ಕೇಂದ್ರ ರಕ್ಷಣಾ ಸಚಿವರಿಗೆ ಅನಾನುಕೂಲ: ಸಿಎಂ ವಿಷಾದ

ಬೆಂಗಳೂರು: ರಕ್ಷಣಾ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಅತಿವೃಷ್ಟಿ ಪೀಡಿತ ಕೊಡಗು ಜಿಲ್ಲೆಗೆ ಪರಿಶೀಲನೆಗಾಗಿ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಅನಾನುಕೂಲವಾಗಿದ್ದಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

‘ನಮ್ಮ ಸರ್ಕಾರವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ವಿಪತ್ತು ನಿರ್ವಹಣಾ ಸಂಸ್ಥೆಗಳು ಹಾಗೂ ಸ್ವಯಂ ಸೇವಕರ ನೆರವಿನೊಂದಿಗೆ ದಿನದ 24 ಗಂಟೆಯೂ ಕೊಡಗಿನಲ್ಲಿ ಪ್ರವಾಹ, ಭೂಕುಸಿತದಲ್ಲಿ ಸಿಲುಕಿಕೊಂಡ ನಾಗರಿಕರ ರಕ್ಷಣೆ, ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಕೇಂದ್ರ ಸರ್ಕಾರವೂ ನಮ್ಮ ಬೆಂಬಲಕ್ಕೆ ನಿಂತಿದೆ.

ಪ್ರವಾಸೋದ್ಯಮ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಅನಾಹುತ ಸಂಭವಿಸಿದ ಮೊದಲ ದಿನದಿಂದಲೇ ಕೊಡಗು ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಉಸ್ತುವಾರಿ ವಹಿಸಿ ನಿರಂತರವಾಗಿ ಕಾರ್ಯ ನಿರ್ವಹಿಸಿದ್ದಾರೆ.
ಅಂತೆಯೇ ಮಾನ್ಯ ರಕ್ಷಣಾ ಸಚಿವರು ನಮ್ಮ ಮನವಿಗೆ ಸ್ಪಂದಿಸಿ ರಕ್ಷಣಾ ಕಾರ್ಯಾಚರಣೆಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಿದ್ದಾರೆ. ಅಲ್ಲದೆ ಕೊಡಗಿನ ಜನರ ಯಾತನೆಯ ವಸ್ತುಸ್ಥಿತಿ ಅರಿಯಲು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಮಾನ್ಯ ಸಚಿವರ ಆಗಮನದ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆಗೆ ಅಗತ್ಯ ಕ್ರಮ ವಹಿಸಿದ್ದರೂ ಅವರಿಗೆ ಕೆಲವು ಅನಾನುಕೂಲ ಆಗಿರುವುದು ದುರದೃಷ್ಟಕರ ಹಾಗೂ ಇದಕ್ಕಾಗಿ ವಿಷಾದ ವ್ಯಕ್ತಪಡಿಸುವೆ. ಈ ವಿಷಯದ ಕುರಿತಾಗಿ ನಾನು ದೂರವಾಣಿ ಮೂಲಕ ಅವರೊಂದಿಗೆ ಮಾತನಾಡಿದ್ದೇನೆ.

ನಾವೆಲ್ಲರೂ ಈಗ ಭಿನ್ನಾಭಿಪ್ರಾಯ ಮರೆತು ಅತಿವೃಷ್ಟಿಯಿಂದ ತೊಂದರೆಗೊಳಗಾಗಿರುವ ಕೊಡಗಿನ ಜನರ ಪುನರ್ವಸತಿಗೆ ಆದ್ಯತೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ. ನಾವು ಈ ಘಟನೆಗೆ ಯಾವುದೇ ಬಣ್ಣ ಬಳಿದು ನಮ್ಮ ಗುರಿಯ ಹಾದಿಯಿಂದ ವಿಚಲಿತರಾಗುವುದು ಬೇಡ. ಕೇಂದ್ರ ಸರ್ಕಾರ ಅದರಲ್ಲೂ ವಿಶೇಷವಾಗಿ ಮಾನ್ಯ ರಕ್ಷಣಾ ಸಚಿವರ ಬೆಂಬಲ ಹೀಗೆಯೇ ಮುಂದುವರಿಯುವುದು ಎನ್ನುವುದು ನನ್ನ ನಂಬಿಕೆ” ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ.

ಕೊಡಗು ಪುನರ್ ನಿರ್ಮಾಣ ಹೇಗೆ?ವಿಶ್ವನಾಥ್ ನೇತೃತ್ವದ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ

ಬೆಂಗಳೂರು: ಜಲಪ್ರಳಯದಿಂದ ತತ್ತರಿಸಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡುವ ಕುರಿತು ವಸ್ತುಸ್ಥಿತಿಯ ವರದಿಯನ್ನು ಮುಂದಿನ ಹತ್ತು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನೇತೃತ್ವದ ತಂಡ ನಿರ್ಧರಿಸಿದೆ.

ಸತತ ಮಳೆಯಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡುವ ಕುರಿತು ಊಹಾಪೋಹದ ವರದಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವನಾಥ್ ನೇತೃತ್ವದಲ್ಲಿ 25 ಮಂದಿ ತಂತ್ರಜ್ಞರ ತಂಡ ಇಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದೆ.

