ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಶಿಸ್ತುಕ್ರಮ: ಬಂಡೆಪ್ಪ ಖಾಶೆಂಪೂರ

ಬೀದರ್: ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಪ್ಲಾನ್ ತಯಾರಿಸುವ‌ ವಿಷಯದಲ್ಲಿ ಬಹುತೇಕ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಕೆಲವು ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನ.೨ ರಂದು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಡೆದ ಸಭೆಗಳಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ಕೈಗಾರಿಕಾ ವಲಯಗಳನ್ನು ಆದ್ಯತಾ ವಲಯ ಎಂದು ಗುರುತಿಸಿ, ಇಲ್ಲಿನ ಕಾರ್ಯಕ್ಕೆ ಮೊದಲ ಆದ್ಯತೆ ನೀಡಲು ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿತ್ತು. ಈ ಕ್ಷೇತ್ರಗಳಲ್ಲಿ ನೀವು ಮಾಡಿದ್ದೇನು? ಮಾಡಬೇಕಿರುವುದೇನು? ಎಂಬುದರ ಬಗ್ಗೆ ಒಂದು ಪ್ರಸ್ತಾವನೆ ತಯಾರಿಸಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ,
ಯಾವ ಅಧಿಕಾರಿಗಳು ಕೂಡ ಇಲ್ಲಿವರೆಗೆ ತಮ್ಮನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿಲ್ಲ. ಯಾರು ಕೂಡ ಇದುವರೆಗೆ ವರದಿ ನೀಡಿಲ್ಲ. ಅಧಿಕಾರಿಗಳ ಈ ಕಾರ್ಯವೈಖರಿ ಸರಿಯಲ್ಲ. ವರದಿ ಕೇಳಲು ನಿಮ್ಮನ್ನು ಇಲ್ಲಿಗೆ ಕರೆದಿಲ್ಲ. ಕೆಡಿಪಿ ಅಥವಾ ಇನ್ನೀತರ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದ ಸೂಚನೆಗಳಿಗೆ ಬೆಲೆ ಇಲ್ಲವೇ? ಎಂದು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಹೇಳಿದ ಕೆಲಸವನ್ನು ಮಾಡುವಲ್ಲಿ ಆಸಕ್ತಿ ತೋರದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು ಎಂದು ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರಿಗೆ ತಿಳಿಸಿದರು.

ಐದು ಆದ್ಯತಾ ವಲಯಗಳಲ್ಲಿ ಬದಲಾವಣೆ ಎದ್ದು ಕಾಣುವ ನಿಟ್ಟಿನಲ್ಲಿ ಕೆಲಸ ನಡೆಯಲು ಯೋಜನೆ ರೂಪಿಸಲು ತಿಳಿಸಲಾಗಿತ್ತು. ಎಚ್ಕೆಆರ್ಡಿಬಿನಲ್ಲಿ ಅನುದಾನ ಇದೆ. ಹಣಕ್ಕೆ ಕೊರತೆ ಇಲ್ಲ ಎಂದು ಕೂಡ ಹೇಳಲಾಗಿತ್ತು ಎಂದು ಸಚಿವರು ಮತ್ತೊಮ್ಮೆ ಅಧಿಕಾರಿಗಳಿಗೆ ನೆನಪಿಸಿದರು.

*ಹಣ ತರಲು ಸಿದ್ಧ* : ಜಿಲ್ಲೆಗೆ ಹೆಚ್ಚಿನ ಅನುದಾನ ತರಲು ನಾನು ಈಗಲೂ ಸಿದ್ದನಿದ್ದೇನೆ. ವಿಶೇಷ ಪ್ಯಾಕೇಜ್ ನೀಡಲು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ಐದು ವಲಯಗಳಲ್ಲಿ
ಏನು ಮಾಡಬಹುದು ಎಂಬುದರ ಬಗ್ಗೆ ಆಯಾ ಇಲಾಖಾಧಿಕಾರಿಗಳು ಇನ್ನಾದರೂ ಪ್ರಸ್ತಾವನೆ ತಯಾರಿಸಿ ಕೂಡಲೇ ಸಲ್ಲಿಸಬೇಕು ಎಂದು ತಿಳಿಸಿದರು.
207 ಕೋಣೆಗಳನ್ನು ಡೆಮಾಲಿಸ್ ಮಾಡಲಾಗಿದೆ. ಅಧ್ಯಯನದಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಅವರಿಗೆ ವಿಶೇಷ ತರಗತಿ ನಡೆಸಲು ಯೋಜಿಸಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು. ಈ ಹಿಂದೆ ತಿಳಿಸಿದ ಕೆಲಸವನ್ನೇಕೆ ಮಾಡಿಲ್ಲ ಎಂದು ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗೆ ಪ್ರಶ್ನಿಸಿದರು.ಕೂಡಲೇ ಕ್ರಿಯಾಯೋಜನೆ ರೂಪಿಸಿ. ಅದನ್ನು ತಮ್ಮ ಬಳಿ ತಂದು ವಿವರಿಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

*ವ್ಯಾಪಕ ಅರಿವು ಮೂಡಿಸಿ* : ವಿಪರೀತ ಹೆಚ್ಚುತ್ತಿರುವ ಡೆಂಗೆ ಮತ್ತು ಎಚ್1ಎನ್1 ತಡೆಗೆ ಕಾರ್ಯಕ್ರಮ ರೂಪಿಸಬೇಕು. ಪ್ರತಿಯೊಂದು ಹಳ್ಳಿನಲ್ಲಿ ಕರಪತ್ರ ವಿತರಣೆಯಂತಹ ಜಾಗೃತಿ ಕಾರ್ಯಕ್ರಮಗಳಾಗಬೇಕು ಎಂದು ಸಚಿವರು ಡಿಎಚ್ಒ ಅವರಿಗೆ ಸೂಚಿಸಿದರು. ಟಿವಿ‌ವಾಹಿನಿಯಲ್ಲಿ ವಾರ್ತಾ ಇಲಾಖೆಯ ಮೂಲಕ ಪ್ರಚಾರ ನಡೆಸಲು ಪ್ರಸ್ತಾವನೆಯನ್ನು ಸಲ್ಲಿಸಿ ಕ್ರಮವಹಿಸಿ ಎಂದು ವಾರ್ತಾಧಿಕಾರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
*ತಿಂಗಳ ಗಡುವು* : 6 ತಿಂಗಳ ಬಳಿಕ ಯಾವುದಾದರೂ ಒಂದು ಕೇಸ್ ಬೇರೆಡೆ ಹೋದರೆ ತಮ್ಮ ಮೇಲೆ ಕ್ರಮ ಜರುಗಿಸುತ್ತೇನೆ. ಹೀಗಾಗಿ ನೀವು ಆಸ್ಪತ್ರೆ ಸುಧಾರಣೆಗೆ ಹೆಚ್ಚಿನ ಗಮನ ಕೊಡಿ. ತಿಂಗಳೊಳಗೆ ಶೆ.80 ರಷ್ಟು ಸುಧಾರಣೆ ಅಲ್ಲಿ ಕಾಣಬೇಕು ಎಂದು ಸಚಿವರು ಬ್ರಿಮ್ಸ್ ನಿರ್ದೇಶಕರಿಗೆ ಸೂಚಿಸಿದರು.
*ಬರ ಪರಿಹಾರ ಕಾರ್ಯ* :
ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಬರ ಘೋಷಣೆಯಾಗಿದೆ. ಇಲ್ಲಿ ಪರಿಹಾರ ಕಾರ್ಯ ತೀವ್ರ ರೀತಿಯಲ್ಲಿ ನಡೆಯಲಿ ಎಂದು ಸಚಿವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ, ಜಿಪಂ ಸಿಇಓ ಮಹಾಂತೇಶ ಬೀಳಗಿ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹಾಗು ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಹಾಸನ ಅಭಿವೃದ್ದಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ

ಹಾಸನ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯಲ್ಲಿ ಹೊಸ ಅಭಿವೃದ್ಧಿ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.

