ಪಾವಗಡ ತಾಲ್ಲೂಕಿನ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ 5 ಜನೌಷಧಿ ಕೇಂದ್ರ ಮಂಜೂರು: ಕೇಂದ್ರ ಸಚಿವ ಅನಂತ್ ಕುಮಾರ್

ಬೆಂಗಳೂರು: ರಾಜ್ಯದ ಅತಿ ಹಿಂದುಳಿದ ತಾಲ್ಲೂಕಿನಲ್ಲಿ ಒಂದಾಗಿರುವ ಪಾವಗಡದಲ್ಲಿ ಕುಷ್ಟರೋಗಿಗಳು ಹಾಗೂ ಅಲ್ಲಿನ ಜನರಿಗೆ ವೈದ್ಯಕೀಯ ಸೌಲಭ್ಯ ನೀಡುತ್ತಿರುವ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ 5 ಜನೌಷಧಿ ಕೇಂದ್ರಗಳನ್ನು ಮಂಜೂರು ಮಾಡುವುದಾಗಿ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಘೋಷಿಸಿದ್ದಾರೆ.

ನಗರದ ಬಸವನಗುಡಿಯಲ್ಲಿಂದು ಶ್ರೀರಾಮಕೃಷ್ಣ ಸೇವಾಶ್ರಮ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮಿ ಜಪಾನಂದಜಿಯವರ ಅವಿರತ ಸೇವೆಯನ್ನು ಶ್ಲಾಘಿಸಿದರು. ರೋಗಿಗಳ ಸೇವೆಯ ಜಪವನ್ನು ಮಾಡುತ್ತಿರುವ ಅವರು ಅದರಲ್ಲೇ ಆನಂದವನ್ನು ಕಾಣುತ್ತಿದ್ದಾರೆ. ಆದ್ದರಿಂದ ಜಪಾನಂದ ಎಂಬ ಹೆಸರು ಅನ್ವರ್ಥವಾಗಿದೆ ಎಂದರು.

ಬರಗಾಲದ ನಾಡು, ಹಿಂದುಳಿದ ತಾಲ್ಲೂಕಿನಲ್ಲೊಂದಾಗಿರುವ ಪಾವಗಡದಲ್ಲಿ ಕಿತ್ತುತಿನ್ನುವ ಬಡತನವಿದೆ. ಅದಕ್ಕೆ ಖ್ಯಾತಿಯಾಗಿದ್ದ ಈ ತಾಲ್ಲೂಕು ಇದೀಗ ಶ್ರೀರಾಮಕೃಷ್ಣ ಸೇವಾಶ್ರಮದ ಸೇವೆಗೆ ಹೆಸರುವಾಸಿಯಾಗಿರುವುದು ಮಹತ್ಕಾರ್ಯ ಎಂದರು.

ಇಂತಹ ಹಿಂದುಳಿದ ತಾಲ್ಲೂಕಿನಲ್ಲಿ ಕಳೆದ 25 ವರ್ಷಗಳಿಂದ ಅವಿರತ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ ಭಾರತ ಸರಕಾರದ ವತಿಯಿಂದ 5 ಜನೌಷಧಿ ಕೇಂದ್ರಗಳನ್ನು ಮಂಜೂರು ಮಾಡುವುದಾಗಿ ಇದೇ ಸಂಧರ್ಭದಲ್ಲಿ ಘೋಷಿಸಿದರು. 600 ಕ್ಕೂ ಹೆಚ್ಚು ಹೃದ್ರೋಗ, ರಕ್ತದೊತ್ತಡ, ಕ್ಯಾನ್ಸರ್ ಸೇರಿದಂತೆ ಹತ್ತು ಹಲವು ರೋಗಗಳಿಗೆ ಪರಿಣಾಮಕಾರಿ ಔಷಧಗಳನ್ನು ಈ ಜನೌಷಧಿ ಕೇಂದ್ರಗಳಲ್ಲಿ ಜನರು ಅತ್ಯಂತ ಕಡಿಮೆ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.

