ಇಸ್ರೇಲ್ ಮಾದರಿ ಕೃಷಿ ಅಳವಡಿಕೆಗೆ ಆಕೃತಿಸ್ ಸಂಸ್ಥೆಯಿಂದ ಕ್ರಿಯಾ ಯೋಜನೆ!

ತುಮಕೂರು: ಇಸ್ರೇಲ್ ಮಾದರಿ ಕೃಷಿ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಕೃತಿಸ್ ಸಂಸ್ಥೆ ಹೊಸ ಪ್ರಯತ್ನಕ್ಕೆ ಮುಂದಾಗಿದೆ ಎಂದು ಸಂಸ್ಥೆಯ ಮಾರುಕಟ್ಟೆ ವ್ಯವಸ್ಥಾಪಕ ಅಶೋಕ್ ತಿಳಿಸಿದರು.

ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಶೋಕ್,
ಕೃಷಿ ಕ್ಷೇತ್ರದ ಬಗ್ಗೆ ಆಕೃತಿಸ್ ಸಂಸ್ಥೆ ರೂಪಿಸಿರುವ ಹೊಸ ಯೋಜನೆಗಳ ಕುರಿತು ಮಾಹಿತಿ ನೀಡಿದರು. ರಾಜ್ಯ ಸರ್ಕಾರ ತುಮಕೂರು ಜಿಲ್ಲೆಯಲ್ಲಿ ಇಸ್ರೇಲ್ ತಂತ್ರಜ್ಞಾನ ಅಡಳವಡಿಕೊಂಡು ಕೃಷಿ ಮಾಡಲು ಪ್ರಾಯೋಗಿಕ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡಿದೆ. ಆದರೆ, ಇದರಿಂದ ಕೃಷಿ ಕ್ಷೇತ್ರದ ಎಲ್ಲಾ ಸಮಸ್ಯೆಗಳು ಬಗೆಹರಿದಂತಲ್ಲ. ಏಕೆಂದರೆ ನಾವು ರೈತರಿಗೆ ಯಾವುದೇ ತಂತ್ರಜ್ಞಾನ ಕೊಟ್ಟರು ಬೆಳೆದ ಬೆಳೆಗೆ ಮಾರುಕಟ್ಟೆ ದೊರೆಯದಿದ್ದಲ್ಲಿ ಎಲ್ಲ ಪ್ರಯತ್ನವು ವ್ಯರ್ಥವಾಗುತ್ತದೆ. ಇದನ್ನು ಮನಗಂಡು ನಮ್ಮ ಸಂಸ್ಥೆ ನಮ್ಮದೇ ಆದ ಒಂದು ಕ್ರಿಯಾ ಯೋಜನೆಯನ್ನು ಜಿಲ್ಲೆಯ ರೈತರಿಗೆ ಸಿದ್ದಪಡಿಸಿದ್ದೇವೆ ಎಂದು ತಿಳಿಸಿದರು.

ಕೃಷಿ ಕ್ಷೇತ್ರದಲ್ಲಿ ಪ್ರಮುಖ ಸಮಸ್ಯೆಗಳಾಗಿರುವ ಕೂಲಿ ಕಾರ್ಮಿಕರ ಸಮಸ್ಯೆ, ಮಾರುಕಟ್ಟೆ ಸಮಸ್ಯೆ, ನೀರಿನ ಸಮಸ್ಯೆ, ಸರಿಯಾದ ಕೀಟನಾಶಕಗಳು ದೊರೆಯದಿರದಿರುವುದು, ಕೃಷಿ ಬಿಟ್ಟು ವಲಸೆ ಹೋಗುತ್ತಿರುವುದು ಮುಂತಾದ ಸಮಸ್ಯೆಗಳನ್ನು ಅರಿತಿರುವ ನಮ್ಮ ಸಂಸ್ಥೆ ಕಳೆದ ೨ ವರ್ಷಗಳಿಂದ ಇಸ್ರೇಲ್ ಮಾದರಿ ಕೃಷಿ ವಿಚಾರದಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಕಷ್ಟು ಅಧ್ಯಯನ ನಡೆಸಿ ಈ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಇದನ್ನು ಕಾರ್ಯಗತಗೊಳಿಸಲು ಉತ್ಸುಕವಾಗಿದೆ ಎಂದು ಹೇಳಿದರು.