ಮಾಜಿ ಪ್ರಧಾನಿ ಹಾಲಿ ಲೋಕಸಭಾ ಸದಸ್ಯರಾದ ಹೆಚ್.ಡಿ ದೇವೇಗೌಡ ,ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ ರೇವಣ್ಣ, ಪ್ರವಾಸೋದ್ಯಮ ಸಚಿವರಾದ ಸಾ.ರಾ. ಮಹೇಶ್, ಜಿಲ್ಲೆಯ ಶಾಸಕರು ಹಾಗೂ ವಿವಿಧ ಇಲಾಖೆಗಳ ರಾಜ್ಯಮಟ್ಟದ ಅಧಿಕಾರಿಗಳು ಉಪಸ್ಥಿತಿಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ಹೇಮಾವತಿ ಹಾಗೂ ಯಗಚಿ ಜಲಾಶಯಗಳ ಕೆಳಭಾಗ ಉದ್ಯಾನ ಅಭಿವೃದ್ಧಿಗೆ ಆಲಂಕಾರಿಕ ಕಾಮಗಾರಿಗಳ ಕುರಿತು ಸಭೆಯಲ್ಲಿ ಪ್ರಾತ್ಯಕ್ಷಿಕ ಏರ್ಪಡಿಸಲಾಗಿತ್ತು.ಈಗಿನ ಯೋಜಿತ ನೀಲ ನಕಾಶೆ ಪರಶೀಲಿಸಿ, ವಿವರ ಪಡೆದ ಮುಖ್ಯ ಮಂತ್ರಿಯವರು ಗೊರೂರು ಹಾಗೂ ಯಗಚಿಗಳಲ್ಲಿ ಜಲ ಸಾಹಸ ಮನರಜನೆಗಳು, ಕ್ರೀಡೆಗಳ ಜೊತೆಗೆ, ಜಿಲ್ಲೆಯ ಸಾಂಸ್ಕೃತಿಕ, ಐತಿಹಾಸಿಕ, ಪ್ರಕೃತಿಕ ಹಿನ್ನಲೆಯಲ್ಲಿ ದೇಶದಲ್ಲೇ ವಿನೂತನವಾದ ಉದ್ಯಾನವನಳನ್ನು ಸೃಷ್ಠಿ ಮಾಡಲು ಅಗತ್ಯ ಕ್ರಮವಹಿಸುವಂತೆ ಮುಖ್ಯಮಂತ್ರಿ ಅವರು ಸೂಚಿಸಿದರು.

ಹಾಸನ ನಗರದ ಚನ್ನಪಟಣ್ಣ ಕೆರೆ ಶ್ರೀಘದಲ್ಲಿ ಕಾಮಗಾರಿ ಪ್ರಾರಂಭಕ್ಕೆ ಅಂಗಳದಲ್ಲಿ ವಿಹಾರಧಾಮದ ಅಭಿವೃದ್ದಿಗೆ ಈಗಾಗಲೇ ಬಜೆಟ್‍ಗನಲ್ಲಿ ಅನುದಾನ ಕಾಯ್ದಿಸಿದ್ದಾಗಿ ಅನುಮೋದನೆ ಒದಗಿಸುವುದು ಎಂದು ಮುಖ್ಯಮಂತ್ರಿ ಹೇಳಿದರು.

ಹೊಳೆನರಸೀಪುರ ನಗರದ ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಪಿ.ಎನ್.ಸಿ. ಸೇತುವೆ ಮುಖೇನ ಹೋಗುವ ರಸ್ತೆಯ ಅಭಿವೃದ್ದಿಗೆ ಸುಮಾರು 9 ವರ್ಷಗಳಿಂದ ರೈತರ ಜಮೀನುಗಳಿಗೆ ಭೂ ಪರಿಹಾರದ ಹಣದ ಆಕ್ಷೇಪಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹಾಸನ ಜಿಲ್ಲೆಯಲ್ಲಿ ಬೇಲೂರು ಮತ್ತು ಹಳೇಬೀಡಿನಲ್ಲಿ ಖಾಲಿ ಇರುವ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಕುರಿತು ಬೆಮಗಳೂರಿನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಯಿತು.

ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ ಅವರು ಮಾತನಾಡಿ ಹಾಸನ ನಗರದ ಹೆಚ್.ಡಿ ದೇವೇಗೌಡ ನಗರ ಮತ್ತು ಎಸ್.ಎಂ ಕೃಷ್ಣ ನಗರದ ಮಧ್ಯ ಭಾಗದಲ್ಲಿ ಖಾಲಿಯಿರುವ 7 ಎಕರೆ 20 ಗುಂಟೆ ಜಮೀನಿನಲ್ಲಿ ಮತ್ತು ಎಸ್.ಎಂ ಕೃಷ್ಣ ನಗರದಲ್ಲಿ ಖಾಲಿಯಿರುವ ಜಾಗದಲ್ಲಿ ನಿವೇಶನಗಳನ್ನು ವಿತರಿಸುವ ಬಗ್ಗೆ ಮತ್ತು ಮನೆಗಳನ್ನು ನಿರ್ಮಿಸುವ ಬಗ್ಗೆ ಹಾಗೂ ಕಾರ್ಮಿಕರಿಗೆ ಹಾಸನ ನಗರದ ಮೋಚಿ ಕಾಲೋನಿ, ಮೆಹಬೂಬ್ ನಗರ, ಚಿಕ್ಕನಾಳು, ಟಿಪ್ಪುನಗರ, ಸಿದ್ಧಯ್ಯ ನಗರ, ಶ್ರೀನಗರ, ವಿಶ್ವನಾಥ ನಗರ, ದೇವಿನಗರ, ರಂಗೋಲಿ ಹಳ್ಳ, ರಾಜಕುಮಾರ್ ನಗರ ಹಾಗೂ ಚಿಪ್ಪಿನಕಟ್ಟೆ ಬಡಾವಣೆಗಳಲ್ಲಿ ಬಡವರು ಹಲವಾರು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಅವರಿಗೆ ನಿವೇಶನ ಮಂಜೂರು ಮಾಡುವ ಬಗ್ಗೆ ಹಾಗೂ ಹಾಸನ ನಗರದಲ್ಲಿ ಬಡವರಿಗೆ ನಿವೇಶನ ರಚಿಸಲು ಅವಶ್ಯಕ ಜಮೀನುಗಳನ್ನು ಖರೀದಿಸಲು ಕುರಿತು ಯೋಜನೆಗಳನ್ನು ವಿವರಿಸಿದರು,

