ಹೃದಯಾಘಾತದಿಂದ ಉಪ ಮೇಯರ್ ರಮಿಳಾ ಉಮಾಶಂಕರ್ ನಿಧನ!

ಬೆಂಗಳೂರು: ಬಿಬಿಎಂಪಿಯ ಉಪಮೇಯರ್​ ಆಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದ ರಮಿಳಾ ಉಮಾಶಂಕರ್​ ಅವರು ತೀವ್ರ ಹೃದಯಾಘಾತದಿಂದ ಗುರುವಾರ ತಡರಾತ್ರಿ ನಿಧನಹೊಂದಿದ್ದಾರೆ.

ಗುರುವಾರ ರಾತ್ರಿ 12.50ರಲ್ಲಿ ರಮಿಳಾ ಅವರಿಗೆ ತೀವ್ರ ಎದೆನೋವು ಕಾಣಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ನಗರದ ಪಶ್ಚಿಮ ಕಾರ್ಡ್​ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

2015ರಲ್ಲಿ ನಡೆದಿದ್ದ ಬಿಬಿಎಂಪಿ ಚುನಾವಣೆಯಲ್ಲಿ ಕಾವೇರಿಪುರ ವಾರ್ಡ್​ನಿಂದ (103) ಜೆಡಿಎಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಮಿಳಾ ಅವರು ಜಯ ಸಾಧಿಸಿದ್ದರು. ವಾರದ ಹಿಂದಷ್ಟೇ ಬಿಬಿಎಂಪಿಯ ಉಪ ಮೇಯರ್​ ಆಗಿ ಅವರು ಆಯ್ಕೆಯಾಗಿದ್ದರು.

ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ ನಮ್ಮ ಮೆಟ್ರೋಗೆ ಭೇಟಿ ನೀಡಿದಾಗ, ಉಪ ಮುಖ್ಯಮಂತ್ರಿ ಪರಮೇಶ್ವರ್​ ಅವರು ಬೆಳ್ಳಂಬೆಳಗ್ಗೆ ನಗರದ ಮಾರುಕಟ್ಟೆಗಳ ಪರಿಶೀಲನೆಯಲ್ಲಿ ತೊಡಗಿದ್ದಾಗ ರಮಿಳಾ ಅವರೂ ಭಾಗವಹಿಸಿದ್ದರು. ಹೀಗೆ ದಿನವಿಡೀ ಲವಲವಿಕೆಯಿಂದಲೇ ಇದ್ದ ರಮಿಳಾ ಅವರು ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ‌.

ಮೇಕೆದಾಟು ಯೋಜನೆಗೆ ಅನುಮತಿ:ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ

ನವದೆಹಲಿ: ಪ್ರಸ್ತಾವಿತ ಮೇಕೆದಾಟು ಯೋಜನೆ ಜಾರಿಗಾಗಿ ಕರ್ನಾಟಕ ಸರ್ಕಾರಕ್ಕೆ ಅಗತ್ಯ ಅನುಮತಿ ನೀಡಲಾಗುವುದು ಎಂದು ಕೇಂದ್ರದ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ.

ನವದೆಹಲಿಗೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ‌ ಮೇಕೆದಾಟು ಯೋಜನೆ ಕುರಿತು ಮಾತುಕತೆ ನಡೆಸಿದ್ರು.

ಕಾವೇರಿ ನದಿ ನೀರಿನ ಸದ್ಬಳಕೆ ಹಾಗೂ ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳಲಿರುವ ಈ ಯೋಜನೆಯಿಂದ ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ. ಕಾವೇರಿ ನದಿ ನೀರು ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಈ ಯೋಜನೆಯಿಂದ ಉಲ್ಲಂಘನೆಯಾಗದು ಎಂದು ದೇವೇಗೌಡ ಅವರು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ರು.

ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ಕಾವೇರಿಯ ಹೆಚ್ಚುವರಿ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆ ರೂಪಿಸಿರುವ ಕರ್ನಾಟಕ, ಜಲವಿದ್ಯುತ್‌ ಉತ್ಪಾದನೆ ಹಾಗೂ ಬೆಂಗಳೂರು, ರಾಮನಗರ ಮತ್ತು ಕನಕಪುರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ರೂಪುರೇಷೆ ಸಿದ್ಧಪಡಿಸಿದೆ‌ ಎಂದು ವಿವರಣೆ ನೀಡಿದರು.

