ಜನತಾದರ್ಶನದಲ್ಲಿ ಅಹವಾಲು ಸಲ್ಲಿಸಿದ್ದ ಮಹಿಳೆ: ಕೂಡಲೇ ಮನೆ ಒತ್ತುವರಿ ತೆರವು

ಬೆಂಗಳೂರು: ಜನತಾದರ್ಶನದಲ್ಲಿ ಮನೆ ಕಳೆದುಕೊಂಡು ದುಗುಡ ಹೊತ್ತು ತಂದಿದ್ದ ಗಿರಿನಗರದ ಕನ್ನಿಯಮ್ಮ ಇಂದು ಮಂದಹಾಸ ಬೀರುತ್ತಿದ್ದಳು.

ಪತಿ ಮಾಡಿದ ಕೈಸಾಲ ಪ್ರಾಮಾಣಿಕವಾಗಿ ತೀರಿಸುತ್ತಾ ಬಂದಿದ್ದರೂ ಊರಲ್ಲಿ ಇಲ್ಲದ ಸಂದರ್ಭದಲ್ಲಿ ಸಾಲ ಕೊಟ್ಟ ವ್ಯಕ್ತಿ ಆಕೆಯ ಮನೆಯ ಬೀಗ ಒಡೆದು ಮನೆಯನ್ನ ಸ್ವಾಧೀನ ಪಡಿಸಿಕೊಂಡು ಅಕ್ರಮವಾಗಿ ಮತ್ತೊಬ್ಬರಿಗೆ ಬಾಡಿಗೆ ಕೊಟ್ಟಿದ್ದರು.

ಸೆಪ್ಟೆಂಬರ್1 ರಂದು ನಡೆದ ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳ ಬಳಿ ಮನೆ ವಾಪಸ್ ಕೊಡಿಸುವಂತೆ ಕನ್ನಿಯಮ್ಮ ಅಹವಾಲು ಸಲ್ಲಿಸಿದ್ದರು. ಕೂಡಲೇ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ಕರೆ ಮಾಡಿ ಮನೆ ಒತ್ತುವರಿ ತೆರವು ಗೊಳಿಸಿ ಮಹಿಳೆಗೆ ರಕ್ಷಣೆ ಒದಗಿಸುವಂತೆ ಸೂಚಿಸಿದ್ದರು. ಅದರಂತೆ ಪೊಲೀಸರು ಕ್ರಮ ವಹಿಸಿ ಕನ್ನಿಯಮ್ಮನಿಗೆ ನ್ಯಾಯ ಒದಗಿಸಿದರು.

ಇಂದು ಆಕೆ ಕೃಷ್ಣಾದಲ್ಲಿ ಬಂದು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹಾಗೂ ಡಿಸಿಪಿ ಶರಣಪ್ಪ ಹಾಜರಿದ್ದರು.

ಉತ್ತಮ‌ ಶಿಕ್ಷಕಿಗೆ 25 ಸಾವಿರ ಚೆಕ್ ನೀಡಲಾಗುವುದು: ಡಿಸಿಎಂ ಡಾ.ಜಿ. ಪರಮೇಶ್ವರ್

ತುಮಕೂರು: ದೇಶದ ಮೊದಲ‌ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪೂಲೆ ಅವರ ಹೆಸರಿನಲ್ಲಿ ತುಮಕೂರಿನ ಪ್ರತಿ ತಾಲೂಕಿನಲ್ಲಿ ಉತ್ತಮ ಶಿಕ್ಷಕಿಗೆ ೨೫ ಸಾವಿರ ರು. ಚೆಕ್ ನೀಡಲಾಗುತ್ತೆ ಎಂದು ಉಪಮುಖ್ಯಮಂತ್ರಿ ಡಾ.ಜಿ.‌ಪರಮೇಶ್ವರ್ ಅವರು ಘೋಷಿಸಿದರು.

ಕೊರಟಗೆರೆ ಮಾರುತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ತುಮಕೂರಿನ ಆಯಾ ತಾಲೂಕಿನ ಬಿಇಒ ಅಧಿಕಾರಿಗಳಿಗೆ ಈ ಚೆಕ್ ನೀಡಲಿದ್ದೇನೆ. ಅವರು ತಮ್ಮ ವ್ಯಾಪ್ತಿಯಲ್ಲಿನ ಉತ್ತಮ ಶಿಕ್ಷಕಿಯನ್ನು ಗುರುತಿಸಿ ನೀಡಲಿದ್ದಾರೆ. ನನ್ನ ವತಿಯಿಂದ ಪ್ರತಿ ವರ್ಷ ಉತ್ತಮ‌ ಶಿಕ್ಷಕಿ ಒಬ್ಬರಿಗೆ ನೀಡಲಾಗುವುದು ಎಂದು ಹೇಳಿದರು.

