ಬೆಂಗಳೂರಿನಲ್ಲಿ ಐವರು ಪೊಲೀಸರ ವಿರುದ್ಧವೇ ಎಫ್ಐಆರ್

Photo credit-facebook

ಬೆಂಗಳೂರು: ಮಹಿಳೆಯೊಬ್ಬರ ಮನೆಗೆ ಅತಕ್ರಮ ಪ್ರವೇಶ ಮಾಡಿದ್ದ ರೌಡಿಗಳ ವಿರುದ್ಧ ದೂರು ದಾಖಲಿಸಿಕೊಳ್ಳಲು ನಿರಾಕರಿಸಿ ರೌಡಿಗಳ ಪರವಾಗಿ ನಿಂತ ಆರೋಪದ ಮೇಲೆ ಅವರು ಪೊಲೀಸರ ವಿರುದ್ಧವೇ ಇದೀಗ ಎಫ್ಐಆರ್ ದಾಖಲಿಸಲಾಗಿದೆ.

ಪಿಎಸ್ಐ ಮಂಜುನಾಥ್, ಪಿಎಸ್ಐ ರಂಗಪ್ಪ , ಎಎಸ್ಐ ಮುನಿರಾಜ,ಮುಖ್ಯಪೇದೆ ಹರೀಶ, ಮಹಿಳಾ ಮುಖ್ಯಪೇದೆ ಮಂಜುಳಾ ವಿರುದ್ದ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.ಪ್ರಭಾವತಿ ಎಂಬುವರ ಮನೆಗೆ ರೌಡಿಗಳು ಅತಿಕ್ರಮ ಪ್ರವೇಶ ಮಾಡಿ ಮನೆ ಬಾಗಿಲು, ಗೃಹಪಯೋಗಿ ವಸ್ತುಗಳು ಧ್ವಂಸ ಮಾಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ರೌಡಿಗಳ ಜೊತೆ ಕೆ.ಆರ್ ಪುರ ಪೊಲೀಸರೂ ಭೂ ಕಬಳಿಕೆ ಯತ್ನ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಐಪಿಸ ಸೆಕ್ಷನ್ 341,324,354,506,504,34 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಪ್ರಭಾವತಿ ಎಂಬುವರ ಮನೆಗೆ ತೆರಳಿದ್ದ ರೌಡಿಗಳು ಬದರಿಕೆ ಒಡ್ಡಿದ್ದರು ಈ ವೇಳೆ ಕೆ.ಆರ್ ಪುರ ಪೊಲೀಸ್ ಠಾಣೆಗೆ ರೌಡಿಗಳ ವಿರುದ್ದ ದೂರು ನೀಡಲು ತೆರಳಿದ್ದ ಪ್ರಭಾವತಿಯಿಂದ ದೂರು ಪಡೆಯಲು ಪೊಲೀಸರು ಹಣದ ಬೇಡಿಕೆ ಇಟ್ಟಿದ್ದರು. ಹಣ ನೀಡಲು ನೀರಾಕರಿಸಿದಾಗ ದೂರು ಪಡೆಯಲು ನಿರಾರಿಸಿದ್ದ ಪೊಲೀಸರು ರೌಡಿಗಳಿಗೆ ಸಾಥ್ ನೀಡಿ ದೂರುದಾರರಿಗೆ ಜೀವಬೆದರಿಕೆ ಹಾಕಿದ್ದರು ಎನ್ನುವ ಆರೋಪ ಕೇಳಿಬಂದಿದೆ.

ಪೊಲೀಸ್ರು ದೂರು ಪಡೆಯಲು ವಿಫಲವಾದ ಹಿನ್ನಲೆ ಕೊರ್ಟ್ ಮೊರೆ ಹೋಗಿದ್ದ ದೂರುದಾರೆ ಪೊಲೀಸರ ವಿರುದ್ಧವೇ ದೂರು ನೀಡಿದ್ದರು. ಆಸ್ತಿ ವಿಚಾರದಲ್ಲಿ ಪೊಲೀಸ್ರು ಮಧ್ಯ ಪ್ರವೇಶ ಮಾಡಬಾರದು ಎಂದು ನ್ಯಾಯಾಲಯದ ಆದೇಶವಿದ್ದರು ಆದೇಶ ನಿರ್ಲಕ್ಷ್ಯಿಸಲಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಎಫ್ಐಆರ್ ದಾಖಲಿಸಿ ಐವರು ಪೊಲೀಸರ ವಿರುದ್ಧವೇ ತನಿಖೆ ನಡೆಸುವಂತೆ ವೈಟ್ ಫಿಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಗೆ 10ನೇ ಎಸಿಎಂಎಂ ನ್ಯಾಯಾಲಯ ಸೂಚನೆ ನೀಡಿದೆ.

