ದಂಗೆ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ಎಚ್ಡಿಕೆಗೆ ಪಂಚ ಪ್ರಶ್ನೆಗಳ ಸವಾಲು

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರ ದಂಗೆ ಹೇಳಿಕೆ ಹಾಗೂ ಯಡಿಯೂರಪ್ಪ ನಿವಾಸದ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ದಾಳಿ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ನಗರ ಘಟಕದ ಕಾರ್ಯಕರ್ತರಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್,ಶೋಭಾ ಕರಂದ್ಲಾಜೆ,ಬಿಜೆಪಿ ಕಾರ್ಯದರ್ಶಿ ಜಯದೇವ,ಬೆಂಗಳೂರು ಬಿಜೆಪಿ ಅಧ್ಯಕ್ಷ ಸದಾಶಿವ ಸೇರಿ ಹಲವರು ಭಾಗಿಯಾಗಿದ್ರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಡಿಸಿಎಂ ಆರ್.ಅಶೋಕ್,ದಂಗೆ ಏಳಿ ಎಂದು ಕರೆ ಕೊಡೋರು ನಕ್ಸಲರು.ಆದರೆ ಯಾರನ್ನು ಕಾಪಾಡಿ ಎಂದು ಹೇಳಿ ಅಧಿಕಾರ ಕೊಟ್ಟೆವೋ ಅವರೇ ಇಂದು ಸಮಾಜ ಕಂಟಕರಾಗಿದ್ದಾರೆ. ಅವರಿಗೆ ದಿಕ್ಕು ದೆಸೆ ಏನಿಲ್ಲ.ಸರ್ಕಾರ ಉಳಿಯುತ್ತೋ ಇಲ್ವೋ ಅವರಿಗೇ ಗೊತ್ತಿಲ್ಲ.18ಜನ ಹೋಗ್ತಾರೆ 20 ಜನ ಹೋಗ್ತಾರೆ ಎಂದು ಇವರೇ ಹೇಳಿಕೆ ಕೊಡ್ತಾರೆ.ಮಂತ್ರಿಗಳೇ ದಮಕಿ ಹಾಕುತ್ತಾರೆ.ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಶಾಸಕರು ಪಕ್ಷ ಬಿಟ್ಟು ಹೋಗ್ತೀವಿ ಎನ್ನುತ್ತಾರೆ.ನಿಮಗೆ ತಾಕತ್ತಿದ್ರೆ ಭಿನ್ನಮತೀಯ ಚಟುವಟಿಕೆ ಮಾಡಿದ್ರಲ್ಲಾ ಅವರ ಮೇಲೆ ಕ್ರಮ‌ಕೈಗೊಳ್ಳಬೇಕಿತ್ತು. ಅದು ಬಿಟ್ಟು ಬಿಜೆಪಿ ಮೇಲೆ ಗೂಬೆ ಕೂರಿಸ್ತಾರೆ.ಸರ್ಕಾರ ಬಿದ್ರೆ ಅದು ಅವರ ದುರಾಡಳಿತದಿಂದ. ಎರಡು ದಿನದಲ್ಲೋ,ಐದು ದಿನದೊಳಗೋ ವಾರದೊಳಗೋ ಈ ಸರ್ಕಾರ ಬಿದ್ದು ಹೋಗುತ್ತೆ.ಈ ರೀತಿ ಹೇಳಿಕೆ ಕೊಟ್ಟ ಮೇಲೆ ಈ ಸರ್ಕಾರ ಇರೋದಕ್ಕೂ ಸಾಧ್ಯವಿಲ್ಲ ಎಂದ್ರು.

ಈ ಸರ್ಕಾರವನ್ನು ತೊಲಗಿಸಲು ನಾವು ಪಣತೊಟ್ಟು ಕೆಲಸ ಮಾಡುತ್ತಿದ್ದೇವೆ.ನೂರು ದಿನಗಳಲ್ಲಿ ಈ ಸರ್ಕಾರ ನೂರು ತಪ್ಪು ಮಾಡಿದೆ.ಇದರ ಪಾಪದ ಕೊಡ ತುಂಬಿದೆ.ಹಾಗಾಗಿ ಇದು ತೊಲಗಲೇ ಬೇಕು ಎಂದ್ರು.

ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ, ಈ ಸರ್ಕಾರದ ಮೇಲೆ ಕಾಂಗ್ರೆಸ್ ಶಾಸಕರಿಗೆ ವಿಶ್ವಾಸವಿಲ್ಲ.ಈ ಸರ್ಕಾರ ಬೇಡ ಎಂದು ಎಂಟಿಬಿ ನಾಗರಾಜ್ ಹೇಳಿದ್ರು.ಈ ಅವಿಶ್ವಾಸಕ್ಕೆ ಮೈತ್ರಿ ಸರ್ಕಾರದ ಸಚಿವರ ನಡವಳಿಕೆ ಕಾರಣ.ಈ ಅವಿಶ್ವಾಸ ತಮ್್ಮ ಸರ್ಕಾರದ ಬುಡಕ್ಕೆ ಬರುತ್ತದೆ ಎಂದು ಗೊತ್ತಾದ ತಕ್ಷಣ ಕುಮಾರಸ್ವಾಮಿ ತಾಳ್ಮೆ ಕಳೆದುಕೊಂಡಿದ್ದಾರೆ‌ ಎಂದ್ರು.

ಮೂರುವರೆ ತಿಂಗಳಲ್ಲಿ‌ಕುಮಾರಸ್ವಾಮಿ‌ ದೇವಸ್ಥಾನ ಸುತ್ತಿರೋದು ಬಿಟ್ಟು ಬೇರೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ.ಶಾಸಕರ ಅಭಿವೃದ್ದಿ ಅನುದಾನ ಕೂಡ ಕೊಟ್ಟಿಲ್ಲ.ಶಾಸಕರಿಗೆ ಒಂದೇ ಒಂದು ಪೈಸೆ ಬಂದಿಲ್ಲ. ನಾವೇನು ತಪ್ಪು ಮಾಡಿದ್ದೇವೆ.ಯಡಿಯೂರಪ್ಪ ಏನು ತಪ್ಪು ಮಾಡಿದ್ದಾರೆ.ವಿಧಾನಸೌಧದಲ್ಲಿ ಶಾಸಕರಿಗೆ ಹೊಡೆಯುವ ಗೂಂಡಾಗಿರಿ ಇತಿಹಾಸ ಜನತಾದಳಕ್ಕಿದೆ.ಈಗ ಮತ್ತೆ ಸಿಎಂ ಅದೇ ಭಾಷೆ ಪ್ರಯೋಗ ಮಾಡುತ್ತಿದ್ದಾರೆ.ಕಾಂಗ್ರೆಸ್ ಮತ್ತು ಜೆಡಿಎಸ್ ಗೂಂಡಾಗಳನ್ನು ಯಡಿಯೂರಪ್ಪ ನವರ ಮನೆ ಮೇಲೆ ಛೂ ಬಿಟ್ಟಿದ್ದೀರಿ.ಎರಡು ದಿನಗಳ ಹಿಂದೇಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖರ ವಾಟ್ಸಪ್ ಗಳಲ್ಲಿ ಪ್ರತಿಭಟನೆ ಮಾಡುವ ಮೆಸೇಜ್ ಪಾಸ್ ಆಗಿದೆ.ಆದರೂ ಪೊಲೀಸ್ ರಕ್ಷಣೆ ಯಾಕೆ ಕೊಟ್ಟಿಲ್ಲ.ಈ ಪ್ರತಿಭಟನೆ ಮಾಡಿದ ಮನೋಹರ್ ಕೊಲೆ ಅಪರಾಧಿ.ಅವನನ್ನು ಏಕೆ ಬಂಧಿಸಲಿಲ್ಲ.ಅದೇ ಪ್ರತಿಭಟನೆಗೆ ಕರೆ ಕೊಟ್ಟ ಶಶಿಧರ್ ನನ್ನು ಬಂಧಿಸಿ ಜೈಲಿಗೆ ಹಾಕಿದ್ರು.ಅದಕ್ಕೆ ಈಗ ಕುಮಾರಸ್ವಾಮಿ ಮೇಲೆ ಕೇಸ್ ಹಾಕಿ ಎಂದು ಡಿಜಿಪಿಗೆ ದೂರು ಕೊಟ್ಟು ಬಂದಿದ್ದೇವೆ‌ ಎಂದ್ರು.

ಸಿಎಂ ಕುಮಾರಸ್ವಾಮಿ ಯವರಿಗೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಪಂಚ ಪ್ರಶ್ನೆಗಳು. ದಂಗೆ ಎಂದ್ರೆ ಪ್ರತಿಭಟನೆ ಎಂದು ಕುಮಾರಸ್ವಾಮಿ ಯವರು ಹೊಸ ನಿಘಂಟು ಬರೆಯಲು ಹೋಗಿದ್ದಾರೆ.