ಮಡಿಕೇರಿಯಿಂದ ಆರಂಭಿಸಿ ಮಳೆಯ ರುದ್ರನರ್ತನದಿಂದ ಕಂಗೆಟ್ಟ ಕೊಡಗು ಜಿಲ್ಲೆಯಲ್ಲಿ ಪುನರ್ ನಿರ್ಮಾಣ ಕಾರ್ಯ ಹೇಗೆ ನಡೆಯಬೇಕು?ಈಗಿನ ಪರಿಸ್ಥಿತಿಗೆ ಏನು ಕಾರಣ?ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗದಂತೆ ಮಾಡಲು ಕೈಗೊಳ್ಳಬೇಕಾದ ಕ್ರಮವೇನು?ವಾಸ್ತವವಾಗಿ ಕೊಡಗಿನ ಪುನರ್ ನಿರ್ಮಾಣ ಕಾರ್ಯಕ್ಕೆ ಆಗುವ ವೆಚ್ಚವೆಷ್ಟು?ಅನ್ನುವ ಕುರಿತು ಈ ತಂಡ ಸರ್ಕ಻ರಕ್ಕೆ ಕೂಲಂಕುಷ ವರದಿ ನೀಡಲಿದೆ.

ಮಳೆಯಿಂದ ತತ್ತರಿಸಿರುವ ಕೊರಗು ಜಿಲ್ಲೆಯಲ್ಲಿ ಮೊದಲು ಸಂಪರ್ಕ ವ್ಯವಸ್ಥೆಯನ್ನು ಸರಿಪಡಿಸಬೇಕಿದ್ದು ಇದಕ್ಕಾಗಿ ಕುಸಿದ ರಸ್ತೆ,ಸೇತುವೆಗಳನ್ನು ತ್ವರಿತವಾಗಿ ಸಜ್ಜುಗೊಳಿಸುವ ಕುರಿತೂ ತಂಡ ವರದಿ ನೀಡಲಿದೆ.

ಈಗಾಗಲೇ ಕೊಡಗು ಜಿಲ್ಲೆಯ ಪುನರ್ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಊಹಾಪೋಹದ ವರದಿಗಳು ಪ್ರಕಟವಾಗುತ್ತಿದ್ದು ಇದಕ್ಕಾಗಿ ಎರಡು ಸಾವಿರ ಕೋಟಿ ರೂ ಬೇಕು,ಮೂರು ಸಾವಿರ ಕೋಟಿ ರೂ ಬೇಕು ಎಂಬಂತಹ ವರದಿಗಳು ಪ್ರಕಟವಾಗುತ್ತಿವೆ.

ಆದರೆ ಈ ವಿಷಯದಲ್ಲಿ ವಾಸ್ತವವಾಗಿ ಆಗಬೇಕಿರುವ ವೆಚ್ಚ ಎಷ್ಟು?ಅನ್ನುವ ಕುರಿತು ತಜ್ಞರ ತಂಡ ತನ್ನ ವರದಿಯಲ್ಲಿ ದಾಖಲಿಸಲಿದ್ದು ಕೇವಲ ಸರ್ಕಾರದ ಲೋಕೋಪಯೋಗಿ ಇಲಾಖೆ,ಜಲಸಂಪನ್ಮೂಲ ಇಲಾಖೆ,ಜಿಲ್ಲಾ ಪಂಚಾಯ್ತಿಗಳನ್ನು ಮಾತ್ರ ಪುನರ್ ನಿರ್ಮಾಣ ಕಾರ್ಯಕ್ಕಾಗಿ ಅವಲಂಬಿಸಲು ಸಾಧ್ಯವಿಲ್ಲ ಎಂದು ಪೂರ್ವಬಾವಿಯಾಗಿ ಅಭಿಪ್ರಾಯಪಟ್ಟಿದೆ.
ಮೈಸೂರಿನ ಇನ್ಸ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ಇಪ್ಪತ್ತೈದು ಮಂದಿ ಪರಿಣಿತರ ತಂಡ ವಿಶ್ವನಾಥ್ ಅವರೊಂದಿಗೆ ಕೊಡಗು ಜಿಲ್ಲೆಗೆ ಧಾವಿಸಿದ್ದು,ಪುನರ್ ನಿರ್ಮಾಣ ಕಾರ್ಯಕ್ಕೆ ಚೆನ್ನೈನ ಮಿಲಿಟರಿ ಎಂಜಿನಿಯರಿಂಗ್ ಸರ್ವೀಸ್ ಸಂಸ್ಥೆಯ ಸೇವೆಯನ್ನೂ ಬಳಸಿಕೊಳ್ಳಬೇಕು ಎಂದು ಈಗಾಗಲೇ ಹೇಳಿದೆ.

ಕೇವಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಕೊಡಗು ಪುನರ್ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದರೆ 60:40 ಅನುಪಾತದ ಆಧಾರದ ಮೇಲೆ ಕೆಲಸ ನಡೆಯುವುದರಿಂದ ವಾಸ್ತವವಾಗಿ ಕೊಡಗು ಪುನರ್ ನಿರ್ಮಾಣಕ್ಕೆ ಬೇಕಾಗುವ ನಿಜವಾದ ಮೊತ್ತಕ್ಕಿಂತ ಹೆಚ್ಚು ಹಣ ಪೋಲಾಗಲಿದೆ ಎಂಬುದು ಹಲವರ ಅಭಿಪ್ರಾಯ.ಈ ಹಿನ್ನೆಲೆಯಲ್ಲಿಯೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನೇತೃತ್ವದಲ್ಲಿ ಇಂದು ಕೊಡಗಿಗೆ ಧಾವಿಸಿರುವ ತಂಡ ಮುಂದಿನ ಹತ್ತು ದಿನಗಳಲ್ಲಿ ಕೊಡಗಿನ ಪುನರ್ ನಿರ್ಮಾಣ ಕಾರ್ಯಕ್ಕೆ ಅಗತ್ಯವಾದ ಸೂತ್ರಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.