ಪಾವಗಡ ತಾಲ್ಲೂಕಿನ ಹೋಬಳಿಗಳಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಜನೌಷಧಿ ಕೇಂದ್ರಗಳನ್ನು ತೆರೆಯಲು ಅಗತ್ಯವಿರುವ ಮುಂಗಡ ಔಷಧ ಹಾಗೂ ಒಳಾಂಗಣ ವಿನ್ಯಾಸಕ್ಕೆ ಬೇಕಾಗಿರುವ ಹಣವನ್ನೂ ಭಾರತ ಸರಕಾರದ ವಹಿಸಿಕೊಳ್ಳಲಿದೆ ಎಂದು ಘೋಷಿಸಿದರು.

ಪಾವಗಡ ತಾಲ್ಲೂಕಿನ ಕುಡಿಯುವ ನೀರಿನ ಬಹಳ ಸಮಸ್ಯೆಯಿರುವುದನ್ನ ಸ್ವಾಮೀಜಿವರು ಗಮನಕ್ಕೆ ತಂದರು. ಈ ಸಮಸ್ಯೆಯ ನಿವಾರಣೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯದಿಂದ ಒಂದು ಯೋಜನೆಯನ್ನು ಪ್ರಾರಂಭಿಸುವ ಭರವಸೆಯನ್ನು ಸಚಿವ ಅನಂತಕುಮಾರ್ ನೀಡಿದರು. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲದೆ, ಕೇಂದ್ರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಅವರನ್ನು ಸ್ಥಳ ಪರಿವೀಕ್ಷಣೆಗೆ ಕಳುಹಿಸಿಕೊಡುವುದಾಗಿ ಹೇಳಿದರು.

5 ಜನೌಷಧಿ ಕೇಂದ್ರಗಳ ಪ್ರಾರಂಭಕ್ಕೆ ಬೇಕಾಗಿರುವ ಒಪ್ಪಂದವನ್ನು ಒಂದು ತಿಂಗಳ ಒಳಗಾಗಿ ಶ್ರೀ ರಾಮಕೃಷ್ಣ ಸೇವಾಶ್ರಮದ ಜೊತೆಯಲ್ಲಿ ಮಾಡಿಕೊಳ್ಳುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು, ಬೈಲೂರು ಮಠದ ಶ್ರೀಮತ್ ವಿನಾಯಕಾನಂದಜೀ ಮಹರಾಜ್ ಸ್ವಾಮೀಜಿ, ನ್ಯಾಯಮೂರ್ತಿ ಶ್ರೀ ಎಂ ಎನ್ ವೆಂಕಟಾಚಲಯ್ಯ, ಶಾಸಕ ಎಲ್ ಎ ರವಿಸುಬ್ರಮಣ್ಯ, ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಜೀಯವರು ಪಾಲ್ಗೊಂಡಿದ್ದರು.

ಸರ್ಕಾರ ಒಡೆಯುವುದು ಮಡಕೆ ಒಡೆದಷ್ಟು ಸುಲಭವಲ್ಲ: ಡಿಕೆಶಿ

ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಅತಂತ್ರವಾಗಲಿದೆ, ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂಬ ಸುದ್ದಿ ಇತ್ತಿಚಿಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇತ್ತ ಬಿಜೆಪಿ ನಾಯಕರು ಕಾಂಗ್ರೆಸ್‌ನ 20 ಮಂದಿ ಶಾಸಕರು ಸಂಪರ್ಕದಲ್ಲಿದ್ದಾರೆ ಅಂತಿದ್ರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಮೈತ್ರಿ ನಿಯಮಕ್ಕೆ ಕಟ್ಟು ಬಿದ್ದಿದ್ದು ಮುಂದಿನ 5 ವರ್ಷ ಕುಮಾರಸ್ವಾಮಿ ಸಿಎಂ ಅಂತಿದ್ದಾರೆ. ಹಾಗಾದ್ರೇ ರಾಜ್ಯ ರಾಜಕೀಯದಲ್ಲಿ ನಿಜಕ್ಕೂ ನಡೆಯುತ್ತಿರೊದಾದ್ರು ಏನು ಅಂತ ತಿಳಿಯಲು ಈ ಸ್ಟೋರಿ ಓದಿ.

