ಮೈತ್ರಿ ಸರ್ಕಾರ ಪತನ ಪ್ರಯತ್ನದ ಕಿಂಗ್ ಪಿನ್ ಉದಯ್ ಗೌಡ ವಿರುದ್ಧ ಲುಕ್‌ಔಟ್ ನೋಟೀಸ್ ಜಾರಿ!

ಬೆಂಗಳೂರು: ಮೈತ್ರಿ ಸರ್ಕಾರ ಪತನ ಪ್ರಯತ್ನದ ಕಿಂಗ್ ಪಿನ್ ಉದಯ್ ಗೌಡ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಲುಕ್ -ಔಟ್ ನೋಟೀಸ್ ಹೊರಡಿಸಿದ್ದಾರೆ.

ಮೈತ್ರಿ ಸರ್ಕಾರವನ್ನು ಅಲುಗಾಡಿಸಲು ಮುಂದಾಗಿದ್ದ ಕಿಂಗ್-ಪಿನ್ ಉದಯ್ ಗೌಡ ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹವಾಲಾ ದಂಧೆ ಆರೋಪದಡಿ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಉದಯ್ ಗೌಡ ನಾಪತ್ತೆಯಾಗಿದ್ದು, ಶ್ರೀಲಂಕಾದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು.

ಅಲ್ಲದೆ, ತನಿಖೆ ವೇಳೆ ಉದಯ್ ಗೌಡ ಭಾರತದಲ್ಲಿಲ್ಲ‌ ಎಂಬುದು ದೃಡಪಟ್ಟಿತ್ತು. ಈ ಹಿನ್ನಲೆಯಲ್ಲಿ ಆರೋಪಿ ಪತ್ತೆಗೆ ಇಮಿಗ್ರೇಷನ್ ಅಧಿಕಾರಿಗಳ ಮೂಲಕ ಕಬ್ಬನ್ ಪಾರ್ಕ್ ಪೊಲೀಸರು ಲುಕ್ ಔಟ್ ನೋಟೀಸ್ ಜಾರಿಗೊಳಿಸಿದ್ದಾರೆ.‌ ಏರ್ಪೋರ್ಟ್ ಹಾಗು ಬಂದರುಗಳಲ್ಲಿ ಆರೋಪಿ ಪತ್ತೆಯಾದರೆ ಬಂಧಿಸುವ ಸಂಬಂಧ ಲುಕ್‌ಔಟ್ ನೋಟೀಸ್ ಜಾರಿಗೊಳಿಸಲಾಗುತ್ತದೆ.

ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿದ ನಂತರ ಉದಯ್ ಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಕಳೆದ ಸೆಪ್ಟೆಂಬರ್ 25 ರಂದು ಉದಯ್ ಗೌಡ ಜಾಮೀನು ಅರ್ಜಿ ವಜಾಗೊಂಡಿತ್ತು. ಜಾಮೀನು ಅರ್ಜಿ ವಜಾಗೊಂಡ ಹಿನ್ನಲೆ ಆರೋಪಿ ಉದಯ್ ಗೌಡ ಪತ್ತೆಗೆ ಕಬ್ಬನ್ ಪಾರ್ಕ್ ಪೊಲೀಸರು ಬಲೆಬೀಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿಗಳ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗುತ್ತಿರುವ ಪ್ರಮುಖ ರಸ್ತೆ ಕಾಮಗಾರಿಗಳ ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಕುರಿತು ಅವರ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ಜರುಗಿತು. ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಭಾಗಿತ್ವದ 7556 ಕಿ.ಮೀ ರಸ್ತೆಯ ಪೈಕಿ 3463 ಕಿ.ಮೀ ರಸ್ತೆಯನ್ನು ಚತುಷ್ಪಥ ಮತ್ತು ಷಟ್ಪಥ ರಸ್ತೆಗಳನ್ನಾಗಿ ಪರಿವರ್ತಿಸಲು 36,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಯೋಜನೆಗಳು ಅನುಷ್ಠಾನಕ್ಕೆ ಬರಲು ಇಂಧನ, ಅರಣ್ಯ ಹಾಗೂ ಕಂದಾಯ ಇಲಾಖೆಗಳ ಸಹಯೋಗದಲ್ಲಿ ಕೆಲಸವಾಗಬೇಕಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ತೊಡಕುಗಳನ್ನು ನಿವಾರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿಗಳು ಅಗತ್ಯವಿರುವ ಕಡೆಗಳಲ್ಲಿ ರಾಜ್ಯ ಭೂಸ್ವಾಧೀನ ಅಧಿಕಾರಿಯನ್ನು ಶೀಘ್ರವಾಗಿ ನೇಮಿಸಲು ಸೂಚನೆ ನೀಡಿದರು.

