ತಾಯಿಗೆ ಅಸಭ್ಯವಾಗಿ ಸನ್ನೆ ಮಾಡಿದವನ ರುಂಡ ಕತ್ತರಿಸಿದ ಮಗ!

ಮಂಡ್ಯ: ತಾಯಿಯನ್ನು ಕೆಟ್ಟದಾಗಿ ಕಂಡವನ ತಲೆ ಕಡಿದ ಮಗ ರುಂಡ ಹಿಡಿದುಕೊಂಡು ನೇರವಾಗಿ ಪೋಲಿಸ್ ಸ್ಟೇಷನ್‌ಗೆ ಬಂದು ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ‌ ಮಳವಳ್ಳಿ ತಾಲೂಕಿನ ಚಿಕ್ಕ ಬಾಗಿಲು ಗ್ರಾಮದಲ್ಲಿ ನಡೆದಿದೆ.

ತಾಯಿಗೆ ಕೆಟ್ಟದಾಗಿ ಸನ್ನೆಮಾಡಿ ಕರೆದಿದ್ದಕ್ಕೆ ಕೋಪಗೊಂಡ ಮಗ ಪಶುಪತಿ (28), ಗಿರೀಶ್ (38) ಎಂಬಾತನನ್ನು ಕೊಲೆಗೈದಿದ್ದಾನೆ.

ಗಿರೀಶನ ತಲೆಯನ್ನು ಕತ್ತರಿಸಿದ ಪಶುಪತಿ, ರುಂಡ ಕಡಿದುಕೊಂಡು ನೇರವಾಗಿ ಪೋಲಿಸರಿಗೆ ಶರಣಾಗಿದ್ದಾನೆ. ತನ್ನ ತಾಯಿಯನ್ನು ಕೆಟ್ಟದ್ದಾಗಿ ಸನ್ನೆ ಮಾಡಿದವನ ಬಿಟ್ಟರೆ ನಾನು ಬದುಕಿದ್ದು ಸತ್ತಂತೆ. ಹೀಗಾಗಿ ಗಿರೀಶ್ ನ‌ ಹತ್ಯೆ ಮಾಡಿದ್ದೇನೆ ಎಂದು ಪಶುಪತಿ ಪೊಲೀಸರ ಮುಂದೆ ಹೇಳಿದ್ದಾನೆ.

ಮಳವಳ್ಳಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳಲ್ಲೂ ರುಂಡ ಕಡಿದಿದ್ದ ಘಟನೆ ನಡೆದಿತ್ತು.

ಮಂಡ್ಯ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಮುಖ್ಯಮಂತ್ರಿಗಳ ಸೂಚನೆ!

ಮಂಡ್ಯ: ಕುಡಿಯುವ ನೀರನ್ನು ಒದಗಿಸಲು ಹಾಗೂ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ತತಕ್ಷಣ ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಮಂಡ್ಯ ಜಿಲ್ಲಾಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲು 1700 ಕೋಟಿ ರೂಗಳ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲಾಡಳಿತ ಸಿದ್ದಪಡಿಸುವಂತೆ ತಿಳಿಸಿದ ಅವರು ಮಂಡ್ಯ ನಗರದ ಸಮಗ್ರ ಅಭಿವೃದ್ಧಿಯ ಅನುದಾನಕ್ಕೆ ಕ್ರಿಯಾ ಯೋಜನೆ ಜಿಲ್ಲಾಡಳಿತ ಸಿದ್ದಪಡಿಸಿದ್ದು, ಅನುಮೋದನೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ರೈತರು ಯಾವ ಬೆಳೆಯನ್ನು ಬೆಳೆದರೆ ಆರ್ಥಿಕವಾಗಿ ಸಬಲರಾಗುತ್ತಾರೆ ಎಂಬ ವಿಷಯದ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಸಿದ್ಧಪಡಿಸಿ ಶೀಘ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.

ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ರೈತರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಹೆಚ್ಚಿನ ಅವಕಾಶವಿದ್ದು, ಇದರ ಸದ್ಬಳಕೆಯನ್ನು ರೈತರು ಮಾಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದ ಮುಖ್ಯಮಂತ್ರಿಗಳು ನರೇಗಾ ಯೋಜನೆಯಡಿ ಅನೇಕ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಅವಕಾಶಗಳಿದ್ದು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯನ್ಮೂಖರಾಗ ಬೇಕು ಎಂದು ಅವರು ತಿಳಿಸಿದರು.

ಆಸ್ಪತ್ರೆಗಳಲ್ಲಿ ರಾತ್ರಿ ವೇಳೆ ವೈದ್ಯರ ಸೇವೆಯ ಕೊರತೆಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದು, ಆರೋಗ್ಯ ಇಲಾಖೆಯು ರಾತ್ರಿ ವೇಳೆ ವೈದ್ಯರ ಸೇವೆ ಸಿಗುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ಸಂಬಂಧಿಸಿದ ವೈದ್ಯರಿಗೆ ನೀಡಬೇಕು ಎಂದು ತಿಳಿಸಿದ ಮುಖ್ಯ ಮಂತ್ರಿಗಳು ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ಸಿಗದಿರುವವರು ಬಿಪಿಎಲ್ ಹಾಗೂ ಆಧಾರ್ ಕಾರ್ಡ್‌ನ್ನು ನೀಡಿ ಈ ಯೋಜನೆಯ ಸೌಲಭ್ಯ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಸತಿ ರಹಿತರಿಗೆ ಕೂಡಲೇ ಸರ್ಕಾರಿ ಜಮೀನನ್ನು ಗುರುತಿಸಿ ನಿವೇಶನವನ್ನು ನೀಡಲು ಕ್ರಮವಹಿಸುವಂತೆ ಸೂಚಿಸಿದ ಅವರು ಜಿಲ್ಲೆಯಲ್ಲಿ ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳ ಮಾಹಿತಿ ಹಾಗೂ ಅಗತ್ಯವಾಗಿ ಬೇಕಾಗಿರುವ ಶಾಲಾ ಕಟ್ಟಡಗಳು ಹಾಗೂ ಶಾಲೆಗಳ ಅಭಿವೃದ್ಧಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಸಿದ್ಧಪಡಿಸಿ ನೀಡುವಂತೆ ಸೂಚಿಸಿದರು.
ಯುವ ಜನರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಜಿಲ್ಲಾ ಕ್ರೀಡಾಂಗಣ ಹಾಗೂ ತಾಲ್ಲೂಕು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದ ಮುಖ್ಯಮಂತ್ರಿಗಳು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗಾಗಿ ಭೂಮಿಯನ್ನು ನೀಡಿರುವ ರೈತರಿಗೆ ಸಮರ್ಪಕವಾದ ಪರಿಹಾರವನ್ನು ನೀಡಬೇಕು ಎಂದು ಅವರು ತಿಳಿಸಿದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 550 ಹಾಸಿಗೆಯ ಸಾಮಥ್ರ್ಯವಿರುವ ಸೌಲಭ್ಯವಿದ್ದು, ಇದನ್ನು 700 ಹಾಸಿಗೆಯ ಸಾಮಧ್ರ್ಯವಿರುವ ಸೌಲಭ್ಯಕ್ಕೆ ಮೇಲ್ದರ್ಜಗೆರೆಸಲು 30 ಕೋಟಿ ಅನುದಾನ ಕಾಯ್ದಿರಿಸಲಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ನೀಡುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾದ ಹೆಚ್.ಡಿ.ರೇವಣ್ಣ, ಪ್ರವಾಸೋದ್ಯಮ ಸಚಿವರಾದ ಸಾರಾ ಮಹೇಶ್, ಸಾರಿಗೆ ಸಚಿವರಾದ ತಮ್ಮಣ್ಣ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರಾದ ಸಿ.ಎಸ್.ಪುಟ್ಟರಾಜು ಹಾಗೂ ಎಲ್ಲಾ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕರು ಉಪಸ್ಥಿತರಿದ್ದರು.

