ಶೌಚಾಲಯ ಬಳಕೆ ಕುರಿತು ಜನರ ಮನೋಭಾವ ಬದಲಿಸಿ: ಕೃಷ್ಣ ಬೈರೇಗೌಡ

ಧಾರವಾಡ: ಸ್ವಚ್ಛ ಭಾರತ ಮಿಷನ್ ಅಡಿ ನಿರ್ಮಿಸಲಾಗಿರುವ ಶೌಚಾಲಯಗಳನ್ನು ಬಳಸಲು ಆಂದೋಲನದ ಮಾದರಿಯಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಜಿ‌ಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷ್ಣ ಬೈರೇಗೌಡ, ಶೌಚಾಲಯ ಬಳಕೆ ಕುರಿತು ಸಾರ್ವಜನಿಕರಲ್ಲಿ ಇರುವ ರೂಢಿ, ಮನೋಭಾವಗಳನ್ನು ಬದಲಾಯಿಸಲು ಮುಂದಾಗಬೇಕು. ಶಿಕ್ಷಣ ಹಾಗೂ ಸಂವಹನ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗವು NRDWP, SDP ಟಾಸ್ಕ್ ಫೋರ್ಸ್ ಮತ್ತಿತರ ಕಾರ್ಯಕ್ರಮಗಳಡಿ ಕೈಗೊಂಡ ಕಾಮಗಾರಿಗಳ ಹಣ ಪಾವತಿಯಲ್ಲಿ ದೀರ್ಘ ಕಾಲೀನ ವಿಳಂಬವಾಗ ಬಾರದು. 2016-17 ರ ಕಾಮಗಾರಿಗಳ ವೆಚ್ಚವು ಮಾರ್ಚ್ 2018 ರವರೆಗೂ ಪಾವತಿಯಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು‌.

ಶೌಚಾಲಯಗಳನ್ನು ಕಟ್ಟಿದ ಬಳಿಕ ಅವುಗಳ ಬಗ್ಗೆ ಹೆಚ್ಚು ಐಇಸಿ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಧಾರವಾಡ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ ಅವರ ಸಲಹೆಗಳನ್ನು ಮತ್ತು ಸರ್ಕಾರೇತರ ಅಭಿವೃದ್ಧಿ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲೆಗೆ ಒಂದು ವಿಶೇಷ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಿ. ಎರಡು ಗ್ರಾ.ಪಂ. ಗಳನ್ನು ಸೇರಿಸಿ ಒಂದು ಕ್ಲಸ್ಟರ್ ಮಾಡಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಬೇಕು. ಹಸಿ ಕಸ, ಒಣ ಕಸ ನಿರ್ವಹಣೆ ವಿಲೇವಾರಿ ಸ್ವಚ್ಚತೆ ಬಗೆಗೆ ಜನರ ಅಧಿಕಾರಿಗಳು ಹೊಸ ಪ್ರಯೋಗಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಚುನಾಯಿತ ಪ್ರತಿನಿಧಿಗಳು ನಮ್ಮ ಹಕ್ಕು,ಕರ್ತವ್ಯಗಳನ್ನು ಅರಿತುಕೊಂಡು ಅಧಿಕಾರಿಗಳಿಂದ ಕೆಲಸ ಪಡೆಯಬೇಕು. ಸಂವಿಧಾನ ಹಾಗೂ ಪಂಚಾಯತರಾಜ್ ಕಾಯಿದೆಯಲ್ಲಿ ಎಲ್ಲ ಅಧಿಕಾರ ಮತ್ತು ಜವಾಬ್ದಾರಿಗಳು ವಿವರಿಸಲ್ಪಟ್ಟಿವೆ.

