ಬಿಜೆಪಿ ನಾಯಕರು ಬಹಳ ಅರ್ಜೆಂಟ್‌ನಲ್ಲಿದ್ದಾರೆ, ತಾಳ್ಮೆಯಿಂದ ಇದ್ದರೆ ಒಳ್ಳೆಯದು: ಡಿಕೆಶಿ

ಬೆಂಗಳೂರು: ನನ್ನ ವಿರುದ್ಧ ಏಕೆ ಎಫ್‌ಐಆರ್ ದಾಖಲು ಮಾಡ್ತಾರೆ. ಬಿಜೆಪಿ ನಾಯಕರು ಎಷ್ಟು ಅರ್ಜೆಂಟ್ ನಲ್ಲಿದಾರೆ ಎಂದು ಗೊತ್ತಿದೆ. ಮರದಲ್ಲಿ ಹಣ್ಣು ಚನ್ನಾಗಿ ಕೆಂಪಾಗಿದ್ರೆ ಎಲ್ಲರೂ ಕಲ್ಲಿನಲ್ಲಿ ಹೊಡೆಯುತ್ತಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಎಫ್‌ಐಆರ್ ದಾಖಲಾಗಿರುವ ಬಗ್ಗೆ ಅಧಿಕೃತವಾಗಿ ನನಗೆ ಯಾವ ದಾಖಲೆಗಳನ್ನು, ಮಾಹಿತಿಗಳನ್ನು ಕೊಟ್ಟಿಲ್ಲ. ಪ್ರಾಸಿಕ್ಯೂಷನ್ ವಿಚಾರ ಸಂಬಂಧ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ನ್ಯಾಯಾಲಯಕ್ಕೆ ಏನು ಗೌರವ ಕೊಡಬೇಕೊ ಕೊಡುತ್ತೇವೆ ಎಂದು ಹೇಳಿದರು.

ನನ್ನ ವಿರುದ್ಧ ಎಫ್ ಐಆರ್ ದಾಖಲಿಸಿರುವ ಬಗ್ಗೆ ಖಚಿತಪಡಿಸಿಲ್ಲ. ಎಫ್ ಐಆರ್ ದಾಖಲಾಗಿರುವ ಬಗ್ಗೆ ಮಾಹಿತಿಯೂ ಇಲ್ಲಾ, ಯಾವ ಅಧಿಕಾರಿಗಳು ನನ್ನ ಕರೆದು ಕೇಳಿಲ್ಲ, ಹಿಂದೆ ಅಧಿಕಾರಿಗಳು ಕರೆದು ಕೇಳಿದ್ದರು ಅದಕ್ಕೆ ಸರಿಯಾದ ಉತ್ತರವನ್ನ ಕೊಟ್ಟಿದ್ದೇನೆ ಎಂದರು.

ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದ ಪತ್ರ ಫೇಕ್ ಎಂಬ ಬಿಎಸ್ ವೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಫೇಕ್ ಪತ್ರ ಅಂತಾ ಯಡಿಯೂರಪ್ಪ ಹೇಳಿದ್ರೆ ಬಹಳ ಸಂತೋಷ. ಯಡಿಯೂರಪ್ಪ, ಪುಟ್ಟಸ್ವಾಮಿಗೌಡ ಎಂಬುವವರ ಮೂಲಕ ಯಡಿಯೂರಪ್ಪ ಪತ್ರ ಹಾಕಿ ಕಳಿಸಿ ಕೊಟ್ಟಿದ್ದರು. ಯಡಿಯೂರಪ್ಪ ಶಿಫಾರಸ್ಸಿನ ಮೇಲೆ ಪತ್ರ ಕಳುಹಿಸಿದ್ದು ಈ ಹಿಂದೆಯೇ ನನಗೆ ಗೊತ್ತಿತ್ತು. ಪತ್ರ ಫೇಕ್ ಹೌದೋ ಅಲ್ಲವೋ ಎಂಬುದಕ್ಕೆ ನಾನು ನನ್ನ ಸಹೋದರ ಅನುಭವಿಸಿದ್ದೆ ಸಾಕ್ಷಿ. ನನ್ನ ಮನೆ ಮೇಲೆ ದಾಳಿಯಾಗಿದೆ. ನನ್ನ ಹೆಸರು, ನನ್ನ ಸಹೋದರ ಸುರೇಶ್ ಹೆಸರು ಹೇಳಿದ್ದಾರೆ. ಇದರಲ್ಲಿ ರಾಜಕೀಯ ಬೆರೆಸಬಾರದು. ಕೆಲವು ವಿಚಾರಗಳು ನನಗೂ ಗೊತ್ತಿದೆ ಅದೆಲ್ಲವನ್ನ ಈಗ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ನಾಯಕರು ತಾಳ್ಮೆಯಿಂದ ಇದ್ದರೆ ಒಳ್ಳೆಯದು. ರಾಜಕೀಯ ಮಾಡುವುದು ಸರಿಯಲ್ಲ, ಹಣ, ಅಧಿಕಾರ ಪ್ರಭಾವದಿಂದಲೇ ರಾಜಕೀಯ ಮಾಡಿದ್ರೆ ಅದಕ್ಕೂ ನಾನು ರೆಡಿ. ಯಾವುದೂ ಮುಚ್ಚುಮರೆ ಏನೂ ಇಲ್ಲ. ಬಿಜೆಪಿ ಮುಖಂಡರು ಕಾಂಗ್ರೆಸ್ ನ ಯಾವ ಶಾಸಕರನ್ನ ಭೇಟಿ ಮಾಡಿದ್ದಾರೆ. ಯಾರ ಜೊತೆ ಮಾತುಕತೆ ನಡೆಸಿದ್ದಾರೆಂಬುದು ಎಲ್ಲವೂ ಗೊತ್ತು. ಇಲ್ಲಿ ಅಧಿಕಾರ ಶಾಶ್ವತ ಅಲ್ಲವೇ ಅಲ್ಲ. ನಾನೂ ಕೂಡ ಶಾಶ್ವತ ಅಲ್ಲ. ಸದ್ದಾಂ ಹುಸೇನ್, ರಾಜ ಮಹಾರಾಜರು ಏನಾಗಿದ್ದಾರೆ ಅಂತಾ ಗೊತ್ತಿದೆ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಲಿಕಾನ್ ಸಿಟಿಯಲ್ಲೇ ನಡೆಯಲಿದೆ ಏರ್ ಶೋ: ಗೊಂದಲಗಳಿಗೆ ರಕ್ಷಣಾ ಇಲಾಖೆಯಿಂದ ತೆರೆ!

ದೆಹಲಿ: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 12 ನೇ ಆವೃತ್ತಿ 2019 ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿಯೇ ನಡೆಯಲಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಅಧಿಕೃತ ಪ್ರಕಟಣೆ ಹೊರಡಿಸುವ ಮೂಲಕ ಏರ್ ಶೋ ಉತ್ತರ ಪ್ರದೇಶದ ಲಕ್ನೋಗೆ ಸ್ಥಳಾಂತರವಾಗಲಿದೆ ಎನ್ನುವ ವದಂತಿಗೆ ತೆರೆ ಬಿದ್ದಿದೆ.

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ, 2019 ರಲ್ಲಿಯೂ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆ.20 ರಿಂದ 24 ರವರೆಗೆ ಒಟ್ಟು ಐದು ದಿನಗಳ ಕಾಲ ನಡೆಯಲಿದೆ. ವೈಮಾನಿಕ ಪ್ರದರ್ಶನದ ಜೊತೆಯಲ್ಲೇ ಹಿಂದಿನಂತೆ ವೈಮಾನಿಕ ಮತ್ತು ರಕ್ಷಣಾ ಉದ್ಯಮದ ಅತಿದೊಡ್ಡ ವಸ್ತುಪ್ರದರ್ಶನ ನಡೆಯಲಿದೆ ಇದರಲ್ಲಿ ವೈಮಾನಿಕ ಉದ್ದಿಮೆಯ ಜಾಗತಿಕ ಮುಂಚೂಣಿ ಸಂಸ್ಥೆಗಳು ಭಾಗಿಯಾಗುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ರಕ್ಷಣಾ ಸಚಿವಾಲಯ ತಿಳಿಸಿದೆ.

