ನನ್ನನ್ನು ಜೈಲಿಗೆ ಕಳುಹಿಸಿದರೆ ಸರ್ಕಾರ ರಚನೆ ಮಾಡಬಹುದು ಎಂದು ಬಿಎಸ್ವೈ ಹಗಲುಗನಸು ಕಾಣುತ್ತಿದ್ದಾರೆ: ಡಿಕೆಶಿ

ಬೆಂಗಳೂರು: ನನ್ನನ್ನ ಜೈಲಿಗೆ ಕಳುಹಿಸಿದ್ರೆ ಸರ್ಕಾರ ರಚನೆ ಮಾಡಬಹುದು ಎಂದು ಯಡಿಯೂರಪ್ಪ ಹಗಲುಕನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಫುಡ್ ಪಾಯಿಸನ್‌ನಿಂದ ಆಸ್ಪತ್ರೆಗೆ ದಾಖಲಾಗಿರುವ
ಸಚಿವ ಡಿ ಕೆ ಶಿವಕುಮಾರ್ ಆಸ್ಪತ್ರೆಯಿಂದ ನೇರವಾಗಿ ಬಂದು ಸುದ್ಧಿಗೋಷ್ಠಿ ನಡೆಸಿದರು. ಸುದ್ದಿಗೋಷ್ಟಿ ಬಳಿಕ ಮತ್ತೆ ಆಸ್ಪತ್ರೆಗೆ ತೆರಳಿ ವಿಶ್ರಾಂತಿ ಪಡೆದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿಯ ಸಂಬಿತ್ ಪಾತ್ರ ನನ್ನ ಮೇಲೆ ಆರೋಪ ಮಾಡಿದ್ದಾರೆ. ಇದಕ್ಕೆ ಉತ್ತರ ಕೊಡಲು ನಾನು ಬಂದಿದ್ದೇನೆ, ರಾಜಕೀಯ ಕಾರಣದಿಂದ ನನ್ನ ಮೇಲೆ ಐಟಿ ದಾಳಿ ನಡೀತು, ೮೨ ಕಡೆ ಏಕಕಾಲದಲ್ಲಿ ಐಟಿ ದಾಳಿ ಆಗಿತ್ತು. ಕಳೆದ ವರ್ಷ ಐಟಿ ದಾಳಿ ಆಗಿತ್ತು, ಈಗ ಇಡಿಯಲ್ಲಿ ಎಫ್ ಐ ಆರ್ ಆಗಿದೆ, ಐಟಿ ದಾಳಿಯಾಗಿ ಒಂದು ವರ್ಷ, ಒಂದು ತಿಂಗಳು ಆಗಿದೆ ಈಗ ಎಫ್ ಐ ಆರ್ ಆಗಿದೆ. ನಾನು ಯಾವುದೇ ಕಾರಣಕ್ಕೂ ಹೆದರಲ್ಲ. ತನಿಖೆಗೆ ಎಲ್ಲ ಹಂತದಲ್ಲೂ ನಾನು ಸಹಕಾರ ನೀಡಿದ್ದೇನೆ. ಈ ಆರೋಪದಿಂದ ನಾನು ಹೊರ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೇಕಾದ್ರೆ ದೆಹಲಿಯಲ್ಲಿ ಬಂದು ಸುದ್ದಿಗೋಷ್ಟಿ ನಡೆಸಿ ಉತ್ತರ ಕೊಡುತ್ತೇನೆ. ನನ್ನ ಫ್ಯಾಮಿಲಿ, ನನ್ನ ಸ್ನೇಹಿತರು ಸೇರಿದಂತೆ ಎಲ್ಲರಿಗೂ ಟಾರ್ಚರ್ ಕೊಟ್ರು. ಈ ರೀತಿ ಮಾಡಿ ಡಿ.ಕೆ.ಶಿವಕುಮಾರ್‌ನನ್ನು ಹೆದರಿಸೋಣ ಅಂದುಕೊಂಡ್ರೆ ಅದು ಸಾಧ್ಯವಿಲ್ಲ. ಡೈರಿ ಬಗ್ಗೆ ಸಂಬಿತಾ ಪಾತ್ರ ಆರೋಪ ಮಾಡುತ್ತಾರೆ. ಯಡಿಯೂರಪ್ಪ ಚೆಕ್ ನಲ್ಲಿ ಲಂಚ ತೆಗದುಕೊಂಡಿದ್ರು, ಅಡ್ವಾಣಿ, ಮೋದಿ ಡೈರಿ ಏನಾಗಿದೆ? ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಐಟಿ ವಿಚಾರಣೆ ವೇಳೆ ಡಿ ಕೆ ಶಿವಕುಮಾರ್ ಹೆಸರು ಹೇಳಬೇಕು ಎಂದು ನಮ್ಮವರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ನನಗೆ ಎಲ್ಲ ಮಾಹಿತಿ ಇದೆ. ನಮ್ಮ ಶಾಸಕರಿಗೆ ಕೋಟಿ ಕೋಟಿ ಆಮಿಷ ನೀಡುತ್ತಿದ್ದಾರೆ. ಈ ಬಗ್ಗೆ ಎಲ್ಲ ದಾಖಲೆ ನಮ್ಮ ಬಳಿ ಇದೆ, ಆದಷ್ಟು ಬೇಗ ಈ ಬಗ್ಗೆ ಎಲ್ಲ ಮಾಹಿತಿ ಬಹಿರಂಗ ಪಡಿಸುತ್ತೇವೆ. ಶಾಸಕರೇ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದರು.