ವಸತಿಹೀನರಿಗೆ ಶೀಘ್ರ ನಿವೇಶನ ಒದಗಿಸಲು ಸಹಕಾರ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಮಾಡಿದರು. ಹಾಸನ ನಗರದ ಗಾಡೇನಹಳ್ಳಿ ಸಮೀಪ ಉದ್ದೇಶಿತ ಬಂಧಿಖಾನೆ ನಿರ್ಮಾಣದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲೆಯಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಅಭಿವೃದ್ದಿ ಯೋಜನೆ: ಮುಖ್ಯಮಂತ್ರಿ ಘೋಷಣೆ

ಹಾಸನ: ಹಾಸನ ಜಿಲ್ಲೆಯಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಅಭಿವೃದ್ದಿಗೆ ನೀಲ ನಕಾಶೆ ಸಿದ್ದವಾಗುತ್ತಿದ್ದು ಶೀಘ್ರದಲ್ಲೇ ಅದಕ್ಕೊಂದು ರೂಪ ಹಾಗೂ ಚಾಲನೆ ದೊರೆಯಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಹಾಸನ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಸಚಿವರು, ಶಾಸಕರು ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಈ ಮಾಹಿತಿ ನೀಡಿದರು.

ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಹೇಮಾವತಿ, ಯಗಚಿ ಬೇಲೂರು ಹಳೇ ಬೀಡುಗಳನ್ನು ಕೇಂದ್ರ ವನ್ನಾಗಿರಿಸಿಕೊಂಡು ರೂ. 150000 ಕೋಟಿಗೂ ಅಧಿಕ ಮೊತ್ತದ ಪ್ರವಾಸಿ ಆಕರ್ಷಣೆಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದು ಜೈಪುರ ಮೂಲಕ ಇಂಟೆಕ್ ವಾಸ್ತು ವಿನ್ಯಾಸ ಸಂಸ್ಥೆ ಪ್ರಾರಂಭಿಕ ಹಂತದ ನೀಲ ನಕಾಶೆ ಸಿದ್ದಪಡಿಸಿ ನೀಡಿದೆ. ಪ್ರಾರ್ಥಮಿಕ ಹಂತದ ಪರಿಶೀಲನೆ ಹಾಗೂ ಚರ್ಚೆಗಳು ನಡೆದಿದ್ದು ಬೆಂಗಳೂರಿನಲ್ಲಿ ಮತ್ತೊಂದು ಉನ್ನತ ಮಟ್ಟದ ಸಭೆ ನಡೆಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಬೇಲೂರು ಹಾಗೂ ಯಗಚಿ ಅಣೆಕಟೆಗಳ ಮುಂಭಾಗ ಬೃದಾವನಕ್ಕಿಂತಲೂ ಆಕರ್ಷೇಣಿವಾದ ಉದ್ಯಾನವನ, ಥೀಂ ಪಾರ್ಕ್, ಜಲಸಾಹಸ ಮನರಂಜನೆಗಳು, ಕ್ರೀಡೆಗಳು, ರಾತ್ರಿ ಸಫಾರಿ, ವಾಸ್ತು ವಿನ್ಯಾಸ ಸೌಂದರ್ಯಭಿವೃದ್ದಿಗೆ ಯೋಜಿಸಲಾಗಿದೆ. ಚನ್ನಪಟ್ಟಣ ಕೆರೆ ಆವರಣದಲ್ಲಿ ವಿಶೇಷ ಅಭಿವೃದ್ದಿ ಚಟುಚಟಿಕೆಗಳು ನಡೆಯಲಿವೆ. ಜಿಲ್ಲೆಯಲ್ಲಿ ಎಲ್ಲಾ ಪ್ರವಾಸೋದ್ಯಮ ಅಭಿವೃದ್ದಿಗೆ ಸಾವಿರಾರು ಕೋಟಿ ವೆಚ್ಚವಾಗಲಿದ್ದು ಚೀನಾ, ಜಪಾನ್ ಮತ್ತಿತರ ದೇಶಗಳಿಂದ ಹೂಡಿಕೆದಾರರು ಬಂಡವಾಳ ತೊಡಗಿಸಲು ಮುಂದಾಗಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ದಿಗೂ ಇದರಿಂದ ಅನುಕೂಲವಾಹಲಿದೆ ಎಂದು ಕುಮಾರಸ್ವಮಿ ಮಾಹಿತಿ ನೀಡಿದರು. ಈಗಾಗಲೇ ಅಭಿವೃದ್ದಿ ಬಜೆಟ್‍ನಲ್ಲಿ 50 ಕೋಟಿ ಮೀಸಲಿರಿಸಲಾಗಿದ್ದು ಹಂತದ ಯೋಜನೆಗೆ ರೂ. 126 ಕೋಟಿ ಅನುದಾನ ಒದಗಿಸಲಾಗುವುದು ಮುಂಬರುವ ಕ್ಯಾಬಿನೆಟ್‍ನಲ್ಲಿ ಈ ವಿಷಯ ಚರ್ಚಿಸಿ ಅನುಮೋದನೆ ದೊರೆಕಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.

ಈ ವರ್ಷ ಬಾರಿ ಮಳೆಯಿಂದ ಜಿಲ್ಲೆಯಲ್ಲಿಯೂ ನೂರಾರು ಶಾಲಾ, ಕಾಲೇಜು ಕಟ್ಟಡಗಳು ಹಾನಿಗೀಡಾಗಿವೆ. ಅವುಗಳ ದುರಸ್ಥಿಗೆ 15 ಕೋಟಿ ರೂ ಅನುದಾನ ಒದಗಿಸಲಾಗುವುದು. ಬೇಲೂರಿ ತಾಲ್ಲೂಕಿನಲ್ಲಿಯೂ ಸಾಕಷ್ಟು ಹಾನಿ ಸಂಭವಿಸಿದ್ದು ಅದನ್ನು ಅತಿವೃಷ್ಟಿ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಬಗ್ಗೆ ಗಮನ ಹರಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಸತಿ ಹೀನ ಬಡವರನ್ನು ಗುರುತಿಸಿ ಸೂಕ್ತ ನಿವೇಶನ ಮತ್ತು ಸೌಕರ್ಯ ಒದಗಿಸಲು ಸೂಚನೆ ನೀಡಲಾಗಿದೆ ಎಂದ ಮುಖ್ಯಮಂತ್ರಿ ಅಭಿವೃದ್ದಿ ಕಾರ್ಯಗಳಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲಮನ್ನಾಕ್ಕೆ ಬಜೆಟ್‍ನಲ್ಲಿಯೂ ಅನುದಾನ ಘೊಷಿಸಿದೆ. ಸಹಾಕಾರ ಬ್ಯಾಂಕ್‍ಗಳ ಸಾಲಮನ್ನಾ ಕಂತುಗಳು ಬಿಡುಗಡೆಯಾಗಿದೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಈಗ ಸಹಕಾರ ನೀಡುವ ಸೂಚನೆ ನೀಡಿವೆ ಇದೇ ತಿಂಗಳು 10ಲಕ್ಷ ಜನರಿಗೆ ಖುಣ ಮುಕ್ತ ಪತ್ರ ವಿತರಿಸಲಾಗುವುದು ಎಂದು ಅವರು ಹೇಳಿದರು.

