ಕೊಡಗು ಅನಾಹುತಕ್ಕ ರಾಜ್ಯ ಸರಕಾರದ ನಿರ್ಲಕ್ಷ್ಯ ಕಾರಣ: ಶ್ರೀರಾಮುಲು

ಗದಗ:ಸರಕಾರ ಎಚ್ಚೆತ್ತುಕೊಂಡಿದ್ರೆ ಕೊಡಗು ಜನ್ರ ಪ್ರಾಣಹಾನಿ ತಡೆಯ ಬಹುದಿತ್ತು,ಸರಕಾರದ ನಿರ್ಲಕ್ಷ್ಯದಿಂದ ಪ್ರಾಣಹಾನಿ ,ಪ್ರಾಣಿಗಳ ಹಾನಿ,ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ರಾಮುಲು, ಮುಖ್ಯಮಂತ್ರಿಗಳು ಹಾಗೂ ಮಂತ್ರಿಮಂಡಲ ಮುಂಜಾಗ್ರತ ಕ್ರಮ ಕೈಗೊಳ್ಳಲಿಲ್ಲ.ಇಷ್ಟೆಲ್ಲಾ ಘಟನೆ ನಡೆದ್ರೂ ಸಿಎಂ ತಡವಾಗಿ ಭೇಟಿ ನೀಡಿರುವುದು ದುರದೃಷ್ಟಕರ,ಸಚಿವ ಎಚ್.ಡಿ ರೇವಣ್ಣ ಬಿಸ್ಕೆಟ್ ಎಸೆದಿರುವುದು ದುರಾದೃಷ್ಟ.ಮಾಜಿ ಪ್ರಧಾನಿ ಮಗ ರೇವಣ್ಣಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಇರಬೇಕಿತ್ತು.ಸರಕಾರ ಮತ್ತು ಸಚಿವ ಸ್ಥಾನದ ಅಹಂಕಾರ ಅವರಲ್ಲಿ ತುಂಬಿಕೊಂಡಿದೆ
ಇದು ಅಧಿಕಾರ ಅಹಮ್ ಬಹಳ ದಿನ ಉಳಿಯುವುದಿಲ್ಲ ಎಂದ್ರು.

ಇನ್ನು ನೆರೆ ಸಂತ್ರಸ್ತರಿಗೆ ಕೇಂದ್ರ ಸರಕಾರದಿಂದ ಸೂಕ್ತ ಅನುದಾನ ಸಿಗಲ್ಲಿದೆ.ಇದರಲ್ಲಿ ಯಾವುದೇ ಅನುಮಾನ ಬೇಡ.
ಪ್ರಧಾನಿಗಳು ಕೇರಳ ಹಾಗೂ ಕರ್ನಾಟಕಕ್ಕೆ ಸೂಕ್ತ ಪರಿಹಾರ ನೀಡುತ್ತಾರೆ ಎಂದ್ರು.

ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ, ಮುಂದೇಯು ಅನ್ಯಾಯ ಆಗಲಿದೆ ಮುಖ್ಯಮಂತ್ರಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೆ ಮತ್ತೆ ಶ್ರೀರಾಮುಲು ಧ್ವನಿ ಎತ್ತಿದರು.