ಬೆಂಗಳೂರಿನ‌ ಕೆಲ ಸರಕಾರಿ ಶಾಲೆಗಳನ್ನು ದತ್ತು ಪಡೆದು ಖಾಸಗಿ ಶಾಲೆ ಮಟ್ಟಕ್ಕೆ ಅಭಿವೃದ್ಧಿ ಪಡಿಸಿದ್ದಾರೆ. ತುಮಕೂರಿನಲ್ಲಿನ‌ ಐದು ಸರಕಾರಿ ಶಾಲೆಯನ್ನು ಸಹ ದತ್ತು ಪಡೆಯಲು ಕೆಲವರು ಮುಂದೆ ಬಂದಿದ್ದಾರೆ. ಇನ್ನು ಇಂಥ ಜನರು ಮುಂದೆ ಬರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು. ಜೊತೆಗೆ ಉತ್ತಮ ಶಿಕ್ಷಕರಿಗೆ ಸನ್ಮಾನಿಸಲಾಯಿತು

ಈ ವೇಳೆ ಸಂಸದ ಮುದ್ದಹನುಮೇಗೌಡ, ವಿಧಾನಪರಿಷತ್ ಸದಸ್ಯ ನಾರಾಯಣ ಸ್ವಾಮಿ ಇದ್ದರು.

ಕೊಡಗು-ಕೇರಳಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಗಳಿಂದ ತಲಾ 10 ಸಾವಿರ ರೂಪಾಯಿ ದೇಣಿಗೆ!

ಬೆಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯದ ಎಲ್ಲಾ ನ್ಯಾಯಾಧೀಶರು ಕರ್ನಾಟಕ ಮತ್ತು ಕೇರಳ ರಾಜ್ಯದ ಪ್ರವಾಹ ಪೀಡಿತರ ನೆರವಿಗಾಗಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 10 ಸಾವಿರ ರೂ. ಗಳ ಚೆಕ್ ನೀಡಿದ್ದಾರೆ.

ಇದಲ್ಲದೆ ಎಲ್ಲ ಜಿಲ್ಲಾ ನ್ಯಾಯಾಲಗಯಳ ನ್ಯಾಯಾಧೀಶರು ತಮ್ಮ ಒಂದು ದಿನದ ವೇತನವನ್ನು ಪರಿಹಾರ ನಿಧಿಗೆ ದೇಣಿಗೆ ನೀಡಲು ಮುಂದಾಗಿದ್ದು, ಈ ಕುರಿತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಜೊತೆಗೆ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಹಕಾರ ಸಂಘವು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ನೀಡಲು ನಿರ್ಧರಿಸಿದ್ದಾರೆ.

ಆರು ವರ್ಷದಲ್ಲಿ ಮೂರನೇ ಬ್ರಿಡ್ಜ್ ಕುಸಿತ, ಹಲವರಿಗೆ ಗಾಯ ಒಂದು ಸಾವು!

ಕೋಲ್ಕತ್ತ: ಸುಮಾರು 20 ಮೀಟರ್ ಎತ್ತರದ ಮೆಜರತ್ ಮೇಲ್ಸೇತುವ ಕುಸಿದಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕೊಲ್ಕಾತ್ತದಲ್ಲಿ ಕಳೆದ ಆರು ವರ್ಷಗಳಲ್ಲಿ ಕುಸಿದಿರುವ ಮೂರನೇ ಮೇಲ್ಸೇತುವೆ ಇದಾಗಿದೆ.

ವಾಹನಗಳು ಚಲಿಸುತ್ತಿರುವಾಗಲೇ ಮೇಲ್ಸೇತುವೆ ಕುಸಿದು ರೈಲು ಹಳಿಯ ಮೇಲೆ ಬಿದ್ದ ಘಟನೆ ನಿನ್ನೆ ಸಂಜೆ ಸಂಭವಿಸಿದ್ದು, ಹಲವರು ಸೇರುವೆ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಮಂಗಳವಾರ ಸಂಜೆ ಘಟನೆ ಸಂಭವಿಸಿದ್ದು, ಕಚೇರಿಗಳಿಂದ ಹಿಂದಿರುಗುವ ಸಾವಿರಾರು ಮಂದಿ ಇದೇ ಬ್ರಿಡ್ಜ್ ಬಳಸುತ್ತಾರೆ.