ಕೇರಳದ ಯುವತಿಯರಿಂದ ಪೊಲೀಸರಿಗೆ ರಕ್ಷಾ ಬಂಧನ

ಬೆಂಗಳೂರು: ಪ್ರವಾಹ ಪೀಡಿತ ಕೇರಳದ ಯುವತಿಯರು ಡಾ.ಅಗರ್ವಾಲ್ ಆಸ್ಪತ್ರೆಯಲ್ಲಿ ಓಣಂ ಮತ್ತು ರಕ್ಷಾಬಂಧನ ಪ್ರಯುಕ್ತ ADGP ಭಾಸ್ಕರ್ ರಾವ್, ಶಾಂತಿನಗರ ಶಾಸಕ ಎನ್.ಎ. ಹ್ಯಾರೀಸ್ ಗೆ ರಾಖಿ ಕಟ್ಟುವ ಮೂಲಕ ಆಚರಿಸಿದರು.

ಕೇರಳದ ಈರ್ವರಿಗೂ ರಾಖಿ ಕಟ್ಟಿ ಆರತಿ ಬೆಳಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎನ್.ಎ. ಹ್ಯಾರೀಶ್ ಕೇರಳ ಹಾಗೂ ಕೊಡಗಿನಲ್ಲಿ ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾವೆಲ್ಲರೂ ಅವರ ರಕ್ಷಣೆಗೆ ಇದ್ದೇವೆ ಎನ್ನುವ ಸಂದೇಶ ಸಾರಲು ಅಗರ್ವಾಲ್ ಆಸ್ಪತ್ರೆ ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸಿದೆ. ಅಲ್ಲದೇ ಕ
ಪ್ರವಾಹ ಪೀಡಿತ ಕೇರಳಕ್ಕೆ ಅಗತ್ಯ ವೈದ್ಯಕೀಯ ಸಲಕರಣೆ ಹಾಗೂ ಸಿಬ್ಬಂದಿ ತೆರಳಿ ಅಗತ್ಯ ಚಿಕಿತ್ಸೆ ನೀಡಲಿದ್ದಾರೆ ಎಂದು ಜ
ಹೇಳಿದರು.

ರಾಣಿ ಪದ್ಮಾವತಿ ಕೂಡ ಮೊಘಲ್ ರಾಜರಿಗೆ ರಾಖಿ ಕಟ್ಟಿದ್ದ ಇತಿಹಾಸವನ್ನು ನೆನಪಿಸಿದ ADGP-ಕೊಡಗು ಮತ್ತು ಕೇರಳದಲ್ಲಿ ನೆರೆ ಪ್ರವಾಹ ಉಂಟಾಗಿರುವುದರಿಂದ ನಾವೆಲ್ಲರೂ ಒಂದಾಗಿ ಅವರಿಗೆ ಸಹಾಯ ಮಾಡಬೇಕು ಎಂದರು. ಡಾ. ಅಗರವಾಲ್ ಫೌಂಡೇಶನ್ ಮುಖ್ಯಸ್ಥೆ ಡಾ.ಸುನೀತಾ
ಅಗರ್ವಾಲ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಾಗಿರುವ ಕೇರಳದ ನರ್ಸ್ ಗಳು ಪೊಲೀಸರಿಗೆ ಆರತಿ ಬೆಳಗಿ ರಾಖಿ ಕಟ್ಟಿದರು.
ಶಾಸಕ ಹ್ಯಾರಿಶ್ ಪುತ್ರ ಮೊಹಮ್ಮದ್ ನಲಪಾಡ್ ಗೂ ಕೇರಳದ ಯುವತಿಯರು ರಾಖಿ ಕಟ್ಟಿ ಅಣ್ಣ ತಂಗಿಯರ ಬಾಂಧವ್ಯ ಸಾರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೊಹಮದ್ ನಲಪಾಡ್- ಕೇರಳ ಹಾಗೂ ಕೊಡಗು ಪ್ರವಾಹದಿಂದ ಸಾಕಷ್ಟು ಜನ ತೊಂದರೆಗೀಡಾಗಿದ್ದಾರೆ- ಅಲ್ಲಿನ ಸಂತ್ರಸ್ತರಿಗೆ ಆಹಾರದ ನೆರವು ನೀಡೋದಕ್ಕಿಂತ ಅವರ ಆರೋಗ್ಯದತ್ತ ಕೂಡ ಗಮನ ಹರಿಸಬೇಕಿದೆ ಹೀಗಾಗು ಹ್ಯಾರಿಸ್ ಫೌಂಡೇಶನ್ ನಿಂದ ಕೇರಳದಲ್ಲಿ ಹೆಲ್ತ್ ಕ್ಯಾಂಪ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮೊಹಮದ್ ನಲಪಾಡ್ ತಿಳಿಸಿದರು.

ಟೌನ್ ಹಾಲ್ ನಲ್ಲಿ ಅಟಲ್ ಜೀಗೆ ನುಡಿನಮನ: ಶತ್ರುಗಳು ಕೂಡ ಮರೆಯದಂತೆ ಬದುಕಿದವರು ವಾಜಪೇಯಿ ಎಂದ್ರು ಪೇಜಾವರ ಶ್ರೀ