ಭದ್ರತೆ ದೃಷ್ಟಿಯಿಂದ ಟಿಪ್ಪುಜಯಂತಿ ಆಚರಣೆ ಸ್ಥಳ ಬದಲಾವಣೆ:ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ನ.10 ರಂದು ನಡೆಯಲಿರುವ ಟಿಪ್ಪುಜಯಂತಿ ಆಚರಣೆಯನ್ನು ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದ ಬದಲು ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆ ಒಳಗೆ ಮಾಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಭದ್ರತೆ ಸಂಬಂಧ ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸಭೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ಟಿಪ್ಪು‌ಜಯಂತಿ‌ ವೇಳೆ ಪರ ಅಥವಾ ವಿರೋಧ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶ ನೀಡುವಂತಿಲ್ಲ..‌ ಎಲ್ಲ ಜಿಲ್ಲೆಗಳಲ್ಲೂ ಸಭಾಂಗಣದಲ್ಲಿ‌ ಮಾತ್ರ ಆಚರಣೆಗೆ ಅವಕಾಶ ನೀಡಬೇಕು. ಜಯಂತಿ ಆಚರಣೆಯ ಸ್ಥಳ ಹೊರತು ಪಡಿಸಿ ಬೇರೆಡೆ ಪೋಸ್ಟರ್, ಬ್ಯಾನರ್ ಹಾಕುವಂತಿಲ್ಲ.ಸೋಶಿಯಲ್‌ ಮೀಡಿಯಾದಲ್ಲಿ ಅವಹೇಳನಕಾರಿ, ಪ್ರಚೋದನಾಕಾರಿ ಪೋಸ್ಟ್‌ ಹಾಕುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಭದ್ರತೆ ದೃಷ್ಟಿಯಿಂದ ಈ ಆಚರಣೆಯನ್ನು ರವೀಂದ್ರ ಕಲಾಕ್ಷೇತ್ರದಲ್ಲಿ‌ ಆಚರಣೆಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿ ಬ್ಯಾಂಕ್ಟೆಟ್ ಹಾಲ್‌ನಲ್ಲಿ ಆಚರಣೆ ಮಾಡಿದ್ದರೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಹೀಗಾಗಿ ಸ್ಥಳ ಬದಲಾವಣೆ ಮಾಡಿದ್ದೇವೆ. ಸರಕಾರದ ವತಿಯಿಂದ ಆಚರಿಸುವ ಎಲ್ಲ ಜಯಂತಿಗಳೂ ರವೀಂದ್ರ ಕಲಾಕ್ಷೇತ್ರದಲ್ಲಿಯೇ ಮಾಡುವುದರಿಂದ ಟಿಪ್ಪು ಜಯಂತಿ ಕೂಡ ಇಲ್ಲಿಯೇ ಅಚರಣೆ ಮಾಡಲು ಸೂಚಿಸಲಾಗಿದೆ ಎಂದರು.

ಎಲ್ಲ ಜಿಲ್ಲೆಗಳಲ್ಲೂ ಜಯಂತಿ ಆಚರಣೆಗೆ ಎಸ್‌ಪಿ ಹಾಗೂ ಡಿಸಿಗಳಿಗೆ ಸೂಚನೆ ನೀಡಲಾಗಿದೆ.‌ಇದಕ್ಕೆ ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ.ಬೇರೆ ರಾಜ್ಯಗಳಲ್ಲಿ ಚುನಾವಣೆ ಇರುವುದರಿಂದ ನಮ್ಮ ಕೆಎಸ್ ಆರ್‌ಪಿ‌ ಬೆಟಾಲಿಯನ್‌‌ ಕಳುಹಿಸಿದ್ದೇವೆ. ಹೀಗಾಗಿ
ರ್ಯಾಪಿಡ್ ಆ್ಯಕ್ಷನ್ ಫೋರ್ಸ್‌ ನನ್ನು ಟಿಪ್ಪು ಜಯಂತಿಗೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಆಚರಣೆ ಸಂದರ್ಭದಲ್ಲಿ ಗಲಭೆ, ಶಾಂತಿ ಭಂಗ ಮಾಡಲು ಪ್ರಯತ್ನ ಮಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಾಂತಿಭಂಗ ಮಾಡುವ ಹೇಳಿಕೆಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ.ರಾಜ್ಯ ಸರಕಾರ ಕಳೆದ ಮೂರು ವರ್ಷದಿಂದ ಆಚರಣೆ ಮಾಡುತ್ತಿದ್ದೇವೆ. ಕೆಲವರು ಈ ಜಯಂತಿಗೆ ಭಂಗ ತರುವ ಹೇಳಿಕೆ ನೀಡುತ್ತಿರುವುದರಿಂದ ಇಷ್ಟೆಲ್ಲ ಭದ್ರತೆ‌ ನಿಯೋಜಿಸಲಾಗಿದೆ ಎಂದರು.

ಈ ಹಿಂದೆ ಸಿಎಂ ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ವಿರೋಧಿ ಹೇಳಿಕೆ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಅವರು ಆಗ ವೈಯಕ್ತಿಕವಾಗಿ ಈ ಹೇಳಿಕೆ ನೀಡಿದ್ದರು. ಇದು ಮೈತ್ರಿ ಸರಕಾರ. ಅಲ್ಲದೆ, ಹಿಂದಿನ ಸರಕಾರದಲ್ಲಿ ತೆಗೆದುಕೊಂಡು ಎಲ್ಲ ಕಾರ್ಯ ಮುಂದುವರೆಸುವ ವಾಗ್ದಾನದಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.

