ನಗರದಲ್ಲಿ ಗಣಪತಿ‌ ಹಬ್ಬದ ಸಂಭ್ರಮ

ಬೆಂಗಳೂರು: ನಗರದಲ್ಲಿ ಸಡಗರ ಸಂಭ್ರಮದಿಂದ ವಿಘ್ನನಿವಾರಕ ವಿನಾಯಕನ ಹಬ್ಬವನ್ನು ಆಚರಿಸಲಾಯಿತು.ಬೆಳಗ್ಗೆಯೇ ಗಣಪತಿ ಮೂರ್ತಿಗಳನ್ನು ಕೊಂಡೊಯ್ದ ಭಕ್ತರು ಮನೆಗಳಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡಿ ಪೂಜೆ ಸಲ್ಲಿಸಿದರು.

ವಿವಿಧ ಸಂಘಗಳು,ಮಂಡಳಿಗಳು ದೊಡ್ಡ ದೊಡ್ಡ‌ ಗಣಪತಿ ಮೂರ್ತಿಗಳನ್ನು ಕೊಂಡೊಯ್ದು ತಮ್ಮ ತಮ್ಮ ಬೀದಿಗಳಲ್ಲಿ ಪ್ರತಿಷ್ಟಾಪನೆ ಮಾಡಿ ಪೂಜೆ ಸಲ್ಲಿಸಿದರು.ಜೊತೆಗೆ ಪ್ರಮುಖ ದೇವಾಲಯಗಳಲ್ಲೂ ಅದ್ಧೂರಿಯಿಂದ ಗಣೇಶನ ಹಬ್ಬವನ್ನು ಆಚರಿಸಲಾಯಿತು.ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಬಂದು ವರಸಿದ್ಧಿವಿನಾಯಕನ ದರ್ಶನ ಪಡೆದರು. ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನ, ಆರ್ ಟಿ ನಗರದ ವಿನಾಯಕ ದೇವಸ್ಥಾನ, ಜೆಪಿ ನಗರ ಪುಟ್ಟೇನಹಳ್ಳಿಯಲ್ಲಿ ಕಬ್ಬಿನಿಂದ ಅಲಂಕೃತಗೊಂಡ ವಿಶೇಷ ಗಣಪತಿಗೆ ಬೆಳಗ್ಗೆಯಿಂದಲೂ ವಿವಿಧ ಪೂಜೆ ಪುನಸ್ಕಾರಗಳು ನಡೆದವು.

ಭಕ್ತರಿಗೆ ಬೃಹದಾಕಾರದ 4 ಸಾವಿರ ಕೆಜಿ ಲಾಡು ವಿತರಣೆ:

ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದುಕೊಂಡಿರುವ 30 ಅಡಿ ಎತ್ತರದ ಕಬ್ಬಿನ ಗಣಪತಿಗೆ ನೈವೇದ್ಯ ಕ್ಕೆ ಇಟ್ಟಿದ್ದ 4 ಸಾವಿರ ಕೇಜಿಯ ಬೃಹದಾಕಾರದ ಲಾಡು ಅನ್ನು ಇಂದು ಸಂಜೆ ಭಕ್ತರಿಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ನಗರದ ಜೆ ಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನ ಕಳೆದ ಕೆಲವು ದಿನಗಳಿಂದ ದೇಶ ವಿದೇಶಗಳಲ್ಲಿ ಹೆಸರು ಪಡೆದುಕೊಂಡಿದೆ. ಇದಕ್ಕೆ ಕಾರಣ ಅಲ್ಲಿನ ಆಡಳಿತ ಮಂಡಳಿಯ ಪರಿಸರ ಸ್ನೇಹಿ ಕ್ರಮ ಎಂದರೆ ತಪ್ಪಾಗಲಾರದು. ಭಕ್ತರಿಗೆ ಹೊಸದೊಂದು ಅನುಭವ ನೀಡಬೇಕು ಎನ್ನುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲೆ ಅತಿ ದೊಡ್ಡ ಪರಿಸರ ಸ್ನೇಹಿ ಗಣಪತಿಯನ್ನ ನಿರ್ಮಿಸಲಾಗಿತ್ತು. 30 ಅಡಿ ಎತ್ತರದ ಈ ಕಬ್ಬಿನ ಗಣಪತಿಗೆ 4 ಸಾವಿರ ಕೆಜಿ ತೂಕದ ಬೃಹತ್ ಗಾತ್ರದ ಲಾಡುವನ್ನು ನೈವೇದ್ಯ ಕ್ಕೆ ಇಡಲಾಗಿತ್ತು.