ಆಕೃತಿಸ್ ಸಂಸ್ಥೆ ಸಿದ್ಧಪಡಿಸಿರುವ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲು ಪ್ರಾಯೋಗಿಕವಾಗಿ ಜಿಲ್ಲೆಯ ಎರಡು ತಾಲ್ಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಶಿರಾ ತಾಲ್ಲೂಕಿನ ಕೆಲವು ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ ತೆಂಗು ಬೆಳೆಯುವ ಪ್ರದೇಶ ಮತ್ತು ತೆಂಗುಯೇತರ ಪ್ರದೇಶ ಎಂದು ಎರಡು ವಿಧಗಳಾಗಿ ವಿಂಗಡಿಸಿ ಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇಸ್ರೇಲ್ ಮಾದರಿ ಕೃಷಿ ಕುರಿತು ಮಾಹಿತಿಗಾಗಿ ಸಂಪರ್ಕಿಸಿ +919964979899

ಸುದ್ಧಿಗೋಷ್ಠಿಯಲ್ಲಿ ಸಂಸ್ಥೆಯ ಮೇಘ, ಸುನೀಲ್, ಭರತ್ ಹಾಜರಿದ್ದರು.

ಸಮ್ಮಿಶ್ರ ಸರ್ಕಾರ ಬಿದ್ರೂ ಬಿಎಸ್ವೈ ಸಿಎಂ ಆಗಲ್ವಂತೆ: ರೇವಣ್ಣ ಹೊಸ ಬಾಂಬ್

ಬೆಂಗಳೂರು: ಸರ್ಕಾರ ಪಥನವಾದರೆ ರಾಜ್ಯಪಾಲರ ಆಡಳಿತ ಬರುತ್ತದೆಯೇ ಹೊರತು, ಬಿ‌ಎಸ್.ಯಡಿಯೂರಪ್ಪ ಸಿಎಂ ಆಗಲ್ಲ ಎಂದು ಬಿಜೆಪಿ ಪ್ರಮುಖ ಮುಖಂಡರೇ ನನ್ನ ಬಳಿ ಹೇಳಿದ್ದಾರೆ. ಸಮಯ ಬಂದಾಗ ಅವರ ಹೆಸರನ್ನು ಬಹಿರಂಗ ಪಡಿಸುವೆ ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಎಚ್.ಡಿ.ರೇವಣ್ಣ, ಸರ್ಕಾರ ಪಥನವಾದರೆ ರಾಜ್ಯಪಾಲರ ಆಡಳಿತ ಬರುತ್ತದೆ.
ಬಳಿಕ, ಬೇರೆ ರಾಜ್ಯದ ಚುನಾವಣೆ ಜೊತೆ ನಮ್ಮ ರಾಜ್ಯದ ಚುನಾವಣೆಯೂ ನಡೆಯಲಿದೆ ಎಂದು ಬಿಜೆಪಿಯ ಟಾಪ್ ಲೀಡರ್ ಗಳೇ ನನಗೆ ಹೇಳಿದ್ದಾರೆ. ಸಮಯ ಬಂದಾಗ ಅವರ ಹೆಸರು ಬಹಿರಂಗ ಪಡಿಸುತ್ತೇನೆ ಎಂದು ಹೇಳಿದರು.

ಬಿಜೆಪಿಯವರು ಹೇಳುವ ಹಾಗೆ ಸರಕಾರ ಬಿದ್ದು ಹೋಗುವುದಿಲ್ಲ. ಈ ಸರಕಾರ ಪೂರ್ಣಾವಧಿ ಪೂರೈಸಲಿದೆ, ಸರಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ, ದೇವರ ದಯೆಯಿಂದ ಸರ್ಕಾರ ರಚಿಸಿದ್ದೇವೆ. ಎಷ್ಟು ವರ್ಷ ಇರುತ್ತೋ ಅಷ್ಟು ವರ್ಷ ಕೆಲಸ ಮಾಡುತ್ತೇವೆ. 10 ವರ್ಷ ವಿರೋಧ ಪಕ್ಷದಲ್ಲಿ ಇದ್ದೆವು. ಪ್ರಧಾನಿ ಸ್ಥಾನ ಬಿಟ್ಟು ಬಂದವರು ನಮ್ಮ ತಂದೆ, ಇದೆಲ್ಲದಕ್ಕೂ ನಾವು ಹೆದರುವುದಿಲ್ಲ. ಸರ್ಕಾರ ಬಿದ್ದು ಹೋಗುತ್ತದೆ ಎಂದರೆ ಅದನ್ನು ಹಿಡಿದುಕೊಳ್ಳಲು ಆಗುತ್ತಾ, ಬಿಜೆಪಿಯವರು ಇಗಲೆ ಬರೆದಿಟ್ಟುಕೊಳ್ಳಲಿ, ಸರ್ಕಾರಕ್ಕೆ ಎನೂ ಆಗುವುದಿಲ್ಲ. ಬಿಜೆಪಿ ಕೈಗೆ ಅಧಿಕಾರವೂ ಸಿಗುವುದಿಲ್ಲ, ಈ ಬಗ್ಗೆ ಬೇಕಾದ್ರೆ ನಾನು ಭವಿಷ್ಯ ಹೇಳುತ್ತೆನೆ ಎಂದರು.