ಕೊಡಗು ಮರು ನಿರ್ಮಾಣಕ್ಕೆ ಸರಕಾರ ಬದ್ದ: ಡಿಸಿಎಂ

ಬೆಂಗಳೂರು:ಕೊಡಗು ಮರುನಿರ್ಮಾಣಕ್ಕೆ ರಾಜ್ಯ ಸರಕಾರ ಬದ್ಧವಿದೆ. ಅಲ್ಲಿನ‌ ಅನಾಹುತ, ಹಾನಿ ಬಗ್ಗೆ ಆದ್ಯತೆ ಮೇಲೆ ಸರಿ ಮಾಡಲಾಗುವುದು ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ,ಕೇಂದ್ರ ಸರಕಾರ ಹಣಕಾಸಿನ‌ ನೆರವು ಕೊಟ್ಟಿಲ್ಲ. ನಮ್ಮ ಬಗ್ಗೆ ಅನುಕಂಪವನ್ನೂ ವ್ಯಕ್ತಪಡಿಸಿಲ್ಲ. ಕನಿಷ್ಠ ಪಕ್ಷ ಆತ್ಮಸ್ಥೈರ್ಯವನ್ನಾದರೂ ತುಂಬಿದ್ದರೆ ಅಲ್ಲಿನ ನಿರಾಶ್ರಿತರಿಗೂ ನೆಮ್ಮದಿ ಇರುತ್ತಿತ್ತು. ಆದರೆ ಕೇಂದ್ರ ಸರಕಾರ ಕೇರಳಕ್ಕೆ ಮಾತ್ರ ಹಣಕಾಸಿನ‌ ನೆರವು ನೀಡಿ, ನಮಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಷ್ಟದ ಅಂದಾಜು ಕಾರ್ಯ ನಡೆಯುತ್ತಿದೆ. ಅಂದಾಜು ಪಟ್ಟಿ ಸಿದ್ದಗೊಂಡ ಬಳಿಕ ಕೇಂದ್ರಕ್ಕೆ ಸಹಾಯ ಕೇಳಲಾಗುವುದು, ಅಗತ್ಯಬಿದ್ದರೆ ನಿಯೋಗದ ಮೂಲಕ ತೆರಲಕಿ ಮನವಿ ಮಾಡುತ್ತೇವೆ ಎಂದರು.

ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರ ಕೊರತೆ ಕುರಿತು ಸಿಎಜಿ ವರದಿ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು,
ಎಲ್ಲ ಪೊಲೀಸ್ ಠಾಣೆಯಲ್ಲು ಅಗತ್ಯ ಶಸ್ತ್ರಾಸ್ತ್ರ ಗಳಿವೆ. ಆದರೂ ಸಿಎಜಿ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯಬಿದ್ದಲ್ಲಿ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದರು.

ಎನ್‌ಎಸ್ಎಸ್ ಕಡ್ಡಾಯಕ್ಕೆ ಚಿಂತನೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಎಲ್ಲ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಎನ್‌ಎಸ್‌ಎಸ್‌ನನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಉಒ ಮುಖ್ಯಮಂತ್ರಿಯೂ ಆದ ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾ ಕೋಶ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.ಎನ್‌ಎಸ್‌ಎಸ್‌ ಗೆ ಹೆಚ್ಚಾಗಿ ಬಡ ಮತ್ತು ಮಧ್ಯಮದ ವರ್ಗದ ವಿದ್ಯಾರ್ಥಿಗಳೇ ಸೇರುತ್ತಾರೆ. ಅನುಕೂಲಸ್ಥ ವಿದ್ಯಾರ್ಥಿಗಳು ಇದರಿಂದ ದೂರು ಉಳಿಯುತ್ತಿದ್ದಾರೆ.ಇವರು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಸಂಸ್ಕಾರ, ಸಂಸ್ಕೃತಿ ನಡವಳಿಕೆಯ ಜ್ಞಾನವಿರಬೇಕು.ಹೀಗಾಗಿ ಎನ್‌ಎಸ್‌ಎಸ್‌ ಕಡ್ಡಾಯಗೊಳಿಸಿದರೆ ಎಲ್ಲರೂ ಪಾಲ್ಗೊಳ್ಳಬೇಕಿರುತ್ತದೆ. ಹಿಂದೆಲ್ಲ ಎನ್‌ಸಿಸಿ ಕಡ್ಡಾಯವಿತ್ತು.ಅದೇ ಮಾದರಿಯಲ್ಲಿ ಇದನ್ನೂ ಕಡ್ಡಾಯಗೊಳಿಸಿದರೆ ಉತ್ತಮ‌ ಎಂದು ಅಭಿಪ್ರಾಯಪಟ್ಟರು.