ಸಿದ್ದಗಂಗಾ ಮಠದಲ್ಲಿ 10 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾ ಇದ್ದಾರೆ. ಅಲ್ಲಿಯ ಮಕ್ಕಳಿಗೆ ಕುಡಿಯುವ ನೀರಿನ ಸಂಬಂಧ ವಿಶೇಷ ಯೋಜನೆಯಡಿ ಬೋರ್‌ವೆಲ್ ಕೊರೆಸಿ ನೀರು ನೀಡಲಾಗುತ್ತಿತ್ತು. ಈಗ ಬೋರ್‌ವೆಲ್ ಒಣಗಿರುವ ಬಗ್ಗೆ ನನಗೂ‌ಮಾಹಿತಿ ಬಂದಿದೆ. ಹೀಗಾಗಿ ಆ ಮಕ್ಕಳಿಗೆ ಹೇಮಾವತಿಯಿಂದ ನೀರು ಹರಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಸಂಭ್ರಮದ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಿದ ದೀಪಿಕಾ ದಾಸ್!

ಬೆಂಗಳೂರು: ಕರ್ನಾಟಕ ರಾಜ್ಯ ಕಾಯರ್ ಕೋ ಆಪರೇಟಿವ್ ಫೆಡರೇಷನ್ ಮತ್ತು ಸನ್ ಎಂಟರ್ ಪ್ರೈಸ್ ನ ಸಹಯೋಗದಲ್ಲಿ ಬೆಂಗಳೂರು ಹಬ್ಬ 2018 ಕರಕುಶಲ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಮೇಳ ನಡೆಯುತ್ತಿದೆ. ಬೆಂಗಳೂರಿನ ಕೋರಮಂಗಲ ಮೈದಾನದಲ್ಲಿ ನವೆಂಬರ್ 2ರಿಂದ ನವೆಂಬರ್ 4ರವರೆಗೆ ನಡೆಯಲಿರುವ ಈ ಬೆಂಗಳೂರು ಹಬ್ಬವನ್ನು ಚಲನ ಚಿತ್ರ ನಟಿ ದೀಪಿಕಾ ದಾಸ್ ಅವರು ಉದ್ಘಾಟಿಸಿದ್ರು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿನಯ್ ರಾಘವೇಂದ್ರ ರಾಜ್‍ಕುಮಾರ್ ನಟಿಸಿರುವ ಅನಂತು ವರ್ಸಸ್ ನುಸ್ರತ್ ಚಿತ್ರ ತಂಡ ಮತ್ತು ಡಾಟರ್ ಆಫ್ ಪಾರ್ವತಮ್ಮ ಚಿತ್ರ ತಂಡದ ಕಲಾವಿದರು ಉಪಸ್ಥಿತರಿದ್ದರು.

ಬೆಂಗಳೂರು ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ದೀಪಿಕಾ ದಾಸ್, ನವೆಂಬರ್ ತಿಂಗಳು ಅಂದ್ರೆ ಪ್ರತಿಯೊಬ್ಬ ಕನ್ನಡಿಗರಿಗೂ ಸಂತಸ ಸಡಗರದ ತಿಂಗಳು. ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಪ್ರೀತಿಸಬೇಕು. ಹಾಗಂತ ಬೇರೆ ಭಾಷೆಯನ್ನು ದ್ವೇಷ ಮಾಡಬಾರದು ಅಂತಲ್ಲ. ಅನ್ಯ ಭಾಷಿಗರಿಗೂ ಕನ್ನಡ ಭಾಷೆಯನ್ನು ಕಲಿಸಿ ಕನ್ನಡ ಭಾಷೆಯನ್ನು ಬೆಳೆಸೋಣ ಎಂದು ಹೇಳಿದ್ರು.

ದೀಪಾವಳಿ ಹಬ್ಬದ ವೇಳೆ ನಿಮ್ಮ ಮನೆಯನ್ನು ಶೃಂಗಾರಗೊಳಿಸಲು ಮನೆಸೂರೆಗೊಳಿಸುವಂತಹ ಆಲಂಕಾರಿಕ ವಸ್ತುಗಳನ್ನು ಬೆಂಗಳೂರು ಹಬ್ಬ 2018ರ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಇಡಲಾಗಿದೆ. ಕರ್ನಾಟಕ ಕಾಯರ್ ಕೋ ಆಪರೇಟಿವ್ ಫೆಡರೇಷನ್‍ನ ಉತ್ಪನ್ನಗಳ ಜೊತೆಗೆ ದೇಶದ ವಿವಿಧ ರಾಜ್ಯದ ಜನಪದ, ಸಂಸ್ಕøತಿ ಹಾಗೂ ಕಲೆಗಳನ್ನು ಪ್ರತಿಬಿಂಬಿಸುವ ಚಿತ್ರಕಲೆಗಳ ಮಾರಾಟ ಮಳಿಗೆಗಳಿವೆ. ಅಲ್ಲದೆ ಅತ್ಯಾಕರ್ಷಕವಾದ ಕರ ಕುಶಲ ವಸ್ತುಗಳು, ಕೈಮಗ್ಗದ ಉತ್ಪನ್ನಗಳು, ಹ್ಯಾಂಡ್‍ಲೂಮ್ ಬಟ್ಟೆಗಳು ಸೇರಿದಂತೆ ವೈವಿಧ್ಯಮಯ ಕರಕುಶಲ ವಸ್ತುಗಳು ಬೆಂಗಳೂರು ಹಬ್ಬಕ್ಕೆ ಮೆರಗನ್ನು ನೀಡಲಿವೆ.