ಐಟಿ ತನಿಖೆ ಹೆಸರಲ್ಲಿ ನನಗೆ ಕಿರುಕುಳ ನೀಡುತ್ತಿದ್ದಾರೆ. ಈ ರೀತಿಯ ಕಿರುಕಿಳಗಳಿಗೆ ನಾನು ಹೆದರುವ ವ್ಯಕ್ತಿಯಲ್ಲ, ಗೋವಿಂದರಾಜು ಡೈರಿ ಸೃಷ್ಟಿ ಮಾಡಿ ಮಾಹಿತಿ ಅವರೇ ಸೋರಿಕೆ ಮಾಡಿದ್ರು. ಆರ್ ಜಿ , ಎಸ್ ಜಿ ಅಂತ ಅವ್ರೇ ಸೃಷ್ಟಿ ಮಾಡಿ ಬಿಡುಗಡೆ ಮಾಡಿದ್ದರು. ನನ್ನ ಜೊತೆ ನನ್ನ ಪಕ್ಷ ಇದೆ. ೨೦೧೯ರಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ನನಗೆ ಯಾವ್ ರೀತಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಗೊತ್ತಿದೆ. ತನಿಖೆಗೆ ನಾನು ಎಲ್ಲ ರೀತಿ ಸಹಕಾರ ಕೊಡುತ್ತೇನೆ. ನನ್ನ ಮನೆಯಲ್ಲಿ ಸಿಕ್ಕ ಎಲ್ಲ ಮಾಹಿತಿ ಬಹಿರಂಗಪಡಿಸಲಿ. ಗುಜರಾತ್ ರಾಜ್ಯಸಭಾ ಚುನಾವಣೆಯಾದ ಮೇಲೆ ಐಟಿ ದಾಳಿಯಾಗಿತ್ತು. ಡಿ ಕೆ ಶಿವಕುಮಾರ್ ಯಾವತ್ತೂ ಓಡಿಹೋಗಲ್ಲ. ಯಡಿಯೂರಪ್ಪ , ಬಿಜೆಪಿ ಎಲ್ಲ ನಾಯಕರು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ನನ್ನನ್ನ ಜೈಲಿಗೆ ಕಳುಹಿಸಿದ್ರೆ ಸರ್ಕಾರ ರಚನೆ ಮಾಡಬಹುದು ಎಂದು ಯಡಿಯೂರಪ್ಪ ಹಗಲುಕನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಕೆಂಡಾಮಂಡಲರಾದರು.