*ಯಡಿಯೂರಪ್ಪ ನವರು ಏನು.ಅವರ ವಿರುದ್ದ ಏಕೆ ದಂಗೆ ಏಳಬೇಕು.?
*ನಿಮಗೆ ಆಡಳಿತ ನಡೆಸಲು ಕಚೇರಿ,ವಾಸಕ್ಕೆ ಮನೆ ಕೊಟ್ಟಿದೆ ಸರ್ಕಾರ.ಆದರೆ ನೀವು ವರ್ಷಕ್ಕೆ ಮೂರು ಕೋಟಿ ರೂ.ಕೊಟ್ಟು ತಾಜ್ ವೆಸ್ಟ್ ಎಂಡ್ ನಲ್ಲಿ ರೂಂ ಲೀಸ್ ಗೆ ತೆಗೆದುಕೊಂಡಿದ್ದೀರಲ್ಲ.ಯಾಕೆ ಬ್ಯುಸಿನೆಸ್ ಮಾಡಲು ನೀವು ಮತ್ತು ನಿಮ್ಮ ಪತ್ನಿ ಅಲ್ಲಿ ರೂಮ್ ಪಡೆದಿದ್ದೀರಾ..
*ಕರ್ನಾಟಕದಲ್ಲಿ ಹಾಸನ ಮಾತ್ರ ಪುಣ್ಯಭೂಮಿಯಾ..ಕರ್ನಾಟಕದ ಜನ ನಿಮ್ಮ ಬಾಡಿಗೆ ಆಳುಗಳಾ..ನಿಮ್ಮ ಮಾತು ಯಾಕೆ ಕೇಳಬೇಕು.
*ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬ ವರ್ಗದವರು ಸಾವಿರಾರು ಕೋಟಿ ರೂ.ಬಾಳುತ್ತಾರೆ.ನೀವು ತುಂಬಾ ಪಾರದರ್ಶಕವಾದರೆ ನಿಮ್ಮ ಆಸ್ತಿ ಬಗ್ಗೆ ತನಿಖೆಗೆ ಆದೇಶ ಮಾಡ್ತೀರಾ?

ಉಡುಪಿಯಲ್ಲಿ ಸಿಎಂ ವಿರುದ್ಧ ಬಿಜೆಪಿ ಪ್ರತಿಭಟನೆ

ಉಡುಪಿ : ಬಿಜೆಪಿ ವಿರುದ್ದ ರಾಜ್ಯದ ಜನತೆಗೆ ದಂಗೆ ಎಳುವಂತೆ ಕರೆ ನೀಡಬೇಕಾಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಇಂದು ಉಡುಪಿ ಜಿಲ್ಲಾ ಬಿಜೆಪಿವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಉಡುಪಿಯ ಕುಂಜಿಬೆಟ್ಟುವಿನ ಜಿಲ್ಲಾ ಬಿಜೆಪಿ ಕಚೇರಿಯ ಮುಂದೆ ಬಿಜೆಪಿ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಸಿ ಎಂ ಕುಮಾರಸ್ವಾಮೀ ಅವರ ವಿರುದ್ದ ದಿಕ್ಕಾರದ ಕೂಗುಗಳನ್ನು ಹಾಕಿ ಆಕ್ರೋಶವ್ಯಕ್ತ ಪಡಿಸಿದ್ರು.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಈ ಸಂದರ್ಭ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ್ರು, ದೋಸ್ತಿ ಸರಕಾರದ ಒಳಗಿನ ಕಚ್ಚಾಟದಿಂದ ಸಮಿಶ್ರ ಸರಕಾರ ಕುಸಿದು ಬೀಳುವ ಪರಿಸ್ಥಿತಿಯಲ್ಲಿದೆ. ಆದ್ರೆ ಸಿ ಎಂ ಕುಮಾರಸ್ವಾಮೀ ಸಮಿಶ್ರ ಸರಕಾರವನ್ನು ಪತನ ಮಾಡಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ.

ಬಿಜೆಪಿ ಈವೆರೆಗೆ ಸಮಿಶ್ರ ಸರಕಾರದ ಫಥನಕ್ಕೆ ಕೈ ಹಾಕಿಲ್ಲ. ಸಮಿಶ್ರ ಸರಕಾರದ ಒಳಗಿನ ಕಚಾಟ್ಟದಿಂದ ಸರಕಾರಕ್ಕೆ ಹೊಡೆತ ಬಿದಿದ್ದು ಸಿ ಎಂ ತನ್ನ ಕುರ್ಚಿ ಉಳಿಸಲು ಈ ರೀತಿಯ ಅಪದಾನೆಯನ್ನು ಬಿಜೆಪಿ ಮೇಲೆ ಹೊರಿಸುತ್ತಿದ್ದಾರೆ.

ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಕರ್ನಾಟಕದ ಆರು ಕೋಟಿ ಜನರಿಗೆ ಸರಿಸಮಾನವಾಗಿ ಕೆಲಸ ಮಾಡಬೇಕಾದ ಕುಮಾರಸ್ವಾಮೀ ಎಡಬಿಡಂಗಿತನ ವರ್ತನೆ ತೋರಿಸುತ್ತಿದ್ದಾರೆ. ನಕ್ಸಲೆಟ್ ಸ್ವರೂಪದ ಹೇಳಿಕೆಯನ್ನು ನೀಡುವ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡುತ್ತಿದ್ದಾರೆ.