ಯಾವುದೇ ರೈತರು ಕೃಷಿಗಾಗಿ ಸಾಲದ ಹೊರೆ ಹೊರುವಂತಾಗಬಾರದು, ಆತ್ಮಹತ್ಯೆ ಮಾಡಿಕೊಳ್ಳುವಂತಾಗಬಾರದು ಅದಕ್ಕೆ ಕೃಷಿ ಯೋಜನೆಗಳ ಮಾರ್ಪಡಿಗೆ ಚಿಂತನೆ ನಡೆಸಲಾಗಿದೆ ಪ್ರತಿಯೊಬ್ಬ ನಾಗರೀಕರೂ ನೆಮ್ಮದಿಯಿಂದ ಗೌರವಯುತ ಜೀವನ ನಡೆಸುವಂತಾಗಬೇಕು ಅದಕ್ಕಾಗಿ ತಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಹಾಸನಾಂಬೆ ದರ್ಶನ ಪಡೆದು ಪ್ರಾರ್ಥನೆ ಸಮರ್ಪಿಸಿದ್ದೇನೆ ಜಿಲ್ಲಾ ಅಭಿವೃದ್ದಿಗೆ ಶಾಶ್ವತ ಬೃಹತ್ ಯೋಜನೆ ನೀಡಬೇಕೆಂಬುದು ತಮ್ಮ ಹಂಬಲ ಮಾಜಿ ಪ್ರಧಾನಿ ದೇವೇಗೌಡರ ಒತ್ತಾಸೆಯಾಗಿದೆ ಅದನ್ನು ಈಡೇರಿಸುವುದಾಗಿ ಹಾಗೂ ರೈತರ ಭೂದಾಖಲೆಗಳನ್ನು ಸರಿಪಡಿಸುವ ಪ್ರಕ್ರಿಯೆಯನ್ನು ಸರಳೀಕರಿಸಲು ಕಲಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಅವರು ತಿಳಿದರು.

ಜಿಲ್ಲಾ ಉಸ್ತುವಾರಿ ಸಚಿವರಾಸ ಹೆಚ್.ಡಿ. ರೇವಣ್ಣ ಅವರು ಮಾತನಾಡಿ ಜಿಲ್ಲೆಯ ರಸ್ತೆ, ಮೂಲಭೂತ ಸೌಕರ್ಯ ಹಾಗೂ ಶಿಕ್ಷಣಿಕ ಯೋಜನೆಗಳಿಗೆ ಹೆಚ್ಚು ಅನುದಾನ ಒದಗಿಸಲಾಗಿದೆ. ದಶಕದಿಂದ ನೆನೆಗುದಿಗೆ ಬಿದಿದ್ದ ಅಭಿವೃದ್ದಿ ಚಟುವಟಿಕೆಗಳಿಗೆ ಚುರುಕು ನೀಡಲಾಗಿದೆ ಎಂದರು.

ಬಿಜೆಪಿಗೆ ಭಾರಿ ಹಿನ್ನಡೆ: ರಾಮನಗರದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ!

ಬೆಂಗಳೂರು: ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಹಿಂದೆ ಸರಿದಿದ್ದು, ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಬೆಂಬಲ ಘೋಷಿಸಿದ್ದಾರೆ. ಚುನಾವಣೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಚುನಾವಣಾ ಕಣದಿಂದ ಹಿಂದೆಸರಿದಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.

ಕಾಂಗ್ರೆಸ್ ಮುಖಂಡ ಸಿ.ಪಿ.ಲಿಂಗಪ್ಪ ಪುತ್ರ ಚಂದ್ರಶೇಖರ್ ಅವರನ್ನು ತೆಕ್ಕೆಗೆ ತೆಗೆದುಕೊಂಡಿದ್ದ ಕಮಲಪಾಳಯ ಉಪ ಚುನಾವಣೆಯಲ್ಲಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಆದ್ರೆ, ಇದೀಗ ಬಿಜೆಪಿ ನಾಯಕರ ಧೋರಣೆಗೆ ಬೇಸತ್ತು ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಚಂದ್ರಶೇಖರ್ ತಿಳಿಸಿದರು.

ಸದಾಶಿವ ನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಡಿ.ಕೆ.ಸುರೇಶ್‌ರೊಂದಿಗೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್, ನಾನು ಮೂಲತಃ ಕಾಂಗ್ರೆಸ್ ಪಕ್ಷದವನು. ಬಿಜೆಪಿಗೆ ಸೇರಿ ಟಿಕೆಟ್ ಕೊಡುತ್ತೇವೆ ಅಂದ್ರು, ಹಾಗಾಗಿ ಬಿಜೆಪಿಗೆ ಸೇರಿದೆ. ಆದರೆ, ಬಿಜೆಪಿಯ ಯಾವೊಬ್ಬ ನಾಯಕರೂ ಪ್ರಚಾರಕ್ಕೆ ಬರಲಿಲ್ಲ. ನನಗೆ ತುಂಬಾ ನೋವು ಕೊಟ್ಟರು. ಅಲ್ಲಿ ಒಬ್ಬರನ್ನ ಕಂಡರೆ ಒಬ್ಬರಿಗೆ ಆಗೋದಿಲ್ಲ. ಬಿಜೆಪಿಯಲ್ಲಿ ನಾಯಕರ ಒಗ್ಗಟ್ಟು ಇಲ್ಲ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ನಮ್ಮ ಸಂಪರ್ಕಕ್ಕೇ ಸಿಗಲಿಲ್ಲ. ನಿನ್ನೆ ಯಡಿಯೂರಪ್ಪ ಅವರ ಬಳಿ ಮಾತನಾಡಲು ಯತ್ನಿಸಿದೆ. ಆದರೆ, ಅವರು ನನ್ನ ಜೊತೆ ಮಾತನಾಡಲೇ ಇಲ್ಲಾ. ಸದಾನಂದಗೌಡರು ಬಂದು ಪ್ರೆಸ್ ಮೀಟ್ ಮಾಡಿದ್ರು ಅಷ್ಟೇ. ಇದಕ್ಕೆಲ್ಲಾ ಕಾರಣ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ನನ್ನನ್ನು ಬಲಿ ಪಶು ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಸಹವಾಸವೇ ಬೇಡ ಎಂದು ನನ್ನ ಮಾತೃ ಪಕ್ಷಕ್ಕೆ ಹಿಂದಿರುಗಿದ್ದೇನೆ. ನನ್ನ ಬೆಂಬಲವನ್ನು ಮೈತ್ರಿ ಅಭ್ಯರ್ಥಿಗೆ ನೀಡುತ್ತೇನೆ. ನನ್ನ ಆತ್ಮಸ್ಥೈರ್ಯ ಕುಂದದಂತೆ ನೋಡಿ ಕೊಂಡ ಕಾಂಗ್ರೆಸ್ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಒಟ್ಟಾರೆಯಾಗಿ ಚುನಾವಣೆ ಇನ್ನೆರಡು ದಿನ ಬಾಕಿ ಉಳಿದಿರುವ ಈ ಅವಧಿಯಲ್ಲಿ ಅಭ್ಯರ್ಥಿ ಕಣದಿಂದ ಹಿಂದೆ ಸರದಿರುವುದು ಬಿಜೆಪಿಗೆ ದೊಡ್ಡ ಹಿನ್ನೆಡೆಯಾಗಿದೆ.

