಾನ ಘೋಷಿಸಿತ್ತದೆ.

* ರಾಜಕಾಲು ಒತ್ತುವರಿ ಮಾಡಿರುವವರು ಗಣ್ಯರೇ ಆದರೂ, ಒತ್ತುವರಿ ಜಾಗ ಗುರುತಿಸಿ ಶೀಘ್ರವೇ ತೆರವು ಕಾರ್ಯ ಪ್ರಾರಂಭಿಸಲಾಗುವುದು.

* ಇಂದಿರಾ ಕ್ಯಾಂಟೀನ್‌ನಲ್ಲಿ ಕಾಫಿ, ಟೀ ಕೊಡಲು ಚಿಂತನೆ ನಡೆಸಲಾಗಿದೆ. ಪ್ರಸ್ತುತ ತಿಂಡಿ, ಊಟ ನೀಡಲಾಗುತ್ತಿದ್ದು ಟೀ ಕಾಫಿ ನೀಡಬೇಕೆಂಬ ಬೇಡಿಕೆ ಬಂದಿದೆ.‌ ಅಂತೆಯೇ ಎಲ್ಲ ಕ್ಯಾಂಟೀನ್‌ನಲ್ಲೂ ಶೀಘ್ರವೇ ಪ್ರಾರಂಭಿಸಲಾಗುವುದು. ಇನ್ನು ಇದಕ್ಕೆ ದರ ನಿಗದಿ ಮಾಡಿಲ್ಲ ಎಂದರು.

ಗೋಷ್ಠಿಯಲ್ಲಿ ಮೇಯರ್ ಗಂಗಾಂಭಿಕೆ, ಆಯುಕ್ತ ಮಂಜುನಾಥ್ ಪ್ರಸಾದ್ ಇದ್ದರು.

ಕಾವೇರಿ- ಆನ್ಲೈನ್ ಸೇವೆಗಳಿಗೆ ಮುಖ್ಯಮಂತ್ರಿ ಚಾಲನೆ

ಬೆಂಗಳೂರು:ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿವೃದ್ಧಿ ಪಡಿಸಿರುವ ಕಾವೇರಿ-ಆನ್ಲೈನ್ ಸೇವೆಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರ ನೀಡುವ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಇಂತಹ ಸೇವೆಗಳನ್ನು ಪರಿಚಯಿಸುತ್ತಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ನೆರವಿನಿಂದ ಇನ್ನಷ್ಟು ಪಾರದರ್ಶಕ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ ಎಂದು ನುಡಿದರು.

ರೈತರ ಸಾಲಮನ್ನಾ ಯೋಜನೆಯ ಮಾಹಿತಿಯನ್ನೂ ಕೂಡ ಆನ್ಲೈನ್ನಲ್ಲೇ ಕ್ರೋಢೀಕರಿಸಲಾಗುತ್ತಿದೆ. ಇದರಿಂದಾಗಿ ಈ ಯೋಜನೆಯ ಫಲ ನೇರವಾಗಿ ಅರ್ಹರಿಗೇ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಮಾತನಾಡಿ, ಕಂದಾಯ ಇಲಾಖೆ ಜನರಿಗೆ ಅತ್ಯಂತ ಸಮೀಪವಾದ ಇಲಾಖೆ. ನಾಗರಿಕ ಕೇಂದ್ರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಆಡಳಿತದಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಶಾಸಕರಾದ ರೋಷನ್ ಬೇಗ್, ಹೆಚ್.ವಿಶ್ವನಾಥ್, ಹೆಚ್.ಎಂ. ರೇವಣ್ಣ, ಭೋಜೇಗೌಡ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾ ನಿರೀಕ್ಷಕ ಡಾ. ಕೆ.ವಿ. ತ್ರಿಲೋಕಚಂದ್ರ ಮತ್ತಿತರರು ಹಾಜರಿದ್ದರು.