ಅರಣ್ಯ ಇಲಾಖೆಯ ನಿಯಮಗಳ ಹಿನ್ನೆಲೆಯಲ್ಲಿ ಕಾಮಗಾರಿಗಳು ಕುಂಠಿತವಾಗಿರುವ ಹಿನ್ನೆಲೆಯಲ್ಲಿ 15 ದಿನಕ್ಕೊಮ್ಮೆ ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸುತ್ತಿದ್ದಾರೆ. ಒಟ್ಟು 3890 ಕೋಟಿ ರೂ.ಗಳ ವೆಚ್ಚದಲ್ಲಿ ಬೆಂಗಳೂರು- ಮೈಸೂರು ಷಟ್ಪಥ ರಸ್ತೆ (ಪ್ಯಾಕೇಜ್ -1) ರಲ್ಲಿ. ಪ್ಯಾಕೇಜ್ 2 ರನ್ನು 3300 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿದ್ದು, ಒಟ್ಟಾರೆ ಎರಡೂ ಪ್ಯಾಕೇಜ್ಗಳಿಂದ 7000 ಕೋಟಿ ರೂ.ಗಳ ವೆಚ್ಚವಾಗುತ್ತಿದ್ದು, ಇದೇ ತಿಂಗಳ ಅಂತ್ಯಕ್ಕೆ ಶಂಕುಸ್ಥಾಪನೆ ನೆರವೇರಿಸುವ ಉದ್ದೇಶವಿದೆ. ಆದ್ದರಿಂದ ಭೂ ಸ್ವಾಧೀನ ಪ್ರಕ್ರಿಯೆ, ಮರಗಳನ್ನು ಕಡಿಯುವ ಪ್ರಕ್ರಿಯೆ ಹಾಗೂ ಕೆಪಿಟಿಸಿಎಲ್ಗೆ ಸೇರಿದ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯವನ್ನು ತ್ವರಿತವಾಗಿ ಪೂರೈಸುವಂತೆ ಸೂಚನೆ ನೀಡಿದರು.

ಬೆಂಗಳೂರು, ಚಿತ್ರದುರ್ಗ, ಮಂಗಳೂರು, ಕಲಬುರ್ಗಿ, ಬಳ್ಳಾರಿ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಗೊಳಪಡುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳಲು ಇರುವ ಅಡೆತಡೆಗಳನ್ನು ನಿವಾರಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಲು ಸೂಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ , ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸಚಿವ ವೆಂಟಕರಾವ್ ನಾಡಗೌಡ, ಸಣ್ಣ ನೀರಾವರಿ ಇಲಾಖೆ ಸಚಿವ ಸಿ.ಎಸ್.ಪುಟ್ಟರಾಜು, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ಸಂಬಂಧಪಟ್ಟ ಜಿಲ್ಲೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಹಿರಿಯ ನಟಿ ಲಕ್ಷ್ಮೀಗೆ ಡಾ.ರಾಜ್ ಪ್ರಶಸ್ತಿ, ಕಲಾಸಾಮ್ರಾಟನ ಮುಡಿಗೆ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ

ಬೆಂಗಳೂರು: ಚಿತ್ರರಂಗದಲ್ಲಿನ ಜೀವಮಾನ ಶ್ರೇಷ್ಠ ಸಾಧನೆಗಾಗಿ ನೀಡುವ ಡಾ.ರಾಜ್ ಕುಮಾರ್ ಪ್ರಶಸ್ತಿಗೆ ಹಿರಿಯ ನಟಿ ಲಕ್ಷ್ಮೀ,ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಕಲಾಸಾಮ್ರಾಟ್ ಎಸ್.ನಾರಾಯಣ್ ಆಯ್ಕೆಯಾಗಿದ್ದಾರೆ.