ಮಂಡ್ಯ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಸಿಎಂ ಸೂಚನೆ

ಮಂಡ್ಯ:ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮಂಡ್ಯ ನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಯಿತು.ಸಭೆಯಲ್ಲಿ‌ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಿಎಂ ಸೂಚನೆ ನೀಡಿದರು.

ಮುಖ್ಯಮಂತ್ರಿಗಳು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ ವಿಷಯಗಳು:

1. ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲು 1700 ಕೋಟಿ ರೂಗಳ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲಾಡಳಿತ ಸಿದ್ದಪಡಿಸಿದೆ. ಈ ಯೋಜನೆಗೆ ಚಾಲನೆ ನೀಡಲು ಸೂಚಿಸಲಾಗಿದೆ.

2. ಕುಡಿಯುವ ನೀರನ್ನು ಒದಗಿಸಲು ಎಲ್ಲಾ ಕೆರೆಗಳನ್ನು ತುಂಬಿಸಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

3. ಮಂಡ್ಯ ನಗರದ ಸಮಗ್ರ ಅಭಿವೃದ್ಧಿಯ ಅನುದಾನಕ್ಕೆ ಕ್ರಿಯಾ ಯೋಜನೆ ಜಿಲ್ಲಾಡಳಿತ ಸಿದ್ದಪಡಿಸಿದ್ದು, ಇದರ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

4. ಮಂಡ್ಯ ಜಿಲ್ಲೆಯಲ್ಲಿ 7 ತಾಲ್ಲೂಕುಗಳಲ್ಲಿ ರೈತರು ಯಾವ ಬೆಳೆಯನ್ನು ಬೆಳೆದರೆ ಆರ್ಥಿಕವಾಗಿ ಸಬಲರಾಗುತ್ತಾರೆ ಎಂಬುಂದನ್ನು ಸಂಪೂರ್ಣ ಮಾಹಿತಿಯನ್ನು ತೋಟಗಾರಿಕೆ ಉಪನಿರ್ದೇಶಕರು ಸಿದ್ಧಪಡಿಸಿ ನೀಡುವಂತೆ ತಿಳಿಸಲಾಗಿದೆ.

5. ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ರೈತರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಹೆಚ್ಚಿನ ಅವಕಾಶವಿದ್ದು, ಇದರ ಸದ್ಬಳಕೆಯನ್ನು ರೈತರು ಮಾಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಈ ಯೋಜನೆಯ ಸಮರ್ಪಕ ಅನುಷ್ಟಾನಕ್ಕೆ ಹೆಚ್ಚು ಒತ್ತು ನೀಡುವಂತೆ ತಿಳಿಸಲಾಯಿತು.

6. ಆಸ್ಪತ್ರೆಗಳಲ್ಲಿ ರಾತ್ರಿ ವೇಳೆ ವೈದ್ಯರು ಕಡ್ಡಾಯವಾಗಿ ಇರಬೇಕು. ರಾತ್ರಿವೇಳೆ ಚಿಕಿತ್ಸೆಗಾಗಿ ಬರುವ ರೋಗಿಗಳ ಸೇವೆಯನ್ನು ವೈದ್ಯರು ಮಾಡಬೇಕು ಎಂದು ಜಿಲ್ಲಾ ಆರೋಗ್ಯಧಿಕಾರಿಗಳಿಗೆ ಸೂಚಿಸಲಾಯಿತು.

7. ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯವನ್ನು ಬಿಪಿಎಲ್ ಹಾಗೂ ಆಧಾರ್ ಕಾರ್ಡ್ ಇರುವವರು ಕೂಡ ಪಡೆಯಬಹುದಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಲಾಯಿತು.

8. ವಸತಿ ರಹಿತ ರೈತರಿಗೆ ಕೂಡಲೇ ಸರ್ಕಾರಿ ಜಮೀನನ್ನು ಗುರ್ತಿಸಿ ನಿವೇಶನವನ್ನು ನೀಡಲು ಕ್ರಮವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಯಿತು.

9. ಜಿಲ್ಲೆಯಲ್ಲಿ ದುರಸ್ತಿಯಲ್ಲಿರುವ ಶಾಲಾ ಕೋಠಡಿಗಳ ಮಾಹಿತಿ ಹಾಗೂ ಅಗತ್ಯವಾಗಿ ಬೇಕಾಗಿರುವ ಶಾಲಾ ಕಟ್ಟಡಗಳು ಹಾಗೂ ಶಾಲೆಗಳ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜಂಟಿಯಾಗಿ ಸಂಪೂರ್ಣವಾದ ಮಾಹಿತಿಯನ್ನು ಸಿದ್ಧಪಡಿಸಿ ನೀಡುವಂತೆ ಸೂಚಿಸಲಾಯಿತು.

10. ಯುವ ಜನರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಜಿಲ್ಲಾ ಕ್ರೀಡಾಂಗಣ ಹಾಗೂ ತಾಲ್ಲೂಕು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಲಾಯಿತು.

11. ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಲು ಕ್ರಮವಹಿಸಬೇಕು ಹಾಗೂ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ಸಮರ್ಪಕವಾದ ಪರಿಹಾರವನ್ನು ನೀಡಲು ಸೂಚಿಸಲಾಯಿತು.

12. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 550 ಹಾಸಿಗೆಯ ಸಾಮಥ್ರ್ಯವಿರುವ ಸೌಲಭ್ಯವಿದ್ದು, ಇದನ್ನು 700 ಹಾಸಿಗೆಯ ಸಾಮಧ್ರ್ಯವಿರುವ ಸೌಲಭ್ಯಕ್ಕೆ ಮೇಲ್ದರ್ಜಗೆರೆಸಲ 30 ಕೋಟಿ ಅನುದಾನ ಕಾಯ್ದಿರಿಸಲಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಯಿತು.

13. ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.

ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆ ಅಗತ್ಯ: ಸಿಎಂ

ಬೆಂಗಳೂರು: ಒಂದನೇ ತರಗತಿಯಿಂದಲೇ ಇಂಗ್ಲೀಷ್ ಅನ್ನು ಒಂದು ಭಾಷೆಯಾಗಿ ಕಲಿಸಬೇಕಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರತಿಪಾದಿಸಿದ್ದು ಇಂಗ್ಲೀಷ್ ವಿರುದ್ಧ ದನಿ ಎತ್ತುತ್ತಿದ್ದವರಿಗೆ ಟಾಂಗ್ ನೀಡಿದ್ದಾರೆ.

ಬಿಬಿಎಂಪಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಮೈಕ್ರೋಸಾಫ್ಟ್ ಸಂಸ್ಥೆ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿರುವ “ರೋಷನಿ” ಕಾರ್ಯಕ್ರಮಕ್ಕೆ ನಗದ ಪುರಭವನದಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಚಾಲನೆ ನೀಡಿದರು.

ನಂತರ ಮಾತನಾಡಿದ ಸಿಎಂ,ಒಂದನೇ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಸಲೇಬೇಕು.ಹಲವಾರು ಜನ ಕನ್ನಡದ ಪರವಾಗಿ ಮಾತನಾಡಲು ಬರುತ್ತಾರೆ.ಆದರೆ ನೀವು ನಿಮ್ಮ ಕುಟುಂಬದ ಮಕ್ಕಳು ಆಂಗ್ಲಭಾಷೆಯಲ್ಲಿ ಓದಲು ಕಳಿಸುತ್ತೀರಿ.ಆದರೆ ಬಡ ಕುಟುಂಬದ ಮಕ್ಕಳು ಮಾತ್ರ ಇಂಗ್ಲೀಷ್ ಕಲಿಯಬಾರದಾ.ನೀವು ಮೊದಲು ನಿಮ್ಮ‌ಮಕ್ಕಳು ಯಾವ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದು ಜಾಹೀರಾತು ಕೊಟ್ಟು ಬಹಿರಂಗ ಪಡಿಸಿ.ಆಗ ನಿಮ್ಮನ್ಮು ಗೌರವಿಸುತ್ತೇನೆ ಎಂದು ತಿರುಗೇಟು ನೀಡಿದರು.

ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಈ ವಿಷಯದ ಬಗ್ಗೆ ಹಲವಾರು ಬಾರಿ ಚರ್ಚಿಸಿದ್ದೇವೆ.ಬಿಬಿಎಂಪಿ ವ್ಯಾಪ್ತಿಯ ಶಾಲೆಗಳನ್ನು ಗುಣಾತ್ಮಕ ಶಾಲೆಗಳಾಗಿ ಪರಿವರ್ತಿಸಬೇಕು ಎಂಬುದು ನಮ್ಮ ಕನಸಾಗಿತ್ತು.ಈಗ ಅದು ಸಾಕಾರಗೊಳ್ಳುತ್ತಿದೆ.ಸರ್ಕಾರಿ ಶಾಲೆ,ಬಿಬಿಎಂಪಿ ಶಾಲೆಗಳ ಬಗ್ಗೆ ಇದ್ದ ಅಪನಂಬಿಕೆ ಇಂದಿನಿಂದ ಬದಲಾವಣೆಯಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಕೇವಲ ಹೆಣ್ಣುಮಕ್ಕಳೇ ಇರುವುದು ನೋಡಿ ಬಿಬಿಎಂಪಿ ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಪ್ರವೇಶವೇ ಇಲ್ಲವೇ ಎಂಬ ಅನುಮಾನ ಬಂತು.ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೇ.90ರಷ್ಟು ಹೆಣ್ಣುಮಕ್ಕಳು ಶೇ.9ರಷ್ಟು ಗಂಡು ಮಕ್ಕಳಿದ್ದಾರೆ.ಇದಕ್ಕೆ ಮೊದಲು ವಿದ್ಯಾರ್ಥಿನಿಯರನ್ನು ಅಭಿನಂದಿಸುತ್ತೇನೆ ಎಂದರು.

ನಮ್ಮ ಈ ಪ್ರಯತ್ನದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳವರು ನಿಮ್ಮ ಹಿಂದೆ ಬರುವಂತೆ ಆಗುತ್ತದೆ.ಆದರೆ ಬಿಬಿಎಂಪಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ಉಪನ್ಯಾಸಕರ ಸಂಖ್ಯೆ ತೀರಾ ಕಮ್ಮಿ ಇದೆ.ಇದರಿಂದ ನಮಗೆ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ‌.ಈ ಬಗ್ಗೆ ಇಷ್ಟರಲ್ಲೇ ಇದರ ಬಗ್ಗೆ ಒಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಬಿಬಿಎಂಪಿ ಶಾಲೆಗಳಿಗೆ ನಾನು ಮತ್ತು ಡಿಸಿಎಂ ಖುದ್ದಾಗಿ ಭೇಟಿ ನೀಡುತ್ತೇವೆ.ನಿಮ್ಮ ಸಮಸ್ಯೆಗಳೇನು ಎಂದು ಅರಿಯುವ ಪ್ರಯತ್ನ ಮಾಡುತ್ತೇವೆ.ಈ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಕೊಡಲು ಅಂತಾರಾಷ್ಟ್ರೀಯ ಮಟ್ಡಕ್ಜೆ ಏರಿಸಲು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ 500 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ.ಇಂದಿನ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರಿಗೂ ತರಬೇತಿ ನೀಡಲಾಗುತ್ತದೆ ಎಂದರು.