ಎನ್‌ಎಸ್‌ಎಸ್‌ನನ್ನು ಸಂಪೂರ್ಣ ಬದಲಿಸುವ ಅಗತ್ಯವಿದೆ.
ಸಭೆಯಲ್ಲಿ ಯುವಕರಿಗೆ ಅನುಕೂಲವಾಗುವ ರೀತಿ ಕ್ರಿಯಾತ್ಮಕ ಸಲಹೆ ಬಂದೆ. ಕಾನೂನು , ಸಂಸ್ಕೃತಿ, ಭವಿಷ್ಯ, ಕೌಶಲ್ಯಾಭಿವೃದ್ಧಿ, ಉದ್ಯೋಗದ ಬಗ್ಗೆ ಎನ್‌ಎಸ್ಎಸ್‌ ನಲ್ಲೇ ಅರಿವು ಮೂಡಿಸುವ ಬಗ್ಗೆ ಸಲಹೆ ಬಂದಿದೆ. ಎನ್‌ಎಸ್‌ಎಸ್‌ನನ್ನು ಬಲಿಷ್ಠಗೊಳಿಸಲು ಸಮಿತಿ ರಚಿಸಿ ಅಂತಿಮ‌ ನಿರ್ಧಾರ ಮಾಡಲಾಗುವುದು ಎಂದರು.‌

ಕೊಡಗಿನ ಜನರ ನೆರವಿಗೆ ಮಂಗಳೂರು‌ ಸೇರಿದಂತೆ ಹತ್ತಿರದ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಧಾವಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಹಳೇ ವಿದ್ಯಾರ್ಥಿಗಳು ಕೂಡ ವಿವಿಧ ಭಾಗದಿಂದ ತೆರಳಿದ್ದಾರೆ. ಎಲ್ಲ ಕಾಲೇಜು ವಿದ್ಯಾರ್ಥಿಗಳ ಭಾಗವಹಿಸುವಿಕೆ ಬಗ್ಗೆ ವಿಶ್ವವಿದ್ಯಾಲಯ ಕುಲಪತಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಮುಖ್ಯಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್, ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಇದ್ದರು.

ಗ್ರಾಮೀಣ ಮೂಲ ಸೌಲಭ್ಯಕ್ಕೆ ಒತ್ತು ನೀಡಲು ಕೃಷ್ಣ ಬೈರೇಗೌಡ ಸಲಹೆ

ಮಡಿಕೇರಿ:ಜಿಲ್ಲೆಯಾದ್ಯಂತ ಮಳೆ ಹಾನಿಯಿಂದ ತೀವ್ರ ಹಾನಿಗೊಳಗಾದ ಪ್ರದೇಶದಲ್ಲಿ ಗ್ರಾಮೀಣ ರಸ್ತೆ, ಕುಡಿಯುವ ನೀರು ಮತ್ತು ಉದ್ಯೋಗ ಈ ಮೂರು ಕಾರ್ಯಗಳನ್ನು ಆದ್ಯತೆ ಮೇರೆಗೆ ಶೀಘ್ರದಲ್ಲಿ ಕಾರ್ಯ ನಿರ್ವಹಿಸುವಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಮಳೆ ಹಾನಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾ. ಪಂ. ವ್ಯಾಪ್ತಿಯಲ್ಲಿ ತೀವ್ರ ಹಾನಿಗೊಳಗಾದ ರಸ್ತೆಗಳನ್ನು ಆದ್ಯತೆ ಮೇರೆಗೆ ಸರಿಪಡಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಾದ್ಯಂತ ಮಳೆ ಹಾನಿಯಿಂದ ಹಾನಿಗೊಳಗಾದ ಗ್ರಾ.ಪಂ.ವ್ಯಾಪ್ತಿಯ ವಿವರಗಳನ್ನು ಹಾಗೂ ತೆಗೆದುಕೊಂಡ ಕ್ರಮಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಕೃಷ್ಣ ಬೈರೇಗೌಡ ಅವರು ಮಾಹಿತಿ ಪಡೆದರು.

ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ದಿನಂಪ್ರತಿ ವಿದ್ಯಾಭ್ಯಾಸಕ್ಕೆ ಬರುವಂತಹ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ವಸತಿ ವ್ಯವಸ್ಥೆಯನ್ನು ಆಯಾಯ ನಗರ ವ್ಯಾಪ್ತಿಯಲ್ಲಿ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದುವರೆಗೂ ಸಂಪರ್ಕ ಸಾಧಿಸಲು ಸಾಧ್ಯವಾಗದಂತಹ ಗ್ರಾ.ಪಂ.ವ್ಯಾಪ್ತಿಗಳಲ್ಲಿ ಡ್ರೋಣ್ ಕ್ಯಾಮರಾ ಬಳಸಿ ಹಾನಿಗೊಳಗಾದ ಮನೆ, ಆಸ್ತಿಗಳ ನಷ್ಟದ ವಿವರಗಳನ್ನು ಕಲೆ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಕಿರಿದಾದ ಜಾಗದಲ್ಲಿ ಆಧುನಿಕ ಚಿಕ್ಕ ಹಿಟಾಚಿಗಳನ್ನು ಬಳಸಿ ಸುಸ್ಥಿತಿಯಲ್ಲಿರುವ ರಸ್ತೆಗಳ ಮೇಲೆ ಬರೆ ಕುಸಿತದಿಂದ ಉಂಟಾದ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗುವಂತೆ ಸಚಿವರು ತಿಳಿಸಿದರು.

ಪ್ರತೀ ಗ್ರಾಮ ಪಂಚಾಯಿತಿಗೆ ಒಬ್ಬರು ಅಭಿಯಂತರರನ್ನು ನಿಯೋಜಿಸಲು ಜಿ.ಪಂ.ಸಿಇಒ ಅವರಿಗೆ ಸೂಚನೆ ನೀಡುತ್ತಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಭಿಯಂತರರುಗಳು ಸಮನ್ವಯ ಸಾಧಿಸಿಕೊಂಡು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಸಚಿವರು ತಿಳಿಸಿದರು.

ತೀವ್ರ ಮಳೆಹಾನಿಯಿಂದ ಜಿಲ್ಲೆಯ ಜನರು ಅಪಾರ ತೊಂದರೆಗೊಳಗಾಗಿದ್ದು, ಸರ್ಕಾರವು ಅಗತ್ಯ ನೆರವು ನೀಡಲಿದ್ದು, ನೋವಿನಲ್ಲಿ ಇರುವಂತಹ ಜನರಿಗೆ ಸ್ಪಂದಿಸುವುದು ಸರ್ಕಾರದ ಪ್ರಥಮ ಆದ್ಯತೆ. ಸರ್ಕಾರವು ಜಿಲ್ಲೆಯ ಜನರೊಂದಿಗೆ ಇರುವುದಾಗಿ ಸಚಿವರು ತಿಳಿಸಿದರು.

ಅಧಿಕಾರಿಗಳು ತಮ್ಮ ಮನೆಯ ಕೆಲಸದಂತೆ ಪ್ರೇರಣೆಯಿಂದ ಪರಿಹಾರ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡು ಜನರಿಗೆ ದೈರ್ಯ ತುಂಬುವುದರೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಿ ಶೀಘ್ರದಲ್ಲಿ ಜಿಲ್ಲೆಯು ಮೊದಲಿನಂತಾಗುವಂತೆ ಕಾರ್ಯ ಪ್ರವೃತರಾಗಲು ಸಚಿವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಶಾಸಕರಾದ ಕೆ.ಜಿ. ಬೋಪಯ್ಯ ಅವರು ಹಲವು ಸಲಹೆ ಸೂಚನೆಗಳನ್ನು ನೀಡಿದರು. ಜಿ..ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಇತರರು ಇದ್ದರು.

ಕರ್ನಾಟಕದ ಕಣಕಣದಲ್ಲೂ ಅಟಲ್ ಜೀ ಇದ್ದಾರೆ:ಕೇಂದ್ರ ಸಚಿವ ಅನಂತ್ ಕುಮಾರ್

ಮಂಡ್ಯ: ಕರ್ನಾಟಕದ ಕಣಕಣದಲ್ಲೂ ಅಟಲ್ ಬಿಹಾರಿ ವಾಜಪೇಯಿ ಜೀ ಇದ್ದಾರೆ ಮತ್ತು ಅಟಲ್ ಜೀ ಅವರ ಕಣಕಣದಲ್ಲೂ ಕರ್ನಾಟಕವಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಹೇಳಿದ್ದಾರೆ.

ಕಾವೇರಿ ನದಿಗೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಅಸ್ಥಿಯನ್ನು ವಿಸರ್ಜಿಸಿ ಮಾತನಾಡಿದ ಅವರು ಕರ್ನಾಟಕದೊಂದಿಗಿನ ಅವರ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು.

