ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಯಿ ಇಂದು ಪ್ರಮಾಣವಚನ ಸ್ವೀಕಾರ

ಬೆಂಗಳೂರು: ರಾಜ್ಯದ 20 ನೇ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಯಿ ಆಯ್ಕೆಯಾಗಿದ್ದು ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಪುತ್ರ ಆಗಿದ್ದವರೇ ಮುಖ್ಯಮಂತ್ರಿ ಆದ ಎರಡನೇ ಉದಾಹರಣೆಯಾಗುತ್ತಿದ್ದಾರೆ.

ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಬಸವರಾಜ ಬೊಮ್ಮಯಿ ಅವರಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಲಿದ್ದಾರೆ. ಕೇಂದ್ರದಿಂದ‌ ಬಂದಿರೋ ವೀಕ್ಷಕರು,ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ನಾಯಕರು ಸಮಾರಂಭದಲ್ಲಿ ಭಾಗಿಯಾಗ್ತಾರೆ.

ಬೊಮ್ಮಾಯಿಗೆ ಶುಭ ಕೋರಿದ ನಾಯಕರು

ನಿನ್ನೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕನನ್ನಾಗಿ ಬೊಮ್ಮಾಯಿ ಹೆಸರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯ್ತು, ಯಡಿಯೂರಪ್ಪ ಸೂಚಿಸಿದ್ದ ಹೆಸ್ರಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು,ಯಡಿಯೂರಪ್ಪ ಬೆಂಬಲಿಗರ ಸಂಖ್ಯೆ ಅಧಿಕವಾಗಿರೋ ಶಾಸಕಾಂಗ ಸಭೆಯಲ್ಲೂ ಗೆಲುವು ಸಿಕ್ತು, ಅದರಂತೆ ಬೊಮ್ಮಾಯಿ ನೂತನ ನಾಯಕನಾಗಿ ಆಯ್ಕಯಾದ್ರು.

ಇಂದು ನೂತನ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸ್ತಾ ಇರೋ ಬೊಮ್ಮಾಯಿ ವಲಸಿಗರಾಗಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ಪಡಿತಾ ಇರೋ ಮೊದಲಿಗರಾಗಿದ್ದಾರೆ. ಜನತಾ ದಳದಲ್ಲಿ ಬೊಮ್ಮಾಯಿ ಅವ್ರನ್ನ ಬಿಜೆಪಿಗೆ ಕರೆತಂದಿದ್ದ ಯಡಿಯೂರಪ್ಪ ಈಗ ಮುಖ್ಯಮಂತ್ರಿ ಆಗಿಯೂ ಮಾಡಿದ್ದು, ಜನತಾ ಪರಿವಾರದಿಂದ ಬಂದವರಿಗೆ ಎರಡೂ ರಾಷ್ಟ್ರೀಯ ಪಕ್ಷಗಳು ಮುಖ್ಯಮಂತ್ರಿ ಸ್ಥಾನ ನೀಡ್ದಂತಾಗಿದೆ. ಕಾಂಗ್ರೆಸ್ ನಲ್ಲಿ ಸಿದ್ರಾಮಯ್ಯ ಬಿಜೆಪಿಯಲ್ಲಿ ಬೊಮ್ಮಾಯಿಗೆ ಈ ಅದೃಷ್ಟ ಸಿಕ್ದಂತಾಗಿದೆ.