ವೈಮಾನಿಕ ಕ್ಷೇತ್ರದಲ್ಲಿನ ಹೊಸ ಹೊಸ ಆವಿಷ್ಕಾರಗಳು, ಯೋಜನೆಗಳು, ಮಾಹಿತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ವೇದಿಕೆ ಇದಾಗಲಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿಯೇ ವೈಮಾನಿಕ ಪ್ರದರ್ಶನದಲ್ಲಿ ಒಡಂಬಡಿಕೆಗಳು ನಡೆಯಲಿವೆ. ಜಾಗತಿಕ ಮಟ್ಟದ ಈ ವೈಮಾನಿಕ ಪ್ರದರ್ಶನದ ಯಶಸ್ವಿಗೆ ರಕ್ಷಣಾ ಇಲಾಖೆ ಬದ್ದವಾಗಿದೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಗರ ಸ್ಥಳೀಯ ಸಂಸ್ಥೆ ಮೀಸಲಾತಿ ಪಟ್ಟಿ ಬದಲಾವಣೆ ಮಾಡಲಾಗಿದೆ: ರವಿಕುಮಾರ್ ಆರೋಪ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಬದಲಾವಣೆ ಮಾಡಿರುವುದನ್ನು ವಾಪಸ್ ಪಡೆಯದೇ ಇದ್ದಲ್ಲಿ ರಾಜ್ಯ ಸರ್ಕಾದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ಚರಿಕೆ ನೀಡಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರವಿ ಕುಮಾರ್, ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಕ್ಕೂ ಮೊದಲೇ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡುವಂತೆ ಹೈಕೋರ್ಟ್ ನೀಡಿದ್ದ ಸೂಚನೆ ಮೇರೆಗೆ ಫಲಿತಾಂಶದ ದಿನ ಮಧ್ಯಾಹ್ನ ಮೀಸಲಾತಿ ಪಟ್ಟಿಯನ್ನು‌ ಸರ್ಕಾರ ಪ್ರಕಟಿಸಿತ್ತು. ಆದರೆ, ಇದೀಗ ಆ ಪಟ್ಟಿಯನ್ನು ಬದಲಾಯಿಸಿರುವುದರಿಂದ ಬಹಳ ಕಡೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಇಪ್ಪತ್ತಕ್ಕು ಹೆಚ್ಚು ಕಡೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯತ್ನಿಸಿ ರಾಜಕೀಯ ವೈಷಮ್ಯ ತೀರಿಸಿಕೊಳ್ಳಲು ಹೊರಟಿದ್ದಾರೆ ಎಂದು ಟೀಕಿಸಿದರು.

12 ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ, ಎರಡು ಉಪಾಧ್ಯಕ್ಷ ಸ್ಥಾನ, 16 ಪುರಸಭೆ ಅಧ್ಯಕ್ಷ ಸ್ಥಾನ 5 ಉಪಾಧ್ಯಕ್ಷ ಸ್ಥಾನ ಹಾಗೂ 4 ಪಟ್ಟಣ ಪಂಚಾಯತ್ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ. ಒಟ್ಟಾರೆ 40 ಸ್ಥಾನ ಬದಲಾವಣೆ ಮಾಡಿದ್ದಾರೆ. ಇಲ್ಲಿ ಬಹುತೇಕ ಬಿಜೆಪಿ ಅಧಿಕಾರಕ್ಕೆ ಬರಬೇಕಿತ್ತು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ರೀತಿ ಪಟ್ಟಿ ಬದಲು ಮಾಡಿದೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ಪಟ್ಟಿಯನ್ನು ಹಿಂದಿನಂತೆ ಬದಲಿಸಬೇಕು, ಸಿಎಂ ಮಧ್ಯ ಪ್ರವೇಶಿಸಿ ಹಿಂದಿನಂತೆ ಪಟ್ಟಿಯನ್ನು ಪುನಃ ಪ್ರಕಟಿಸಬೇಕು ಇಲ್ಲವೇ ಬಿಜೆಪಿ ನ್ಯಾಯಾಲಯದ ಮೊರೆ ಹೋಗಲಿದೆ, ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದೆ. ಸರ್ಕಾರದ ಈ ನಿಲುವು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಮೈತ್ರಿ ಸರ್ಕಾರ ಪತನಕ್ಕಾಗಿ ಬಿಜೆಪಿಯಿಂದ ಡಿಕೆ ಶಿವಕುಮಾರ್ ಟಾರ್ಗೆಟ್,ಐಟಿ ಇಡಿ ಅಸ್ತ್ರ ಪ್ರಯೋಗ: ಡಿ.ಕೆ ಸುರೇಶ್

ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇ.ಡಿ, ಐ.ಟಿ ಬಳಸಿಕೊಂಡು ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಅಸ್ಥಿರ ಮಾಡುವ ಪ್ರಯತ್ನಕ್ಕೆ ಬಿಜೆಪಿ ರಾಜ್ಯ ನಾಯಕರು ಕೈ ಹಾಕಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ಆರೋಪ ಮಾಡಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಡಿ.ಕೆ ಸುರೇಶ್,ಇ.ಡಿ, ಐ.ಟಿ ಬಳಸುಕೊಂಡು ಕೆಲವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ.ನನ್ನ ಸಹೋದರ ಡಿ ಕೆ ಶಿವಕುಮಾರ್ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ.ಆದರೂ ಏನು ಮಾಡಲಾಗಲಿಲ್ಲ ಹೀಗಾಗಿ ಬಿಜೆಪಿಗರು ಮತ್ತೆ ಐ.ಟಿ ಇ.ಡಿ ಇಟ್ಕೊಂಡು ಸರ್ಕಾರ ಅಸ್ಥಿರ ಪ್ರಯತ್ನ ಮಾಡ್ತಿದ್ದಾರೆ.
ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡ್ತಿಲ್ಲ ಸಿಬಿಐ ಮೋರ್ಚಾ, ಇಡಿ ಮೋರ್ಚಾ ಆಗಿ ಬದಲಾಗಿದೆ‌ ರಾಜ್ಯ ಬಿಜೆಪಿ ನಾಯಕರ ಒತ್ತಡವೇ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿದ್ರು.

ಸುಭದ್ರ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ.ಬಿಜೆಪಿ ಸರ್ಕಾರ ರಚನೆಗೆ ಪ್ರಯತ್ನ ನಡೆಸುತ್ತಿದ್ದು ಅದಕ್ಕಾಗಿ ಡಿ.ಕೆ ಶಿವಕುಮಾರ್ ಟಾರ್ಗೆಟ್ ಮಾಡ್ತಿದ್ದಾರೆ‌ ಸಿಬಿಐ, ಐಟಿ, ಇಡಿ ಇಲಾಖೆಗೆ ನಾವು ಸಂಪೂರ್ಣ ಬೆಂಬಲ‌ ನೀಡಿದ್ದೇವೆ ಆದರೂ ಕಿರುಕುಳ ನೀಡ್ತಿದ್ದಾರೆ ಇವೆಲ್ಲಾ ಪ್ರಧಾನಿ ಗಮನಕ್ಕೆ ಬಂದಿದೆಯೋ ಇಲ್ವೋ ಗೊತ್ತಿಲ್ಲ ಅವರ ಭೇಟಿಗೆ ಅವಕಾಶ ಕೋರಿದ್ದೇವೆ ಸೋನಿಯಾ ಗಾಂಧಿ, ಉಪೇಂದ್ರ ಹೂಡಾ, ಮಮತಾ ಬ್ಯಾನರ್ಜಿ ಸೇರಿ ಅನೇಕರಿಗೆ ಇದೆ ರೀತಿ ಕಿರುಕುಳ ನೀಡಲಾಗ್ತಿದೆ‌ ರಾಜ್ಯದಲ್ಲಿ ಪ್ರಭಲ ಇದ್ದವರಿಗೆ ಕಿರುಕುಳ ನೀಡಲಾಗ್ತಿದೆ‌ ಗುಜರಾತ್ ಶಾಸಕರಿಗೆ ನಾವು ಬೆಂಬಲ ನೀಡಿದ್ದ ಕೋಪಕ್ಕೆ ಈ ರೀತಿ ನಮಗೆ ಕಿರುಕುಳ ನೀಡಲಾಗ್ತಿದೆ ಎಂದ್ರು.