ದೇವೇಗೌಡ ಅವರಿಂದಮನವಿ ಸ್ವೀಕರಿಸಿದ ಬಳಿಕ, ಯೋಜನೆ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ಅನುಮತಿ ನೀಡುವುದಾಗಿ ಭರವಸೆ ನೀಡಿದ್ದಾರೆ.ಇದರಿಂದಾಗಿ ಮೇಕೆದಾಟು‌ ಯೋಜನೆ ಆರಂಭಕ್ಕೆ ಸಧ್ಯದಲ್ಲೇ ಚಾಲನೆ ಸಿಗುವ ನಿರೀಕ್ಷೆ ಮೂಡಿಸಿದೆ.

ಕೆ.ಆರ್. ಮಾರುಕಟ್ಟೆಯಂಥ ಮೂರು ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ- ಡಿಸಿಎಂ ಡಾ.ಜಿ. ಪರಮೇಶ್ವರ್

ಬೆಂಗಳೂರು: ಕೆ.ಆರ್. ಮಾರುಕಟ್ಟೆ ಮಾದರಿಯಲ್ಲೇ ಮೈಸೂರು ರಸ್ತೆ, ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯ ಭಾಗದಲ್ಲಿ ಬೃಹತ್ ಮಾರುಕಟ್ಟೆ ನಿರ್ಮಾಣ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದರು.

ಕೆ.ಆರ್. ಮಾರುಕಟ್ಟೆ ವಿವಿಧ ಭಾಗಗಳಿಗೆ ಭೇಟಿ‌ ನೀಡಿದ ಅವರು ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆ.ಆರ್.‌ ಮಾರುಕಟ್ಟೆಯಲ್ಲಿ ಬಹಳಷ್ಟು ವ್ಯಾಪಾರಸ್ಥರು ಬಾಡಿಗೆ ನೀಡದೇ ನಡೆಸುತ್ತಿದ್ದಾರೆ. ವ್ಯಾಪಾರಸ್ಥರಿಗಾಗಿಯೇ ನಿರ್ಮಿಸಿರುವ ಕಟ್ಟಡವನ್ನು ಬಳಕೆ ಮಾಡಿಕೊಳ್ಳದೇ ಬೀಗ ಹಾಕಿದ್ದಾರೆ. ವ್ಯಾಪಾರಸ್ಥರೇ ಹೋಗುವುದಿಲ್ಲ ಎಂಬ ದೂರು ಇದೆ.‌ ಆ ಜಾಗವನ್ನು ಪಾರ್ಕಿಂಗ್ ಅಥವಾ ಇತರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದ್ರು.

ಮಾರುಕಟ್ಟೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಯಾವುದೂ ಸೂಕ್ತ ರೀತಿಯಲ್ಲಿ ಇಲ್ಲ. ಇಲ್ಲಿನ ಅಧಿಕಾರಿಗಳು ಹೆಚ್ಚು ನಿರ್ಲಕ್ಷ್ಯದಿಂದ ಇರುವುದು ಗಮನಕ್ಕೆ ಬಂದಿದೆ. ನಾನೇ ಖುದ್ದು ಪ್ರತಿಯೊಂದನ್ನು ವೀಕ್ಷಿಸಿದ್ದೇನೆ. ಅಧಿಕಾರಿಗಳ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ.‌ ಕೆ.ಆರ್. ಮಾರುಕಟ್ಟೆಗೆ ಲಕ್ಷಾಂತರ ಜನ ಬರುವುದರಿಂದ ಸದಾ ಗಿಜುಗುಡುತ್ತಿದೆ.‌ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಗರದ ವಿವಿಧ ಭಾಗಗಳಲ್ಲಿ ಕೆ.ಆರ್. ಮಾರುಕಟ್ಟೆ ಮಾದರಿಯಲ್ಲೇ ಮಾರುಕಟ್ಟೆ ತೆರೆಯುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೌನ್ಸಿಲಿಂಗ್ ಮೂಲಕ ಒಪ್ಪಿಗೆ ಪಡೆದು, ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದ್ರು.