ರಾಜ್ಯ ಮೈತ್ರಿ ಸರ್ಕಾರ ಅಭದ್ರವಾಗಿದೆ. 20 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕ ಸೇರಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕ ಸಿ ಟಿ ರವಿ ಬಾಂಬ್ ಸಿಡಿಸಿದ್ದಾರೆ. ಈ ಸುದ್ದಿ ಸುಳ್ಳು ಎಂದು ಸಮರ್ಥನೆ ಮಾಡೊದ್ರಲ್ಲಿ ಮೈತ್ರಿ ನಾಯಕರು ಕಸರತ್ತು ಶುರು ಮಾಡಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ನಾನೇ ಸಿಎಂ ಎಂದಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ತಲೆ ಬಿಸಿ ಮಾಡಿದೆ. ಹೌದು ಸದಾಶಿವನಗರದಲ್ಲಿ ಈ ಸಂಬಂಧ ಡಿಕೆ ಶಿವಕುಮಾರ್ ಮಾತನಾಡಿ , ರಾಜಕೀಯವಾಗಿ ಯಾರು ಸನ್ಯಾಸಿ ಅಲ್ಲ ,ಎಲ್ಲರಿಗೂ ಆಸೆ ಇದೆ. ಮುಂದಿನ ಅವಧಿಯಲ್ಲಿ ಸಿಎಂ ಎಂದಿರಾ ಬಹುದು? ಹೊರತಾಗಿ ಸಿದ್ದರಾಮಯ್ಯ ಮೈತ್ರಿಗೆ ತೊಂದರೆ ತರುವಂತ ನಾಯಕ ಅಲ್ಲ , ಅವರು ಸೀನಿಯರ್ ಲೀಡರ್ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ನಾಯಕರ ಸರ್ಕಾರ ರಚನೆ ಆಸೆಯಲ್ಲಿ ತಾಳ್ಮೆ ಇರಲಿ. ಮಡಕೆಯಂತೆ ಒಡೆದ್ರೆ ಸರ್ಕಾರ ಬೀಳಲ್ಲ. ಒಂದೊಮ್ಮೆ ಇದನ್ನ ಕೇಳಿಯೂ ಮುಂದುವರೆದ್ರೆ ಆಲ್ ದಿ ಬೆಸ್ಟ್ ಅಂತ ಹೇಳಿ ಬಿಜೆಪಿ ನಾಯಕರಿಗೆ ಡಿಕೆಶಿ ಟಾಂಗ್ ಕೊಟ್ಟರು.

ಡಿಕೆಶಿ ಮನೆಯ ಭೇಟಿ ಮುಗಿಸಿ ಮಾತನಾಡಿದ ಮಾಜಿ ಸಚಿವ ಎಚ್ ಎಂ ರೇವಣ್ಣ ಸಹ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಸಿದ್ದರಾಮಯ್ಯ ಸಿಎಂ ಅಂತ ಹೇಳಿರೊದ್ರಲಿ ತಪ್ಪಿಲ್ಲ. ಆದ್ರೆ ಮೈತ್ರಿ ಸರ್ಕಾರದಲ್ಲಿ ಸಿಎಂ ಅಂತ ಹೇಳಿಲ್ಲ ಎಂದರು.

