Video-ಪ್ರವಾಹ: ಬಾಕಿ ಪರಿಹಾರ ಬಿಡುಗಡೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ

ಬೆಳಗಾವಿ, ಜು.25: ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಮಧ್ಯೆಯೂ ಪ್ರವಾಹ ಸ್ಥಿತಿ ಉದ್ಭವಿಸಿದೆ.‌ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಗಳು ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು. ಹಣಕಾಸು ಸೇರಿದಂತೆ ಯಾವುದೇ ತೊಂದರೆ ಇದ್ದರೂ ತಕ್ಷಣವೇ ಸಂಬಂಧಿಸಿದವರ ಗಮನಕ್ಕೆ ತಂದು ಸರಿಪಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚನೆ ನೀಡಿದರು.

ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ (ಜು.25) ನಡೆದ ಅತಿವೃಷ್ಟಿ/ಪ್ರವಾಹ ಕುರಿತ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ವಾರದಿಂದ ದಾಖಲೆ ಪ್ರಮಾಣದ ಮಳೆಯಾಗಿದೆ. ರಾಜ್ಯದ ಅಧಿಕಾರಿಗಳು ಮಹಾರಾಷ್ಟ್ರದ ಜತೆ ನಿರಂತರ ಸಂಪರ್ಕದಲ್ಲಿದ್ದು, ಪ್ರವಾಹ‌ ನಿರ್ವಹಣೆ ಕುರಿತು ನಿಗಾ ವಹಿಸಲಾಗಿದೆ.

2-3 ದಿನಗಳಲ್ಲಿ ಹರಿವು ಹೆಚ್ಚಾಗುವ ಸಾಧ್ಯತೆಯಿದೆ. ಪರಿಸ್ಥಿತಿ ನಿರ್ವಹಣೆಗೆ ಸರಕಾರದಿಂದ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಪ್ರವಾಹ-ಬಾಕಿ ಪರಿಹಾರ ಬಿಡುಗಡೆಗೆ ಸೂಚನೆ:

ಕಳೆದ ವರ್ಷದ ಪ್ರವಾಹ ಸಂದರ್ಭದಲ್ಲಿ ಮನೆಹಾನಿಯ ಬಾಕಿ ಪರಿಹಾರ ಬಿಡುಗಡೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.

ಬೆಳಗಾವಿ ಜಿಲ್ಲೆಯಲ್ಲಿ 113 ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿರುವುದರಿಂದ ಜನರ ತುರ್ತು ರಕ್ಷಣೆ ಹಾಗೂ ತಾತ್ಕಾಲಿಕ ಪುನರ್ವಸತಿಗಾಗಿ 89 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಜನರ ಕಷ್ಟಗಳನ್ನು ಅರಿತುಕೊಂಡು ಜಿಲ್ಲಾಡಳಿತ ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು. ಪರಿಹಾರ ಕಾರ್ಯದಲ್ಲಿ ತೊಡಕು ಉಂಟಾದರೆ ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ನಿರ್ದೇಶನ ನೀಡಿದರು.

ಎನ್.ಡಿ.ಆರ್.ಎಫ್. ಅನುದಾನ ಹೆಚ್ಚಳಕ್ಕೆ ಮನವಿ:

ಸಭೆಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ ಅವರು, ಪ್ರವಾಹ ಸಂದರ್ಭದಲ್ಲಿ ತುರ್ತು ಔಷಧಿ ಮತ್ತಿತರ ಸಾಮಗ್ರಿಗಳನ್ನು ಎನ್.ಡಿ.ಆರ್.ಎಫ್. ಅನುದಾನದಲ್ಲಿ ಖರೀದಿಸಬೇಕು ಎಂದು ಸೂಚನೆ ನೀಡಿದರು.

ಎನ್.ಡಿ.ಆರ್.ಎಫ್. ಹೊರತುಪಡಿಸಿ ಉಳಿದ ಹೆಚ್ಚಿನ ಅನುದಾನ ಅಗತ್ಯವಿದೆ ಎಂಬುದರ ಬಗ್ಗೆ ಪ್ರಸ್ತಾವ ಸಲ್ಲಿಸಬೇಕು.
ಎನ್.ಡಿ.ಆರ್.ಎಫ್. ಅನುದಾನ ಹೆಚ್ಚಿಸುವಂತೆ ಕೋರಿ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಜಾನುವಾರು ಹಾನಿ ಪರಿಹಾರ ವಿತರಣೆಗೆ ಸೂಚನೆ:

ಪ್ರವಾಹ ಸಂದರ್ಭದಲ್ಲಿ ಕೊಚ್ಚಿ ಹೋಗಿರುವ ಜಾನುವಾರುಗಳ ಕುರಿತು ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನಿರ್ದೇಶನ ನೀಡಿದರು.

ಆಲಮಟ್ಟಿ ಸದ್ಯಕ್ಕೆ 72 ಟಿಎಂಸಿ ಮಾತ್ರ ಸಂಗ್ರಹವಿದೆ. ಆದಾಗ್ಯೂ ಒಳಹರಿವು ಆಧರಿಸಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು.
ಜಲಾಶಯಗಳಲ್ಲಿ ಕನಿಷ್ಠ ಅಗತ್ಯತೆ ಕಾಯ್ದುಕೊಂಡು ಉಳಿದ ನೀರು ಬಿಡುಗಡೆ ಮಾಡಲಾಗುತ್ತಿದೆ.

1200 ಕೋಟಿ ಹಾನಿ; ತಕ್ಷಣವೇ 170 ಕೋಟಿ ಬಿಡುಗಡೆಗೆ ಮನವಿ

ಬೆಳಗಾವಿ ವಿಭಾಗದಲ್ಲಿ 1400 ಕಿ.ಮೀ. ರಸ್ತೆ ಹಾನಿಯಾಗಿಸೆ. 305 ಸೇತುವೆ ಹಾನಿ ಸೇರಿ ಒಟ್ಟಾರೆ 1200 ಕೋಟಿ ರೂಪಾಯಿ ಹಾನಿಯಾಗಿದ್ದು, ತಕ್ಷಣ ದುರಸ್ತಿಗೆ 170 ಕೋಟಿ ಬಿಡುಗಡೆ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.

ಕಳೆದ ಬಾರಿ ಶಾಶ್ವತ ಪುನರ್ವಸತಿ ಕಲ್ಪಿಸಿ ವಿತರಿಸಲಾಹಗಿರುವ ಮನೆಗಳಿಗೆ ಇದುವರೆಗೆ ಖಾಲಿಯಿರುವ ಮನೆಗಳನ್ನು ಅಗತ್ಯತೆ ಆಧರಿಸಿ ಬೇರೆಯವರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷ್ಣಾ ನದಿಯಲ್ಲಿ ಈಗಲೂ ನೀರಿನ ಹರಿವು ಜಾಸ್ತಿ ಇರುವುದರಿಂದ ಆಲಮಟ್ಟಿ ಜಲಾಶಯದಿಂದ‌ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಜನರ ತುರ್ತು ರಕ್ಷಣೆಗೆ ಅಗತ್ಯವಾಗಿರುವ ಬೋಟ್ ಗಳನ್ನು ನದಿತೀರದ ಭಾಗಗಳ ಗ್ರಾಮಗಳಿಗೆ ಒದಗಿಸಬೇಕು ಎಂದು ಹೇಳಿದರು.

ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳ ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಬೇಕು. ಕಳೆದ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಆದ್ಯತೆ ಮೇರೆಗೆ ಮೊದಲು ಪರಿಹಾರ ಒದಗಿಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಒತ್ತಾಯಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಕಳೆದ ಬಾರಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳು ಹಾಗೂ ಸೇತುವೆಗಳ ದುರಸ್ತಿಗೆ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.

ಬೆಳಗಾವಿ ಗ್ರಾಮೀಣ ಮತಕ್ಷೇತ್ರಕ್ಕೆ ಕನಿಷ್ಠ ಒಂದು ಕೋಟಿ ರೂಪಾಯಿ ಅನುದಾನ ನೀಡಬೇಕಿತ್ತು.
ಸೇತುವೆ ದುರಸ್ತಿಗೆ ಹಣ ನೀಡುವಂತೆ ಆಗ್ರಹಿಸಿದರು.

ಅಥಣಿ ಮತಕ್ಷೇತ್ರದಲ್ಲಿ ಹಾನಿಗೊಳಗಾಗಿರುವ ರಸ್ತೆ ದುರಸ್ತಿಗೆ ತಕ್ಷಣವೇ ಅನುದಾನ ಬಿಡುಗಡೆ ಮಾಡಬೇಕು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ ಒತ್ತಾಯಿಸಿದರು.
ಮನೆಹಾನಿಯಾದಾಗ ಮನೆ ನಿರ್ಮಾಣಕ್ಕೆ ಬರೀ ಪರಿಹಾರ ನೀಡದೇ ಮನೆಗಳನ್ನು ನಿರ್ಮಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹಾಲಿ ಇರುವ ಮನೆಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.

ನಾಲಾಗಳ ನಿರ್ಮಾಣಕ್ಕೆ ಒತ್ತಾಯ:

ಬೆಳಗಾವಿ ನಗರದ ಸುತ್ತಮುತ್ತ ನಾಲಾಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಶಾಸಕ ಅನಿಲ್ ಬೆನಕೆ ಒತ್ತಾಯಿಸಿದರು.

ಕುಡಚಿ ಮತಕ್ಷೇತ್ರದ ಶಿರವಾರ ಹಾಗೂ ಗುಂಡವಾಡ ಗ್ರಾಮಗಳ 350 ಕ್ಕೂ ಅಧಿಕ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಆಶ್ರಯ ಮನೆಗಳನ್ನು ಒದಗಿಸಬೇಕು ಎಂದು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ‌.ರಾಜೀವ್ ಮನವಿ ಮಾಡಿಕೊಂಡರು.

ಜ್ವರಕ್ಕೆ ಸಂಬಂಧಿಸಿದ ಪ್ಯಾರಾಸಿಟಮಲ್ ಲಭ್ಯವಿಲ್ಲ; ಮೇವು ಸಂಗ್ರಹಣೆ ಕೂಡ ಇಲ್ಲ ಈ ಬಗ್ಗೆ ಗಮನಹರಿಸಬೇಕು ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಸಭೆಯಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಒಂದು ವಾರದಿಂದ ಮಳೆ ಜಾಸ್ತಿಯಾಗಿದೆ. ಶೇ.60 ರಷ್ಟು ಅಧಿಕ‌ ಮಳೆಯಾಗಿದೆ. ಮೂರು ಜನರು‌ ಮೃತಪಟ್ಟಿರುತ್ತಾರೆ.
ಪೂರ್ಣ 40 ಮತ್ತು ಭಾಗಶಃ 1200 ಕ್ಕೂ ಅಧಿಕ ಮನೆಗಳು ಕುಸಿದಿವೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಬೆಳೆ ಜಲಾವೃತಗೊಂಡಿರುತ್ತದೆ. ಒಂದು ವಾರದಲ್ಲಿ ಜಂಟಿ ಸಮೀಕ್ಷೆ ನಡೆಸಿ ಹಾನಿಯ ಮಾಹಿತಿಯನ್ನು ಕಲೆಹಾಕಲಾಗುವುದು ಎಂದು ವಿವರಿಸಿದರು.
37 ಸೇತುವೆ ಸ್ಥಗಿತಗೊಂಡಿವೆ. ಆದರೆ ಖಾನಾಪುರ ತಾಲ್ಲೂಕಿನ ಎರಡು ಸೇತುವೆ ಹೊರತುಪಡಿಸಿ ಉಳಿದ ಕಡೆ ಪರ್ಯಾಯ ಮಾರ್ಗಗಳಿವೆ ಎಂದು ತಿಳಿಸಿದರು.
ಜನರನ್ನು ರಕ್ಷಿಸಿ ತಾತ್ಕಾಲಿಕವಾಗಿ ಕಾಳಜಿ ಕೇಂದ್ರದಲ್ಲಿ ಆಸರೆ ಒದಗಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಜವಳಿ ಮತ್ತು ಕೈಮಗ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲ, ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ, ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ಮಹಾಂತೇಶ ಕೌಜಲಗಿ, ಅಭಯ್ ಪಾಟೀಲ, ಅನಿಲ್ ಬೆನಕೆ, ಮಹಾದೇವಪ್ಪ ಯಾದವಾಡ, ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಸದಸ್ಯರಾದ ಸಾಯಬಣ್ಣ ತಳವಾರ, ಕಾಡಾ ಅಧ್ಯಕ್ಷ ವಿ.ಐ.ಪಾಟೀಲ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Video-ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ ಬನ್ನಿ; ಬಿಜೆಪಿಗೆ ಡಿ.ಕೆ. ಶಿವಕುಮಾರ್ ಸವಾಲ್

0

ಬೆಂಗಳೂರು:‘ರಾಜ್ಯದ ಜನ ನೆರೆ, ಕೋವಿಡ್ ನಿಂದ ತತ್ತರಿಸಿ ಜೀವ ಹಾಗೂ ಜೀವನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ರಕ್ಷಣೆ ಮಾಡಲು ಸರ್ಕಾರ ವಿಫಲವಾಗಿದೆ. ಹೀಗಾಗಿ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ, ಅವರ ತೀರ್ಪಿನ ಪ್ರಕಾರ ಹೊಸ ಆಡಳಿತ ಬರಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಸರಕಾರಕ್ಕೆ ಸವಾಲೆಸೆದಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭಾನುವಾರ ಕೋವಿಡ್ 19 ರಾಜ್ಯಮಟ್ಟದ ಕಾಂಗ್ರೆಸ್ ಮೇಲ್ವಿಚಾರಣಾ ಸಮಿತಿ ವರದಿಯನ್ನು ಸ್ವೀಕರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು,’ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸೋಣ. ಜನರ ಬಳಿ ಹೋಗೋಣ. ಅವರು ಯಾವ ತೀರ್ಮಾನ ಮಾಡುತ್ತಾರೋ ಅದರ ಆಧಾರದ ಮೇಲೆ ಹೊಸ ಆಡಳಿತ ನೀಡೋಣ ಎಂದ್ರು.