ಗೋವಿಂದ ರಾಜ್ ಡೈರಿಯನ್ನು ಸದನದಲ್ಲಿ ಬಿಜೆಪಿಗರು ಹೇಗೆ ತೋರಿಸ್ತಾರೆ ಇದು ಹೇಗೆ ಸಾಧ್ಯ ? ಐಟಿ ಇಡಿಗೆ ಆರ್ ಟಿ ಐ ಅಪ್ಲೈ ಆಗಲ್ಲ ಆದರೂ ಗೋವಿಂದ ರಾಜ್ ಡೈರಿ ಬಿಜೆಪಿಗರಿಗೆ ಹೇಗೆ ಸಿಕ್ಕಿತು ಎಂದು ಡಿಕೆ ಸುರೇಶ್ ಪ್ರಶ್ನಿಸಿದ್ರು.

ಆಪರ್ಶೆನ್ ಕಮಲಕ್ಕೆ ಬಿಜೆಪಿ ನಾಯಕರು ಪ್ರಯತ್ನ‌ ನಡೆಸಿ ೬ ಶಾಸಕರಿಗೆ ಗಾಳ‌ ಹಾಕಿದ್ದು ಆಸೆ ಆಮಿಷ ಒಡ್ಡುತ್ತಿದ್ದಾರೆ. ನಾನು ಐಟಿ ಮತ್ತು ಇಡಿ ಗೆ ಹೆದರಿ ಪತ್ರಿಕಾಗೋಷ್ಠಿ ಮಾಡ್ತಾ ಇಲ್ಲ.ಪ್ರಧಾನಿ ಕಚೇರಿಯನ್ನು ಯಾವ ರೀತಿ ದುರ್ಬಳಕೆ ಮಾಡಲಾಗ್ತಾ ಇದೆ ಎಂಬುವುದನ್ನು ಪ್ರಧಾನಿ ಹಾಗೂ ರಾಜ್ಯದ ಜನರ ಗಮನಕ್ಕೆ ತರಲು ಪತ್ರಿಕಾ ಗೋಷ್ಟಿ ಮಾಡ್ತಾ ಇದ್ದೆನೆ ಎಂದರು.

ಸಹೋದರ ಸುದ್ದಿಗೋಷ್ಠಿ ನಡೆಸಿದ ಕುರಿತು ಸ್ಪಷ್ಟೀಕರಣ ನೀಡಿದ ಸಚಿವ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಯಾವ ಕಾರಣಕ್ಕೆ ಪತ್ರಿಕಾಗೋಷ್ಠಿ ಮಾಡಿದ್ದಾರೋ ಗೋತ್ತಿಲ್ಲ‌ ಈ ಬಗ್ಗೆ ತಿಳಿದುಕೊಂಡು ಮಾತನಾಡುತ್ತೆನೆ ಈಗ ನಾನು ತುರ್ತಗಿ ಚಿನ್ನಸ್ವಾಮಿ ಸ್ಟೇಡಿಯಂ ಹೋಗಬೆಕು ಅಲ್ಲಿ ಕಾರ್ಕಕ್ರಮವೊಂದರ ಉದ್ಘಾಟನೆ ಇದೆ ಸಿಎಂ ಕಾಯುತ್ತಿದ್ದಾರೆ ಎಂದು‌ ಹೇಳಿ ಹೊರಟರು.

ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ಪೂವಮ್ಮಗೆ ಸಿಎಂ ಅಭಿನಂದನೆ

ಮಂಗಳೂರು: ರಾಜ್ಯ ಮತ್ತು ರಾಷ್ಟ್ರದ ಗೌರವವನ್ನು ಏಷ್ಯನ್ ಕ್ರೀಡಾಕೂಟದಲ್ಲಿ ಎತ್ತಿ ಹಿಡಿದ ರಾಜ್ಯದ ಪ್ರತಿಭೆ ಪೂವಮ್ಮ ಅವರಿಗೆ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಅವರು ಇಂದು ಸನ್ಮಾನಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಯೋಜಿಸಿದ್ದ ಸಭೆಯ ಆರಂಭದಲ್ಲಿ ಸಾಧಕಿ ಪೂವಮ್ಮ ಅವರು ಚಿನ್ನದ ಪದಕ ಪಡೆದುದಕ್ಕೆ 25 ಲಕ್ಷ ರೂಪಾಯಿ ಹಾಗೂ ಬೆಳ್ಳಿ ಪದಕ ಪಡೆದುದಕ್ಕೆ 15 ಲಕ್ಷ ರೂಪಾಯಿ ಒಟ್ಟು 40 ಲಕ್ಷ ರೂಪಾಯಿಗಳ ಚೆಕ್ ಜೊತೆಗೆ ನಿವೇಶನದ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.

