ರಾತ್ರಿ ಹತ್ತು ಗಂಟೆಯಾದರೂ ಮುಂದುವರಿದ ಮುಖ್ಯಮಂತ್ರಿಗಳ ಜನತಾದರ್ಶನ!

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಅಧಿಕೃತವಾಗಿ ಪ್ರಾರಂಭಿಸಿದ ಜನತಾದರ್ಶನ ಕಾರ್ಯಕ್ರಮ ರಾತ್ರಿ ಗಂಟೆ ಹತ್ತಾದರೂ ಮುಂದುವರೆದಿತ್ತು.

ಸುಮಾರು1600 ಕ್ಕೂ ಹೆಚ್ಚು ಅರ್ಜಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಖುದ್ದು ಮಾತನಾಡಿ, ಪರಿಹಾರ ಒದಗಿಸಲು ನಿರ್ದೇಶನ ನೀಡಿದರು.

ಮಧ್ಯಾಹ್ನ12.15ಕ್ಕೆ ಪ್ರಾರಂಭವಾದ ಜಂತಾದರ್ಶನದಲ್ಲಿ ಮುಖ್ಯಮಂತ್ರಿಗಳು ಮೊದಲಿಗೆ ವಿಕಲಚೇತನರ ಅಹವಾಲುಗಳನ್ನು ಅವರು ಕುಳಿತಿದ್ದಲ್ಲಿಗೆ ತೆರಳಿ ಆಲಿಸಿದರು. ನಂತರ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ10ಕ್ಕೂ ಹೆಚ್ಚು ಜಿಲ್ಲಾಧಿಕಾರಿ ಗಳು, ಪೊಲೀಸ್ ವರಿಷ್ಠಾಧಿಕಾರಿ ಗಳು, ಬಿಡಿಎ, ಬಿಬಿಎಂಪಿ, ಬಿಡಬ್ಲ್ಯೂಎಸ್ ಎಸ್ ಬಿ, ವಿಕಲಚೇತನರ ಕಲ್ಯಾಣ ಇಲಾಖೆ, ಅಂಬೇಡ್ಕರ್, ದೇವರಾಜ ಅರಸು, ವಾಲ್ಮೀಕಿ, ಅಲ್ಪಸಂಖ್ಯಾತ ರ ಅಭಿವೃದ್ಧಿ ನಿಗಮಗಳು, ರಾಜೀವ್ ಗಾಂಧಿ ವಸತಿ ನಿಗಮ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿ ಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡರು.

ವೈದ್ಯಕೀಯ ಚಿಕಿತ್ಸೆಗೆ ನೆರವು ಕೋರಿ ಬಂದವರಿಗೆ ವಿವಿಧ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಗಳೇ ಸ್ವತಃ ಮಾತನಾಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

ಖಾಸಗಿ ಸಾಲದ ಮೂಲಕ ಶೋಷಣೆ, ವೈದ್ಯಕೀಯ ನೆರವು, ಆರ್ ಟಿ ಈ ಸಮಸ್ಯೆ, ಉದ್ಯೋಗ ಕ್ಕಾಗಿ ಮನವಿ, ವಿವಿಧ ನೆರವು ಕೋರಿ ಬಂದ ವಿಕಲಚೇತನರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಯಿತು. ಅರ್ಜಿಗಳ ನೋಂದಣಿ, ಅಹವಾಲು ಸಲ್ಲಿಸಲು ಬಂದವರಿಗೆ ಸೂರು, ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕುಡಿಯುವ ನೀರು, ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಅಧಿಕೃತ ಚಾಲನೆ!