ಇತ್ತೀಚೆಗೆ ಬಿಬಿಎಂಪಿ ಅಧಿಕಾರಿಗಳು ಕೋರ್ಟ್ ಗಳಿಂದ ಹೇಳಿಸಿಕೊಂಡು ಕೆಲಸ ಮಾಡುವ ಸ್ಥಿತಿಗೆ ತಲುಪಿದ್ದಾರೆ.ಈ ಸಂಬಂಧ ಬಿಬಿಎಂಪಿ ಕಮೀಷನರ್ ಗೆ ಸೂಚನೆ ನೀಡುತ್ತೇನೆ.ಇಂಜಿನಿಯರ್ ಗಳೇ ಇರಲಿ ,ಬೇರೆ ಅಧಿಕಾರಿಗಳೇ ಇರಲಿ ಕೋರ್ಟ್ ಗಳಿಂದ ಛೀ ಮಾರಿ ಹಾಕಿಸಿಕೊಳ್ಳುವ ಮೊದಲು ನಿಮ್ಮ ಕೆಲಸ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದರು.

ನಂತರ ಮಾತನಾಡಿದ ಡಿಸಿಎಂ ಡಾ.ಜಿ.ಪರಮೇಶ್ವರ್, ಬಿಬಿಎಂಪಿಯ 800 ಚ ಕಿಮೀ ವ್ಯಾಪ್ತಿಯಲ್ಲಿ ನಮ್ಮ‌ ಬಿಬಿಎಂಪಿ ಶಾಲೆಗಳಿವೆ.ಈ ಶಾಲೆಗಳನ್ನು ನೋಡಿದರೆ ನಮ್ಮ ಬಾಲ್ಯ ನೆನಪಾಗುತ್ತದೆ.ನಾನು ಹಳ್ಳಿಯಿಂದ ಬಂದವನು.ಚಾವಡಿಯಲ್ಲಿ ಓದಿ ಬಂದವನು.ನಾನು ಬಿಬಿಎಂಪಿ ಯ ಒಂದೆರಡು ಶಾಲೆಗಳಿಗೆ ಭೇಟಿ ಕೊಟ್ಟಿದ್ದೇನೆ‌.ಕಾನ್ವೆಂಟ್ ಗಳಿಗೆ ಹೋಗಲಾರದ ಬಡವರ ಮಕ್ಕಳು ಈ ಶಾಲೆಗಳಿಗೆ ಬರುತ್ತಾರೆ.ಬಿಬಿಎಂಪಿ ಶಾಲೆಗಳಲ್ಲಿ ಓದಿದವರು ಇಂದು ಉತ್ತಮ ಸ್ಥಿತಿಯಲ್ಲಿದ್ದಾರೆ,ಉನ್ನತ ಹುದ್ದೆಗಳಲ್ಲಿದ್ದಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿ ಶಾಲೆಗಳು ನಿರ್ಲಕ್ಷಿತವಾದವು ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೆ ಶಿಕ್ಷಣ ಬಹಳ ಜನರಿಗೆ ಸಿಗುತ್ತಿರಲಿಲ್ಲ.ಹಾಗಾಗಿ ಅವರು ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಂಡಿದ್ದರು‌‌.ಈಗ ಅವೆಲ್ಲವೂ ಸಿಗುತ್ತಿದೆ.ಶಿಕ್ಷಿತರ ಪ್ರಮಾಣ ಶೇ.80 ಕ್ಕೇರಿದೆ.ಈ ದೇಶದಲ್ಲಿ ಕಳೆದ 70 ವರ್ಷದಲ್ಲಿ ಸಾಕಷ್ಟು ಬದಲಾವಣೆ ಆಗಿದೆ.ವಿಶ್ವದ ಯಾವುದೇ ದೇಶಕ್ಕೆ ಹೋದರೂ ಒಬ್ಬ ಭಾರತೀಯ ಸಾಫ್ಟ್ ವೇರ್ ತಂತ್ರಜ್ಞ,ವೈದ್ಯ ಸಿಗುತ್ತಾನೆ.ಆದರೂ ಒಂದು ವರ್ಗದ ಜನ ಶಿಕ್ಷಣದಿಂದ ಅಲಭ್ಯರಾಗಿದ್ದಾರೆ‌.ಅವರಿಗಾಗಿ ಮೈಕ್ರೋಸಾಫ್ಟ್ ಪ್ರಪಂಚದಲ್ಲೇ ಮೊದಲ ಬಾರಿಗೆ ಈ ಪ್ರಯೋಗಕ್ಕೆ ಮುಂದಾಗಿದೆ.ಈ ಪ್ರಯೋಗ ಯಶಸ್ವಿಯಾಗುವ ವಿಶ್ವಾಸ ನಮಗಿದೆ ಎಂದರು.

ಸಮ್ಮಿಶ್ರ ಸರ್ಕಾರದ ಬಗ್ಗೆ ಬಹಳಷ್ಟು ಜನ ಟೀಕೆ ಮಾಡಬಹುದು.ಆದರೆ ಜನ ಸಾಮಾನ್ಯರು,ಬಡವರು ಹಾಗೂ ಹಿಂದುಳಿದವರಿಗೆ ಅನುಕೂಲವಾಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದರು.

ನ್ಯಾಯಾಧೀಶರು ಗುಂಡಿ ಮುಚ್ಚಲು,ಚರಂಡಿ ಮುಚ್ಚಲು ಆದೇಶ ಮಾಡಿದರೆ ಅದು ನಮ್ಮ ಆಡಳಿತ ಹೇಗಿದೆ ಎಂದು ತೋರಿಸುತ್ತದೆ.ಹಾಗೆ ಆಗಬಾರದು.ಅದಕ್ಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ. ಬೆಂಗಳೂರಿನಲ್ಲಿ 380ಕ್ಕೂ ಹೆಚ್ಚು ಕೆರೆಗಳಿವೆ.ಈ ಕೆರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಉದ್ದೇಶಿಸಿದ್ದೇವೆ.ಇನ್ನು ಐದಾರು ವರ್ಷದಲ್ಲಿ ಬಿಎಂಟಿಸಿಯಲ್ಲಿ ಡೀಸೆಲ್ ಬಸ್ ಗಳನ್ನು ಬದಲಾಯಿಸಿ ಸಂಪೂರ್ಣ ಎಲೆಕ್ಟ್ರಿಕ್ ಚಾಲಿತ ಬಸ್ ಗಳನ್ನು ಬಳಕೆ ಮಾಡಲಾಗುತ್ತದೆ. ಇನ್ನು ಎರಡು ಮೂರು ತಿಂಗಳಲ್ಲಿ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಬಸ್ ಗಳು ರಸ್ತೆಗಳಿಯಲಿವೆ ಎಂದರು.