ಕಾವೇರಿ – ಆನ್ಲೈನ್ ಸೇವೆಗಳು:

ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಸ್ಥಿರಾಸ್ತಿಗಳ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ ಮತ್ತು ಅಧಿಕಾರ ಪತ್ರಗಳನ್ನು ನೋಂದಣಿ ಮಾಡುವ ಜವಬ್ದಾರಿ ಹೊಂದಿರುತ್ತದೆ. ನೋಂದಾಯಿಸಿದ ದಾಖಲೆಗಳ ಭದ್ರತೆಯನ್ನು ಕಾಪಾಡಿಕೊಂಡು ಅವುಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಸಂರಕ್ಷಿಸುವುದು ಇಲಾಖೆಯ ಆದ್ಯ ಕರ್ತವ್ಯವಾಗಿರುತ್ತದೆ.
ಸಾರ್ವಜನಿಕರಿಗೆ ನೋಂದಣಿಗೆ ಸಂಬಂಧಿಸಿದಂತಹ ಈ ಸೇವೆಗಳನ್ನು ಸುಲಭವಾಗಿ ತಲುಪಿಸಲು ಒಂದೇ ಹಂತದ ಪರಿಹಾರ ಕ್ರಮವಾಗಿ ಇಲಾಖೆಯು KAVERI Online ಸೇವೆಗಳನ್ನು ಅಭಿವೃದ್ಧಿಪಡಿಸಿದೆ. ಅವುಗಳು ಈ ಕೆಳಕಂಡಂತೆ ಇರುತ್ತದೆ.

ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ/ ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿ ಪೂರೈಸುವಿಕೆ :
ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ ಮತ್ತು ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿಗಳನ್ನು ಆನ್ಲೈನ್ ಮುಖಾಂತರ ಪಡೆಯಬಹುದಾಗಿರುತ್ತದೆ. ಒಂದು ವೇಳೆ ನಿರ್ದಿಷ್ಟ ಆಸ್ತಿಗಳ ಕುರಿತು ಋಣಭಾರಗಳನ್ನು ಪರಿಶೀಲಿಸಬೇಕಾದಲ್ಲಿ ಆಸ್ತಿಯ ವಿವರವನ್ನು ನೀಡಿ ನೈಜ ಸಮಯದಲ್ಲಿ ವಿವರಗಳನ್ನು ಪಡೆಯಬಹುದಾಗಿರುತ್ತದೆ. ಡಿಜಿಟಲ್ ಸಹಿ ಮಾಡಿದ ಋಣಭಾರ ಪ್ರಮಾಣ ಪತ್ರಗಳನ್ನು ಸಾರ್ವಜನಿಕರು ಆನ್ಲೈನ್ನ ಮೂಲಕ ಸೂಕ್ತ ಶುಲ್ಕವನ್ನು ಪಾವತಿಸುವ ಮೂಲಕ ಪಡೆಯಬಹುದಾಗಿರುತ್ತದೆ.

ನೋಂದಾಯಿಸಿದ ದಸ್ತಾವೇಜಿನ ದೃಢೀಕೃತ ನಕಲನ್ನು ಪಡೆಯಲು ಸಾರ್ವಜನಿಕರು ಆನ್ಲೈನ್ನಲ್ಲಿ ದಸ್ತಾವೇಜು ನೋಂದಾಯಿಸಿದ ಉಪನೋಂದಣಿ ಕಛೇರಿಯ ಹೆಸರನ್ನು ಆಯ್ಕೆ ಮಾಡಿ ದಸ್ತಾವೇಜಿನ ಸಂಖ್ಯೆ ನಮೂದಿಸಿ ಸೂಕ್ತ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ ಪಡೆಯಬಹುದಾಗಿರುತ್ತದೆ.

ಸ್ಥಿರಾಸ್ತಿಗಳ ಮೌಲ್ಯ ಮತ್ತು ಮುದ್ರಾಂಕ ಶುಲ್ಕಗಳ ಲೆಕ್ಕ ಹಾಕುವಿಕೆ:

ಸಾರ್ವಜನಿಕರು ತಮ್ಮ ಆಸ್ತಿಯ ವಿವರಗಳನ್ನು ತಂತ್ರಾಂಶದಲ್ಲಿ ನಮೂದಿಸಿ, ಆಸ್ತಿಯ ಮಾರ್ಗಸೂಚಿ ಮೌಲ್ಯವನ್ನು ಸ್ವತಃ ಲೆಕ್ಕ ಮಾಡಬಹುದು. ಹಾಗೂ ಪಾವತಿಸಬೇಕಾದ ಮುದ್ರಾಂಕ ಶುಲ್ಕವನ್ನು ಸರಳ ಮತ್ತು ಸುಲಭ ಹಂತಗಳಲ್ಲಿ ತಂತ್ರಾಂಶದಲ್ಲಿ ಲೆಕ್ಕ ಮಾಡಬಹುದಾಗಿರುತ್ತದೆ.