ನಾನು ಕೊಲೆ ಏನು ಮಾಡಿಲ್ಲ, ನಾನು ಯಾವುದೇ ಹವಲಾ ದಂಧೆ ನಡೆಸಿಲ್ಲ. ನನ್ನನ್ನ ಯಾಕೆ ಅರೆಸ್ಟ್ ಮಾಡುತ್ತಾರೆ? ನಾನೇಕೆ ನಿರೀಕ್ಷಣಾ ಜಾಮೀನು ತೆಗದುಕೊಳ್ಳಲಿ. ನಾನು ಯಾವುದೇ ತಪ್ಪು ಮಾಡಿಲ್ಲ, ತಪ್ಪು ಮಾಡಿದ್ರೆ ಅರೆಸ್ಟ್ ಮಾಡಲಿ, ನಾನು ಹೆದುರುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದ್ರೆ ಭಯಪಡಬೇಕು ನನ್ನ ಮನೆಯಲ್ಲಿ ಸಿಕ್ಕ ೪೧ ಲಕ್ಷದ ಬಗ್ಗೆ ಮಾಹಿತಿ ನೀಡಿದ್ದೇವೆ.
ದೆಹಲಿಯಲ್ಲಿ ೭ ಕೋಟಿ ಹಣ ಸಿಕ್ಕಿದೆ ಅನ್ನೋದು ಸುಳ್ಳು, ಸೂಕ್ತ ಸಮಯದಲ್ಲಿ ಮತ್ತಷ್ಟು ಮಾತನಾಡುತ್ತೇನೆ. ಇಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಜೈಲಿಗೆ ಹೋಗಿ ಬಂದವರು ಸಿಎಂ ಅಭ್ಯರ್ಥಿಯಾಗಿದ್ದಾರೆ, ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದಾರೆ. ಮೊದಲು ತನಿಖೆ ನಡೆಯಲಿ ಎಂದು ಬಿಜೆಪಿ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಹೊಸ ತಾಲ್ಲೂಕುಗಳಿಗೆ ಸೌಲಭ್ಯಕ್ಕೆ ಕ್ರಮ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ರಚನೆಯಾಗಿರುವ 50 ಹೊಸ ತಾಲ್ಲೂಕುಗಳಿಗೆ ವಿವಿಧ ಇಲಾಖೆಗಳ ಕಚೇರಿಯನ್ನು ಮಂಜೂರು ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಅವರು ಇಂದು ಕಂದಾಯ ಇಲಾಖೆಯ ವಿವಿಧ ವಿಷಯಗಳ ಕುರಿತು ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಿದರು. ಎಂ.ಬಿ.ಪ್ರಕಾಶ್ ವರದಿಯ ಪ್ರಕಾರ ಹೊಸದಾಗಿ ರಚನೆಯಾದ ತಾಲ್ಲೂಕಿನಲ್ಲಿ ಕನಿಷ್ಟ 14 ಇಲಾಖೆಗಳು ಕಾರ್ಯನಿರ್ವಹಿಸಬೇಕಾಗುತ್ತದೆ . ಹೊಸ ತಾಲ್ಲೂಕುಗಳಲ್ಲಿ ಉಳಿದ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳನ್ನು ಸ್ಥಾಪಿಸಲು ಸಹಮತ ನೀಡುವಂತೆ ಆರ್ಥಿಕ ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವನೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಹೊಸ ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣದ ಕುರಿತು ಸಹ ಚರ್ಚೆ ನಡೆಸಲಾಯಿತು. ಇದಲ್ಲದೆ ಹೊಸ ತಾಲ್ಲೂಕು ರಚನೆಯ ಬಗ್ಗೆ ಬಂದಿರುವ ಬೇಡಿಕೆಗಳಲ್ಲಿ ನಿಜವಾಗಿಯೂ ಅಗತ್ಯವಿರುವ ಸ್ಥಳವನ್ನು ಗುರುತಿಸುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ತಿಳಿಸಿದರು.