ಸ್ಯಾಮ್‍ಸಂಗ್‍ನ ಮೊಟ್ಟಮೊದಲ ಮೂರು ಕ್ಯಾಮೆರಾ ಸ್ಮಾರ್ಟ್‍ಫೋನ್ ಗೆಲಾಕ್ಸಿ ಎ7 ಭಾರತದಲ್ಲಿ ಪದಾರ್ಪಣೆ

ಬೆಂಗಳೂರು: ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ ಆದ ಸ್ಯಾಮ್‍ಸಂಗ್ ಇಂದು, ಅದ್ಭುತ ವಿನ್ಯಾಸ, ಶಕ್ತಿಶಾಲಿ ಹಿಂಬದಿ ಮೂರು ಕ್ಯಾಮೆರಾ, ಕಣ್ಣುಕುಕ್ಕುವ ಹೊಸ ಬಣ್ಣ ಹಾಗೂ ಶ್ರೇಷ್ಠ ಕ್ಷಮತೆಯ ಗೆಲಾಕ್ಸಿ ಎ7 ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಿದೆ.

ಗೆಲಾಕ್ಸಿ ಎ7 ಅನ್ನು ಗ್ರಾಹಕರ ಒಳತೋಟಿಯನ್ನು ಆಧರಿಸಿ ಅಭಿವೃದ್ಧಿಪಡಿಸಲಾಗಿದ್ದು, ಪ್ರಸ್ತುತ ಸಹಸ್ರಮಾನದ ಪೀಳಿಗೆಯ ಶೇಕಡ 50ರಷ್ಟು ಭಾರತೀಯರು ತಮ್ಮ ಸ್ಮಾರ್ಟ್‍ಫೋನ್ ಕ್ಯಾಮೆರಾಗಳನ್ನು ಪ್ರತಿದಿನ ಬಳಸುತ್ತಾರೆ. ಅಂತೆಯೇ ಹಿಂಬದಿ ಕ್ಯಾಮೆರಾವನ್ನು ಮುಂಭಾಗದ ಕ್ಯಾಮೆರಾದ ದುಪ್ಪಟ್ಟು ಬಾರಿ ಬಳಸುತ್ತಾರೆ. ಹೊಸ ಮೂರು ಕ್ಯಾಮೆರಾಗಳ ವ್ಯವಸ್ಥೆಯಲ್ಲಿ, ಹೆಚ್ಚುವರಿಯಾಗಿ 8 ಮೆಗಾಪಿಕ್ಸೆಲ್ 120 ಡಿಗ್ರಿ ಅಲ್ಟ್ರಾವೈಡ್ ಲೆನ್ಸ್ ಅಳವಡಿಸಲಾಗಿದ್ದು, ಇದು ಮನುಷ್ಯರ ಕಣ್ಣಿನಷ್ಟೇ ವಿಶಾಲ ಕೋನದ ದೃಷ್ಟಿ ಹರಿಸುತ್ತದೆ. ಇದು ಗ್ರಾಹಕರಿಗೆ ಯಾವುದೇ ನಿರ್ಬಂಧವಿಲ್ಲದ ವಿಶಾಲ ಕೋನದ ಫೋಟೊಗಳನ್ನು ನಾವು ನೋಡುವ ರೀತಿಯಲ್ಲೇ ತೆಗೆಯಲು ಅನುವು ಮಾಡಿಕೊಡುತ್ತದೆ.