ಬೆಂಗಳೂರು: ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು 12 ವರ್ಷದ ಹಿಂದೆ ನಡೆಸುತ್ತಿದ್ದ ಮಾದರಿಯ ವ್ಯವಸ್ಥಿತ ಜನತಾದರ್ಶನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ಮೈತ್ರಿ ಸರ್ಕಾರ 100 ದಿನ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಜನರ ಕಷ್ಟಗಳನ್ನು ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಪ್ರತಿ ಶನಿವಾರ ಬೆಂಗಳೂರಿನಲ್ಲಿ ಇರುವಾಗ 12 ವರ್ಷಗಳ ಹಿಂದಿನಂತೆ ಪರಿಣಾಮಕಾರಿ ಜನತಾದರ್ಶನ ನಡೆಸುವುದಾಗಿ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಈ ನೂರು ದಿನಗಳಅವಧಿಯಲ್ಲಿ ಪ್ರತಿ ದಿನ ಜನತಾ ದರ್ಶನ ನಡೆಸಿದ್ದೇನೆ; ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಇಂದಿನಿಂದ ಪ್ರತಿ ಶನಿವಾರ ಮಾತ್ರ ಜನತಾ ದರ್ಶನ ನಡೆಸಲಾಗುವುದು. ಇತರ ದಿನಗಳಲ್ಲಿ ಸರ್ಕಾರದ ಇತರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಶನಿವಾರ ಜನತಾ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರ ಕಷ್ಟಗಳನ್ನು ಖುದ್ದು ವಿಚಾರಿಸುವೆ. ರಾತ್ರಿ ಗಂಟೆ ಹನ್ನೊಂದಾದರೂ ಸರಿ, ಎಲ್ಲರ ಸಮಸ್ಯೆ ಆಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಇದಲ್ಲದೆ ತಿಂಗಳಿಗೊಮ್ಮೆ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಈ ಸಂದರ್ಭದಲ್ಲಿಅಧಿಕಾರಿಗಳೊಂದಿಗೆ ಸಭೆ ನಡೆಸುವುದಲ್ಲದೆ, ಸಾರ್ವಜನಿಕರ ಸಮಸ್ಯೆ ಆಲಿಸುವೆ; ಅರ್ಧ ದಿನವನ್ನು ರೈತರಿಗೆ ಆಧುನಿಕ ಕೃಷಿ ಪದ್ಧತಿಯಅರಿವು ಮೂಡಿಸುವುದಕ್ಕಾಗಿ ಮೀಸಲಿಡುವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಜಿಲ್ಲಾಧಿಕಾರಿಗಳೂ ತಾಲ್ಲೂಕಿಗೆ ಭೇಟಿ ನೀಡಿ ನಿಗದಿತ ದಿನದಂದು ಸಾರ್ವಜನಿಕ ಕುಂದು ಕೊರತೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಗೌರಿಶಂಕರ್ ಅವರು ಮಠದ ಪರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಗು ಸಂತ್ರಸ್ತರ ನೆರವಿಗಾಗಿ 11 ಲಕ್ಷ ರೂ.ಗಳ ದೇಣಿಗೆ ನೀಡಿದರು. ಇದಲ್ಲದೆ ವಿವಿಧ ಖಾಸಗಿ ಸಂಸ್ಥೆಗಳು, ಶಾಲಾ ಮಕ್ಕಳು, ಗ್ರಾಮಸ್ಥರು ಯಥಾಶಕ್ತಿ ದೇಣಿಗೆ ನೀಡಿರುವುದನ್ನು ಮುಖ್ಯಮಂತ್ರಿಗಳು ಕೃತಜ್ಞತೆಯಿಂದ ಸ್ಮರಿಸಿದರು.

ಸೆಪ್ಟೆಂಬರ್ 10 ರಿಂದ ಉತ್ತರ ಕರ್ನಾಟಕ ಪ್ರವಾಸ:
ಮುಖ್ಯಮಂತ್ರಿಗಳು ಸೆಪ್ಟೆಂಬರ್ 10 ರಿಂದ 15 ರ ವರೆಗೆ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ಜನತಾದರ್ಶನ ವ್ಯವಸ್ಥೆ:
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ ಜನತಾದರ್ಶನಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಸೂರು, ಆಸನ ವ್ಯವಸ್ಥೆ ಮಾಡಲಾಗಿದೆ. ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ; ಕುಡಿಯುವ ನೀರು, ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಜೊತೆಗೆ ಪ್ರತಿಯೊಬ್ಬರಿಗೂ ಟೋಕನ್ ನೀಡಿ, ವ್ಯವಸ್ಥಿತವಾಗಿ ಜನತಾದರ್ಶನ ಏರ್ಪಡಿಸಲು ಕ್ರಮ ವಹಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳೂ ಸ್ಥಳದಲ್ಲಿದ್ದು, ಜನರ ಸಮಸ್ಯೆಗಳಿಗೆ ಸಾಧ್ಯವಾದಷ್ಟೂ ಸ್ಥಳದಲ್ಲೇ ಪರಿಹಾರ ನೀಡಲು ಕ್ರಮ ವಹಿಸಲಾಗುತ್ತಿದೆ.