ಸಾರ್ವಜನಿಕರಿಂದ ನೋಂದಣಿ ಪೂರ್ವ ಡೇಟಾ ಎಂಟ್ರಿ :
ಈ ಸೇವೆಯು ಸಾರ್ವಜನಿಕರಿಂದ ಉಪನೋಂದಣಿ ಕಛೇರಿಗೆ ಅನೇಕ ಬಾರಿ ಭೇಟಿ ನೀಡುವುದನ್ನು ತಪ್ಪಿಸಿ ಆನ್ಲೈನ್ ಮೂಲಕ ದಸ್ತಾವೇಜನ್ನು ನೋಂದಣಿಗೆ ಸಲ್ಲಿಸುವ ಅವಕಾಶ ಕಲ್ಪಿಸುತ್ತದೆ. ಸಾರ್ವಜನಿಕರು ನೋಂದಾಯಿಸಬೇಕಾದ ಆಸ್ತಿಯ ಎಲ್ಲಾ ವಿವರಗಳನ್ನು ನೋಂದಣಿ ಪೂರ್ವದಲ್ಲಿ ಆನ್ಲೈನ್ ಮೂಲಕ ನಮೂದಿಸಿಕೊಂಡು, ಮಾಹಿತಿಗಳನ್ನು ವೀಕ್ಷಿಸಿದ ನಂತರ ಅವಶ್ಯವಿದ್ದಲ್ಲಿ ಸರಿಪಡಿಸಿ ಸಂಬಂಧಪಟ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ನಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ನಿಗದಿಪಡಿಸಿದ ಆಸ್ತಿಯ ಮಾರ್ಗಸೂಚಿ ದರಗಳನ್ನು ತಂತ್ರಾಂಶದಲ್ಲಿ ಪಡೆದು, ದಸ್ತಾವೇಜಿಗೆ ಸಂಬಂಧಿಸಿದ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಿಕೊಳ್ಳಬಹುದು. ನಂತರ ನಿರ್ಧರಿಸಿದ ಮಾರುಕಟ್ಟೆ ಮೌಲ್ಯದ ಮಂಜೂರಾತಿಗಾಗಿ ಅರ್ಜಿಯನ್ನು ಉಪನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದು.

ದಸ್ತಾವೇಜಿನ ನೋಂದಣಿಗೆ ಮುಂಗಡ ಕಾಲ ನಿಗದಿಪಡಿಸುವಿಕೆ ( Appointment Booking) :

ಉಪನೋಂದಣಾಧಿಕಾರಿಗಳು ಸಾರ್ವಜನಿಕರಿಂದ ಆನ್ಲೈನ್ ಮೂಲಕ ಅರ್ಜಿ ಮತ್ತು ಮೌಲ್ಯವನ್ನು ಮಾನ್ಯಗೊಳಿಸಿದ ನಂತರ ದಸ್ತಾವೇಜಿಗೆ ತಗಲುವ ಶುಲ್ಕಗಳನ್ನು ಸಾರ್ವಜನಿಕರು ಪಾವತಿಸಲು ಸಿದ್ಧರಿದ್ದಲ್ಲಿ ಆನ್ಲೈನ್ ಮೂಲಕ ಪಾವತಿಸಿ, ಅವಕಾಶವಿದ್ದ ಮುಂದಿನ ದಿನಾಂಕಗಳಂದು ನೋಂದಣಿ ಪ್ರಕ್ರಿಯೆಗಾಗಿ ಮುಂಗಡವಾಗಿ ಕಾಲ ನಿಗದಿಪಡಿಸಿಕೊಳ್ಳಬಹುದಾಗಿರುತ್ತದೆ.