ಕೆ.ಆರ್. ಮಾರುಕಟ್ಟೆಯನ್ನು‌ ಕಾಯಕಲ್ಪ ಮಾಡಲಾಗುವುದು. ಜೊತೆಗೆ ಇಲ್ಲಿ ಬಾಡಿಗೆ ನೀಡದೇ ವ್ಯಾಪಾರ ಮಾಡುವವರು ಬಗ್ಗೆ ಹಾಗೂ ಈ ಭಾಗದ ಬಿಬಿಎಂಪಿ ಪ್ರಾಪರ್ಟಿ ಬಗ್ಗೆ 15 ದಿನದೊಳಗೆ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಮೇಯರ್ ಗಂಗಾಂಭಿಕೆ, ಉಪಮೇಯರ್ ರಮೀಳ‌ಉಮಾಶಂಕರ್, ನಗರ ಪೊಲೀಸ್ ಆಯುಕ್ತ ಸುನೀಲಗ ಕುಮಾರ್ ಉಪಸ್ಥಿತರಿದ್ದರು.

ಅಧಿಕಾರಿ ಅಮಾನತು:
ಮಾರುಕಟ್ಟೆಯೊಳಗೆ ನಿರ್ಮಿಸಿದ್ದ ಸಾಲು ಅಂಗಡಿಗಳು ಯಾವ ಇಲಾಖೆ ವ್ಯಾಪ್ತಿಗೆ ಸೇರಲಿದೆ ಎಂದು ಪರಮೇಶ್ವರ್ ಅವರು ಮಾರುಕಟ್ಟೆ ಡಿಸಿ ಮುನಿಲಕ್ಷ್ಮಿ ಅವರ ಬಳಿ ಮಾಹಿತಿ ಕೇಳಿದರು.‌ಆದರೆ ಈ ಬಗ್ಗೆ ಅವರಿಗೇ ಮಾಹಿತಿ ಇಲ್ಲದೇ ಇರುವುದಕ್ಕೆ ಆಕ್ರೋಶಗೊಂಡರು. ಏನು‌ ಕೆಲಸ‌ ಮಾಡುತ್ತೀದೀರ? ನಿಮ್ಮ ಇಲಾಖೆ ಪ್ರಾಪರ್ಟಿ ಯಾವುದು ಎಂಬುದೇ ಗೊತ್ತಿಲ್ಲವೆಂದರೆ ಯಾಕೆ ಈ ಸ್ಥಾನದಲ್ಲಿ ಇರಬೇಕು? ಎಂದು ಚಾಟಿ ಬೀಸಿದರು. ಜತೆಗೆ ಈ ಅಧಿಕಾರಿಯನ್ನು ಅಮಾನತುಗೊಳಿಸಿರುವುದಾಗಿ ಮಾಧ್ಯಮಕ್ಕೆ ಹೇಳಿದರು.

ಮೀಟರ್ ಬಡ್ಡಿಗೆ ಕಡಿವಾಣ:
ಮಾರುಕಟ್ಟೆಯಲ್ಲಿ ಮೀಟರ್ ಬಡ್ಡಿ ದಂದೆ ನಡೆಯುತ್ತಿರುವ ಬಗ್ಗೆ ನನಗೂ‌ ಮಾಹಿತಿ ಇದೆ. ಹೀಗಾಗಿ ಈ ದಂಧೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.