ಹಲವು ವಿನ್ಯಾಸದ ಸೀರೆಗಳು, ಸಿಲ್ಕ್ ಸೀರೆಗಳು, ಕಲಾಂಕಾರಿ ಸೀರೆಗಳು, ಕೊಲ್ಕತ್ತಾ ಸೀರೆಗಳು, ಹುಬ್ಬಳ್ಳಿ ಸೀರೆಗಳು, ಹ್ಯಾಂಡ್ ಲೂಮ್ ಸೀರೆಗಳು ಮಹಿಳೆಯರನ್ನು ಆಕರ್ಷಿಸಿದ್ರೆ, ಡಿಸೈನರ್ ಕುರ್ತಾಗಳು, ಲಕ್‍ನಾವಿ ಕುರ್ತಾಗಳು, ಕಲಾಂಕಾರಿ ಕುರ್ತಾಗಳು, ಕಾಶ್ಮೀರಿ ಕುರ್ತಾಗಳು, ಗುಜರಾತಿ ಕುರ್ತಾಗಳು, ಬಾಂಧಾನಿ ಕುರ್ತಾಗಳು ಮತ್ತು ಖಾದಿ ಕುರ್ತಾಗಳು, ಬಗೆ ಬಗೆಯ ದುಪ್ಪಟಗಳು ತರುಣಿಯರ ಅಂದವನ್ನು ಹೆಚ್ಚಿಸಲಿವೆ.

ವಿವಿಧ ರಾಜ್ಯಗಳ ಜ್ಯುವೆಲರಿಗಳ ಜೊತೆಗೆ ಸಿಲ್ವರ್ ಜರ್ಮನ್ ಜ್ಯುವೆಲರಿಗಳು, ಮರದ ಆಭರಣಗಳು, ಟ್ರೆಂಡಿ ಆಭರಣಗಳು, ಕರಕುಶಲತೆಯ ಜ್ಯುವೆಲರಿಗಳು ಹಾಗೂ ಸಾಂಪ್ರದಾಯಿಕ ಜ್ಯುವೆಲರಿಗಳು ಸೂಜಿಗಲ್ಲಿನಂತೆ ಆಕರ್ಷಿಸಲಿವೆ. ಅಷ್ಟೇ ಅಲ್ಲ, ಈ ಹಬ್ಬದಲ್ಲಿ ವಿವಿಧ ರಾಜ್ಯಗಳ ಸಿಹಿ ತಿಂಡಿ ತಿನಸುಗಳೂ ಇವೆ. ಹಾಗೇ ಶುಚಿ ರುಚಿಯ ಫುಡ್ ಸ್ಟಾಲ್‍ಗಳು ಕೂಡ ಗ್ರಾಹಕರ ಹೊಟ್ಟೆ ತುಂಬಿಸಲಿವೆ.

ಎಂ.ಪಿ ಪ್ರಕಾಶ್ ಪುತ್ರ ಎಂ.ಪಿ ರವೀಂದ್ರ ನಡೆದು ಬಂದ ಹಾದಿ

ಹರಪನಹಳ್ಳಿ : ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ ಅವರ ಏಕೈಕ ಪುತ್ರ ಮಾಜಿ ಶಾಸಕ ಎಂ.ಪಿ.ರವೀಂದ್ರ ಅನಾರೋಗ್ಯದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

೪೯ ವರ್ಷ ವಯಸ್ಸಿನ ಎಂ.ಪಿ.ರವೀಂದ್ರ ಅವರು ದಿನಾಂಕ ೫-೪-೧೯೬೯ರಂದು ಜನಿಸಿದ್ದರು. ಅವರಿಗೆ ತಾಯಿ ಎಂ.ಪಿ.ರುದ್ರಾಂಬ, ಮೂವರು ಸಹೋದರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ, ಇಂಜಿನಿಯರಿಂಗ್ ಪದವಿ ಅಪೂರ್ಣಗೊಳಿಸಿದ್ದಾರೆ.

ಮೂಲತಃ ಸ್ವಾತಂತ್ರ್ಯ ಹೋರಾಟ, ರಾಜಕೀಯ ಕುಟುಂಬದಲ್ಲಿ ಜನಿಸಿದ್ದರು. ತಂದೆ ಎಂ.ಪಿ.ಪ್ರಕಾಶ್‌ರು ಕುಟುಂಬ ಸಮೇತರಾಗಿ ನಾರಾಯಣದೇವರ ಕೆರೆ ಗ್ರಾಮ ತೊರೆದು, ವಕೀಲಿ ವೃತ್ತಿ ಹರಸಿ ಹಡಗಲಿಗೆ ಬಂದು ನೆಲೆಸುವ ಮೂಲಕ ಜನಪ್ರಿಯತೆಗಳಿಸಿ ರಾಜಕೀಯ ಪ್ರವೇಶಿಸಿದ್ದರು. ಸರಳ ಸಜ್ಜನ ರಾಜಕಾರಣಕ್ಕೆ ಹೆಸರಾಗಿದ್ದ ದಿ.ಎಂ.ಪಿ.ಪ್ರಕಾಶ್‌ರ ಏಕೈಕ ಪುತ್ರ ರವೀಂದ್ರ.
ತಂದೆ ಪ್ರಕಾಶ್‌ರ ರಾಜಕೀಯ ರಂಗದಲ್ಲಿ ಅಜಾತಶತ್ರು ಆಗಿದ್ದರು. ಅವರ ಹಾದಿಯಲ್ಲಿ ಮುನ್ನಡದೇ ಮಗ ರವೀಂದ್ರ ತಮ್ಮ ತಂದೆ ಕಾಲದಲ್ಲಿ ನಡೆದ ಚುನಾವಣೆಗಳಲ್ಲಿ ತೆರೆಯ ಹಿಂದೆ ಸಾಕಷ್ಟು ಪರಿಶ್ರಮಪಡುತ್ತಿದ್ದರು.