ಉಪನೋಂದಣಿ ಕಛೇರಿಯ ಗುರುತಿಸುವಿಕೆ :
ರಾಜ್ಯದ ಎಲ್ಲಾ 250 ಉಪನೋಂದಣಿ ಕಛೇರಿಗಳ ವಿಳಾಸದ ಮಾಹಿತಿಯು ಆನ್ಲೈನ್ ಪೋರ್ಟಲ್ನಲ್ಲಿ ಲಭ್ಯವಿದ್ದು, ಸಂಬಂಧಿಸಿದ ಕಾರ್ಯ ವ್ಯಾಪ್ತಿಯ ಉಪನೋಂದಣಿ ಕಛೇರಿಯಲ್ಲಿ ವಿವರವನ್ನು ಸಾರ್ವಜನಿಕರು ತಂತ್ರಾಂಶದಲ್ಲಿ ಪಡೆದುಕೊಳ್ಳಬಹುದಾಗಿರುತ್ತದೆ.

ವಿವಾಹ ನೋಂದಣಿ ಕಛೇರಿಯ ಗುರುತಿಸುವಿಕೆ :
ವಧು ಮತ್ತು ವರನ ವಿಳಾಸ ಹಾಗೂ ವಿವಾಹ ನೆರವೇರಿದ ಸ್ಥಳ ಆಧಾರಿಸಿ ವಿವಾಹವನ್ನು ನೋಂದಾಯಿಸಿಕೊಳ್ಳಬೇಕಾದ ಕಛೇರಿ ವಿವರಗಳನ್ನು ದೃಢಪಡಿಸಿಕೊಳ್ಳಬಹುದು. ವಿವಾಹ ನೋಂದಣಿ ಮಾಡಿಕೊಳ್ಳಲು ಆಯಾ ಕಾರ್ಯ ವ್ಯಾಪ್ತಿಯ ಕಛೇರಿಗಳ ವಿವರವನ್ನು ಆನ್ಲೈನ್ ಪೋರ್ಟಲ್ನಿಂದ ಪಡೆಯಬಹುದಾಗಿರುತ್ತದೆ.

KACOMP ಕಾಯ್ದೆ ಅಡಿಯಲ್ಲಿ ಕೃಷಿ ಸಾಲಗಳಿಗೆ ಸಂಬಂಧಿಸಿದ ಡಿಕ್ಲರೇಷನ್ ಮತ್ತು ಸಾಲ ತೀರುವಳಿ ಪತ್ರಗಳ ಫೈಲಿಂಗ್ ಮಾಡುವಿಕೆ:
ರೈತರಿಗೆ ಕೃಷಿ ಸಾಲ ನೀಡುವ ಸಂದರ್ಭದಲ್ಲಿ ಏಂಅಔಒP ಕಾಯ್ದೆ ಅಡಿಯಲ್ಲಿ ಪಡೆಯುವ ಡಿಕ್ಲರೇಷನ್ ಮತ್ತು ಸಾಲತೀರುವಳಿ ಪತ್ರಗಳನ್ನು ಆನ್ಲೈನ್ ಮೂಲಕ ಫೈಲಿಂಗ್ ಮಾಡುವ ಸೌಲಭ್ಯವನ್ನು ಬ್ಯಾಂಕುಗಳ ಮತ್ತು ಇತರೆ ಹಣಕಾಸು ಸಂಸ್ಥೆಗಳಿಗೆ ಒದಗಿಸಲಾಗಿದೆ.

ಮೌಲ್ಯ ಮೊಬೈಲ್ ಆಪ್:
ಸಾರ್ವಜನಿಕರು ಯಾವುದೇ ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು ಅನುಕೂಲವಾಗುವಂತೆ, ಮೌಲ್ಯ ಎಂಬ ಹೆಸರಿನ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಆನ್ಲೈನ್ ಇ-ಸ್ಟಾಂಪ್ ಮುದ್ರಾಂಕ ಕಾಗದ
ಸಾರ್ವಜನಿಕರು ತಾವು ಮಾಡಿಕೊಳ್ಳುವ ಕರಾರು ಪತ್ರ ಮತ್ತು ಪ್ರಮಾಣ ಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ, ಇ-ಸ್ಟಾಂಪ್ ಕಾಗದವನ್ನು ತಮ್ಮ ಮನೆಯಿಂದಲೇ ಪ್ರಿಂಟ್ ಓಟ್ ತೆಗೆದುಕೊಳ್ಳುವ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಲಿ. (SHCIL) ರವರ ಸಹಯೋಗದೊಂದಿಗೆ ಕಲ್ಪಿಸಲಾಗಿದೆ.

ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ವಿಶ್ವವಿಖ್ಯಾತ ಕೆಆರ್‌ಎಸ್ ಉದ್ಯಾನವನ ಅಭಿವೃದ್ಧಿ: ಡಿಕೆಶಿ

ಬೆಂಗಳೂರು: ವಿಶ್ವವಿಖ್ಯಾತ ಕೆಆರ್‌ಎಸ್ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಯೋಜನೆ ಸಿದ್ಧಪಡಿಸಿದೆ.

125 ಅಡಿ ಅಡಿ ಎತ್ತರದ ಕಾವೇರಿ ಮಾತೆ ಪ್ರತಿಮೆ ಒಳಗೊಂಡ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ, ಗೋಪುರಯುಕ್ತ ಗಾಜಿನ ಮನೆ, ವೀಕ್ಷಣೆ ಗೋಪುರ, ಬ್ಯಾಂಡ್ ಸ್ಟಾಂಡ್, ಒಳಾಂಗಣ ಕ್ರೀಡಾಂಗಣ ಮತ್ತಿತರ ಐತಿಹ್ಯ ಸಾರುವ ಕಟ್ಟಡಗಳನ್ನು ಈ ಡಿಸ್ನಿಲ್ಯಾಂಡ್ ಮಾದರಿ ಹೊಂದಿರಲಿದೆ.

ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಯೋಜನೆ ರೂಪುರೇಷೆ ಬಗ್ಗೆ ಕೂಲಂಕಷ ಚರ್ಚೆ ನಡೆಸಲಾಯಿತು. ಜೈಪುರದ ಸಿನ್ಸಿಯರ್ ಆರ್ಕಿಟೆಕ್ಟ್ ಕನ್ಸಲ್ಟೆಂಟ್ ಸಂಸ್ಥೆ ನೀಡಿದ ಪ್ರಾತ್ಯಕ್ಷಿಕೆ ಆಧರಿಸಿ ಸಚಿವರು ಯೋಜನೆ ಕುರಿತು ಮತ್ತಷ್ಟು ಸಲಹೆ, ಸೂಚನೆಗಳನ್ನು ನೀಡಿದರು. ಈಗಿನ ಪಾರಂಪರಿಕ ತಾಣದ ಮೂಲಸ್ವರೂಪಕ್ಕೆ ಧಕ್ಕೆ ಆಗದಂತೆ ಬೃಂದಾವನವನ್ನು ವಿಶ್ವಪ್ರವಾಸಿ ತಾಣಗಳಲ್ಲೇ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲಿಸುವುದು ಯೋಜನೆಯ ಮೂಲಸಂಕಲ್ಪವಾಗಿರಬೇಕು ಎಂದು ಒತ್ತಿ ಹೇಳಿದರು.

ಇಂದಿನ ಸಭೆಯಲ್ಲಿ ನಡೆದ ವಿಸ್ತೃತ ಚರ್ಚೆ ಪ್ರಕಾರ ಯೋಜನೆಯ ಒಟ್ಟು ವೆಚ್ಚ 1200 ಕೋಟಿ ರುಪಾಯಿಗಳು. ಜಾಗತಿಕ ಟೆಂಡರ್ ಮೂಲಕ ವಿಶ್ವಮಟ್ಟದ ಸಂಸ್ಥೆಗೆ ಯೋಜನೆ ಗುತ್ತಿಗೆ ವಹಿಸಿಕೊಡಲಾಗುವುದು. ಆದರೆ ಸ್ಥಳಾವಕಾಶ ಬಿಟ್ಟು ರಾಜ್ಯ ಸರಕಾರ ಒಂದು ಪೈಸೆ ಬಂಡವಾಳ ಹೂಡುವುದಿಲ್ಲ. ಟೆಂಡರ್ ನಲ್ಲಿ ಭಾಗವಹಿಸುವ ಸಂಸ್ಥೆ ಉತ್ತಮ ಆರ್ಥಿಕ ಹಿನ್ನೆಲೆ ಹೊಂದಿದ್ದು, ಕಲಾತ್ಮಕ ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನೈಪುಣ್ಯತೆ ಇರಬೇಕು.