ನರೇಗಾ ಯೋಜನೆಯಡಿಯಲ್ಲಿ ನಾಲಾ ಅಭಿವೃದ್ಧಿ ಸೇರಿಸಿ ಚೆಕ್ ಡ್ಯಾಂ ಗಳನ್ನು ನಿರ್ಮಿಸುವ ವಿಶೇಷ ಪ್ಯಾಕೇಜ್ ತಯಾರಿಸಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಿ. ಮುಂದಿನ ಗ್ರಾಮಸಭೆಯವರೆಗೂ ಕಾಯಬೇಡಿ. ಜಲಸಂರಕ್ಷಣೆಯ ಕಾರ್ಯ ಆದ್ಯತೆಯ ಮೇಲೆ ನಡೆಯಬೇಕು ಎಂದರು. ಈ ವರ್ಷ ಧಾರವಾಡ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕನಿಷ್ಠ ೧೦೦ ಚೆಕ್ ಡ್ಯಾಂ ಗಳನ್ನಾದರೂ ನಿರ್ಮಿಸಲೇಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಸೂಚಿಸಿದರು.

ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ, ಶಾಸಕರಾದ ಸಿ.ಎಸ್.ಶಿವಳ್ಳಿ, ಸಿ.ಎಂ.ನಿಂಬಣ್ಣವರ್, ಅಮೃತ ದೇಸಾಯಿ, ಜಿ.ಪಂ.ಉಪಾಧ್ಯಕ್ಷ ಶಿವಾನಂದ ಕರಿಗಾರ , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ‌.ಅತೀಕ್, ಜಿ.ಪಂ.ಸಿಇಓ ಸ್ನೇಹಲ್ ರಾಯಮಾನೆ ಮತ್ತಿತರರು ಇದ್ದರು.

ಸಿದ್ಧು ಹಾಗೂ ನನ್ನ ಫೋನ್ ಕದ್ದಾಲಿಕೆ ನಡೆಯುತ್ತದೆ: ಹೊಸ ಬಾಂಬ್ ಸಿಡಿಸಿದ ಬಿಎಸ್ವೈ

ಬೆಂಗಳೂರು: ನನ್ನನ್ನು ಸೇರಿದಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಹಲವು ಮುಖಂಡರ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ನನ್ನ ಫೋನ್ ಸೇರಿದಂತೆ ಬಹಳಷ್ಟು ಮುಖಂಡರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಈ ಹಿಂದೆಯೇ ಇದರ ಬಗ್ಗೆ ಪ್ರಸ್ತಾಪಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ, ಕೂಡಲೇ ಸರ್ಕಾರ ಇದನ್ನು ನಿಲ್ಲಿಸಬೇಕು ಫೋನ್ ಕದ್ದಾಲಿಕೆ ಸಂಬಂಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಫೋನ್ ಕದ್ದಾಲಿಕೆ ಕುರಿತು ಸರಿಯಾದ ರೀತಿಯಲ್ಲಿ ತನಿಖೆಯಾಗದೆ ಇದ್ದರೆ ಈ ಹಿಂದೆ ಫೋನ್ ಕದ್ದಾಲಿಕೆಯಿಂದ ಆದ ಘಟನೆ ಮರುಕಳಿಸಲಿದೆ ಎಂದು ಹೇಳುವ ಮೂಲಕ ರಾಮಕೃಷ್ಣ ಹೆಗಡೆ ಸರ್ಕಾರ ಪತನಗೊಂಡ ಪರಿಸ್ಥಿತಿ ಕುಮಾರಸ್ವಾಮಿ ಸರ್ಕಾರಕ್ಕೆ ಬರಲಿದೆ ಎನ್ನುವ ಎಚ್ಚರಿಕೆ ನೀಡಿದರು.

ಇದೇ ವೇಳೆ ಮಾತನಾಡಿದ ಬಿಎಸ್ವೈ, ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈಹಾಕಲ್ಲ ಆದರೆ ಅವರಾಗಿಯೇ ಕಚ್ಚಾಡಿಕೊಂಡು ಸರ್ಕಾರ ಕುಸಿದರೆ ಅದಕ್ಕೆ ಬಿಜೆಪಿ ಜವಾಬ್ದಾರಿ ಅಲ್ಲ ಎಂದರು.

ಕಾರು ಅಪಘಾತದಲ್ಲಿ ಖ್ಯಾತ ನಟ ನಂದಮುರಿ ಹರಿಕೃಷ್ಣ ದುರ್ಮರಣ!