ಸಾ.ರಾ.ಮಹೇಶ್ ಗೆ ರಾಜಕೀಯ ವ್ಯವಸ್ಥೆ ಬಗ್ಗೆ ತಿಳುವಳಿಕೆ ಇಲ್ಲ: ರಕ್ಷಣಾ ಸಚಿವೆ ಗರಂ

ಬೆಂಗಳೂರು: ಸಾ.ರಾ.ಮಹೇಶ್ ಅವರು ಕೇಂದ್ರ ಸಚಿವರ ಬಗ್ಗೆ ಮಾಡಿದ ವೈಯಕ್ತಿಕ ಟೀಕೆ ರಾಜ್ಯಸಭೆ ಘನತೆಗೆ ಚ್ಯುತಿವುಂಟು ಮಾಡಿದ್ದು, ಸಾ.ರಾ ಮಹೇಶ್ ರಿಗೆ ರಾಜಕೀಯ ವ್ಯವಸ್ಥೆ ಬಗ್ಗೆ ತಿಳುವಳಿಕೆ ಮತ್ತು ಗೌರವ ಇಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿ ಕಾರಿದ್ದಾರೆ.

ಕೊಡಗು ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ನಡುವೆ ಜಟಾಪಟಿ ವಿಚಾರವಾಗಿ ಪ್ರತಿಕಾ ಹೇಳಿಕೆ ಹೊರಡಿಸಿರುವ ರಕ್ಷಣಾ ಮಂತ್ರಿ, ಕೊಡಗು ಪ್ರವಾಸದ ಪಟ್ಟಿಯನ್ನು ಎರಡು ದಿನಗಳ ಹಿಂದೆ ತಯಾರಿ ಮಾಡಲಾಗಿತ್ತು ಮತ್ತು ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಮಾಹಿತಿ ನೀಡಲಾಗಿತ್ತು. ಆದರೆ ನಿನ್ನೆ ಪ್ರವಾಸ ವೇಳೆ ಏಕಾಏಕಿ ಜಿಲ್ಲಾ ಸಚಿವರು ಕಾರ್ಯಕ್ರಮಗಳನ್ನು ಬದಲು ಮಾಡಿದರು. ಶಿಷ್ಠಚಾರದ ಪ್ರಕಾರ ಮೊದಲು ಮಾಜಿ ಸೇನಾಧಿಕಾರಿಗಳ ಜೊತೆ ಸಭೆ ನಡೆಯಬೇಕಿತ್ತು ಬಳಿಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಬೇಕಿತ್ತು ಆದರೆ ಸಚಿವ ಸಾ.ರಾ ಮಹೇಶ್ ಅವರು ಮೊದಲು ಅಧಿಕಾರಿಗಳ ಸಭೆ ನಡೆಸಲು ಒತ್ತಡ ಹಾಕಿದ್ರು ಎಂದು ವಿವರಿಸಿದ್ದಾರೆ.

ಅಧಿಕಾರಿಗಳ ಸಭೆಯಲ್ಲಿ ಮಾಧ್ಯಗಳಿಗೂ ಅವಕಾಶ ನೀಡಿ ಶಿಷ್ಠಚಾರ ಉಲ್ಲಂಘಿಸಲಾಗಿತ್ತು. ಮೊದಲು ಅಧಿಕಾರಿಗಳ ಸಭೆ ನಡೆಸುವಂತೆ ಸಾ ರಾ ಮಹೇಶ್ ಒತ್ತಾಯಿಸಿದರು. ಮತ್ತಷ್ಟು ಗೊಂದಲ ತಪ್ಪಿಸಲು ಅಧಿಕಾರಿಗಳ ಸಭೆಗೆ ತೆರಳಿದೆ. ಆದರೆ ಆಗಲೇ ಪತ್ರಿಕಾಗೋಷ್ಟಿಯನ್ನು ಕರೆಯಲಾಗಿತ್ತು. ಮಾಧ್ಯಮದವರ ಎದುರೇ ಅಧಿಕಾರಿಗಳ ಸಭೆಯನ್ನು ತರಾತುರಿಯಲ್ಲಿ ನಡೆಸಬೇಕಾಯಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಜಿಲ್ಲಾಡಳಿತದ ಕಾರ್ಯಕ್ರಮದ ಪ್ರಕಾರವೇ ನಡೆದುಕೊಂಡರೂ ಸಾ ರಾ ಮಹೇಶ್ ಅವರ ಪ್ರತಿಕ್ರಿಯೆ ಮತ್ತು ಟೀಕೆ ದುರಾದೃಷ್ಟಕರವಾಗಿದೆ. ಜತೆಗೆ ರಕ್ಷಣಾ ಮಂತ್ರಿಗಳ ಪರಿವಾರ ಪದ ಬಳಕೆ ಬಗ್ಗೆ ತಪ್ಪು ವ್ಯಾಖ್ಯಾನ ಮಾಡಲಾಗುತ್ತಿದೆ. ರಕ್ಷಣಾ ಇಲಾಖೆಯ ಪರಿವಾರದಲ್ಲಿ ನಿವೃತ್ತ ಸೈನಿಕರು ಸೇರಿರುತ್ತಾರೆ ಎಂಬರ್ಥದಲ್ಲಿ ಪರಿವಾರ ಪದ ಬಳಸಲಾಗಿದೆ ಎಂದು ಸಚಿವೆ ಸ್ಪಷ್ಟೀಕರಣ ನೀಡಿದ್ದಾರೆ.