ಭೂ ಮಾಪನ ಇಲಾಖೆಯ ಕರ್ನಾಟಕ ಭೂ ಕಂದಾಯ ಕಾಯ್ದೆಯ 1964 ರ ಕಲಂ 94 (ಸಿ) ಅಡಿಯಲ್ಲಿ 26922 ಅರ್ಜಿಗಳನ್ನು ಹಾಗೂ ಮತ್ತು 94 (ಸಿ.ಸಿ) ಅಡಿಯಲ್ಲಿ 13971 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸಾಮಾಜಿಕ ಭದ್ರತೆ ಪಿಂಚಣಿ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರೈತರ ಆತ್ಮಹತ್ಯೆ ಪ್ರಕರಣದಲ್ಲಿ 2018ರ ಜೂನ್ ಅಂತ್ಯದವರೆಗೆ 35 ಪ್ರಕರಣಗಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗಿತ್ತು. 2018ರ ಆಗಸ್ಟ್ ಅಂತ್ಯಕ್ಕೆ ಈ ಪ್ರಕರಣಗಳ ವಿಲೇವಾರಿ ಚುರುಕುಗೊಂಡಿದ್ದು 114 ಪ್ರಕರಣಗಳಲ್ಲಿ ರೂ.5.00 ಲಕ್ಷ ಪರಿಹಾರ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 2742 ಕಂದಾಯ ಗ್ರಾಮಗಳನ್ನು ರಚಿಸಬೇಕಾಗಿದ್ದು, 1413 ಕಂದಾಯ ಗ್ರಾಮಗಳ ರಚನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ : 724 ಕಂದಾಯ ಗ್ರಾಮಗಳ ರಚನೆಗೆ ಅಧಿಸೂಚನೆ ಹೊರಡಿಸಲಾಗಿದೆ.

ಇದಲ್ಲದೆ ಭೂಪರಿವರ್ತನೆ ಕಾಯ್ದೆಯನ್ನು ಸರಳಗೊಳಿಸಲು ಸೆಪ್ಟೆಂಬರ್ 17ರಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಸರಳೀಕರಣ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷವಿಲ್ಲದಂತೆ ಎಚ್ಚರವಹಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವಿವಿಧ ಐದು ಸೇವೆಗಳನ್ನು ಆನ್‍ಲೈನ್‍ನಲ್ಲಿ ಒದಗಿಸಲು ಸಿದ್ಧತೆ ನಡೆದಿದ್ದು, ಈ ಬಗ್ಗೆ ಕಾನೂನು ಇಲಾಖೆಯ ಸಲಹೆ ಪಡೆಯಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ||ಇ.ವಿ.ರಮಣರೆಡ್ಡಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಖತ್ರಿ , ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ(ವಿಪತ್ತು ನಿರ್ವಹಣೆ) ಗಂಗಾರಾಂ ಬಡೇರಿಯಾ, ಭೂ ಮಾಪನ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕ ಡಾ|| ಕೆ.ವಿ.ತ್ರಿಲೋಕಚಂದ್ರ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಕ್ರೀಡಾ ಹಬ್ ನಿರ್ಮಾಣ ಅನುದಾನಕ್ಕಾಗಿ ಕೇಂದ್ರಕ್ಕೆ ಡಿಸಿಎಂ ಮನವಿ!

ನವದೆಹಲಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ವಿದ್ಯಾನಗರದಲ್ಲಿ ಸ್ಪೋಟ್ಸ್ ಹಬ್ ನಿರ್ಮಾಣಕ್ಕೆ 70 ಕೋಟಿ ರೂಪಾಯಿ ಹಾಗೂ ರಾಜ್ಯದಲ್ಲಿ ಇತರೆ ಕ್ರೀಡಾ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಅವರು ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಬುಧವಾರ ದೆಹಲಿಯಲ್ಲಿ ಕೇಂದ್ರ ಕ್ರೀಡಾ ಸಚಿವರನ್ನು ಭೇಟಿ ಮಾಡಿದ ಪರಮೇಶ್ವರ್ ಅವರು, ರಾಜ್ಯ ಕ್ರೀಡಾ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದರು.
ಬೆಂಗಳೂರಿನ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಹಬ್ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದ್ದು 70 ಕೋಟಿ ರು. ವೆಚ್ಚ ಅಂದಾಜಿಸಲಾಗಿದೆ. ಹೀಗಾಗಿ ಖೇಲೋ ಇಂಡಿಯಾ ಯೋಜನೆಯಡಿ ಈ ಕಾರ್ಯಕ್ರಮಕ್ಕೆ ಅನುದಾನ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು. ಇದರ ಜೊತೆಗೆ, ರಾಜ್ಯದಲ್ಲಿ ಕ್ರೀಡಾ ಅಭಿವೃದ್ಧಿ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ಕೈಗೆತ್ತಿಕೊಳ್ಳಲಾಗಿದೆ, ಇದಕ್ಕೂ ಸಹ ಕೇಂದ್ರ ಕ್ರೀಡಾ ಇಲಾಖೆಯಿಂದ ಅನುದಾನ ನೀಡುವಂತೆಯೂ ಇದೇ ವೇಳೆ ಪ್ರಸ್ತಾವನೆ ಸಲ್ಲಿಸಿದರು. ಶೀಘ್ರವೇ ಅನುದಾನ ಬಿಡುಗಡೆಗೆ ಮನವಿ ಮಾಡಿದರು. ಪರಮೇಶ್ವರ ಅವರ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ರಾಜ್ಯ ಸರ್ಕಾರ ಕಮಿಷನ್ ಏಜೆಂಟ್‌ನಂತೆ ಕೆಲಸ ನಿರ್ವಹಿಸುತ್ತಿದೆ: ಬಿಎಸ್ವೈ ಆರೋಪ