ಹೈದರಾಬಾದ್‌: ತೆಲಂಗಾಣದ ನಲ್ಗೊಂಡಾ ಅನ್ನೆಪರ್ತಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜಕೀಯ ಮುತ್ಸದ್ಧಿ, ನಟ ನಂದಮೂರಿ ಹರಿಕೃಷ್ಣ (61) ಅವರು ದುರ್ಮರಣ ಹೊಂದಿದ್ದಾರೆ‌.

ಆಪ್ತರೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು
ಹೈದರಾಬಾದ್‌ನಿಂದ ನೆಲ್ಲೂರ್‌ಗೆ  ತೆರಳುತ್ತಿದ್ದ  ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅವಘಡ ಸಂಭವಿಸಿದ್ದು, ಕಾರನ್ನು ಹರಿಕೃಷ್ಣ ಅವರೇ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಅಪಘಾತವಾದ ತಕ್ಷಣ ಸ್ಥಳೀಯರು ಹರಿಕೃಷ್ಣ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಹರಿಕೃಷ್ಣ ಅವರ ನಿಧನದ ವಿಚಾರ ತಿಳಿದ ಬಳಿಕ ಬಾವ ಹಾಗೂ ಆಂಧ್ರ ಸಿಎಂ ಚಂದ್ರ ಬಾಬು ನಾಯ್ಡು ಎಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ. ತೆಲುಗು ಚಿತ್ರರಂಗದ ಹಲವು ಗಣ್ಯರು, ರಾಜಕಾರಣಿಗಳು ಆಸ್ಪತ್ರೆ ಕಡೆಗೆ ಧಾವಿಸುತ್ತಿದ್ದಾರೆ.

ಹರಿಕೃಷ್ಣ ಮೊದಲ ಪತ್ನಿಯ ಮೂವರು ಮಕ್ಕಳಾದ ನಟ ಕಲ್ಯಾಣ್‌ ರಾಮ್‌, ಪುತ್ರಿ ಸುಹಾಸಿನಿ ಮತ್ತು  2ನೇ ಪತ್ನಿಯ ಪುತ್ರ ಜ್ಯೂನಿಯರ್‌ ಎನ್‌ಟಿಆರ್‌ ಅವರನ್ನು ಹರಿಕೃಷ್ಣ ಅಗಲಿದ್ದಾರೆ.

ಅಕ್ರಮ ಡಿನೋಟಿಫಿಕೇಷನ್ ಪ್ರಕರಣ: ಬಿಎಸ್ವೈಗೆ ಬಿಗ್ ರಿಲೀಫ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ರದ್ದು ಮಾಡಿದ್ದು ಈ ಮೂಲಕ ಬಿಎಸ್ವೈ ಗೆ ಬಿಗ್ ರಿಲೀಫ್ ದೊರೆತಂತಾಗಿದೆ.

ರಾಚೇನಹಳ್ಳಿ ಡಿನೋಟಿಫಿಕೇಷನ್ ಸೇರಿ 15 ಡಿನೋಟಿಫಿಕೇಷನ್ ಗಳನ್ನು ಪ್ರಶ್ನಿಸಿ ಸಿರಾಜಿನ್ ಭಾಷಾ ಹಾಗು ಬಾಲಕೃಷ್ಣ ಸಲ್ಲಿಸಿದ್ದ ದೂರುಗಳನ್ನು ಸಂಸದರು, ಶಾಸಕರ ವಿರುದ್ದದ ವಿಶೇಷ ನ್ಯಾಯಾಲಯ ರದ್ದು ಪಡಿಸಿದೆ.

ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಪ್ರಕರಣ ರದ್ದುಮಾಡಿ ಆದೇಶ ಮಾಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್
ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಸಿಬಿಐ ತನಿಖೆಗೆ ಮನವಿ ಮಾಡಿದ್ದರು. ಸಿಬಿಐ ತನಿಖೆ ನಂತರ ವಿಚಾರಣೆ ನಡೆಸಿದ ಸುಪ್ರೀಂ ಪ್ರಕರಣಗಳನ್ನು ರದ್ದು ಮಾಡಿತ್ತು.