ಸಕ್ರಿಯ ರಾಜಕಾರಣದಿಂದ ದೂರವಾಗಲ್ಲ, ರಾಜ್ಯಪಾಲರ ಹುದ್ದೆ ಬೇಡ: ಬಿಎಸ್ವೈ

ಬೆಂಗಳೂರು: ಸಕ್ರಿಯ ರಾಜಕಾರಣದಿಂದ ದೂರವಾಗುವ ಮಾತೇ ಇಲ್ಲ. ರಾಜ್ಯಪಾಲರ ಹುದ್ದೆಯ ಅಗತ್ಯ ನನಗೆ ಇಲ್ಲ. ಇದನ್ನು ಹೈಕಮಾಂಡ್ ನಾಯಕರಿಗೂ ಸ್ಪಷ್ಟಪಡಿಸಿದ್ದೇನೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ರಾಜಭವನದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ನನ್ನ ರಾಜೀನಾಮೆಗೆ ಕೇಂದ್ರದ ಯಾವುದೇ ನಾಯಕರಿಂದ ಒತ್ತಡವಿರಲಿಲ್ಲ. ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಸಧೃಡವಾಗಿ ಸಂಘಟನೆ ಮಾಡಿ ಮತ್ತೆ ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಇನ್ನೂ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ, ಮುಂದಿನ ಸಿಎಂ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ನಾನು ಯಾವುದೇ ಹೆಸರನ್ನು ಹೇಳಲು ಇಷ್ಟ ಪಡುವುದಿಲ್ಲ ಎಂದು ಹೇಳಿದರು. ನಾನು ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ.‌ ರಾಜ್ಯಪಾಲರ ಹುದ್ದೆ ನನಗೆ ಅಗತ್ಯವಿಲ್ಲ. ಇದನ್ನು ಕೇಂದ್ರ ನಾಯಕರಿಗೂ ತಿಳಿಸಿದ್ದೇನೆ. ವಾಜಪೇಯಿಯವರು ನನಗೆ ಕೇಂದ್ರ ಸಚಿವ ಸ್ಥಾನ ನೀಡಲು ಮುಂದಾಗಿದ್ದರು. ಅದನ್ನು ನಾನು ತಿರಸ್ಕರಿಸಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದೆ. ಈಗಲೂ ನಾನು ಪಕ್ಷದ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಸಲ್ಲಿಕೆ!

ಬೆಂಗಳೂರು: ರಾಜಭವನದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಮುಂದಿ‌ನ ಮುಖ್ಯಮಂತ್ರಿ ನೇಮಕ ಆಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ರಾಜ್ಯಪಾಲರು ಬಿಎಸ್ವೈಗೆ ಸೂಚನೆ ನೀಡಿದ್ದಾರೆ.

ಹೈಕಮಾಂಡ್ ಸೂಚನೆಯಂತೆ ಎರಡು ವರ್ಷದ ಸಾಧನೆ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ವೈ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದರು. ಕಾರ್ಯಕ್ರಮದ ಬಳಿಕ ಕಾರಿನಲ್ಲಿ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದರು.

ರಾಜೀನಾಮೆ ಘೋಷಣೆಗೂ ಮುನ್ನ ಸಿಎಂ ಬಿಎಸ್ವೈ ತಮ್ಮ ರಾಜಕೀಯ ಪಯಣ ನೆನೆದು ಭಾವುಕರಾದರು. ಕೇಂದ್ರ ಸಚಿವರಾಗುವಂತೆ ನನಗೆ ಆಹ್ವಾನ ಬಂದಾಗ ರಾಜ್ಯದಲ್ಲಿ ಪಕ್ಷ ಕಟ್ಟುವ ಉದ್ದೇಶದಿಂದ ನಾನು ಅದನ್ನು ತಿರಸ್ಕರಿಸಿದೆ ಎಂದು ನೋವಿನಿಂದ ನುಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪದತ್ಯಾಗ!

ಬೆಂಗಳೂರು: ಎರಡು ವರ್ಷದ ಸಾಧನೆ ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ದುಃಖ ತುಂಬಿದ ಧ್ವನಿಯಲ್ಲೇ ಸಂತೋಷವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಿಎಂ ಬಿಎಸ್ವೈ ಗದ್ಗದಿತರಾದರು.

ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, 75 ವರ್ಷ ತುಂಬಿದ ಯಡಿಯೂರಪ್ಪನಿಗೆ ಮತ್ತೆ ಎರಡು ವರ್ಷ ಮುಖ್ಯಮಂತ್ರಿ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಜೆ.ಪಿ.ನಡ್ಡಾ ಅವರಿಗೆ, ಅಮಿತ್ ಶಾ ಅವರಿಗೆ ಶಬ್ದಗಳಲ್ಲಿ ಅಭಿನಂದನೆ ಸಲ್ಲಿಸಲು ಸಾಧ್ಯವಿಲ್ಲ ಎಂದರು.

ಊಟದ ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುವುದಾಗಿ ಕಾರ್ಯಕ್ರಮದಲ್ಲಿ ಬಿಎಸ್ವೈ ಘೋಷಣೆ ಮಾಡಿದರು. ಇನ್ನೂ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ಸಿಎಂ ರಾಜೀನಾಮೆ ನೀಡುತ್ತಾರೆ ಎಂದು ತಿಳಿದುಬಂದಿದೆ.