ಹಿರಿಯಣ್ಣನಂತೆ ವಿಕಲಚೇತನರ ಅಹವಾಲು ಆಲಿಸಿದ ಸಿಎಂ!

ಬೆಳಗಾವಿ: ಸಾಲಾಗಿ ಕುಳಿತಿರುವ ವಿಕಲಚೇತನರು. ಎಲ್ಲರ ಮೊಗದಲಿ ನಿರೀಕ್ಷೆ ಒಂದೆಡೆಯಾದರೆ ನಾಡಿನ ಸಿಎಂ ಸ್ವತಃ ತಮ್ಮ ಬಳಿ ಬಂದು ಅಹವಾಲು ಆಲಿಸಿಯಾರೇ ಎಂಬ ಪ್ರಶ್ನಾರ್ಥಕ ಭಾವ ಇನ್ನೊಂದೆಡೆ, ಆದರೆ ಯಾರ ನಿರೀಕ್ಷೆಯೂ ಹುಸಿಯಾಗಲಿಲ್ಲ!

ಸುವರ್ಣ ವಿಧಾನಸೌಧದ ದಕ್ಷಿಣ ದ್ವಾರದ ಬಳಿಯ ನೆಲಮಹಡಿಯಲ್ಲಿ ಗಂಟೆಗಟ್ಟಲೆ ಕಾದು ಕುಳಿತಿದ್ದ ವಿಕಲಚೇತನರ ಬಳಿ ತೆರಳಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅತ್ಯಂತ ತಾಳ್ಮೆಯಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಮನೆಯ ಯಜಮಾನನಂತೆ ಸಮಾಧಾನದಿಂದಲೇ ಪ್ರತಿಯೊಬ್ಬರ ಬಳಿ ತೆರಳಿ ಅಹವಾಲು ಕೇಳಿದರು.

ಹಿರಿಯರು-ಕಿರಿಯರು ಎಂಬ ಭೇದವೆಣಿಸದೇ ಎಲ್ಲರೊಂದಿಗೆ ಶಾಂತಚಿತ್ತರಾಗಿಯೇ ಮಾತನಾಡಿದ ಮುಖ್ಯಮಂತ್ರಿಗಳು, ಜನತಾದರ್ಶನದ ಮೊದಲ ಹಂತದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು.

ದುಃಖ ತಡೆಯದೇ ಕಣ್ಣೀರು ಹಾಕಿದ ಮಹಿಳೆಯರು, ಅನೇಕ ವರ್ಷಗಳಿಂದ ನ್ಯಾಯ ಸಿಗದೇ ಕಚೇರಿಗಳಿಗೆ ಅಲೆದಾಡಿ ಸುಸ್ತಾದ ಜನರಿಗೆ ಸ್ವತಃ ಮುಖ್ಯಮಂತ್ರಿಗಳೇ ಎದುರು ನಿಂತು‌ ಸಮಸ್ಯೆ ಕೇಳಿದಾಗ ಒಂದು ಕ್ಷಣ ದಿಗ್ಞೂಢರಾದರು.

ಕೆಲವರು ಕೈಮುಗಿದು ನನಗೆ ಸಹಾಯ ಮಾಡಿ ನಿಮಗೆ ಉಪಕಾರವಾಗುತ್ತೆ ಎಂದರೆ‌ ಇನ್ನೂ ಕೆಲವರು ಮಾತಿನ ಮೂಲಕ‌ ಹೇಳಲಾಗದೇ ಕಾಲು ಮುಗಿಯಲು ಮುಂದಾದರು. ಅದಕ್ಕೆ ಆಸ್ಪದ ನೀಡದ ಮುಖ್ಯಮಂತ್ರಿಗಳು, ನಿಮ್ಮ ಅಹವಾಲು ಕೇಳಲೆಂದೇ ಬಂದಿರುವೆ ಎಂದಾಗ ಹಿರಿಯಣ್ಣನ ಮುಂದೆ ಸಮಸ್ಯೆ ತೋಡಿಕೊಳ್ಳುವ ರೀತಿಯಲ್ಲಿ ತುಸು ಮುಜುಗರದಿಂದಲೇ ಅಹವಾಲು ಬಿಚ್ಚಿಟ್ಟರು.