2 ಸಾವಿರ ಕೋಟಿ ರೂಪಾಯಿ ನೆರವಿಗೆ ಕೇಂದ್ರಕ್ಕೆ ಮನವಿ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಕೊಡಗಿನಲ್ಲಿ ನೆರೆಯಿಂದ ಉಂಟಾದ ಹಾನಿ ಸರಿದೂಗಿಸಲು ಕೇಂದ್ರಕ್ಕೆ ಪ್ರಥಮ ಹಂತದಲ್ಲಿ 2 ಸಾವಿರ ಕೋಟಿ ರು. ಹಣಕಾಸಿನ ನೆರವು ನೀಡಬೇಕೆಂದು ಮನವಿ‌ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಕೇರಳ ನೆರೆ ಸಂತ್ರಸ್ತರಿಗಾಗಿ ಸಿದ್ದಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ ಅಗತ್ಯ ಪರಿಕರಗಳನ್ನೊತ್ತ ೯ ಟ್ರಕ್‌ಗಳಿಗೆ
ಸದಾಶಿವ ನಗರದ ಬಿಡಿಎ ಕ್ವಾಟ್ರಸ್‌‌ನಲ್ಲಿ ಶನಿವಾರ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಪತ್ನಿ ಕನ್ನಿಕ ಪರಮೇಶ್ವರ್ ಚಾಲನೆ ನೀಡಿ, ಕಳುಹಿಸಿ ಕೊಟ್ಟರು.

ಬಳಿಕ ಮಾತನಾಡಿದ ಡಾ.ಜಿ. ಪರಮೇಶ್ವರ್ ಅವರು, ಕೇಂದ್ರ ಸರಕಾರ ಕೊಡಗನ್ನು ನಿರ್ಲಕ್ಷಿಸಿದೆ. ಎನ್‌ಡಿಆರ್‌ಎಫ್ ಸಿಬ್ಬಂದಿ ಕಳುಹಿಸಿ ಕೊಟ್ಟಿದ್ದು ಬಿಟ್ಟರೆ ಕೇಂದ್ರದಿಂದ ನಯಾಪೈಸಿನ ಸಹಾಯವಾಗಿಲ್ಲ.
ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರು ಕೊಡಗು ನೆರೆ ಹಾವಳಿ ವೀಕ್ಷಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಕೂಗಾಡಿರುವುದು ಸರಿಯಲ್ಲ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು.
ನಿರ್ಮಲಾ ಸೀತಾರಾಮ್ ಅವರು ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾದವರು. ಅವರೇ ಮುಂದಾಳತ್ವ ವಹಿಸಿ, ಸಂಸದರ ನಿಯೋಗದೊಂದಿಗೆ ಪ್ರಧಾನಿ ಅವರ ಬಳಿ ಪರಿಹಾರ ನೀಡುವಂತೆ ಮನವಿ‌ ಮಾಡಬೇಕಿತ್ತು. ಆದರೆ, ಅವರು ತಡವಾಗಿ ಬಂದಿದ್ದಲ್ಲದೇ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಅವರ ಮೇಲೇ‌ ಕೂಗಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ನಷ್ಟದ ಅಂದಾಜು ಮುನ್ನವೇ ಹಣ ಬಿಡುಗಡೆ ಮಾಡಿದಂತೇ ನಮಗೂ ಮಾಡಬೇಕಿತ್ತು. ಆದರೆ, ಅವರು ನಿರಾಸಕ್ತಿ ತೋರಿದ್ದಾರೆ. ಕೊಡಗಿನ ನಷ್ಟ ಭರಿಸಲು ಸದ್ಯ ೨ ಸಾವಿರ ಕೋಟಿ ರು. ಹಣಕಾಸಿನ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ವಿವರಿಸಿದರು.