ಮೊದಲೇ ತಿಳಿಸಿದಂತೆ ಇಂದು ಸಂಜೆ ಈ ಬೃಹದಾಕಾರದ ಲಾಡುವನ್ನು ಭಕ್ತರಿಗೆ ಹಂಚುವ ಕೆಲಸಕ್ಕೆ ಚಾಲನೆ ನೀಡಲಾಯಿತು. 11 ದಿನಗಳ ಕಾಲ ಈ ಕಬ್ಬಿನ ಗಣಪತಿಯನ್ನು ಭಕ್ತರ ದರ್ಶನಕ್ಕೆ ಇಡಲಾಗುವುದು. ನಂತರ ಈ ಕಬ್ಬನ್ನು ಭಕ್ತರಿಗೆ ವಿತರಿಸಲಾಗುತ್ತದೆ.

ಶಾಲಾ ಕಾಲೇಜುಗಳ ಕಟ್ಟಡ ಅಭಿವೃದ್ಧಿಗೆ 1 ಸಾವಿರ ಕೋಟಿ ಅನುದಾನ: ಸಿಎಂ ಕುಮಾರಸ್ವಾಮಿ

ಮೈಸೂರು: ಸರ್ಕಾರ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಬೇಕಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಈ ಸಾಲಿನಲ್ಲಿ ಸರ್ಕಾರಿ ಶಾಲಾ, ಕಾಲೇಜುಗಳ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ತಿಗಾಗಿ 1 ಸಾವಿರ ಕೋಟಿ ರೂಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2018-19ನೇ ಸಾಲಿನ ಸಾಂಸ್ಕೃತಿಕ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಬಡ, ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಾರೆ. ಇವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಇರುವ ಶಿಕ್ಷಕರ ಕೊರತೆಯನ್ನು ನೀಗಿಸಲು ಶೀಘ್ರದಲ್ಲೇ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದರು.

ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ನಡೆಸುತ್ತಿದ್ದು, ಈ ಕಾಲೇಜು ನಗರದ ಕೇಂದ್ರ ಭಾಗದಲ್ಲಿ ಇರುತ್ತದೆ. ಕಾಲೇಜನ್ನು ಸ್ಥಳಾಂತರಿಸಿದರೇ, ಬಹಳಷ್ಟು ಪೋಷಕರು ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದಿಲ್ಲ. ಆದರಿಂದ ಸದರಿ ಕಾಲೇಜನ್ನು ಸ್ಥಳಾಂತರಿಸದೇ ಇಲ್ಲೇ ಉಳಿಸಿಕೊಂಡು ಬೇಕಿರುವ 18 ಹೆಚ್ಚುವರಿ ಕೊಠಡಿಗಳನ್ನು ಇಲ್ಲೇ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಹಾರಾಣಿ ಕಲಾ ಕಾಲೇಜು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಅಂಗವಾಗಿ ಆಡಿಟೋರಿಯಂ ನಿರ್ಮಿಸಿಕೊಡುವಂತೆ, ಕ್ರೀಡಾ, ಯೋಗ ಅಭ್ಯಾಸ ಕೈಗೊಳ್ಳಲು ಕೊಠಡಿ, ಕಾಲೇಜಿನ ಸುತ್ತ ಕಾಂಪೌಂಡ್ ನಿರ್ಮಾಣ, ಹೆಚ್ಚಿನ ಶೌಚಾಲಯಗಳ ನಿರ್ಮಾಣ, ಸೋಲಾರ್ ವ್ಯವಸ್ಥೆ, ಆಡಳಿತ ಕಚೇರಿ ಉನ್ನತೀಕರಣ, ಉನ್ನತ ಮಟ್ಟದ ಲ್ಯಾಬ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದು, ಅವುಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕೊಡಗು ನೆರೆ ಸಂತ್ರಸ್ತರಿಗೆ 23 ಲಕ್ಷ ರೂ. ಚೆಕ್‍ನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು. ಕಾಲೇಜಿನಿಂದ ಬಿನ್ನವತ್ತಳಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, ಶಾಸಕ ಎಲ್ ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹಮದ್, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಮುಖ್ಯಮಂತ್ರಿಯವರಿಂದ ಛಾಯಾಚಿತ್ರ ಪ್ರದರ್ಶನ ಅನಾವರಣ