ಮಾರುಕಟ್ಟೆಯಲ್ಲಿಯೇ ಸಗ್ರಿಗೇಷನ್ ಕೇಂದ್ರ ಇದ್ದರೂ ಅಲ್ಲಿ ಕಸ ಸಂಸ್ಕರಣೆ ಮಾಡದೇ ಇರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಯಾವ ಕಾರಣಕ್ಕಾಗಿ ಈ ಕೇಂದ್ರ ಮುಚ್ಚಲಾಗಿದೆ ಎಂದು ಅಧಿಕಾರಿಗಳ ಮಾಹಿತಿ ಕೇಳಿದರೆ, ಅದಕ್ಕೆ ಉತ್ತರ ನೀಡದೇ ತಡಬಡಾಯಿಸಿದರು. ಇದರಿಂದ‌ ಕೋಪಗೊಂಡ ಅವರು ಒಂದು ವಾರದೊಳಗೆ ಯಾಕೆ ಈ‌ಕೇಂದ್ರ ನಿಷ್ಕ್ರಿಯೆಗೊಂಡಿದೆ ಎಂದು ಮಾಹಿತಿ ನೀಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಮಾರುಕಟ್ಟೆಯೊಳಗೆ ನೆಲಮಹಡಿಯಲ್ಲಿರುವ ಪಾರ್ಕಿಂಗ್ ಕೇಂದ್ರದಲ್ಲಿ ಸಾಕಷ್ಟು ಹಳೇ ವಾಹನಗಳು ಇರುವುದನ್ನು‌ ಗಮನಿಸಿದರು. ಮಾಲೀಕರಿಲ್ಲದ ವಾಹನಗಳನ್ನು ಪೊಲೀಸರ ನೆರವಿನೊಂದಿಗೆ ಹರಾಜ ಹಾಕುವಂತೆ ಸೂಚಿಸಿದರು.

ಮೀನು ಮಾರುಕಟ್ಟೆಗೆ ತೆರಳಿದ ಪರಮೇಶ್ವರ್ ಅವರು, ಅಲ್ಲಿನ ಅವ್ಯವಸ್ಥೆ ಹಾಗೂ ದುರ್ವಾಸನೆಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಈ ಭಾಗದಲ್ಲಿ ಇಷ್ಟೋಂದು ದುರ್ನಾಥ ಇದ್ದರೂ ಬಿಬಿಎಂಪಿ ಕಸ ವಿಲೇವಾರಿ ಮಾಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕಸವನ್ನು ತೆರವುಗೊಳಿಸುವಂತೆ ಸೂಚಿಸಿದರು.

HAL ಮಾರುಕಟ್ಟೆಯಲ್ಲಿ ಮಾತನಾಡುವ ಗಿಳಿಯ ಕಳ್ಳತನ!

ಬೆಂಗಳೂರು: ನಾಯಿಗಳ ಕಳ್ಳತನದ ಬಗ್ಗೆ ಆಗಾಗ ಸುದ್ಧಿಗಳನ್ನು ನಾವು ಕೇಳಿದ್ದೇವೆ. ಆದ್ರೆ, ಪಕ್ಷಿಗಳನ್ನು ಕದಿಯುತ್ತಾರಾ? ಹೌದು ಎಚ್‌ಎಎಲ್ ಮಾರುಕಟ್ಟೆಯಲ್ಲಿ ಪಕ್ಷಗಳ ಕಳ್ಳತನವಾಗಿದೆ.

ಭಾರೀ ಬೆಲೆ ಬಾಳುವ ಅಮೇರಿಕನ್ ಹಾಗೂ ಆಫ್ರಿಕನ್ ಪಕ್ಷಿಗಳನ್ನು ಎಚ್‌ಎಎಲ್ ಮಾರುಕಟ್ಟೆಯಲ್ಲಿ ಅಪಹರಿಸಲಾಗಿದೆ. ಹಕ್ಕಿ ವ್ಯಾಪಾರಿ ಪ್ರದೀಪ್ ಯಾದವ್ ಎಂಬುವವರ ಅಂಗಡಿಯಿಂದ ಸುಮಾರು ಆರು ಲಕ್ಷ ಮೌಲ್ಯದ ವಿದೇಶಿ ಹಕ್ಕಿಗಳನ್ನು ಕದ್ದೊಯ್ಯಲಾಗಿದೆ. ಇದರಲ್ಲಿ ಒಂದು ಮಾತನಾಡುವ ಗಿಳಿಯೂ ಸಹ ಇತ್ತು ಎನ್ನಲಾಗಿದೆ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನೇ ಹಕ್ಕಿಗಳನ್ನು ಅಪಹರಿಸಿದ್ದಾನೆ ಎಂದು ಶಂಕಿಸಲಾಗಿದೆ.