೧೯೮೩, ೧೯೮೫, ೧೯೯೪, ೨೦೦೪ರ ಚುನಾವಣೆಗಳಲ್ಲೂ ತಂದೆ ಪ್ರತಿನಿಧಿಸುತ್ತಿದ್ದ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ಕ್ಷೇತ್ರದಲ್ಲಿ ಸಕ್ರೀಯ ರಾಜಕಾರಣಿಯಾಗಿ ಜನರೊಟ್ಟಿಗೆ ಕೆಲಸ ಮಾಡಿದ್ದರು. ಹೊಸಪೇಟೆಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಸತತ ೪ ಬಾರಿ ಅಧ್ಯಕ್ಷರಾಗಿದ್ದರು. ಐದನೇ ಬಾರಿಯು ಅಧ್ಯಕ್ಷರಾಗಲಿದ್ದರು. ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ೨೦೧೩ರಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಅಭಿಮಾನಿಗಳ ಒತ್ತಾಸೆಯಿಂದ ಹಡಗಲಿ ತಾಲೂಕು ಉತ್ತಂಗಿ ಹಾಲು ಉತ್ಪಾದಕರ ಒಕ್ಕೂಟದಿಂದ ಚುನಾಯಿತರಾಗಿ, ಆ ಮೂಲಕ ೨೦೧೭ರಲ್ಲಿ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೂ ತೀವ್ರ ಪೈಪೋಟಿ ನಡೆಸಿದ್ದರು, ಆದರೆ ಅದೃಷ್ಟವಶಾತ್ ಅವರಿಗೆ ಅವಕಾಶ ಸಿಗಲಿಲ್ಲ.

೨೦೧೭, ನವಂಬರ್ ೨೬ರಂದು ದುಬಾರಿ ಚುನಾವಣೆಯಿಂದ ಬೇಸತ್ತು ಹರಪನಹಳ್ಳಿಯಲ್ಲಿ ರಾಜಕೀಯ ನಿವೃತ್ತಿ ಘೋಷಿಸಿ, ಕೆಲ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ನಂತರ ಸಿಂಗಾಪುರ್‌ಗೆ ತೆರಳಿ ಚಿಕಿತ್ಸೆ ಪಡೆದು, ಗುಣಮುಖರಾಗಿ ತವರಿಗೆ ಮರಳಿದ್ದರು.
ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿವೃತ್ತಿ ನಿರ್ಧಾರ ಹಿಂಪಡೆದು ೨೦೧೮ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಸಾಯಿ ಡೆವಲಪ್ಪರ‍್ಸ್, ಹುಬ್ಬಳ್ಳಿ ಕೈಜಾರ್ ಎಜುಕೇಷನ್, ಆರ್.ಜಿ.ಮಿನರಲ್ಸ್ ಸೇರಿದಂತೆ ಅನೇಕ ಕಂಪನಿಗಳಲ್ಲಿ ಷೇರು ಹೂಡಿಕೆ ಮಾಡಿದ್ದಾರೆ. ರಂಗಭೂಮಿ, ಚಿತ್ರರಂಗದಂತಹ ಸಾಂಸ್ಕೃತಿಕ ಕ್ಷೇತ್ರದಲ್ಲೂ ನಂಟು ಬೆಳೆಸಿಕೊಂಡಿದ್ದರು. ನಟ ಅಂಬರೀಷ್, ಶ್ರೀನಗರ ಕಿಟ್ಟಿ ಅವರ ಒಡನಾಟದಲ್ಲಿದ್ದರು.
ಶಾಸಕರಾಗಿದ್ದಾಗ ಅವರ ಕನಸಿನ ಕೂಸಾಗಿದ್ದ ದಾವಣಗೆರೆ ಜಿಲ್ಲೆಯಲ್ಲಿದ್ದ ಹಿಂದುಳಿದ ಹರಪನಹಳ್ಳಿ ತಾಲೂಕು ಪುನಃ ಬಳ್ಳಾರಿಗೆ ಸೇರಿಸುವ ಹೋರಾಟದಲ್ಲಿ ಯಶಸ್ವಿಯಾಗಿದ್ದರು. ಕ್ಷೇತ್ರದಲ್ಲಿ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ೫೧.೪೮ ಕೋಟಿ ವೆಚ್ಚದ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೆಜ್ ಯೋಜನೆ, ರೂ.೨೨೭ ಕೋಟಿ ವೆಚ್ಚದ ೬೦ ಕೆರೆಗಳಿಗೆ ನೀರು ತುಂಗಭದ್ರ ನದಿನೀರು ತುಂಬಿಸುವ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸಫಲರಾಗಿದ್ದರು. ಐತಿಹಾಸಿಕ ಮಹತ್ವ ಪಡೆದಿದ್ದ ಮಹಾತ್ಮಗಾಂಧೀಜಿ ತಂಗಿದ್ದ ಕೊಠಡಿ ಸ್ಮಾರಕವಾಗಿಸಿ ಪ್ರವಾಸಿ ತಾಣವಾಗಿಸಿದ್ದಾರೆ.