ಇನ್ನು ಪ್ರಕೃತಿ ವಿಕೋಪ ವಿಚಾರ. ಮುಖ್ಯಮಂತ್ರಿಗಳು ನೆರೆ ಪರಿಶೀಲನೆಗೆ ಇಂದು ಪ್ರವಾಸ ಮಾಡುತ್ತಿದ್ದಾರೆ. ಅವರ ಸ್ಥಾನ ಏನಾಗುತ್ತದೋ ಆ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಕಳೆದ ಮೂರು ವರ್ಷಗಳಿಂದ ಈ ರೀತಿ ಮಳೆ-ನೆರೆ ಬರುತ್ತಿದೆ. ನಮ್ಮ ಪಕ್ಷದಿಂದ ಆರ್.ವಿ. ದೇಶಪಾಂಡೆ ಹಾಗೂ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ತಂಡಗಳು ನೆರೆ ಪರಿಶೀಲನೆಗೆ ತೆರಳಿವೆ. ಬೆಳಗಾವಿಯಲ್ಲಿ ನಿಮ್ಮದೇ ಪಕ್ಷದ 10 ಕ್ಕೂ ಹೆಚ್ಚು ಶಾಸಕರಿದ್ದಾರೆ. ಸರ್ಕಾರವೂ ನಿಮ್ಮದೇ ಇದೆ. ಆದರೂ ಕಳೆದ ವರ್ಷದ ನೆರೆಗೆ ಪರಿಹಾರ ನೀಡಲು ನಿಮಗೆ ಸಾಧ್ಯವಾಗಿಲ್ಲ ಏಕೆ? ಮನೆ ಕಟ್ಟಿಕೊಡಲು ಆಗಿಲ್ಲ ಯಾಕೆ? ಈ ವರ್ಷದ ನೆರೆ ಪಕ್ಕಕ್ಕಿಡಿ, ಒಂದೇ ದಿನದಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ. ಕಳೆದ ಎರಡು ವರ್ಷಗಳ ನೆರೆ ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ ಯಾಕೆ? ಇದನ್ನು ಕೊಡಲು ಆಗಿಲ್ಲ ಎಂದರೆ ಈ ಸರ್ಕಾರ ಯಾಕಿರಬೇಕು? ಯಾವ ಕಾರಣಕ್ಕೆ ನಿಮಗೆ ಅಧಿಕಾರ ಬೇಕು ಎಂದು ಪ್ರಶ್ನಿಸಿದ್ರು.

ಈ ಹಿಂದೆ ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲಿ ನೆರೆ ಬಂದಾಗ ಪ್ರಧಾನ ಮಂತ್ರಿಗಳು ಅಲ್ಲಿಗೆ ಭೇಟಿ ನೀಡಿದ್ದರು. ಆದರೆ ಕರ್ನಾಟಕಕ್ಕೆ ಯಾಕೆ ಬರಲಿಲ್ಲ?ನಮ್ಮ ರಾಜ್ಯಕ್ಕೆ ಯಾಕೆ ಸೂಕ್ತ ಪರಿಹಾರ ನೀಡಲಿಲ್ಲ? ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ? ಆದರೂ ಬಿಜೆಪಿ ಸಂಸದರು ಯಾಕೆ ಒತ್ತಡ ತರಲಿಲ್ಲ? ಲಸಿಕೆ ವಿಚಾರದಲ್ಲಿ ಗುಜರಾತಿಗೆಷ್ಟು ಕೊಟ್ಟಿದ್ದಾರೆ? ನಮ್ಮ ರಾಜ್ಯಕ್ಕೆಷ್ಟು ಕೊಟ್ಟಿದ್ದಾರೆ? ರಾಜ್ಯದಿಂದ 25 ಸಂಸದರನ್ನು ಗೆಲ್ಲಿಸಿ ಕಳುಹಿಸಿಲ್ಲವೇ? ಇದೇನಾ ಬಿಜೆಪಿ, ಎನ್ ಡಿಎ ಸಂಸ್ಕೃತಿ?ಬಿಜೆಪಿಗೆ ಅಧಿಕಾರ ನಡೆಸಲು, ಜನರ ಸೇವೆ ಮಾಡಲು ಅರ್ಹತೆ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಅಭಿವೃದ್ಧಿ ವಿಚಾರ ಪಕ್ಕಕ್ಕಿಡಿ. ಜನ ಕಷ್ಟದಲ್ಲಿರುವಾಗ, ಆಸ್ತಿ, ಜೀವ ಹಾಗೂ ಜೀವನ ಕಳೆದುಕೊಳ್ಳುತ್ತಿರುವಾಗ ಈ ಸರಕಾರ ಸ್ಪಂದಿಸಲಿಲ್ಲ. ಸಂಪೂರ್ಣ ವಿಫಲವಾಗಿದೆ.ಯಡಿಯೂರಪ್ಪ ಅವರು ಅಧಿಕಾರ ತೆಗೆದುಕೊಂಡ ದಿನದಿಂದ ರಾಜಕೀಯ ಅನಿಶ್ಚಿತತೆ ಇದೆ ಎಂದು ಅವರೇ ಹೇಳಿದ್ದಾರೆ. ಅದೇ ಅವರ ಆಡಳಿತ. ಅದೇ ಜನರಿಗೆ ಕೊಟ್ಟಿರುವ ಕೊಡುಗೆ ಎಂದ್ರು.

ಸರ್ಕಾರ ಮಾಡಲಾಗದ್ದನ್ನು ಕಾಂಗ್ರೆಸ್ ಮಾಡಿದೆ:

ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯವನ್ನು ಎಲ್ಲರೂ ಗಮನಿಸಿದ್ದಾರೆ. ಕೋವಿಡ್ ಆರಂಭವಾದಾಗ ಪಕ್ಷದ ಜವಾಬ್ದಾರಿ ಹೊತ್ತೆ. ಜನರ ಸೇವೆ ಮಾಡಲು ಅವಕಾಶ ಸಿಕ್ಕಿತು. ಮೊದಲ ಅಲೆಯಲ್ಲಿ ನಾವು ಅತ್ಯುತ್ತಮ ನಿಲುವು ತೆಗೆದುಕೊಂಡೆವು. ವಲಸೆ ಕಾರ್ಮಿಕರಿಗೆ ಕೊಟ್ಟ ರಕ್ಷಣೆ, ಅವರಿಗೆ ತುಂಬಿದ ಧೈರ್ಯ, ರೈತರಿಗೆ ಬೆಂಬಲವಾಗಿ ನಿಂತದ್ದು, ಅವರ ಬೆಳೆ ಖರೀದಿ ಮಾಡಿದ್ದನ್ನು ಎಲ್ಲರೂ ಗಮನಿಸಿದ್ದಾರೆ.

ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಈ ಕೆಲಸ ಮಾಡಿದ್ದಾರೆ. ಬಿಜೆಪಿಯವರು ಸರ್ಕಾರದ ದುಡ್ಡಲ್ಲಿ ತಮ್ಮ ಫೋಟೋ ಹಾಕಿಕೊಂಡು ಆಹಾರ ಕಿಟ್ ಕೊಟ್ಟರೆ, ನಮ್ಮ ನಾಯಕರು ತಮ್ಮ ಸ್ವಂತ ದುಡ್ಡಿನಲ್ಲಿ ಆಹಾರ ಕಿಟ್, ಆಕ್ಸಿಜನ್, ದಿನಸಿ ಕಿಟ್, ಸ್ಯಾನಿಟೈಸರ್ ಕೊಟ್ಟಿದ್ದಾರೆ. ನಾವು ಸರ್ಕಾರಕ್ಕೆ ಪರ್ಯಾಯವಾಗಿ ಜನರಿಗೆ 1225 ಆಂಬುಲೆನ್ಸ್ ಸೇವೆ ಒದಗಿಸಿದ್ದೇವೆ. 12,53,000 ಮೆಡಿಕಲ್ ಕಿಟ್ ಹಂಚಿದ್ದೇವೆ. 93,47,867 ಆಹಾರ ಕಿಟ್ ನೀಡಿದ್ದೇವೆ. 24,654 ಆಕ್ಸಿಜನ್ ಸಿಲಿಂಡರ್ ನೀಡಿದ್ದೇವೆ. ಇದಕ್ಕೆ ದಾಖಲೆಗಳಿವೆ.

ಒತ್ತಡ ಹಾಕಿ ಸರಕಾರ ಸರ್ವಪಕ್ಷ ಸಭೆ ಕರೆಯುವಂತೆ ಮಾಡಿದೆವು. ವೃತ್ತಿ ಕಳೆದುಕೊಂಡವರಿಗೆ ಪರಿಹಾರಕ್ಕೆ ಆಗ್ರಹಿಸಿ ಹೋರಾಟ ಮಾಡಿದೆವು.ವಲಸಿಗರನೇಕರು ರಸ್ತೆಯಲ್ಲಿ ಸತ್ತರು. ವಲಸಿಗರು ತಮ್ಮ ಊರಿಗೆ ಹೋಗಲು ಸರಕಾರ ಮೂರು ಪಟ್ಟು ಪ್ರಯಾಣದರ ವಿಧಿಸಿತ್ತು. ನಾವು ಅವರ ನೆರವಿಗೆ ಧಾವಿಸಿದಾಗ ಸರ್ಕಾರ ಒತ್ತಡಕ್ಕೆ ಮಣಿದು ಅವರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿತು.ಮತಕ್ಕಾಗಿ ನಾವು ಈ ಕೆಲಸ ಮಾಡಲಿಲ್ಲ. ವಿರೋಧ ಪಕ್ಷವಾಗಿ ಇದು ನಮ್ಮ ಜವಾಬ್ದಾರಿ. ಜನರ ಸಮಸ್ಯೆ ಮಧ್ಯೆ ಇರಬೇಕು ಎಂಬುದು ನಮ್ಮ ಬದ್ಧತೆ ಎಂದ್ರು.

10 ಸಾವಿರ ಹಾಸಿಗೆ, ಕೋವಿಡ್ ಔಷಧದಲ್ಲಿ ಅವ್ಯವಹಾರ ಬಯಲಿಗೆಳೆದೆವು. ಕೋವಿಡ್ ನಿಂದ ಸತ್ತವರನ್ನು ಸರಕಾರ ಹೇಗೆ ನಡೆಸಿಕೊಂಡಿತು ಎಂಬುದನ್ನು ನಾನು ಹೇಳಬೇಕಿಲ್ಲ. ಎಲ್ಲರೂ ನೋಡಿದ್ದಾರೆ. 2ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದರೂ ಸರ್ಕಾರ ಜಾಗೃತವಾಗಲಿಲ್ಲ. ಸರ್ಕಾರ ಕೆಲಸ ಮಾಡುತ್ತದೋ, ಇಲ್ಲವೋ ಲೆಕ್ಕಿಸದೇ ನಮ್ಮ ಜವಾಬ್ದಾರಿ ನಾವು ನಿಭಾಯಿಸಿದೆವು. ಅಂದಿನಿಂದ ಇಂದಿನವರೆಗೂ ನಾವು ಕೆಲಸ ಮಾಡಿಕೊಂಡು ಬಂದಿದ್ದೇವೆ. ಇಂದಿಗೂ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಅವರಿಗೆ ನೆರವು, ಸಾಂತ್ವನ ನೀಡುತ್ತಿದ್ದಾರೆ.ಅಧಿಕಾರದ ಜಂಜಾಟ ನಮಗೆ ಬೇಡ. ಆಸ್ಪತ್ರೆಯ ದುಬಾರಿ ಬಿಲ್ ಕಟ್ಟಲು ಜನ ತಮ್ಮ ಆಸ್ತಿ, ಚಿನ್ನವನ್ನು ಅಡವಿಟ್ಟಿದ್ದಾರೆ, ಮಾರಿಕೊಂಡಿದ್ದಾರೆ. ಈ ಬಗ್ಗೆ ನಮಗೆ ಮಧ್ಯಂತರ ವರದಿ ಬಂದಿದ್ದು, ಎಐಸಿಸಿಗೆ ಈ ವರದಿ ಕಳುಹಿಸಲಾಗುತ್ತದೆ. ಮುಂದೆ ಅಂತಿಮ ವರದಿ ಬರಲಿದೆ. ಈ ಕೆಲಸಕ್ಕಾಗಿ ನಮ್ಮ ತಂಡವನ್ನು ಅಭಿನಂದಿಸುತ್ತೇನೆ ಎಂದ್ರು.