ಪುತ್ರನ ಕಂಕಣಭಾಗ್ಯಕ್ಕೆ ಅಮರಾವತಿಗೆ ಭೇಟಿ ನೀಡಿದರಾ ಸಿಎಂ ಕುಮಾರಸ್ವಾಮಿ ದಂಪತಿ?

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇಂದು ಕುಟುಂಬ ಸಮೇತ ಅಮರಾವತಿಗೆ ಭೇಟಿ ನೀಡುತ್ತಿದ್ದಾರೆ. ಕನಕ ದುರ್ಗಾದೇವಿ ದರ್ಶನ ಮಾಡುತ್ತಿದ್ದಾರೆ.ಅರೆ ಇದೇನು ಮತ್ತೆ ಸಿಎಂ ಟೆಂಪಲ್ ರನ್ ಅನ್ಕೊಂಡ್ರಾ ಹಾಗಾದ್ರೆ ನಿಮ್ಮ ಊಹೆ ತಪ್ಪು.ರಾಜಕೀಯ ಕಾರಣಕ್ಕೂ ಅಲ್ಲ ಪುತ್ರನ ಹೊಸ ಸಿನಿಮಾದ ಕಥೆಗೂ ಈ ಭೇಟಿ ಮಾಡುತ್ತಿಲ್ಲ.

ಹೌದು ಕುಮಾರಸ್ವಾಮಿ ದಂಪತಿ ಆಂಧ್ರಪ್ರದೇಶದ ಅಮರಾವತಿಗೆ ತೆರಳುತ್ತಿದೆ.ಅಲ್ಲಿನ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರೋ ಹಿನ್ನೆಲೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದು ಸಿಎಂ ಟೆಂಪಲ್ ರನ್ ನ ಮುಂದುವರಿದ ಭಾಗ ಅಲ್ಲವೇ ಅಲ್ಲ,ಯಾವುದೇ ಹರಕೆ ತೀರಿಸಲೂ ಹೆಚ್ಡಿಕೆ ದಂಪತಿ ಹೋಗುತ್ತಿಲ್ಲ,ಯಾವುದೇ ರಾಜಕೀಯ ಕಾರಣಕ್ಕೂ ಅಲ್ಲ ಈ ಭೇಟಿ,ತೃತೀಯ ರಂಗದ ಬಗ್ಗೆಯೂ ಇಲ್ಲ ಇಲ್ಲಿ ಚರ್ಚೆ,ಆದರೂ ಅತೀವ ಸಂತಸದಲ್ಲಿ ಹೋಗಿದ್ದಾರೆ ಸಿಎಂ ಕುಮಾರಸ್ವಾಮಿ,ಬಹುದಿನಗಳ ಸಿಎಂ ದಂಪತಿಗಳ ಕನಸು ನನಾಗಿಸಲು ಈ ಪ್ರಯಾಣ ಕೈಗೊಳ್ಳಲಾಗಿದೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸವೆ.

ಆ ಕನಸು ಯಾವುದು ಗೊತ್ತಾ ?