ಬೆಂಗಳೂರು: ದೇಶದ ರಾಜಕಾರಣಿಗಳಿಗೆ ವಾಜಪೇಯಿ ಮಾದರಿ ನಾಯಕ.ಶತ್ರುಗಳು ಮರೆಯದ ರೀತಿ ಬದುಕಿದವರು ವಾಜಪೇಯಿ ಎಂದು ವಾಜಪೇಯಿ ಅವ್ರು ದೇಶಕ್ಕೆ ಸಲ್ಲಿಸಿದ ಆಡಳಿತ ಸೇವೆ ಬಗ್ಗೆ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಮೆಲಕು ಹಾಕಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವ್ರಿಗೆ ಶೃದ್ದಾಂಜಲಿ ಸಲ್ಲಿಕೆ ಮಾಡಲಾಯಿತು.ನಗರದ ಟೌನ್ ಹಾಲ್ ನಲ್ಲಿ ನಡೆದ ಶೃದ್ದಾಂಜಲಿ ಸಭೆಯಲ್ಲಿ ಪಕ್ಷಾತೀತವಾಗಿ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಯಿತು.ಸಭೆಯಲ್ಲಿ ಉಡುಪಿಯ ಪೇಜಾವರ್ ಶ್ರೀಗಳು, ಚಿತ್ರದುರ್ಗದ ಮಾದರ ಚೆನ್ನಯ್ಯ ಸ್ವಾಮಿಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಜಾಫರ್ ಶರೀಪ್, ಸಾಹಿತಿಗಳಾದ ಚಿದಾನಂದಮೂರ್ತಿ, ಚಂದ್ರಶೇಖರ ಕಂಬಾರ್, ಕೇಂದ್ರ ಸಚಿವರಾದ ಅನಂತಕುಮಾರ, ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಆರ್.ಅಶೋಕ್, ಬಿಜೆಪಿ ನಾಯಕರಾದ ರಾಮಚಂದ್ರೇಗೌಡ, ಪಿಜಿ.ಆರ್.ಸಿಂದ್ಯಾ, ದೊಡ್ಡರಂಗೇಗೌಡರು ಸೇರಿದ್ದಂತೆ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು.

ಸಭೆಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು,ದಕ್ಷತೆ ಮತ್ತು ಸೇವೆ ಎರಡು ವಾಜಪೇಯಿ ಅವ್ರಲ್ಲಿ ಇದ್ದವು.ನಿರ್ಧಾರ ಕೈಗೊಳ್ಳುವಾಗ ಅಟಲ್(ಅಚಲ)..
ಕಾರ್ಯವೈಖರಿಯಲ್ಲಿ ವಿಹಾರ್(ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡವರು) ತೋರಿದರು.ವಾಜಪೇಯಿ ಶಿವನ ಗುಣದವರು.ವಾಜಪೇಯಿ ಅನೇಕ ಬಾರಿ ನಮ್ಮ ಮಠಕ್ಕೆ ಭೇಟಿ ಮಾಡಿದ್ರು.ಶ್ರೇಷ್ಟ ರಾಷ್ಟ್ರಪುತ್ರ ವಾಜಪೇಯಿ.ಎಲ್ಲ ರಾಜಕಾರಣಿಗಳು ವಾಜಪೇಯಿ ಅವ್ರನ್ನು ಅನುಸರಿಸಬೇಕು. ಚತುಷ್ಪದ ಯೋಜನೆ, ಕಾವೇರಿ ಯೋಜನೆ ಸೇರಿದ್ದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ವಾಜಪೇಯಿ ಕೈಗೊಂಡರು. ಮಠದ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಶ್ರೀಗಳ ಆಜ್ಞೆ ಬರುತ್ತೇನೆ ಅಂತ ಹೇಳಿದ್ರು.ವಾಜಪೇಯಿ ಮತ್ತೊಮ್ಮೆ ದೇಶದಲ್ಲಿ ಹುಟ್ಟಿ ಬರಲಿ ಎಂದರು.

ಸಭೆಯಲ್ಲಿ ಮಾತನಾಡಿದ ಸಾಹಿತಿ ಚಂದ್ರಶೇಖರ ಕಂಬಾರ್, ವಾಜಪೇಯಿ ಅವ್ರನ್ನು ಮೊದಲು ನ್ಯೂಯಾರ್ಕ್ ನಲ್ಲಿ ಭೇಟಿಯಾಗಿದ್ದೆ.ಕವಿಗಳಿಗೆ ಕನಸು ಇರುತ್ತವೆ ಆದ್ರೆ ಕನಸು ನನಸು ಮಾಡಲು ಕವಿಗಳಿಗೆ ಅಧಿಕಾರ ಇರಲ್ಲ. ರಾಜಕಾರಣಿಗಳಿಗೆ ಕನಸು ಇರಲ್ಲ ಅಧಿಕಾರ ಮಾತ್ರ ಇರುತ್ತೆ.
ಆದ್ರೆ ವಾಜಪೇಯಿ ಅವ್ರಿಗೆ ಕನಸು ಇತ್ತು, ಕನಸನ್ನು ನನಸು ಮಾಡುವ ಅಧಿಕಾರ ಕೂಡಾ ಇತ್ತು ಎಂದರು.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ವಾಜಪೇಯಿ ಅವ್ರ ಕವನಗಳನ್ನು ಉಲ್ಲೇಖಿಸಿದ ಕಂಬಾರ್.ವಾಜಪೇಯಿ ಕವನದ ಸ್ಪೋರ್ತಿಯಿಂದ ಹಲವು ಯುವಕವಿಗಳು ಸೃಷ್ಟಿಯಾದ ಉದಾಹರಣೆ ಇವೆ.ಪಾಕಿಸ್ತಾನದ ಅಧ್ಯಕ್ಷರೂ ಕೂಡಾ ವಾಜಪೇಯಿ ಕವನ ಪ್ರೀತಿಸುತ್ತಿದ್ದರು.ಪಾಕಿಸ್ತಾನ ಭೇಟಿ ವೇಳೆ ಆಗಿನ ಅಧ್ಯಕ್ಷ ಷರೀಫ್ ಕಾರ್ಯಕ್ರಮವೊಂದರಲ್ಲಿ ವಾಜಪೇಯಿ ಅವ್ರಿಗೆ ಭಾಷಣ ಬೇಡ ಪದ್ಯವೊಂದನ್ನು ಹೇಳಿ ಅಂತ ಮನವಿ ಮಾಡಿಕೊಂಡಿದ್ರು.ಕಾರ್ಗಿಲ್ ಯುದ್ಧದಿಂದಾಗಿ ವಾಜಪೇಯಿ ಅವ್ರ ಕವಿ ಮನಸ್ಸಿಗೆ ನೋವಾಗಿತ್ತು ಎಂದರು.