ನಮ್ಮ ಪಕ್ಷದ ಶಾಸಕರು ಇಲ್ಲದ ಕಡೆಗಳಲ್ಲೂ ಸಾವಿರಾರು ಆಹಾರ ಕಿಟ್ ಗಳನ್ನು ಹಂಚಲಾಗಿದೆ. ಸರ್ಕಾರ ಮಾಡಲಾಗದ ಕೆಲಸ ನಾವು ಮಾಡಿದ್ದೇವೆ. ₹100 ಕೋಟಿ ಲಸಿಕೆ ಕಾರ್ಯಕ್ರಮ ರೂಪಿಸಿದ್ದೆವು. ಅದಕ್ಕೆ ಒಪ್ಪಿಗೆ ನೀಡಲು ಸರಕಾರಕ್ಕೆ ಮನಸ್ಸಾಗಲಿಲ್ಲ. ನಮ್ಮ ಒತ್ತಡಕ್ಕೆ ಮಣಿದು ಉಚಿತ ಲಸಿಕೆ ಎಂದು ಘೋಷಿಸಿದರು. ನಮ್ಮ ಶಾಮನೂರು ಶಿವಶಂಕರಪ್ಪ ಅವರು 3 ಲಕ್ಷ ಜನರಿಗೆ ಉಚಿತ ಲಸಿಕೆ ನೀಡಿ ಇಡೀ ದೇಶಕ್ಕೆ ಮಾದರಿಯಾದರು. ನಮ್ಮ ಕಾರ್ಯಕರ್ತರು ಸ್ವಯಂ ಸೇವಾ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಉಚಿತ ಲಸಿಕೆ ನೀಡಿದರು. ಇದು ಕಾಂಗ್ರೆಸ್ ಪಕ್ಷದ ಕಾರ್ಯ. ಇಂತಹ ಒಂದು ಕೆಲಸವನ್ನು ಬೇರೆಯವರು ಮಾಡಿರುವುದನ್ನು ತೋರಿಸಿ.ನಮ್ಮ ಲೋಕಸಭಾ ಸದಸ್ಯರು ಹಾಸಿಗೆ ದಂಧೆ ಬಯಲಿಗೆಳೆದರು. ಆದರೆ ಅದನ್ನು ಮಾಡಿದವರು ಯಾರು? ಅದು ಏನಾಯ್ತು? ಚಾಮರಾಜನಗರ ದುರ್ಘಟನೆ ಬಗ್ಗೆ ಜನರ ದಿಕ್ಕುತಪ್ಪಿಲು ಅವರ ಸರ್ಕಾರದ ದಂಧೆಯನ್ನೇ ಬಯಲು ಮಾಡಿದರು. ಬಹಳ ಸಂತೋಷವಾಯಿತು. ಒಂದು ಸಮಾಜದ ಮೇಲೆ ದ್ವೇಷ ಕಾರಿದರು. ಇತಿಹಾಸ ಮುಚ್ಚಿಹಾಕಲು ಸಾಧ್ಯವಿಲ್ಲ.ಡೆತ್ ಆಡಿಟ್ ಮಾಡಲು ನಮ್ಮ ತಂಡಕ್ಕೆ ಸೂಚನೆ ನೀಡಿದ್ದು, ಪ್ರತಿ ಬ್ಲಾಕ್ ಮಟ್ಟದಲ್ಲೂ ಚುರುಕಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸಮಯದಲ್ಲಿ ಆಡಳಿತ ಪಕ್ಷದ ಒಬ್ಬ ಮಂತ್ರಿ, ಶಾಸಕ, ಕಾರ್ಯಕರ್ತರು ಯಾರಾದರೂ ಒಬ್ಬರು ಇಂತಹ ಕೆಲಸ ಮಾಡಿದ್ದರೆ ಹೇಳಿ. ನಾವು ಭೇಟಿ ಕೊಟ್ಟ 20 ದಿನಗಳ ನಂತರ ಸರ್ಕಾರದ ದುಡ್ಡಲ್ಲಿ ಸಂತ್ರಸ್ತರ ಮನೆಗೆ ಹೊರಟಿದ್ದಾರೆ.ಸರ್ಕಾರ ಈ ವಿಚಾರದಲ್ಲಿ ವಿಫಲವಾಗಿದ್ದು, ನಮ್ಮ ಸೇವೆಗೆ ಒಂದು ಲೆಕ್ಕ ಇರಲಿ ಎಂದು ಈ ಸಮಿತಿ ರಚಿಸಿ ವರದಿ ಸಿದ್ಧಪಡಿಸಿದ್ದೇವೆ.ಮು ಖ್ಯಮಂತ್ರಿಗಳೇ ಆಕ್ಸಿಜನ್ ಇಲ್ಲದೆ ಯಾರೂ ಸತ್ತಿಲ್ಲ ಎಂದು ಕೇಂದ್ರ ಸರ್ಕಾರದ ಸಚಿವಾಲಯಕ್ಕೆ ಮಾಹಿತಿ ನೀಡಿದ ಮೇಲೆ ಚಾಮರಾಜನಗರದಲ್ಲಿ ಸತ್ತ 24 ಜನರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡಿರುವುದೇಕೇ..? 36 ಜನ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ ಎಂದು ಹೈಕೋರ್ಟ್ ನೇಮಕ ಮಾಡಿದ ಸಮಿತಿ ವರದಿ ತಿಳಿಸಿದೆ.ಅವರಿಗೆ ಕೋವಿಡ್ ನಿಂದ ಸತ್ತಿದ್ದಾರೆ ಎಂಬ ಪ್ರಮಾಣ ಪತ್ರವನ್ನೂ ನೀಡಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಮನೆ ಮನೆಗೂ ತೆರಳಿ ಅವರ ಕುಟುಂಬದವರ ರಕ್ಷಣೆಗೆ ನಿಲ್ಲಲಿದೆ ಎಂದ್ರು.

ಕೋವಿಡ್ ಲಸಿಕೆಗೆ ಮುಂಗಡ ನೊಂದಣಿಗೆ ‘ಕೋವಿನ್-ಕಾರ್’ ತಂತ್ರಾಂಶ ಮೈಸೂರಿನಲ್ಲಿ ಪ್ರಾಯೋಗಿಕ ಜಾರಿ

ಮೈಸೂರು. ಜುಲೈ 24:- ಹೊಸದಾಗಿ ಲಸಿಕೆ ಪಡೆಯಬೇಕಾಗಿರುವವರು ಮತ್ತು 2ನೇ ಡೋಸ್ ಲಸಿಕೆ ಪಡೆಯಬೇಕಾಗಿರುವವರು ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಸರ್ಕಾರ ‘ಕೋವಿನ್-ಕಾರ್’ ಎಂಬ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು, ಜುಲೈ 26ರಿಂದ ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ( (Pilot) ) ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ತಂತ್ರಾಂಶದ ಮೂಲಕ ಮೈಸೂರು ನಗರದ ನಾಗರಿಕರು ಆನ್‌ಲೈನ್‌ನಲ್ಲೇ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಬಹುದು. ಕೋವಿನ್ ತಂತ್ರಾAಶವನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ನೊಂದಾಯಿಸಿಕೊಳ್ಳಬಹುದು. cowin.karnataka.gov.in ಲಿಂಕ್ ಹಾಗೂ ಮೈಸೂರು ಜಿಲ್ಲಾಡಳಿತದ ಅಂತರ್ಜಾಲದ ಮೂಲಕವೂ ಸಹ ಸ್ವಯಂ ಪ್ರೇರಿತವಾಗಿ ನೊಂದಾಯಿಸಿಕೊಳ್ಳಲು ಅವಕಾಶವಿದೆ.
ಲಸಿಕೆಯ ಲಭ್ಯತೆ ಆಧರಿಸಿ ನೊಂದಾಯಿಸಿದ ಫಲಾನುಭವಿಗಳಿಗೆ ಲಸಿಕಾ ದಿನ, ಸರ್ಕಾರಿ ಆರೋಗ್ಯ ಕೇಂದ್ರದ ಹೆಸರು ಮತ್ತು ಸಮಯದ ಬಗ್ಗೆ 24 ಗಂಟೆಗಳ ಮುಂಚೆ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ಬರಲಿದೆ. ಫಲಾನುಭವಿಗಳು ಆದ್ಯತೆ ಮೇರೆಗೆ ಲಸಿಕೆ ಮತ್ತು ನಿಗದಿತ ದಿನಾಂಕವನ್ನು ಆಯ್ಕೆ ಮಾಡುವ ಸ್ವಾತಂತ್ರ‍್ಯವನ್ನು ಹೊಂದಿರುತ್ತಾರೆ. ತಮ್ಮ ಲಸಿಕೆ ದಿನವನ್ನು 1 ಬಾರಿ ಬದಲಾವಣೆ ಮಾಡಿಕೊಳ್ಳಲು ಸಹ ಅವಕಾಶ ಇದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲ ಡೋಸ್ ಲಸಿಕೆಗೆ ಹಾಗೂ ಮೊದಲನೇ ಡೋಸ್ ಪಡೆದವರು ಎರಡನೇ ಡೋಸ್ ಲಸಿಕೆಗೆ ‘ಕೋವಿನ್-ಕಾರ್’ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಮೈಸೂರು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕೋವಿಡ್‌ನ ಎರಡೂ ಅಲೆಯಿಂದ ಕಲಿತ ಪಾಠ 3ನೇ ಅಲೆ ತಡೆಗೆ ನೆರವಾಗಲಿ: ನ್ಯಾ. ಬಿ.ಎಸ್.ಪಾಟೀಲ್