ಚಿಗಟೇರಿ ಪೊಲೀಸ್ ಠಾಣೆ ಕಟ್ಟಡ, ಭೀಮವ್ವ ಸಸ್ಯೋಧ್ಯಾನವನ (ಟ್ರೀಪಾರ್ಕ್), ದೇವರಾಜು ಅರಸು ಭವನ, ಶಿಲ್ಪಕಲೆ ನಿರ್ಮಾಣ, ಪ್ರತಿ ಹಳ್ಳಿಯಲ್ಲೂ ಶುದ್ದ ಕುಡಿಯುವ ನೀರಿನ ಘಟಕಗಳು, ಸಿಮೆಂಟ್ ರಸ್ತೆಯಂತಹ ಜನಪ್ರಿಯ ಕೆಲಸಗಳನ್ನು ಮಾಡಿದ್ದಾತೆ. ತಂದೆಗೆ ತಕ್ಕ ಮಗನಾಗಿ ಕಲಾ ಪೋಷಕರಾಗಿ ಹಡಗಲಿ ರಂಗಭಾರತಿ, ಹರಪನಹಳ್ಳಿ ಕಲಾಭಾರತಿ ಸಾಂಸ್ಕೃತಿಕ ಸಂಸ್ಥೆಗಳನ್ನು ಮುನ್ನಡೆಸುವಲ್ಲಿ ಸದಾ ಕ್ರಿಯಾಶೀಲರಾಗಿದ್ದ ಮಾಜಿ ಶಾಸಕ ಎಂ.ಪಿ.ರವೀಂದ್ರ ಇಂದು ನಮ್ಮೊಂದಿಗಿಲ್ಲ.

ಮಾಜಿ ಸಚಿವ ಎಂ‌ಪಿ ಪ್ರಕಾಶ್ ಪುತ್ರ ಎಂ ಪಿ ರವೀಂದ್ರ ಇನ್ನಿಲ್ಲ

ಬೆಂಗಳೂರು:ಕಳೆದ ಹಲವು ದಿನಗಳಿಂದ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ಎಂ ಪಿ ರವೀಂದ್ರ ನಿಧನರಾಗಿದ್ದಾರೆ.ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಎಂ ಪಿ ರವೀಂದ್ರ(೪೯)ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ೩.೪೫ ಕೊನೆಯುಸಿರು

ಹರಪನಹಳ್ಳಿ ಕ್ಷೇತ್ರದ ಮಾಜಿ ಶಾಸಕ, ಬಳ್ಳಾರಿ ಕಾಂಗ್ರೆಸ್ ನ ಆಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಅವರು,
೨೦೧೩ ರ ರಲ್ಲಿ ಹರಪನ ಹಳ್ಳಯಿಂದ ಸ್ಪರ್ಧಿಸಿ ಗೆದ್ದಿದ್ದರು.ಆದರೆ ೨೦೧೮ ರ ವಿಧಾನಸಭೆ ಚುನಾವಾಣೆಗೆ ಒಲ್ಲದ ಮನಸ್ಸಿನಿಂದ ಸ್ಪರ್ಧಿಸಿ ಸೋತಿದ್ದರು.

ಎಂ ಪಿ ರವೀಂದ್ರ ನಿಧನಕ್ಕೆ ಕೈ ಮುಖಂಡರು ಕಂಬನಿ ಮಿಡಿದಿದ್ದಾರೆ.ವಿಕ್ರಂ ಆಸ್ಪತ್ರೆಗೆ ತೆರಳಿದ ಮಾಜಿ ಸಿ ಎಂ‌ ಸಿದ್ರಾಮಯ್ಯ, ಜಮೀರ್ ಅಹ್ಮದ್
ಎಂ ಪಿ ಪ್ರಕಾಶ್ ಪುತ್ರ ರವೀಂದ್ರ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡ ಬಂದರು.

ಬೆಂಗಳೂರಿನ ಗಾಂಧಿಭವನ ಹತ್ತಿರದ ವಲ್ಲಭ ನಿಕೇತನದಲ್ಲಿ 3/11/2018 ರ ಬೆಳಗ್ಗೆ 9.00 ಗಂಟೆಯಿಂದ ಬೆಳಗ್ಗೆ 10.30 ರವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ.

ನಂತರ ರಸ್ತೆ ಮುಖಾಂತರ ಹರಪನಹಳ್ಳಿಗೆ ತೆರಳಿ ಮಧ್ಯಾಹ್ನ 3.00 ಗಂಟೆಯಿಂದ 6.00 ಗಂಟೆಯವರೆಗೆ ಸ್ಥಳೀಯ ಎ.ಡಿ.ಬಿ ಕಾಲೇಜು ಮೈದಾನದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ.

ನಂತರ ಸ್ವಗ್ರಾಮ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಗೆ ತೆರಳಿ ದಿನಾಂಕ 4/11/2018 ರ ಬೆಳಗ್ಗೆ 11.00 ಗಂಟೆಯವರೆಗೆ ಜಿ.ಬಿ.ಆರ್. ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ನಂತರ ಅಪರಾಹ್ನ 12.00 ಗಂಟೆಗೆ ದಿ.ಎಂ.ಪಿ.ಪ್ರಕಾಶ್ ರವರ ಸಮಾಧಿ ಹತ್ತಿರ ಅಂತಿಮ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಶ್ರೀಮತಿ ರುದ್ರಾಂಬ ಎಂ.ಪಿ.ಪ್ರಕಾಶ್ ಮತ್ತು ಕುಟುಂಬ ವರ್ಗ ಮಾಹಿತಿ ನೀಡಿದೆ.