ನಾಡಿನ ಹಿರಿಮೆಗೆ ಕುಂದು ತರದಂತೆ ಕೆಲಸ ಮಾಡುವೆ: ಸಿಎಂ

ಬೆಂಗಳೂರು: ಇಂದು 62 ನೇ ಕನ್ನಡ ರಾಜ್ಯೋತ್ಸವ, ನಾಡಿನಲ್ಲೆಡೆ ಸಡಗರ ಸಂಭ್ರಮದಿಂದ ಕನ್ನಡಮ್ಮನ ಹಬ್ಬವನ್ನು ಆಚರಿಸಲಾಗುತ್ತಿದೆ,ಸರ್ಕಾರದವತಿಯಿಂದಲೂ ಕಂಠೀರವ ಸ್ಟೇಡಿಯಂನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ನಾಡನ ಜನತೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಎಚ್.ಡಿ ಕುಮಾರಸ್ವಾಮಿ ಜನತೆಗೆ ಶುಭ ಕೋರಿದ್ದಾರೆ.

ರಾಜ್ಯೋತ್ಸವ ಭಾಷಣ

ಜಯ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ

ಭಾರತ ಜನನಿಯ ತನುಜಾತೆಯಾದ ಕನ್ನಡ ದೇವಿಯ ಪಾದಕಮಲಗಳಿಗೆ ಪ್ರಣಾಮಗಳನ್ನು ಅರ್ಪಿಸುತ್ತೇನೆ.
ಈ ವೇದಿಕೆಯಿಂದ ಕನ್ನಡ ಮಾತೆಗೆ ಶಿರಬಾಗಿ ನಮಿಸಿದ ಸೌಭಾಗ್ಯ ನನ್ನದಾಗಿದೆ. ಕರ್ನಾಟಕ ರಾಜ್ಯೋತ್ಸವದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿಯೂ ನನಗೆ ಈ ಭಾಗ್ಯ ಒದಗಿಬಂದಿತ್ತು.ಇದೀಗ ಮತ್ತೊಮ್ಮೆ ಈ ಭಾಗ್ಯವನ್ನು ಕನ್ನಡಾಂಬೆ ನನಗೆ ಕರುಣಿಸಿದ್ದಾಳೆ. ಕನ್ನಡ ತಾಯಿಗೆ ನನ್ನ ನಮನ.

ಹಲವು ವಂಶಗಳು ಕಟ್ಟಿ ಬೆಳೆಸಿದ ಕನ್ನಡ ನಾಡು ತನ್ನದೇ ಆದ ರಾಜಕೀಯ ಅಸ್ಮಿತೆಯನ್ನು ಹೊಂದಿದ ಧನ್ಯಭೂಮಿ. ಕನ್ನಡ ನಾಡಿನ ಮಣ್ಣಲ್ಲಿ ಮೂಡಿಬಂದ ಕದಂಬ, ಗಂಗ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳೆಲ್ಲ ಇಡೀ ದಕ್ಷಿಣ ಭಾರತವನ್ನು ವ್ಯಾಪಿಸಿದಂತಹ ಕನ್ನಡ ಆಡಳಿತ ವ್ಯವಸ್ಥೆ ರೂಢಿಸಿದ್ದು ಕರ್ನಾಟಕದ ಹೆಮ್ಮೆ.

ಕರ್ನಾಟಕ ಬಹು ಹಿಂದಿನಿಂದಲೂ ಒಂದು ಪ್ರತ್ಯೇಕ ಪ್ರಭಾವಶಾಲೀ ಆಡಳಿತ ಮಂಡಲವಾಗಿ ಉತ್ಕರ್ಷ ಕಂಡಿದೆ.
ಕವಿರಾಜ ಮಾರ್ಗ ಕೃತಿಯಲ್ಲಿ ಹೇಳಿರುವಂತೆ, “ಕನ್ನಡ ನಾಡಿನವರು ಅಭಿಮಾನಿಗಳು, ಅತ್ಯುಗ್ರರು, ವಿವೇಕಿಗಳು, ಸುಭಟರು, ಕಾವ್ಯ ಪ್ರಯೋಗ ಮತಿಗಳು, ಮಿತಭಾಷಿಗಳು, ಅನ್ಯಧರ್ಮ ಹಾಗೂ ಪರರ ವಿಚಾರಗಳನ್ನು ಸಹಿಸಿಕೊಳ್ಳುವ ಚಿನ್ನದಂತಹ ಜನರು.”

ಇಪ್ಪತ್ತೈದು ಶತಮಾನಗಳಿಗೂ ಹೆಚ್ಚಿದ ತನ್ನ ಸುಧೀರ್ಘ ಚರಿತ್ರೆಯಲ್ಲಿ , ಶಕ್ತಿಶಾಲಿಯಾಗಿ ಉಳಿದು, ಬಾಳಿ ಬೆಳೆದು, ಮನುಕುಲದ ಭರವಸೆಯ ದೀಪ ಎಂಬ ಪ್ರಖ್ಯಾತಿ ಪಡೆದ ಕರ್ನಾಟಕ, ಬ್ರಿಟಿಷರ ಆಡಳಿತದಲ್ಲಿ ಹರಿದು ಹಂಚಿಹೋದದ್ದೊಂದು ದೌರ್ಭಾಗ್ಯ.

ಛಿದ್ರವಾದ ನಮ್ಮೀ ನಾಡನ್ನು ಮರಳಿ ಒಂದೇ ಛತ್ರದಡಿ ತಂದು ಕರ್ನಾಟಕದ ಗತ ವೈಭವವನ್ನು ಮರಳಿ ಕಂಡುಕೊಳ್ಳಬೇಕು ಎನ್ನುವ ಆಶಯದ ಮಹಾನ್ ಜನಾಂದೋಲನವೇ ಕರ್ನಾಟಕ ಏಕೀಕರಣ ಚಳವಳಿ. ಇಂದು ನಮ್ಮ ಕರ್ನಾಟಕ ರೂಪುಗೊಳ್ಳಲು ಈ ಚಳವಳಿಯೇ ಕಾರಣ. ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಂತಹ ಮಹಾನ್ ಸಂಘಟನೆಗಳ ಮಾರ್ಗದರ್ಶನದಲ್ಲಿ ಅನೇಕ ಅಪ್ರತಿಮ ಸೇನಾನಿಗಳ ದಿಟ್ಟ ಹೋರಾಟದ, ಕೋಟಿ ಕೋಟಿ ಕನ್ನಡಿಗರ ತ್ಯಾಗ, ಬಲಿದಾನ, ಧೀಶಕ್ತಿಯ ಫಲವಾಗಿ ರೂಪುಗೊಂಡದ್ದು ಅಖಂಡ ಕರ್ನಾಟಕ. ಕನ್ನಡ ಚಳವಳಿಯ ಅಸಂಖ್ಯ ಹೋರಾಟಗಾರರಿಗೆ ನನ್ನದೀ ಶಿರಸಾಷ್ಟಾಂಗ ನಮನ.
ಅತ್ಯಂತ ಗರಿಮೆಯಿಂದ ಬಾಳಿದ ಕನ್ನಡ ಜೀವ ಸಂಸ್ಕೃತಿಯ ಔನ್ನತ್ಯವನ್ನು ಪುನ: ಸ್ಥಾಪಿಸಬೇಕೆನ್ನುವ ಅಂದಿನ ಹೋರಾಟಗಾರರ ಕನಸು, ಇಂದಿಗೂ ನನ್ನ ಅತ್ಯಂತ ಪ್ರೀತಿಯ ವಿಚಾರ. ಕನ್ನಡದ ಗರಿಮೆಯನ್ನು ಎಲ್ಲೆಡೆ ಪಸರಿಸಬೇಕು ಎನ್ನುವುದು ನನ್ನ ಬಹುದೊಡ್ಡ ಕನಸು.