1965 ರಲ್ಲಿ ಕಾಲುವೆ ಮತ್ತು ರೈಲ್ವೇ ಹಳಿ ದಾಟಲು ಈ ಬ್ರಿಡ್ಜ್ ನಿರ್ಮಾಣ ಮಾಡಲಾಗಿತ್ತು. ಪೀಕ್ ಅವರ್‌ನಲ್ಲಿ ಸುಮಾರು 4 ಸಾವಿರ ವಾಹನಗಳು, 10 ಸಾವಿರ ಜನರು ಈ ಮೇಲ್ಸೇತುವೆ ಬಳಸುತ್ತಾರೆ.

ಮೇಲ್ಸೇತುವೆ ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆತುತ್ತಿದ್ದು, 60 NDRF ಸಿಬ್ಬಂದಿ, 150 ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ 400 ಪೊಲೀಸರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ‌. ಈ ವರೆಗೆ 21 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಇದಲ್ಲಿ ಇಬ್ಬರು ಗಂಬೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡಿರುವವರಿಗೆ 50 ಸಾವಿರ ರೂಪಾಯಿಗಳ ಪರಿಹಾರವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಕಡ್ಡಾಯವಾಗಿ ತೆರಿಗೆ ಪಾವತಿ ಮಾಡಿಸಿ: ಡಿಸಿಎಂ ಡಾ.ಜಿ. ಪರಮೇಶ್ವರ್

ಬೆಂಗಳೂರು: ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು ಪಾವತಿ ಮಾಡಲು ಅಗತ್ಯ ಕ್ರಮವನ್ನು ಅಧಿಕಾರಿಗಳು ತೆಗೆದುಕೊಳ್ಳುವಂತೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಮಂಗಳವಾರ ಬಿಬಿಎಂಪಿ ಹಣಕಾಸು ವಿಭಾಗಕ್ಕೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯನ್ನು ವೈಯಾಲಿಕಾವಲ್ ಬಿಬಿಎಂಪಿ‌ ಕಚೇರಿಯಲ್ಲಿ ನಡೆಸಿದರು.

ಈ ಸಾಲಿನಲ್ಲಿ ಈ ವರೆಗು 1614 ಕೋಟಿ ರು. ತೆರಿಗೆ ಸಂಗ್ರಹವಾಗಿದೆ. ಹೆಚ್ಚಾಗಿ ಕಮರ್ಷಿಯಲ್ ತೆರಿಗೆ ಪಾವತಿಯಾಗಬೇಕಿದೆ. ಇನ್ನೂ 2828 ಕೋಟಿ ರು. ಪಾವತಿ ಬಾಕಿ ಇದ್ದು, ಮುಂದಿನ ಮಾರ್ಚ್ ವರೆಗೂ ಅವಧಿ ಇದೆ. ಅಷ್ಟರೊಳಗೆ ಗುರಿಯಂತೆ ತೆರಿಗೆ ಸಂಗ್ರಹ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ‌ ನೀಡಿದರು.

ತೆರಿಗೆ ಪಾವತಿಯನ್ನು ಆನ್‌ಲೈನ್ ವ್ಯಾಪ್ತಿಗೆ ತಂದಿರುವ ಕಾರಣ ಬಾಕಿ ಉಳಿಸಿಕೊಂಡವರು ಬಾಕಿ ಪಾವತಿಸಿಯೇ ಈ ವರ್ಷದ ತೆರಿಗೆ ಕಟ್ಟಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.‌

ಬಾಕಿ ತೆರಿಗೆ ಪಾವತಿ ವಿಚಾರದಲ್ಲಿ‌ ಯಾವುದೇ ಹೊಂದಾಣಿಕೆಯಿಲ್ಲ.‌ ಎಲ್ಲ ಜೋನಲ್ ಅಧಿಕಾರಿಗಳು ಈ ಬಗ್ಗೆ ಗಂಭೀರತೆ ಹೊಂದಿ‌ ತೆರಿಗೆ ಪಾವತಿಗೆ ಜನರನ್ನು ಓಲೈಸಬೇಕು. ಅಥವಾ ಇದಕ್ಕೆ ಇತರೆ ಮಾರ್ಗವಿದ್ದರೆ ಸೂಚಿಸಿ ಎಂದು ಹೇಳಿದರು.
ತೆರಿಗೆ ಪಾವತಿಯಾಗದಿದ್ದರೆ ಹೆಚ್ಚು ದಂಡ ಪ್ರಯೋಗಕ್ಕೆ ಅವಕಾಶವಿದ್ದರೆ ಪ್ರಯೋಗಿಸಿ. ಈ ಬಾರಿ ತೆರಿಗೆ ದಾಖಲೆ ನಿರ್ಮಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಆಯಾ ವಲಯಗಳ ಹಣಕಾಸು ಹಾಗೂ ಇತರೆ ಕಾಮಗಾರಿಗಳ ಮಾಹಿತಿಯನ್ನು ಪಡೆದರು.
ಮೇಯರ್ ಸಂಪತ್ ರಾಜ್, ಆಯುಕ್ತ ಮಂಜುನಾಥ್ ಪ್ರಸಾದ್ ಇದ್ದರು.

ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಜನ ಬೆಂಬಲವಿದೆ: ಸಿಎಂ ಹರ್ಷ

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಜನ ಸಂಪೂರ್ಣ ಸಹಮತ ನೀಡಿದ್ದಾರೆ. ನಮ್ಮ ಸರ್ಕಾರವನ್ನ ರಾಜ್ಯದ ಜನ ಬೆಂಬಲಿಸಿದ್ದಾರೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು,ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಾಗಿ ಪ್ರಚಾರ ಮಾಡಲಿಲ್ಲ. ಬಿಜೆಪಿಯವರು ತಂಡ ರಚಿಸಿಕೊಂಡು ಪ್ರಚಾರ ಮಾಡಿದರು. ಬಿಜೆಪಿ ನಗರಪ್ರದೇಶದಲ್ಲಿ ಮುಂದಿದೆ ಎನ್ನುತ್ತಿದ್ದರು. ಆದರೇ ಬಿಜೆಪಿ ನಗರ ಪ್ರದೇಶಗಳಲ್ಲಿ ಹಿನ್ನಡೆ ಅನುಭವಿಸಿದೆ ಎಂದರು.

ನಗರ ಪ್ರದೇಶದ ಜನತೆಗೆ ಬಿಜೆಪಿ ಕಡೆಗೆ ಹೆಚ್ಚಿನ ಒಲವು ಇದೆ ಎನ್ನುವ ಭಾವನೆ ಮೊದಲಿನಿಂದಲೂ ಇದೆ. ಆದರೆ ಇದೀಗ ನಗರ ಪ್ರದೇಶದಲ್ಲೂ ಬಿಜೆಪಿ ಒಲವು ಕಡಿಮೆ ಆಗುತ್ತಿದೆ ಎಂದು ಇವತ್ತಿನ ಫಲಿತಾಂಶದ ಮೂಲಕ ಪರಾಮರ್ಶಿಸಬಹುದು ಎಂದು ಹೇಳಿದರು.
ಬಿಜೆಪಿ ನಾಯಕರು ಸರ್ಕಾರ ಇದ್ಯಾ, ಉತ್ತರ ಕರ್ನಾಟಕ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಸಮ್ಮಿಶ್ರ ಸರ್ಕಾರವನ್ನ ಅಭದ್ರ ಸರ್ಕಾರ ಎಂಬ ಭಾವನೆ ಮೂಡಿಸಲು ಹೊರಟಿದ್ದಾರೆ. ಆದರೆ ಜನರು ನಮಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.

ನಾವು ಜಿಲ್ಲಾವಾರು ಪ್ರವಾಸ ಮಾಡಲಿಲ್ಲ.ಜನರಲ್ಲಿ ಮನವಿ ಮಾಡಿದ್ದೇವೆ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಸಹಮತ ನೀಡಿದ್ದಾರೆ ಎಂದರು.

100 ದಿನಗಳ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಮೈತ್ರಿ ಸರ್ಕಾರದ ಆಡಳಿತವನ್ನು ಜನತೆ ಬೆಂಬಲಿಸಿದ್ದಾರೆ. ಮತದಾರರರಿಗೆ ನಾನು ಗೌರವಪೂರ್ವ ವಂದನೆಗಳನ್ನು ಎರಡು ಪಕ್ಷದ ಪರವಾಗಿ ಸಲ್ಲಿಸಲು ಬಯಸುತ್ತೇನೆ. ಮುಖಂಡರು ನಿರ್ಧರಿಸುತ್ತಾರೆ
ಚುನಾವಣಾ ಫಲಿತಾಂಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಕಡೆ ಗೊಂದಲ ಪ್ರಶ್ನೆಯೇ ಇಲ್ಲ. ಅಲ್ಲಿನ ಕಾಂಗ್ರೆಸ್ –ಜೆಡಿಎಸ್ ನಾಯಕರು ನಿರ್ಧರಿಸುತ್ತಾರೆ ಎಂದು ಸಿಎಂ ಸ್ಪಷ್ಟನೆ ನೀಡಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವುದಕ್ಕೆ ಪ್ರಯತ್ನಿಸುತ್ತೇವೆ. ಬಿಜೆಪಿಯವರು ದೊಡ್ಡ ಕನಸು ಕಾಣುತ್ತಿದ್ದಾರೆ ಒಳ್ಳೆಯದಾಗಲಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ
ವ್ಯಂಗ್ಯವಾಡಿದರು.