ಕೇರಳ ರಾಜ್ಯ ಸಂಪರ್ಣ ಮಳೆಯಿಂದ ತೋಯ್ದಿದೆ. ಇಡೀ ರಾಜ್ಯವನ್ನೇ ಮರು ನಿರ್ಮಾಣ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕೇರಳ ಪರಿಸ್ಥಿತಿಗೆ ಇಡೀ ದೇಶವೇ ಮರುಗಿ, ನೆರವಿನ ಹೊಳೆ ಹರಿಯುತ್ತಿದೆ. ಜನಸಾಮಾನ್ಯರು ಕೈಲಾದ ಸಹಾಯ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಹಾಗೂ ಕರ್ನಾಟಕ ಸರಕಾರ ಸೇರಿದಂತೆ ಎಲ್ಲ ರಾಜ್ಯಗಳು ಸಹಾಯ ಹಸ್ತ ಚಾಚಿವೆ. ಬಿಬಿಎಂಪಿಯಿಂದಲೂ ಒಂದು ಕೋಟಿ‌ ರು. ನೀಡಿದ್ದೇವೆ ಎಂದರು.

ಸಿದ್ಧಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ ಕೇರಳಾಗೆ ಒಟ್ಟು ೯ ಟ್ರಕ್‌ಗಳಲ್ಲಿ ಅಗತ್ಯ ಪರಿಕರಗಳನ್ನು ಕಳುಹಿಸಿಕೊಡಲಾಗುತ್ತಿದೆ.
ಕೊಡಗು ನೆರೆ ನಿರಾಶ್ರಿತರಿಗೆ ಕಳೆದ ವಾರ ನಾಲ್ಕು ಟ್ರಕ್‌ಗಳಲ್ಲಿ ಪರಿಕರ ಸಾಮಾಗ್ರಿ ಕಳುಹಿಸಿಕೊಟ್ಟಿದ್ದೆವು. ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ ಹಾಗೂ ಬಿಎಂಆರ್‌ಡಿಎಯಿಂದ ತಲಾ ಒಂದು ಕೋಟಿ ರು. ಪರಿಹಾರ, ಜೊತೆಗೆ ಪೊಲೀಸ್ ಸಿಬ್ಬಂದಿಯ ಒಂದು ದಿನ ಸಂಬಳದ 5.82 ಕೋಟಿ ರು. ಹಣವನ್ನು ಕೊಡುಗು‌ ನೆರೆ ನಿರಾಶ್ರಿತರಿಗೆ ನೀಡಿದ್ದೇವೆ ಎಂದರು.

ರೈತರಿಗೆ ವರಮಹಾಲಕ್ಷ್ಮಿ ಉಡುಗೊರೆ ನೀಡಿದ‌ ಕುಮಾರಸ್ವಾಮಿ: ರೈತರ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿನ 2 ಲಕ್ಷ ಸಾಲಮನ್ನಾ ಘೋಷಣೆ