ಮೈಸೂರು: ಮೈಸೂರು ನಗರ ಪತ್ರಿಕಾ ಛಾಯಾಗ್ರಾಹಕರ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಮಂಗಳವಾರ ಮೈಸೂರಿನಲ್ಲಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ- 2018 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುಮಾರು 20 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ಹಾಗೂ 60 ವರ್ಷ ವಯೋಮಾನ ಹೊಂದಿದ ಪತ್ರಕರ್ತರಿಗೆ ಅಗತ್ಯ ಸವಲತ್ತುಗಳನ್ನು ಸರ್ಕಾರದ ವತಿಯಿಂದ ಕೊಡುವ ಬಗ್ಗೆ ಸದ್ಯದಲ್ಲೇ ಗಮನ ಹರಿಸಲಾಗುವುದು ಎಂದರು.

ಸಂಕಷ್ಟದಲ್ಲಿರುವ ಪತ್ರಕರ್ತರ ಜೀವನ ಉತ್ತಮಗೊಳಿಸುವ ರೀತಿಯಲ್ಲಿ ಕಾರ್ಯಕ್ರಮ ಕೊಡಬೇಕಾಗಿದೆ‌ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಹಾಗೂ ಛಾಯಾಚಿತ್ರಗಳಿಗೆ ಜೀವ ತುಂಬುತ್ತಿದ್ದ ಪತ್ರಿಕಾ ಛಾಯಾಗ್ರಾಹಕ ಟಿ.ಎಸ್. ಸತ್ಯನ್ ಅವರು ಮೈಸೂರಿನವರು ಎಂಬುದು ಹೆಮ್ಮೆಯ ವಿಷಯ ಎಂದರು.

ಪತ್ರಿಕಾ ಛಾಯಾಗ್ರಾಹಕರು ಭಾವನಾತ್ಮಕ ಜೀವಿಗಳು. ರಮಣೀಯವಾದ ಸ್ಥಳಗಳು, ಅರಣ್ಯ ಮುಂತಾದ ಸ್ಥಳಗಳಲ್ಲಿ ಅಪರೂಪದ ಕ್ಷಣಗಳನ್ನು ವನ್ಯಜೀವಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವುದು ವಿಶೇಷ ಎಂದರು.

ನೂರಾರು ಪದಗಳಲ್ಲಿ ಹೇಳಬೇಕಾದನ್ನು ಒಂದು ಛಾಯಾಚಿತ್ರ ಹೇಳುತ್ತದೆ. ದೂರದರ್ಶನ ಹೆಚ್ಚು ಜನಪ್ರಿಯಗೊಳ್ಳುವ ಮುನ್ನವೇ ಪತ್ರಿಕಾ ಛಾಯಾಗ್ರಹಣ ಹೆಚ್ಚು ಜನಪ್ರಿಯಗೊಂಡಿತ್ತು. ಈಗಲೂ ಅಷ್ಟೇ ಪ್ರಾಮುಖ್ಯತೆ ಹೊಂದಿದೆ ಎಂದರು.

ಸಮಾರಂಭದಲ್ಲಿ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವರಾದ ಸಾ ರಾ ಮಹೇಶ್, ಹಿರಿಯ ಪತ್ರಕರ್ತ ಕೆ. ಶಿವಕುಮಾರ್, ಉದ್ಯಮಿ ಪಿ.ವಿ. ಗಿರಿ, ಪತ್ರಿಕಾ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ ಸುದ್ದಿ ಶುದ್ಧ ಸುಳ್ಳು: ಡಿಸಿಎಂ ಪರಮೇಶ್ವರ್!