2017 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲು ರಚಿಸಲಾಗಿದ್ದ ಹಿರಿಯ ನಟ ಜೆ.ಕೆ.ಶ್ರೀನಿವಾಸ ಮೂರ್ತಿನೇತೃತ್ವದ ಸಮಿತಿ ಇಂದು ಸರ್ಕಾರಕ್ಕೆ‌ ವರದಿ ಸಲ್ಲಿಕೆ ಮಾಡಿತು. ಸಮಿತಿಯ ಸದಸ್ಯರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಮ್ಮ ವರದಿ ಸಲ್ಲಿಸಿದರು.

ಜೀವಿತಾವಧಿ ಸಾಧನೆಗೆ ನೀಡುವ ಡಾ.ರಾಜ್ ಕುಮಾರ್ ಪ್ರಶಸ್ತಿಗೆ ಲಕ್ಷ್ಮಿ, ಹಿರಿಯ ಕಲಾವಿದೆ ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ನಿರ್ದೇಶಕರಿಗೆ ನೀಡುವ ಜೀವಮಾನ ಸಾಧನೆಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಾಗಿ ಎಸ್. ನಾರಾಯಣ್, ಚಲನಚಿತ್ರ ನಿರ್ದೇಶಕರು ಮತ್ತು ಕನ್ನಡ ಚಲನಚಿತ್ರ ರಂಗದ ವಿವಿಧ ವಲಯಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಚೇತನಗಳಿಗೆ ನೀಡುವ ಜೀವಮಾನ ಸಾಧನೆ ಡಾ.ವಿಷ್ಣುವರ್ಧನ್ ಪ್ರಶಸ್ತಿ ಜಿ.ಎನ್. ಲಕ್ಷ್ಮೀಪತಿ, ಹಿರಿಯ ಚಲನಚಿತ್ರ ನಿರ್ಮಾಪಕರು ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಲ್ಲಿ‌ ಉಲ್ಲೇಖಿಸಿ ಸಲ್ಲಿಕೆ‌ ಮಾಡಿದೆ. ಈ ಪ್ರಶಸ್ತಿಗಳು ತಲಾ 50 ಗ್ರಾಂ ಚಿನ್ನದ ಪದಕ ಹಾಗೂ ರೂ. 2.00 ಲಕ್ಷಗಳ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

ಜಾಮೀನು ನೀಡುವ ಮುನ್ನ ದುನಿಯಾ ವಿಜಯ್‌ಗೆ ನ್ಯಾಯಾಧೀಶರು ಹೇಳಿದ ಕಿವಿ ಮಾತುಗಳೇನು?

ಬೆಂಗಳೂರು: ಕಳೆದ 10 ದಿನಗಳಿಂದ ಸೆರೆವಾಸದಲ್ಲಿದ್ದ ನಟ ದುನಿಯಾ ವಿಜಯ್‌ಗೆ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದ್ದು, ವಿಜಿ ಸೇರಿದಂತೆ ನಾಲ್ವರು ಆರೋಪಿಗಳು ಬಂಧ ಮುಕ್ತವಾಗಿದ್ದಾರೆ.

ಜಿಮ್ ಟ್ರೈನರ್ ಮಾರುತಿ ಗೌಡ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್ ಮತ್ತು ಸ್ನೇಹಿತರು ಪರಪ್ಪನ ಅಗ್ರಹಾರ ಜೈಲು ಸೇರಿ 10 ದಿನಗಳಾಗಿತ್ತು. ಆದ್ರೆ, ಇಂದು ವಿಜಿ ಸೆರೆವಾಸವನ್ನು ನಗರ ಸೆಷನ್ಸ್ ನ್ಯಾಯಾಲಯ ಕೊನೆಗಾಣಿಸಿದೆ. ವಿಜಿ ಆಪ್ತರಾದ ಪ್ರಸಾದ್, ವಿಜಯ್, ಮಣಿ ಹಾಗೂ ಡ್ರೈವರ್ ಪ್ರಸಾದ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ನ್ಯಾಯಾಧೀಶ ಪಿ.ಪಿ ರಾಮಲಿಂಗೇಗೌಡ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