ಆಪ್ರೀನ್ ಗ್ರೇ ಪ್ಯಾರೋಟ್, 2 ಟ್ಯಾಮ್ಡ್ ಆಲ್ಬಿನೋ ಕಾಕ್ ಟೈಲ್, ಆಪ್ರಿಕನ್ ಲವ್ ಬರ್ಡ್ಸ್, ಎಯ್ಟ್ ಫಿಂಚಸ್ ಪಕ್ಷಿಗಳು ಕಳ್ಳತನವಾಗಿದ್ದು, ಆಪ್ರೀನ್ ಗ್ರೇ ಪ್ಯಾರೋಟ್ ಮಾತನಾಡುತ್ತಿತ್ತು ಎಂದು ತಿಳಿದುಬಂದಿದೆ. ಹೆಚ್ .ಎ. ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಕಾಂಗ್ರೆಸ್ ಸಚಿವರಿಗೆ ಡಿ.ಕೆ.ಶಿವಕುಮಾರ್ ಉಪಹಾರ ಕೂಟ!

ಬೆಂಗಳೂರು: ಕಾಂಗ್ರೆಸ್ ಸಚಿವರಿಗೆ ವೈದ್ಯಕೀಯ ಶಿಕ್ಷಣ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ತಮ್ಮ ಗೃಹ ಕಚೇರಿಯಲ್ಲಿ ಉಪಹಾರ ಕೂಟ ಏರ್ಪಡಿಸುವ ಮೂಲಕ ಕಾಂಗ್ರೆಸ್‌ನಲ್ಲಿ ತಾವು ಕೂಡ ಒಬ್ಬ ಪ್ರಭಾವಿ ನಾಯಕ ಎಂದು ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಮೈತ್ರಿ ಸರ್ಕಾರದಲ್ಲಿರುವ ಕಾಂಗ್ರೆಸ್‌ನ ೧೬ ಸಚಿವರನ್ನು ಡಿ.ಕೆ.ಶಿವಕುಮಾರ್ ಉಪಹಾರ ಕೂಟಕ್ಕೆ ಆಹ್ವಾನಿಸಿದ್ದರು. ಬೆಳಗಾವಿ ರಾಜಕಾರಣದ ಅಸಮಾಧಾನದಿಂದ ಸಚಿವ ರಮೇಶ್ ಜಾರಕಿಹೊಳಿ ಹಾಗೂ ವಿದೇಶಿ ಟೂರ್ ನಲ್ಲಿರುವ ಸಚಿವ ರಾಜಶೇಖರ್ ಪಾಟೀಲ್ ಪಾಟೀಲ್ ಹೊರತುಪಡಿಸಿ ಉಳಿದೆಲ್ಲಾ ಸಚಿವರು ಉಪಹಾರ ಕೂಟಕ್ಕೆ ಆಗಮಿಸಿದ್ದರು.

ಸಚಿವರಾದ ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್, ವೆಂಕಟರಮಣಪ್ಪ, ಕೃಷ್ಣ ಭೈರೇಗೌಡ, ಶಿವಶಂಕರ್ ರೆಡ್ಡಿ, ಆರ್.‌ಶಂಕರ್, ಶಿವಾನಂದ ಪಾಟೀಲ್, ಪುಟ್ಟರಂಗಶೆಟ್ಟಿ, ಕೆ.ಜೆ ಜಾರ್ಜ್, ಆರ್.ವಿ ದೇಶಪಾಂಡೆ, ಜಯಮಾಲಾ, ಪರಮೇಶ್ವರ್, ಯು.ಟಿ ಖಾದರ್ ಉಪಹಾರ ಕೂಟದಲ್ಲಿ ಪಾಲ್ಗೊಂಡಿದ್ದರು.

ಇನ್ಫೋಸಿಸ್ ಸಂಸ್ಥೆಯಿಂದ ರಾಜ್ಯಕ್ಕೆ ಮತ್ತೊಂದು ಕೊಡುಗೆ: ಸೈಬರ್ ಕ್ರೈಂ ಪತ್ತೆಗೆ ಹೊಸ ತಂತ್ರಜ್ಞಾನ!