ಈ ಸಂತಸದ ಸುದ್ದಿ ಪುತ್ರ ನಿಖಿಲ್ ಗೆ ಹುಡುಗಿ ನೋಡಲು ಹೋಗುತ್ತಿದ್ದಾರೆ ಸಿಎಂ ಕುಮಾರಸ್ವಾಮಿ. ಆಂದ್ರದಲ್ಲಿರುವ ಕರ್ನಾಟಕ ಮೂಲದವರ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ. ಇದೇ ಕಾರಣಕ್ಕೆ ಇಂದು ಆಂಧ್ರದತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಇಂದು ಅನೌಪಚಾರಿಕ ಮಾತುಕತೆ ನಡೆಯಲಿದೆ ಮುಹೂರ್ತ ನೋಡಿ ಎರಡೂ ಕುಟುಂಬದವರು ಸೇರಿ ಮತ್ತೊಮ್ಮೆ ಮಾತುಕತೆ ನಡೆಸಲಿದ್ದಾರೆ ಮುಂದಿನ ತಿಂಗಳು ದೇವೇಗೌಡರ ಕುಟುಂಬ ಸದಸ್ಯರೆಲ್ಲ ತೆರಳಿ ಮಾತುಕತೆ ನಡೆಸಲಿದ್ದಾರೆ ಎನ್ನುವ ಮಾಹಿತಿ ಸಿಎಂ ಕುಟುಂಬ ಮೂಲಗಳಿಂದ ತಿಳಿದುಬಂದಿದೆ.


ಆಂಧ್ರ ಭೇಟಿ ಹಿನ್ನಲೆ ಸಹಜವಾಗಿಯೇ ಅಲ್ಲಿನ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ.ಮಧ್ಯಾಹ್ನದ ಒಳಗೆ ಕನಕದುರ್ಗಾದೇವಿ ದರ್ಶನ ಮಾಡಿ ನಂತರ ಅನೌಪಚಾರಿಕವಾಗಿ ಹುಡುಗಿ ನೋಡುವ ಕಾರ್ಯವನ್ನು ಗೌಪ್ಯವಾಗಿ ನಡೆಸಲಾಗುತ್ತದೆ ಎನ್ನಲಾಗಿದೆ.

ಸರ್ಕಾರಕ್ಕೆ ನೂರು ದಿನ, ನೂರಾರು ಸವಾಲುಗಳು!

ಬೆಂಗಳೂರು: ಅನಿರೀಕ್ಷೀತವಾಗಿ ರಾಜ್ಯದ ಗದ್ದುಗೆಗೆ ಏರಿದ ಜೆಡಿಎಸ್-ಕಾಂಗ್ರೇಸ್ ಮೈತ್ರಿ ಸರ್ಕಾರ ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರ ರಾಷ್ಟ್ರ ಮಟ್ಟದಲ್ಲೂ ಎಡ ಪಕ್ಷಗಳ ಮಹಾತ್ವಾಕಾಂಕ್ಷೆಗೆ ಹಾಲೇರೆದಿತ್ತು. ಇದೀಗ ಹಲವು ಸವಾಲುಗಳ ನಡುವೆಯೂ ಮೈತ್ರಿ ಸರ್ಕಾರ ಶತದಿನದ ಸಂಭ್ರಮದಲ್ಲಿದೆ.

ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಪಡೆದು ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟು 37 ಸ್ಥಾನ ಪಡೆದ ಜೆಡಿಎಸ್ ಹಾಗೂ 78 ಸ್ಥಾನ ಪಡೆದ ಕಾಂಗ್ರೆಸ್ ಜೊತೆಗೂಡಿ ಮೈತ್ರಿ ಸರ್ಕಾರ ರಚನೆ ಮಾಡಿದವು. ಹಲವು ಆತಂಕಗಳು, ಬಿಜೆಪಿಯ ಪ್ರಬಲ ವಿರೋಧದ ನಡುವೆಯೂ ಮೈತ್ರಿ ಸರ್ಕಾರ ಇದೀಗ ಶತದಿನ ಪೂರೈಸಿದೆ.

ಮೈತ್ರಿ ಸರ್ಕಾರದ ಸಾಧನೆಗಳು:

* ಹಲವು ಗೊಂದಲಗಳ ನಡುವೆಯೂ ಮೈತ್ರಿ ಸರ್ಕಾರ ರಾಜ್ಯದ ರೈತರು ಸಹಕಾರ ಸಂಘ ಮತ್ತು ವಾಣಿಜ್ಯ ಬ್ಯಾಂಕ್ ಗಳಲ್ಲಿ ಮಾಡಿರುವ ಬೆಳೆ ಸಾಲ ಮನ್ನಾ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

* ಲೇವಾದೇವಿದಾರರು, ಗಿರಿವಿದಾರರಿಂದ ಬಡವರಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಖಾಸಗಿ ಸಾಲ ಮನ್ನಾ ಮಾಡಿದೆ.

* ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ವಿರೋಧದ ನಡುವೆಯೂ ಹೊಸ ಬಜೆಟ್ ಮಂಡನೆ ಮಾಡಿದೆ.

ಸರ್ಕಾರ ಎದುರುಸಿದ ಸವಾಲುಗಳು

ಕಾಂಗ್ರೆಸ್ ನಾಯಕರ ಅಸಹಕಾರ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ವಿರೋಧ ಪಕ್ಷ ಬಿಜೆಪಿಗಿಂತಲೂ ಕಾಂಗ್ರೆಸ್ ಪಕ್ಷದ ಕೆಲ ನಾಯಕರೇ ದೊಡ್ಡ ವಿರೋಧ ಪಕ್ಷವಾಗಿ ಪರಿಣಮಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮೈತ್ರಿ ಸರ್ಕಾರದ ಸೂತ್ರದಾರ ಸಚಿವ ಡಿ.ಕೆ.ಶಿವಕುಮಾರ್ ಪದೇ ಪದೇ ರಾಜ್ಯದ ಜನರಿಗೆ ಹೇಳುತ್ತಿದ್ದರೂ ಕೂಡ, ಕಾಂಗ್ರೆಸ್‍ನ ಹಲವು ನಾಯಕರು ಮೈತ್ರಿ ಸರ್ಕಾರದ ಕುರಿತು ಗೊಂದಲಗಳನ್ನು ಸೃಷ್ಠಿ ಮಾಡುತ್ತಲೇ ಬರುತ್ತಿದ್ದಾರೆ. ಈ ಗೊಂದಲಗಳಿಗೆ ತೆರೆ ಎಳೆಯುವುದೇ ಮೈತ್ರಿ ಸರ್ಕಾರಕ್ಕೆ ದೊಡ್ಡ ಸವಾಲಗಿದೆ.
ಪ್ರಕೃತಿಯ ಮುನಿಸು: ಕೊಡಗು ಜಿಲ್ಲೆಯಲ್ಲಿ ಅತೀವೃಷ್ಠಿಯಿಂದ ಸಾಕಷ್ಟು ಅನಾಹುತಗಳಾಗಿದ್ದು, ಕೊಡಗಿನ ಮರು ನಿರ್ಮಾಣವೇ ಆಗಬೇಕಿದೆ. ಮತ್ತೊಂದೆಡೆ ರಾಜ್ಯದ ಹಲವು ಜಿಲ್ಲೆಗಳು ಅನಾವೃಷ್ಠಿಯಿಂದ ತೊಂದರೆಗೀಡಾಗಿವೆ.

ಮುಖ್ಯಮಂತ್ರಿಗಳ ವಿವಾಧಿತ ಹೇಳಿಕೆಗಳು: ಉತ್ತರ ಕರ್ನಾಟಕದ ಜನರು ಜೆಡಿಎಸ್ ಗೆ ಮತ ಹಾಕಿಲ್ಲ ಹೀಗಾಗಿ ಮೈತ್ರಿ ಸರ್ಕಾರ ರಚನೆಯಾಗಿದೆ. ಮೈತ್ರಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಜೆಡಿಎಸ್ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸುವುದು ಹೇಗೆ ಎಂಬ ಸಿಎಂ ಹೇಳಿಕೆ ಪ್ರತ್ಯೇಕ ಉತ್ತರ ಕರ್ನಾಟಕ ಕೂಗು ಸೃಷ್ಠಿಯಾಗುವಂತೆ ಮಾಡಿತು.