ಜಾಮೀನು ಅರ್ಜಿ ತೀರ್ಪಿಗೂ ಮುನ್ನ ನ್ಯಾಯಾಧೀಶ ಟಿ.ಪಿ ರಾಮಲಿಂಗೇಗೌಡ ನಟ ವಿಜಯ್ ‌ಗೆ ಒಂದಷ್ಟು ಕಿವಿ ಮಾತು ಹೇಳಿದ್ದಾರೆ. ರೀಲ್ ನಲ್ಲಿ ಹೀರೋ ಆಗಿರುವ ನೀವು ರಿಯಲ್ ಲೈಫಲ್ಲೂ ಹೀರೋ ಆಗಿ. ಸಮಾಜಕ್ಕೆ ಒಳ್ಳೆ ಸಂದೇಶ ನೀಡಿ. ಅಭಿಮಾನಿಗಳಿಗೆ ರೋಲ್ ಮಾಡೆಲ್ ಆಗಿ. ಇದೇ ಕೊನೆ, ಇನ್ಮುಂದೆ ನಿಮ್ಮ ಪುಂಡಾಟ ಪುನರಾವರ್ತನೆಯಾಗಬಾರದು. ಮಾಧ್ಯಮಗಳು ಎಲ್ಲವನ್ನು ಗಮನಿಸುತ್ತಿವೆ, ಸ್ವಲ್ಪ ಎಚ್ಚರಿಕೆಯಿಂದ ವರ್ತಿಸಿ. ಅಭಿಮಾನಿಗಳಿಗೆ ಮಾದರಿಯಾಗಬೇಕಾದ ನೀವೆ ಅವರಿಂದ ಕಲಿಯುವಂತಾಗಬಾರದು. ಅದನ್ನ ಬಿಟ್ಟು ಅಹಂನಿಂದ ಬೀಗಿದ್ರೆ ಅನಾಹುತ ಕಟ್ಟಿಟ್ಟ ಬುತ್ತಿ ಅಂತಾ ವಿಜಯ್‌ಗೆ ನ್ಯಾಯಾಧೀಶರು ವಿಧ ವಿಧವಾಗಿ ಎಚ್ಚರಿಕೆ ನೀಡಿ ಜಾಮೀನು ನೀಡಿದ್ದಾರೆ.

ಸಾಕ್ಷ್ಯ ನಾಶಪಡಿಸಬಾರದು, ಪೊಲೀಸರ ತನಿಖೆಗೆ ಸಹಕರಿಸಬೇಕು. ತಲಾ ಒಂದು ಲಕ್ಷದ ಬಾಂಡ್ ಹಾಗೂ ನಾಲ್ವರು ಆರೋಪಿಗಳಿಗೂ ಸೇರಿ ಇಬ್ಬರ ವೈಯಕ್ತಿಕ ಭದ್ರತಾ ಶ್ಯೂರಿಟಿಯನ್ನು ಒದಗಿಸುವಂತೆ ನ್ಯಾಯಾಲಯ ಷರತ್ತು ವಿಧಿಸಿದೆ.

ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಮಾಜಿ ಮೇಯರ್ ಹತ್ಯೆ!

ತುಮಕೂರು: ಮಹಾನಗರ ಪಾಲಿಕೆ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿಯನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ರವಿಕುಮಾರ್ ತಲೆಗೆ ಮಾರಕಾಸ್ತ್ರದಿಂದ ಹೊಡೆದ ರಭಸಕ್ಕೆ ರವಿ ತಲೆ ಛಿದ್ರ ಛಿದ್ರವಾಗಿದೆ. ಕಳೆದ ಬಾರಿ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರವಿ ವಿರುದ್ಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪ್ರಕರಣಗಳು ದಾಖಲಾಗಿತ್ತು.

ಬಟವಾಡಿ ಬ್ರಿಡ್ಜ್ ಬಳಿ ಘಟನೆ ನಡೆದಿದ್ದು, ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜನತಾದರ್ಶನದ ಉದ್ಯೋಗ ಆಕಾಂಕ್ಷಿಗಳಿಗಾಗಿ ಸಿಎಂ ಉದ್ಯೋಗ ಮೇಳ!

ಬೆಂಗಳೂರು: ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ ಉದ್ಯೋಗ ಆಕಾಂಕ್ಷಿಗಳಿಗಾಗಿ ಸಿಎಂ ಕುಮಾರಸ್ವಾಮಿ ಉದ್ಯೋಗ ಮೇಳ ಆಯೋಜಿಸಿದ್ದು, ಎರಡು ದಿನಗಳ ಕಾಲ ನಡೆಯುವ ಉದ್ಯೋಗ ಮೇಳಕ್ಕೆ ಇಂದು ಚಾಲನೆ ನೀಡಲಾಯಿತು.