ಇಂತಹ ಮುಖ್ಯ ಮಂತ್ರಿ ನಮ್ಮ ರಾಜ್ಯಕ್ಕೆ ಬೇಕಾ ಎಂಬ ಭಾವನೆ ಜನ ಸಾಮಾನ್ಯರಲ್ಲಿ ವ್ಯಕ್ತವಾಗುತ್ತಿದೆ. ಸಿ ಎಂ ಕುಮಾರಸ್ವಾಮೀ ಅವರು ರಾಜ್ಯದ ಜನತೆಯಲ್ಲಿ ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹ ಮಾಡಿದ್ರು.

ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಂದರ್ಭ ಪ್ರತಿಭಟನೆಯನ್ನುದೇಶಿಸಿ ಮಾತನಾಡಿದ್ರು, ಸಿ ಎಂ ಕುಮಾರಸ್ವಾಮೀ ಕೇವಲ 3 ಜಿಲ್ಲೆಗಳ ಮುಖ್ಯ ಮಂತ್ರಿ. ಈ ಮಾತನ್ನು ಸದಸನದಲ್ಲಿಯೇ ಹೇಳಿದ್ದೇನೆ. ಬಿಜೆಪಿ ವಿರುದ್ದ ದಂಗೆ ಏಳುವಂತೆ ಜನರಿಗೆ ಕರೆ ನೀಡುವುದಾಗಿ ಅವರು ಅವಿವೇಕತನದ ಹೇಳಿಕೆ ನೀಡಿದ್ದಾರೆ. ಒಬ್ಬ ಜವಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯ ಮಂತ್ರಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ಕೂಡಲೇ ಕುಮಾರಸ್ವಾಮೀ ಅವರು ರಾಜ್ಯದ ಜನೆತಯಲ್ಲಿ ಕ್ಷಮೆ ಕೇಳ ಬೇಕು ಇಲ್ಲ ತನ್ನ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹ ಮಾಡಿದ್ರು.

ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಬಿಜೆಪಿ ಜಿಲ್ಲಾದ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಶ್ಯಾಮಲ ಕುಂದರ್, ಜಿಲ್ಲಾ ಪಂಚಾಯತ್ ಉಪದ್ಯಾಕ್ಷೆ ಕೆ ಶೀಲಾ ಶೆಟ್ಟಿ, ವೀಣಾ ಶೆಟ್ಟಿ, ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ, ಯಶ್ಪಾಲ್ ಸುವರ್ಣ ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು

ಬಿಎಸ್ವೈ ಮನೆಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು!

ಬೆಂಗಳೂರು: ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಮನೆ ಮುಂದೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಜೆಪಿ ಆಡಳಿತ ನಡೆಸಲು ಬಿಡದಿದ್ದರೆ ದಂಗೆ ಏಳುವಂತೆ ರಾಜ್ಯದ ಜನರಿಗೆ ಕರೆ ನೀಡಲಾಗುವುದು ಎಂದು ಹಾಸದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ ತಕ್ಷಣ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಯಡಿಯೂರಪ್ಪ ನಿವಾಸದ ಬಳಿ ಆಗಮಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜೈಲು ನಾಯಕ, ಆಪರೇಷನ್ ಕಮಲ ರೂಪಾರಿ, ಅನೈತಿಕ ರಾಜಕಾರಣ ಮಾಡುತ್ತಿರುವ ರಾಜಕಾರಣಿ ಎಂದು ಬಿಎಸ್ವೈ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಶಾಸಕ ಎಂ.ಪಿ. ರೇಣುಕಾಚಾರ್ಯ ಮೇಲೆ ಹಲ್ಲೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಯಡಿಯೂರಪ್ಪ ನಿವಾಸದಿಂದ ಮುಖ್ಯ ರಸ್ತೆಯವರೆಗೆ ಶಾಸಕ ರೇಣುಕಾಚಾರ್ಯ ಮತ್ತು ವಿಶ್ವನಾಥ್ ತಳ್ಳಿಕೊಂಡು ಬಂದರು. ಇಷ್ಟೆಲ್ಲಾ ಘಟನೆಗಳು ನಡೆದರೂ ಪೊಲೀಸರು ಅಸಹಾಯಕರಾಗಿ ನಿಂತಿದ್ದರು.

ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಈ ಗಲಾಟೆಗೆ ಸಿಎಂ ಪ್ರಚೋದನೆ ನೀಡುತ್ತಿದ್ದಾರೆ. ನಾವೂ ಕೂಡ ತಾಯಿ ಹಾಲು ಕುಡಿದು ಬೆಳೆದ ಮಕ್ಕಳೇ. ನಮಗೂ ಹೇಗೆ ಉತ್ತರ ಕೊಡಬೇಕು ಎಂದು ಗೊತ್ತಿದೆ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ದಂಗೆ ಏಳುವಂತೆ ಕುಮಾರಸ್ವಾಮಿ ಯವರು ಹೇಳಿಕೆ ಕೊಟ್ಟ ಕಾರಣದಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಇಂದು ಗಲಾಟೆ ಮಾಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಗಳೇ ನೈತಿಕ ಹೊಣೆ ಹೊತ್ತು ನೀವು ರಾಜಿನಾಮೆ ಕೊಡಬೇಕು ಒತ್ತಾಯಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಮಾತನಾಡಿ, ಸಿಎಂ ಹೆಚ್.ಡಿ.ಕೆ. ಹೇಳಿಕೆಯ ಕುಮ್ಮಕ್ಕಿನಿಂದ ಯಡಿಯೂರಪ್ಪ ನಿವಾಸದ ಮೇಲೆ ಧಾಳಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಇದೆ ಸಾಕ್ಷಿ. ರಾಜ್ಯಪಾಲರು ಮಧ್ಯ ಪ್ರವೇಶಿಸಿ ಈ ಸರ್ಕಾರವನ್ನು ವಜಾ ಮಾಡಬೇಕು. ಕುಮಾರಸ್ವಾಮಿ ಕ್ಷಮೆ ಕೇಳಬೇಕು‌. ತಮ್ಮ ಮಂತ್ರಿಗಳನ್ನೇ ಹತೋಟಿಯಲ್ಲಿ ಇಡಲಾಗದ ಮುಖ್ಯಮಂತ್ರಿ ಯಿಂದ ಬಿಜೆಪಿಯವರು ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಂವಿಧಾನಾಧತ್ತವಾಗಿ ರಾಜ್ಯದ ಜವಾಬ್ದಾರಿ ಹೊತ್ತಿರೋ ಸಿಎಂ ದಂಗೆ ಎಬ್ಬಿಸುವಂತೆ ಹೇಳಿಕೆ ನೀಡಿದ್ದಾರೆ. ಸಿಎಂ ಹಾಸನದಲ್ಲಿ ಹೇಳಿಕೆ ನೀಡುತ್ತಿದ್ದಂತೆ ಇಲ್ಲಿ ಕಾಂಗ್ರೆಸ್ ಜೆಡಿಎಸ್ ಗೂಂಡಾಗಳು ನುಗ್ಗುತ್ತಾರೆ ಅಂದ್ರೆ ಏನು ಆರ್ಥ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ, ಗುಪ್ತಾಚಾರ ಇಲಾಖೆ ಏನು ಮಾಡುತ್ತಿದೆ, ಪೊಲೀಸ್ ಕಮೀಷನರ್ ಈ ಕೂಡಲೇ ಸಿಎಂ ವಿರುದ್ಧ ದೂರು ದಾಖಲು ಮಾಡಬೇಕು. ರಾಜ್ಯದಲ್ಲಿ ಶಾಂತಿ ಕದಡುತ್ತಿರೋದು ಮುಖ್ಯಮಂತ್ರಿಗಳೇ. ಬಿಜೆಪಿ ಎಲ್ಲೂ ಶಾಂತಿ ಕದಡೋ ಪ್ರಯತ್ನ ಮಾಡಿಲ್ಲ. ಅವರ ಶಾಸಕರೇ ಈಗ ದಂಗೆ ಎದ್ದಿದ್ದಾರೆ. ಕಾಂಗ್ರೆಸ್ ಶಾಸಕರು ದಂಗೆ ಎದ್ದಿದ್ದಾರೆ. ನಾವು ಏನು ಮಾಡುತ್ತಿಲ್ಲ, ಬಿಜೆಪಿ ಮೇಲೆ ಆರೋಪ ಮಾಡುತ್ತಿರೋದು ಸರಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ತುಮಕೂರು ವಿವಿ ಡ್ರಗ್ ಮುಕ್ತ ಎಂದು ಘೋಷಿಸಿಕೊಳ್ಳಲಿ: ಪರಂ

ತುಮಕೂರು: ರಾಜ್ಯದಲ್ಲಿ ಡ್ರಗ್ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಂಡಿದ್ದು, ತುಮಕೂರಿನ ವಿಶ್ವವಿದ್ಯಾಲಯ ಕೂಡ ಮಾದಕ ದ್ರವ್ಯ ಮುಕ್ತ ವಿಶ್ವವಿದ್ಯಾಲಯ ಎಂದು ಘೋಷಿಸಿಕೊಳ್ಳುವತ್ತ ಮುಂದಾಗಲಿ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕರೆ ನೀಡಿದರು.