Live-ಸರ್ಕಾರದ ಎರಡು ವರ್ಷದ ಸಾಧನಾ ಸಮಾರಂಭ

ಯಡಿಯೂರಪ್ಪ ಸರ್ಕಾರದ ಎರಡು ವರ್ಷದ ಸಾರ್ಥಕ ಸೇವೆ ಸವಾಲುಗಳ ಮೀರಿದ ಸಾಧನಾ ಪರ್ವ ಕಾರ್ಯಕ್ರಮ

ವಿಧಾನಸೌಧದಿಂದ ನೇರ ಪ್ರಸಾರ…ಸೋಮವಾರ ಬೆಳಗ್ಗೆ 11 ಗಂಟೆಗೆ ವೀಕ್ಷಿಸಿ…

ನಾಳೆಯಿಂದ ಪದವಿ ಕಾಲೇಜು ಆರಂಭ; ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದ ಡಿಸಿಎಂ

ಬೆಂಗಳೂರು: ಕೋವಿಡ್-19 ಎರಡನೇ ಅಲೆಯ ಲಾಕ್ ಡೌನ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ನಾಳೆಯಿಂದ (ಜು.26) ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭವಾಗುತ್ತಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೂಚಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ನೇರ ತರಗತಿಗಳಿಗೆ ಹಾಜರಾಗಲಿಚ್ಛಿಸುವ ಪ್ರತಿ ವಿದ್ಯಾರ್ಥಿಯೂ ಮೊದಲ ಡೋಸ್ ಲಸಿಕೆ ಪಡೆಯುವುದು ಕಡ್ಡಾಯ. ಈಗಾಗಲೇ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ಸ್ಪಷ್ಟ ಮಾರ್ಗಸೂಚಿ ಜಾರಿ ಮಾಡಿದ್ದು, ಅದನ್ನು ಎಲ್ಲ ವಿಶ್ವವಿದ್ಯಾಲಯಗಳ ಅಡಿಯಲ್ಲಿರುವ ಕಾಲೇಜುಗಳು ಚಾಚೂತಪ್ಪದೇ ಪಾಲಿಸಬೇಕು. ಈ ಬಗ್ಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.

ಕೋವಿಡ್ ಮಾರ್ಗಸೂಚಿಯ ಪ್ರಾಥಮಿಕ ಶಿಷ್ಠಾಚಾರದಂತೆ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯವಾಗಿ ಮಾಡಲೇಬೇಕು. ನಿತ್ಯವೂ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಬೇಕು. ಅಲ್ಲದೆ, ವಿದ್ಯಾರ್ಥಿಗಳ ಲಸೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದು ಆದಷ್ಟು ಬೇಗ ಎಲ್ಲರಿಗೂ ಲಸಿಕೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಎಲ್ಲ ಕುಲಪತಿಗಳಿಗೆ ಸೂಚನೆ ಕೊಡಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.

ನೇರ ತರಗತಿಗಳಿಗೆ ಹಾಜರಾಗುವ ಆಯ್ಕೆ ವಿದ್ಯಾರ್ಥಿಗಳಿಗೇ ಬಿಡಲಾಗಿದೆ. ಅವರು ಇಚ್ಛೆ ಇದ್ದರೆ ಭೌತಿಕ ತರಗತಿಗಳಿಗೆ ಹಾಜರಾಗಬಹುದು, ಇಲ್ಲವೇ ಆನ್‌ಲೈನ್ ಮೂಲಕವೂ ಕಲಿಯಬಹುದು. ಆದರೆ, ಯಾವುದಾದರೂ ಒಂದರಲ್ಲಿ ಹಾಜರಾತಿ ಕಡ್ಡಾಯ ಎಂದು ಅವರು ತಿಳಿಸಿದ್ದಾರೆ.

74% ವಿದ್ಯಾರ್ಥಿಗಳಿಗೆ ಲಸಿಕೆ:

ರಾಜ್ಯದ ಎಲ್ಲ ವಿವಿಗಳ ವ್ಯಾಪ್ತಿಗಳಲ್ಲೂ ಲಸಿಕೀಕರಣ ವೇಗವಾಗಿ ನಡೆಯುತ್ತಿದ್ದು, ಈವರೆಗೆ 74% ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಇನ್ನು ಕೆಲ ದಿನಗಳಲ್ಲೇ ಉಳಿದ ಎಲ್ಲ ವಿದ್ಯಾರ್ಥಿಗಳಿಗೂ ಆದ್ಯತೆಯ ಮೇರೆಗೆ ವ್ಯಾಕ್ಸಿನ್ ಕೊಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.

ಕೆಲ ವಿಶ್ವವಿದ್ಯಾಲಯಗಳಲ್ಲಿ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಲಸಿಕೀಕರಣ ನಡೆದಿದೆ. ಇನ್ನು ಕೆಲ ವಿವಿಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಈ ಬಗ್ಗೆ ಕ್ರಮ ವಹಿಸಲು ಆಯಾ ವಿವಿಗಳ ಕುಲಪತಿಗಳಿಗೆ ತಿಳಿಸಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.