ಈಗಿರುವ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ ಅಸ್ತಿತ್ವಕ್ಕೆ ಬರಲಿದೆ. ಈ ಸಮುಚ್ಛಯದ ಮೇಲ್ಭಾಗದಲ್ಲಿ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ಇರಲಿದೆ. ಕಾವೇರಿ ಮಾತೆ ಪದತಲದಲ್ಲಿ ಮ್ಯೂಸಿಯಂ ಕಟ್ಟಡ ಇರಲಿದೆ. ಬೃಂದಾವನದ ಕಡೆಯಿಂದ ಇದರ ಅಣೆಕಟ್ಟೆಯ ಎತ್ತರವನ್ನು ದಾಟಲಿದೆ. ಅದೇ ರೀತಿ ಗೋಪುರವುಳ್ಳ ಗಾಜಿನಮನೆ ಕೂಡ. ಈ ಎರಡೂ ಕಟ್ಟಡಗಳಿಂದ ಅಣೆಕಟ್ಟೆಯ ವಿಹಂಗಮ ನೋಟ ಗೋಚರವಾಗಲಿದೆ. ಮ್ಯೂಸಿಯಂನಲ್ಲಿ ಕೆಆರೆಸ್, ಮೈಸೂರು, ಕರ್ನಾಟಕದ ಐತಿಹ್ಯ ಸಾರುವ ಕಲಾತ್ಮಕ, ಪ್ರಾಚ್ಯವಸ್ತುಗಳು ಇರಲಿವೆ.

ಮೈಸೂರು ಹಾಗೂ ಮಂಡ್ಯದ ಕೆಆರ್‌ಎಸ್ ಈಗಾಗಲೇ ಜಗತ್ಪ್ರಸಿದ್ಧವಾಗಿವೆ. ಇವುಗಳನ್ನು ವಿಶ್ವದಲ್ಲೇ ಅಗ್ರಗಣ್ಯ ಪ್ರವಾಸಿ ಆಕರ್ಷಣೆಯ ತಾಣವಾಗಿ ಪರಿವರ್ತಿಸುವುದು ಯೋಜನೆಯ ಉದ್ದೇಶ. ಈಗ ಬೃಂದಾವನದಿಂದ ರಾಜ್ಯ ಸರಕಾರಕ್ಕೆ ಬರುತ್ತಿರುವ ವಾರ್ಷಿಕ ಆದಾಯ ಕೇವಲ ಆರು ಕೋಟಿ ರುಪಾಯಿ. ಹೊಸ ಯೋಜನೆ ಪ್ರಕಾರ ವಾರ್ಷಿಕ 300 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಯಲಿದ್ದು, ಸರಕಾರಕ್ಕೆ 30 ಕೋಟಿ ರೂಪಾಯಿ ವರಮಾನ ಬರಲಿದೆ ಎಂದು ಅಂದಾಜು ಮಾಡಲಾಗಿದೆ. ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಯೋಜನಾ ವರದಿ ಹಾಗೂ ಒಪ್ಪಂದ ಕುರಿತು ಇದೇ ತಿಂಗಳು 20 ರಂದು ಕಾವೇರಿ ನೀರಾವರಿ ನಿಗಮದ ಅಂದಾಜು ಪರಿಶೀಲನಾ ಸಮಿತಿ ಸಭೆ ಅಂತಿಮಗೊಳಿಸಲಿದ್ದು, ನಂತರ ಕ್ರಮವಾಗಿ ಕಾವೇರಿ ನೀರಾವರಿ ನಿಗಮದ ಆಡಳಿತ ಮಂಡಳಿ ಸಭೆ, ಸರಕಾರದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕೂಲಂಕಷ ಪರಿಶೀಲನೆ ನಡೆಯಲಿದ್ದು ನಂತರ ಸಚಿವ ಸಂಪುಟ ಸಭೆ ಜಾಗತಿಕ ಟೆಂಡರ್ ಕುರಿತು ನಿರ್ಣಯ ಕೈಗೊಳ್ಳಲಿದೆ.

ಇಂದಿನ ಸಭೆಯಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ. ಎಸ್. ಸುಬ್ರಹ್ಮಣ್ಯ, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಜೈಪ್ರಕಾಶ್, ಪ್ರವಾಸೋದ್ಯಮ ಕಾರ್ಯದರ್ಶಿ ಅನಿಲ್ ಕುಮಾರ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಚ್.ಎಲ್. ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.