24 ಎಂಪಿ ಪ್ರಾಥಮಿಕ ಮತ್ತು ಸೆಲ್ಫಿ ಕ್ಯಾಮೆರಾಗಳು ಕೂಡಾ ಹೊಸ ತಂತ್ರಜ್ಞಾನವಾದ ಪಿಕ್ಸೆಲ್ ಬಿನ್ನಿಂಗ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಸಾಧನವು ತಾನಾಗಿಯೇ ಕಡಿಮೆ ಬೆಳಕಿನ ಸ್ಥಿತಿಯನ್ನು ಪತ್ತೆ ಮಾಡಿ, ಒಂದು ಸೂಪರ್ ಪಿಕ್ಸೆಲ್‍ಗೆ ಹೆಚ್ಚುವರಿಯಾಗಿ ನಾಲ್ಕು ಪಿಕ್ಸೆಲ್‍ಗಳನ್ನು ಜೋಡಿಸುತ್ತದೆ. ಇದು ಸ್ಪಷ್ಟ ಹಾಗೂ ನಿಖರ ಫೋಟೊಗಳನ್ನು ಕತ್ತಲ ವಾತಾವರಣದಲ್ಲಿ ಕೂಡಾ ಸೆರೆ ಹಿಡಿಯಲು ಅನುಕೂಲವಾಗಲಿದೆ. 24 ಎಂಪಿ ಪ್ರಾಥಮಿಕ ಕ್ಯಾಮೆರಾದಲ್ಲಿ 5ಎಂಪಿ ಆಳದ ಲೆನ್ಸ್ ಇದ್ದು ಇದು ಲೈವ್ ಫೋಕಸ್ ಲಕ್ಷಣವನ್ನು ಹೊಂದಿದೆ. ಇದು ಕ್ಷೇತ್ರದ ಆಳವನ್ನು ನಿಯಂತ್ರಿಸಿ, ಬಳಕೆದಾರರು ಫೋಟೊ ಸೆರೆ ಹಿಡಿಯುವ ಅವಧಿಯಲ್ಲಿ ಮತ್ತು ಫೋಟೊ ಸೆರೆ ಹಿಡಿದ ಬಳಿಕ ಕೂಡಾ ಹೊಂದಾಣಿಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಶೇಕಡ 40ರಷ್ಟು ಮಂದಿ ಸಹಸ್ರಮಾನ ಪೀಳಿಗೆಯ ಭಾರತೀಯರು ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸುವ ಮುನ್ನ ಎಡಿಟ್ ಮಾಡುತ್ತಾರೆ ಎಂಬ ಗ್ರಾಹಕರ ಪ್ರವೃತ್ತಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಅನುಗುಣವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಜತೆಗೆ ಎ7 ಅತ್ಯದ್ಭುತ ಕ್ಷಮತೆಯ ಪವರ್ ಪ್ಯಾಕ್ ಕೂಡಾ ಹೊಂದಿದೆ. ಗೆಲಾಕ್ಸಿ ಎ7 ಕ್ಯಾಮೆರಾ ಸೆನ್ಸ್ ಆಪ್ಟಿಮೈಸರ್ ಎಂಬ ವಿಶಿಷ್ಟ ಸಾಧನವನ್ನು ಒಳಗೊಂಡಿದ್ದು, ಇದು 19 ಭಿನ್ನ ಚಿತ್ರಣಗಳನ್ನು ಅಂದರೆ ಆಹಾರ, ಹೂವು ಅಥವಾ ಸೂರ್ಯಾಸ್ತದಂಥ ಭಿನ್ನ ಸನ್ನಿವೇಶಗಳನ್ನು ಪತ್ತೆ ಮಾಡಿ, ಅತ್ಯುತ್ತಮ ಚಿತ್ರ ಸಂಯೋಜನೆಯನ್ನು ಸ್ವಯಂಚಾಲಿತವಾಗಿ ಮಾಡಿಕೊಂಡು, ಕ್ಲಿಕ್ಕಿಸುತ್ತದೆ. “ಎಆರ್ ಎಮೋಜಿ” ಲಕ್ಷಣ ಬಳಸಿಕೊಂಡು ವಿಶೇಷ ಅಗತ್ಯತೆಯ ಅವತಾರಗಳನ್ನು ಸೃಷ್ಟಿಸುವ ಮೂಲಕ ಗ್ರಾಹಕರು ತಮ್ಮ ಅಂತರ್ಗತವಾದ ಮೆಸೆಜಿಂಗ್ ಅನುಭವವನ್ನು ವಿಸ್ತೃತಗೊಳಿಸಿಕೊಳ್ಳಬಹುದು. ಸೆಲ್ಫಿ ಕ್ಯಾಮೆರಾದಲ್ಲಿ ತಮ್ಮ ಹಾಗೂ ಹಿಂಬದಿ ಕ್ಯಾಮೆರಾದಲ್ಲಿ ಗೆಳೆಯರ ಫೋಟೊ ಶೂಟ್ ಮಾಡಬಹುದು. ಗ್ರಾಹಕರು ಇದರ ಜತೆಗೆ, ಜಿಐಎಫ್ ಇಮೇಜ್‍ಗಳಿಂದ ಆಯ್ಕೆ ಮಾಡಿಕೊಂಡು ಹೆಚ್ಚು ಸಂತಸದಾಯಕ ಹಾಗೂ ಭಾವನಾತ್ಮಕ ಅನುಭವದ ಚಿತ್ರಗಳನ್ನು ಸೆರೆಹಿಡಿಯಬಹುದು. 25 ಎಂಪಿ ಸೆಲ್ಫಿ ಕ್ಯಾಮೆರಾ, ಪ್ರೊ ಲೈಟಿಂಗ್ ಲಕ್ಷಣವನ್ನೂ ಹೊಂದಿದ್ದು, ಇದರಲ್ಲಿ ಚಿತ್ರಗಳನ್ನು ಬಹು ಬೆಳಕಿನ ಸೆಟ್ಟಿಂಗ್‍ನೊಂದಿಗೆ ಎಡಿಟ್ ಮಾಡಲು ಅವಕಾಶವಿದೆ. ಇದರ ಜತೆಗೆ ವಿಭಿನ್ನ ಹಾಗೂ ವೃತ್ತಿಪರ ಲೇಪವನ್ನು ಸ್ಟುಡಿಯೊ ಫೋಟೊ ಶೂಟ್ ರೂಪದಲ್ಲಿ ಮಾರ್ಪಡಿಸಬಹುದಾಗಿದೆ.

6.0 ಇಂಚುಗಳ ಎಫ್‍ಎಚ್‍ಡಿ+ ಸೂಪರ್ ಅಮೋಲೆಡ್ ಡಿಸ್‍ಪ್ಲೇ ಗೆಲಾಕ್ಸಿ ಎ7ನಲ್ಲಿದ್ದು, ಸ್ಯಾಮ್‍ಸಂಗ್‍ನ ವಿಶಿಷ್ಟ ಐಡೆಂಟಿಡಿ ಡಿಸ್ಲೆ ವ್ಯವಸ್ಥೆ, ಬಳಕೆದಾರರಿಗೆ, ಯಾವುದೇ ಅಡೆ ತಡೆಗಳಿಲ್ಲದ, ಅಗಾಧ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ನೈಜ ಎಫ್‍ಎಚ್‍ಡಿ+ ಡಿಸ್‍ಪ್ಲೇ ವ್ಯವಸ್ಥೆ, ಟ್ರಸ್ಟ್ ಝೋನ್ ತಂತ್ರಜ್ಞಾನ ಪ್ರೊಸೆಸರ್‍ನಿಂದ ಚಾಲಿತವಾಗಿದ್ದು, ಇದು ವೈಡ್‍ವೈನ್ ಎಲ್1 ಪ್ರಮಾಣಪತ್ರಕ್ಕೆ ಅವಕಾಶ ಕಲ್ಪಿಸುತ್ತದೆ. ಇದರಿಂದಾಗಿ ಎಲ್ಲ ಜನಪ್ರಿಯ ಸ್ಟ್ರೀಮಿಂಗ್ ಆ್ಯಪ್‍ಗಳು ಎಚ್‍ಡಿ ಅಂಶಗಳನ್ನು ಗೆಲಾಕ್ಸಿ ಎ7ನಲ್ಲಿ ಸುಲಲಿತವಾಗಿ ವರ್ಗಾಯಿಸಲು ಅವಕಾಶ ನೀಡುತ್ತದೆ. ಈ ಸಾಧನವನ್ನು ನೈಜ ದೃಶ್ಯ ಶ್ರವಣ ರಸದೌತಣವನ್ನಾಗಿ ಮಾಡುವ ನಿಟ್ಟಿನಲ್ಲಿ, ಇದನ್ನು ಡಾಲ್ಬಿ ಅಟ್ಮೋಸ್ ವಿಶಿಷ್ಟ ಶಬ್ದ ತಂತ್ರಜ್ಞನಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ನೈಜ ಎಚ್‍ಡಿ ಅಂಶಗಳನ್ನು ತಂದುಕೊಡುತ್ತದೆ. ಗೆಲಾಕ್ಸಿ ಎ7 ಒಂದು ಪರಿಪೂರ್ಣ ಶೈಲಿಯ ಅಭಿವ್ಯಕ್ತಿಯಾಗಿದ್ದು, 2.5ಡಿ ಗ್ಲಾಸ್ ಬ್ಯಾಕ್ ವಿನ್ಯಾಸ, 7.5 ಎಂಎಂ ಸ್ಲಿಮ್ ಬಾಡಿ, ಬದಿಯಲ್ಲಿ ಬೆರಳಚ್ಚು ಸೆನ್ಸಾರ್ ಮತ್ತಿತರ ಸೌಲಭ್ಯಗಳನ್ನು ಹೊಂದಿದೆ. ಸೆನ್ಸಾರನ್ನು ವಿದ್ಯುತ್ ಗುಂಡಿಯ ಜತೆಗೆ ಸಮನ್ವಯಗೊಳಿಸಲಾಗಿದ್ದು, ಇದರಿಂದಾಗಿ ಗೊಂದಲಮುಕ್ತ ವಿನ್ಯಾಸ ಸಾಧ್ಯವಾಗಿದೆ.