ಆದಾಗ್ಯೂ, ಸಿರಾಜಿನ್ ಪಾಷಾ ಸಲ್ಲಿಸಿದ್ದ ದೂರು ಸೆಷನ್ಸ್ ಕೋರ್ಟ್ ನಲ್ಲಿ ಬಾಕಿ ಉಳಿದಿತ್ತು. ಇಂದು ವಿಚಾರಣೆ ನಡೆಸಿದ ಸಂಸದರು, ಶಾಸಕರ ವಿರುದ್ದ ವಿಶೇಷ ನ್ಯಾಯಾಲಯ ಪ್ರಕರಣವನ್ನು ರದ್ದು ಪಡಿಸಿ ಆದೇಶ ನೀಡಿದೆ. ಈ ಮೂಲಕ ಸಿರಾಜಿನ್ ಭಾಷಾ 2011ರಲ್ಲಿ ಸಲ್ಲಿಸಿದ್ದ ಎಲ್ಲಾ ಪ್ರಕರಣಗಳಿಂದ ಬಿಎಸ್ವೈ ಮುಕ್ತರಾಗಿದ್ದಾರೆ.

ಮಳೆ ಹಾನಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ: ಸಿಎಂ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ!

ಬೆಂಗಳೂರು: ಕೊಡಗು ಜಿಲ್ಲೆಯೂ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಮೂರು ತಿಂಗಳಿನಿಂದ ಬಿದ್ದ ಭಾರಿ ಮಳೆಯಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಮೈಸೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಆಗಿರುವ ಹಾನಿಯ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

ಸುಮಾರು 800 ಮನೆಗಳು ಭಾಗಶ: ಹಾನಿಗೊಳಗಾಗಿವೆ. ಇತರೆ ಜಿಲ್ಲೆಗಳಲ್ಲೂ ಸಹ ಹಲವಾರು ಮನೆಗಳು ಹಾನಿಯಾಗಿವೆ ಎಂಬ ವಿಷಯವನ್ನು ಸಭೆಯ ಗಮನಕ್ಕೆ ತರಲಾಯಿತು.
ಪ್ರಾಥಮಿಕ ಅಧ್ಯಯನದ ಪ್ರಕಾರ ಒಟ್ಟಾರೆ 2225 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳು ಹಾನಿಗೊಳಗಾಗಿವೆ 240 ಸೇತುವೆಗಳು ಕುಸಿದಿವೆ, 65 ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ. ರಸ್ತೆ ಮತ್ತು ಸೇತುವೆ ಹಾಗೂ ಸರ್ಕಾರಿ ಕಟ್ಟಡಗಳ ದುರಸ್ತಿಗೆ ಸುಮಾರು 3000 ಕೋಟಿ ರೂ.ಗಳ ಅಗತ್ಯವಿರುವುದನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ, ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್, ವಸತಿ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ. ಎಸ್. ಎನ್. ಪ್ರಸಾದ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಗಂಗಾರಾಂ ಬಡೇರಿಯ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜೆ. ರವಿಶಂಕರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಅವರುಗಳು ಭಾಗವಹಿಸಿದ್ದರು.

ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಸಂಪರ್ಕ ಕಳೆದುಕೊಂಡಿವೆ . ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮಡಿಕೇರಿ ಮತ್ತು ಸುಳ್ಯ ನಡುವೆ ರಾಷ್ಟ್ರೀಯ ಹೆದ್ದಾರಿ 75 –ಸಕಲೇಶಪುರ ಮತ್ತು ಗುಂಡ್ಯ ನಡುವೆ, ರಾಷ್ಟ್ರೀಯ ಹೆದ್ದಾರಿ-234 ರಲ್ಲಿ ಕೊಟ್ಟಿಗೆಹಾರ ಮತ್ತು ಚಾರ್ಮಾಡಿ ನಡುವೆ ಭೂ ಕುಸಿತದಿಂದಾಗಿ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು.