ಅಹವಾಲು ಆಲಿಸುತ್ತಲೇ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಬೆಳಿಗ್ಗೆ 11 ಗಂಟೆಗೆ ಬೆಳಗಾವಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳು, ಘನತೆವೆತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಕರ್ನಾಟಕ ಲಾ ಸೊಸೈಟಿಯ ಅಮೃತ ಮಹೋತ್ಸವದಲ್ಲಿ ಭಾಗವಹಿಸಿದರು.

ಅದಾದ ಬಳಿಕ ಕನ್ನಡ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅಲ್ಲಿಂದ ಕುಮಾರಸ್ವಾಮಿ ಬಡಾವಣೆಗೆ ತೆರಳಿ ಅಲ್ಲಿನ ನಿವಾಸಿಗಳಿಂದ ಸನ್ಮಾನ ಸ್ವೀಕರಿಸಿದರು. ಅಲ್ಲಿಂದ ನೇರವಾಗಿ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದರು.
ಜನತಾದರ್ಶನದ ಮೊದಲ ಹಂತದಲ್ಲಿ ವಿಕಲಚೇತನರ ಅಹವಾಲುಗಳನ್ನು ಆಲಿಸಿದರು.

ಇದಾದ ನಂತರ ಸಂಜೆ 7 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಜನತಾದರ್ಶನ ಮುಂದುವರಿಸಿದರು.
ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು 1271ಜನರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಇಷ್ಟು‌ ಜನರನ್ನು ನೇರವಾಗಿ ಮಾತನಾಡಿಸಿ ಅಹವಾಲು ಹೇಗೆ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳ ತಾಳ್ಮೆಯು ಉತ್ತರವಾಗಿತ್ತು.
ಒಂದಿನಿತು ಬೇಸರ ಮಾಡಿಕೊಳ್ಳದೇ ಜನತಾ ದರ್ಶನ ಮುಂದುವರಿಸಿದರು. ನೊಂದವರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ ಮುಖ್ಯಮಂತ್ರಿಗಳು ಕೆಲವೊಂದು ಸಮಸ್ಯೆಗಳನ್ನು ಸ್ಥಳ ದಲ್ಲೇ ಬಗೆಹರಿಸಿದರು.
ಕೆಲವು ಮನವಿಪತ್ರಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ವಹಿಸುವಂತೆ ಷರಾ ಬರೆದರು.

ಮುಖ್ಯಮಂತ್ರಿಯೇ ಸ್ವತಃ ಐದಾರು ಗಂಟೆಗಳ ಕಾಲ‌ನಿರಂತರವಾಗಿ ಅಹವಾಲು ಆಲಿಸುವುದನ್ನು ಕಂಡ ಜನರು ತಮ್ಮ ಸಮಸ್ಯೆಯನ್ನು ಅವರಿಗೆ ತಿಳಿಸಿ, ಮನವಿ ಪತ್ರ ಅವರ ಕೈಗಿಟ್ಟು ಇಂದಲ್ಲ ನಾಳೆಯಾದರೂ ತಮ್ಮ ಸಮಸ್ಯೆ ಇತ್ಯರ್ಥವಾಗಲಿದೆ ಎಂಬ ನೆಮ್ಮದಿಯ ನಿಟ್ಟುಸಿರಿನಿಂದ ಮನೆ ಕಡೆ ಹೆಜ್ಜೆ ಹಾಕಿದರು.

ಮಹದಾಯಿ ನೀರನ್ನು ಸದುಪಯೋಗಿಸಿಕೊಳ್ಳಲು 15 ದಿನಗಳಲ್ಲಿ ರೂಪುರೇಷೆ: ಸಿಎಂ ಕುಮಾರಸ್ವಾಮಿ

ಬೆಳಗಾವಿ: ಮಹದಾಯಿ ನೀರನ್ನು ಯಾವ ರೀತಿ ಸದುಪಯೋಗಿಸಿಕೊಳ್ಳಬೇಕೆಂಬ ಕುರಿತು ರಾಜ್ಯದ ಕಾನೂನು ತಜ್ಞರು ಹಾಗೂ ನೀರಾವರಿ ತಜ್ಞರೊಂದಿಗೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದ್ದು, 15

ದಿನಗಳೊಳಗಾಗಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

ನೂತನವಾಗಿ ನಿರ್ಮಾಣಗೊಂಡ ಕನ್ನಡ ಭವನವನ್ನು
ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮಹದಾಯಿ ಹೋರಾಟಗಾರರ ಮೇಲಿನ ಕೇಸ್‍ಗಳನ್ನು ಶೀಘ್ರವೇ ಹಿಂಪಡೆಯಲಾಗುವುದು ಎಂದು ಹೇಳಿದರು.