೧೨ ವರ್ಷಗಳ ಹಿಂದೆ ಸುವರ್ಣ ಕರ್ನಾಟಕ ಸಂಭ್ರಮಾಚರಣೆಯ ದಿನದಂದು ನಾನು ನನ್ನ ಜನರಿಗೆ ನೀಡಿದ ವಚನ, ಬದ್ಧತೆಗಳು ಇನ್ನೂ ನನ್ನ ಮನಪಟಲದಲ್ಲಿ ಹಸಿರಾಗಿವೆ.
ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಉಡಿಯಲ್ಲಿ ತುಂಬಿಕೊಂಡ, ಎರಡೂವರೆ ಸಾವಿರ ವರ್ಷಕ್ಕೂ ಹೆಚ್ಚು ಕಲಾವಧಿಯ ಇತಿಹಾಸದ ಹಿನ್ನೆಲೆ ಹೊಂದಿರುವ ಕರ್ನಾಟಕ ಮತ್ತು ಕನ್ನಡಭಾಷೆ ಇನ್ನಷ್ಟು ಪ್ರಜ್ವಲವಾಗಿ ಹೊಳೆಯಬೇಕಿದೆ.

ಮುಂದಿನ ನೊಬೆಲ್ ಪ್ರಶಸ್ತಿ ಪಡೆಯುವ ಭಾರತದ ಲೇಖಕ-ಲೇಖಕಿ ಕನ್ನಡದವರೇ ಆಗಿರುತ್ತಾರೆ ಎಂಬ ಅದಮ್ಯ ಆತ್ಮ ವಿಶ್ವಾಸ ತುಂಬಿದ ಮಾತೊಂದನ್ನು ನಾನು ಇತ್ತೀಚೆಗೆ ಕನ್ನಡ ದಿನಪತ್ರಿಕೆಯೊಂದರಲ್ಲಿ ಓದಿದೆ. ನನಗೆ ತುಂಬ ಇಷ್ಟವಾದ ಮಾತದು. ಕರ್ನಾಟಕದ ಶ್ರೇಷ್ಠ ಸಾಹಿತ್ಯ ಪರಂಪರೆಗೆ ವಿಶ್ವಮನ್ನಣೆ ಇದೆ. ನಮ್ಮ ಸಾಹಿತ್ಯ ವಿಶ್ವದ ಯಾವುದೇ ಭಾಷೆಯ ಸಾಹಿತ್ಯದ ಮೌಲಿಕತೆಯನ್ನು ಸರಿಗಟ್ಟುವಂತಹದ್ದು.
ಇದೇ ಆತ್ಮವಿಶ್ವಾಸ ನನ್ನಲ್ಲಿಯೂ ಇದೆ. ಈ ಆತ್ಮ ವಿಶ್ವಾಸವನ್ನು ಹರಳುಗಟ್ಟಿಸುವ ಹಾದಿ ನಮ್ಮ ಕೈಯಲ್ಲಿಯೇ ಇದೆ. ಇದೇ ಕಾರಣಕ್ಕಾಗಿಯೇ ನಮ್ಮ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸುಧಾರಣೆ/ನವೀಕರಣ ಕಾರ್ಯಗಳನ್ನು ನಮ್ಮ ಸರ್ಕಾರ ಪ್ರಥಮಾಧ್ಯತೆಯ ಮೇರೆಗೆ ಕೈಗೆತ್ತಿಕೊಂಡಿದೆ.
ಕರ್ನಾಟಕದ ಗುರು ಪರಂಪರೆಗೆ ತನ್ನದೇ ಆದ ಔನ್ನತ್ಯವಿದೆ. ಸರ್ಕಾರೀ ಶಿಕ್ಷಕ ವೃತ್ತಿಯನ್ನು ಜೀವನ ಮಾರ್ಗವಾಗಲ್ಲದೆ, ಅತ್ಯುತ್ತಮ ವ್ಯಕ್ತಿತ್ವಗಳನ್ನು ಬೆಳೆಸುವ ಅರ್ಥಪೂರ್ಣ ಸಾಧನವಾಗಿ ಪರಿಗಣಿಸಿದ ಅನೇಕ ಅದ್ಭುತ ಶಿಕ್ಷಕರನ್ನು ನಾನು ನೋಡಿದ್ದೇನೆ. ಧನ್ಯಭಾವ ಅನುಭವಿಸಿದ್ದೇನೆ.

ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಿ ತಮ್ಮ ಸಾಧನೆಯ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಖ್ಯಾತಿಗೇರಿದ ಅಗಣಿತ ಸಾಧಕರ ಮೇಲ್ಪಂಕ್ತಿಯೇ ನಮ್ಮ ಮುಂದಿದೆ. ಅಂತರರಾಷ್ಟ್ರೀಯ ಖ್ಯಾತಿಯ ಸಂಶೋಧಕ ಭಾರತರತ್ನ ಪ್ರೊ|| ಸಿ.ಎನ್.ಆರ್.ರಾವ್ ಅವರು ಓದಿದ್ದು, ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿಯೇ ಎನ್ನುವ ಒಂದು ಉದಾಹರಣೆಯೇ ಸಾಕು.