ಬೆಂಗಳೂರು: ಕಾಂಗ್ರೆಸ್‌ನ ಯಾವ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಳ್ಳುತ್ತಿಲ್ಲ.‌ ಬಿಜೆಪಿ ಅವರು ಕೇವಲ ಊಹಾಪೋಹ ಸೃಷ್ಟಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ತಮ್ಮ ನಿವಾಸದ ಬಳಿ ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು‌ ನೇರವಾಗಿ ಸತೀಶ್ ಜಾರಕಿಹೋಳಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ಕೂಡ ಬಿಜೆಪಿ ಸೇರ್ಪಡೆಗೊಳ್ಳುವ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಅವರು ಸಮ್ಮಿಶ್ರ ಸರಕಾರ ಕೆಡವಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿಯೇ ಅವರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹಬ್ಬಿಸುತ್ತಿದ್ದಾರೆ. ಈ ವಿಚಾರಕ್ಕೆ ಯಾರೂ ಹೆಚ್ಚು ಮನ್ನಣೆ ನೀಡಬೇಡಿ ಎಂದರು.

ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರ 5 ವರ್ಷ ಸುಭದ್ರವಾಗಿರಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಸೋಮವಾರ ಮುಖ್ಯಮಂತ್ರಿ ಅವರೊಂದಿಗಿನ ನಿಯೋಗ ದೆಹಲಿಗೆ ತೆರಳಿ ಪ್ರಧಾನಿ ಅವರನ್ನು ಭೇಟಿ ಮಾಡಿ ಕೊಡಗು ಹಾಗೂ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಮುಂದಿಟ್ಟಿದ್ದೇವು. ಕೊಡಗಿನ ನೆರೆ ಪರಿಸ್ಥಿತಿ ಅವಲೋಕಿಸಲು ಕೇಂದ್ರದಿಂದ ತಂಡ ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲೂ ಅನಾವೃಷ್ಟಿ ಉಂಟಾಗಿದ್ದು ೮ ಸಾವಿರ ಕೋಟಿ ರು. ಬೆಳೆ ನಷ್ಟವಾಗಿದೆ. ಈ ಭಾಗದಲ್ಲೂ ಅಧ್ಯಯನ ನಡೆಸಲು ತಂಡ ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ ಎಂದರು.

ಅತಿವೃಷ್ಟಿ ಸಮೀಕ್ಷೆಗೆ ಕೂಡಲೇ ಕೇಂದ್ರದ ತಂಡ ಕಳುಹಿಸಲು ಪ್ರಧಾನಿ ಸಮ್ಮತಿ!