ಬಾಕಿ ಕಾಮಗಾರಿಗೆ ರೂ. 1.5 ಕೋಟಿ ಬಿಡುಗಡೆ:
ನೂತನವಾಗಿ ನಿರ್ಮಾಣವಾಗಿರುವ ಕನ್ನಡ ಭವನದಲ್ಲಿ ಇನ್ನೂ ಕೆಲವು ಕಾಮಗಾರಿಗಳು ಬಾಕಿಯಿದ್ದು, ಕಾಮಗಾರಿಗೆ 1.5 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡುವಂತೆ ಸಾಂಸ್ಕೃತಿಕ ಕನ್ನಡ ಭವನ ಸಮಿತಿಯ ಪದಾಧಿಕಾರಿಗಳು ಮನವಿ
ಮಾಡಿದ್ದಾರೆ. ಶೀಘ್ರವೇ ರೂ. 1.5 ಕೋಟಿ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

2006 ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನ್ನಡ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ, ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇಂದು ಈ ಭವನವನ್ನು ತಾವೇ ಉದ್ಘಾಟಿಸುತ್ತಿರುವುದನ್ನು ಸ್ಮರಿಸಿ ಕುಮಾರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದರು. ಕನ್ನಡ ಭವನದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕಲಾವಿದರು ಹಾಗೂ ಸಾರ್ವಜನಿಕರು ಭವನವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಾಲಮನ್ನಾದಿಂದ ಸರ್ಕಾರಕ್ಕೆ ತೊಂದರೆಯಿಲ್ಲ:
ಸರ್ಕಾರ ರೈತರ 45 ಸಾವಿರ ಕೋಟಿ ರೂ. ಸಾಲಮನ್ನಾ ಘೋಷಣೆ ಮಾಡಿದೆ. ಸಾಲಮನ್ನಾ ಮಾಡಿದ ಹಣಕ್ಕೂ
ಇಲಾಖೆಗಳ ಕಾರ್ಯಕ್ರಮಗಳಿಗೆ ಮೀಸಲಿರಿಸಿರುವ ಹಣಕ್ಕೂ ಯಾವುದೇ ಸಂಬಂಧವಿಲ್ಲ. ಸಾಲಮನ್ನಾದಿಂದ ಸರ್ಕಾರದ ಯಾವುದೇ ಯೋಜನೆಗಳಿಗೆ ತೊಂದರೆಯಾಗಿಲ್ಲ. ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿಗಳು
ಸ್ಪಷ್ಟಪಡಿಸಿದರು.

ರೈತರಿಗೆ ತೊಂದರೆ ನೀಡಬೇಡಿ:
ಕೆಲವು ಬ್ಯಾಂಕ್‍ನವರು ರೈತರಿಗೆ ಸಾಲ ಪಡೆದುಕೊಂಡ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು
ತಿಳಿದುಬಂದಿದೆ. ಯಾವುದೇ ಬ್ಯಾಂಕ್‍ನವರು ರೈತರಿಗೆ ಹಣ ನೀಡುವಂತೆ ಕಿರುಕುಳ ನೀಡಬಾರದು ಎಂದು ಸೂಚನೆ ನೀಡಿದರು. ಸರ್ಕಾರದಿಂದ ಘೋಷಣೆ ಮಾಡಿರುವ ರಾಷ್ಟ್ರೀಕೃತ ಬ್ಯಾಂಕ್‍ಗಳ 35 ಸಾವಿರ ಕೋಟಿ ಸಾಲವನ್ನು 4 ವರ್ಷಗಳಲ್ಲಿ ಕಂತುಗಳ
ಮೂಲಕ ಪೂರೈಸಬೇಕೆಂದು ಚರ್ಚೆ ಮಾಡಲಾಗಿತ್ತು. ಆದರೆ ಬರುವ ಜುಲೈನೊಳಗೆ ಎಲ್ಲ ಹಣವನ್ನು ಬ್ಯಾಂಕ್‍ಗಳಿಗೆ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ಆದ್ದರಿಂದ ಬ್ಯಾಂಕ್‍ನವರು ಸರ್ಕಾರಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.