ಸಭೆಯಲ್ಲಿ ಪ್ರಸ್ತಾವಿಕ ಭಾಷಣ ಮಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, ೧೯೭೭ ರ ಎಬಿವಿಪಿ ವಾರಣಾಸಿ ರಾಷ್ಟ್ರೀಯ ಸಮ್ಮೇಳನ ಬಳಿಕ ವಾಜಪೇಯಿ ಅವ್ರನ್ನು ಮೊದಲ ಭಾರಿಗೆ ಭೇಟಿಯಾಗಿದ್ದೆ.೨೦೧೯ ರಿಂದ ೨೦೧೮ರವರೆಗೆ ವಾಜಪೇಯಿ ಮೌನಿಯಾಗಿದ್ದರು.ವಾಜಪೇಯಿ ಸಾವಿನಲ್ಲಿ ಪುಣ್ಯವಂತರ ಮಹಿಮೆಯನ್ನು ನೋಡಿದ್ದೇವೆ.ವಾಜಪೇಯಿ ರಾಜಕಾರಣದಲ್ಲಿದ್ದರೂ ಓರ್ವ ಕವಿ ಆಗಿದ್ದರು.ತುರ್ತುಪರಿಸ್ಥಿತಿ ಸಂದರ್ಭದಲ್ಲಿಯೂ ವಾಜಪೇಯಿ ಕವನ ಬರೆದಿದ್ರು.ಗೀತ್ ನಹೀ ಗಾವುಂಘಾ ಅನ್ನೋ ಕವನ ತುರ್ತು ಪರಿಸ್ಥಿತಿಯಲ್ಲಿ ಬರೆದು ಎಚ್ಚರಿಸಿದ್ರು.೧೯೮೪ ರಲ್ಲಿ ಬಿಜೆಪಿ ೪ ಸ್ಥಾನ ಪಡೆದಿತ್ತು.೪ ರಿಂದ ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಕಮಲ ಅರಳಲು ವಾಜಪೇಯಿ ಕಾರಣರಾದ್ರು.ಅಂದಿನಿಂದ ದೇಶದ್ಯಾಂತ ಪಕ್ಷ ಸಂಘಟಿಸಿ ರಾಷ್ಟ್ರಮಟ್ಟದಲ್ಲಿ ಮೂರು ಬಾರಿ ಆಡಳಿತ ನಡೆಸಲು ವಾಜಪೇಯಿ ಪ್ರೇರಣಾದಾಯಿ ಎಂದು ವಾಜಪೇಯಿ ಅವ್ರ ರಾಜಕೀಯ ಜೀವನದ ಪ್ರಮುಖ ಘಟನೆಗಳನ್ನು ಉಲ್ಲೇಖಿಸಿ ವಾಜಪೇಯಿ ಸಾಧನೆಗಳನ್ನು ಮೆಲುಕು ಹಾಕಿದರು.

ಪಾಕಿಸ್ತಾನ ಜೊತೆ ಸಂಬಂಧ ಸುಧಾರಣೆಗೆ ವಾಜಪೇಯಿ ಶ್ರಮಿಸಿದ್ರು ಆದರೆ ಪಾಕಿಸ್ತಾನ ಯುದ್ಧದ ಮಾರ್ಗ ಅನುಸರಿಸಿ ಕಾರ್ಗಿಲ್ ಕದನ ಆರಂಭಿಸಿತು.ಆಗ ದೃಢ ನಿರ್ಧಾರ ಕೈಗೊಂಡು ಕಾರ್ಗಿಲ್ ಯುದ್ಧ ಗೆದ್ದವರು ವಾಜಪೇಯಿ ಎಂದರು.

ಬೆಂಗಳೂರಿಗೆ ವಾಜಪೇಯಿ ಕೊಡುಗೆ ಅಪಾರ.ನಮ್ಮ ಮೆಟ್ರೋ ಯೋಜನೆ ಅಟಲ್ ಅವ್ರ ಕೊಡುಗೆ.ರಾಜ್ಯಕ್ಕೆ ನೈಋತ್ಯ ರೈಲ್ವೇ ಕೇಂದ್ರ ಒದಗಿಸಿದ್ದು ವಾಜಪೇಯಿ.ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಲು ಅನುಮತಿ ನೀಡಿದ್ದು ವಾಜಪೇಯಿ.ಕಾವೇರಿ ನಾಲ್ಕನೆಯ ಹಂತ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿ ವಾಜಪೇಯಿ ಕೊಡುಗೆಯಿದೆ‌ ಎಂದರು.

ತಂತ್ರಜ್ಞಾನ ಬಳಕೆಯಿಂದ ಅಂಧರು ಹೆಚ್ಚು ಸಾಧನೆ ಮಾಡಬಹುದಾಗಿದೆ: ಬಸವರಾಜ್

ಬೆಂಗಳೂರು: ತಂತ್ರಜ್ಞಾನದ ಕ್ರಾಂತಿ ಅಂಧರಿಗೆ ಸಾಕಷ್ಡು ದೊಡ್ಡ ಮಟ್ಟದ ಸಾಧನೆ ಮಾಡುವ ಅವಕಾಶ ಮಾಡಿಕೊಟ್ಟಿದೆ ಎಂದು ಶೇಷಾದ್ರಿಪುರಂಲ್ಲಿರುವ ಅಂಗವಿಕಲರ ಅಧಿನಿಯಮ ರಾಜ್ಯ ಆಯುಕ್ತ ವಿ.ಎಸ್. ಬಸವರಾಜು ತಿಳಿಸಿದರು.