ಅಟಲ್ ಬಿಹಾರಿ ವಾಜಪೇಯಿಯವರು ನೂರಾರು ಬಾರಿ ಕರ್ನಾಟಕಕ್ಕೆ ಬಂದಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರವಾಸ ಮಾಡಿದ್ದಾರೆ. ದಶಕಗಳ ಕಾಲ ಲಕ್ಷಾಂತರ ಜನರನ್ನು ತಮ್ಮ ಪ್ರೇರಣಾ ಭರಿತ ಮಾತುಗಳಿಂದ ಸಂಭೋಧಿಸಿ ಉದ್ದೀಪನಗೊಳಿಸಿದ್ದಾರೆ ಎಂದು ಕರ್ನಾಟಕದೊಂದಿಗಿನ ಅವರ ನಂಟನ್ನು ಕೇಂದ್ರ ಸಚಿವ ಅನಂತಕುಮಾರ್ ಮೇಲುಕುಹಾಕಿದರು. ವಿಶ್ವಮಾನ್ಯರಾಗಿರುವ ಅವರ ಸಮಾನತೆ, ಸಮಾಜಿಕ ನ್ಯಾಯ ಮತ್ತು ಅವರ ಜೀವನ ವಿಚಾರ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿರುತ್ತದೆ ಎಂದರು.

ವಿಶ್ವ ಚೇತನ, ಅಜಾತ ಶತ್ರು, ವಿಶ್ವ ಮಾನ್ಯ, ಪಕ್ಷಾತೀತ, ಜಾತ್ಯತೀತ, ಅಟಲ್ ಜೀಯವರ ಅಸ್ಥಿಯನ್ನು ಕಾವೇರಿ ನದಿಯ ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಲಾಗಿದೆ ಎಂದರು. ನಾಳೆಯೂ ಸಹ ವಿವಿಧ ಬಿಜೆಪಿ ಮುಖಂಡರುಗಳು ರಾಜ್ಯದ ಎಂಟು ನದಿಗಳಲ್ಲಿ ಅಂದರೆ ನೇತ್ರಾವತಿ, ತುಂಗಭದ್ರ, ಮಲಪ್ರಭಾ, ಕೃಷ್ಣಾ ನದಿಗಳಲ್ಲಿ ಅಸ್ಥಿ ವಿಸರ್ಜಿಸಲಿದ್ದಾರೆ ಎಂದರು.

ಉತ್ತರ ಮತ್ತು ದಕ್ಷಿಣದ ನದಿಗಳ ಜೋಡಣೆ ಅಟಲ್ ಜೀ ಅವರ ಕನಸಾಗಿತ್ತು. ಕಾವೇರಿ ಮತ್ತು ಗಂಗಾ ಸೇರಿದಂತೆ 36 ನದಿಗಳನ್ನು ಜೋಡಿಸುವ ಕನಸನ್ನು ಹೊಂದಿದ್ದರು. ಈ ಮೂಲಕ ಇಡೀ ದೇಶದ ರೈತರಿಗೆ ಸುಜಲಾಂ ಸುಫಲಾಂ ಸಾಧಿಸುವ ಸಂಕಲ್ಪ ಹೊಂದಿದ್ದರು ಎಂದು ಅಟಲ್ ಜೀ ಅವರ ಯೋಜನೆಗಳನ್ನ ಅನಂತಕುಮಾರ್ ಸ್ಮರಿಸಿದರು.

ಈ ವೇಳೆ ಅಸ್ಥಿ ಕಳಸ ಯಾತ್ರೆ ಯುದ್ದಕ್ಕೂ ಅಟಲ್ ಜೀ ಅಮರವಾಗಲೀ ಮತ್ತು ಚಿರಾಯುವಾಗಲಿ ಎಂಬ ಘೋಷಣೆಯ ಮೂಲಕ ಸಾವಿರಾರು ಜನರು ಶ್ರದ್ಧಾಂಜಲಿಯನ್ನು ಮತ್ತು ಪುಷ್ಪಾಂಜಲಿ ಅರ್ಪಿಸಿದರು. ಅಟಲ್ ಜೀ ಅವರ ಬಗೆಗಿನ ಜನರ ಅಭಿಮಾನಕ್ಕೆ ಕೇಂದ್ರ ಸಚಿವರು ಗದ್ಗದಿತರಾಗಿ ಭಾವಂಜಲಿಯನ್ನು ಅರ್ಪಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಹಾರ ನೀಡಬೇಕು: ಸಿದ್ದರಾಮಯ್ಯ