ಬೆಂಗಳೂರು:ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಸಹಕಾರಿ ಸಾಲದ ಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳ ರೈತರ 2 ಲಕ್ಷ ರೂ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳ ಚಾಲ್ತಿ ಸಾಲ ಕೂಡ ಮನ್ನಾವಾಗಲಿದ್ದು,ಇದರಿಂದ ಸರ್ಕಾರದ ಬೊಕ್ಕಸಕ್ಕೆ32,000 ಕೋಟಿ ರೂ. ಇದರಿಂದ ಹೊರೆಯಾಗಲಿದೆ.
ಶುಕ್ರವಾರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು,ಮೊದಲು ಸಾಲ ಮನ್ನಾಗೆ ಬ್ಯಾಂಕುಗಳು ಒಪ್ಪಿಗೆ ನೀಡಿದ್ದವು.ನಂತರ ಹಿಂದಕ್ಕೆ ಸರಿದಿದ್ದವು. ಸುಸ್ತಿ ಸಾಲ, ಚಾಲ್ತಿ ಸಾಲ 25,000/- ವರೆಗೆ ನಾಲ್ಕು ವರ್ಷದಲ್ಲಿ ಹಂತ ಹಂತವಾಗಿ ಸಾಲ ಮನ್ನಾ ಮಾಡಲಾಗುವುದೆಂದು ಪ್ರಕಟಿಸಿದರು.

ಹಿಂದಿನ ಅವಧಿಯಲ್ಲಿ ಸರ್ಕಾರದಲ್ಲಿ ಮಾಡಿದ ಸಾಲ ಸೇರಿ 43,000 ಕೋಟಿ ಸಾಲ ಇದೆ.ಅದಕ್ಕಾಗಿ ಇಬ್ಬರು ನೋಡೆಲ್ ಅಧಿಕಾರಿ ನೇಮಕ ಮಾಡಿ ಪ್ರೊಸಸ್ ಮಾಡಲು ಸಂಪುಟದಲ್ಲಿ ಚರ್ಚೆ ನಡೆಸಲಾಗಿದೆ.ಆರ್ಥಿಕ ಸಂಪನ್ಮೂಲಗಳ ಹೊಂದಾಣಿಕೆಯನ್ನ ಸರ್ಕಾರದ ಖಜಾನೆಯಿಂದ ಹೊಂದಾಣಿಕೆ ಮಾಡಿಕೊಳ್ಳಲು ಈಗಾಗಲೇ ತೀರ್ಮಾನ ಆಗಿದೆ ಎಂದು ವಿವರಿಸಿದರು.

6,500 ಕೋಟಿ ರೂ. ಸಾಲ ಮನ್ನಾಗಾಗಿಯೇ ತೆಗೆದು ಇಟ್ಟಿದ್ದೀವಿ.  2018-19ಕ್ಕೆ 6500 ಕೋಟಿ ರೂ.2019-20 8656ಕೋಟಿ ರೂ.2020-21 ಕ್ಕೆ 7876ಕೋಟಿ ರೂ.2021-22ಕ್ಕೆ 7231ಕೋಟಿ ರೂ.ಬಡ್ಡಿ ದರ 12% ಬ್ಯಾಂಕುಗಳು ಚಾರ್ಜ್ ಮಾಡಿವೆ 7419ಕೋಟಿ ರೂ ಬಡ್ಡಿಯನ್ನ ಸರ್ಕಾರ ತುಂಬುತ್ತಿದೆ ಎಂದು ಅಂಕಿ ಅಂಶಗಳ ವಿವರ ನೀಡಿದರು.
ಚಾಲ್ತಿ ಸಾಲ ಇರುವವರಿಗೆ ೨೫ ಸಾವಿರ ಪ್ರೋತ್ಸಾಹಧನ ನೀಡಲಾಗುವುದು.ಒಟ್ಟು 32 ಸಾವಿರ ಕೋಟಿ ಇದರಿಂದ ಸರ್ಕಾರಕ್ಕೆ ಹೊರೆಯಾಗುವುದು.ಆದರೂ ಸರ್ಕಾರ ಸುಸ್ತಿ,ರಿಸ್ಟ್ರಕ್ಚರ್ ಸಾಲ ಮನ್ನಾಗೆ ನಿರ್ಧರಿಸಿದೆ.ಸುಮಾರು ೩೨ ಸಾವಿರ ಕೋಟಿ ಬರಲಿದೆ.4 ವರ್ಷಗಳಲ್ಲಿ ಹೇಗೆ ತೀರಿಸಬೇಕೆಂದು ಚರ್ಚೆ ನಡೆದಿದೆ ಎಂದು ಹೇಳಿದರು.
ಇದು ಒಂದು ಕುಟುಂಬಕ್ಕೆ ಅನ್ವಯವಾಗಲಿದೆ.
ಋಣಪರಿಹಾರ ಅಧಿನಿಯಮವನ್ನ 1976 ರಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಕಾಲದಲ್ಲಿ ತಂದಿದ್ದರು.ಈ ಆ್ಯಕ್ಟ್ ಅನ್ನ ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಸುಗ್ರೀವಾಜ್ನೆ ಕೋರಿ ರಾಷ್ಟ್ರಪತಿಗಳಿಗೆ ಶಿಫಾರಸು ಸಂಪುಟ ಸಭೆ ತೀರ್ಮಾನಿಸಿದೆ‌.