ಕೊಡಗು ಜಿಲ್ಲೆಯಲ್ಲಿ ಒಟ್ಟಾರೆ 4500 ಜನರನ್ನು ಜಲಾವೃತ ಪ್ರದೇಶದಿಂದ ರಕ್ಷಿಸಲಾಗಿದೆ. 53 ಪುನರ್ವಸತಿ ಕೇಂದ್ರಗಳಲ್ಲಿ 7500 ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. ಪ್ರತಿ ದಿನ 50 ಸಾವಿರ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುತ್ತಿದ್ದು, ಹಾನಿಗೊಳಗಾಗಿರುವ ಕುಟುಂಬಗಳಿಗೆ ದವಸ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಸಭೆಗೆ ವಿವರಿಸಲಾಯಿತು.

ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದರು.
1. ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ಹಾನಿಯ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸುವುದು.
2. ಖಾಸಗಿ ಕಟ್ಟಡಗಳಿಗೆ ಹಾಗೂ ಮನೆಗಳಿಗೆ ಆಗಿರುವ ಹಾನಿಯ ಅಂದಾಜು ವಿವರವನ್ನು ಸಂಗ್ರಹಿಸುವುದು.
3. ಕಾಫಿ, ಅಡಿಕೆ, ಮೆಣಸು, ಭತ್ತ ಮುಂತಾದ ಬೆಳೆಗಳ ಹಾನಿಯ ಬಗ್ಗೆ ಪ್ರತ್ಯೇಕ ಪ್ರಸ್ತಾವನೆಯನ್ನು ಸಿದ್ಧಪಡಿಸುವುದು.
4. ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುವುದು. ಅವರ ಅಭಿಪ್ರಾಯಕ್ಕೆ ಅನುಗುಣವಾಗಿ ಮನೆ ನಿರ್ಮಾಣದ ಪ್ರಸ್ತಾವನೆಯನ್ನು ಸಲ್ಲಿಸುವುದು
5. ಈ ಪ್ರಾಕೃತಿಕ ವಿಕೋಪದಲ್ಲಿ ಮಡಿದವರ ಹಾಗೂ ಗಾಯಗೊಂಡವರ ಕುಟುಂಬಗಳಿಗೆ ನೀಡಲಾಗಿರುವ ಪರಿಹಾರದ ವಿವರಗಳನ್ನು ಪ್ರಸ್ತಾವನೆಯಲ್ಲಿ ಲಗತ್ತಿಸುವುದು.
6. ಹಾನಿಗೊಳಗಾದ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸಲು ನೀಲನಕ್ಷೆ ಸಿದ್ಧಪಡಿಸುವುದು
7. ಶುದ್ಧೀಕರಿಸಿದ ಕುಡಿಯುವ ನೀರನ್ನು ಮಾತ್ರ ಪೂರೈಸಬೇಕು. ಆದಷ್ಟೂ ಕುದಿಸಿದ ನೀರನ್ನೇ ಕುಡಿಯುವಂತೆ ಜನರಲ್ಲಿ ಜಾಗೃತಿ ಮೂಡಿಸುವುದು.
8. ಪಡಿತರ ವಿತರಣಾ ಕೇಂದ್ರಗಳ ಮೂಲಕ ಆಹಾರವನ್ನು ವಿತರಿಸುವುದು
9. ಸಾಂಕ್ರಾಮಿಕ ರೋಗಗಳು ಹರಡದಂತೆ ನಿಗಾ ವಹಿಸುವುದು.
10. ವಿದ್ಯುತ್ ಹಾಗೂ ದೂರವಾಣಿ ಸಂಪರ್ಕವನ್ನು ಸುಸ್ಥಿತಿಗೆ ತರಲಾಗಿದ್ದರೂ ಕುಗ್ರಾಮಗಳಲ್ಲಿ ಈ ಸಂಪರ್ಕಗಳು ಇನ್ನೂ ಲಭ್ಯವಾಗಿಲ್ಲ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸುವುದು.
11. ಸಂಪರ್ಕ ಕಳೆದುಕೊಂಡಿರುವ ಗ್ರಾಮೀಣ ರಸ್ತೆಗಳನ್ನು ಆದ್ಯತೆಯ ಮೇಲೆ ದುರಸ್ತಿಗೊಳಿಸುವುದು.
12. ಕೇಂದ್ರ ಸರ್ಕಾರದ ನೆರವಿಗಾಗಿ ವಿವರವಾದ ಪ್ರಸ್ತಾವನೆಯನ್ನು ಎರಡು ದಿನಗಳೊಳಗಾಗಿ ಸಿದ್ಧಪಡಿಸುವುದು