ಬೆಂಗಳೂರು: ಕಮಿಶನ್ ಏಜೆಂಟರಂತೆ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಶೇಕಡಾ 8 ರಿಂದ 10 ರಷ್ಟು ಕಮಿಶನ್ ಕೊಡದೇ ಬಿಲ್ ಪಾಸ್ ಮಾಡಲ್ಲ ಅಂತಾ ಸಚಿವರೇ ಹೇಳ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು‌.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ನಾಯಕರ ವಿಶೇಷ ಸಭೆಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, 104 ಜನ ಶಾಸಕರಿರುವ ನಾವು ಪ್ರತಿಪಕ್ಷದಲ್ಲಿ ಕೂತಿದ್ದೇವೆ, 37 ಶಾಸಕರಿರುವ ಜೆಡಿಎಸ್ ಅಧಿಕಾರದಲ್ಲಿದೆ. ಆಪರೇಷನ್ ಕಮಲದ ಬಗ್ಗೆ ಮಾತನಾಡುವ ಸಿಎಂ ಕುಮಾರಸ್ವಾಮಿಯವರು ಮೊನ್ನೆ ಕಲ್ಬುರ್ಗಿಗೆ ಹೋಗಿದ್ದಾಗ ನಮ್ಮ ಶಾಸಕ ಸುಭಾಷ್ ಗುತ್ತೇದಾರ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿದ್ದು, ಹತ್ತು ಬಿಜೆಪಿ ಶಾಸಕರು ತಮ್ಮ ಜತೆ ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.

ಸ್ವತಃ ಮುಖ್ಯಮಂತ್ರಿಗಳೇ ನಮ್ಮ ಶಾಸಕರನ್ನು ಜೆಡಿಎಸ್‌ಗೆ ಬನ್ನಿ ಮಂತ್ರಿ ಮಾಡುತ್ತೇನೆ ಎಂದು ಕರೆಯುತ್ತಾರೆ ಎಂದ್ರೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಈ ಸರ್ಕಾರದಲ್ಲಿ ತಮಗೆ ಉಸಿರುಕಟ್ಟುವ ವಾತಾವರಣ ಇದೆ ಎಂದು ಹಲವು ಶಾಸಕರೇ ಹೇಳುತ್ತಿದ್ದಾರೆ‌. ಈ ಸರ್ಕಾರ ಹೆಚ್ಚು ಕಾಲ ಉಳಿಯುತ್ತೆ ಎಂಬ ವಿಶ್ವಾಸ ಯಾರಿಗೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 25 ಸ್ಥಾನಗಳ ಕೊಡುಗೆಯನ್ನು ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಡಬೇಕಾಗಿದೆ ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಬಿರುಕು ಉಂಟಾಗಿದೆ. ವಿಧಾನಸೌಧಕ್ಕೆ ಸಚಿವರು ಬಾರದೆ ಯಾವುದೇ ಜನ ಹಿತ ಕಾರ್ಯಗಳು ಆಗುತ್ತಿಲ್ಲ. ಎಲ್ಲ ಶಾಸಕರ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಕಮೀಷನ್ ಏಜೆಂಟರಂತೆ ಸರ್ಕಾರ ಕರ್ತವ್ಯ ನಿರ್ವಹಿಸುತ್ತಿದೆ. ಎಂಟರಿಂದ ಹತ್ತು ಪರ್ಸೆಂಟ್ ಕಮೀಷನ್ ಇಲ್ಲದೆ ಕೆಲಸ ಆಗಲ್ಲ. ನೀರಾವರಿ ಮತ್ತು ಲೋಕೋಪಯೋಗಿ ಸಚಿವರು ಕಮೀಷನ್ ಏಜಂಟರಂತಾಗಿದ್ದಾರೆ ಎಂದು ಗಂಬೀರ ಆರೋಪ ಮಾಡಿದರು.