ತುಮಕೂರು ವಿಶ್ವವಿದ್ಯಾಲಯದಿಂದ ಸ್ಥಾಪಿಸಿರುವ ಸಾಂಸ್ಕೃತಿಕ ನಾಯಕ ಜುಂಜಪ್ಪ, ಜ್ಞಾನಪೀಠ ಪುರಸ್ಕೃತ ಕುವೆಂಪು, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ನೀರಾವರಿ ತಜ್ಞ ಜಿ.ಪರಮಶಿವಯ್ಯ ಅವರ ಪೀಠಗಳನ್ನು ಉದ್ಘಾಟಿಸಿ ಮಾತನಾಡಿದ ಪರಮೇಶ್ವರ್, ಡ್ರಗ್ ಹಾವಳಿಯಿಂದ ವಿದ್ಯಾರ್ಥಿಗಳ ಜೀವನ ಹಾಳಾಗುವುದಲ್ಲದೆ ಇಡೀ ಕಾಲೇಜಿಗೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ಡ್ರಗ್ ನಿಯಂತ್ರಣಕ್ಕೆ ಕಠಿಣ ನಿಲುವು ತೆಗೆದುಕೊಂಡಿದ್ದೇವೆ ಎಂದರು.

ನಾನು ಓದಿರುವ ಕಾಲೇಜು ಇಂದು ವಿಶ್ವವಿದ್ಯಾಲಯ ಆಗಿದೆ. ನಾನು ಉನ್ನತ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ತುಮಕೂರು ಜಿಲ್ಲೆಗೆ ಪ್ರತ್ಯೆಕ ವಿಶ್ವವಿದ್ಯಾಲಯ ತೆರೆದೆ. ಆದರೆ, ಈ ೧೫ ವರ್ಷಗಳಿಂದ ವಿಶ್ವವಿದ್ಯಾಲಯ ಸೊರಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯ ಸೈಂಟಿಫಿಕ್ ಸೆಂಟರ್ ಆಗಬೇಕು ಎಂಬ ಕಲ್ಪನೆ ಇತ್ತು. ಅಂತಾರಾಷ್ಟ್ರೀಯ ಮಟ್ಟದ ಆಧುನಿಕ ಶಿಕ್ಷಣ ಸಿಗಬೇಕು ಎಂಬದು ಆಲೋಚನೆಯಾಗಿತ್ತು. ಇದೇ ಹಾದಿಯಲ್ಲಿ ತುಮಕೂರು ವಿಶ್ವವಿದ್ಯಾಲಯ ನಾಲ್ಕು ಪೀಠ ತೆರೆದು ಮತ್ತೊಂದು ಹೆಜ್ಜೆ ಇಟ್ಟಿದೆ. ಜುಂಜಪ್ಪ ಅವರು ನಮ್ಮ ಜಿಲ್ಲೆಯವರು. ಅವರ ಮಾತುಗಳ ಮೂಲಕ ಅನೇಕ ಸಂದೇಶ ನೀಡಿದ್ದಾರೆ ಅವರ ಪೀಠ ಸ್ಥಾಪನೆ ಶ್ಲಾಘನೀಯ ಎಂದರು.

ಈ ನಾಲ್ಕು ಜನರು ಅವರದೇ ಕ್ಷೇತ್ರದಲ್ಲಿ ಸಾಧನೆಗೈದು ಹಲವು ವಿಚಾರಗಳನ್ನು ನಮಗೆ ನೀಡಿದ್ದಾರೆ. ಅವರ ಹೆಸರಿನಲ್ಲಿ ಪೀಠ ಸ್ಥಾಪನೆ ಯುವ ಪೀಳಿಗೆಗೆ ಮಾರ್ಗದರ್ಶವಾಗಲಿದೆ. ಶಿಕ್ಷಣ ಕ್ಷೇತ್ರ ಬಹಳ ಬದಲಾಗಿದೆ. ಹಿಂದೆ ಶಿಕ್ಷಣದಲ್ಲಿ ಅವಕಾಶ ಕಡಿಮೆ ಇತ್ತು. ಆದರೆ ಇಂದು ಅವಕಾಶ ಕೊರತೆ ಇಲ್ಲ. ಯಾವ ವಿಶ್ವವಿದ್ಯಾಲಯದಲ್ಲಾದರೂ ದಾಖಲಾತಿ ಪಡೆಯುವ ಅವಕಾಶವಿದೆ. ನಾಸಾದಲ್ಲಿ ಶೇ.೩೦ ರಷ್ಟು ಭಾರತೀಯರೇ ಇದ್ದಾರೆ. ಎಲ್ಲೆಡೆ ಭಾರತೀಯರೇ ಅವಕಾಶ ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು, ಪ್ರತಿ ಸರಕಾರ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಉಪಸ್ಥಿತರಿದ್ದರು.