ಮೈಸೂರು, ಜುಲೈ.24:- ಕೋವಿಡ್‌ನ ಮೊದಲ ಎರಡು ಅಲೆಯಿಂದ ಅಧಿಕಾರಿಗಳು ಹಲವಾರು ಪಾಠ ಕಲಿತಿದ್ದಾರೆ. 3ನೇ ಅಲೆ ಬಗ್ಗೆ ಪರಿಣಿತರು ಮುನ್ಸೂಚನೆ ನೀಡಿದ್ದಾರೆ. ಈ ಬಗ್ಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳದಿದ್ದರೆ ಮತ್ತೆ ಅಂತಹದ್ದೇ ಸ್ಥಿತಿ ಬರಬಹುದು. ಅದು ಮರುಕಳಿಸಬಾರದು ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ನ್ಯಾ. ಬಿ.ಎಸ್.ಪಾಟೀಲ್ ಅವರು ಹೇಳಿದರು.

ಶನಿವಾರ ಮೈಸೂರಿನಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಕೋವಿಡ್-19ರ ಮೂರನೇ ಅಲೆ ಎದುರಿಸಲು ಮೈಸೂರು ಜಿಲ್ಲಾಡಳಿತ ಮಾಡಿಕೊಂಡಿರುವ ಪೂರ್ವಸಿದ್ಧತೆ ಬಗ್ಗೆ ಮಾಹಿತಿ ಪಡೆದರು.ಕೋವಿಡ್ ಆರಂಭದಲ್ಲಿ ಜನರು ಎಲ್ಲಾ ಮುಂಚಾಗೃತ ಕ್ರಮಗಳನ್ನು ಪಾಲಿಸಿದರು. ಆದರೆ ಮೊದಲ ಅಲೆ ಕಡಿಮೆಯಾಗುತ್ತಿದ್ದಂತೆ ನಿರ್ಲಕ್ಷ್ಷ್ಯ ವಹಿಸಿದರು. ಹೆಚ್.ಡಿ.ಕೋಟೆ ತಾಲ್ಲೂಕಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಮನಿಸಿದ್ದೇನೆ. ಜನರು ಮಾಸ್ಕ್ ಹಾಕುವುದನ್ನೇ ಆಗ ಬಿಟ್ಟಿದ್ದರು. ಎರಡನೇ ಅಲೆ ತೀವ್ರಗೊಳ್ಳುವ ವರೆಗೂ ಎಚ್ಚರತಪ್ಪಿದರು. ಇದರಿಂದ ಹೆಚ್ಚಿನ ಹಾನಿಯಾಗಿದೆ. ಪರಿಣಿತರು ಹೇಳಿರುವ 3ನೇ ಅಲೆಯಲ್ಲಿ ಇಂತಹ ನಿರ್ಲಕ್ಷ್ ಆಗದಂತೆ ಅಧಿಕಾರಿಗಳು ಜನರಿಗೆ ತರಬೇತಿ, ತಿಳುವಳಿಕೆ ನೀಡಬೇಕು ಎಂದರು.

3ನೇ ಅಲೆಯಲ್ಲಿ ಮಕ್ಕಳನ್ನು ಬಾಧಿಸುತ್ತದೆ ಎಂದು ಹೇಳಲಾಗುತ್ತಿದೆ. ಪೋಷಕರ ಮೂಲಕವೇ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ, ಮಕ್ಕಳನ್ನು ರಕ್ಷಿಸಿಕೊಳ್ಳಲು ಪೋಷಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ, ತಿಳುವಳಿಕೆ ನೀಡಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮುಂತಾದವರನ್ನು ಒಳಗೊಂಡ ಗ್ರಾಮ ಮಟ್ಟದ ಟಾಸ್ಕ್ಫೋರ್ಸ್ಗೆ ಸೂಕ್ತ ತರಬೇತಿ ನೀಡಿ, ಆ ಮೂಲಕ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಬಹಳ ಮುಖ್ಯ ಎಂದು ಹೇಳಿದರು.

ಎಲ್ಲಾ ವೈದ್ಯಕೀಯ ಸೌಲಭ್ಯಗಳು ಜಿಲ್ಲಾ ಕೇಂದ್ರದಲ್ಲಿ ಇದ್ದರೆ ಸಾಲದು. ತಾಲ್ಲೂಕು ಮಟ್ಟದಲ್ಲಿ, ಗ್ರಾಮ ಮಟ್ಟದಲ್ಲೂ ವೈದ್ಯಕೀಯ ಸೌಲಭ್ಯ ಸಿಗುವಂತೆ ತಯಾರಾಗಬೇಕು ಎಂದು ಸಲಹೆ ನೀಡಿದರು.

3ನೇ ಅಲೆ ಎದುರಿಸಲು ಜಿಲ್ಲಾಡಳಿತ ಕೈಗೊಂಡಿರುವ ಪೂರ್ವಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ವಿವರಿಸಿ, ಹಿಂದಿನ ಅನುಭವಗಳ ಮೇಲೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದರು.

ಕೋವಿಡ್ ತೀವ್ರಗೊಂಡಿದ್ದ ಸಂದರ್ಭದಲ್ಲಿ ಕೆಲ ದಿನಗಳ ಕಾಲ ದಿನ 3 ಸಾವಿರ ಪ್ರಕರಣಗಳು ದಾಖಲಾಗಿದ್ದವು. ಅಂತಹದ್ದೇ ಪರಿಸ್ಥಿತಿ ಮುಂದೆ ಪ್ರತಿ ದಿನ 3 ಸಾವಿರ, 4 ಸಾವಿರ ಅಥವಾ 5 ಸಾವಿರ ಪ್ರಕರಣಗಳು ಬಂದರೂ ಬೇಕಾಗುವಷ್ಟು ವೈದ್ಯಕೀಯ ಸೌಲಭ್ಯ ಹೊಂದಿಸಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಬೆಂಗಳೂರು ಹೊರತು ಪಡಿಸಿದರೆ ಮೈಸೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಟೆಸ್ಟ್ ಆಗಿದೆ. ಈವರೆಗೆ ಸುಮಾರು 17 ಲಕ್ಷ ಜನರಿಗೆ ಲಸಿಕೆ ಆಗಿದ್ದು, ಜಿಲ್ಲೆಯ ಶೇ.50ರಷ್ಟು ಜನರಿಗೆ ಲಸಿಕೆ ಹಾಕಿದಂತಾಗಿದೆ ಎಂದು ಹೇಳಿದರು.
ವಿವರಣೆ ಪಡೆದು ಮಾತನಾಡಿದ ನ್ಯಾ.ಬಿ.ಎಸ್.ಪಾಟೀಲ್ ಅವರು, ದಿನಕ್ಕೆ 5 ಸಾವಿರ ಪ್ರಕರಣ ಬಂದರೂ ಎದುರಿಸುವ ಶಕ್ತಿ ಇದೆ ಎಂಬುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧಿಕಾರಿಗಳು ದೈಹಿಕವಾಗಿ, ಭಾವನಾತ್ಮಕವಾಗಿ, ಬೌದ್ಧಿಕವಾಗಿ ಸದೃಢವಾಗಿರಬೇಕು. ಸಂಕಷ್ಟದ ಸಂದರ್ಭದಲ್ಲಿ ನಿಜವಾದ ಪರೀಕ್ಷೆಗಳು ಎದುರಾಗುತ್ತವೆ. ಆಗ ಅಧಿಕಾರಿಗಳು, ವೈದ್ಯರು ಧೃತಿಗೆಟ್ಟರೆ ಪರಿಸ್ಥಿತಿ ಹತೋಟಿಗೆ ತರಲು ಕಷ್ಟವಾಗುತ್ತದೆ ಎಂದು ಸಲಹೆ ನೀಡಿದರು.