ಮಡಿಕೇರಿ:ಕೇರಳಕ್ಕೆ ಬಂದು ಮಳೆಹಾನಿ ವೀಕ್ಷಿಸಿ ಪರಿಹಾರ ಪ್ರಕಟಿಸಿರುವ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೂ ಬಂದು ನೋಡಬೇಕಿತ್ತು. ಈಗಲಾದರೂ ಕೊಡಗಿಗೆ ಭೇಟಿ ನೀಡಿ ಆಗಿರುವ ಹಾನಿ ಪರಿಶೀಲಿಸಿ ಕೇಂದ್ರದಿಂದ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ಮಡಿಕೇರಿಯಲ್ಲಿ ಮಳಹಾನಿ ಪರಿಶೀಲನೆ ನಡೆಸಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ,ಭಾರಿ ಮಳೆಯಿಂದ ಹಲವಾರು ಊರುಗಳೇ ಹಾಳಾಗಿವೆ. ಜನ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ರಸ್ತೆ ಸಂಪರ್ಕವೂ ಇಲ್ಲದಂತಾಗಿದೆ. ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ನೂರಾರು ಮಂದಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಅವರ ಕಾರ್ಯ ಶ್ಲಾಘನೀಯ‌ ಎಂದ್ರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಮಂತ್ರಿಗಳೂ ಭೇಟಿ ನೀಡಿದ್ದಾರೆ. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವುದು ನಮ್ಮ ಸವಾಲು. ಈ ಸಂಬಂಧ ಯೋಜನೆ ರೂಪಿಸುವಂತೆ ವಸತಿ ಸಚಿವರಿಗೆ ಹೇಳಿದ್ದೇನೆ. ಶಾಲಾ ಮಕ್ಕಳಿಗೂ ನೆರವಾಗಲು ಅಧಿಕಾರಿಗಳಿಗೆ ತಿಳಿಸಿದ್ದೇನೆ.ಮುಂದೆ ಈ ರೀತಿ ಅನಾಹುತ
ಅಗದಂತೆ ನೋಡಿಕೊಳ್ಳಲು ತಜ್ಞರ ಸಮಿತಿ ರಚನೆ ಆಗಬೇಕು. ಈ ಸಂಬಂಧ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ ಎಂದ್ರು.

ಸಾವಿರಾರು ಎಕರೆ ಕೃಷಿ ಜಮೀನು ಹಾಳಾಗಿರುವುದರಿಂದ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ಅವರಿಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ತಿಳಿಸಿದ್ದೇನೆ.ಕೃಷಿ ಭೂಮಿ ಕಳೆದುಕೊಂಡವರಿಗೆ ಜಮೀನು ನೀಡುವ ಬಗ್ಗೆಯೂ ಸರ್ಕಾರದ ಜೊತೆ ಮಾತುಕತೆ ನಡೆಸುತ್ತೇನೆ.ಸಂತ್ರಸ್ತರಿಗೆ ಪರಿಹಾರ ಒದಗಿಸುವುದು, ಬೆಳೆ ಹಾನಿ ಬಗ್ಗೆಯೂ ಯೋಜನೆ ರೂಪಿಸಲಾಗುವುದು‌ ಎಂದ್ರು.

ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಅದರ ವೇಗ ಇನ್ನೂ ಹೆಚ್ಚಾಗಬೇಕು.ಮಳೆಯಿಂದ ಹಾನಿಗೊಳಗಾಗಿರುವ ಕೊಡಗಿನಲ್ಲಿ ಮೂಲಭೂತ ಸೌಕರ್ಯಗಳ ಮರು ನಿರ್ಮಾಣ ಆಗಬೇಕು. ಇದಕ್ಕಾಗಿ ಮುಖ್ಯಮಂತ್ರಿ, ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ. ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚೆ ಮಾಡುತ್ತೇನೆ ಎಂದ್ರು.