ಮೈತ್ರಿ ಸರ್ಕಾರದ ಮುಂದಿರುವ ಸವಾಲುಗಳು

* ಜೆಡಿಎಸ್-ಕಾಂಗ್ರೆಸ್ ನಾಯಕರ ಮಧ್ಯೆ ಸಮನ್ವಯ ಕಾಯ್ದುಕೊಳ್ಳುವುದು.
* ಚುನಾವಣೆ ವೇಳೆ ಕಾಂಗ್ರೆಸ್, ಜೆಡಿಎಸ್ ಮಾಡಿರುವ ಘೋಷಣೆಗಳನ್ನು ಈಡೇರಿಸುವುದು.
* ಶತಮಾನದ ಮಹಾಮಳೆಗೆ ಕುಸಿದಿರುವ ಕೊಡಗನ್ನು ಮರು ನಿರ್ಮಾಣ ಮಾಡುವುದು.
* ಬರದಿಂದ ಬಳಲುತ್ತಿರುವ ಜಿಲ್ಲೆಗಳಲ್ಲಿ ಭರವಸೆ ಮೂಡಿಸುವುದು.
* ಆಡಳಿತ ವರ್ಗವನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು.

ಒಟ್ಟಾರೆಯಾಗಿ ಮೈತ್ರಿ ಸರ್ಕಾರ ಹಲವು ಗೊಂದಲಗಳು ಆತಂಕಗಳ ನಡುವೆಯೂ ನೂರು ದಿನಗಳನ್ನು ಪೂರೈಸಿ ಜನರಲ್ಲಿ ಹಲವು ನಿರೀಕ್ಷೆ ಮೂಡಿಸಿದೆ.

ಯಶಸ್ವಿಯಾಗಿ ನೂರು ದಿನ ಪೂರೈಸಿದ ಸಮ್ಮಿಶ್ರ ಸರ್ಕಾರ: ಡಿಸಿಎಂ ಪರಂ

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಯಾವುದೇ ಗೊಂದಲವಿಲ್ಲದೇ ಐದು ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯವನಿಕಾದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮ್ಮಿಶ್ರ ಸರಕಾರ ಇಂಥ ಸಂವತ್ಸರದಲ್ಲೇ ಬೀಳಲಿದೆ ಎಂದು ವಿರೋಧ ಪಕ್ಷದವರು ಭವಿಷ್ಯ ನುಡಿದಿದ್ದರು. ಆದರೆ, ನಾವು ೧೦೦ ದಿನಗಳನ್ನೇ ಪೂರೈಸಿದ್ದೀವಿ. ಈ ಸರಕಾರ ಸುಭದ್ರವಾಗಿದ್ದು ಐದು ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದರು.

ಈ ನೂರು ದಿನಗಳಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮ ಅನುಷ್ಠಾನ ಮಾಡಿದ್ದೇವೆ. ಕಳೆದ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಘೋಷಿಸಿದ್ದ ಆಯವ್ಯಯವನ್ನು ಮುಂದುವರೆಸಿದ್ದೇವೆ. ಜೊತೆಗೆ ಹೊಸ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಅಳವಡಿಸಿದ್ದೇವೆ. ಈ ಸರಕಾರದ ಪ್ರಮುಖ ಕಾರ್ಯಕ್ರಮವಾದ ರೈತರ 31 ಸಾವಿರ ಕೋಟಿ ರು. ಸಾಲಮನ್ನಾ ಅನುಷ್ಠಾನಕ್ಕೆ ಸಿದ್ಧಗೊಂಡಿದೆ. ಇದರ ಜೊತೆಗೆ
ಖಾಸಗಿ ಸಾಲ, ಕೈ ಸಾಲವನ್ನೂ ಸಹ ಮನ್ನಾ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಬಹಳಷ್ಟು ರೈತರು ಕೈಸಾಲ ತೀರಿಸಲು ಹೈರಾಣಾಗಿದ್ದಾರೆ. ಅದಕ್ಕಾಗಿಯೇ ಕೈಸಾಲ ಮನ್ನಾ ಮಾಡಲು ಹೊರಟಿ್ದದ್ದೇವೆ. ಈ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.