ಮುಸ್ಲಿಂ ಕುಟುಂಬದಿಂದ ವರಮಹಾಲಕ್ಷ್ಮಿ ಹಬ್ಬ ಆಚರಣೆ

ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ವಿಭಿನ್ನವಾಗಿ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಯಿತು.ಸಾಮರಸ್ಯ ಬಿಂಬಿಸುವಂತ ರೀತಿಯಲ್ಲಿ ಹಬ್ಬ ಆಚರಿಸಿದ್ದು ವಿಶೇಷ.

ಮೈಸೂರಿನ ಕೋಟೆ ಹುಂಡಿಯಲ್ಲಿ ಜಾಕೀರ್ ಹುಸೇನ್ ದಂಪತಿಯಿಂದ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಯಿತು.ಜಾಕೀರ್ ಹುಸೇನ್ ಹಾಗೂ ಮಮತ ಪರಸ್ಪರ ಪ್ರೀತಿಸಿ ಮದುವೆ ಆಗಿದ್ರು.ಆದ್ರೆ ಹಬ್ಬದ ವಿಚಾರದಲ್ಲಿ ಹಿಂದು-ಮುಸ್ಲಿಂ ಎರಡು ಹಬ್ಬವನ್ನು ದಂಪತಿ ಆಚರಿಸುತ್ತಿದೆ.ಈ ರೀತಿ ಅನೇಕ ವರ್ಷಗಳಿಂದ ಕುಟುಂಬ ಸೌಹಾರ್ದತೆ ಮೆರೆಯುತ್ತಿದೆ.

ಕಳೆದ ಎರಡು ವರ್ಷದಿಂದ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡುತ್ತಿದ್ದಾರೆ.ಮೊನ್ನೆಯಷ್ಟೇ ಮನೆಯಲ್ಲಿ ಬಕ್ರೀದ್ ಹಬ್ಬ ಆಚರಣೆ ಮಾಡಿ ಇದೀಗ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಯಿತು.

ವೃತ್ತಿಯಲ್ಲಿ ಮಮತಾ ಶಿಕ್ಷಕಿ ಆಗಿದ್ದು,ಜಾಕೀರ್ ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ.ಎಲ್ಲರೂ ಒಗ್ಗೂಡಬೇಕೆಂಬ ಒತ್ತಾಸೆಯಲ್ಲಿ ಹಬ್ಬ ಆಚರಣೆ ಮಾಡಲಾಯಿತು.ಹಬ್ಬದಲ್ಲಿ ಹಿರಿಯ ಸಾಹಿತಿ ಚಿಂತಕ ಫ್ರೋ.ಭಗವಾನ್,ದಲಿತ ಮುಖಂಡ ಹೋರಾಟಗಾರ ಶಿವರಾಮು ಸೇರಿದಂತೆ ಘಟಾನುಘಟಿ ಚಿಂತಕರು ಭಾಗಿಯಾದರು.