 

ಬಿಜೆಪಿಯ ಒಬ್ಬ ಭ್ರಷ್ಟ ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ, ಆ ಸ್ಥಾನಕ್ಕೆ ಇನ್ನೊಬ್ಬ ಭ್ರಷ್ಟ ಬರುತ್ತಾನೆ:ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಯ ಒಬ್ಬ ಭ್ರಷ್ಟ ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ, ಆ ಸ್ಥಾನಕ್ಕೆ ಇನ್ನೊಬ್ಬ ಭ್ರಷ್ಟ ಬರುತ್ತಾನೆ. ಇಡೀ ಬಿಜೆಪಿ ಪಕ್ಷ ಭ್ರಷ್ಟರಿಂದ ತುಂಬಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.

ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮಾಜಿ, ಹಾಲಿ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು, ಕಾಂಗ್ರೆಸ್ ಮುಖಂಡರ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ, ಈಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುತ್ತಾರಂತೆ, ಒಬ್ಬ ಭ್ರಷ್ಟ ಮುಖ್ಯಮಂತ್ರಿ ಹೋದರೆ ಬರುವ ಇನ್ನೊಬ್ಬ ಮುಖ್ಯಮಂತ್ರಿಯೂ ಭ್ರಷ್ಟನೇ ಆಗಿರುತ್ತಾನೆ, ಕಾರಣ ಬಿಜೆಪಿ ಪಕ್ಷವೇ ಭ್ರಷ್ಟರಿಂದ ತುಂಬಿದೆ,

ಕೊರೊನಾ ನಿರ್ವಹಣೆಯ ಉಪಕರಣ ಖರೀದಿ, ಆಸ್ಪತ್ರೆ, ವೆಂಟಿಲೇಟರ್, ಹಾಸಿಗೆ ಖರೀದಿಯಲ್ಲೂ ಭ್ರಷ್ಟಾಚಾರ ನಡೆಸಿದವರು ಬಿಜೆಪಿಯವರು. ಈಗ ಚಿಕ್ಕ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲೂ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ವಿಚಾರ ಖಾಸಗಿ ಸುದ್ದಿ ವಾಹಿನಿ ನಡೆಸಿದ ಸ್ಟಿಂಗ್ ಆಪರೇಷನ್ ನಿಂದ ಬಹಿರಂಗಗೊಂಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ಆದರೂ ಬಿಜೆಪಿ ನಾಯಕರಿಗೆ ನಾಚಿಕೆಯಾಗಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಯವರು ಆರ್.ಟಿ.ಜಿ.ಎಸ್, ಚೆಕ್, ಕ್ಯಾಶ್ ಹೀಗೆ ಹಲವು ರೀತಿ ಲಂಚ ಪಡೆದು ಈಗಾಗಲೇ ಸಿಕ್ಕಿಬಿದ್ದಿದ್ದಾರೆ, ಆದರೆ ಚಿಕ್ಕ ಮಕ್ಕಳು ತಿನ್ನುವ ಮೊಟ್ಟೆಯಲ್ಲೂ ಲಂಚ ಪಡೆಯುವಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ. ನಾನು ಶಾಸಕನಾಗಿ, ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ನಲವತ್ತು ವರ್ಷ ರಾಜಕಾರಣ ಮಾಡಿದ್ದೇನೆ, ಆದರೆ ಇಂತಹಾ ಹೊಲಸು ಭ್ರಷ್ಟ ಸರ್ಕಾರವನ್ನು ಈ ವರೆಗೆ ಕಂಡಿಲ್ಲ. ಕಳೆದ ಬಾರಿಯ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ, ಈಗ ಮತ್ತೆ ರಾಜ್ಯದಲ್ಲಿ ಪ್ರವಾಹ ಬಂದಿದೆ ಈ ಸರ್ಕಾರ ಅವರಿಗೆ ಪರಿಹಾರ ಕೊಡುತ್ತಾದಯಾ? ವಿವಿಧ ವಸತಿ ಯೋಜನೆಗಳಲ್ಲಿ ನಿರ್ಮಿಸಲಾದ ಮನೆಗಳಿನ್ನು ಅಪೂರ್ಣ ಆಗಿ ನಿಂತಿದೆ, ಅವುಗಳಿಗೆ ಹಣ ಬಿಡುಗಡೆ ಮಾಡದೆ ಹೊಸದಾಗಿ ಎರಡು ಲಕ್ಷ ಮನೆ ನಿರ್ಮಾಣ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಸುಳ್ಳು ಭರವಸೆ ನೀಡಿದ್ದಾರೆ. ಹೊಸ ಮನೆಗಳ ನಿರ್ಮಾಣ ಮಾಡಲು ಈ ಸರ್ಕಾರದ ಬಳಿ ಹಣವಾದರೂ ಇದೆಯೇ ಎಂದು ಪ್ರಶ್ನಿಸಿದರು.

ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಯಾವಾಗ ಮಾಡಬೇಕು ಎಂದು ನಿರ್ಧರಿಸುವುದು ಚುನಾವಣಾ ಆಯೋಗವೇ ಹೊರತು ರಾಜ್ಯ ಸರ್ಕಾರವಲ್ಲ. ಮೀಸಲಾತಿ ಪಟ್ಟಿ ಸಿದ್ಧಪಡಿಸಿದ ನಂತರ ದಿನಾಂಕ ಘೋಷಣೆ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಡಿಸೆಂಬರ್ ವರೆಗೂ ಚುನಾವಣೆ ನಡೆಸಲ್ಲ ಎನ್ನುತ್ತದೆ, ಚುನಾವಣೆ ದಿನ ನಿಗದಿ ಮಾಡುವ ಅಧಿಕಾರ ಇವರಿಗೆ ಎಲ್ಲಿದೆ? ಇದೇ ಕಾರಣಕ್ಕೆ ರಾಜ್ಯ ಚುನಾವಣಾ ಆಯೋಗ ಸರ್ಕಾರದ ಮಾತನ್ನು ಪರಿಗಣಿಸುವುದಿಲ್ಲ ಎಂದು ಹೇಳಿಗೆ. ಹಾಗಾಗಿ ಡಿಸೆಂಬರ್ ಒಳಗೆ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಯಾವ ಕ್ಷಣದಲ್ಲಿ ಬೇಕಾದರೂ ನಡೆಯಬಹುದು.

ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಕಾರ್ಯತಂತ್ರಗಳು ಹಾಗೂ ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೈಗೊಳ್ಳಬೇಕಾದ ಕ್ರಮಗಳು, ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹ ಹೀಗೆ ಮುಂತಾದ ಪ್ರಜಾಸತ್ತಾತ್ಮಕ ಉದ್ದೇಶಗಳೊಂದಿಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ನೇತೃತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಇಂದು ಸಭೆ ನಡೆಸಲಾಯಿತು. ನಮ್ಮ ಕಾರ್ಯಕರ್ತರು, ಮುಖಂಡರ ನಡುವೆ ಸಮನ್ವಯ ಸಾಧಿಸುವುದು, ಪಕ್ಷ ನಿಶ್ಚಲವಾಗಿರುವ ಕಡೆಗಳಲ್ಲಿ ಪಕ್ಷ ಕಟ್ಟಲು ಏನೆಲ್ಲಾ ಮಾಡಬೇಕು ಎಂಬ ವಿಚಾರಗಳನ್ನೆಲ್ಲಾ ಇಂದು ನಡೆದ ಪಕ್ಷದ ವಲಯಾವಾರು ಸಭೆಯಲ್ಲಿ ಚರ್ಚಿಸಿದ್ದೆವು.

ರಾಜ್ಯವನ್ನು ಉಳಿಸುವ ಕಾರಣಕ್ಕಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತರಬೇಕು. ಈ ನಿಟ್ಟಿನಲ್ಲಿ ನಮ್ಮ ಪಕ್ಷ ಒಂದಾಗಿ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.

Video-ಯಾವುದೇ ಪರಿಸ್ಥಿತಿ ಎದುರಿಸಲು ಕಾರ್ಯಕರ್ತರು ಸಜ್ಜಾಗಿರಬೇಕು; ಡಿ.ಕೆ. ಶಿವಕುಮಾರ್

ತುಮಕೂರು:‘ಕಳೆದೆರಡು ವರ್ಷದಿಂದ ರಾಜ್ಯಕ್ಕೆ ಉತ್ತಮ ಆಡಳಿತ ಸಿಕ್ಕಿಲ್ಲ. ಇದು ಅತ್ಯಂತ ಭ್ರಷ್ಟ ಸರ್ಕಾರ ಎಂಬುದಕ್ಕೆ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆಯೇ ಸಾಕ್ಷಿ. ಮುಂದಿನ ದಿನಗಳಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ನಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ತುಮಕೂರಿನಲ್ಲಿ ಶನಿವಾರ ನಡೆದ ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳನ್ನು ಒಳಗೊಂಡ ವಿಭಾಗೀಯ ಮಟ್ಟದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು,‘ಕಾಂಗ್ರೆಸ್ ಪಕ್ಷದ ವಿಭಾಗೀಯ ಮಟ್ಟದ ಸಭೆಯನ್ನು ಮಂಗಳೂರಿನಿಂದ ಆರಂಭಿಸಬೇಕಾಗಿತ್ತು. ಆದರೆ, ನಮ್ಮ ಹಿರಿಯ ನಾಯಕರಾದ ಆಸ್ಕರ್ ಫರ್ನಾಂಡೀಸ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ನಿನ್ನೆ ನಡೆಯಬೇಕಿದ್ದ ಸಭೆ ರದ್ದುಗೊಳಿಸಲಾಯ್ತು. ಆಸ್ಕರ್ ಫರ್ನಾಂಡೀಸ್ ಅವರ ಆರೋಗ್ಯ ವಿಚಾರಿಸಲು ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕರು ಮಂಗಳೂರಿಗೆ ತೆರಳಿದ್ದೆವು.ಹೀಗಾಗಿ ಈ ಸಭೆ ಈಗ ತುಮಕೂರಿನಿಂದ ಆರಂಭವಾಗಿದ್ದು, ಮುಂದೆ ಹುಬ್ಬಳ್ಳಿ, ಮೈಸೂರು, ಮಂಗಳೂರಿನಲ್ಲಿ ನಡೆಯಲಿದೆ. ನಾವು ಈಗಾಗಲೇ ಸಂಕಲ್ಪ ಯಾತ್ರೆ ಮೂಲಕ ಎಲ್ಲ ಬ್ಲಾಕ್ ಕಾಂಗ್ರೆಸ್ ನಾಯಕರ ಜತೆ ಮಾತನಾಡಿದ್ದೇವೆ. ಅವರ ಅಭಿಪ್ರಾಯವನ್ನು ಕೇಳಿದ್ದೇವೆ. ಈಗ ಎಐಸಿಸಿ ನಾಯಕರು ಜಿಲ್ಲಾ ಮಟ್ಟದ ನಾಯಕರ ಜತೆ ಸಭೆ ನಡೆಸುತ್ತಿದ್ದಾರೆ ಎಂದ್ರು.

ಪಕ್ಷದ ಕಾರ್ಯಕರ್ತರ ಧ್ವನಿ ಅಧ್ಯಕ್ಷರ ಧ್ವನಿಯಾಗಬೇಕು. ಪ್ರತಿ ಜಿಲ್ಲೆಯಲ್ಲೂ ಸಾಮಾಜಿಕ, ರಾಜಕೀಯ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಇವುಗಳನ್ನು ಭವಿಷ್ಯದಲ್ಲಿ ನಿಭಾಯಿಸಬೇಕಾಗುತ್ತದೆ. ಹೀಗಾಗಿ ನಾವು ಪ್ರತಿ ಜಿಲ್ಲೆಗೂ ಪ್ರತ್ಯೇಕ ಕಾರ್ಯತಂತ್ರ ರೂಪಿಸಬೇಕಿದೆ. ಮುಂದೆ ಜಿಲ್ಲಾ ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗುತ್ತಿದೆ. ಇವುಗಳಿಗೆ ನಾವು ಸಜ್ಜಾಗಬೇಕು. ರಾಜ್ಯದ ಜನ ನಮ್ಮ ಆಡಳಿತವನ್ನು ಕಳೆದೆರಡು ವರ್ಷದ ಆಡಳಿತದ ಜತೆ ಹೋಲಿಕೆ ಮಾಡುತ್ತಿದ್ದಾರೆ. ಈಗಿನ ಸರ್ಕಾರ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಅವರು ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ತಲ್ಲೀನರಾಗಿದ್ದಾರೆ. ನಾವು ಅವರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ. ಅವರು ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೆ ಎಂದರೆ ಕಳೆದ ಎರಡು ವರ್ಷಗಳಲ್ಲಿ ಉತ್ತಮ ಆಡಳಿತ ಕೊಟ್ಟಿಲ್ಲ ಎಂದೇ ಅರ್ಥ. ಇದು ಅತ್ಯಂತ ಭ್ರಷ್ಟ ಸರ್ಕಾರ ಎಂದು ನಾವು ಈಗಾಗಲೇ ಹೇಳಿದ್ದೇವೆ. ನಾವು ನಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸಿ, ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗುತ್ತಿದ್ದೇವೆ. ಈ ಬಗ್ಗೆ ಎಲ್ಲರೂ ಗಮನ ಹರಿಸಬೇಕು ಎಂದ್ರು.