ಎಲ್ಲೆಂದರಲ್ಲಿ ಕಸ ಹಾಕಿದರೆ 500 ರೂ. ದಂಡ:ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:ನಗರದಲ್ಲಿರುವ ಕಸದ ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸಿದ್ದು, ಕಂಡಕಂಡಲ್ಲಿ ಕಸ ಎಸೆದರೆ ಅಂಥವರಿಗೆ ವಿಧಿಸುತ್ತಿದ್ದ100 ರುಪಾಯಿ ದಂಡವನ್ನು 500 ರುಪಾಯಿಗೆ ಹೆಚ್ಚಿಸಿ, ಕಠಿಣವಾಗಿ ಈ ನಿಯಮವನ್ನು ಪಾಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಡಾ.ಜಿ.‌ ಪರಮೇಶ್ವರ್ ಹೇಳಿದರು.

ಮಲ್ಲೇಶ್ವರ ಬಿಬಿಎಂಪಿ ಕಚೇರಿಯಲ್ಲಿ ಕಸ ವಿಲೇವಾರಿ ಸಂಬಂಧ ಕರೆದಿದ್ದ ಅಧಿಕಾರಿಗಳ ಸಭೆ ಬಳಿಕ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೆಲವರು ಅನಧಿಕೃತವಾಗಿ ಕಂಡ ಕಂಡಲ್ಲಿ‌ ಕಸ‌ ಎಸೆಯುತ್ತಿರುವುದರಿಂದ ಕಸದ ಬ್ಲಾಕ್ ಸ್ಪಾಟ್‌ಗಳು ತಲೆ ಎತ್ತುತ್ತಿವೆ. ಹೀಗಾಗಿ ಅಂಥವರಿಗೆ ಕಠಿಣವಾಗಿ ದಂಡ ಹಾಕಲು‌ ಈಗಿರುವ ಮೊತ್ತವನ್ನು 500 ಕ್ಕೆ ಹೆಚ್ಚಿಸುವಂತೆ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದು, ಶೀಘ್ರವೇ ಒಪ್ಪಿಗೆ ನೀಡಲಾಗುವುದು. ಈ‌ಬ್ಲಾಕ್‌ ಸ್ಪಾಟ್‌ಗಳಲ್ಲಿ‌ಕಸ ಹಾಕುವವರ‌ ಮೇಲೆ ನಿಗಾ ವಹಿಸಿ, ದಂಡ ಹಾಕಲು ಪ್ರತಿ ವಾರ್ಡ್‌ಗಳಿಗೆ ನಿವೃತ್ತ ಯೋಧರೊಬ್ಬರನ್ನು ನೇಮಿಸಲು ಕೂಡ ನಿರ್ಧರಿಸಿದ್ದೇವೆ ಎಂದರು.

ನಗರದಲ್ಲಿ ಕಸನದ ಸಮಸ್ಯೆ ತೀವ್ರವಾಗುತ್ತಿದ್ದು, ನ್ಯಾಯಾಲಯ ಈ ಬಗ್ಗೆ ನಿರ್ದೇಶನ ನೀಡಿದ್ದು, ಇದನ್ನು ಸ್ವಾಗತಿಸುವೆ. ಪ್ರಸ್ತುತ ಕಸದ ನಿರ್ವಹಣೆಯನ್ನು‌ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ. ನಗರದಲ್ಲಿ 13 ಮಿಲಿಯಂ ಜನಸಂಖ್ಯೆ ಇದ್ದು, 29 ಲಕ್ಷ ಮನೆಗಳಿವೆ. ಇದರಲ್ಲಿ 5 ಲಕ್ಷ ಕಮರ್ಷಿಯಲ್ ಇದೆ. ರೆಸಿಡೆನ್ಸಿ‌ಯಿಂದ ಒಟ್ಟು 4,200 ಹಾಗೂ ಹೋಟೆಲ್‌ ಕಲ್ಯಾಣ ಮಂಟಪ ಇತರೆ 1500 ಸೇರಿ ಒಟ್ಟು 5,700 ಟನ್ ಕಸ ಉತ್ಪಾದನೆಯಾಗುತ್ತಿದೆ.ಇದರ ನಿರ್ವಹಣೆಗೆ 4,213 ಆಟೊ ಟಿಪ್ಪರ್ಸ್‌ಗಳು ಮನೆಮನೆಗೆ ತೆರಳಿ ಕಸ ಸಂಗ್ರಹಿಸಲಿದೆ. 566 ಕಾಂಪ್ಯಾಕ್ಟರ್ಸ್ ವಾಹನ, 8 ಮೆಕ್ಯಾನಿಕಲ್ ಸ್ವೀಪರ್ಸ್ ವಾಹನಗಳಿದ್ದು, 18,500 ಪೌರ ಕಾರ್ಮಿಕರಿದ್ದಾರೆ.166 ನಿರ್ವಹಣಾ ಘಟಕ, ಡ್ರೈವೇಜ್ ಕಲೆಕ್ಷನ್ ಸೆಂಟರ್, 11 ಕಡೆ ಬಯೋ ಮಿಥನೇಷನ್ ಪ್ಲಾಂಟ್‌ ಇದ್ದು ೬ ಪ್ಲಾಂಟ್‌ಗಳು ಕಾರ್ಯ‌ನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