“ಗೆಲಾಕ್ಸಿ ಎ7ನ ಪ್ರತಿಯೊಂದು ಮುಖದಲ್ಲೂ ವಿನೂತನ ಅಂಶ ಹಾಗೂ ಅನುಶೋಧನೆ ಎದ್ದುಕಾಣುತ್ತದೆ. ತ್ರಿವಳಿ ಕ್ಯಾಮೆರಾದಿಂದ ಹಿಡಿದು, ಅಲ್ಟ್ರಾವೈಡ್ ಶಾಟ್‍ಗಳಿಗೆ ಅನುಕೂಲವಾಗುವ ಲೆನ್ಸ್, ಅತ್ಯುತ್ತಮ ಚಿತ್ರ ಸಂಯೋಜನೆಯನ್ನು ಒದಗಿಸುವ ವಿಶಿಷ್ಟಪೂರ್ಣ ಗುಣಲಕ್ಷಣಗಳು ಇವೆ. ನೈಜ ಎಫ್‍ಎಚ್‍ಡಿ+ ಡಿಸ್‍ಪ್ಲೇ, ಸೂಪರ್ ಅಮೊಲೆಡ್ ಅನಂತ ಡಿಸ್‍ಪ್ಲೇ ಮತ್ತು ವೈಡ್‍ವೈನ್ ಎಲ್1 ಪ್ರಮಾಣಿತ ವಿತರಣಾ ವ್ಯವಸ್ಥೆಯು ಅತಿವಿಶೇಷ ದೃಶ್ಯಾನುಭವವನ್ನು ನೋಡುತ್ತವೆ. ಆಕರ್ಷಕ ಹೊಸ ಬಣ್ಣಗಳು ಮತ್ತು ಬದಿಯಲ್ಲಿ ಬೆರಳಚ್ಚು ಸೆನ್ಸಾರ್ ವ್ಯವಸ್ಥೆಯು, ವಿಶೇಷ ವಿನ್ಯಾಸವನ್ನು ಒದಗಿಸಿದೆ. ಈ ಸಾಧನದೊಂದಿಗೆ, ಭಾರತೀಯ ಸಹಸ್ರಮಾನದ ಪೀಳಿಗೆಯ ಕಲ್ಪನೆಯನ್ನು ನಾವು ಸೆರೆಹಿಡಿಯಲು ಸಾಧ್ಯವಾಗುತ್ತವೆ ಎಂಬ ವಿಶ್ವಾಸ ನಮಗಿದೆ. ಜತೆಗೆ ಹಬ್ಬಗಳ ಋತುವಿಗೆ ಮತ್ತಷ್ಟು ಸಡಗರವನ್ನು ಸೇರಿಸಲು ಸಾಧ್ಯವಾಗುತ್ತದ ಎಂಬ ವಿಶ್ವಾಸವಿದೆ” ಎಂದು ಸ್ಯಾಮ್‍ಸಂಗ್ ಇಂಡಿಯಾ ಮೊಬೈಲ್ ವ್ಯವಹಾರದ ಪ್ರಧಾನ ವ್ಯವಸ್ಥಾಪಕ ಆದಿತ್ಯ ಬಬ್ಬರ್ ಹೇಳಿದ್ದಾರೆ.

ಗೆಲಾಕ್ಸಿ ಎ7 ಮಧ್ಯಮ ಶ್ರೇಣಿಯ ವಲಯದಲ್ಲಿ ಇತ್ತೀಚೆಗೆ ಅನಾವರಣಗೊಂಡ ಜೆ6+ ಮತ್ತು ಗೆಲಾಕ್ಸಿ ಜೆ4+ನೊಂದಿಗೆ ಸ್ಯಾಮ್‍ಸಂಗ್‍ನ ಅಗ್ರಗಣ್ಯ ಪಟ್ಟವನ್ನು ಮತ್ತಷ್ಟು ಬಲಗೊಳಿಸಲು ನೆರವಾಗುತ್ತದೆ. ಈ ಸಾಧನವು ಹಬ್ಬದ ಋತುವಿಗೆ ಮುಂಚಿತವಾಗಿ ಬಂದಿದ್ದು, ಗ್ರಾಹಕರಿಗೆ ಮತ್ತಷ್ಟು ಸವಿ ನೀಡಲಿದೆ.

ಕ್ಷಮತೆಯ ವಿಚಾರಕ್ಕೆ ಬಂದರೆ ಗೆಲಾಕ್ಸಿ ಎ7 ಅತ್ಯಂತ ವಿಶಿಷ್ಟವಾಗಿದೆ. ಗೆಲಾಕ್ಸಿ ಎ7ಗೆ ಸ್ಯಾಮ್‍ಸಂಗ್ ಎಕ್ಸಿನೋಸ್ 7885 2.2 ಗಿಗಾಹಟ್ರ್ಸ್ ಆಕ್ಟೊಕೋರ್ ಪ್ರೊಸೆಸರ್ ಶಕ್ತಿ ತುಂಬಿದೆ. ಈ ಸಾಧನವು 6 ಜಿಬಿ ಆರ್‍ಎಮ್/ 128 ಜಿಬಿ ಆರ್‍ಓಎಂ ಮತ್ತು 4 ಜಿಬಿ ರ್ಯಾಮ್ ಹಾಗೂ 64 ಜಿಬಿ ಆರ್‍ಓಎಂ ಅವತರಣಿಕೆಯಲ್ಲಿ ಲಭ್ಯ. ಇದನ್ನು 512 ಜಿಬಿ ವಿಸ್ತರಿಸಬಹುದಾದ ಮೆಮೊರಿ ಮತ್ತು ಉದ್ಯಮದಲ್ಲೇ ಮೊಟ್ಟಮೊದಲನೆಯದು ಎನಿಸಿದ “ಇನ್‍ಸ್ಟಾಲ್ ಆ್ಯಪ್ಸ್ ಟೂ ಮೆಮೊರಿ ಕಾರ್ಡ್” ವೈಶಿಷ್ಟ್ಯವನ್ನು ಹೊಂದಿದೆ. ಈ ಸಾಧನ 3300 ಎಂಎಎಚ್ ಬ್ಯಾಟರಿಯ ಶಕ್ತಿಯನ್ನು ಹೊಂದಿದ್ದು, ಆ್ಯಂಡ್ರಾಯ್ಡ್ ಒರೆಯೊ ಆಪರೇಟಿಂಗ್ ಸಿಸ್ಟಂ ಇರುತ್ತದೆ.