ಸಿಎಂ ಜನತಾ ದರ್ಶನದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ 3198 ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವ ಉದ್ದೇಶದಿಂದ ಎರಡು ದಿನಗಳ ಉದ್ಯೋಗ ಮೇಳದಲ್ಲಿ ಹಮ್ಮಿಕೊಳ್ಳಲಾಗಿದ್ದು, 6 ಸಾವಿರ ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ಕೊಡಿಸುವ ಗುರಿ ಹೊಂದಲಾಗಿದೆ. ಸುಮಾರು 100 ಕ್ಕೂ ಹೆಚ್ಚು ಪ್ರಮುಖ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿವೆ.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು. ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ, ಇದು ಕಾಟಾಚಾರದ ಉದ್ಯೋಗ ಮೇಳ ಅಲ್ಲ, ಯಾರಿಗಾದರೂ ಉದ್ಯೋಗ ಸಿಗಲಿಲ್ಲ ಅಂದರೆ ಮರಳಿ ಯತ್ನ ಮಾಡಿ ಉದ್ಯೋಗ ಸಿಕ್ಕೇಸಿಗುತ್ತದೆ ಎಂದು ಆಕಾಂಕ್ಷಿಗಳಲ್ಲಿ ಭರವಸೆ ಮೂಡಿಸಿದರು.

ರಾಜ್ಯದ ಎಲ್ಲ ಕುಟುಂಬಗಳೂ ನೆಮ್ಮದಿಯ ಬದುಕು ಸಾಗಿಸಬೇಕೆನ್ನುವುದು ನಮ್ಮ ಸರಕಾರದ ಗುರಿ. ಒಂಭತ್ತು ಜಿಲ್ಲೆಗಳಲ್ಲಿ ಒಂಭತ್ತು ಕ್ಲಸ್ಟರ್ ಗಳನ್ನು ರಚಿಸಲು ನಿರ್ಧಾರ ಮಾಡಲಾಗಿದ್ದು, ಒಂದೊಂದು ಜಿಲ್ಲೆಯಲ್ಲಿ ಒಂದು ಲಕ್ಷ ಉದ್ಯೋಗ ಕೊಡುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ವಿಜನ್ ಗ್ರೂಪ್ ರಚಿಸಿ ಕಾರ್ಯತತ್ಪರವಾಗಿದ್ದೇವೆ ಎಂದು ಹೇಳಿದರು.

ಈ ಸರಕಾರ ಆಗಲೋ ಈಗಲೋ ಬಿದ್ದುಹೋಗುತ್ತೆ ಅಂತ ಟೀಕೆ ಮಾಡ್ತಿದ್ದಾರೆ. ಆದರೆ ನಮ್ಮ ಸರಕಾರ ಸುಭದ್ರವಾಗಿದೆ, ದೂರದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ನಮ್ಮ ಸರಕಾರ ಹಾಕಿಕೊಂಡಿದೆ. ಇಂದಿನಿಂದ ಎರಡು ದಿನ ಬೃಹತ್ ಉದ್ಯೋಗ ಮೇಳ ನಡೆಯಲಿದೆ.

ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಇಡೀ ದೇಶದಲ್ಲಿ ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯ ನಂಬರ್ ಒನ್. ಆದರೆ, ಉದ್ಯೋಗ ಸೃಷ್ಟಿಯೇ ದೊಡ್ಡ ಸಮಸ್ಯೆ ಆಗಿದೆ. ಉದ್ಯೋಗ ಇಲ್ಲ ಅಂತಲ್ಲ ಉದ್ಯೋಗ ಇದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯೋಗ ಸೃಷ್ಡಿಗೆ ಮುಂದಾಗಬೇಕು. ಅದರಲ್ಲೂ ಜನತಾ ದರ್ಶನದಲ್ಲಿ ಭಾರಿ ಸಂಖ್ಯೆಯ ಜನ ಉದ್ಯೋಗ ಕೇಳಿಕೊಂಡು ಬರುತ್ತಿದ್ದರು. ಹಾಗಾಗಿಯೇ ಈ ಉದ್ಯೋಗ ಮೇಳವನ್ನು ಆಯೋಜಿಸಲಾಯ್ತು ಎಂದರು.