ಕಸ ನಿರ್ವಹಣೆಗೆ ಈಗಿರುವ ಕಾಂಪ್ಯಾಕ್ಟರ್‌ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಆಟೋ ಟಿಪ್ಪರ್‌ಗಳಿಗೂ ಜಿಪಿಎಸ್‌ ಅಳವಡಿಸುವ ಚಿಂತನೆ ಇದೆ.ವಾಹನ ಖರೀದಿಗೆ ಹೊಸದಾಗಿ ಟೆಂಡರ್ ಕರೆಯುವ ಸಂದರ್ಭದಲ್ಲಿ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್‌ಗಳನ್ನು ಗುತ್ತುಗೆದಾರರೇ ನಿರ್ವಹಿಸುವ ಅಂಶವನ್ನು ಅಳವಡಿಸಲಾಗುವುದು ಎಂದರು.

ಪ್ರಸ್ತುತ ಎಂಟು ಮೆಕ್ಯಾನಿಕಲ್ ಸ್ವೀಪರ್ಸ್‌ ಮಷಿನ್‌ಗಳಿದ್ದು, ಹೊಸದಾಗಿ ಈ ವಾಹನ ಖರೀದಿಗೆ ಟೆಂಡರ್ ಕರೆಯಲಾಗುವುದು.ಈಗಿರುವ ಬೆಲ್ಲಳ್ಳಿ ಕ್ವಾರಿ ಮೂರು ತಿಂಗಳಲ್ಲಿ ಪೂರ್ಣಗೊಂಡು ಮುಚ್ಚಲಾಗುತ್ತದೆ. ಇದಕ್ಕೆ ಪರ್ಯಾಯವಾಗಿ ದೊಡ್ಡಬಳ್ಳಾಪುರದಲ್ಲಿರುವ ಟೆರಾಫಾರ್ಮಾನನ್ನು ಆಧುನೀಕರಿಸಿ ಪ್ರಾರಂಭಿಸಲಾಗುವುದು. ಇದರ ಜೊತೆಗೆ ಉಲ್ಲಳ್ಳಿ, ಮಾರೇನಹಳ್ಳಿ, ಬಾಗಲೂರು ಕ್ವಾರಿಯ ಪರ್ಯಾಯ ವ್ಯವಸ್ಥೆ ಮಾಡಲು ಚರ್ಚಿಸಲಾಗಿದೆ ಎಂದರು.

ಕಸದಿಂದ ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ಬಿಬಿಎಂಪಿಯಿಂದ‌ ಆರು ತಿಂಗಳೊಳಗೆ ಪ್ರಾರಂಭಿಸಲು ಸೂಚಿಸಿದ್ದೆನೆ. ಬಿಡದಿ ಬಳಿ ಬೆಸ್ಕಾಂ ವತಿಯಿಙದ ತೆರೆಯುತ್ತಿರುವ ವಿದ್ಯುತ್ ಉತ್ಪಾದನಾ ಕೇಂದ್ರ ಕೆಲವೇ ದಿನಗಳಲ್ಲಿ ತೆರೆಯಲಿದೆ.ಪ್ರತಿ ಬಿಬಿಎಂಪಿ ವಲಯದಲ್ಲಿ ಕಸ ನಿರ್ವಹಣೆಗೆಂದೇ ಸಹಾಯಕ ಇಂಜಿನಿಯರ್‌ಗಳನ್ನು ನೇಮಕ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ
ಹಿರಿಯ ಆರೋಗ್ಯಾಧಿಕಾರಿಗಳನ್ನು ನೇಮಿಸಿ‌ ಇದರ ಜವಾಬ್ದಾರಿ ನೀಡಲಾಗಿದೆ.ಗುತ್ತಿಗೆ ಮೇಲೆ ನೇಮಿಸಿರುವ ಈಗಿರುವ ಆರೋಗ್ಯಾಧಿಕಾರಿಗಳು ಹಾಗೂ ದಫೇದಾರ್‌ಗಳನ್ನು ಮುಂದುವರೆಸಲಾಗುತ್ತದೆ ಎಂದರು.

ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಿಸಿ, ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಿದೆ. ಎರಡು ವರ್ಷ ಹೊಸ ವಾಹನಗಳ‌ ನೋಂದಣಿಯನ್ನು ನಿಲ್ಲಿಸುವುದು, ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವುದು ಸೇರಿ ಹಲವು ವಿಚಾರ ಚರ್ಚೆಯಲ್ಲಿ ನಡೆದಿದೆ ನೋಂದಣಿ ನಿಲ್ಲಿಸುವುದು ಕೇವಲ ಯೋಚನೆಯಷ್ಟೆ. ಇದನ್ನೇ ಜಾರಿ ಮಾಡಲು ಹೊರಟಿಲ್ಲ.‌ ದೆಹಲಿಯಲ್ಲಿ ಈಗಾಗಲೇ ಮಾಲಿನ್ಯ ಮಿತಿ ಮೀರಿದ್ದು, ಆ ಪರಿಸ್ಥಿತಿ ಬೆಂಗಳೂರಿಗೆ ಬರುವ ಮುನ್ನ ಎಚ್ಚೆತ್ತು ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಹಲವು ವಿಚಾರ ಚರ್ಚೆಯ ಹಂತದಲ್ಲಿದೆ‌ ಎಂದು ಸ್ಪಷ್ಟನೆ ನೀಡಿದರು.