ಸುವರ್ಣಸೌಧಕ್ಕೆ ಇಲಾಖೆ ಸ್ಥಳಾಂತರ:
ಬೆಳಗಾವಿಯಲ್ಲಿ ವಿಧಾನಸಭೆಯ ಕಲಾಪಗಳು ನಡೆಯಬೇಕೆಂಬ ಉದ್ದೇಶದಿಂದ ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪ್ರಥಮ ಬಾರಿಗೆ ಇಲ್ಲಿ ಕಲಾಪವನ್ನು ಏರ್ಪಡಿಸಿದ್ದೆ. ಸುವರ್ಣಸೌಧ ವರ್ಷದ 365 ದಿನವೂ ಕಾರ್ಯನಿರ್ವಹಿಸಬೇಕೆಂದು ನಾನು
ಕೂಡ ಆಶಿಸುತ್ತಿದ್ದೇನೆ. ಈ ಬಗ್ಗೆ ಶೀಘ್ರ ಸರ್ಕಾರದ ಎಲ್ಲ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಇಲಾಖೆಗಳ ಸ್ಥಳಾಂತರ
ಮಾಡಲಾಗುವುದೆಂದು ಕುಮಾರಸ್ವಾಮಿ ಅವರು ಹೇಳಿದರು.

ಉ.ಕರ್ನಾಟಕ ಜಿಲ್ಲೆಗಳಲ್ಲಿ ಉತ್ಪಾದನೆಗೆ ಒತ್ತು:
ಬೆಳಗಾವಿ, ಕಲಬುರಗಿ, ಬೀದರ್, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಉತ್ಪಾದನಾ ವಲಯವನ್ನು ನಿರ್ಮಿಸಲು ಹೆಚ್ಚಿನ ಒತ್ತು ನೀಡಲಾಗುವುದು. ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಎಲ್ಲ ಜಿಲ್ಲೆಗಳ ಅಭಿವೃದ್ಧಿಗೂ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರದ ಬಗ್ಗೆ ಅಪಪ್ರಚಾರಕ್ಕೆ ಯಾರು ಕೂಡ
ಕಿವಿಗೊಡಬಾರದು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಬೆಳಗಾವಿ ಜಿಲ್ಲೆಯ ಒಡನಾಟ ಸ್ಮರಿಸಿದ ಸಿಎಂ:
ಬೆಳಗಾವಿ ಜಿಲ್ಲೆಯಿಂದಲೇ 2006 ರಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಆರಂಭಿಸಿದ್ದೆ. ಈ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 19 ಬಾರಿ ಬೆಳಗಾವಿಗೆ ಭೇಟಿ ನೀಡಿದ್ದೆ. ಇಲ್ಲಿಯೇ ವಿಧಾನಸಭೆ ಕಲಾಪಗಳನ್ನು ಆರಂಭಿಸಿದ್ದೆ. ಕನ್ನಡ ಭವನಕ್ಕೂ ಶಂಕುಸ್ಥಾಪನೆ ನೆರವೇರಿಸಿದ್ದೆ. ಬೆಳಗಾವಿ ಜಿಲ್ಲೆಯೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದು,
ಅವಿನಾಭಾವ ಸಂಬಂಧವನ್ನು ಹೊಂದಿದ್ದೇನೆ ಎಂದು ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಸ್ಮರಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಮುಂದುವರೆದ ಐಪಿಎಸ್ ಅಧಿಕಾರಿಗಳ ವರ್ಗಾವಣೆ!

ಬೆಂಗಳೂರು: ಮೀಟರ್ ಬಡ್ಡಿ ದಂಧೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟಹಾಕುವ ಸಲುವಾಗಿ ಪೊಲೀಸ್ ಇಲಾಖೆ ವರ್ಗಾವಣೆ ಪ್ರಕ್ರಿಯೆಯನ್ನು ಸಮ್ಮಿಶ್ರ ಸರ್ಕಾರ ಮುಂದುವರೆಸಿದ್ದು, 25 ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎಡಿಜಿಪಿಯಾಗಿ ಬೆಂಗಳೂರು ನಗರ ಕಿಮಿನಲ್‌ಗಳನ್ನು ನಡುಗಿಸಿ, ನಂತರ ಲಾಟರಿ ದಂಧೆಯಲ್ಲಿ ಭಾಗಿಯಾದ ಆರೋಪ ಎದುರಿಸಿದ್ದ ಅಲೋಕ್ ಕುಮಾರ್ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ‌. ಬೆಂಗಳೂರು ಕ್ರೈಂ ವಿಭಾಗದ ಎಡಿಜಿಪಿಯಾಗಿ ಅಲೋಕ್ ಕುಮಾರ್ ಅವರನ್ನು ವರ್ಗಾಯಿಸಲಾಗಿದೆ‌.