13 ಜಿಲ್ಲೆಗಳಲ್ಲಿ ಬರವಿದ್ದರೆ, ಕೊಡಗು, ಮಡಿಕೇರಿ, ಚಿಕ್ಕಮಗಳೂರು, ಮಂಗಳೂರಿನಲ್ಲಿ ಅತಿವೃಷ್ಠಿ ಎದುರಾಗಿ, ಸಾಕಷ್ಟು ಜನ ನಿರಾಶ್ರಿತರಾದರು. ಇವರ ನೆರವಿಗೆ ರಾಜ್ಯ ಸರಕಾರ ಕೂಡಲೇ ಧಾವಿಸಿ, ಎಲ್ಲ ವ್ಯವಸ್ಥೆ ಮಾಡಿದೆ. ಆದರೆ ಕೇಂದ್ರ ಸರಕಾರದಿಂದ ಸಣ್ಣ ಹಣಕಾಸಿನ‌ ನೆರವೂ ನಮಗೆ ಸಿಕ್ಕಿಲ್ಲ. ಕೇರಳ ನೆರೆ ಹಾವಳಿಗೆ ಪ್ರಧಾನಿ ಖುದ್ದು ವೈಮಾನಿಕ‌ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿದರು. ಆದರೆ ಕೊಡಗನ್ನು‌ ನಿರ್ಲಕ್ಷಿಸಿದರು ಎಂದರು.

ಕೇಂದ್ರ ಗೃಹ ಸಚಿವರ ಭೇಟಿ:
ಕೊಡಗು ನೆರೆ ಪರಿಸ್ಥಿತಿಗೆ ನೆರವು ನೀಡುವಂತೆ ಗುರುವಾರ ಮುಖ್ಯಮಂತ್ರಿ ಅವರೊಂದಿಗೆ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಹಣಕಾಸಿನ‌ ನೆರವಿಗೆ ಮನವಿ‌ ಮಾಡಲಾಗುವುದು. ಈಗಾಗಲೇ ಎರಡು ಸಾವಿರ ಕೋಟಿ ರು. ಕೇಳಿದ್ದೇವೆ ಎಂದರು.

ನಗರಭಿವೃದ್ಧಿ ಸಚಿವರಾದ ಬಳಿಕ‌ ಸಾಕಷ್ಟು ಕೆಲಸ ಮಾಡಲಾಗಿದೆ. 8 ಕಿ.ಮೀ. ಅನಧಿಕೃತ ಕೇಬಲ್ ತೆರವು, ಫ್ಲೆಕ್ಸ್ ತೆರವು, ನಾಡಪ್ರಭು ಕೆಂಪೇಗೌಡ ಲೇಔಟ್ ನಿವೇಶನ ಹಂಚಿಕೆ ಪ್ರಕ್ರಿಯೆ ಸೇರಿ ಹಲವು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಹೊಸದಾಗಿ
ಪೆರಿಫರಲ್ ರಿಂಗ್ ರಸ್ತೆ ಮಾಡಲು ತ್ವರಿತ ಗತಿಯಲ್ಲಿ ಕೆಲಸ ಕೈಗೊಂಡಿದ್ದು, ೧೩.೫೦೦ ಕೋಟಿ ರು. ವೆಚ್ಚದಲ್ಲಿ ಮಾಡಲಾಗುತ್ತಿದೆ. ಜತೆಗೆ ಎರಡು ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಡಿಪಿಆರ್‌ ಆಗಿದೆ ಎಂದು ವಿವರಿಸಿದರು.‌

ಜಿಲ್ಲೆಗಳಲ್ಲಿನ‌ ಕೆಲಸಗಳಿಗೆ ಚುರುಕು‌ ಮುಟ್ಟಿಸಲು ಡಿಸಿ ಹಾಗೂ ಸಿಇಒಗಳ ಸಭೆ ಮಾಡಲಾಯಿತು. ಒಟ್ಟಾರೆ ಈ 100 ದಿನದಲ್ಲಿ ರಾಜ್ಯ ಸಮ್ಮಿಶ್ರ ಸರಕಾರ ಸುಗಮವಾಗಿ ನಡೆದಿದೆ ಎಂದರು.