ಬೆಂಗಳೂರು: ಕಾರ್ಪೋರೇಟ್ ಕಂಪನಿಗಳು ಸಾಮಾಜಿಕ ಕಾರ್ಯಗಳಲ್ಲಿ ಸರ್ಕಾರದೊಂದಿಗೆ ಯಾವ ರೀತಿ ಕೈಜೋಡಿಸಬಹುದು ಎಂಬುದಕ್ಕೆ ಇನ್ಫೋಸಿಸ್ ಸಂಸ್ಥೆ ಎಲ್ಲರಿಗೂ ಒಂದು ಮಾದರಿಯಾಗಿದೆ ಎಂದು ಡಿಸಿಎಂ ಪರಮೇಶ್ವರ್ ಅಭಿಪ್ರಾಯ ಪಟ್ಟರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೈಬರ್ ಲ್ಯಾಬ್ ನಿರ್ಮಾಣ ಸಂಬಂಧ ಒಪ್ಪಂದಕ್ಕೆ ಗೃಹಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್ ಸಮ್ಮುಖದಲ್ಲಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಸಹಿ ಹಾಕಿದರು.

ಈ ವೇಳೆ ಮಾತನಾಡಿದ ಪರಮೇಶ್ವರ್, ಸರಕಾರ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ ಲ.‌ಅನೇಕ ಕಡೆಯಿಂದ ಸಹಾಯ ಹಸ್ತ ಬೇಕಿದೆ. ಪೊಲೀಸ್ ಇಲಾಖೆಗೆ ಹೆಚ್ಚು ಸಹಾಯ ಸಿಗುತ್ತಿಲ್ಲ.‌ ಆಯವ್ಯಯದಲ್ಲೂ‌ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಪೊಲೀಸರು ರಾಜ್ಯದಲ್ಲಿ ಕಾನೂನು‌ ಸುವ್ಯವಸ್ಥೆ ಕಾಪಾಡಲು ಇನ್ನೂ ಪ್ರೋತ್ಸಾಹ ಸಿಗಬೇಕು. ಹೀಗಾಗಿ ಪೊಲೀಸ್ ಗೃಹ ಯೋಜನೆಯಡಿ ಮನೆ ಕಟ್ಟುವ ಕೆಲಸ ಶುರು ಮಾಡಿ ಮೂರನೇ ಹಂತಕ್ಕೆ ತಲುಪಿದ್ದೇವೆ.
ಎಫ್ ಐಆರ್ ದಾಖಲಾತಿ ಸೇರಿದಂತೆ ಪೊಲೀಸ್ ಇಲಾಖೆ ಸಂಪೂರ್ಣ ಆನ್‌ಲೈನ್ ತರುವ ಕೆಲಸ ಮಾಡಲಾಗುತ್ತಿದೆ. ಕರ್ನಾಟಕ ಪೊಲೀಸ್ ಇಡೀ‌ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಮುಂದೆ ನುಗ್ಗುತ್ತಿದೆ ಎಂದರು.

ಇನ್‌ಫೋಸಿಸ್‌ನಿಂದ ಸೈಬರ್ ಲ್ಯಾಬ್ ತರಬೇತಿ ಕೇಂದ್ರ ನಿರ್ಮಿಸಿ ಕೊಡಲಾಗುತ್ತಿದೆ.‌ ಇದಕ್ಕೆ ತಾಂತ್ರಿಕ ಪರಿಣಿತರ ಅಗತ್ಯವಿದ್ದು, ಪರಿಣಿತರು ಮುಂದೆ ಬರಬೇಕು. ಸೈಬರ್ ಸಂಬಂಧ ಹೆಚ್ಚುವ ಕ್ರೈಂ ತಡೆಯಲು ತಾಂತ್ರಿಕ ತರಬೇತಿ ಅತೀ ಅವಶ್ಯಕ. ಹೀಗಾಗಿ ಬೇರೆ ದೇಶದಿಂದಲೂ ಪರಿಣಿತರನ್ನು ಕರೆಸಿ ತರಬೇತಿ ಕೊಡಿಸಲಾಗುವುದು ಎಂದು ಹೇಳಿದರು.

ಇನ್‌ಫೋಸಿಸ್ ನಿರ್ಮಿಸುವ ತರಬೇತಿ ಕೇಂದ್ರ 22 ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು, ಕೆಲವೇ ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.