ನವದೆಹಲಿ: ಕೊಡಗು ಮತ್ತು ನೆರೆಯ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯನ್ನು ಸಮೀಕ್ಷೆ ಮಾಡಲು ಕೂಡಲೇ ಕೇಂದ್ರ ಸರ್ಕಾರವು ಅಧಿಕಾರಿಗಳ ಎರಡು ತಂಡಗಳನ್ನು ಕಳುಹಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದರು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ನಿಯೋಗವು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತಿವೃಷ್ಟಿ ಹಾಗೂ ಒಳನಾಡಿನಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಬಗ್ಗೆ ಮನವರಿಕೆ ಮಾಡಿ, ಕೊಡಗು ಹಾಗೂ ನೆರೆಯ ಜಿಲ್ಲೆಗಳಿಗೆ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗಾಗಿ 2000 ಕೋಟಿ ರೂ. ಗಳ ಪ್ಯಾಕೇಜ್ ಘೋಷಿಸಿ ಅನುದಾನ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಪ್ರಧಾನ ಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಕೊಡಗು ಮತ್ತು ನೆರೆಯ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಸತತ ಭಾರಿ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಉಂಟಾಗಿ ಜನ-ಜಾನುವಾರುಗಳು ಜೀವ ಕಳೆದುಕೊಂಡಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಆಗಸ್ಟ್ 2 ನೇ ವಾರದಲ್ಲಿ ಕಳೆದ 118 ವರ್ಷಗಳಲ್ಲೇ ದಾಖಲೆ ಮಳೆ ಸುರಿದಿದ್ದರಿಂದ ಅಪಾರ ನಷ್ಟ ಸಂಭವಿಸಿದ್ದು, ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯಬೆಳೆಗಳಿಗೆ, ಮೂಲಸೌಕರ್ಯ, ಮನೆಗಳಿಗೆ ತೀವ್ರ ಹಾನಿಯುಂಟಾಗಿದೆ. ಅತಿವೃಷ್ಟಿಯಿಂದಾಗಿ ಈ ಜಿಲ್ಲೆಗಳಲ್ಲಿ ಒಟ್ಟು 3705.87 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪುನರ್ವಸತಿ ಮತ್ತು ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೊಡಗು ಮತ್ತಿತರ ಜಿಲ್ಲೆಗಳಿಗೆ 2000 ರೂಪಾಯಿಗಳ ಪ್ಯಾಕೇಜ್ ಘೋಷಿಸಿ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ನಿಯೋಗದ ಇತರ ಸದಸ್ಯರೊಂದಿಗೆ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಅಂತೆಯೇ ಕರ್ನಾಟಕದ ಒಳನಾಡಿನಲ್ಲಿ 17 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಈ ಕುರಿತೂ ಸಹ ನಷ್ಟದ ಪ್ರಮಾಣ ಅಂದಾಜು ಮಾಡಲಾಗುತ್ತಿದ್ದು, ಈ ಕುರಿತು ನಾಳೆ ಸಂಪುಟ ಉಪಸಮಿತಿ ಸಭೆ ನಡೆಸಿ ಪ್ರಸ್ತಾವನೆಯನ್ನು ಅಂತಿಮಗೊಳಿಸಲಿದೆ. ಅದರಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ನಿಯೋಗವು ಪ್ರಧಾನಿಯವರಿಗೆ ಮಾಹಿತಿ ನೀಡಿತು.

ಮಾಜಿ ಪ್ರಧಾನಿ ಹಾಗೂ ಹಾಸನ ಸಂಸದ ಹೆಚ್.ಡಿ.ದೇವೇಗೌಡ, ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕಂದಾಯ ಸಚಿವ ಆರ್. ವಿ.ದೇಶಪಾಂಡೆ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಗ್ರಾಮೀಣಾಭಿ ವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮುಖ್ಯಮಂತ್ರಿ ಗಳೊಂದಿಗೆ ನಿಯೋಗದಲ್ಲಿ ಇದ್ದರು.

ಭಾರತ್ ಬಂದ್‌ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ!

ಬೆಂಗಳೂರು: ಪೆಟ್ರೋಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್‌ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಾದ್ಯಂತ ಸಾರಿಗೆ ವ್ಯವಸ್ಥೆ ಬಹುತೇಕ ಸ್ತಬ್ಧವಾಗಿದ್ದು, ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿವೆ.

ಕಳೆದ ನಾಲ್ಕು ವರ್ಷದಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆ 80 ರೂಪಾಯಿ ಗಡಿ ದಾಟಿದೆ. ತೈಲ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಭಾರತ್ ಬಂದ್‌ಗೆ ಕರೆ ನೀಡಿತ್ತು. ಬಂದ್‌ಗೆ ಹಲವು ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಿದ್ದು, ಕೆಲವು ಸಂಘಟನೆಗಳು ನೈತಿಕ ಬೆಂಬಲ ನೀಡಿವೆ.

ಏರ್‌ಪೋರ್ಟ್ ಗೆ ಹೊಗುತ್ತಿದ್ದವರಿಗೆ ಬಂದ್ ಬಿಸಿ: ಎಸ್ಟೀಮ್‌ ಮಾಲ್ ಬಳಿ ಚಾಲಕರ ಒಕ್ಕೂಟ ರಸ್ತೆಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸುವ ಮೂಲಕ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ನಾಲ್ಕೈದು ಕಿ.ಮೀ. ಟ್ರಾಫಿಕ್ ‌ಜಾಂ ಉಂಟಾಯಿತು‌. ಇದರಿಂದ ಏರ್ ಪೋರ್ಟ್ ಗೆ ಹೋಗುವವರಿಗೆ ಬಂದ್ ಬಿಸಿ ತಟ್ಟಿದೆ‌

ಬಿಕೋ ಎನ್ನುತ್ತಿರುವ ರಸ್ತೆಗಳು: ಬಂದ್ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಬಹುತೇಕ ಸ್ತಬ್ಧವಾಗಿದ್ದು, ಅಂಗಡಿ ಮುಗ್ಗಟ್ಟುಗಳು ಸಹ ಬಂದ್ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಜನನಿಬಿಡ ರಸ್ತೆಗಳು ಇಂದು ಬಿಕೋ ಎನ್ನುತ್ತಿದ್ದವು.