ವರ್ಗಾವಣೆಗೊಂಡಿರುವ ಅಧಿಕಾರಿಗಳು ಮತ್ತು ಹುದ್ದೆ

ಅಲೋಕ್ ಮೋಹನ್- ಎಡಿಜಿಪಿ ರೈಲ್ವೆ ಹೆಚ್ಚುವರಿ
ಪಿ.ಎಸ್.ಸಂಧು- ಎಡಿಜಿಪಿ ಸಂಚಾರಿ ವಿಭಾಗ ಬೆಂಗಳೂರು
ಸಿ.ರವೀಂದ್ರನಾಥ್- ಎಡಿಜಿಪಿ ಅರಣ್ಯ ವಿಭಾಗ ಬೆಂಗಳೂರು
ಸಂಜಯ್ ಸಹಾಯ್ – ಎಡಿಜಿಪಿ ಕಂಪ್ಯೂಟರ್ ವಿಭಾಗ ಬೆಂಗಳೂರು
ಅಲಿಕ್ ಎನ್.ಎಸ್ ಮೂರ್ತಿ – ಎಡಿಜಿಪಿ ಕರ್ನಾಟಕ ಲೋಕಾಯುಕ್ತ ವಿಭಾಗ
ಸತೀಶ್ ಕುಮಾರ್.ಎನ್ – ಡಿಐಜಿ ರಿಸರ್ವ್ ಪೊಲೀಸ್
ಸಂದೀಪ್ ಪಾಟೀಲ್ – ಡಿಐಜಿ ಸಿಎಆರ್ ವಿಭಾಗ
ಡಾ. ಪಿ. ಎಸ್ ಹರ್ಷ- ಡಿಐಜಿ ಬಂಧಿಖಾನೆ
ಕೆ.ಟಿ.ಬಾಲಕೃಷ್ಣ – ಎಸ್ ಪಿ ಗುಪ್ತಚರ ಇಲಾಖೆ
ರಾಜೇಂದ್ರ ಪ್ರಸಾದ್ – ಎಸ್ ಪಿ ವೈರ್ ಲೆಸ್ ವಿಭಾಗ
ರಾಮನಿವಾಸ್ ಸಫಟ್ – ಎಸ್ ಪಿ ಎಸಿಬಿ
ಮಾರ್ಟಿನ್ ಮಾರಬಿಂಗ್ – ಡಿಸಿಪಿ ಸಂಚಾರ ಪಶ್ಚಿಮ ವಲಯ
ಭೀಮ್ ಶಂಕರ್ ಗುಳೇದ್ – ಎಸ್ ಪಿ ರೈಲ್ವೆ ವಿಭಾಗ
ರಾಧಿಕಾ – ಎಸ್ ಪಿ ಡಿಜಿಪಿ ಕಚೇರಿ
ಹನುಮಂತರಾಯ – ಎಸ್ ಪಿ ಯಾದಗಿರಿ
ಗಿರೀಶ್ – ಡಿಸಿಪಿ ಕ್ರೈಂ ಬೆಂಗಳೂರು
ಎ ಎನ್ ಪ್ರಕಾಶ್ ಗೌಡ – ಎಸ್ ಪಿ ಹಾಸನ
ಜಗದೀಶ್ – ಡಿಸಿಪಿ ಪೂರ್ವ ಟ್ರಾಫಿಕ್ ವಿಭಾಗ ಬೆಂಗಳೂರು
ಚೈತ್ರ – ಎಸ್ ಪಿ ಡಿಸಿಆರ್‌ಇ ಬೆಂಗಳೂರು

ಐಟಿ ರೇಡ್ ಪ್ರಕರಣ: ನಾಲ್ಕನೇ ಕೇಸ್‌ನಿಂದಲೂ ಸಚಿವ ಡಿ.ಕೆ.ಶಿವಕುಮಾರ್‌ಗೆ ಬಿಗ್ ರಿಲೀಫ್!