ಉತ್ತರ ಕರ್ನಾಟಕಕ್ಕೆ ಪ್ರವಾಸಕ್ಕೆ ಹೋಗಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಬಿಎಸ್‍ವೈ ಯಾವ ಯಾವ ಜಿಲ್ಲೆಗೆ ಪ್ರವಾಸಕ್ಕೆ ಹೋಗಿದ್ದರು, ಅದನ್ನ ಹೇಳ್ತಿನಿ. ಎಲ್ಲಾ ದಾಖಲೆಗಳನ್ನ ಇಡುತ್ತೇನೆ ಎಂದು ಅವರಿಗೆ ತಿರುಗೇಟು ನೀಡಿದರು.

ಯಡಿಯೂರಪ್ಪ, ಡಿವಿಎಸ್ ಹಾಗೂ ಜಗದೀಶ್​ ಶೆಟ್ಟರ್ ಸಿಎಂ ಆಗಿದ್ದಾಗ ಮೊದಲ ನೂರು ದಿನಗಳಲ್ಲಿ ಎಲ್ಲೆಲ್ಲಿ ಪ್ರವಾಸ ಮಾಡಿದ್ದಾರೆ. ನಾನು ಎಲ್ಲೆಲ್ಲಿ ಪ್ರವಾಸ ಮಾಡಿದ್ದೇನೆ ದಾಖಲೆ ಇಡುತ್ತೇನೆ ಎಂದರು.

ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಅಧಿಕಾರಿಗಳು ಕೆಲಸ ಮಾಡದೇ ಇರಲಿ ಎಂದು ಹೀಗೆ ಹೇಳಿಕೆ ಕೊಡ್ತಿದ್ದಾರೆ. ಆದ್ರೆ ಅಧಿಕಾರಿಗಳಿಗೆ ಚಾಟಿ ಬೀಸೋದು ನಮಗೆ ಗೊತ್ತು. ಯಡಿಯೂರಪ್ಪ ಶ್ವೇತ ಪತ್ರ ಹೊರಡಿಸಿ ಎನ್ನುತ್ತಿದ್ದಾರೆ. ಅವರಿಗೆ ಕೇಸರಿ ಪತ್ರ ಬೇಕಾದ್ರು ಹೊರಡಿಸ್ತೇವೆ. ಸರ್ಕಾರದ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿದೆ ಎಂದರು.

ಇನ್ನು ಜಾರಕಿಹೊಳಿ ಸಹೋದರರ ಬಗ್ಗೆ ಮಾತನಾಡಿದ ಸಿಎಂ, ಬೆಳಗಾವಿ ರಾಜಕಾರಣವೇ ಬೇರೆ. ಜಾರಕಿಹೊಳಿ ಸಹೋದರರು ಮೊದಲಿನಿಂದಲೂ ಪಕ್ಷೇತರ ಶೈಲಿಯಲ್ಲೇ ಚುನಾವಣೆ ಎದುರಿಸಿ ಗೆದ್ದು ಬರುತ್ತಿದ್ದಾರೆ. ‌ಆದರೆ ಜಾರಕಿಹೊಳಿ ಸಹೋದರರ ಪೈಕಿ ರಮೇಶ್ ಜಾರಕಿಹೊಳಿ ಸಚಿವರಾಗಿದ್ದಾರೆ‌‌. ಆದರೆ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎಂದು ಬಿಜೆಪಿ ನಾಯಕರು ಪಟ್ಟಿ ಹಿಡಿದುಕೊಂಡು ಕನಸು ಕಾಣುತ್ತಿದ್ದಾರೆ. ಅವರ ಯಾವ ಪಟ್ಟಿಯೂ ಸಹಜವಲ್ಲ. ಬಿಜೆಪಿಯವರ ಕನಸು ನನಸಾಗಲ್ಲ ಎಂದು ಲೇವಡಿ ಮಾಡಿದರು.