ಬೆಂಗಳೂರಿನ ಕಬ್ಬನ್ ಉದ್ಯಾನದಲ್ಲಿರುವ ಸಚಿವಾಲಯ ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂದರಿಗೆ ಸೂಕ್ರ ಅಡಿಪಾಯ ಹಾಕಿಕೊಟ್ಟರೆ ಉತ್ತಮ ಸಾಧನೆ ಮಾಡುತ್ತಾರೆ. ಸರ್ಕಾರ ಈ ನಿಟ್ಟಿನಲ್ಲಿ ಹಮನ ಹರಿಸಬೇಕು. ನಾವು ಕೊಡುವ ಪ್ರೋತ್ಸಾಹ ಉಳಿದ ಕ್ಷೇತ್ರದಲ್ಲಿ ಕೂಡ ಅವರು ಅವಕಾಶ ಗಿಟ್ಟಿಸಲು ಸಹಾಯಕವಾಗುತ್ತದೆ. ಇವರ ಬುದ್ದಿಮತ್ತೆ ಬಳಸಿಕೊಂಡರೆ ದೇಶಕ್ಕೆ ಹೊಸ ಕೊಡುಗೆ ನೀಡಬಹುದಾಗಿದೆ ಎಂದರು.
ನಾನು ಅಂಧರ ಒಟ್ಟಿಗೆ ಬೆಳೆದವನು. ಅವರಿಂದ ಪಡೆದ ಕಲಿಕೆ ಇಂದು ನನ್ನನ್ನು ಈ ಹಂತಕ್ಕೆ ಬೆಳೆಸಿದೆ. ಇಂದು ಆಯುಕ್ತನಾಗಿರುವಲ್ಲಿ ಇವರ ಕೊಡುಗೆ ಅಪಾರವಾಗಿದೆ. ಇವರ ಖರ್ಚು ವೆಚ್ಚ ಹೆಚ್ಚಿರುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಇವರಿಗೆ ಅವಕಾಶ ಸಿಗುವಂತ ಚಿಂತನೆ ಮಾಡಬೇಕಿದೆ. ಸಾಮಾನ್ಯರಿಗಿಂತ ಇವರಿಗೆ ಮೂರರಷ್ಟು ಹೆಚ್ಚು ಖರ್ಚಿರುತ್ತದೆ. ಇದರಿಂದ ಇವರಿಗೆ ಉಚಿತ ಬಸ್ ಪಾಸ್ ನೀಡುವ ಕಾರ್ಯ ಆದಲ್ಲಿ ಕೊಂಚ ವೆಚ್ಚ ಕಡಿಮೆ ಆಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಗಮನಿಸಬೇಕು. ಅದನ್ನು ನಾವು ಕೂಡ ಮೂಡಿಸುತ್ತೇವೆ ಎಂದರು.
ನಿಮ್ಮ ಸಮಸ್ಯೆ, ಸಾಧನೆಗಳನ್ನು ವೆಬ್ಸೈಟ್ ಗೆ ಅಳವಡಿಸಿ. ಇದರಿಂದ ನಿಮ್ಮ ಬಗ್ಗೆ ಬಹುಬೇಗ ನಿರಗಧಾರ ಕೈಗೊಳ್ಳಲು ಸಹಕಾರಿಯಾಗಲಿದೆ. ನಿಮ್ಮ ವೆಬ್ಸೈಟ್ ಸರ್ಕಾರಕ್ಕೆ ಆಧಾರ, ದಾಖಲೆಯಾಗಿ ಲಭಿಸಬೇಕು. ನಿಮಗೆ ಕಾನೂನಿನ ಗೌರವಕೂಡ ಇದೆ. ಇವನ್ನು ನೀವುಬಳಸಿಕೊಳ್ಳಬೇಕು. ಸರ್ಕಾರ ಹೊಸ ಕಾನೂನು ಜಾರಿಗೆ ತರಲಿದ್ದು, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಲಭಿಸಲಿದೆ. ನೀವು, ನಿಮ್ಮ ಸಂಘಟನೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂಬ ಸಲಹೆ ಇತ್ತರು.
ಸಂಘದ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ಮಾತನಾಡಿ, ಸಂಘ ಸ್ಥಾಪನೆಯಾದ ಒಂದು ವರ್ಷದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ನಮಗೆ ಉಳಿದವರಿಗಿಂತ ಭಿನ್ನವಾದ ಸಮಸ್ಯೆ ಇರುತ್ತದೆ. ಇದನ್ನು ಸರ್ಕಾರಕ್ಕೆ ಮನದಟ್ಟು ಮಾಡಲು ಸಂಘ ಅವಶ್ಯಕವಾಗಿತ್ತು. 20 ಇಲಾಖೆಯನ್ನು ಈಗಾಹಲೇ ಸಂಪರ್ಕಿಸಿದ್ದೇವೆ. ಉಚಿತ ಬಸ್ ಪಾಸ್ ಇತ್ಯಾದಿ ಬೇಡಿಕೆ ಸರ್ಕಾರದ ಮುಂದಿದೆ. ಅದು ಆದಷ್ಟು ಬೇಗ ಬಗೆಹರಿಯಬೇಕಿದೆ. 6 ವರ್ಷದ ಈಚೆ ಯಾವುದೇ ಅಂಧರಿಗೆ ಉದ್ಯೋಗ ಸಿಕ್ಕಿಲ್ಲ. ಕೆಲಸಕ್ಕೆ ಸೇರುತ್ತಿದ್ದಂತೆ ಬುನಾದಿ ತರಬೇತಿ ನೀಡಲಾಗುತ್ತದೆ. ನಮಗೆ ಆರು ವರ್ಷ ಕಳೆದರೂ ತರಬೇತಿ ಸಿಕ್ಕಿಲ್ಲ. ನಮ್ಮ ಸೇವೆಯ ಸದ್ಬಳಕೆ ಆಗಬೇಕು. ಎಲ್ಲ ಕೆಲಸ ಗಣಕಯಂತ್ರ ಮೂಲಕವೇ ಆಗಬೇಕಿರುವುದರಿಂದ ಇ ಆಡಳಿತದ ಸೇವೆಯ ಅಗತ್ಯವಿದೆ ಎಂದು ಮನವಿ ಮಾಡಿದರು.
ಅಧ್ಯಕ್ಷತೆಯನ್ನು ಗದಗ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಹಾಗೂ ಸಂಘದ ಅಧ್ಯಕ್ಷ ರಮೇಶ್ ಸಂಕರೆಡ್ಡಿ, ಸರ್ಕಾರದ ಅಧಿನ ಕಾರ್ಯದರ್ಶಿ ಜಯಲಕ್ಷ್ಮಿ, ಮೈಸೂರಿನ ರಾಜ್ಯ ರಾಜ್ಯ ಆಡಳಿತ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ವಿ ಭಾಗ್ಯಲಕ್ಷ್ಮಿ, ಇ-ಆಡಳಿತ ಕೇಂದ್ರ ಯೋಜನಾ ನಿರ್ದೇಶಕ ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ವೆಬ್ಸೈಟ್ ಅನಾವರಣಗೊಳಿಸಲಾಯಿತು. ಸಂಘದ ವತಿಯಿಂದ ವಿವಿಧ ಮನವಿಪತ್ರವನ್ನು ಸಲ್ಲಿಸಲಾಯಿತು. ವಿಶೇಷ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.