ಗೃಹ ಸಚಿವರ ಗಮನಕ್ಕೆ ತಾರದೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಿದ್ದರಿಂದ ಕಳೆದ 4 ದಿನಗಳಿಂದ ಡಾ. ಜಿ ಪರಮೇಶ್ವರ್ ಮಾತಾಡ್ತಿಲ್ಲ ಅಪ್ಪ ಮಕ್ಕಳ ನಡೆಯಿಂದ ಅವರಿಗೂ ಅಸಮಾಧಾನವಾಗಿದೆ. ಮತ್ತೊಂದೆಡೆ ದೇವೇಗೌಡರ ಕುಟುಂಬ ವರ್ಗದವರ ಭೂ ಅಕ್ರಮದ ಬಗ್ಗೆ ಮಾಜಿ ಸಚಿವ ಓಲೆ ಮಂಜು ಬಹಿರಂಗ ಪಡಿಸಿದ್ದಾರೆ. ಜಿಲ್ಲಾಧಿಕಾರಿಯವರು ಈ ಪ್ರಕರಣದ ಬಗ್ಗೆ ಕ್ರಮ ತೆಗೆದುಕೊಳ್ಳದೇ ಇದ್ದರೆ ನಾವೂ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಡಿ.ಕೆ.ಶಿವಕುಮಾರ್ ತಾವು ಚೆಸ್ ಪಾನ್ ಹೇಗೆ ಮೂವ್ ಮಾಡಬೇಕು ಎಂದು ಗೊತ್ತಿದೆ ಎಂದಿದ್ದಾರೆ. ಆದರೆ, ಎದುರಾಳಿಯೇ ಇಲ್ಲದೆ ಚೆಸ್ ಗೇಮ್ ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದರು.

ಸಭೆಯಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಶೋಭಾ ಕರಂದ್ಲಾಜೆ, ಸಿಎಂ ಉದಾಸಿ, ಆರ್. ಅಶೋಕ್, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಅರವಿಂದ್ ಲಿಂಬಾವಳಿ, ಸಿ.ಟಿ. ರವಿ, ರವಿಕುಮಾರ್ ಭಾಗಿಯಾಗಿದ್ದರು.

ರಾಜ್ಯ ಕಾಂಗ್ರೆಸ್ ಸಮಸ್ಯೆಗಳು ಹೈಕಮಾಂಡ್ ಅಂಗಳಕ್ಕೆ!

ನವದೆಹಲಿ: ರಾಜ್ಯ ಕಾಂಗ್ರೆಸ್ಸಿನ ಬಂಡಾಯ ದೆಹಲಿಗೆ ಶಿಫ್ಟ್ ಆಗಿದ್ದು, ಇಂದು ರಾಹುಲ್ ಗಾಂಧಿ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಲಿದ್ದಾರೆ. ಜಾರಕಿಹೊಳಿ ಸಹೋದರರ ಸಮಸ್ಯೆಗಳು, ಅಪರೇಷನ್ ಕಮಲದ ಭೀತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.

ಇಂದು ಸಂಜೆ 4ಗಂಟೆ ರಾಹುಲ್‌ಗಾಂಧಿ ನಿವಾಸದಲ್ಲಿ ನಡೆಯುವ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಭಾಗವಹಿಸುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಬಂಡಾಯ, ಆಪರೇಷನ್ ಕಮಲದ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಇದಲ್ಲದೆ, ಜಾರಕಿಹೊಳಿ ಸಹೋದರರ ಸಮಸ್ಯೆಗೂ ರಾಹುಲ್ ಗಾಂಧಿ ಇಂದು ಪರಿಹಾರ ಒದಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ‌.

ಸಚಿವ ಸಂಪುಟ ಸರ್ಜರಿ ಪರಿಹಾರವೋ, ಸಮಸ್ಯೆಯೋ ಎಂಬ ಬಗ್ಗೆಯೂ ಇಂದು ಚರ್ಚೆಯಾಗಲಿದ್ದು, ಸಂಪುಟ ವಿಸ್ತರಣೆ ಬಳಿಕ ಅವಕಾಶ ವಂಚಿತರು ಬಂಡೇಳುವ ಸಾಧ್ಯತೆ, ಬಂಡಾಯ ಶಮನಕ್ಕೆ ಮಾಡಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಯಲಿದೆ.