ರಾಜ್ಯದಲ್ಲಿ ನೀವು ಅಧಿಕಾರದಲ್ಲಿದ್ದರೆ, ಕೇಂದ್ರದಲ್ಲಿ ನಾವಿದ್ದೇವೆ ಸಿಎಂ ಕುಮಾರಸ್ವಾಮಿಗೆ ಬಿಎಸ್ವೈ ಟಾಂಗ್!

ಬೆಂಗಳೂರು: ರಾಜ್ಯದಲ್ಲಿ ನೀವು ಅಧಿಕಾರದಲ್ಲಿದ್ದರೆ, ಕೇಂದ್ರದಲ್ಲಿ ನಾವು ಅಧಿಕಾರದಲ್ಲಿದ್ದೇವೆ. ನಿಮ್ಮ ಧಮಕಿಗೆ ಹೆದರುವವನು ನಾನಲ್ಲ. ನೀವು ಏನೇ ಮಾಡಿದರು ಅದಕ್ಕೆ ಪ್ರತಿಯಾಗಿ ಏನು ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ಹದ್ದು ಮೀರಿ ಮಾತಾಡ್ತಾರೆ ಅಂತ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ನನ್ನ ಇತಿ ಮಿತಿ ನನಗೆ ಗೊತ್ತಿದೆ. ನನಗೆ ಹೇಗೆ ಮಾತಾಡಬೇಕು ಅಂತ ಗೊತ್ತು. ಹದ್ದು ಮೀರಿ ಮಾತಾಡೋರು ನೀವು ಎಂದು ತಿರುಗೇಟು ನೀಡಿದರು.

ನಿಮಗೆ ರಾಜ್ಯದಲ್ಲಿ ಅಧಿಕಾರ ಇರಬಹುದು, ಕೇಂದ್ರದಲ್ಲಿ ನಮ್ಮ ಅಧಿಕಾರ ಇದೆ. ನೀವು ಏನು ಮಾಡಿದ್ರು ಅದಕ್ಕೆ ಪ್ರತಿಯಾಗಿ ಏನು‌ ಮಾಡಬೇಕು ಎಂದು ನಮಗೂ ಗೊತ್ತಿದೆ. ಇಂಥ ಧಮಕಿಗೆಲ್ಲ ನಾನು ಹೆದರೊಲ್ಲ, ಬಗ್ಗೊಲ್ಲ. ಶಿವರಾಮ್ ಕಾರಂತ ಬಡಾವಣೆ ಬಗ್ಗೆ ತನಿಖೆ ಮಾಡಿ, ಸತ್ಯ ಜನತೆಗೆ ಗೊತ್ತಾಗಲಿ. ಅದು ಬಿಟ್ಟು ಧಮಕಿ ಹಾಕಿದ್ರೆ ನಡೆಯಲ್ಲ ದೇವೇಗೌಡ, ಕುಮಾರಸ್ವಾಮಿ ಕುಟುಂಬ ಮೈಸೂರಿನಲ್ಲಿ ಎಷ್ಟು ಸೈಟ್ ಮಾಡಿಕೊಂಡ್ರಿ ಗೊತ್ತಿದೆ. ಇಂದು ಸಂಜೆ ನಮ್ಮ ಶಾಸಕರು ಸುದ್ದಿಗೋಷ್ಟಿ ಕರೆದು ಎಲ್ಲ ದಾಖಲೆ ಬಿಡುಗಡೆ ಮಾಡ್ತಾರೆ. ಎಲ್ಲವನ್ನೂ ದಾಖಲೆ ಸಮೇತ ಹೊರ ಹಾಕ್ತೀನಿ ಟಾಂಗ್ ನೀಡಿದರು.

ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿ.ಎಸ್ ಯಡಿಯೂರಪ್ಪ, ಅವರು ಅವರದೇ ಆದ ಕಾರಣಕ್ಕೆ ಬಹಳಷ್ಟು ನೊಂದು ನನ್ನ ಬಗ್ಗೆ ಮಾತನಾಡಿದ್ದಾರೆ. ನಾನು ಅವರ ಕುರಿತು ಏನು ಮಾತಾಡಿಲ್ಲ. ಏನ್ಪೋಸ್ಮೆಂಟ್ ಡೈರೆಕ್ಟರ್ ಅವರು ಏನು ಒಂದು ಕೇಸ್ ನ್ನು ಮಾಡಿದ್ದಾರೋ ಅದನ್ನು ಸಾಭೀತು ಮಾಡೋ ಅಂತದ್ದು ಅವರಿಗೆ ಕಷ್ಟದ ಕೆಲಸವೆನಲ್ಲ ಎಂದರು.