ಅರ್ಕಾವತಿ ಡಿ ನೋಟೀಫಿಕೇಷನ್ ಪ್ರಕರಣ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಬಿಗ್ ರಿಲೀಫ್

ಬೆಂಗಳೂರು: ಅರ್ಕಾವತಿ ಡಿ ನೋಟೀಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಅರ್ಕಾವತಿ ಡಿ ನೋಟೀಫಿಕೇಷನ್ ಪ್ರಕರಣದಿಂದ ಕೈ ಬಿಡುವಂತೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿ.ವಿ.ಪಾಟೀಲ್ ಅವರು ಸಿಎಂ ಸೇರಿ ಮೂವರನ್ನು ತನಿಖೆಯಿಂದ ಕೈ ಬಿಟ್ಟು ಆದೇಶ ನೀಡಿದ್ದಾರೆ.

ಪ್ರಕರಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶ್ರೀರಾಮ್, ಜ್ಯೋತಿರಾಮಲಿಂಗಂ ಅವರನ್ನು ಮುಕ್ತಗೊಳಿಸಿದೆ. ಮತ್ತೊಬ್ಬ ಆರೋಪಿಯಾಗಿದ್ದ ಚನ್ನಿಗಪ್ಪ ಯಾವುದೇ ಅರ್ಜಿ ಸಲ್ಲಿಸದ ಕಾರಣ ಅವರ ಬಗ್ಗೆ ಯಾವುದೇ ಆದೇಶ ನೀಡಿಲ್ಲ.

ಅರ್ಕಾವತಿ ಲೇಔಟ್ ಡಿ ನೋಟೀಫಿಕೇಷನ್ ಪ್ರಕರಣ ಸಂಬಂಧ ನ್ಯಾಯಾಲಯದ ತೀರ್ಪು ವ್ಯತಿರಿಕ್ತವಾಗಿದ್ದರÉ ಕುಮಾರಸ್ವಾಮಿ ಅವರಿಗೆ ಕಂಟಕವಾಗುವ ಸಾಧ್ಯತೆ ಇತ್ತು. ಈಗ ಅವರನ್ನು ಆರೋಪ ಮುಕ್ತಗೊಳಿಸಿರುವುದು ನಿರಾಳವಾದಂತಾಗಿದೆ.

ಅರ್ಕಾವತಿ ಡಿ ನೋಟೀಫಿಕೇಷನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿತ್ತು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅರ್ಕಾವತಿಯಲ್ಲಿ ಡಿ ನೋಟಿಫಿಕೇಷನ್ ಮಾಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಆರೋಪಿಸಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಪ್ರತಿಪಕ್ಷ ಬಿಜೆಪಿಯೂ ಕೂಡ ಸಿಬಿಐ ತನಿಖೆಗೆ ಆಗ್ರಹಿಸಿತ್ತು.

ಕುಮಾರಸ್ವಾಮಿಯವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಡಿ ನೋಟೀಫಿಕೇಷನ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ನಾಲ್ಕು ವರ್ಷಗಳ ನಂತರ ಪ್ರಕರಣದ ಬಗ್ಗೆ ದೂರು ದಾಖಲಾಗಿದೆ. ಇದು ರಾಜಕೀಯ ಪ್ರೇರಿತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಯಾವುದೇ ಜನಪ್ರತಿನಿಧಿಗಳು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವಾಗ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಆದರÉ ಈ ಯಾವುದೇ ನಿಯಮಗಳನ್ನು ಪಾಲಿಸದೆ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಹಾಗಾಗಿ ಈ ಪ್ರಕರಣ ವಿಚಾರಣೆಗೆ ಪೂರಕವಾಗಿಲ್ಲ ಎಂದು ಅಭಿಪ್ರಾಯಪಟ್ಟಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿ.ವಿ.ಪಾಟೀಲ್ ಅವರು ಈ ನಾಲ್ವರನ್ನು ಖುಲಾಸೆಗೊಳಿಸಿದ್ದಾರೆ.