ಆಫರ್‍ಗಳು, ಬೆಲೆ ಮತ್ತು ಲಭ್ಯತೆ

ಗೆಲಾಕ್ಸಿ ಎ7 ಶ್ರೇಣಿಯ ಬೆಲೆ 23,990 (4ಜಿಬಿ/64 ಜಿಬಿ ಅವತರಣಿಕೆ) ಮತ್ತು 28,990 (6ಜಿಬಿ/ 128 ಜಿಬಿ ಅವತರಣಿಕೆ) ಇದ್ದು, ಸ್ಟೈಲಿಶ್ ಬಣ್ಣಗಳಾದ ನೀಲಿ, ಕಪ್ಪು ಮತ್ತು ಚಿನ್ನದ ಬಣ್ಣದಲ್ಲಿ ಲಭ್ಯ.

ಎಚ್‍ಡಿಎಫ್‍ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಪಾವತಿಸುವ ಗ್ರಾಹಕರಿಗೆ 2000 ರೂಪಾಯಿ ಕ್ಯಾಶ್‍ಬ್ಯಾಕ್ ಸೌಲಭ್ಯ ಸಿಗುತ್ತದೆ.

ಬಹುನಿರೀಕ್ಷಿತ ಗೆಲಾಕ್ಸಿ ಎ7ಯ ಬಿಡುಗಡೆಯನ್ನು ಸೆಪ್ಟೆಂಬರ್ ಕೊನೆಗೆ ಮಾಡಲು ನಿರ್ಧರಿಸಿದ್ದು, ಎಲ್ಲ 18 ಸಾವಿರ ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಗ್ರಾಹಕರಿಗೆ ಮೊದಲೇ ಲಭ್ಯವಾಗುವಂತೆ ಮಾಡುವ ಸಲುವಾಗಿ ಈ ಸಾಧನವು ಸೆಪ್ಟೆಂಬರ್ 27 ಮತ್ತು 28ರಂದು ವಿಶೇಷ ಮುಂಗಡ ಮಾರಾಟ ವ್ಯವಸ್ಥೆ ಫ್ಲಿಪ್‍ಕಾರ್ಟ್, ಸ್ಯಾಮ್‍ಸಂಗ್ ಇ-ಶಾಪ್ ಮತ್ತು ಬೆಂಗಳೂರಿನ ಸ್ಯಾಮ್‍ಸಂಗ್ ಒಪೇರಾ ಹೌಸ್‍ನಲ್ಲಿ ಇರುತ್ತದೆ.

ಅಶೋಕ್ ವಿರುದ್ಧದ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್!

ಬೆಂಗಳೂರು: ಬಗರ್ ಹುಕುಂ ಜಮೀನು ಅಕ್ರಮ ಮಂಜೂರಾತಿ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ವಿರುದ್ಧದ ಎಸಿಬಿ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿದೆ.

ಆರ್.ಅಶೋಕ್ 1998 ರಿಂದ 2006 ರ ಅವಧಿಯವರೆಗೆ ಬೆಂಗಳೂರು ದಕ್ಷಿಣ ತಾಲ್ಲೂಕು ಬಗರ್ ಹುಕುಂ ಭೂ-ಸಕ್ರಮೀಕರಣ ಸಮಿತಿಯ ಅಧ್ಯಕ್ಷರಾಗಿದ್ದಾಗ ಕಾನೂನು ಬಾಹಿರವಾಗಿ ಅನರ್ಹ ಫಲಾನುಭವಿಗಳಿಗೆ ಭೂ-ಮಂಜೂರಾತಿ ಮಾಡಿದ್ದಾರೆ ಎಂದು ಆರೋಪಿಸಿ ಎ.ಆನಂದ ಎಂಬುವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದೂರಿನನ್ವಯ ಎಸಿಬಿ ಪೊಲೀಸರು ಆರ್. ಅಶೋಕ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಅಶೋಕ್, ತಾವು ಯಾವುದೇ ಅಕ್ರಮ ನಡೆಸಿಲ್ಲ. ಕೇವಲ ರಾಜಕೀಯ ದುರುದ್ದೇಶದಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಎಫ್ಐಆರ್ ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಎಫ್ಐಆರ್ ಆಧರಿಸಿ ಅಶೋಕ್ ವಿರುದ್ಧ ಯಾವುದೇ ಮುಂದಿನ ಕ್ರಮ ಜರುಗಿಸದಂತೆ ಎಸಿಬಿಗೆ ಮಧ್ಯಂತರ ಆದೇಶ ನೀಡಿತ್ತು.

ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಆರ್. ಬಿ. ಬೂದಿಹಾಳ್ ಅವರಿದ್ದ ಏಕಸದಸ್ಯ ಪೀಠ, ಇಂದು ಅರ್ಜಿ ವಜಾಗೊಳಿಸಿ ತೀರ್ಪು ನೀಡಿದ್ದು, ಎಸಿಬಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಈ ಹಂತದಲ್ಲಿ ಎಫ್ಐಆರ್ ರದ್ದುಪಡಿಸುವುದು ಸರಿಯಲ್ಲ. ಎಸಿಬಿ ತನಿಖೆ ಪೂರ್ಣಗೊಳಿಸಿ ಅಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಅಲ್ಲದೆ, ಪ್ರಕರಣದ ಸಂಬಂಧ ಎಸಿಬಿ ದಾಖಲಿಸಿದ್ದ ಎಫ್ಐಆರ್‌ಗೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವೂ ತೆರವುಗೊಂಡಿದ್ದು, ಎಸಿಬಿ ತನಿಖೆಗೆ ಹಸಿರು ನಿಶಾನೆ ದೊರೆತಿದೆ.