ಬೆಂಗಳೂರು: ಸಚಿವ ಡಿಕೆ ಶಿವಕುಮಾರ್‌ ದೆಹಲಿ ನಿವಾಸದಲ್ಲಿ ಹಣ ದೊರೆತ ಆರೋಪಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಡಿಕೆಶಿ ಸೇರಿದಂತೆ ನಾಲ್ವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಕಾಂಗ್ರೆಸ್ ಮುಖಂಡ, ಸಚಿವ ಡಿಕೆ ಶಿವಕುಮಾರ್‌ಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಐಟಿ ದಾಳಿ ನಡೆಸಿದ ಸಂದರ್ಭದಲ್ಲಿ ದೆಹಲಿ ನಿವಾಸದಲ್ಲಿ ಹಣ ದೊರೆತ ಆರೋಪಕ್ಕೆ ಸಂಬಂಧಿಸಿದಂತೆ ಐಟಿ ಖಾಸಗಿ ದೂರು ದಾಖಲಿಸಿತ್ತು. ಈ ಸಂಬಂಧ ಡಿ.ಕೆ ಶಿವಕುಮಾರ್ ಜಾಮೀನು ಕೋರಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಸಲಾಯಿತು. ಈ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ದೆಹಲಿಯ ನಿವಾಸದಲ್ಲಿ ದೊರೆತಿರುವ 8 ಕೋಟಿ ರೂಪಾಯಿ ಹಣದ ಸಂಬಂಧ ಡಿಕೆ ಶಿವಕುಮಾರ್ ವಿಚಾರಣೆ ನಡೆಸಬೇಕಿದೆ ಆದ್ದರಿಂದ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ಡಿಕೆ ಶಿವಕುಮಾರ್ ಪರ ವಕೀಲರು, 2018-19ನೇ ಆರ್ಥಿಕ ವರ್ಷದ ಲೆಕ್ಕಾಚಾರ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ. ಈ ಸಾಲಿನಲ್ಲಿ ಇನ್ನು ಆಡಿಟಿಂಗ್ ಮಾಡಿಲ್ಲ. ಆದಾಯ ಇಲಾಖೆ ಈಗಾಗಲೇ ತನಿಖೆ ಪೂರ್ಣಗೊಳಿಸಿದೆ. ಐಟಿ ಕೋರ್ಟ್‌ಗೆ ಚಾರ್ಚ್ ಶೀಟ್ ನನ್ನು ಸಲ್ಲಿಸಿದೆ. ಇದು ಗಂಭೀರ ಪ್ರಕರಣವಲ್ಲ.ಹಿಂದೆ ಐಟಿ ದಾಖಲಿಸಿದ್ದ ಮೂರು ಕೇಸ್ ಗಳಲ್ಲಿ ಜಾಮೀನು ಮಂಜೂರು. ಹೀಗಾಗಿ ಪ್ರಕರಣದಲ್ಲಿ ಜಾಮೀನು ನೀಡಬೇಕು. ಅಲ್ಲದೆ ತಮ್ಮ ಕಕ್ಷಿದಾರರು ಈವರೆಗೆ ವಿಚಾರಣೆಗೆ ಸಹಕಾರ ನೀಡಿದ್ದಾರೆ. ಇನ್ನು ಮುಂದೆಯೂ ಸಹಕಾರ ನೀಡಲಿದ್ದಾರೆ. ಈ ಪ್ರಕರಣದ ವಿಚಾರಣೆಗಾಗಿ ಡಿಕೆ ಶಿವಕುಮಾರ್ ಅವರನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ ಎಂದು ವಾದಿಸಿದರು.

ಅರ್ಜಿದಾರರ ವಾದ ಪುರಸ್ಕರಿಸಿದ ನ್ಯಾಯಾಲಯ ಡಿಕೆ ಶಿವಕುಮಾರ್, ಅಂಜನೇಯ, ಸುನೀಲ್ ಶರ್ಮಾ ಹಾಗೂ ರಾಜೇಂದ್ರಗೆ ತಲಾ ೫೦ ಸಾವಿರ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.

ಐಟಿ ದಾಖಲಿಸಿದ್ದ ನಾಲ್ಕನೇ ಪ್ರಕರಣದಲ್ಲೂ ಜಾಮೀನು ದೊರೆಯುವ ಮೂಲಕ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಗೆ ಬಿಗ್ ರಿಲೀಫ್ ದೊರೆತಂತಾಗಿದೆ.