ಸಮ್ಮಿಶ್ರ ಸರಕಾರ ಸುಭದ್ರವಾಗಿರಲಿದೆ, ಮುಂದಿನ‌ ಚುನಾವಣೆಯಲ್ಲಿ ನಾನು ಸಿಎಂ ಆಗುತ್ತೇನೆ ಎಂದಿದ್ದು: ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಜನರ ಆಶೀರ್ವಾದ ಇದ್ದರೆ ಮತ್ತೆ ಮುಖ್ಯಮಂತ್ರಿ ಅಗಬಹುದು ಎಂದು ಹೇಳಿದ್ದೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.

ನಗರದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡುದ ಸಿದ್ದರಾಮಯ್ಯ,ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಸಭದ್ರವಾಗಿದೆ.ಐದು ವರ್ಷ ಅವಧಿ ಪೂರ್ಣಗೊಳಿಸಲಿದೆ. ಇದರಲ್ಲಿ ಅನುಮಾನ ಬೇಡ,2023 ರ ಚುನಾವಣೆ ಕುರಿತ ನನ್ನ ಹೇಳಿಕೆ ಬಗ್ಗೆ ಗೊಂದಲ ಬೇಡ ಎಂದು ವಿವಾದಕ್ಕೆ ತೆರೆ ಎಳೆದರು.

ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಯವರ ಅಪಪ್ರಚಾರದಿಂದ ನಮಗೆ ಸೋಲಾಯಿತು. ಬಿಜೆಪಿಯ ಪೊಳ್ಳುತನ ಜನರಿಗೆ ಈಗ ಅರ್ಥವಾಗಿದೆ. ಹೀಗಾಗಿ ಅವರು ಪಾಲಿಕೆ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡುವ ನಂಬಿಕೆ ಇದೆ. ಮೈಸೂರು ನಗರದ ಜನರ ನಾಡಿ ಮಿಡಿತ ಗೊತ್ತಿದೆ‌ ಎಂದರು.

ಮೈಸೂರು ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾದ್ಯವಿಲ್ಲ. ಮೈಸೂರು ಮಹಾನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ 2530 ಕೋಟಿ ರೂ.ಗಳ ಅನುದಾನ ಒದಗಿಸಿತ್ತು. ನಗರದಲ್ಲಿ ತಲೆ ಎತ್ತಿ ನಿಂತಿರುವ ಸರ್ಕಾರದ ಹೊಸ ಕಟ್ಟಡಗಳೇ ಇದಕ್ಕೆ ಸಾಕ್ಷಿ. ಮಾಲಿಕೆಯಲ್ಲಿ ಜೆಡಿಎಸ್, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಆಗಿಲ್ಲ. ಅಭಿವೃದ್ಧಿಯಲ್ಲಿ ಮೈಸೂರು ನಂಬರ್ ಒನ್ ಆಗಿದ್ದರೆ ಅದಕ್ಕೆ ನಮ್ಮ ಸರ್ಕಾರ ಕಾರಣ. ಇದನ್ನು ಮನಗಂಡು ಮೈಸೂರಿನ ಮತದಾರರು ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಕೈ ಹಿಡಿಯಬೇಕು ಅವರು ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದರು.

ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ 63 ವಾರ್ಡ್ ಗಳಲ್ಲಿ ಸ್ಪರ್ಧೆ ಮಾಡಿದೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಪಕ್ಷ ನಮ್ಮದು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ಸೌಲಭ್ಯ ಜಾರಿಗೆ ತಂದಿದ್ದು ಸಹ ಕಾಂಗ್ರೆಸ್. ಇದರ ಕಾರಣಕರ್ತರು ದಿವಂಗತ ರಾಜೀವ್ ಗಾಂಧಿಯವರು.ಅವರ ಪ್ರಯತ್ನದಿಂದ ಮಹಿಳೆಯರು, ಹಿಂದುಳಿದವರು ಹಾಗೂ ಇತರೆ ವರ್ಗದವರಿಗೆ ಮೀಸಲು ಸೌಲಭ್ಯ ದೊರೆತಿದೆ. ಮಹಿಳೆಯರಿಗೆ ಶೇ. 50ರಷ್ಟು ಮೀಸಲು ಸೌಲಭ್ಯ ದೊರೆಯುವಂತೆ ಮಾಡಿದ್ದು ಕಾಂಗ್ರೆಸ್. ಬಿಜೆಪಿಯವರು ಇದನ್ನು ವಿರೋಧ ಮಾಡಿದ್ದರು. ಬಿಜೆಪಿಯ ರಾಮಾಜೋಯೀಸ್ ಅವರೇ ಮೀಸಲು ಸೌಲಭ್ಯದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಿದ್ದರು.ರಾಜಕೀಯ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಜಾರಿಗೆ ತಂದಿರುವ ಮೀಸಲು ಸೌಲಭ್ಯವನ್ನು ಸದಾ ವಿರೋಧ ಮಾಡಿದವರು ಬಿಜೆಪಿಯವರು. ಮೀಸಲು ಸೌಲಭ್ಯ ಹಾಗೂ ಸಾಮಾಜಿಕ ನ್ಯಾಯಕ್ಕೆ ನಮ್ಮ ಪಕ್ಷ ಸದಾ ಬದ್ಧ ಎಂದರು.

ಸಾಲ ಮನ್ನಾ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರ ಒಂದು ನಿರ್ಧಾರ ಮಾಡಿದೆ. ಖಾಸಗಿ ಹಣಕಾಸು ಲೇವಾದಾರರಿಂದ ರೈತರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಸರ್ಕಾರ ಕಾನೂನು ಜಾರಿಗೆ ತರಲು ಹೊರಟಿದೆ. ಸಾಲ ಮನ್ನಾ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು.ಬಡ್ತಿ ಮೀಸಲು ಸಂಬಂಧ ಕಾನೂನು ರೂಪಿಸಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಮಾನ ಮಾಡಲಿದೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಶೀಘ್ರವಾಗಿ ನಡೆಯಲಿದೆ‌ ಎಂದ್ರು.

ರಕ್ಷಣಾ ಇಲಾಖೆಯಲ್ಲಿ ಆಗಿರುವ ರಫೇಲ್ ಡೀಲ್ ಹಗರಣದ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಹಗರಣದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಇದು 40 ಸಾವಿರ ಕೋಟಿ ರೂ.ಗಳ ಹಗರಣ.ಈ ಹಗರಣದ ಬಗ್ಗೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ. ಇದರಲ್ಲಿ ರಾಜಕೀಯ ಇಲ್ಲ. ಬಿಜೆಪಿಯ ಭ್ರಷ್ಟಾಷಾರದ ಮುಖವನ್ನು ಜನರಿಗೆ ತೋರಿಸುವುದು ಪಕ್ಷದ ಉದ್ದೇಶ.ಇದು ಸಣ್ಣ ಅವ್ಯವಹಾರ ಅಲ್ಲ. ದೇಶದ ರಕ್ಷಣಾ ಇಲಾಖೆಯಲ್ಲಿ ಭಾರಿ ಹಗರಣ ಇದಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ರು.

ರಕ್ಷಣಾ ಸಚಿವರು ಕೊಡಗಿಗೆ ಬಂದು ಹೋದರು. ಆದರೆ ನಯಾಪೈಸೆ ಪರಿಹಾರ ಘೋಷಣೆ ಮಾಡಲಿಲ್ಲ. ಇದು ಸರಿಯೇ? ಪರಿಹಾರ ಘೋಷಣೆ ಮಾಡುವುದು ಕೇಂದ್ರದ ಜವಾಬ್ದಾರಿ ಅಲ್ಲವೇ ? ಶೀಘ್ರವೇ ಕೇಂದ್ರ ಸರ್ಕಾರ ಕೊಡಗಿಗೆ ಒಂದು ಸಾವಿರ ಕೋಟಿ ರೂ.ಗಳ ಪರಿಹಾರ ಘೋಷಿಸಬೇಕು. ಕೊಡಗಿನ ಜನರ ನೆರವಿಗೆ ನಿಂತಿರುವ ರಾಜ್ಯದ ಜನತೆಗೆ ನನ್ನ ನಮಸ್ಕಾರಗಳು.ಕೂಡಗಿನಲ್ಲಿ ಇಷ್ಟು ಅನಾಹುತ ಆಗಿರುವಾಗ ಕೇಂದ್ರ ಸರ್ಕಾರ ತುರ್ತಾಗಿ ಪರಿಹಾರ ಘೋಷಣೆ ಮಾಡಬೇಕಿತ್ತು. ನಾವು ಕೊಡುವ ಮನವಿ ಪತ್ರಕ್ಕಾಗಿ ಕಾಯಬೇಕೇ ? ಕೊಡಗಿಗೆ ಬಂದಾಗ ರಕ್ಷಣಾ ಸಚಿವರ ನಡವಳಿಕೆ ಅತಿಯಾಗಿತ್ತು. ಕೇಂದ್ರ ಸಚಿವರ ರೀತಿ ಅವರು ನಡೆದುಕೊಳ್ಳಲಿಲ್ಲ. ಪರಿಹಾರ ನೀಡುವ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸುವಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ವಾಗ್ದಾಳಿ ನಡೆಸಿದ್ರು.