ಮೋದಿ ಹಟಾವೋ ಪ್ರತಿಭಟನೆ: ಕೆ.ಆರ್ ಪುರಂ ನಲ್ಲಿ ರಸ್ತೆ ತಡೆ ನೆಡೆಸಿ ಬಂದ್ ಗೆ ಸಹಕರಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಮನವಿ ಮಾಡಿದರು. ಮೋದಿ ಪ್ರತಿಕೃತಿ ದಹಿಸಿ, ಬಾಯ್ಬಡಿದುಕೊಳ್ಳೋ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಮೋದಿ ಹಠಾವೋ, ಭಾರತ್ ಬಚಾವೋ ಎಂದು ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಕೈಗಾರಿಕೋದ್ಯಮಕ್ಕೂ ಬಂದ್ ಬಿಸಿ: ಭಾರತ್ ಬಂದ್ ಪರಿಣಾಮ ಕೈಗಾರಿಕೋದ್ಯಮದ‌ ಮೇಲೂ ಉಂಟಾಗಿದೆ. ಪೀಣ್ಯ ಇಂಡಸ್ಟ್ರೀಯಲ್ ಏರಿಯಾದಲ್ಲಿ ಸಿಬ್ಬಂದಿ ಮತ್ತು ಕಾರ್ಮಿಕರು ಕೆಲಸಕ್ಕೆ ರಜಾ ಹಾಕಿದ್ದಾರೆ. ಗಾರ್ಮೆಂಟ್ಸ್, ಪ್ಯಾಕ್ಟರಿಗಳ ಗೇಟ್ ಗೆ ಈ ದಿನ ರಜಾ ಎಂದು ನಾಮಫಲಕ ಹಾಕಲಾಗಿದೆ‌. ಪೀಣ್ಯದ ಬಹುತೇಕ ಕೈಗಾರಿಕಾ ಸಂಸ್ಥೆಗಳು ಕ್ಲೋಸ್ ಆಗಿವೆ.

ಊಟ ನೀಡಿ ಮಾನವೀಯತೆ ಮೆರೆದ ವ್ಯಾಪಾರಿಗಳು: ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ತಿಂಡಿ-ಊಟ ಇಲ್ಲದೆ ಪರಾಡುತ್ತಿದ್ದ ಜನರಿಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಊಟ ನೀಡಿ ಹಾರೈಕೆ ಬೀದಿ ಬದಿ ವ್ಯಾಪಾರಿಗಳು ಹೃದಯ ಶ್ರೀಮಂತಿಕೆ ಮೆರೆದರು.

ಶಾಲಾ-ಕಾಲೇಜುಗಳಿಗೆ ರಜೆ: ಕೊಡಗು ಜಿಲ್ಲೆ ಹೊರತು ಪಡಿಸಿ ರಾಜ್ಯಾದ ಬಹುತೇಕ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಆಯಾ ಜಿಲ್ಲಾಧಿಕಾರಿಗಳು ನಿನ್ನೆಯೇ ರಜೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಇಂದು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಎದುರಾಗಲಿಲ್ಲ.

ಮೆಜೆಸ್ಟಿಕ್ ಸ್ತಬ್ಧ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಂದ್‌ಗೆ ಬೆಂಬಲ ನೀಡಿರುವುದರಿಂದ ಮೆಜೆಸ್ಟಿಕ್‌ನಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಮೆಜೆಸ್ಟಿಕ್ ಇಂದು ಬಿಕೋ ಎನ್ನುತ್ತಿತ್ತು. ಕನ್ನಡ ಪರ ಸಂಘಟನೆ ಕಾರ್ಯಕರ್ತರು ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕ್ರಿಕೆಟ್ ಆಡಿದರು‌.