ನಿಗಮ ಮಂಡಳಿಗಳ ನೇಮಕ, ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಡಿ.ಕೆ. ಶಿವಕುಮಾರ್ ಮೇಲೆ ಇಡಿ ದೂರು ದಾಖಲಾಗಿರುವ ಕುರಿತು ಡಿಕೆಶಿ ಬಂಧನವಾದರೆ ಏನು ಮಾಡಬೇಕೆಂಬ ಬಗ್ಗೆಯೂ ಚರ್ಚೆ ನಡೆಯಲಿದೆ.

ಬಿಜೆಪಿಯವರು ಮೈತ್ರಿ ಸರ್ಕಾರ ಕೆಡವಲು ಪ್ರಯತ್ನಿಸಿದ್ದು ಸತ್ಯ: ಸಿದ್ಧು

ಬೆಂಗಳೂರು: ಬಿಜೆಪಿಯವರು ಲಜ್ಜೆಗೆಟ್ಟು ಸರ್ಕಾರವನ್ನು ಅಸ್ತಿರಗೊಳಿಸಲು ಯತ್ನಿಸಿದ್ದು ಸತ್ಯ. ನಮ್ಮ ಶಾಸಕರಿಗೆ ಆಮಿಷವೊಡ್ಡಿದ್ದನ್ನು ಶಾಸಕರೇ ಹೇಳಿಕೊಂಡಿದ್ದಾರೆ. ಆದರೆ, ಜಾರಕಿಹೊಳಿ ಸಹೋದರರು ಸೇರಿದಂತೆ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ. ಜಾರಕಿಹೊಳಿ ಸಹೋದರರದ್ದು ಯಾವುದೇ ಬೇಡಿಕೆಯೂ ಇಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳೆಲ್ಲಾ ಆಧಾರ ರಹಿತ. ಮೈತ್ರಿ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ ಎಂದು ಹೇಳಿದರು.

ಬಿಜೆಪಿಯವರು ಸರ್ಕಾರವನ್ಮು ಅಸ್ತಿರಗೊಳಿಸಲು ಪ್ರಯತ್ನಿಸಿದ್ದು ಸತ್ಯ. ನಮ್ಮ ಶಾಸಕರಿಗೆ ಆಮಿಷವೊಡ್ಡಿದ್ದನ್ನು ಶಾಸಕರೇ ಹೇಳಿಕೊಂಡಿದ್ದಾರೆ. ಆದರೆ, ಜಾರಕಿಹೊಳಿ ಸಹೋದರರು ಸೇರಿದಂತೆ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ನಾಳೆ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಚರ್ಚಿಸಲು ದೆಹಲಿಗೆ ಹೋಗುತ್ತಿದ್ದೇವೆ. ಸಚಿವ ಸಂಪುಟ ವಿಸ್ತರಣೆ ಆಗುತ್ತದೆ‌. ಈ ಮೊದಲು ಸೆಪ್ಟೆಂಬರ್ 15-16ರೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದೆವು‌. ಆದರೆ, ವಿಧಾನ ಪರಿಷತ್ ಚುನಾವಣೆ ಘೋಷಣೆಯಾದ ಕಾರಣ ಸಚಿವ ಸಂಪುಟ ವಿಸ್ತರಣೆ ಮುಂದೆ ಹೋಗಿದೆ. ಸೂಕ್ತ ಸಮಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.

ನಮ್ಮ ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ, ಎಲ್ಲರೂ ಆಕಾಂಕ್ಷಿಗಳೇ, ಜತೆಗೆ ರಮೇಶ ಜಾರಕಿಹೊಳಿ ಸಚಿವರಾದ ಕಾರಣ ಶಾಸಕರು ತಮ್ಮ ಕ್ಷೇತ್ರದ ಕೆಲಸಗಳಿಗೆ ಅವರನ್ನು ಭೇಟಿ ಮಾಡುವುದು ಸಹಜ ಪ್ರಕ್ರಿಯೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.