ರಾಜ್ಯದಲ್ಲಿ ಕಮಿಷನ್ ಸರ್ಕಾರ ಪರಿಚಯಿಸಿದವರೇ ಬಿ.ಎಸ್.ಯಡಿಯೂರಪ್ಪ: ಸಿಎಂ ವಾಗ್ದಾಳಿ

ಬೆಂಗಳೂರು: ಮೈತ್ರಿ ಸರ್ಕಾರ 8%, 10% ಕಮಿಷನ್ ಸರ್ಕಾರ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಕಮಿಷನ್ ಸರ್ಕಾರದ ಪಿತಾಮಹಾ ಯಡಿಯೂರಪ್ಪ ಅವರೇ ಅಲ್ಲವೇ? ಸರ್ಕಾರದಲ್ಲಿ ಕಮಿಷನ್ ವ್ಯವಹಾರವನ್ನು ಪರಿಚಯಿಸಿದವರು ಅವರೇ ಎಂದು ಸಿಎಂ ಕುಮಾರಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದರು‌.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪ ತಮ್ಮ ವಯಸ್ಸಿಗೆ ತಕ್ಕಂತಾದರೂ ನಡೆದುಕೊಳ್ಳಲಿ. ತಾವು ಆಪರೇಷನ್ ಕಮಲ ಮಾಡುವುದಿಲ್ಲ ಎನ್ಮುತ್ತಾರೆ. ಈಗಲೂ ಬೌರಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಸಭೆ ನಡೆಸುತ್ತಿದ್ದಾರೆ. ನಿನ್ನೆ ನಮ್ಮ ಶಾಸಕರಾದ ನಾಗಮಂಗಲ ಸುರೇಶ್ ಗೌಡ ಹಾಗೂ ಶಿವಳ್ಳಿಗೆ ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದಾರೆ. ಅದೇನೋ ಅವರಿಗೆ 18 ಶಾಸಕರ ಬೆಂಬಲ ಸಿಕ್ಕಿದೆಯಂತೆ ಶಾಸಕರನ್ನು ಬಾಂಬೆಗೋ, ಪೂನಾಗೋ ಕರೆದುಕೊಂಡು ಹೋಗಿ ಅಲ್ಲಿಂದ ಮಿಲಿಟರಿ ಎಸ್ಕಾರ್ಟ ನಲ್ಲಿ ವಿಧಾನಸೌಧಕ್ಕೆ ಕರೆತರುತ್ತಾರಂತೆ ಎಂದರು.

ಅಪ್ಪ‌ಮಕ್ಕಳು ಲೂಟಿಕೋರರು ಎಂದಿದ್ದಾರೆ. ಹಿಂದೆ ಹುಬ್ಬಳ್ಳಿಯಲ್ಲಿ ಹೀಗೇ ಹೇಳಿಕೆ ಕೊಟ್ಟರು. ಆನಂತರ ಜೈಲಿಗೆ ಹೋದವರು ಯಾರು. ನಮ್ಮನ್ನು ಕಮೀಷನ್ ಪಡೆಯುತ್ತಾರೆ ಎಂದು ಆರೋಪಿಸಿದ್ದಾರೆ. ಆದರೆ, ರಾಜ್ಯದಲ್ಲಿ ಕಮೀಷನ್ ವ್ಯವಹಾರ ಪ್ರಾರಂಭಿಸಿದವರು ಯಾರು. ಈಗಲೂ ಶಿವರಾಮಕಾರಂತ ಬಡಾವಣೆ ಡಿ ನೋಟಿಫಿಕೇಶನ್ ಪ್ರಕರಣ ಸುಪ್ರಿಂ‌ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ನಾವೂ ಕೂಡ ಇಲ್ಲಿ ಸರ್ಕಾರ ನಡೆಸುತ್ತಿದ್ದೇವೆ. ಇಷ್ಟು ದಿನ ನಾವೂ ತಾಳ್ಮೆಯಿಂದ ಇದ್ದೆವು. ಈಗ ನಾವೂ ಕೂಡ ದಾಖಲೆಗಳನ್ನು ಹೊರಗೆ ತೆಗೆದ್ರೆ ಏನು ಪರಿಣಾಮ ಆಗುತ್ತದೆ ಎಂಬುದನ್ನು ಯಡಿಯೂರಪ್ಪ ಅರ್ಥ ಮಾಡಿಕೊಳ್ಳಬೇಕು ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.