ಶಿರಸಿಯ ಮಾರಿಕಾಂಬಾ ಸರ್ಕಾರಿ ಶಾಲೆ ಸಾಧಿಸಿರುವ ಅತ್ಯುತ್ತಮ ಗುಣಮಟ್ಟದ ದಾಖಲೆ ಸದಾ ನನ್ನನ್ನು ಆವರಿಸಿ, ನಮ್ಮ ಪ್ರತಿಶಾಲೆಯೂ ಈ ಮಟ್ಟಕ್ಕೆ ಏರುವಂತೆ ಪ್ರಯತ್ನಿಸಬಾರದೇಕೆ? ಎನ್ನುವ ಪ್ರಶ್ನೆ ಮೂಡುತ್ತದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯನ್ನು ಹಿಂದಿಕ್ಕಿ ದಾಖಲೆ ಎನಿಸುವಂತೆ ತನ್ನ ವಿದ್ಯಾರ್ಥಿ ಸಂಖ್ಯೆಯನ್ನು ಏರಿಸಿಕೊಂಡಿರುವ ಈ ಶಾಲೆಯ ಪ್ರಗತಿಗೆ ಅಲ್ಲಿನ ಶಿಕ್ಷಕವರ್ಗದ ಕೊಡುಗೆ ಕೂಡ ಪ್ರಮುಖ ಕಾರಣ ಎಂದು ನಾನು ಬಲ್ಲೆ. ಇದೇ ಮಟ್ಟಕ್ಕೆ ನಮ್ಮ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಬರಬೇಕೆನ್ನುವುದು ನನ್ನ ಮಹದಾಸೆ. ಇದಕ್ಕೆ ಬೇಕಾದ ಎಲ್ಲ ನೆರವನ್ನೂ ನೀಡಲು ಸರ್ಕಾರ ಸಿದ್ಧವಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳ ಗುಣಮಟ್ಟ/ಮೂಲಭೂತ ಸೌಲಭ್ಯ ವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿಯನ್ನೂ ಮಾಡಿಕೊಳ್ಳದೆ ಮುಂದುವರೆಯಲು ಸರ್ಕಾರ ಬದ್ಧವಾಗಿದೆ.
ಇಂದಿನಿಂದ ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಒಟ್ಟು ೧೫೩ ವಿಶೇಷ ಚೇತನ ಮಕ್ಕಳ ಶಾಲೆಗಳಲ್ಲಿ ಕಲಿಯುತ್ತಿರುವ ಒಟ್ಟು 10,567 ವಿಶೇಷಚೇತನ ಮಕ್ಕಳಿಗೂ ಬಿಸಿಹಾಲು ವಿತರಿಸುವ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ. ಒಟ್ಟು 58 ಲಕ್ಷ 30 ಸಾವಿರಕ್ಕೂ ಹೆಚ್ಚು ಮಕ್ಕಳು ಬಿಸಿಹಾಲು ವಿತರಿಸುವ ವ್ಯವಸ್ಥೆಯಿಂದ ಲಾಭಪಡೆಯುತ್ತಿದ್ದಾರೆ.

ಶಿಕ್ಷಣ ಇಲಾಖೆಯ ಸಮಗ್ರ ಸುಧಾರಣೆಗಾಗಿ, ಸರ್ಕಾರಿ ಶಾಲಾ ಕಾಲೇಜು ಕಟ್ಟಡಗಳ ನವೀಕರಣ/ನಿರ್ಮಾಣಕ್ಕಾಗಿ ಈಗಾಗಲೇ ನೀಡಿರುವ ೧೨೦೦ ಕೋಟಿ ರೂ.ಗಳ ಅನುದಾನ ನನ್ನ ಮಾತಿಗೆ ಸಾಕ್ಷಿ. ಆದರೆ ನಮ್ಮ ಶಿಕ್ಷಕ ವೃಂದ ಕೂಡ ಈ ದಿಸೆಯಲ್ಲಿ ಇನ್ನಷ್ಟು ಶ್ರಮ ಹಾಕಬೇಕಿದೆ. ನಮ್ಮ ಶಾಲಾ ಕಾಲೇಜುಗಳು ಶಿಕ್ಷಣ ದೇಗುಲಗಳಾದಾಗ ನೋಬೆಲ್ ಸಾಹಿತ್ಯ ಪುರಸ್ಕಾರ ನಮಗೊಲಿವ ದಿನ ದೂರವಿರಲಾರದು.ಜನತಾದರ್ಶನದಲ್ಲಿ ನಾನು ಕಂಡುಕೊಂಡ ಮತ್ತೊಂದು ಸತ್ಯವೆಂದರೆ, ನಮ್ಮ ಯುವ ಉದ್ಯೋಗಾವಕಾಂಕ್ಷಿಗಳಲ್ಲಿ ಕೌಶಲ್ಯದ ಕೊರತೆ ಮತ್ತು ಸಂವಹನ ಸಮಸ್ಯೆ. ಈ ಯುವಜನರಿಗಾಗಿ ಸರ್ಕಾರ ೫೩ ಕಂಪನಿಗಳ ಸಹಯೋಗದೊಂದಿಗೆ ಉದ್ಯೋಗ ಮೇಳವನ್ನು ನಡೆಸಿತು. ಯುವಜನರ ಪ್ರತಿಭೆಗೆ ಸಾಣೆ ನೀಡಲು ಮೂರು ಕೌಶಲ್ಯಾಧಾರಿತ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೂ ಕ್ರಮ ಕೈಗೊಂಡಿದ್ದೇವೆ.

ಕನ್ನಡವೇ ಪ್ರಾಣಪದಕ ಎಂದು ನಾವು ಭಾವಿಸಿರುವುದು ನಿಜ. ಆದರೆ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯೂ ನಮಗೆ ಮುಖ್ಯ. ನಮ್ಮ ಮಕ್ಕಳು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಕೀಳರಿಮೆಯ ಭಾವದಿಂದ ಹೊರಬಂದು ಎಲ್ಲರಂತೆ ಜೀವನವನ್ನು ಎದುರಿಸಬೇಕು ಎನ್ನುವುದು ನಮ್ಮ ಉದ್ದೇಶ. ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಕಲಿಸುವ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಆಶಯಕ್ಕೆ ಅಲ್ಲಲ್ಲಿ ಅಪಸ್ವರಗಳು ಬರುತ್ತಿರುವುದನ್ನು ಗಮನಿಸಿದ್ದೇನೆ.

ಇಂಗ್ಲಿಷ್ ಕಲಿಕೆ ಕನ್ನಡದ ಸಾರ್ವಭೌಮತ್ವದ ಮೇಲೆ ಸವಾರಿ ಮಾಡಲು ನಾವು ಸರ್ವಥಾ ಅವಕಾಶ ನೀಡುವುದಿಲ್ಲ. ಇಂಗ್ಲಿಷ್ ಕಲಿಸುವ ನಮ್ಮ ಉದ್ದೇಶ ಕೇವಲ ವ್ಯಾವಹಾರಿಕ ದೃಷ್ಟಿಗೆ ಮಾತ್ರ ಸೀಮಿತ.ಇದರಂತೆಯೇ ಜಾನಪದ ಜಾತ್ರೆಯನ್ನು ಚಿರನೂತನವಾಗಿಸುವ ಕನಸು ಕೂಡ ನನ್ನದು. ಈ ಜನಪದ ಜಾತ್ರೆಗಳು, ನಗರ ಹಾಗೂ ಗ್ರಾಮೀಣ ಜಾನಪದ ಸಂಸ್ಕೃತಿಗಳ ನಡುವೆ ಸ್ನೇಹ ಸೇತುವೆ ಕಟ್ಟಲಿವೆ. ಜೊತೆಯಲ್ಲಿಯೇ ನಮ್ಮ ಜಾನಪದ ಕಲಾವಿದರ ಪ್ರತಿಭೆಯನ್ನು ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಲು ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸಲಿದೆ.

ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಸಮೃದ್ಧವಾದ ಒಂದು ಸುಂದರ ಕರ್ನಾಟಕ ಕಟ್ಟುವುದು ನನ್ನ ಕನಸು. ಈ ಕನಸಿನ ಸಾಕಾರಕ್ಕೆ ದುಡಿಯುವುದು ನನ್ನ ಸಂಕಲ್ಪ.
ಸರ್ವಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ಕರ್ನಾಟಕ ಮುಂದಿನ ದಿನಗಳಲ್ಲಿಯೂ ಎಲ್ಲ ಜಾತಿ, ಧರ್ಮ, ಶ್ರದ್ಧೆಗಳ ಜನರೂ ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿಯೇ ಉಳಿಯಬೇಕು. ಹಿಂದು, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರ ಉದ್ಯಾನವಾದ ಕರ್ನಾಟಕದ ಹಿರಿಮೆಗೆ ಎಂದಿಗೂ ಕುಂದು ಬರಬಾರದು. ಇದು ನಮ್ಮ ಕರ್ತವ್ಯ ಮತ್ತು ಈ ಸಂದರ್ಭದಲ್ಲಿ ನಾವು ಕೈಗೊಳ್ಳಬೇಕಾದ ಪ್ರಮಾಣ ಕೂಡ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು
ಸಿರಿಗನ್ನಡಂ ಗೆಲ್ಗೆ !!!

ರೆಡ್ಡಿ ವಿರುದ್ಧ ಸಮರ ಸಾರಿದ ಕೈ ನಾಯಕರು: ನಾಳೆ ಭೂ ಅಕ್ರಮದ ಕುರಿತು ಡಿಕೆಶಿಯಿಂದ ದಾಖಲೆ ಬಿಡುಗಡೆ!

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಸೇರಿದ್ದ ಗಾಲಿ ಜನಾರ್ದನ ರೆಡ್ಡಿ, ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಗನ ಸಾವಿನ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಅದಕ್ಕೆ ತಕ್ಕ ಉತ್ತರ ನೀಡಲು ಮುಂದಾಗಿದ್ದಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ಮಾಜಿ ಸಿಎಂ ಸಿದ್ಧರಾಮಯ್ಯ ಪುತ್ರ ಅನಾರೋಗ್ಯದಿಂದ ಸಾವನ್ನಿಪ್ಪಿದ್ದರು. ಈ ಕುರಿತು ನಿನ್ನೆ ಮಾತನಾಡಿದ್ದ ಜನಾರ್ದನ ರೆಡ್ಡಿ ನನ್ನ ಕುಟುಂಬದಿಂದ ನನ್ನನ್ನು ದೂರ ಮಾಡಿದ್ದಕ್ಕೆ ಸಿದ್ಧರಾಮಯ್ಯ ತಮ್ಮ ಪುತ್ರನನ್ನು ಕಳೆದುಕೊಂಡಿದ್ದಾರೆ ಎನ್ನುವ ಮೂಲಕ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಜನಾರ್ದನ ರೆಡ್ಡಿ ಯಾಕೆ ಜೈಲು ಸೇರಿದರು ಎಂಬುದನ್ನು ಜನರಿಗೆ ತಿಳಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಮಾಜಿ‌ ಸಚಿವ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ರೂಪಿಸಿದೆ. ಇದಕ್ಕಾಗಿ ಇಬ್ಬರ ವಿರುದ್ಧ ಬಳ್ಳಾರಿ ನೆಲದಲ್ಲೇ ಅಕ್ರಮಗಳ ದಾಖಲೆ ಬಿಡುಗಡೆಗೆ ಕೈ ಪಡೆ ಸನ್ನದ್ಧವಾಗಿದೆ. ಉಪ ಚುನಾವಣಾ ಪ್ರಚಾರದ ಭರಾಟೆಯ ನಡುವೆ ಸದ್ದಿಲ್ಲದೆ ಗಣಿಧಣಿಗಳ ವಿರುದ್ಧ ಭಾರೀ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ.

ಗಣಿ ದಣಿಗಳ ವಿರುದ್ಧದ ಭೂ ಅಕ್ರಮದ ದಾಖಲೆಗಳ ಬಿಡುಗಡೆಗೆ ಪ್ಲಾನ್ ಮಾಡಿದ್ದು, ನಾಳೆ ಬಳ್ಳಾರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಲು ಸಚಿವ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ. ಬಳ್ಳಾರಿ ಗಡಿ ಭಾಗದಲ್ಲಿ ನಿಯಮ ಬಾಹಿರವಾಗಿ ಭೂಕಬಳಿಕೆ ಮಾಡಿದ ದಾಖಲೆ. ಭೂಅಕ್ರಮದ ಸಂದರ್ಭದಲ್ಲಿ ಮಾತುಕತೆ ನಡೆದ ಕುರಿತಾದ ಆಡಿಯೋ ಸಿಡಿ ಬಿಡುಗಡೆ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದು ತಿಳಿದುಬಂದಿದೆ.

ಇಬ್ಬರೂ ನಾಯಕರ ಅಕ್ರಮದ ದಾಖಲೆಗಳನ್ನು ಬಿಡಿಗಡೆ ಮಾಡಿದರೂ ಕೂಡ ಕೇವಲ ಜನಾರ್ದನ ರೆಡ್ಡಿ ಕುರಿತು ಮಾತ್ರ ವಾಗ್ದಾಳಿ ನಡೆಸಲು ಕೈ ನಾಯಕರು ನಿರ್ಧರಿಸಿದ್ದಾರೆ. ಶ್ರೀರಾಮುಲು ಕುರಿತು ಯಾವುದೇ ಆಕ್ಷೇಪಾರ್ಹ ಪದ ಪ್ರಯೋಗ ಮಾಡದಿರಲು ಪ್ಲಾನ್ ಮಾಡಿದ್ದು. ಬಳ್ಳಾರಿಗೆ ಬಂದು ರಾಮುಲು ವಿರುದ್ಧ ವಾಗ್ದಾಳಿ ಮಾಡಿದರು ಎನ್ನುವ ಸಂದೇಶ ರವಾನೆಯಾಗುವ ಸಾದ್ಯತೆ ಇದೆ ಇದರಿಂದ ಕೈ ಅಭ್ಯರ್ಥಿಗೆ ಹಿನ್ನಡೆಯಾಗಿ ರಾಮುಲುಗೆ ಲಾಭವಾಗುವ ಸಾಧ್ಯತೆ ಇದೆ. ಆದ್ದರಿಂದ ಜನಾರ್ದನ ರೆಡ್ಡಿ ಆಕ್ಷೇಪಾರ್ಹ ಹೇಳಿಕೆಯಿಂದ ಕಾಂಗ್ರೆಸ್ ಪರವಾದ ಅಭಿಪ್ರಾಯ ವ್ಯಕ್ತವಾಗಿರೋ ಹಿನ್ನೆಲೆಯಲ್ಲಿ ಈ ನಿಲುವು ತಳೆಯಲಾಗಿದೆ.

ಒಟ್ಟಾರೆಯಾಗಿ ಜನರ ಭಾವನೆಯನ್ನು ಮತಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಮುಂದಾಗಿರುವ ಡಿ.ಕೆ.ಶಿವಕುಮಾರ್ ಇದೇ ಕಾರಣಕ್ಕೆ ಜನಾರ್ದನ ರೆಡ್ಡಿ ವಿರುದ್ಧದ ವಾಗ್ದಾಳಿಗೆ ಮಾತ್ರ ನಾಳಿನ ಪತ್ರಿಕಾಗೋಷ್ಠಿ ಸೀಮಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಳೆ ನಡೆಯುವ ಸಚಿವ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿಯತ್ತ ಇದೀಗ ಕುತೂಹಲ ಹೆಚ್ಚಾಗಿದ್ದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.