ಬಿಜೆಪಿ ಫೋನ್ ಟ್ರಾಪ್ ಆಗಿಲ್ಲ:
ಯಾವ ರಾಜಕಾರಣಿ ಫೋನ್‌‌ನನ್ನು ಅನಧಿಕೃತವಾಗಿ ಟ್ರಾಪ್ ಮಾಡಲಾಗಿಲ್ಲ ಎಂದು ಪರಮೇಶ್ವರ್ ಅವರು ಸ್ಪಷ್ಟ ಪಡಿಸಿದರು. ಸ್ಥಳೀಯ ಚುನಾವಣೆ ಮುಗಿದ ಬಳಿಕವೇ ಸಚಿವ ಸಂಪುಟ ಹಾಗೂ ನಿಗಮ ಮಂಡಳಿ‌ ಅಧ್ಯಕ್ಷರುಗಳ ನೇಮಕ‌ ಮಾಡಲಾಗುವುದು ಎಂದರು.

ಡ್ಯಾಮೇಜ್ ಕಂಟ್ರೋಲ್:
ಉತ್ತರ ಕರ್ನಾಟಕ ಭಾಗದಲ್ಲಿ‌ ಮಲ್ಲಿಕಾರ್ಜುನ ಖರ್ಗೆ ಅವರನ್ನು‌ ಮಣಿಸಲು ಬಿಜೆಪಿ ಅವರು ಆ ಭಾಗದ ಕಾಂಗ್ರೆಸ್ ನಾಯಕರನ್ನು ತಮ್ಮ‌‌ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ನಲ್ಲಿ ಇಂಥ ನಡವಳಿಕೆ ಇದ್ದರೆ ಡ್ಯಾಮೇಜ್ ಕಂಟ್ರೋಲ್ ಮಾಡಲಾಗುವುದು. ಕಾಂಗ್ರೆಸ್ ಗೆ ಇದೇನು ಹೊಸದಲ್ಲ ಎಂದು ಹೇಳಿದರು.‌

ಹೂವಮ್ಮ ಎನ್ನುತ್ತಿದ್ದ ಬಾಲಕಿಗೆ ಓದಮ್ಮ ಎಂದ ಸಿಎಂ: ಬಾಲಕಿಗೆ ಸಿಕ್ತು ಕುಮಾರ ಹಸ್ತ

ರಾಮನಗರ: ಕೆಆರ್‌ಎಸ್ ನಿಂದ ರಾಮನಗರಕ್ಕೆ ಹೋಗುವ ಮಾರ್ಗ ಮದ್ಯದಲ್ಲಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿಯನ್ನ ನೋಡಿದ ಸಿಎಂ ಕುಮಾರಸ್ವಾಮಿ ಕಾರು ನಿಲ್ಲಿಸಿ ಮಾತನಾಡಿಸಿ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದರು.

ರಾಮನಗರ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೆರಳುತ್ತಿದ್ದರು. ಈ ವೇಳೆ ಕೆ .ಆರ್ .ಸ್ ನಿಂದ ರಾಮನಗರಕ್ಕೆ ಹೋಗುವ ಮಾರ್ಗ ಮದ್ಯದಲ್ಲಿ ಬೆಳಗೊಳ ಗ್ರಾಮದಲ್ಲಿ ರಸ್ತೆ ಬದಿ ಹೂವು ಮಾರುತ್ತ ನಿಂತಿದ್ದ ಶಾಬಾಬ್ತಾಜ್ ಎಂಬ ಪುಟ್ಟ ಬಾಲಕಿಯನ್ನು ಕಾರು ನಿಲ್ಲಿಸಿ ಮಾತನಾಡಿಸಿದರು.

ಇದೇ ವೇಳೆ ಬಾಲಕಿಯ ತಂದೆ ತಮ್ಮನ್ನು ಕಾಣುವಂತೆ ತಿಳಿಸಿದರು. ಅಲ್ಲದೆ, ವಿದ್ಯಾಭ್ಯಾಸಕ್ಕೆ ಸಹಾಯಮಾಡುವುದಾಗಿ ತಿಳಿಸಿದರು.