ಇಂದು ಬೆಳಗ್ಗೆ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ ವೇಳೆ ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರೀಡಾಳುವಿಗೆ ಗೌರವ ನೀಡುವ ಬಗ್ಗೆ ನಿರ್ಧರಿಸಲಾಯಿತು. ಈ ಅಭಿನಂದನೆ ರಾಜ್ಯದ ಸಾಧಕರಿಗೆ ಸ್ಪೂರ್ತಿಯಾಗಲಿ ಎಂದ ಮುಖ್ಯಮಂತ್ರಿಗಳು, ಕ್ರೀಡಾ ಸಾಧಕರಿಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪೂವಮ್ಮ ಅವರು, ಇಷ್ಟು ತುರ್ತು ಸಮಯದಲ್ಲಿ ತನ್ನ ಸಾಧನೆಗೆ ನೀಡಿದ ಗೌರವಕ್ಕೆ ತಾನು ಅನಂತಾನಂತ ಧನ್ಯವಾದಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಜಯಮಾಲಾ ಅವರು ಶುಭಹಾರೈಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ಎಂಎಲ್‍ಸಿ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳಿದ್ದರು ಭಾಗಿಯಾಗಿದ್ದರು.

ಬೆಂಗಳೂರು ಜಲಮಂಡಳಿ: ಸೆಪ್ಟೆಂಬರ್ 07 ರಂದು ಪೂರ್ವ-1 ಉಪವಿಭಾಗದಲ್ಲಿ ನೀರಿನ ಅದಾಲತ್  

ಬೆಂಗಳೂರು: ಬೆಂಗಳೂರು ಜಲಮಂಡಲಿಯ (ಪೂರ್ವ-1) ಉಪವಿಭಾಗದಲ್ಲಿ ದಿ:07.09.2018 ರಂದು ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತ್‍ಅನ್ನು ಬೆಳಿಗ್ಗೆ 9.30 ರಿಂದ 11:00 ಗಂಟೆಯವರೆಗೆ ನಡೆಸಲಾಗುತ್ತದೆ.

ದಿನಾಂಕ: 07.09.2018 ರಂದು (ಪೂರ್ವ-1) ಉಪವಿಭಾಗ ವ್ಯಾಪ್ತಿಗೆ ಬರುವ ಹೆಚ್.ಆರ್.ಬಿ.ಆರ್ ಲೇಔಟ್, ಕಲ್ಯಾಣ ನಗರ, ಓ.ಎಂ.ಬಿ.ಆರ್ ಲೇಔಟ್, ಮತ್ತು ಹೆಚ್.ಬಿ.ಆರ್ ಲೇಔಟ್ ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು 1ನೇ ಬ್ಲಾಕ್, ಹೆಚ್.ಆರ್.ಬಿ.ಆರ್ ಲೇಔಟ್, ಕಲ್ಯಾಣ ನಗರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಪರಿಶೀಲಿಸಿ ಬಗೆಹರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಕಾರ್ಯನಿರ್ವಾಹಕ ಅಭಿಯಂತರರು (ಪೂರ್ವ)22945158. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಪೂರ್ವ-1) ಉಪವಿಭಾಗ-22945170. ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಲಿಯ 24/7 ದೂರುನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ-22238888, ಸಹಾಯವಾಣಿ 1916 ಹಾಗೂ ವಾಟ್ಸ್‍ಆಪ್ ಸಂಖ್ಯೆ-8762228888 ಗೆ ಸಂಪರ್ಕಿಸಬಹುದಾಗಿದೆ.

ಸಾರ್ವಜನಿಕರು ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯ ಬಳಸಿಕೊಳ್ಳ ಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.